ಮಹಿಳಾ ಕೆಎಎಸ್‌ ಅಧಿಕಾರಿಯಿಂದ ಸಚಿವರ ಒಎಸ್‌ಡಿ, ಮಹೇಶ್‌ಬಾಬು ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು; ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಿಗೆ ನೀಡಿದ್ದ ಅನುದಾನದ ಪೈಕಿ ಖರ್ಚಾಗದೇ ಇರುವ ಮೊತ್ತ ಮತ್ತು ಬ್ಯಾಂಕ್‌ಗಳಿಂದ ಸಂಗ್ರಹವಾಗಿರುವ ಬಡ್ಡಿ ಮೊತ್ತವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಮತ್ತು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಗಮನಕ್ಕೆ ತಾರದೆಯೇ ಸರ್ಕಾರಕ್ಕೆ ವಾಪಸ್‌ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

 

ಈ ಆರೋಪಗಳು ಕೇಳಿ ಬಂದಿರುವ ನಡುವೆಯೇ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ ಎಚ್‌ ನಿಶ್ಚಲ್‌ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆಎಎಸ್‌ ಅಧಿಕಾರಿ ಎನ್‌ ಮಹೇಶ್‌ ಬಾಬು ಅವರ ವಿರುದ್ಧ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆಎಎಸ್‌ ಮಹಿಳಾ ಅಧಿಕಾರಿ ಪುಷ್ಪಲತಾ ಅವರು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.

 

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಬೋವಿ ಅಭಿವೃದ್ಧಿ ನಿಗಮದಲ್ಲಿದ್ದ ಕೋಟ್ಯಂತರ ರುಪಾಯಿ ಮೊತ್ತವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಆಗಿರುವ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನೀಡಿರುವ ದೂರು ಮುನ್ನೆಲೆಗೆ ಬಂದಿದೆ.
ಮಾನಸಿಕ ಹಿಂಸೆಯಿಂದ ಕರ್ತವ್ಯ ನಿರ್ವಹಿಸಲು ಅಡಚಣೆ ಆಗುತ್ತಿದೆ ಎಂದು ಪುಷ್ಪಲತಾ ಅವರು 2025ರ ಆಗಸ್ಟ್‌ 8ರಂದೇ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

 

ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿ ಪುಷ್ಪಲತಾ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ನಿಗಮವು ಹೊಂದಿದ್ದ ಕೋಟ್ಯಂತರ ರುಪಾಯಿ ಮೊತ್ತ, ನಿಶ್ಚಿತ ಠೇವಣಿಗಳಲ್ಲಿರಿಸಿದ್ದ ಮೊತ್ತದಿಂದ ಸಂಗ್ರಹವಾಗಿದ್ದ ಬಡ್ಡಿ ಮೊತ್ತವು ಉಳಿಕೆಯಾಗಿತ್ತು.
ಈ ಬಹುಕೋಟಿ ಹಣ ಮತ್ತು ಉಳಿಕೆಯಾದ ಅನುದಾನದ ಮೊತ್ತವನ್ನು ಸರ್ಕಾರಕ್ಕೆ ವಾಪಸ್‌ ಮಾಡಿದ್ದರು.

 

ಸರ್ಕಾರಕ್ಕೆ ಬಹು ಕೋಟಿ ಮೊತ್ತವನ್ನು ವಾಪಸ್‌ ಮಾಡುವ ಮುನ್ನ ಇಲಾಖೆ ಸಚಿವರು, ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮತ್ತು ಆರ್ಥಿಕ ಇಲಾಖೆಯ ಅನುಮೋದನೆ ಪಡೆದಿರಲಿಲ್ಲ ಎಂಬ ಆರೋಪವು ಕೇಳಿ ಬಂದಿತ್ತು.

 

ಈ ಕುರಿತು ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಎನ್‌ ಮಹೇಶ್‌ ಬಾಬು ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ವಿಶೇಷ ಕರ್ತವ್ಯಾಧಿಕಾರಿ ನಿಶ್ಚಲ್‌ ಅವರು, ಪುಷ್ಪಲತಾ ಅವರನ್ನು ಅಮಾನತುಗೊಳಿಸಲು ಶಿಫಾರಸ್ಸು ಮಾಡಿದ್ದರು ಎಂದು ಗೊತ್ತಾಗಿದೆ. ಈ ಶಿಫಾರಸ್ಸು ಬೆನ್ನಲ್ಲೇ ಪುಷ್ಪಲತಾ ಅವರು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.

 

ಪುಷ್ಪಲತಾ ಅವರು ನೀಡಿರುವ ದೂರಿನಲ್ಲೇನಿದೆ?

 

2021ರ ಮಾರ್ಚ್‌ ನಿಂದ 2025 ರ ಜೂನ್‌ವರೆಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ. ಈ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಆರ್ಥಿಕ ಇಲಾಖೆ ಹಾಗೂ ಸರ್ಕಾರದ ನಿರ್ದೇಶನಗಳ ಅನ್ವಯ ಹಿಂದಿನ ಸಾಲುಗಳಲ್ಲಿ ಬ್ಯಾಂಕ್‌ ಖಾತೆಯಲ್ಲಿ ಜಮೆಯಾಗಿದ್ದ ವಿವಿಧ ಯೋಜನೆಗಳ ಮರು ಪಾವತಿ ಮೊತ್ತ, ಅರ್ಜಿತವಾದ ಬಡ್ಡಿ ಮೊತ್ತ ಮತ್ತು ಹಿಂದಿನ ಸಾಲಿನಲ್ಲಿನ ಠೇವಣಿಯಲ್ಲಿ ಇರಿಸಿದ್ದ ಮೊತ್ತವನ್ನು ಸರ್ಕಾರಕ್ಕೆ ನಿಯಮಾನುಸಾರ ಮರು ಪಾವತಿ ಮಾಡಲಾಗಿರುತ್ತದೆ ಎಂದು ಲಿಖಿತ ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ನಿಗಮದ ಕಚೇರಿ ಸ್ಥಳಾಂತರ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ಹಾಗೂ ಸರ್ಕಾರದ ಅನಮೋದನೆಗಳನ್ನು ಪಡೆಯಲಾಗಿತ್ತು. 2024ರ ಆಗಸ್ಟ್‌ 8ರಂದು ನಡೆದ 134ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. 2024ರ ಆಗಸ್ಟ್‌ 21ರಂದು ಅಧ್ಯಕ್ಷರಿಂದ ಕಡತದಲ್ಲಿ ಅನುಮೋದನೆಯನ್ನೂ ಪಡೆದುಕೊಳ್ಳಲಾಗಿತ್ತು. ಈ ಪ್ರಕ್ರಿಯೆ ಪಡೆದ ನಂತರ ಕ್ರಿಡಿಲ್‌ ಇವರಿಗೆ ಕೆಲಸ ನಿರ್ವಹಿಸಲು ಕಾರ್ಯಾದೇಶ ನೀಡಲಾಗಿರುತ್ತದೆ.

 

ಇದಕ್ಕೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರಗಳು ಆದೇಶಗಳು, ಅನುಮತಿ ಪತ್ರ ಇತ್ಯಾದಿ ಎಲ್ಲಾ ಮಾಹಿತಿಯನ್ನು ಇಲಾಖೆ ಸಚಿವರಿಗೆ ಸರ್ಕಾರದ ಏಕ ಕಡತದ ಮೂಲಕ 2024ರ ಡಿಸೆಂಬರ್‍‌ 9ರಂದು ಗಮನಕ್ಕೆ ಸಲ್ಲಿಸಲಾಗಿರುತ್ತದೆ ಎಂದು ದೂರಿನಲ್ಲಿ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

 

‘ಆದಾಗ್ಯೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಎನ್‌ ಮಹೇಶ್ ಬಾಬು ಅವರು ಮತ್ತು ಇಲಾಖೆಯ ಜಂಟಿ ನಿರ್ದೇಶಕ ಬಿ ಹೆಚ್‌ ನಿಶ್ಚಲ್‌ ಅವರು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಇವರು ಕಡತಗಳನ್ನು ಕೂಲಂಕುಷವಾಗಿ ಪರಿಶೀಲಿಸಿಲ್ಲ. ಸರ್ಕಾರದಿಂದಾಗಲೀ ಅಥವಾ ಮೇಲಿನ ಅಧಿಕಾರಿಗಳಿಂದಾಗಲಿ ಯಾವುದೇ ಆದೇಶಗಳನ್ನು ಪಡೆಯದೇ ನನ್ನನ್ನು ಅಮಾನತುಗೊಳಿಸಲು ಏಕ ಕಡತ ಮೂಲಕ ಶಿಫಾರಸ್ಸು ಮಾಡಿರುತ್ತಾರೆ,’ ಎಂದು ಪುಷ್ಪಲತಾ ಅವರು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.

 

ಆದರೆ ಈ ಶಿಫಾರಸ್ಸು ಮಾಡುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ರೀತಿಯ ವಿವರಗಳನ್ನು ಸಹ ಪಡೆಯದೇ ಕೇಳದೇ ತಮ್ಮ ಮನಸೊ ಇಚ್ಛೆಯಂತೆ ಕ್ರಮ ಕೈಗೊಂಡಿರುತ್ತಾರೆ. ಇವರ ಈ ಕ್ರಮಗಳು ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ವಿನಾ ಕಾರಣ ಮಾನಸಿಕವಾಗಿ ಕುಗ್ಗುವಂತೆ ಮಾಡಿರುತ್ತಾರೆ ಎಂದು ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.

 

ನಾನು ಕಳೆದ 15 ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿ ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿಯೇ ಸರಿ ಸುಮಾರು 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುತ್ತೇನೆ. ಆದುದರಿಂದ ನನ್ನನ್ನು ಅಮಾನತು ಮಾಡುವಂತೆ ಶಿಫಾರಸ್ಸು ಮಾಡಿರುವ ಆದೇಶಗಳಿಂದ ನನ್ನ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ಘನತೆಗೆ ಧಕ್ಕೆಯಾಗಿರುತ್ತದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿಯೇ ಮಹಿಳಾ ಅಧಿಕಾರಿಗಳಿಗೆ ಈ ರೀತಿ ಮಾನಸಿಕ ಹಿಂಸೆ ನೀಡುತ್ತಿರುವುದು ವಿಷಾದಕರವಾಗಿದ್ದು ಮನಸ್ಸಿಗೆ ಘಾಸಿಯಾಗಿರುತ್ತದೆ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿರುವುದು ಗೊತ್ತಾಗಿದೆ.

 

 

ಹಾಗಾಗಿ ಎನ್‌ ಮಹೇಶ್‌ ಬಾಬು ಮತ್ತು ಬಿ ಎಚ್‌ ನಿಶ್ಚಲ್‌ ಅವರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಬೇಕು ಎಂದು ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

 

ಆರೋಪ ತಳ್ಳಿ ಹಾಕಿದ ಮಹೇಶ್‌ಬಾಬು

 

ಪುಷ್ಪಲತಾ ಅವರು ಮಾಡಿರುವ ಆರೋಪವನ್ನು ನಿಗಮದ ಹಾಲಿ ನಿರ್ದೇಶಕ ಎನ್‌ ಮಹೇಶ್‌ಬಾಬು ಅವರು ತಳ್ಳಿ ಹಾಕಿದ್ದಾರೆ. ಅದೊಂದು ಆಧಾರ ರಹಿತವಾದ ಆರೋಪ ಎಂದು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ಪುಷ್ಪಲತಾ ಅವರು ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ನಿಗಮದ ಹಣವನ್ನು ಆರ್ಥಿಕ ಇಲಾಖೆಗೆ ವಾಪಸ್‌ ಮಾಡಿದ್ದಾರೆ. ಹಣವನ್ನು ಸರ್ಕಾರಕ್ಕೆ ಸರಂಡರ್ ಮಾಡುವ ಮುನ್ನ ಸಚಿವರು, ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಚರ್ಚಿಸಬೇಕಿತ್ತು. ಆದರೆ ಪುಷ್ಪಲತಾ ಅವರು ಸಚಿವರೊಂದಿಗೆ ಚರ್ಚಿಸದೇ ಹಿಂದಿನ 4 ವರ್ಷ ಮತ್ತು 3 ತಿಂಗಳ ಅವಧಿಗೆ ಸಂಬಂಧಿಸಿದ ಅಂದಾಜು 101 ಕೋಟಿ ರು ಗಳನ್ನು ಏಕಾಏಕೀ ಸರಂಡರ್‍‌ ಮಾಡಿದ್ದಾರೆ ಎಂದು ಪುಷ್ಪಲತಾ ಅವರ ವಿರುದ್ಧವೇ ಆರೋಪಿಸಿದ್ದಾರೆ.

 

ಸರ್ಕಾರಕ್ಕೆ ಅನುದಾನವನ್ನು ವಾಪಸ್‌ ಮಾಡುವ ಮುನ್ನ ಯೋಜನೆಗಳಿಗೆ ಬಳಸಲು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕಿತ್ತು. ಮೇಲಾಧಿಕಾರಿಗಳೊಂದಿಗೆ ಚರ್ಚಿಸಬೇಕಿತ್ತು. ನಿರ್ದೇಶನವನ್ನೂ ಪಾಲಿಸಿಲ್ಲ. ಈ ಬಗ್ಗೆ ಇಲಾಖೆ ಹಂತದಲ್ಲಿ ಕ್ರಮ ವಹಿಸಲು ಮುಂದಾಗಿರುವ ಹೊತ್ತಿನಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಇದೊಂದು ಸುಳ್ಳು ಆರೋಪ, ಆಧಾರ ರಹಿತವಾದದ್ದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

ಈ ಕುರಿತು ಪ್ರತಿಕ್ರಿಯೆಗಾಗಿ  ‘ದಿ ಫೈಲ್‌’, ದೂರುದಾರರಾದ ಮಹಿಳಾ ಕೆಎಎಸ್‌ ಅಧಿಕಾರಿ ಪುಷ್ಪಲತಾ ಅವರನ್ನು ಸಂಪರ್ಕಿಸಿತ್ತು. ಸಂಪರ್ಕ ಸಾಧ್ಯವಾಗಲಿಲ್ಲ. ಹೀಗಾಗಿ ವಾಟ್ಸಾಪ್‌ ಮತ್ತು ಇ ಮೈಲ್‌ ಮೂಲಕ ಪ್ರತಿಕ್ರಿಯೆ ಕೋರಲಾಗಿದೆ. ಪ್ರತಿಕ್ರಿಯೆ ಬಂದ ಬಳಿಕ ಇದೇ ವರದಿಯನ್ನು ನವೀಕರಿಸಲಾಗುತ್ತದೆ.

Your generous support will help us remain independent and work without fear.

Latest News

Related Posts