ಬೆಂಗಳೂರು; ದ್ವಿತೀಯ ಹಂತದ ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ ಹಕ್ಕುಗಳನ್ನು ಖಚಿತಪಡಿಸುವ ಉದ್ದೇಶದಿಂದ ಜಾರಿಗೊಂಡಿದ್ದ (ಐಇಡಿಎಸ್‌ಎಸ್) ಯೋಜನೆಯಲ್ಲಿ 22 ಸರ್ಕಾರೇತರ ಸಂಸ್ಥೆಗಳಿಗೆ 2.18 ಕೊಟಿ ರು ಗಳನ್ನು ನಿಯಮಬಾಹಿರವಾಗಿ ಪಾವತಿಸಿರುವ ಪ್ರಕರಣವನ್ನು ಮುಚ್ಚಿ ಹಾಕಲು ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯು ಮುಂದಾಗಿದೆ.
ವಿಶೇಷವೆಂದರೇ ಈ ಹಗರಣವು ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ 2 ವರ್ಷ ಪೂರ್ಣಗೊಳಿಸಿರುವ ಹೊತ್ತಿನಲ್ಲಿ ಈ ಹಗರಣವನ್ನು ಮುಚ್ಚಿ ಹಾಕಲು ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯು ಮುಂದಾಗಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
30 ಮಂದಿ ಬಿಇಒಗಳು ನಿವೃತ್ತರಾಗಿದ್ದಾರೆ ಎಂಬ ಕಾರಣವನ್ನು ಮುಂದಿರಿಸಿಕೊಂಡು ಅವರ ವಿರುದ್ಧದ ಆರೋಪಗಳನ್ನು ಕೈ ಬಿಡಲೂ ಸಹ ಇಲಾಖೆಯು ಮುಂದಾಗಿದೆ.
ಆರೋಪಕ್ಕೆ ಗುರಿಯಾಗಿದ್ದ 25 ಅಧಿಕಾರಿಗಳನ್ನು ಈ ಪ್ರಕರಣದಿಂದ ಕೈಬಿಡಲು ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ 2025ರ ಸೆ.8ರಂದೇ ಪತ್ರ ಬರೆದಿದ್ದಾರೆ ಈ ಪತ್ರದ (ಸಂಖ್ಯೆ ಇಪಿ 247 ಡಿಎಆರ್ 2024) ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಏನಿದು ಯೋಜನೆ?
ಪ್ರೌಢಶಾಲಾ ಹಂತದಲ್ಲಿ (9ನೇ ತರಗತಿಯಿಂದ 12ನೇ ತರಗತಿ) ಅಂಗವಿಕಲ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಅನುಭವಗಳನ್ನು ಒದಗಿಸುವುದು. ಅಂಗವಿಕಲ ಮಕ್ಕಳು ಸಾಮಾನ್ಯ ಶಾಲೆಗಳಲ್ಲಿ ಅಂತರ್ಗತ ವಾತಾವರಣದಲ್ಲಿ ಕಲಿಯಲು ಅನುವು ಮಾಡಿಕೊಡುವುದು. ಅಂಗವಿಕಲ ಮಕ್ಕಳ ಸಮಗ್ರ ಅಭಿವೃದ್ಧಿಗೆ ಶೈಕ್ಷಣಿಕ ಮತ್ತು ಇತರ ಬೆಂಬಲಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಯ ಕಾರ್ಯವೈಖರಿ ಹೇಗಿದೆ?
ಅಂಗವಿಕಲ ಮಕ್ಕಳನ್ನು ಗುರುತಿಸುವುದು ಮತ್ತು ಅವರ ಶೈಕ್ಷಣಿಕ ಅಗತ್ಯಗಳನ್ನು ಮೌಲ್ಯಮಾಪನ ಮಾಡುವುದು. ವೈಯಕ್ತಿಕ ಶೈಕ್ಷಣಿಕ ಯೋಜನೆಯಡಿಯಲ್ಲಿ ಪ್ರತಿ ಮಗುವಿಗೆ ಪ್ರತ್ಯೇಕ ಶೈಕ್ಷಣಿಕ ಯೋಜನೆಯನ್ನು ರೂಪಿಸುವುದು. ಅಂಗವಿಕಲ ಮಕ್ಕಳಿಗೆ ಸೂಕ್ತವಾದ ಸಹಾಯಗಳು ಮತ್ತು ಉಪಕರಣಗಳನ್ನು ಒದಗಿಸುವುದು. ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಮತ್ತು ವಿಶೇಷ ತರಬೇತಿಯನ್ನು ಹೊಂದಿರುವ ಶಿಕ್ಷಕರನ್ನು ಗುರುತಿಸಲಿದೆ.
ಶಾಲೆಯ ಮಟ್ಟದಲ್ಲಿ ಸಂಪನ್ಮೂಲ ಶಿಕ್ಷಕರನ್ನು ನಿಯೋಜಿಸಿ, ಅವರಿಗೆ ಬೆಂಬಲ ನೀಡುವುದು. ಅಂಗವಿಕಲ ಮಕ್ಕಳಿಗೆ ಶಾಲೆಯ ಕಟ್ಟಡಗಳಲ್ಲಿನ ಭೌತಿಕ ಅಡೆತಡೆಗಳನ್ನು ತೆಗೆದುಹಾಕುವುದು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಯನ್ನು ಮಾಡುತ್ತದೆ.
ಈ ಯೋಜನೆಯು ಅಂಗವಿಕಲ ಮಕ್ಕಳ ಶಿಕ್ಷಣಕ್ಕಾಗಿ ಒಂದು ಒಟ್ಟಾರೆ ದೃಷ್ಟಿಕೋನವನ್ನು ಒದಗಿಸುತ್ತದೆ. ಅಂಗವಿಕಲ ಮಕ್ಕಳಿಗೆ ಶಿಕ್ಷಣದ ಪ್ರವೇಶ ಮತ್ತು ಗುಣಮಟ್ಟವನ್ನು ಸುಧಾರಿಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ.
ಅಂಗವಿಕಲ ಮಕ್ಕಳಿಗೆ ಶೈಕ್ಷಣಿಕ ಹಕ್ಕುಗಳನ್ನು ಖಚಿತಪಡಿಸುವ ಉದ್ಧೇಶ ಹೊಂದಿರುವ ಈ ಯೋಜನೆ ಅನುಷ್ಠಾನದಲ್ಲಿ ಮತ್ತು ಯೋಜನೆಗೆ ಹಂಚಿಕೆಯಾಗಿದ್ದ ಅನುದಾನಕ್ಕಿಂತಲೂ ನಿರ್ದಿಷ್ಟ ಸ್ವಯಂ ಸೇವಾ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ ಅಕ್ರಮದ ವಾಸನೆ ಹಬ್ಬಿತ್ತು. ಅಲ್ಲದೇ ಸಿಎಜಿಯು ಸಹ ಈ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಿತ್ತಲ್ಲದೇ ಹಲವು ಆಕ್ಷೇಪಣೆಗಳನ್ನೂ ವ್ಯಕ್ತಪಡಿಸಿತ್ತು ಈ ವರದಿ ಆಧರಿಸಿ ಇಲಾಖೆಯು ಕ್ರಮ ಕೈಗೊಂಡಿತ್ತಾದರೂ ನಂತರದ ದಿನಗಳಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಕೈ ಬಿಡಲು ಮುಂದಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
2009-10 ಮತ್ತು 2011-12ನೇ ಸಾಲಿನಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಒಟ್ಟು 56 ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದರು. ಅಲ್ಲದೇ 22 ಸ್ವಯಂ ಸೇವಾ ಸಂಸ್ಥೆಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (ಅಪರಾಧ ಸಂಖ್ಯೆ; 0274/2023) ಕೂಡ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದ ಒಟ್ಟು 56 ಮಂದಿ ಆಪಾದಿತ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಇಲಾಖೆಯು ಕ್ರಮ ಕೈಗೊಂಡಿತ್ತು.
ಅಲ್ಲದೇ ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದ 40 ಅಧಿಕಾರಿಗಳು ನಿವೃತ್ತಿಗೊಂಡಿದ್ದರು. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಇಲಾಖೆಯು ನಿಲುವು ತಳೆದಿತ್ತು. ಹೀಗಾಗಿ ಹಾಲಿ ಕಾರ್ಯನಿರ್ವಹಿಸುತ್ತಿರುವ 16 ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮದ ಪ್ರಕಾರ ಶಿಸ್ತು ಕ್ರಮ ಜರುಗಿಸಲು ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಲಾಗಿತ್ತು.
ಈ ಯೋಜನೆ ಅಡಿಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡದೇ ಸರ್ಕಾರಕ್ಕೆ 109 ಕೋಟಿ ರು ಗಳನ್ನು ವ್ಯರ್ಥ ಮಾಡಲಾಗಿತ್ತು. ಕೇಂದ್ರ ಸರ್ಕಾರವೂ ಸಹ 18.39 ಕೋಟಿ ರುಪಾಯಿಗಳನ್ನು ಹಂಚಿಕೆ ಮಾಡಿತ್ತು. ಈ ಪ್ರಕರಣದಲ್ಲಿ ಕೋಟ್ಯಂತರ ರುಪಾಯಿನಷ್ಟು ಅಕ್ರಮ ನಡೆದಿದೆ. ಇಡೀ ಪ್ರಕರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೈವಾಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರು ನಿಯಮ 72ರ ಮೇರೆಗೆ 2024ರಲ್ಲೇ ವಿಷಯ ಮಂಡಿಸಿದ್ದರು.
ನಿವೃತ್ತ ಅಧಿಕಾರಿಗಳಿಂದಲೂ ದುರುಪಯೋಗವಾಗಿರುವ ಮೊತ್ತವನ್ನು ವಸೂಲಿ ಮಾಡಲು ಸಿವಿಲ್ ದಾವೆ ಹೂಡಲು ಕ್ರಮವಹಿಸಲಾಗುತ್ತಿದೆ ಎಂದು ಖುದ್ದು ಸಚಿವ ಮಧು ಬಂಗಾರಪ್ಪ ಅವರು ಸದನಕ್ಕೆ 2024ರಲ್ಲೇ ಉತ್ತರ ಒದಗಿಸಿದ್ದರು.
ಅಲ್ಲದೇ ಈ ಪ್ರಕರಣದಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದೂ ಉತ್ತರ ನೀಡಿದ್ದರು.
ಆದರೀಗ ಈ ಪ್ರಕರಣವನ್ನೇ ಮಣ್ಣೆಳೆದು ಮುಚ್ಚಲು ಸರ್ಕಾರವು ಮುಂದಾಗಿದೆ.
ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದ ಅಧಿಕಾರಿಗಳ ಪಟ್ಟಿ
ಉರ್ದು ಮತ್ತು ಅಲ್ಪಸಂಖ್ಯಾತರ ವಿಭಾಗದ ನಿರ್ದೇಶಕರಾಗಿದ್ದ ಕೆ ಆನಂದ್, ಜೋಹರಾ ಜಬೀನ್, ಹಿರಿಯ ಸಹಾಯಕ ನಿರ್ದೇಶಕರಾದ ಆರ್ ಮಂಜುಳ, ಅಧೀಕ್ಷಕ ಎಸ್ ರಾಮು, ಪರ್ವಿನ್ ತಾಜ್, ನಯೀಮುದ್ದೀನ್, ಬಿ ಸಿ ಸಿದ್ದಪ್ಪ ಅವರು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದ ಅಧಿಕಾರಿಗಳ ಪಟ್ಟಿಯಲ್ಲಿದ್ದರು. ಇದಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ಈ ಪಟ್ಟಿಯಲ್ಲಿದ್ದರು.
ಆರೋಪಿತ ಬಿಇಒಗಳ ಪಟ್ಟಿ
ಮೀರ್ ಉಬೇದುಲ್ಲಾ, ಎನ್ ಹೆಚ್ ನಾಗೂರ, ಎನ್ ವಿ ಹೊಸೂರ್, ಉದಯನಾಯ್ಕ, ಡಾ ಹೆಚ್ ಬಾಲರಾಜು, ಚನ್ನಬಸಪ್ಪ, ಜಿ ಹೆಚ್ ವೀರಣ್ಣ, ಬಿ ಎಸ್ ಪರಮೇರ್ಶವರ್, ಸಿ ನಾಗರಾಜನ್, ಹಕೀಂ, ಅಮೃತ ಬೆಟ್ಟದ ಕೆಂಚರೆಡ್ಡೇರ, ಚೌವ್ಹಾಣ್, ಟಿ ಎಸ್ ಅಂಜಿನಪ್ಪ, ಪಿ ಹುಚ್ಚಯ್ಯ, ಪ್ರಹ್ಲಾದ ಗೌಡ, ಬಿ ಎ ರಾಜಶೇಖರ, ಬಿ ಪಿ ವೆಂಕಟೇಶ್, ಬೆಳ್ಳಶೆಟ್ಟಿ, ಮಂಟೆಲಿಂಗಾಚಾರಿ, ಹೆಚ್ ವಿ ವೆಂಕಟೇಶಪ್ಪ, ಎ ಟಿ ಚಾಮರಾಜ ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು.
ಎನ್ ಎಸ್ ಕುಮಾರ್, ಸುನಂದ ಬಿ ಮೂಗನೂರ, ಬಿ ಆರ್ ಬಸವರಾಜಪ್ಪ, ಕೆ ಎಸ್ ಪ್ರಕಾಶ್, ಶ್ರೀಶೈಲ ಕರಿಕಟ್ಟಿ, ಸೋಮಮಶೇಖಯ್ಯ, ಎ ಎಸ್ ಹತ್ತಹಳ್ಳಿ, ಎಂ ವೈ ಹೊನ್ನಕಸ್ತೂರಿ, ಎಸ್ ಎನ್ ಪೊಲೀಸ್ ಪಾಟೀಲ್, ಕೆ ಸಿ ಮಲ್ಲಿಕಾರ್ಜುನ, ಜಯರಾಜು ಕೆ, ಮರಿಮಾದನಾಯಕ್, ಶಿವನಗೌಡ ಬಿ ಪಾಟೀಲ, ಹೆಚ್ ಎಂ ಮಲ್ಲಿಕಾರ್ಜುನ ಸ್ವಾಮಿ, ಹಾಲಾನಾಯ್ಕ,
ಮಂಗಳ ಬಿ ಪಾಟೀಲ, ಬಿ ಹೆಚ್ ಮಿಲ್ಲನಶೆಟ್ಟಿ, ಪುಂಡಲೀಕ, ಎಸ್ ಎ ಮುಜಾವರ್, ವಿನೋದ್ ನಾಯಕ್, ಐ ಎಸ್ ಮಹೇಶ್, ಕೆ ವಿ ಪಾಟೀಲ್, ಎನ್ ಎಂ ರಮೇಶ್, ಕಂಪ್ಲಿ ರಾಮನಗೌಡ, ಆರ್ ವೈ ಕೊನ್ನೂರ್, ಕೇಳ್ಕರ್ ವಿರುದ್ಧವೂ ಆರೋಪ ಪಟ್ಟಿ ಜಾರಿಯಾಗಿತ್ತು.
ಈ ಪಟ್ಟಿಯಲ್ಲಿ 30 ಮಂದಿ ಬಿಇಒಗಳು ನಿವೃತ್ತರಾಗಿದ್ದಾರೆ ಎಂಬುದು ಪಟ್ಟಿಯಿಂದ ತಿಳಿದು ಬಂದಿದೆ.
ಅಲ್ಲದೇ 7 ಮಂದಿ ಬಿಇಒಗಳು ದೋಷಾರೋಪಣೆ ಪಟ್ಟಿಯನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದ್ದರು.
ಕೆಎಟಿಯು ಇಲಾಖೆಯು ಹೊರಡಿಸಿದ್ದ ದೋಷಾರೋಪಣೆ ಪಟ್ಟಿಗೆ ತಡೆಯಾಜ್ಞೆಯನ್ನು ನೀಡಿರುವುದು ಗೊತ್ತಾಗಿದೆ.
ಈ ಅಧಿಕಾರಿಗಳ ಪಾತ್ರವೇನು?
ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದ ಅವಧಿಯಲ್ಲಿ ರಾಜ್ಯ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಪಾತ್ರವನ್ನೂ ವಿಚಾರಣೆಯಲ್ಲಿ ವಿವರಿಸಲಾಗಿತ್ತು
ಕೆ ಆನಂದ್ ಅವರು 2014ರ ಜೂನ್ 1ರಿಂದ ಆಗಸ್ಟ್ 31ರವರೆಗೆ ಮೈನಾರಿಟಿ ವಿಭಾಗದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಅವಧಿಯಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆಯಾಗಿತ್ತು. ಈ ಅಂಶವನ್ನು ಸಿಎಜಿಯೂ ಸಹ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಈ ಆಕ್ಷೇಪಿತ ಮೊತ್ತವನ್ನು ಪಡೆದುಕೊಂಡಿದ್ದ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಇದುವರೆಗೂ ಹಣವನ್ನು ಮರು ಪಾವತಿಸಿರಲಿಲ್ಲ. ಹೀಗಾಗಿ ಪರಿಷ್ಕೃತ ಮರು ಪಾವತಿಯಾಗಿಲ್ಲದ ಮೊತ್ತವೇ 1,15,00,058 ರು ನಷ್ಟಿತ್ತು.
ಇವರ ವಿರುದ್ಧ ಈಗಾಗಲೇ ಹಲಸೂರು ಪೊಲೀಸ್ ಠಾಣೆಯ್ಲಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಹಾಗೆಯೇ ಸಿವಿಲ್ ದಾವೆ ಹೂಡುವ ಸಂಬಂಧ ನೋಟೀಸ್ ಕೂಡ ಜಾರಯಾಗಿತ್ತು. ಮತ್ತು ಈ ಅಧಿಕಾರಿಯ ಹೆಸರಿನಲ್ಲಿರುವ ಆಸ್ತಿಗಳಲ್ಲಿ ಬಾಕಿ ಮೊತ್ತ ನಮೂದಿಸಬೇಕು ಎಂದು ನೋಂದಣಿ ಮಹಾ ನಿರೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ 2025ರ ಜುಲೈ 30ರಂದು ಪತ್ರವನ್ನೂ ಇಲಾಖೆಯು ಬರೆದಿತ್ತು.
ಜೋಹರಾ ಜಬೀನಾ ಅವರು 2014ರ ಸೆ.1ರಿಂದ 2019ರ ಮೇ 31ರವರೆಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ತ್ರಿ ಸದಸ್ಯ ಸಮಿತಿ ಶಿಫಾರಸ್ಸಿಗಿಂತಲೂ ಇವರು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದರು. 2015ರ ಆಡಿಟ್‌ನಲ್ಲಿ ಆಕ್ಷೇಪಣೆ ವ್ಯಕ್ತವಾಗಿತ್ತು. ಈ ಅವಧಿಯಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳಿಗೆ ಹಣ ಪಾವತಿಯಾಗಿತ್ತು. ಈ ಪೈಕಿ 13,32,241 ರು ಮರು ಪಾವತಿಯಾಗಿರಲಿಲ್ಲ.
ಇವರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಸಿವಿಲ್ ದಾವೆ ಹೂಡುವ ಸಂಬಂಧ ಲೀಗಲ್ ನೋಟೀಸ್ ಜಾರಿಯಾಗಿತ್ತು. ಅಲ್ಲದೆ ಅರಿಯರ್ಸ್ ಆಫ್ ಲ್ಯಾಂಡ್ ರೆವಿನ್ಯೂ ಆಗಿ ಬಾಕಿ ಹಣ ವಸೂಲು ಮಾಡಲು ಜಿಲ್ಲಾಧಿಕಾರಿಗಳಿಗೆ 2025ರ ಜುಲೈ 30ರಂದು ಪತ್ರ ಬರೆಯಲಾಗಿತ್ತು.
ಸಮಗ್ರ ಶಿಕ್ಷಣ ಕರ್ನಾಟಕದ ಹಾಲಿ ಹಿರಿಯ ಕಾರ್ಯಕ್ರಮಾಧಿಕಾರಿಯಾಗಿರುವ ಆರ್ ಮಂಜುಳ ಅವರ ಕರ್ತವ್ಯ ಅವಧಿಯಲ್ಲಿಯೂ ಹೆಚ್ಚುವರಿ ಅನುದಾನ ಬಿಡುಗಡೆಯಾಗಿತ್ತು. ಕೆಲವು ಸ್ವಯಂ ಸೇವಾ ಸಂಸ್ಥೆಗಳಿಗೆ ಪಾವತಿಯಾಗಿದ್ದ ಹಣದ ಪೈಕಿ 1,28,32,299 ರು. ಮರು ಪಾವತಿಯಾಗಿರಲಿಲ್ಲ. ಇವರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಮತ್ತು ಸಿವಿಲ್ ದಾವೆ ಹೂಡಲು ಲೀಗಲ್ ನೋಟೀಸ್ ಜಾರಿ ಮಾಡಲಾಗಿತ್ತು.
ಸದ್ಯ ನಿವೃತ್ತರಾಗಿರುವ ಅಧೀಕ್ಷಕ ಎಸ್ ರಾಮು ಎಂಬುವರು 2010ರ ಜನವರಿಯಿಂದ 2014ರ ಆಗಸ್ಟ್ 6ರವರೆಗೆ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿಯೂ ಹೆಚ್ಚುವರಿ ಅನುದಾನ ಬಿಡುಗಡೆಯಾಗಿತ್ತು. 2015ರ ಆಡಿಟ್‌ನಲ್ಲಿಯೂ ಈ ಬಗ್ಗೆ ಆಕ್ಷೇಪಣೆ ವ್ಯಕ್ತವಾಗಿತ್ತು. ಕೆಲವು ಸ್ವಯಂ ಸೇವಾ ಸಂಸ್ಥೆಗಳಿಗೆ ಪಾವತಿಯಾಗಿದ್ದ ಹಣದ ಪೈಕಿ 1,28,32,299 ರು ಮರು ಪಾವತಿಯಾಗಿರಲಿಲ್ಲ.
ಪರ್ವಿನ್ ತಾಜ್, ನಯೀಮುದ್ದೀನ್ ಅವರು (ಈಗ ನಿವೃತ್ತ) ಅವಧಿಯಲ್ಲಿಯೂ 1,28,32, 299 ರು ಮರು ಪಾವತಿಯಾಗಬೇಕಿತ್ತು. ಆದರೆ ಮರು ಪಾವತಿಯಾಗಿರಲಿಲ್ಲ. ಹೀಗಾಗಿ ಹಲಸೂರು ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು. ಮತ್ತು ವಸೂಲು ಮಾಡುವ ಸಂಬಂಧ ಸಿವಿಲ್ ದಾವೆಯನ್ನೂ ಹೂಡಲಾಗಿತ್ತು.
ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಸಿ ಸಿದ್ದಪ್ಪ (ಹಾಲಿ ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಣಾಧಿಕಾರಿ) ಅವರ ವಿರುದ್ಧವೂ ಆರೋಪವಿತ್ತು. ಈ ಎಲ್ಲಾ ಅಧಿಕಾರಿಗಳ ವಿರುದ್ಧ ಗುರುತರವಾದ ಆರೋಪಗಳಿದ್ದರೂ ಸಹ ಇದೀಗ ಅವರನ್ನೆಲ್ಲಾ ವಿಚಾರಣೆಯಿಂದ ಕೈ ಬಿಡಲು ಅಂತಿಮ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಸಂಶಯಗಳಿಗೆ ಕಾರಣವಾಗಿದೆ.
ಅಂತಿಮ ವರದಿಯ ಶಿಫಾರಸ್ಸನಲ್ಲೇನಿದೆ?
ಆರೋಪಿತ ಅಧಿಕಾರಿಗಳ ಪೈಕಿ ನಿವೃತ್ತ ಅಧಿಕಾರಿಗಳ ವಿವರಗಳ ಪಟ್ಟಿಯನ್ನು (1ರಿಂದ 24) ಅವಲೋಕಿಸಲಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ದೇಶನದಂತೆ ಈ ಕಚೇರಿ ದಾಖಲೆಗಳನ್ನು ಮರು ಪರಿಶೀಲಿಸಿದೆ. ಸ್ವಯಂ ಸೇವಾ ಸಂಸ್ಥೆಗಳಿಗೆ ಜುಲೈ ಮತ್ತು ಆಗಸ್ಟ್ 2014ರಲ್ಲಿ ಅನುದಾನ ಬಿಡುಗಡೆಯಾಗಿರುತ್ತದೆ. ಅನುದಾನ ಬಿಡುಗಡೆ ಸಂದರ್ಭದಲ್ಲಿ ಈ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿರುವುದಿಲ್ಲದಿರುವುದು ಕಂಡು ಬರುತ್ತದೆ. ಆದ್ದರಿಂದ ಇವರನ್ನು ಪ್ರಕರಣದಿಂದ ಕೈ ಬಿಡಬಹುದು ಎಂದು ಪಿಎಸಿಯು ನಿರ್ದೇಶಿಸಿದೆ ಎಂದು ವಿಚಾರಣೆ ಅಧಿಕಾರಿಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಿವೃತ್ತ ಅಧಿಕಾರಿಗಳು (25ರಿಂದ 28,31, 32, 40, 41) ಮತ್ತು ಸೇವೆಯಲ್ಲಿರುವ ಅಧಿಕಾರಿಗಳು (ಕ್ರಮ ಸಂಖ್ಯೆ 1ರಿಂದ 8)ಗಳನ್ನೂ ಕೈಬಿಡಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನಿರ್ದೇಶಿಸಿದೆ. ಈ ಸಮಿತಿಯ ನಿರ್ದೇಶನದಂತೆ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸಿಎಜಿ ಕಚೇರಿಯ ದಾಖಲೆಗಳೊಂದಿಗೆ ರಿ ಕನ್ಸೈಲ್ ಮಾಡಿ ವರದಿ ನೀಡಿದ್ದಾರೆ. ಈ ವರದಿಯನ್ನು ಪರಿಶೀಲಿಸಲಾಗಿದೆ. ತ್ರಿ ಸದಸ್ಯ ಸಮಿತಿಯ ಶಿಫಾರಸ್ಸಿಗಿಂತ ಹೆಚ್ಚುವರಿ ಅನುದಾನ ಬಿಡುಗಡೆಯಾಗುವಲ್ಲಿ ರಾಜ್ಯ ಕಚೇರಿ ಅಧಿಕಾರಿಗಳ ಹೊಣೆಗಾರಿಕೆ ಕಂಡು ಬಂದಿರುತ್ತದೆ. ಆದ್ದರಿಂದ ಇವರನ್ನು ಪ್ರಕರಣದಿಂದ ಕೈಬಿಡಬಹುದಾಗಿದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ನಿವೃತ್ತ ಅಧಿಕಾರಿಗಳ ವಿವರಗಳ ಪೈಕಿ (ಕ್ರಮ ಸಂಖ್ಯೆ 29) ಬೆಳಗಾವಿಯ ವಿನಾಯಕ ಶಿಕ್ಷಣ ಸಂಸ್ಥೆಗೆ 2011-12ನೇ ಸಾಲಿಗ ಖಾನಾಪುರ ತಾಲೂಕಿನ ತ್ರಿ ಸದಸ್ಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಅನುದಾನ ಬಿಡುಗಡೆ ಅಗತ್ಯವಿಲ್ಲವೆಂದು ವರದಿ ನೀಡಿರುತ್ತಾರೆ. ರಾಜ್ಯ ಕಚೇರಿಯಿಂದ ಈ ಸ್ವಯಂ ಸೇವಾ ಸಂಸ್ಥೆಗೆ ಖಾನಾಪುರ ತಾಲೂಕಿಗೆ ಅನದುಆನ ಬಿಡುಗಡೆಯಾಗಿರುವುದಿಲ್ಲ. ಹೀಗಾಗಿ ಇವರನ್ನು ಪ್ರಕರಣದಿಂದ ಕೈ ಬಿಡಬಹುದು ಎಂದು ಶಿಫಾರಸ್ಸಿನಲ್ಲಿ ಹೇಳಲಾಗಿದೆ.
ಈ ಯೋಜನೆ ಅನುಷ್ಠಾನಕ್ಕಾಗಿ ಬಳ್ಳಾರಿಯ ರಜತಾದ್ರಿ ಪರಿವರ್ತನಾ ಶಿಕ್ಷಣ ಸಂಸ್ಥೆಗೆ 2009-10ನೇ ಸಾಲಿಗೆ ಅನುದಾನ ಬಿಡುಗಡೆಗೆ ತ್ರಿಸದಸ್ಯ ಸಮಿತಿಯು ಶಿಫಾರಸ್ಸು ಮಾಡಿತ್ತು. ಆದರೆ ಈ ಸ್ವಯಂ ಸೇವಾ ಸಂಸ್ಥೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ವಿಚಾರಣಾಧಿಕಾರಿ ಸಮಜಾಯಿಷಿ ನೀಡಿದ್ದಾರೆ. ಹೀಗಾಗಿ ನಿವೃತ್ತ ಅಧಿಕಾರಿಗಳನ್ನು ಪ್ರಕರಣದ ವಿಚಾರಣೆಯಿಂದ ಕೈಬಿಡಬಹುದು ಎಂದು ಶಿಫಾರಸ್ಸು ಮಾಡಲಾಗಿದೆ.
ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದ್ದ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಸದನದಕ್ಕೆ ಹೇಳಿಕೆ ನೀಡಿದ್ದ ವರ್ಷದ ಒಳಗೇ ಇದೀಗ 25 ಅಧಿಕಾರಿಗಳನ್ನು ಈ ಪ್ರಕರಣದಿಂದ ಕೈಬಿಡಲು ವಿಚಾರಣಾಧಿಕಾರಿಗಳು ಶಿಫಾರಸ್ಸು ಮಾಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
‘ಇಐಇಡಿಎಸ್‌ಎಸ್ ಯೋಜನೆಗೆ ಸಂಬಂಧಿಸಿದಂತೆ ಅಂತಿಮ ವರದಿ ಅನ್ವಯ ನಿವೃತ್ತ ಅಧಿಕಾರಿಗಳು ಹಾಗೂ ಈ ಯೋಜನೆಗೆ ಸಂಬಂಧಿಸಿದಂತೆ ಸೇವೆಯಲ್ಲಿರುವ 25 ಅಧಿಕಾರಿಗಳನ್ನು ಪ್ರಕರಣದಿಂದ ಕೈಬಿಡಬಹುದಾಗಿದ್ದು ಉಳಿದಂತೆ ರಾಜ್ಯಮಟ್ಟದ ಅಧಿಕಾರಿಗಳ ಕುರಿತು ಅಲ್ಪಸಂಖ್ಯಾತರ ಇಲಾಖೆಯ ನಿರ್ದೇಶಕರು ಸಿದ್ಧಪಡಿಸಿರುವ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿರುತ್ತಾರೆ,’ ಎಂಬ ಅಂಶವನ್ನು ಶಾಲಾ ಶಿಕ್ಷಣ, ಸಾಕ್ಷರತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ದಿ ಫೈಲ್ ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.