ಬೆಂಗಳೂರು; ಸರ್ಕಾರಿ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಒಂದೇ ಕಂತಿನಲ್ಲಿ ಅನುದಾನ ಬಿಡುಗಡೆ ಮಾಡಲು ಇಲಾಖೆಗಳ ಮುಖ್ಯಸ್ಥರಿಗೆ ಅಧಿಕಾರ ನೀಡಿದ್ದರೂ ಸಹ 2024-25ನೇ ಸಾಲಿನಲ್ಲಿ 44,317 ಸಿಬ್ಬಂದಿಗಳಿಗೆ ಸಕಾಲದಲ್ಲಿ ವೇತನ ಪಾವತಿಯಾಗಿರಲಿಲ್ಲ. ಬದಲಿಗೆ ಬಾಕಿ ಉಳಿಸಿಕೊಳ್ಳಲಾಗಿತ್ತು. ಇದರ ಮೊತ್ತವೇ 336 ಕೋಟಿಯಷ್ಟಿತ್ತು. ಹೀಗಾಗಿ ಈ ಅನುದಾನವು ಲ್ಯಾಪ್ಸ್ (ವ್ಯಪಗತ) ವಾಗಿತ್ತು ಎಂಬ ಅಂಶವು ಇದೀಗ ಬಹಿರಂಗವಾಗಿದೆ.
ಇಲಾಖೆಗಳಲ್ಲಿ ಅನುದಾನವು ಲ್ಯಾಪ್ಸ್ ಆಗಿರುವುದಕ್ಕೆ ಡಿಡಿಓ ಗಳೇ ಕಾರಣರು ಎಂದು ಆರ್ಥಿಕ ಇಲಾಖೆಯು ಇದೀಗ ಬೊಟ್ಟು ಮಾಡಿ ತೋರಿಸಿದೆ. ಈ ಅನುದಾನವು ಲ್ಯಾಪ್ಸ್ ಆಗಲು ಕಾರಣರಾದ ಡಿಡಿಓಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆರ್ಥಿಕ ಇಲಾಖೆಯು ಎಲ್ಲಾ ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಅನಧಿಕೃತ ಟಿಪ್ಪಣಿ ಹೊರಡಿಸಿದೆ.
2025ರ ಸೆ.3ರಂದು ಹೊರಡಿಸಿರುವ ಅನಧಿಕೃತ ಟಿಪ್ಪಣಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಶಿಸ್ತು ಕ್ರಮಕೈಗೊಳ್ಳುವ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಅವರು 2025ರ ಮೇ 19ರಂದೇ ಅನಧಿಕೃತ ಟಿಪ್ಪಣಿ ಹೊರಡಿಸಿದ್ದರು.
ಈ ಟಿಪ್ಪಣಿಯಲ್ಲೇನಿತ್ತು?
ಅಧಿಕಾರ ಪ್ರತ್ಯಾಯೋಜನೆ ಆದೇಶಗಳಿಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ತಮ್ಮ ಅಧೀನದ ಇಲಾಖೆಗಳಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲು ಅಧಿಕಾರ ನೀಡಲಾಗಿದೆ. ವೇತನ ಮತ್ತು ವೇತನಕ್ಕೆ ಸಂಬಂಧಿಸಿದ ಎಲ್ಲಾ ಬಾಬ್ತುಗಳನ್ನು ಒಂದೇ ಕಂತಿನಲ್ಲಿ ಅನುದಾನ ಬಿಡುಗಡೆ ಮಾಡಲು ಇಲಾಖೆಗಳಿಗೆ ಅಧಿಕಾರ ನೀಡಲಾಗಿರುತ್ತದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಪ್ರತಿ ಆರ್ಥಿಕ ವರ್ಷಾಂತ್ಯದಲ್ಲಿ ಖಜಾನೆಯಲ್ಲಿ ವಿವಿಧ ರೀತಿಯ ಬಿಲ್‌ಗಳನ್ನು ಸಲ್ಲಿಸಲು ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಲಾಗುತ್ತದೆ. ಈ ರೀತಿ ನಿಗದಿಪಡಿಸಿದ ದಿನಾಂಕದೊಳಗೆ ಬಿಲ್‌ಗಳನ್ನು ಸಲ್ಲಿಸಿ ಅನುದಾನ ವ್ಯಪಗತವಾಗದಂತೆ ನೋಡಿಕೊಳ್ಳುವುದು ಡಿಡಿಓಗಳ ಜವಾಬ್ದಾರಿಯಾಗಿರುತ್ತದೆ. ನಿಗದಿತ ದಿನಾಂಕದೊಳಗೆ ಬಿಲ್‌ಗಳನ್ನು ಸಲ್ಲಿಸದೇ ಅನುದಾನವು ವ್ಯಪಗತವಾದಲ್ಲಿ ಸಂಬಂಧಪಟ್ಟ ಡಿಡಿಓ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿರುತ್ತದೆ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
‘ಆದರೂ ಸಹ ಡಿಡಿಓಗಳ ನಿರ್ಲಕ್ಷ್ಯದಿಂದ 2024-25ನೇ ಸಾಲಿನಲ್ಲಿ ಒಟ್ಟು 44,317 ಸಿಬ್ಬಂದಿಗೆ ಸಂಬಂಧಿಸಿದಂತೆ 333 ಕೋಟಿ ರುಗಳಷ್ಟು ವೇತನ ಬಾಕಿ ಮತ್ತು ಇತರೆ ಭತ್ಯೆಗಳನ್ನು ನಿಗದಿತ ಸಮಯದೊಳಗೆ ಸೆಳೆಯದೇ ಅನದುಆನವು ವ್ಯಪಗತವಾಗಿರುತ್ತದೆ. ಇದಕ್ಕೆ ಕಾರಣರಾದ ಡಿಡಿಓ ಗಳ ಮೇಲೆ ಶಿಸ್ತು ಕ್ರಮ ವಹಿಸಬೇಕು. ಮತ್ತು ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಅನುಸರಣಾ ವರದಿಯನ್ನು ಸಲ್ಲಿಸಬೇಕು,’ ಎಂದು 2025ರ ಮೇ 19ರಂದೇ ಡಾ ಪಿ ಸಿ ಜಾಫರ್ ಅವರು ಸರ್ಕಾರದ ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚಿಸಿದ್ದರು.
ಅಲ್ಲದೇ 2025ರ ಜುಲೈ 23ರಂದೂ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಇಕ್ರಂ ಷರೀಫ್ ಅವರೂ ಸಹ ಮತ್ತೊಂದು ಪತ್ರ ಬರೆದಿದ್ದರು. ಈ ಪತ್ರದ ಪ್ರಕಾರ 2025ರ ಏಪ್ರಿಲ್‌ರಿಂದ ಜೂನ್ 2025ರವರೆಗೆ 1,17,884 ರಾಜ್ಯ ಸರ್ಕಾರಿ ನೌಕರರ 834.89 ಕೋಟಿ ರು. ಮೊತ್ತದಷ್ಟು ವೇತನ ಬಿಲ್‌ಗಳನ್ನು ಡಿಡಿಓಗಳು ಡ್ರಾ ಮಾಡಿರಲಿಲ್ಲ.
ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ನಿರಂತರವಾಗಿ ಸಾಲು ಸಾಲು ಪತ್ರಗಳನ್ನು ಬರೆದರೂ ಸಹ ಇಲಾಖೆಗಳ ಮುಖ್ಯಸ್ಥರು ಯಾವುದೇ ಕ್ರಮ ವಹಿಸಿರಲಿಲ್ಲ. ಹಾಗೆಯೇ ಯಾವುದೇ ಅನುಸರಣೆ ವರದಿಯನ್ನೂ ಸಲ್ಲಿಸಿರಲಿಲ್ಲ.
ಹೀಗಾಗಿ ಇಲಾಖೆಯ ಮತ್ತೊಬ್ಬ ಜಂಟಿ ಕಾರ್ಯದರ್ಶಿ ಹೆಚ್ ಎ ಶೋಭ ಅವರು 2025ರ ಸೆಪ್ಟಂಬರ್ 3ರಂದು ಮತ್ತೊಂದು ಅನಧಿಕೃತ ಟಿಪ್ಪಣಿಯನ್ನು ಹೊರಡಿಸಿದ್ದಾರೆ. ಇದರ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
ಡಿಡಿಒಗಳ ನಿರ್ಲಕ್ಷ್ಯದಿಂದ ಕೆಲವು ಇಲಾಖೆಗಳಲ್ಲಿ 2024-25ನೇ ಸಾಲಿನಲ್ಲಿ ಒಟ್ಟು 44,317 ಸಿಬ್ಬಂದಿಗೆ ಸಂಬಂಧಿಸಿದಂತೆ 333 ಕೋಟಿ ಮೊತ್ತದಷ್ಟು ವೇತನ ಬಾಕಿ ಮತ್ತು ಇತರೆ ಭತ್ಯೆಗಳನ್ನು ನಿಗದಿತ ಸಮಯದೊಳಗೆ ಸೆಳೆಯದವರ ವಿರುದ್ಧ ಶಿಸ್ತು ಕ್ರಮ ವಹಿಸಿಲ್ಲ. ಈ ಬಗ್ಗೆ 2025ರ ಮಾರ್ಚ್, ಮೇ, ಜುಲೈ ತಿಂಗಳಿನಲ್ಲಿ ಹಲವು ಬಾರಿ ಅನಧಿಕೃತ ಟಿಪ್ಪಣಿಗಳನ್ನು ಹೊರಡಿಸಿದ್ದರೂ ಯಾವುದೇ ಮಾಹಿತಿ ಸ್ವೀಕೃತವಾಗಿಲ್ಲ. ಹೀಗಾಗಿ ತಕ್ಷಣವೇ ಅನುಸರಣೆ ವರದಿಯನ್ನು ಸಲ್ಲಿಸಬೇಕು ಎಂದು ಹೆಚ್ ಎ ಶೋಭ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ಇಲಾಖಾವಾರು ಪಟ್ಟಿ
ಕೃಷಿ ಇಲಾಖೆಯಲ್ಲಿ 3.39 ಕೋಟಿ 98 ಲಕ್ಷ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 11.01 ಕೋಟಿ 57 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 36.21 ಕೋಟಿ 57 ಲಕ್ಷ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ 6.11 ಕೋಟಿ 35 ಲಕ್ಷ, ಸಾರಿಗೆ ಇಲಾಖೆ ಆಯುಕ್ತಾಲಯದಲ್ಲಿ 81.40 ಲಕ್ಷ, ಸಹಕಾರ ಇಲಾಖೆಯಲ್ಲಿ 17.91 ಕೋಟಿ 38 ಲಕ್ಷ, ಸಂಸದೀಯ ವ್ಯವಹಾರಗಳು ಶಾಸನ ರಚನೆ ಇಲಾಖೆಯಲ್ಲಿ 69.92 ಲಕ್ಷ ರು ವೇತನ ಬಾಕಿ ಇತ್ತು.
ಡಿಪಿಎಆರ್‍ನ (ಲೋಕಾಯುಕ್ತವೂ ಒಳಗೊಂಡಂತೆ) ವಿವಿಧ ಶಾಖೆಗಳಲ್ಲಿ 1.94 ಕೋಟಿ 52 ಲಕ್ಷ, ಡಿಪಿಎಆರ್‍ನ ಇ ಆಡಳಿತದಲ್ಲಿ 4.09 ಲಕ್ಷ, ಆಡಳಿತ ಸುಧಾರಣೆ (ಮೈಸೂರು ತರಬೇತಿ ಸಂಸ್ಥೆ) 1.45 ಕೋಟಿ 62 ಲಕ್ಷ, ಚುನಾವಣೆ ಶಾಖೆಯಲ್ಲಿ 1.12 ಕೋಟಿ 74 ಲಕ್ಷ, ಪ್ರವಾಸೋದ್ಯಮ ಇಲಾಖೆಯಲ್ಲಿ 69 ಲಕ್ಷ 56 ಸಾವಿರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 24 ಕೋಟಿ 60 ಲಕ್ಷ 61 ಸಾವಿರ, ಇಂಧನ ಇಲಾಖೆಯಲ್ಲಿ 2.38 ಕೋಟಿ 55 ಲಕ್ಷ, ಆರ್ಥಿಕ ಇಲಾಖೆಯಲ್ಲಿಯೇ 47 ಕೋಟಿ 67 ಲಕ್ಷ,
ಆಹಾರ ನಾಗರೀಕ ಸರಬರಾಜು ಇಲಾಖೆಯಲ್ಲಿ 2.36 ಕೋಟಿ, ಅರಣ್ಯ, ಪರಿಸರ ಜೀವಿಶಾಸ್ತ್ರ ಇಲಾಖೆಯಲ್ಲಿ 5 ಕೋಟಿ 94 ಲಕ್ಷ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 31 ಕೋಟಿ 46 ಲಕ್ಷ, ಉನ್ನತ ಶಿಕ್ಷಣ ಇಲಾಖೆಯಲ್ಲಿ 2 ಕೋಟಿ 29 ಲಕ್ಷ ರು., ಗೃಹ ಇಲಾಖೆಯಲ್ಲಿ 9 ಕೋಟಿ 17 ಲಕ್ಷ, ತೋಟಗಾರಿಕೆ ಇಲಾಖೆಯಲ್ಲಿ 11 ಕೋಟಿ 45 ಲಕ್ಷ ರು ವೇತನ ಬಾಕಿ ಇತ್ತು.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ 17 ಲಕ್ಷ 71 ಸಾವಿರ, ಕನ್ನಡ ಸಂಸ್ಕೃತಿ, ಮಾಹಿತಿ ವಾರ್ತಾ ಇಲಾಖೆಯಲ್ಲಿ 1 ಕೋಟಿ 54 ಲಕ್ಷ, ಕಾರ್ಮಿಕ ಇಲಾಖೆಯಲ್ಲಿ 5 ಕೋಟಿ 52 ಲಕ್ಷ, ಕಾನೂನು ಇಲಾಖೆಯಲ್ಲಿ 1 ಕೋಟಿ 93 ಲಕ್ಷ, ಸಣ್ಣ ನೀರಾವರಿ ಇಲಾಖೆಯಲ್ಲಿ 1 ಕೋಟಿ 64 ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣ, ಅಭಿವೃದ್ಧಿ ಮತ್ತು ಹಜ್ ಇಲಾಖೆಯಲ್ಲಿ 16 ಕೋಟಿ 11 ಲಕ್ಷ 75 ಸಾವಿರ, ಯೋಜನೆ, ಸಾಂಖ್ಯಿಕ ಇಲಾಖೆಯಲ್ಲಿ 17 ಲಕ್ಷ 45 ಸಾವಿರ, ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆಯಲ್ಲಿ 50 ಕೋಟಿ 21 ಲಕ್ಷ, ಲೋಕೋಪಯೋಗಿ ಇಲಾಖೆಯಲ್ಲಿ 4 ಕೋಟಿ 60 ಲಕ್ಷ, ಕಂದಾಯ ಇಲಾಖೆಯಲ್ಲಿ 10 ಕೋಟಿ 74 ಲಕ್ಷ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ 12 ಕೋಟಿ 80 ಲಕ್ಷ ರು ವೇತನ ಬಾಕಿ ಇತ್ತು.
ಸಮಾಜ ಕಲ್ಯಾಣ ಇಲಾಖೆಯಲ್ಲಿ 4 ಕೊಟಿ 83 ಲಕ್ಷ, ನಗರಾಭಿವೃದ್ಧಿ ಇಲಾಖೆಯಲ್ಲಿ 1 ಕೋಟಿ 27 ಲಕ್ಷ, ಜಲ ಸಂಪನ್ಮೂಲ ಇಲಾಖೆಯಲ್ಲಿ 16 ಲಕ್ಷ 52 ಸಾವಿರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ 1 ಕೋಟಿ 47 ಲಕ್ಷ ರು ಸೇರಿ ಒಟ್ಟಾರೆ 336 ಕೋಟಿಯಷ್ಟು ವೇತನ ಬಾಕಿ ಇತ್ತು ಎಂಬುದು ಪತ್ರದಿಂದ ತಿಳಿದು ಬಂದಿದೆ.
ಈ ಕುರಿತು ದಿ ಫೈಲ್, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಚ್ ಎ ಶೋಭ ಅವರನ್ನು ಸಂಪರ್ಕಿಸಿತ್ತು. ಅನುದಾನ ವ್ಯಪಗತವಾಗಿರುವುದರ ಸಂಬಂಧ ಪತ್ರ ಬರೆದಿರುವುದನ್ನು ಖಚಿತಪಡಿಸಿದರು. ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಿದ ನಂತರ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.