ಗ್ರಾಮೀಣ ಕುಡಿಯುವ ನೀರಿನ 34 ಯೋಜನೆ ಅಸಮರ್ಪಕ; ಕಲುಷಿತ ನೀರು ಸರಬರಾಜು, ಬಹುಕೋಟಿ ಪೋಲು

scam in rural drinking water scheme

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ಸುಧಾರಿಸುವ ಉದ್ದೇಶದಿಂದ 2000 ರಿಂದ 2016 ರ ಅವಧಿಯಲ್ಲಿ ಜಾರಿಗೊಳಿಸಲಾದ ಯೋಜನೆಗಳ ಪೈಕಿ 32 ಯೋಜನೆಗಳು ಅಸಮರ್ಪಕವಾಗಿವೆ. ಇವುಗಳಲ್ಲಿನ ಶೇಕಡ 86 ರಷ್ಟು ಕುಡಿಯುವ ನೀರಿನ ಮಾದರಿಗಳು ʻಕುಡಿಯಲು ಯೋಗ್ಯವಾಗಿಲ್ಲʼ ಎಂಬ ಅಘಾತಕಾರಿ ಮಾಹಿತಿಯನ್ನು ಸರ್ಕಾರದ ಪರವಾಗಿ ನಡೆದ ಅಧ್ಯಯನವೊಂದು ಬಹಿರಂಗಪಡಿಸಿದೆ.

 

ಮೌಲ್ಯಮಾಪನ ಸಮಾಲೋಚನಾ ಸಂಸ್ಥೆಯಾಗಿರುವ (ECO) ʻನಬಾರ್ಡ್‌ ಕನ್ಸಲ್ಟೆನ್ಸಿ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ʼ (ನ್ಯಾಬ್‌ಕಾನ್ಸ್-NABCONS) ಈ ಅಧ್ಯಯನ ನಡೆಸಿತ್ತು.   ವರದಿಯನ್ನು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಲ್ಲಿಸಿದೆ. ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕೋರಿಕೆಯ ಮೇರೆಗೆ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಈ ಅಧ್ಯಯನ ನಡೆಸಿತ್ತು.

 

ಈ ಅಧ್ಯಯನ ವರದಿಯ ಪ್ರತಿ ʻದಿ ಫೈಲ್‌ʼ ಲಭ್ಯವಾಗಿದೆ.

 

rural drinking water programme karnataka

 

ಈ ಯೋಜನೆಗಳ ಜಾರಿಯ ಸಂದರ್ಭದಲ್ಲಿ 155 ಕೋಟಿ ರು. ಇದ್ದ ಈ ಯೋಜನೆಗಳ ನಿರ್ಮಾಣದ ಕರಾರು ಮೊತ್ತವು ಯೋಜನೆ ಮುಗಿಯುವ ವೇಳೆಗೆ 214 ಕೋಟಿಗೆ, ಅಂದರೆ ನಿಗದಿಗಿಂತ ಶೇಕಡ 41ರಷ್ಟು ಹೆಚ್ಚಳಗೊಂಡಿತ್ತು. ಆದರೂ ಈ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬಂದಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

ಈ ಯೋಜನೆಗಳು ಜಾರಿಗೆ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್‌, ಕಾಂಗ್ರೆಸ್‌ -ಜೆಡಿಎಸ್‌ ಸಮ್ಮಿಶ್ರ ಸರ್ಕಾರ, ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರ, ಬಿಜೆಪಿ  ಹಾಗೂ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ಯಾವುದೇ ಸರ್ಕಾರವೂ ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಮುಂದಾಗದೇ ಇರುವುದು ಈ ವರದಿಯಿಂದ ಸ್ಪಷ್ಟವಾಗಿದೆ.

 

ಒಟ್ಟು 14 ಜಿಲ್ಲೆಗಳಿಗೆ ಸೇರಿದ 24 ತಾಲ್ಲೂಕುಗಳಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ (ಪಿಆರ್‌ಇಡಿ) ಈ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿತ್ತು. ನಂತರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (ಆರ್‌ಡಿಡಬ್ಲ್ಯುಎಸ್‌ಡಿ) ಈ ಯೋಜನೆಗಳನ್ನು ನಿರ್ವಹಿಸುತ್ತಿದೆ.  ಸರ್ಕಾರಿ ದಾಖಲೆಗಳ ಪ್ರಕಾರ, ವಾಸ್ತವವಾಗಿ ಯೋಜನೆಗಳ ಸಂಖ್ಯೆ 34 ಆಗಿದ್ದರೂ, ಕೆಲವು ಕಾರಣಗಳ ಹಿನ್ನೆಲೆಯಲ್ಲಿ ʻನ್ಯಾಬ್‌ಕಾನ್ಸ್ʼ ಇವನ್ನು 32 ಯೋಜನೆಗಳೆಂದು ಪರಿಗಣಿಸಿ ಅಧ್ಯಯನ ನಡೆಸಿದೆ.

 

ಇವುಗಳಲ್ಲಿ, 13 ಬಹು ಗ್ರಾಮ ಯೋಜನೆಗಳು (ಎಂವಿಎಸ್), 20 ನೀರು ಸರಬರಾಜು ಯೋಜನೆಗಳು (ಡಬ್ಲ್ಯುಎಸ್‌ಎಸ್) ಹಾಗೂ ಪೈಪಿನ ಮೂಲಕ ನೀರು ಸರಬರಾಜು ಮಾಡುವ 1 ಯೋಜನೆ (ಪಿಡಬ್ಲ್ಯುಎಸ್‌ಎಸ್) ಸೇರಿವೆ. 32 ನೀರು ಸರಬರಾಜು ಯೋಜನೆಗಳ ವಿವರಗಳನ್ನು ಈ ಅಧ್ಯಯನದ ಸಂದರ್ಭದಲ್ಲಿ  ಪರಿಶೀಲಿಸಲಾಗಿದ್ದು, ಇದರಲ್ಲಿ 30 ಬಹುಗ್ರಾಮ ಯೋಜನೆಗಳಾಗಿದ್ದರೆ (ಎಂವಿಎಂ), ಉಳಿದ ಎರಡು (2) ಏಕ ಗ್ರಾಮ ಯೋಜನೆಗಳಾಗಿವೆ (SVS). ಈ ನಿಧಿ ನೀಡಿಕೆ ಯೋಜನೆಗಳಲ್ಲಿ 7 ತ್ವರಿತಗತಿಯ ನೀರು ಸರಬರಾಜು ಯೋಜನೆಗಳಿಗೆ (ಎಯುಡಬ್ಲ್ಯುಎಸ್‌ಪಿ), 12 ಸ್ವಜಲಧಾರಾ ಯೋಜನೆಗೆ, 1 ಎಸ್.ಡಿ.ಪಿ. ಯೋಜನೆಗೆ, 6 ಜಲನಿರ್ಮಲ ಯೋಜನೆಗೆ ಹಾಗೂ 6 ರಾಷ್ಟ್ರೀಯ ಗ್ರಾಮೀಣ ನೀರು ಕುಡಿಯುವ ನೀರಿನ ಕಾರ್ಯಕ್ರಮಕ್ಕೆ ಸೇರಿದ್ದಾಗಿವೆ.

 

ಅಧ್ಯಯನಕ್ಕೆ ಒಳಪಟ್ಟ ನೀರು ಸರಬರಾಜು ಯೋಜನೆಗಳ ಪಟ್ಟಿ.

rural drinking water programme karnatakarural drinking water programme karnataka

rural drinking water programme karnataka

 

ಮೌಲ್ಯಮಾಪನ ಅಧ್ಯಯನದ ಭಾಗವಾಗಿ, ಈ ಯೋಜನಾ ವ್ಯಾಪ್ತಿಯಲ್ಲಿ 2,272 ಅಂತರ್ಜಲ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶೇಕಡ 86 ರಷ್ಟು ಕುಡಿಯಲು ಯೋಗ್ಯವಲ್ಲವೆಂಬುದು ದೃಢಪಟ್ಟಿದೆ. ಅಲ್ಲದೆ, ಇನ್ನೂ ಶೇಕಡ 9ರಷ್ಟು ಮಾದರಿಗಳ ನೀರು ಕೂಡ ಕುಡಿಯಲು ಆಸುರಕ್ಷಿತವೆಂಬುದು ಕಂಡುಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ ಎಂಬುದು ಗೊತ್ತಾಗಿದೆ.

 

ಈ ಯೋಜನೆಗಳ ವ್ಯಾಪ್ತಿಯಲ್ಲಿ ಬೀಳುವ ಮಳೆ ಪ್ರಮಾಣದಲ್ಲಿ ಹೆಚ್ಚು-ಕಡಿಮೆಯಾದ ಕಾರಣದಿಂದಾಗಿ ಅಂತರ್ಜಲ ಮಟ್ಟದ ಏರಿಳಿತವು ಪ್ರಭಾವಕ್ಕೊಳಗಾಗಿದ್ದು, ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಗೆ ಹೆಚ್ಚಿನ ಆತಂಕ ಎದುರಾಗಿದೆ. ಇವುಗಳ ಜೊತೆಗೆ, ಗ್ರಾಮ ಪಂಚಾಯಿತಿಗಳು ಹಾಗೂ ಗ್ರಾಮಸ್ಥರ ನೀರಿನ ಅಸಮರ್ಪಕ ನಿರ್ವಹಣೆಯು ನೀರಿನ ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿರುವುದು ಗೊತ್ತಾಗಿದೆ.

 

ಅಧ್ಯಯನಕ್ಕೆ ಒಳಪಡುವ ನಿಷ್ಕ್ರಿಯ ನೀರು ಸರಬರಾಜು

ಯೋಜನೆಗಳನ್ನು ತೋರಿಸುವ ಕರ್ನಾಟಕದ ನಕ್ಷೆ.

rural drinking water programme Karnataka

 

26 ಗ್ರಾಮ ಪಂಚಾಯತಿಗಳ ಪೈಕಿ 4ರಲ್ಲಿ ಅಂತರ್ಜಲ ನೀರಿನ ಮಟ್ಟವು ನೆಲಮಟ್ಟದಿಂದ 100 ಅಡಿಗಿಂತ ಕಡಿಮೆ ಇದೆ ಎಂದು  ಭೂಜಲ ಅಪ್ಲಿಕೇಶನ್ ಬಳಸಿ ನಡೆಸಿದ ಪರಿಶೀಲನೆಯಿಂದ ತಿಳಿದುಬಂದಿದೆ ಎಂದು ವರದಿ ತಿಳಿಸಿದೆ.

 

ಪರಿಮಾಣಾತ್ಮಕ ಹಾಗೂ ಗುಣಾತ್ಮಕ ದತ್ತಾಂಶಗಳ ಸಂಯೋಜಿತ ವಿಧಾನದಲ್ಲಿ ನಡೆಸಲಾದ ಮೌಲ್ಯಮಾಪನ ಅಧ್ಯಯನ ಇದಾಗಿದೆ. ಡೆಸ್ಕ್ ವಿಮರ್ಶೆಗಳು, ಕ್ಷೇತ್ರ ಭೇಟಿಗಳು, ನೇರ ಅವಲೋಕನಗಳು, ದೀರ್ಘ ಸಂದರ್ಶನಗಳು, ವಲಯ ತಜ್ಞರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ఇಲಾಖೆಯ (RDWSD) ಅಧಿಕಾರಿಗಳು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಸಮುದಾಯ ಸದಸ್ಯರೊಂದಿಗೆ ನಡೆಸಲಾದ ಸಂವಾದಗಳಲ್ಲಿ ಹೊರಹೊಮ್ಮಿದ ಅಂಶಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ.

 

 

 

ಈ 32 ಯೋಜನೆಗಳ ಪೈಕಿ 16 ಯೋಜನೆಗಳು (ಶೇ 50) ಕಾರ್ಯಾರಂಭ ಮಾಡಿದ್ದರೆ, 3 ಯೋಜನೆಗಳು ಭಾಗಶಃ (ಶೇ 9) ಸಕ್ರಿಯಗೊಂಡಿವೆ. ಉಳಿದ, 13 ಯೋಜನೆಗಳು (ಶೇ 41) ಮೂಲಸೌಕರ್ಯ ಪೂರ್ಣಗೊಂಡಿದ್ದರೂ ಇನ್ನೂ ಕಾರ್ಯಾರಂಭಗೊಂಡಿಲ್ಲವೆಂಬ  ಕಳವಳಕಾರಿ ಅಂಶವೂ ಈ ಅಧ್ಯಯನ ವರದಿಯಲ್ಲಿ ದಾಖಲಾಗಿದೆ ಎಂಬುದು ಗೊತ್ತಾಗಿದೆ.

 

ಒಟ್ಟಾರೆ, ಕಾರ್ಯಾರಂಭದ ಹಂತದಿಂದಲೇ ಈ ಯೋಜನೆಗಳ ಅನುಷ್ಠಾನದಲ್ಲಿ ಅಸಮರ್ಪಕತೆ ಇತ್ತು ಎಂಬುದನ್ನು ಅಧ್ಯಯನವು ಹೊರಗೆಡವಿರವುದು ವರದಿಯಲ್ಲಿ ಸ್ಪಷ್ಟವಾಗಿದೆ.

 

5 ವರ್ಷಗಳಲ್ಲಿ 6,600 ಬೋರ್ ವೆಲ್ ಕೊರೆದರು!

 

ಕೊಳವೆಬಾವಿ ಕೊರೆಸುವ ಅಗತ್ಯವನ್ನು ನಿವಾರಿಸುವ ಮೂಲಕ ಅಂತರ್ಜಲ ಸಂಪನ್ಮೂಲದ ಸಂರಕ್ಷಣೆಯು ಈ ಯೋಜನೆಗಳ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಆದರೂ, ಅವು ಅಸಮರ್ಪಕವಾಗಿ ಅನುಷ್ಠಾನಗೊಂಡಿರುವುದರಿಂದ ಕಳೆದ ಐದು ವರ್ಷಗಳಲ್ಲಿ, 24 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಆರ್‌ಡಿಡಬ್ಲ್ಯುಎಸ್‌ಡಿಯಿಂದ 6,600 ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಬಹಿರಂಗಗೊಂಡಿದೆ.

 

ಇಷ್ಟಾದರೂ, ನೀರು ಪೂರೈಕೆಗಾಗಿ ಕೊಳವೆಬಾವಿಗಳ ಅವಲಂಬನೆಯು 2019ಕ್ಕೆ ಹೋಲಿಸಿದರೆ ಶೇಕಡ 34 ರಿಂದ 2023 ರಲ್ಲಿ ಶೇಕಡ  15 ಕ್ಕೆ ಇಳಿಮುಖವಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 2024ರ ಬೇಸಿಗೆಯಲ್ಲಿ 24 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಪ್ರತಿ ತಿಂಗಳಿಗೆ ಪ್ರತಿ ಕೊಳವೆಬಾವಿಗೆ 10,304 ರು. ಸರಾಸರಿ ದರದಲ್ಲಿ ಹಣ ಪಾವತಿಸಿ 229 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ಜನರಿಗೆ ನೀರು ಪೂರೈಸಿದೆ ಎಂದು ಈ ಅಧ್ಯಯನ ವರದಿಯಲ್ಲಿ ಹೇಳಿರುವುದು ಗೊತ್ತಾಗಿದೆ.

 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಗಮನಾರ್ಹ ಪ್ರಮಾಣದಲ್ಲಿ ತಾಂತ್ರಿಕ ಸಿಬ್ಬಂದಿಯ ಕೊರತೆ ಎದುರಿಸುತ್ತಿರುವುದನ್ನು ಅಧ್ಯಯನ ಉಲ್ಲೇಖಿಸಿದೆ. ಆ ಪ್ರಕಾರ, ಒಟ್ಟು ಬೇಡಿಕೆಯ ಹುದ್ದೆಗಳ ಪೈಕಿ ಶೇಕಡ 45ರಷ್ಟು ಹುದ್ದೆಗಳು ಖಾಲಿ ಇವೆ. ಗ್ರಾಮ ಪಂಚಾಯತಿಗಳ ಶೇಕಡ 68ರಷ್ಟು ವಾಟರ್‌ಮೆನ್‌ಗಳು ಕಾಯಂ ಉದ್ಯೋಗಿಗಳಾಗಿದ್ದು, ಪ್ರತಿ ವಾಟರ್‌ಮ್ಯಾನ್ ಕೆಲಸದ ಹೊರೆ ಸರಾಸರಿ 380 ಮನೆಗಳಷ್ಟಿದೆ. ಇನ್ನು ನೀರು ಪೂರೈಸಲು ಪ್ರತಿ ಮನೆಗೆ ತಿಂಗಳಿಗೆ 570 ರು. ವೆಚ್ಚ ತಗಲುತ್ತಿದೆ ಎಂಬುದು ಲೆಕ್ಕಾಚಾರಗಳಿಂದ ಗೊತ್ತಾಗಿದೆ ಎಂದು ವರದಿ ಹೇಳಿದೆ.

 

ಹೆಚ್ಚಿದ ಹಣಕಾಸಿನ ಹೊರೆ

 

ಈ ಯೋಜನೆಗಳ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ, ಗ್ರಾಮ ಪಂಚಾಯತಿಗಳು ಒಟ್ಟು ವೆಚ್ಚದ ಶೇಕಡ 22 ರಷ್ಟನ್ನು ವೇತನಕ್ಕೆ, ಶೇಕಡ 62ರಷ್ಟನ್ನು ಇಂಧನ ಶುಲ್ಕಕ್ಕೆ ಹಾಗೂ ಶೇಕಡ 16 ರಷ್ಟನ್ನು ನಿರ್ವಹಣಾ ವೆಚ್ಚಗಳಿಗಾಗಿ ಖರ್ಚು ಮಾಡುತ್ತಿವೆ. ಒಟ್ಟಾರೆಯಾಗಿ, 2023-24ನೇ ಹಣಕಾಸು ವರ್ಷದಲ್ಲಿ ಗ್ರಾಮ ಪಂಚಾಯತಿಗಳ ನೀರು ಶುಲ್ಕ ಸಂಗ್ರಹಣಾ ಕಾರ್ಯದಕ್ಷತೆಯು ಶೇಕಡ 2 ರಿಂದ ಶೇಕಡ  80 ರವರೆಗೆ ಬೇರೆ ಬೇರೆ ಪ್ರಮಾಣದಲ್ಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಈ ಯೋಜನೆಗಳು ಅನುಷ್ಠಾನ ಗೊಂಡಿರುವ ಗ್ರಾಮ ಪಂಚಾಯತಿಗಳು ಗಂಭೀರವಾದ ಹಣಕಾಸು ಪರಿಸ್ಥಿತಿಯನ್ನು ಎದುರಿಸುತ್ತಿವೆ. ಶೇಕಡಾ -94 ರಿಂದ  ಶೇಕಡಾ -27ರವರೆಗೆ ವೆಚ್ಚದ ಕೊರತೆಯಲ್ಲಿ ಸಿಲುಕಿವೆ. ಅಂದರೆ, ನೀರಿನ ಶುಲ್ಕ ಸಂಗ್ರಹಣೆಯ ಮೊತ್ತವು ಪೂರೈಕೆಗಾಗಿ ಮಾಡುತ್ತಿರುವ ವೆಚ್ಚಕ್ಕಿಂತ ಶೇಕಡ  27  ರಿಂದ ಶೇಕಡ  94 ರಷ್ಟು ಕಡಿಮೆ ಇದೆ ಎಂದು ಈ  ಅಧ್ಯಯನ ವರದಿಯು ಬೊಟ್ಟು ಮಾಡಿದೆ.

 

ನಿಖರವಾದ ದತ್ತಾಂಶ ಹಾಗೂ ಯೋಜನಾ ದಾಖಲೆಗಳ ಅಲಭ್ಯತೆ, ಘಟಕಗಳಿಗೆ ಸುಲಭ ಪ್ರವೇಶ ಸಾಧ್ಯವಾಗದಿರುವುದು ಹಾಗೂ ಯೋಜನೆಗಳ ನಿರ್ವಹಣೆಯನ್ನು ಪಂಚಾಯತ್‌ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ (PRED) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪರಿವರ್ತಿಸುವ ಹಂತದಲ್ಲಿ ಸಾಂಸ್ಥಿಕ ಸಮನ್ವಯದ ಕೊರತೆಗಳು ಅಧ್ಯಯನದ ವೇಳೆ ಪ್ರಮುಖ ಸವಾಲುಗಳಾಗಿ ಎದುರಾದವು ಎಂಬುದನ್ನು ಕೂಡ ಈ ಮೌಲ್ಯಮಾಪನ ವರದಿ ಉಲ್ಲೇಖಿಸಿದೆ.

 

ಯೋಜನೆಗಳ ಆಸಮರ್ಪಕ ಕಾರ್ಯನಿರ್ವಹಣೆಗೆ ನಿರ್ದಿಷ್ಟ ಕಾರಣಗಳನ್ನು ಅಧ್ಯಯನವು ಗುರುತಿಸಿದೆ.  ನೀರಿನ ಮೂಲಕ್ಕೆ ಸಂಬಂಧಿಸಿದ ಕಾರಣಗಳು, ಮೂಲಸೌಕರ್ಯ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರಣಗಳು, ಸಾಂಸ್ಥಿಕ ಕಾರಣಗಳು, ಹಣಕಾಸು ಸಮಸ್ಯೆಗಳು, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳನ್ನು ಇವು ಒಳಗೊಂಡಿವೆ ಎಂದು ವರದಿಯಲ್ಲಿ ಹೇಳಿರುವುದು ಗೊತ್ತಾಗಿದೆ.

 

ನೀರಿನ ಮೂಲದಲ್ಲಿಯೇ ಸಮಸ್ಯೆ

 

ಈ 32 ಯೋಜನೆಗಳ ಪೈಕಿ 23 ಯೋಜನೆಗಳು ವರ್ಷಪೂರ್ತಿ ನೀರನ್ನು ಲಭ್ಯವಾಗಿಸುವ ಮೂಲವನ್ನು ಹೊಂದಿರುವುದಿಲ್ಲ. 9 ಯೋಜನೆಗಳು ನದಿ ವ್ಯವಸ್ಥೆಗಳನ್ನು ಆಧರಿಸಿದ್ದರೂ, ಇವು ಕೂಡ ಬೇಸಿಗೆಯ ಅವಧಿಯಲ್ಲಿ ನೀರಿನ ಕೊರತೆ ಅನುಭವಿಸುತ್ತವೆ. ಜೊತೆಗೆ, ನದಿ-ಅಣೆಕಟ್ಟು/ಅಡ್ಡಕಟ್ಟೆ-ಕಾಲುವೆ-ಕೆರೆ ಹೀಗೆ ನೀರಿನ ವಿವಿಧ ಮೂಲಗಳ ಸಂಯೋಜನೆಯ ಅವಲಂಬನೆಯ ವೈಫಲ್ಯವು ಅಪಾಯದ ಪ್ರಮಾಣ ಹೆಚ್ಚಲು ಕಾರಣವಾಗಿದೆ ಎಂದು ಈ ಮೌಲ್ಯಮಾಪನ ವರದಿಯು ಅಭಿಪ್ರಾಯಪಟ್ಟಿದೆ.

 

ನಿಷ್ಕ್ರೀಯ ಯೋಜನೆಗಳು ಯಾವ ಜಿಲ್ಲೆಯಲ್ಲಿ ಎಷ್ಟು?

 

ರಸ್ತೆ ಕಾಮಗಾರಿಗಳು, ಯಂತ್ರದ ಮೂಲಕ ಕೃಷಿ ಭೂಮಿಯ ಉಳುಮೆ, ಪ್ರವಾಹ, ಕಳವು ಮತ್ತು ವಿಧ್ವಂಸಕ ಕೃತ್ಯಗಳಿಂದಾಗಿ ಮೂಲಸೌಕರ್ಯಗಳಿಗೆ ಉಂಟಾಗುವ ಹಾನಿ ಇವುಗಳಲ್ಲಿ ಸೇರಿದೆ. ಹೀಗೆ ಹಾನಿಗೀಡಾದ ಮೂಲಸೌಕರ್ಯಗಳನ್ನು ದುರಸ್ತಿಗೊಳಿಸಿ ಪುನರ್ ಸ್ಥಾಪಿಸದಿರುವುದು ಹಾಗೂ  ತಾಂತ್ರಿಕ ವಿನ್ಯಾಸ ದೋಷಗಳು ಯೋಜನೆಗಳ ವೈಫಲ್ಯದಲ್ಲಿ ತಮ್ಮದೇ ಕೊಡುಗೆ ನೀಡಿವೆ ಎಂದು ವರದಿಯಲ್ಲಿ ವಿವರಿಸಿರುವುದು ಬಹಿರಂಗಗೊಂಡಿದೆ.

 

ಕಾರ್ಯಾಚರಣೆ ಮತ್ತು ನಿರ್ವಹಣೆ ವಹಿಸುವ ಪಾತ್ರಗಳ ಬಗ್ಗೆ ಸ್ಪಷ್ಟತೆಯ ಕೊರತೆ; ಎಂಐಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ರೈತ ಗುಂಪುಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಎಸ್ಕಾಂಗಳ ನಡುವಿನ ಅಂತರ-ಸಾಂಸ್ಥಿಕ ಘರ್ಷಣೆಗಳು ಈ ಯೋಜನೆಗಳು ವಿಫಲವಾಗಲು ಮುಖ್ಯ ಕಾರಣವಾಗಿವೆ ಎಂದು ಮೌಲ್ಯಮಾಪಕರು ಕಾರಣಗಳನ್ನು ಪಟ್ಟಿ ಮಾಡಿರುವುದು ವರದಿಯಲ್ಲಿ ಗೊತ್ತಾಗಿದೆ.

 

ಹಣಕಾಸಿನಿಂದ ಹೈರಾಣವಾದ ಗ್ರಾ.ಪಂ.ಗಳು

 

ಗ್ರಾಮ ಪಂಚಾಯತಿಗಳು ತಮ್ಮದೇ ಆದ ಕೊಳವೆಬಾವಿ ಆಧಾರಿತ ಯೋಜನೆಗಳಿಗೆ ಸಂಬಂಧಿಸಿದಂತೆ ಇಂಧನ, ಸಂಬಳ, ದುರಸ್ತಿ ಮತ್ತು ನಿರ್ವಹಣೆ ವೆಚ್ಚವನ್ನು ಪೂರೈಸಲು ಹೆಣಗಾಡುತ್ತಿವೆ. ಪ್ರಮುಖ ಕಾಮಗಾರಿಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಗ್ರಾಮ ಪಂಚಾಯತಿಗಳಿಗೆ ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಜವಾಬ್ದಾರಿ ವಹಿಸಿರುವ ಉದಾಹರಣೆಗಳಿದ್ದರೂ, ಯೋಜನೆಯ ಇತರ ಪಾಲುದಾರರು ಕಾರ್ಯಾಚರಣೆಯ ವೆಚ್ಚ ಹಾಗೂ ಜವಾಬ್ದಾರಿಯನ್ನು ಹಂಚಿಕೊಳ್ಳದಿರುವುದು ಅಸಮರ್ಪಕತೆ ಉಂಟಾಗಲು ಕಾರಣವಾಗಿದೆ ಎಂದು ಮೌಲ್ಯಮಾಪನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಮುದಾಯದ ಭಾಗವಹಿಸುವಿಕೆಯ ಕೊರತೆ; ನೀರಾವರಿ-ಪರ ರೈತ ಗುಂಪುಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ನಡುವೆ ಕೆರೆಗಳಿಂದ ನೀರು ಸೆಳೆಯುವಿಕೆ- ಹಂಚಿಕೊಳ್ಳುವಿಕೆಗೆ ಸಂಬಂಧಿಸಿದ ಸಾಮಾಜಿಕ ಸಂಘರ್ಷಗಳು, ನದಿಗಳಲ್ಲಿನ ಮರಳು ಗಣಿಗಾರಿಕೆ ಹಾಗೂ ನದಿ ದಂಡೆಯಲ್ಲಿ ನಡೆಯುವ ಮಣ್ಣಿನ ಗಣಿಗಾರಿಕೆ ಈ ಕಾರಣಗಳಲ್ಲಿ ಸೇರಿರುವುದು ಕೂಡ ಈ ಮೌಲ್ಯಮಾಪನ ವರದಿಯಿಂದ ಗೊತ್ತಾಗಿದೆ.

 

ಮಳೆಯಾಶ್ರಿತ ಕೆರೆಗಳಿಗೂ ನೀರು ತುಂಬಿಸುವ ಯೋಜನೆ; ಕಾಮಗಾರಿಯಲ್ಲಿ 300 ಕೋಟಿ ಲೂಟಿ ಆರೋಪ

 

ಬಸವ ಕಲ್ಯಾಣ ತಾಲೂಕಿನ ಮಳೆಯಾಶ್ರಿತ  15 ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಯೋಜನೆಯಲ್ಲಿ 300 ಕೋಟಿ ರು. ಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ. ಪೈಪ್‌ಲೈನ್‌, ಜಾಕ್‌ವೆಲ್‌ ಹಾಗೂ ಕಾಮಗಾರಿ ನಡೆಸದೇ ಇದ್ದರೂ ಸಹ 200 ಕೋಟಿಗೂ ಅಧಿಕ ಮೊತ್ತವನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪಾವತಿಯಾಗಿದೆ. ಮಧ್ಯಂತರ ಕರಾರು ಒಪ್ಪಂದ ಮಾಡಿಕೊಳ್ಳದ ಕಂಪನಿಗೂ ಕೋಟ್ಯಂತರ ರುಪಾಯಿ ಪಾವತಿಯಾಗಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ. ಈ ಕುರಿತು ʻದಿ ಫೈಲ್‌ʼ ವಿಶೇಷ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts