ಬೆಂಗಳೂರು; ಟೆಲಿಫೋನ್ ಕದ್ದಾಲಿಕೆ ಮತ್ತು ಕದ್ದಾಲಿಸಿದ ಧ್ವನಿ ಸುರಳಿ ಸೋರಿಕೆ ಆರೋಪದಲ್ಲಿ ಸಿಲುಕಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ತಂದಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕಾನೂನು ಇಲಾಖೆಯ ಮೊರೆ ಹೊಕ್ಕಿದೆ.
ಹಿರಿಯ ಐಪಿಎಸ್ ಅಧಿಕಾರಿಗಳಾದ ಉಮೇಶ್ ಮತ್ತು ಅರುಣ್ ಚಕ್ರವರ್ತಿ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹುದ್ದೆಗೆ ಪದನ್ನೋತಿ ನೀಡಿ ರಾಜ್ಯ ಸರ್ಕಾರವು ಹೊರಡಿಸಿದ್ದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣ (ಸಿಎಟಿ) ಮಧ್ಯಂತರ ತಡೆಯಾಜ್ಞೆ ನೀಡಿರುವ ಬೆನ್ನಲ್ಲೇ ಅಲೋಕ್ ಕುಮಾರ್ ಅವರ ವಿರುದ್ಧ ಇಲಾಖೆ ವಿಚಾರಣೆ ಸಂಬಂಧ ಸರ್ಕಾರವು ಸಮರ್ಥಿಸಿಕೊಂಡಿರುವ ಅಂಶಗಳು ಮುನ್ನೆಲೆಗೆ ಬಂದಿವೆ.
ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ವಿರುದ್ಧ ದೂರವಾಣಿ ಮಾತುಕತೆ ಧ್ವನಿಮುದ್ರಣ ಸೋರಿಕೆಯ ಪ್ರಕರಣ ಕುರಿತು ಇಲಾಖಾ ತನಿಖೆಗೆ ಸರ್ಕಾರವು ಆದೇಶಿಸಿ ನೋಟೀಸ್ ಜಾರಿಗೊಳಿಸಿತ್ತು. ಈ ನೋಟಿಸ್‌ಗೆ ಕೇಂದ್ರೀಯ ಆಡಳಿತ ನ್ಯಾಯಾಧೀಕರಣ (ಸಿಎಟಿ) ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ತಡೆಯಾಜ್ಞೆಯನ್ನು ತೆರವುಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕಾನೂನು ಇಲಾಖೆಯ ಮೊರೆ ಹೊಕ್ಕಿದೆ. ಈ ಸಂಬಂಧ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಕಾನೂನು ಇಲಾಖೆಯೊಂದಿಗೆ ಸಂಪರ್ಕಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.
ಈ ಸಂಬಂಧ ಕಡತದ (DPAR/79/SPS/ COMPUTER NUMBER 1759769) ಕೆಲವು ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಸದ್ಯ ಈ ಕಡತವು 2025ರ ಮೇ 21ರಿಂದ ಇಲಾಖೆಯ ಅಧೀನ ಕಾರ್ಯದರ್ಶಿ ನಾಗಪ್ಪ ಎಸ್ ಪರೀಟ್ ಅವರ ಲಾಗಿನ್‌ನಲ್ಲಿರುವುದು ಗೊತ್ತಾಗಿದೆ.
ತಮ್ಮ ವಿರುದ್ಧ ಇಲಾಖೆ ವಿಚಾರಣೆಯನ್ನು ಪ್ರಾರಂಭಿಸಬಾರದು ಎಂದು ಅಲೋಕ್ ಕುಮಾರ್ ಅವರು ರಕ್ಷಣೆ ಪಡೆದಿರುವ ಸುಪ್ರೀಂ ಕೋರ್ಟ್ ತೀರ್ಪನ್ನೂ ಸಹ ಡಿಪಿಎಆರ್ ಪುನರ್ ಅವಲೋಕಿಸಿದೆ. ಕ್ರಿಮಿನಲ್ ಮತ್ತು ಇಲಾಖೆ ವಿಚಾರಣೆಗಳು ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ನಡೆಸಬಾರದು ಎಂದು ತಿಳಿಸಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ಈ ಅಂಶಗಳನ್ನು ಮುಂದೊಡ್ಡಿದೆ.
2019ನೇ ಸಾಲಿನಲ್ಲಿ ಟೆಲಿಫೋನ್ ಕದ್ದಾಲಿಕೆ ಮತ್ತು ಕದ್ದಾಲಿಸಿದ ಧ್ವನಿ ಸುರುಳಿಯೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಟೆಲಿಫೋನ್ ಕದ್ದಾಲಿಕೆ ಮತ್ತು ಸೋರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅಪರಾಧ ಸಂಖ್ಯೆ; 6963/2019) ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ಸಿಬಿಐಗೆ (ಕಡತ ಸಂಖ್ಯೆ; HD 33 COD 2019, ದಿನಾಂಕ 19.08.2019) ವಹಿಸಲಾಗಿತ್ತು.
ಈ ಪ್ರಕರಣವನ್ನು ಸಿಬಿಐ ಸಂಸ್ಥೆಯು 2019ರ ಆಗಸ್ಟ್ 30ರಂದು ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಆದರೆ ಎಫ್‌ಐಆರ್‍ನಲ್ಲಿ ಯಾವುದೇ ನಿರ್ದಿಷ್ಟ ಆರೋಪಿತರ ಹೆಸರನ್ನು ನಮೂದಿಸಿರಲಿಲ್ಲ. ಸಿಬಿಐ ಸಂಸ್ಥೆಯು ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ಶಿಫಾರಸ್ಸು ಮಾಡಿತ್ತು.
ಸಿಬಿಐ ಶಿಫಾರಸ್ಸಲ್ಲೇನಿತ್ತು?
ಈ ಪ್ರಕರಣದಲ್ಲಿನ ಆರೋಪಗಳನ್ನು ಖಚಿತವಾಗಿ ಸಾಬೀತುಪಡಿಸಲು ಯಾವುದೇ ನೇರ ಪುರಾವೆಗಳಿಲ್ಲ. ಧ್ವನಿ ಸುರುಳಿಯನ್ನು ಯಾರು ಸೋರಿಕೆ ಮಾಡಿದ್ದಾರೆ ಮತ್ತು ಎಸ್ ಕುಶಾಲ ಅವರು ಪ್ರತಿಬಂಧಿಸಿದ ಧ್ವನಿ ಸುರುಳಿಯನ್ನು ಪಡೆದಿದ್ದಾರೆ ಎಂಬ ಬಗ್ಗೆಯೂ ದಾಖಲೆಗಳಿಲ್ಲ. ಸಾಕಷ್ಟು ನಿರ್ದಿಷ್ಟ ಪುರಾವೆಗಳಿಲ್ಲ. ಎಫ್‌ಐಆರ್‍ನಲ್ಲಿ ಮಾಡಿರುವ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಯಾವುದೇ ಸಾಕ್ಷ್ಯಗಳೂ ಇಲ್ಲ. ಆದ್ದರಿಂದ ಈ ಸಂಬಂಧ ಅಂತಿಮ ವರದಿ/ಮುಕ್ತಾಯ ವರದಿಯನ್ನು ಸ್ವೀಕರಿಸಬೇಕು ಎಂದು ಸಿಬಿಐ ಸಂಸ್ಥೆಯು ನ್ಯಾಯಾಲಯವನ್ನು ಕೋರಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಇದೇ ಅಂಶವನ್ನು ಅಲೋಕ್ ಕುಮಾರ್ ಅವರ ಪರ ವಕೀಲರು ಸಹ ಪುನರುಚ್ಛರಿಸಿದ್ದರು. ‘ಇದೇ ಪ್ರಕರಣ ಸಂಬಂಧ ಈ ಹಿಂದೆ ಅರ್ಜಿದಾರರ ವಿರುದ್ಧ ಆರೋಪ ಮಾಡಲಾಗಿತ್ತು. ಈ ಹಿಂದೆ ಸಿಬಿಐ ತನಿಖಾಧಿಕಾರಿಗಳು ಇದೇ ಪ್ರಕರಣವನ್ನು ಮುಕ್ತಾಯಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸದ್ಯ ಅಲೋಕ್ ಕುಮಾರ್‌ಗೆ ಮುಂಬಡ್ತಿ ನೀಡುವುದನ್ನು ತಡೆಹಿಡಿಯುವ ಉದ್ದೇಶದಿಂದ ಹಳೆಯ ಆರೋಪಗಳ ಮೇಲೆ ಮತ್ತೆ ಇಲಾಖಾ ತನಿಖೆಗೆ ಸರಕಾರ ಆದೇಶಿಸಿದೆ,’ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಹಾಗೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯು ಮತ್ತೊಬ್ಬ ಐಪಿಎಸ್ ಅಧಿಕಾರಿಯಾದ ಭಾಸ್ಕರರಾವ್ (ಈಗ ನಿವೃತ್ತರು) ಮತ್ತು ಅಲೋಕ್ ಕುಮಾರ್ ಅವರ ವಿರುದ್ಧ ಇಲಾಖೆ ವಿಚಾರಣೆಗೆ ಶಿಫಾರಸ್ಸು ಮಾಡಿತ್ತು. ಈ ಇಬ್ಬರು ಅಧಿಕಾರಿಗಳ ವಿರುದ್ಧದ ಇಲಾಖೆ ವಿಚಾರಣೆಯು ಪ್ರಾರಂಭಿಸದೇ ಪ್ರಾಥಮಿಕ ಹಂತದಲ್ಲಿಯೇ ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಮುಕ್ತಾಯಗೊಳಿಸಲಾಗಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.
ಭಾಸ್ಕರರಾವ್ ಅವರ ವಿರುದ್ಧ ಪ್ರಸ್ತಾಪಿತ ಇಲಾಖೆ ವಿಚಾರಣೆ ಮುಕ್ತಾಯಗೊಂಡ ಬಳಿಕ ಈ ಅಧಿಕಾರಿಯವರ ಸ್ವಯಂ ನಿವೃತ್ತಿ ಮನವಿಯನ್ನು ಅಂಗೀಕರಿಸಲಾಗಿದೆ. ಅವರನ್ನು 2022ರ ಏಪ್ರಿಲ್ 2ರಂದು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಅಲೋಕ್ ಕುಮಾರ್ ಅವರ ವಿರುದ್ಧದ ಪ್ರಸ್ತಾಪಿತ ಇಲಾಖೆ ವಿಚಾರಣೆಗೆ ಸಂಬಂಧಿಸಿದ ಕಡತಗಳು ಮುಖ್ಯಮಂತ್ರಿಯವರ ಕಚೇರಿಯಲ್ಲಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಅಲೋಕ್ ಕುಮಾರ್ ಅವರು 2025 ರ ಮೇ 7ರಂದು ಮನವಿ ಸಲ್ಲಿಸಿದ್ದರು. ತಮ್ಮ ವಿರುದ್ಧ ಟೆಲಿಫೋನ್ ಧ್ವನಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆಯನ್ನು ಪ್ರಾರಂಭಿಸಬಾರದು ಎಂದು ಮನವಿಯಲ್ಲಿ ಕೋರಿದ್ದರು.
ಈ ಮಧ್ಯೆ ಸಿಬಿಐ ಸಂಸ್ಥೆಯು ಅಲೋಕ್ ಕುಮಾರ್ ಅವರ ವಿರುದ್ಧ ಇಲಾಖೆ ವಿಚಾರಣೆಯನ್ನು ಪ್ರಾರಂಭಿಸಬೇಕು ಎಂದು ಶಿಫಾರಸ್ಸು ಮಾಡಿತ್ತು.
ಈ ಮನವಿ ಸಲ್ಲಿಕೆಯಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ 2025ರ ಮೇ 12ರಂದು ಅಲೋಕ್ ಕುಮಾರ್ ಗೆ ಕಾರಣ ಕೇಳುವ ನೋಟೀಸ್ ಮತ್ತು ದೋಷಾರೋಪಣೆಯನ್ನು (1ರಿಂದ 4) ಜಾರಿಯಾಗಿತ್ತು ಎಂಬ ಸಂಗತಿಯು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಸರ್ಕಾರದ ಈ ಕ್ರಮಕ್ಕೆ ಅಲೋಕ್ ಕುಮಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೇ ಇಲಾಖೆ ವಿಚಾರಣೆ ಕೈಗೊಳ್ಳುವುದರಿಂದ ಸರ್ವೋಚ್ಛ ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗಲಿದೆ ಎಂದೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಮನವಿಯಲ್ಲೇನಿದೆ?
ಸರ್ವೋಚ್ಛ ನ್ಯಾಯಾಲಯದ (ಸಿವಿಲ್ ಅಪೀಲ್ ನಂ; 5497/2025 ಮಹಾರಾಣ ಪ್ರತಾಪ್ ಸಿಂಗ್ ವಿರುದ್ಧ ಬಿಹಾರ ರಾಜ್ಯ ಸರ್ಕಾರ ಮತ್ತಿತರರು ಪ್ರಕರಣ ದಿನಾಂಕ 23.04.2025) ರಲ್ಲಿನ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಒಂದೇ ಆರೋಪಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣದಲ್ಲಿ ನಿರ್ದೋಷಿ ಎಂದು ಪರಿಗಣಿಸಿದ ನಂತರ ಅದೇ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ ನಡೆಸುವುದು ಸುಪ್ರೀಂ ಕೋರ್ಟ್‌ನ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದರು.
ಅಲೋಕ್‌ಕುಮಾರ್ ಅವರು ಮನವಿಯಲ್ಲಿನ ಅಂಶಗಳನ್ನು ಡಿಪಿಎಆರ್ ಒಪ್ಪಿರಲಿಲ್ಲ.
ಡಿಪಿಎಆರ್ ಅಭಿಪ್ರಾಯವೇನು?
ಅಧಿಕಾರಿಯವರು ಒದಗಿಸಿರುವ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪರಿಶೀಲಿಸಲಾಗಿದೆ. ಸದರಿ ಪ್ರಕರಣದ ವಾಸ್ತವಿಕ ಸಂಗತಿಗಳು ಮತ್ತು ಸಂದರ್ಭಗಳು ಬೇರೆ ಬೇರೆಯಾಗಿವೆ. ಅಧಿಕಾರಿಯವರು ತಿಳಿಸಿರುವ (ಸಿವಿಲ್ ಅಪೀಲ್ ನಂ; 5497/2025 ಮಹಾರಾಣ ಪ್ರತಾಪ್ ಸಿಂಗ್ ವಿರುದ್ಧ ಬಿಹಾರ ರಾಜ್ಯ ಸರ್ಕಾರ ಮತ್ತಿತರರು ಪ್ರಕರಣ ದಿನಾಂಕ 23.04.2025) ಪ್ರಕರಣದಲ್ಲಿ ಆರೋಪಿತ ನೌಕರನ ವಿರುದ್ಧ ಇಲಾಖೆ ವಿಚಾರಣೆ ಮತ್ತು ಕ್ರಿಮಿನಲ್ ಪ್ರಕರಣಗಳು ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ನಡೆಸಲಾಗಿರುತ್ತದೆ.
ಇಲಾಖೆ ವಿಚಾರಣೆ ಮತ್ತು ಕ್ರಿಮಿನಲ್ ಪ್ರಕರಣ ಎರಡರಲ್ಲಿಯೂ ನೌಕರನ ವಿರುದ್ಧದ ಆರೋಪಗಳು ಸಾಬೀತಾಗಿರುತ್ತದೆ. ಆದರೆ ಕ್ರಿಮಿನಲ್ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಲಾದ ಮನವಿಯಲ್ಲಿ ನೌಕರನನ್ನು ಆರೋಪದಿಂದ ಮುಕ್ತಗೊಳಿಸಲಾಗಿರುತ್ತದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಇಲಾಖೆ ವಿಚಾರಣೆಯಲ್ಲಿ ಆರೋಪಗಳು ಸಾಬೀತಾದ ನಂತರ ನೌಕರನನ್ನು ಸೇವೆಯಿಂದ ವಜಾಗೊಳಿಸಲಾಗಿರುತ್ತದೆ. ಈ ಆದೇಶದ ಮೇಲೆ ಸದರಿ ನೌಕರನು ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿಯು ಸಲ್ಲಿಸಿದ್ದರು. ಉಚ್ಛ ನ್ಯಾಯಾಲಯವು ಮೇಲ್ಮನವಿಗಳನ್ನು ಮಾನ್ಯ ಮಾಡಿರುವುದಿಲ್ಲ. ನಂತರ ನೌಕರನು ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯಲ್ಲಿ ಇಲಾಖಾ ವಿಚಾರಣೆ ಸಂದರ್ಭದಲ್ಲಿ ಆರೋಪಿತನ ನೌಕರನಿಗೆ ಸಾಕ್ಷಿದಾರನನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡಲು ಸಮಯಾವಕಾಶ ನೀಡದೇ ಇರುವುದನ್ನು ಮುಖ್ಯವಾಗಿ ಪರಿಗಣಿಸಿತ್ತು. ಹೀಗಾಗಿ ಇಲಾಖೆ ವಿಚಾರಣೆಯನ್ನು ದೋಷಪೂರಿತ ಎಂದು ಪರಿಗಣಿಸಿ ದಂಡನೆಯನ್ನು ರದ್ದುಗೊಳಿಸಿದೆ. ಈ ಆದೇಶದಲ್ಲಿ ಸರ್ವೋಚ್ಛ ನ್ಯಾಯಾಲಯವು ಎಲ್ಲಿಯೂ ಸಹ ಕ್ರಿಮಿನಲ್ ಮತ್ತು ಇಲಾಖೆ ವಿಚಾರಣೆಗಳು ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ನಡೆಸಬಾರದು ಎಂದು ತಿಳಿಸಿಲ್ಲ ಎಂದು ಡಿಪಿಎಆರ್ ಪ್ರತಿವಾದವನ್ನು ಮುಂದೊಡ್ಡಿರುವುದು ತಿಳಿದು ಬಂದಿದೆ.
‘ಆದರೆ ಒಂದೇ ಆರೋಪದ ಬಗ್ಗೆ ಕ್ರಿಮಿನಲ್ ಪ್ರಕರಣ ಮತ್ತು ಇಲಾಖೆ ವಿಚಾರಣೆಯನ್ನು ಎರಡನ್ನು ಒಟ್ಟಾಗಿ ನಡೆಸಬಹುದು. ಕ್ರಿಮಿನಲ್ ಪ್ರಕರಣದಲ್ಲಿ ಯಾವುದೇ ಅಂತಿಮ ಆದೇಶವಾದರೂ ಸಹ ಇಲಾಖೆ ವಿಚಾರಣೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಕ್ರಿಮಿನಲ್ ಪ್ರಕರಣದಲ್ಲಿ ಆರೋಪಗಳು ನಿಸ್ಸಂದೇಹವಾಗಿ ಸಾಬೀತಾಗಿರಬೇಕು. ಆದರೆ ಇಲಾಖೆ ವಿಚಾರಣೆಯನ್ನು ಆರೋಪಗಳು ನಿಸ್ಸಂದೇಹವಾಗಿ ಸಾಬೀತುಪಡಿಸುವುದು ಅವಶ್ಯವಿರುವುದಿಲ್ಲ. ಕೇವಲ ಈಗ ಸಂಭವಿಸಿರಬಹುದೆಂಬ ಸಾಧ್ಯತೆ ಕಂಡು ಬಂದರೂ ಸಹ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯದ ಆದೇಶವನ್ನು ಕಡತದ ಪುಟ ಸಂಖ್ಯೆ 182ನ್ನು ಒದಗಿಸಿರುವುದು ಗೊತ್ತಾಗಿದೆ.
ಅಲ್ಲದೇ ಅಜಿತ್ ಕುಮಾರ್ ನಾಗ್ ಪ್ರಕರಣವನ್ನೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮುಂದಿರಿಸಿದೆ.
ಅಜಿತ್ ಕುಮಾರ್ ನಾಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಅರ್ಜಿದಾರರ ಪರ ವಕೀಲರು ಒತ್ತಾಯಿಸಿದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಕ್ರಿಮಿನಲ್ ಪ್ರಕರಣದಲ್ಲಿ ಅರ್ಜಿದಾರರನ್ನು ಖುಲಾಸೆಗೊಳಿಸುವುದರಿಂದ ಸೇವಾ ನಿಯಮಗಳ ಪ್ರಕಾರ ಶಿಸ್ತಿನ ನ್ಯಾಯವ್ಯಾಪ್ತಿಯ ಅಡಿಯಲ್ಲಿ ಉದ್ಭವಿಸುವ ಹೊಣೆಗಾರಿಕೆಯಿಂದ ಅವರನ್ನು ಮುಕ್ತಗೊಳಿಸಲಾಗುತ್ತದೆ ಎಂದು ತೀರ್ಪು ನೀಡಿದೆ ಎಂದು ವಿವರಿಸಿದೆ.
‘ನಮ್ಮ ಅಭಿಪ್ರಾಯದಲ್ಲಿ, ಅರ್ಜಿದಾರರು ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಂಡಿರುವುದರಿಂದ, ಕ್ರಿಮಿನಲ್ ಪ್ರಕರಣದಲ್ಲಿ ಅವರ ವಿರುದ್ಧ ಹೊರಿಸಲಾದ ಅದೇ ಆರೋಪದ ಮೇಲೆ ಶಿಸ್ತು ಪ್ರಾಧಿಕಾರವು ಅವರ ವಿರುದ್ಧ ಶಿಸ್ತು ವಿಚಾರಣೆ ನಡೆಸುವುದನ್ನು ತಡೆಯುವುದಿಲ್ಲ. ಆದ್ದರಿಂದ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ,’ ಎಂದು ಸುಪ್ರೀಂ ಕೋರ್ಟ್‌ನ ಆದೇಶವನ್ನು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ನೋಟಿಸ್ ರದ್ದು ಕೋರಿ ಎಡಿಜಿಪಿ ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ಕೆ. ಶ್ರೀವಾತ್ಸವ ಅವರಿದ್ದ ಪೀಠವು ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿತ್ತು.
ಉಮೇಶ್ ಕುಮಾರ್ ಮತ್ತು ಅರುಣ್ ಚಕ್ರವರ್ತಿ ಅವರಿಗೆ ಡಿಜಿಪಿ ಹುದ್ದೆಗೆ ಪದನ್ನೋತಿ ನೀಡಿ ರಾಜ್ಯ ಸರ್ಕಾರವು 2025ರ ಸೆ.12ರಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ರದ್ದುಪಡಿಸಬೇಕು ಎಂದು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್ ಸುಜಾತ ಮತ್ತು ಡಾ ಸಂಜೀವ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು, ಸೆಪ್ಟಂಬರ್ 12ರಂದು ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಪ್ರಕರಣವನ್ನು ಸೆ.23ಕ್ಕೆ ಮುಂದೂಡಿದೆ.