ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ನಡೆದ ಲೋಕಾಯುಕ್ತ ದಾಳಿಗೆ ಒಳಪಟ್ಟ ಒಬ್ಬರೇ ಒಬ್ಬ ಅಧಿಕಾರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ ಎಂಬ ಸುದ್ದಿ ಚರ್ಚೆಯಲ್ಲಿರುವಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದೇ ಅವಧಿಯಲ್ಲಿ ಆರು ಮಂದಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು, ಮೂವರು ಅಧಿಕಾರಿಗಳು ಮಾತ್ರ ಅಮಾನತುಗೊಂಡಿರುವುದು ಬೆಳಕಿಗೆ ಬಂದಿದೆ.
ಉಳಿದ ಮೂವರಲ್ಲಿ ಒಬ್ಬರ ವಿರುದ್ಧ ವಿಚಾರಣೆ ನಡೆಸಲು ಸರ್ಕಾರ ಒಪ್ಪಿಗೆ ನೀಡಿದೆ. ಇನ್ನೊಬ್ಬ ಅಧಿಕಾರಿಯ ವಿರುದ್ಧ ವಿಚಾರಣೆಗೆ ಮಂಜೂರಾತಿ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಮತ್ತೊಬ್ಬ ಅಧಿಕಾರಿಯ ಲೀನ್‌ನ್ನು (ಹುದ್ದೆಯ ಹಕ್ಕನ್ನು ಸ್ಥಳಾಂತರಿಸಿರುವುದು) ಬದಲಾಯಿಸುವಂತೆ ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಪರಿಶೀಲನೆಯಲ್ಲಿದೆ.
ಈ ವಿಷಯವನ್ನು ವಿಧಾನ ಪರಿಷತ್ತಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು ಈ ಅಧಿಕಾರಿಗಳ ಮೇಲೆ ಬಲ್ಲಮೂಲಗಳಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯವರು ಈ ದಾಳಿ ನಡೆಸಿದ್ದರು ಎಂದು ತಿಳಿಸಿದ್ದಾರೆ.
2023ರಲ್ಲಿ ಕಲಬುರಗಿಯಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದ ಸುರೇಶ್ ಮೇದಾ ಅವರ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು,3.72 ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿದ್ದರು. ಇವರು ನಿಯೋಜನೆ ಮೇರೆಗೆ ಬೀದರ್‌ನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬೀದರ್ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸೇವೆಯಿಂದ ( ಸರ್ಕಾರದ ಆದೇಶ ಸಂಖ್ಯೆ: ಲೋಇ 212 ಸೇಇವಿ 2023) ಅಮಾನತುಗೊಳಿಸಲಾಗಿದೆ ಎಂಬುದು ಈ ಉತ್ತರದಿಂದ ತಿಳಿದು ಬಂದಿದೆ.
2023ರರಲ್ಲಿಯೇ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥರೆಡ್ಡಿ ಅವರ ಮನೆಯ ಮೇಲೂ ದಾಳಿ ನಡೆಸಲಾಗಿತ್ತು. 1.81 ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಲಾಗಿತ್ತು. ಇವರು ನಿಯೋಜನೆ ಮೇಲೆ ರಾಯಚೂರಿನ ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಯಾದಗಿರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಇವರನ್ನು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದನ್ನು/ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಲಾಗಿದೆ ಎಂಬುದು ಸಚಿವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.
2023ರಲ್ಲಿಯೇ ರಾಯಚೂರಿನಲ್ಲಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿ.ಎನ್.ಪ್ರಕಾಶ್ ಅವರ ಮನೆಯ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 2.75 ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಯ ವಿವರ ಲಭ್ಯವಾಗಿತ್ತು.ರಾಯಚೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ/ತನಿಖೆಯನ್ನು ಬಾಕಿ ಇರಿಸಿ,ಇವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಎಎ) ರನ್ವಯ ಸರ್ಕಾರಿ ಸೇವೆಯಿಂದ ಅಮಾನತ್ತು ಗೊಳಿಸಿ ಆದೇಶಿಸಲಾಗಿದೆ ಎಂಬುದು ವಿಧಾನ ಪರಿಷತ್ತಿಗೆ ನೀಡಿರುವ ಈ ಉತ್ತರಿಂದ ತಿಳಿದು ಬಂದಿದೆ.
ಬಳ್ಳಾರಿಯಲ್ಲಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಅಮೀನ ಮುಕ್ತಾ ಅಹ್ಮದ್ ಅವರ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, 3.24 ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದ್ದರು. ಇಲ್ಲಿಯವರೆಗೂ ನಡೆಸಿದ ತನಿಖೆಯಿಂದ ಅಕ್ರಮ ಆಸ್ತಿ ಸಂಪಾದನೆಯು ಶೇ.272.59ರಷ್ಟು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಅಮೀನ ಮುಕ್ತಾ ಅಹ್ಮದ್ ಲೀನನ್ನು ಬದಲಾಯಿಸುವಂತೆ ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆ ಸ್ವೀಕೃತವಾಗಿದ್ದು, ಪರಿಶೀಲನೆಯಲ್ಲಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
2018 ರಲ್ಲಿ ಮೂಲತಃ ಲೋಕೋಪಯೋಗಿ ಇಲಾಖೆ ಅಧಿಕಾರಿಯಾಗಿ ಪಿ.ವಿಜಯಕುಮಾರ್ ಕೊಪ್ಪಳ ಜಿಲ್ಲೆ ಗಂಗಾವತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಕರ್ತವ್ಯ ನಿರ್ವಹಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 99.80 ಲಕ್ಷ ರು. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಲಾಗಿತ್ತು. ಕೊಪ್ಪಳ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಇವರ ವಿರುದ್ಧ ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆಗೊಳಪಡಿಸಲು ಸರ್ಕಾರ ಅನುಮತಿ ನೀಡಿ ( ಆದೇಶ ಸಂಖ್ಯೆ: ಲೋಇ 08 ಸೇವಿಇ 2022) ಆದೇಶ ಹೊರಡಿಸಿದೆ ಎಂಬುದು ಈ ಉತ್ತರದಿಂದ ಗೊತ್ತಾಗಿದೆ.
ಬೀದರ್‌ನ ಬಸವ ಕಲ್ಯಾಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಮೋರೆ ಅವರ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, 71.44 ಲಕ್ಷ ಮೌಲ್ಯರ ಅಕ್ರಮ ಆಸ್ತಿ ಪತ್ತೆಹಚ್ಚಲಾಗಿತ್ತು. ಇವರ ವಿರುದ್ಧ ಅಭಿಯೋಜನೆ ಮಂಜೂರಾತಿ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸಚಿವರು ತಾವು ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ನಡೆದ ಲೋಕಾಯುಕ್ತ ದಾಳಿಗೆ ಒಳಪಟ್ಟ ಒಬ್ಬರೇ ಒಬ್ಬ ಅಧಿಕಾರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ ಎಂದು ಎರಡು ದಿನಗಳ ಹಿಂದೆಯಷ್ಟೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸಭೆಗೆ ತಿಳಿಸಿದ್ದರು.
ಈ ಕುರಿತು ʻದಿ ಪೈಲ್ʼ ವಿವರವಾದ ವರದಿ ಪ್ರಕಟಿಸಿತ್ತು.
ಮೂರು ವರ್ಷಗಳಲ್ಲಿ 222 ಲೋಕಾಯುಕ್ತ ದಾಳಿ; ಒಬ್ಬರೇ ಒಬ್ಬ ಅಧಿಕಾರಿಗೂ ಶಿಕ್ಷೆ ಇಲ್ಲ
ಶಾಸಕ ಹರೀಶ್ ಗೌಡ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಗಳು ಕಳೆದ ಮೂರು ವರ್ಷಗಳಲ್ಲಿ ಒಟ್ಟು 222 ಲೋಕಾಯುಕ್ತ ದಾಳಿ ನಡೆದಿವೆ ಎಂದು ತಿಳಿಸಿದ್ದರು. ಈ 222 ಪ್ರಕರಣಗಳಲ್ಲಿ 85 ಪ್ರಕರಣಗಳಲ್ಲಿನ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ. ಕೆಲ ಪ್ರಕರಣಗಳಲ್ಲಿ ಅಮಾನತ್ತಿನ ಆದೇಶಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು, ಈ ಪ್ರಕರಣಗಳ ಅಧಿಕಾರಿ ಅಥವಾ ನೌಕರರು ಮಾತ್ರ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ ಎಂದು ಈ ಉತ್ತರದಲ್ಲಿ ತಿಳಿಸಲಾಗಿತ್ತು.
ಈ 222 ಪ್ರಕರಣಗಳಲ್ಲಿ, ಲೋಕೋಪಯೋಗಿ ಇಲಾಖೆಯ 11, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ-3, ಕಂದಾಯ ಇಲಾಖೆಯ 20, ನಗರಾಭಿವೃದ್ಧಿ ಇಲಾಖೆಯ 39, ಇಂಧನ ಇಲಾಖೆಯ 17, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 7, ಆರ್ಥಿಕ ಇಲಾಖೆಯ 10, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 36, ಶಿಕ್ಷಣ ಇಲಾಖೆಯ 2, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ 11, ಜಲಸಂಪನ್ಮೂಲ ಇಲಾಖೆಯ 7, ಸಾರಿಗೆ ಇಲಾಖೆಯ 4, ಗೃಹ ಇಲಾಖೆಯ 4,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ 2,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ 3 ಅಧಿಕಾರಿಗಳ ಮೇಲೆ ದಾಳಿಯಾಗಿತ್ತು ಎಂದು ಮುಖ್ಯಮಂತ್ರಿಗಳು ನೀಡಿದ ಉತ್ತರದಲ್ಲಿ ತಿಳಿಸಲಾಗಿತ್ತು.