ವೈದ್ಯಕೀಯ ತ್ಯಾಜ್ಯ; 147.56 ಕೋಟಿ ಪರಿಸರ ಪರಿಹಾರ ಸಂಗ್ರಹಿಸುವ ಅವಕಾಶ ಕೈಚೆಲ್ಲಿದ ಮಾಲಿನ್ಯ ಮಂಡಳಿ

kspcb's inadequate action on biomedical waste management

ಬೆಂಗಳೂರು : ಜೈವಿಕ-ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಸಂಬಂಧಿಸಿದಂತೆ ತಾನು ನೀಡಿದ್ದ ನಿರ್ದೇಶನಗಳನ್ನು ಅನುಸರಿಸದ ಆಸ್ಪತ್ರೆ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ 147.56 ಕೋಟಿ ರು. ಪರಿಸರ ಪರಿಹಾರ (environment compensation) ಸಂಗ್ರಹಿಸುವ ಅವಕಾಶವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೈಚೆಲ್ಲಿದೆ.

 

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ನೀಡಿದ ನಿರ್ದೇಶನಗಳ ಪ್ರಕಾರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2019ರಲ್ಲಿ ಸರಿಯಾದ ಕ್ರಮ ಅನುಸರಿಸದ ಆಸ್ಪತ್ರೆ ಮತ್ತು ಜೈವಿಕ-ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ‘ಪರಿಸರ ಪರಿಹಾರ’ ವಿಧಿಸುವ ಕುರಿತು ಮಾರ್ಗಸೂಚಿಯನ್ನು ಹೊರಡಿಸಿತ್ತು.

 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 2019ರ ಜುಲೈನಲ್ಲಿ ಸುತ್ತೋಲೆ ಹೊರಡಿಸಿ, ಈ ಮಾರ್ಗಸೂಚಿಯನ್ನು ರಾಜ್ಯದಲ್ಲಿಯೂ ಅನ್ವಯಿಸಲಾಗುವುದು ಎಂದು ತಿಳಿಸಿತ್ತು. ಆದರೆ ಈ ನಿರ್ದೇಶನಗಳನ್ನು ಅನುಸರಿಸದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ ಪರಿಸರ ಪರಹಾರ ಸಂಗ್ರಹಿಸುವಲ್ಲಿಯೂ ವಿಫಲವಾಗಿದೆ.

 

ಈ ವಿಷಯವನ್ನು ಮಹಾಲೇಖಪಾಲರು (ಸಿಎಜಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಪತ್ತೆ ಹಚ್ಚಿದ್ದಾರೆ.  ಈ ಸಿಎಜಿ ವರದಿಯನ್ನು ಇತ್ತೀಚೆಗೆ ನಡೆದ ವಿಧಾನ ಸಭೆಯ ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ.

 

kspcb's inadequate action on biomedical waste management

 

ʻಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳು-2016ʼ ಪ್ರಕಾರ ಎಲ್ಲ ಆಸ್ಪತ್ರೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಅಲ್ಲದೆ, ಜೈವಿಕ ವೈದ್ಯಕೀಯ ತ್ಯಾಜ್ಯವನ್ನು  ಜೈವಿಕ-ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳ ಮೂಲಕವೇ ವಿಲೇವಾರಿ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಸಂಸ್ಕರಣಾ ಘಟಕಗಳೊಂದಿಗೆ ಆಸ್ಪತ್ರೆಗಳು ಒಪ್ಪಂದವನ್ನು ಅಥವಾ ತಿಳುವಳಿಕೆ ಪತ್ರವನ್ನು ಹೊಂದಿರುವುದು ಕೂಡ ಕಡ್ಡಾಯವಾಗಿರುತ್ತದೆ.

 

ಈ ನಿಯಮಾವಳಿಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಹೇಗೆ ಸಂಗ್ರಹಿಸಬೇಕು, ಸಾಗಣೆ ಮಾಡಬೇಕು ಎಂಬುದರ ಕುರಿತು ವಿವರವಾಗಿ ಮಾರ್ಗದರ್ಶಿ ಸೂಚಿಗಳಿವೆ. ಇದನ್ನು ಪಾಲಿಸದೇ ಇದ್ದವರಿಂದ ಪರಿಸರ ಪರಿಹಾರವನ್ನು ಸಂಗ್ರಹಿಸಲು ಅವಕಾಶ ಕೂಡ ನೀಡಲಾಗಿದೆ.

 

ಮಂಡಳಿಯ ಆಯ್ದ 13 ಪ್ರಾದೇಶಿಕ ಕಚೇರಿಗಳು ಸಲ್ಲಿಸಿದ ವಾರ್ಷಿಕ ವರದಿಗಳ ಪ್ರಕಾರ, 15,802 ಆಸ್ಪತ್ರೆಗಳಲ್ಲಿ 1,180 ಆಸ್ಪತ್ರೆಗಳು (ಆರೋಗ್ಯ ರಕ್ಷಣಾ ಸೌಲಭ್ಯಗಳು) ಮಂಡಳಿಯಿಂದ ಮಾನ್ಯವಾದ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಆದರೆ,  ಇವುಗಳ ವಿರುದ್ಧ ಮಂಡಳಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೆ, 51.68 ಕೋಟಿ ರು. ಪರಿಸರ ಪರಿಹಾರವನ್ನೂ ವಿಧಿಸಲಾಗಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

kspcb's inadequate action on biomedical waste management

 

ಈ ಕುರಿತು ಸಿಎಜಿಯು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನ ಸೆಳೆದಾಗ, 506 ಆಸ್ಪತ್ರೆಗಳ ಮಾನ್ಯವಾದ ಅನುಮತಿಯನ್ನು ನವೀಕರಿಸಲಾಗಿದೆ ಇಲ್ಲವೇ, ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿವೆ ಮತ್ತು ಉಳಿದ 674 ಆಸ್ಪತ್ರೆಗಳಿಗೆ ನೋಟಿಸ್‌ಗಳನ್ನು ನೀಡಲಾಗುತ್ತಿದೆ ಎಂದು ಹೇಳಿತ್ತು. ಜೊತೆಗೆ, 875 ಆಸ್ಪತ್ರೆಗಳು ವಾರ್ಷಿಕ ವರದಿಗಳನ್ನು ಸಲ್ಲಿಸಿವೆ ಎಂದು ಸಿಎಜಿಗೆ ತಿಳಿಸಿತ್ತು. ಆದರೆ ಆಸ್ಪತ್ರೆಗಳ ಪಟ್ಟಿಯನ್ನು ಒದಗಿಸಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.

 

ಮಂಡಳಿಯ ಆರು ಪ್ರಾದೇಶಿಕ ಕಚೇರಿಗಳಲ್ಲಿ 2,189 ಆಸ್ಪತ್ರೆಗಳು ಸ್ಥಳೀಯ ಜೈವಿಕ-ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ಸಿಎಜಿಯು ಪರಿಶೀಲನೆಯ ಸಂದರ್ಭದಲ್ಲಿ ಗಮನಿಸಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 95.88 ಕೋಟಿ ರು. ಪರಿಸರ ಪರಿಹಾರವನ್ನು ಮಂಡಳಿಯು ವಿಧಿಸಬೇಕಿತ್ತು ಎಂದು ಸಿಎಜಿ ವರದಿಯು ಬೊಟ್ಟು ಮಾಡಿದೆ.

 

ಕಳೆದ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ನೇಮಕಗೊಂಡಿದ್ದಾರೆ. ಮಂಡಳಿಯಲ್ಲಿ ಕರ್ತವ್ಯಲೋಪ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಡಳಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ನೇತೃತ್ವದ ತಂಡ ಕಳೆದ ಜೂನ್‌ 25 ರಂದು ಮಂಡಳಿಯ ಕೇಂದ್ರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

 

ಯಾದಗಿರಿಯಲ್ಲಿ ಅವ್ಯವಸ್ಥೆ

 

ಯಾದಗಿರಿಯಲ್ಲಿನ ಜೈವಿಕ-ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸಿಎಜಿಯು ಪರಿಶೀಲಿಸಿದೆ.  ಅಲ್ಲಿ ಬಾರ್‌ಕೋಡ್‌ ಮತ್ತು ಜಾಗತಿಕ ಸ್ಥಾನೀಕರಣ ವ್ಯವಸ್ಥೆಯನ್ನು ಅಗತ್ಯವಿರುವಂತೆ ಸ್ಥಾಪಿಸಿರಲಿಲ್ಲ ಮತ್ತು ಅದರ ಪ್ರತಿಯೊಂದು ಸಂಸ್ಕರಣಾ ಸಾಧನಗಳಿಗೆ ಬ್ಯಾಚ್‌ನ ತೂಕ ಮತ್ತು ಸಮಯ, ದಿನಾಂಕ ಮತ್ತು ಸಂಸ್ಕರಣಾ ಚಕ್ರದ ಕಾರ್ಯಾಚರಣೆಯ ಗಂಟೆಗಳ ಅವಧಿಯೊಂದಿಗೆ ಸಂಸ್ಕರಿಸಿದ ತ್ಯಾಜ್ಯದ ವರ್ಗಗಳ ಲೆಕ್ಕಕ್ಕೆ ಅನುಗುಣವಾಗಿ ಲಾಗ್‌ಬುಕ್ ಅನ್ನು ನಿರ್ವಹಿಸಿರಲಿಲ್ಲ ಎಂಬುದನ್ನು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

ಅಲ್ಲದೆ, ಏಪ್ರಿಲ್ 2023 ರಲ್ಲಿ ನಡೆಸಿದ ಪ್ರಾದೇಶೀಕ ಕಚೇರಿಯ ತಪಾಸಣೆಯ ಸಮಯದಲ್ಲಿ, ಸುಡಬೇಕಾದ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ತೆರೆದ ಸ್ಥಳದಲ್ಲಿ ಸುಡುವುದು, ಸ್ಟಾಕ್ ಮಾನಿಟರಿಂಗ್‌ಗೆ ವ್ಯವಸ್ಥೆಯನ್ನು ಒದಗಿಸದಿರುವುದು, ಯೋಗ್ಯವಾಗಿರದ ಉಪಕರಣಗಳ ಬಳಕೆ, ಸುಟ್ಟ ಬೂದಿಯನ್ನು ವಿಲೇವಾರಿ ಮಾಡದಿರುವುದು ಮುಂತಾದ ಗಂಭೀರ ಅನುಸರಣಾಲೋಪಗಳು ಗಮನಕ್ಕೆ ಬಂದಿವೆ ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ.

 

ಆದರೆ, 2023 ರ ಆಗಸ್ಟ್‌ ನಲ್ಲಿ ನಡೆಸಿದ ಕ್ಷೇತ್ರ ಭೇಟಿಯ ವೇಳೆಯೂ ಅದೇ ಸಮಸ್ಯೆಗಳನ್ನು ಗಮನಿಸಿದ್ದರಿಂದ ಸ್ಥಿತಿ ಸುಧಾರಿಸಿಲ್ಲದಿರುವುದು ಕಂಡುಬಂದಿತು. ನಿರ್ವಾಹಕರು ಜೈವಿಕ ವೈದ್ಯಕೀಯ ತ್ಯಾಜ್ಯವನ್ನುಪ್ರತ್ಯೇಕಿಸದೆ ತೆರೆದ ಸ್ಥಳದಲ್ಲಿಟ್ಟಿದ್ದರು. ಈ ಘಟಕವು ನಿಯಮಗಳನ್ನು ಅನುಸರಿಸದಿದ್ದಕ್ಕಾಗಿ 34.69 ಲಕ್ಷ ರು. ಪರಿಸರ ಪರಿಹಾರವನ್ನು ವಿಧಿಸುವ ಅವಕಾಶವಿತ್ತು ಎಂದು ಸಿಎಜಿ ವರದಿಯು ತಿಳಿಸಿದೆ.

 

kspcb's inadequate action on biomedical waste management

 

ಸಿಎಜಿಯು ಈ ಲೋಪವವನ್ನು ಗಮನಿಸಿದ ಮೇಲೆ ಯಾದಗಿರಿಯ ಈ ಘಟಕಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗಾಗಲೇ  ನೋಟಿಸ್‌ ನೀಡಿದೆ. ಅಲ್ಲದೆ, ನಿರ್ವಾಹಕರ ವಿಚಾರಣೆಯನ್ನು ಆದಷ್ಟು ಬೇಗ ನಡೆಸಲಾಗುವುದು ಎಂದು ಮಂಡಳಿಯು ಸಿಎಜಿಗೆ ತಿಳಿಸಿರುವುದು ಈ ವರದಿಯಿಂದ ಗೊತ್ತಾಗಿದೆ.

 

ವೈದ್ಯಕೀಯ ತ್ಯಾಜ್ಯವು ಒಟ್ಟು ತ್ಯಾಜ್ಯದ ಶೇಕಡಾ 2ರಿಂದ 3ರಷ್ಟಿದೆ. ಆದರೆ ಇದು ಅತ್ಯಂತ ಅಪಾಯಕಾರಿ ತ್ಯಾಜ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗತ್ತಿದೆ. ವೈದ್ಯಕೀಯ ತ್ಯಾಜ್ಯವು ಅಪಾಯಕಾರಿ ಸೂಕ್ಷ್ಮಜೀವಿಗಳು, ವಿಷಕಾರಿ ಔಷಧಗಳನ್ನು ಹೊಂದಿರುತ್ತದೆ. ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದ್ದರೂ ಮಂಡಳಿಯು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಹಿಂದೆ-ಮುಂದೆ ನೋಡುತ್ತಿರುವುದು ಸಿಎಜಿ ವರದಿಯಿಂದ ಸ್ಪಷ್ಟವಾಗಿದೆ.

 

ಮಂಡಳಿಯು ಜೈವಿಕ ವೈದ್ಯಕೀಯ ತ್ಯಾಜ್ಯದ ಉತ್ಪಾದನೆ, ವಿಲೇವಾರಿಗೆ ಸಂಬಂಧಿಸಿದ ಹಾಗೆ ಸೂಕ್ತವಾದ ದತ್ತಾಂಶವನ್ನು ಹೊಂದಿಲ್ಲ ಎಂಬುದನ್ನು ಸಿಎಜಿಯು ಆಡಿಟ್‌ ಸಮಯದಲ್ಲಿ ಗಮನಿಸಿದೆ. ರಾಜ್ಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆಯೆಂಬುದನ್ನು ಮಂಡಳಿಯು ಹೇಗೆ ಖಚಿತಪಡಿಸಿಕೊಳ್ಳುತ್ತಿದೆ ಎಂಬುದನ್ನು ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಿದೆ.

 

ʻಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳು-2016ʼರ ನಿಯಮ 13(2) ಅಡಿಯಲ್ಲಿ, ಮಂಡಳಿಯು ಜೈವಿಕ ತ್ಯಾಜ್ಯ ಉತ್ಪಾದಿಸುವ ಮತ್ತು ನಿರ್ವಹಿಸುವವರಿಂದ ವಾರ್ಷಿಕ ವರದಿಗಳನ್ನು ಪಡೆದು, ಪರಿಶೀಲಿಸುವುದು ಮತ್ತು ವಿಶ್ಲೇಷಿಸುವುದು ಅಗತ್ಯ. ಮತ್ತು ಇದನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೂ ಕಳಿಸಿಕೊಡಬೇಕಿರುತ್ತದೆ.

 

 kspcb's inadequate action on biomedical waste management

 

‘ಜೈವಿಕ ವೈದ್ಯಕೀಯ ತ್ಯಾಜ್ಯದ ಉತ್ಪಾದನೆ ಮತ್ತು ಚಿಕಿತ್ಸೆಯ ನಡುವಿನ ಅಂತರವು 2020 ರಲ್ಲಿ ದಿನಕ್ಕೆ 43,653 ಕೆಜಿಗಳಿಂದ 2022 ರಲ್ಲಿ 8,423 ಕೆಜಿಗಳಿಗೆ ಕಡಿಮೆಯಾಗಿದೆ ಎಂದು ಲೆಕ್ಕಪರಿಶೋಧನೆಯ ಪರಿಶೀಲನೆಯು ಬಹಿರಂಗಪಡಿಸಿತು. ಸುಧಾರಿತ ಕ್ರಮಗಳ ಜಾರಿಯಿಂದ ಗಣನೀಯ ಪ್ರಮಾಣದಲ್ಲಿ ತ್ಯಾಜ್ಯ ಕಡಿಮೆಯಾಗಿದೆ ಎಂದು ಹೇಳಬಹುದಾದರೂ, ಬಹಳಷ್ಟು ಪ್ರಮಾಣದ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ ಕಳಿಸದೇ ಇರುವುದರಿಂದ ಈ ತ್ಯಾಜ್ಯವು ಅವೈಜ್ಞಾನಿಕ ವಿಲೇವಾರಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ,’  ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

ರಾಜ್ಯದಲ್ಲಿನ 48,431 ಆಸ್ಪತ್ರೆಗಳಲ್ಲಿ 43,030 ಘಟಕಗಳು 2022ನೇ ವರ್ಷದ ವರದಿಯನ್ನು ಮಂಡಳಿಗೆ ಸಲ್ಲಿಸಿರಲಿಲ್ಲ. ನಿಯಮಗಳ ಪ್ರಕಾರ ವಾರ್ಷಿಕ ವರದಿಯನ್ನು ಬಹುತೇಕ ಆಸ್ಪತ್ರೆಗಳು ಮತ್ತು ಸಂಸ್ಕರಣಾ ಘಟಕಗಳು ಸಲ್ಲಿಸುತ್ತಿಲ್ಲ ಎಂದು ಸಿಎಜಿಯು ವರದಿಯಲ್ಲಿ ಬೊಟ್ಟು ಮಾಡಿದೆ.

 

kspcb's inadequate action on biomedical waste management

 

ಸಿಎಜಿಯ ಆಕ್ಷೇಪಣೆಗಳಿಗೆ ಪ್ರತಿಕ್ರಿಯೆ ನೀಡಿರುವ ಮಂಡಳಿಯು ಎಲ್ಲಾ ಪ್ರಾದೇಶಿಕ ಅಧಿಕಾರಿಗಳಿಗೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸೂಚಿಸಿದ ವಿಧಾನಕ್ಕೆ ಅನುಗುಣವಾಗಿ ಅಂತರ ವಿಶ್ಲೇಷಣೆ ಅಧ್ಯಯನವನ್ನು ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ಹೇಳಿದೆ.

 

ವಾರ್ಷಿಕ ವರದಿಗಳನ್ನು ಸಲ್ಲಿಸದಿರುವುದು ಹೆಚ್ಚಾಗಿ ಹಾಸಿಗೆಯಿಲ್ಲದ ಆಸ್ಪತ್ರೆಗಳು. ಇನ್ನು ಮುಂದೆ ಆನ್‌ಲೈನ್ ಪೋರ್ಟಲ್ ಮತ್ತು XGN ಸಾಫ್ಟ್‌ವೇರ್‌ನಲ್ಲಿ ವಾರ್ಷಿಕ ವರದಿಗಳ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗುವುದು. ಎಲ್ಲಾ ಆಸ್ಪತ್ರೆಗಳಿಂದ ಉತ್ಪಾದನೆ, ಚಿಕಿತ್ಸೆ ಮತ್ತು ವಿಲೇವಾರಿ ಕುರಿತು ಮಾಹಿತಿ ಪಡೆಯಲು ಜೈವಿಕ ವೈದ್ಯಕೀಯ ತ್ಯಾಜ್ಯದ ಸಾಫ್ಟ್‌ವೇರ್ ಅನ್ನು ಮೇಲ್ದರ್ಜೆಗೇರಿಸುವುದಾಗಿ ಮಂಡಳಿಯು ತಿಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಅಪಾಯಕಾರಿ ತ್ಯಾಜ್ಯ ನಿರ್ವಹಣೆ; ರಾಜ್ಯದ ಶೇ.32 ಕಾರ್ಖಾನೆಗಳು ಅಗತ್ಯ ಅನುಮತಿ ಪಡೆದೇ ಇಲ್ಲ

 

ರಾಜ್ಯದಲ್ಲಿ ಅಪಾಯಕಾರಿ ತ್ಯಾಜ್ಯಗಳನ್ನು ನಿರ್ವಹಿಸುತ್ತಿರುವ ಕೈಗಾರಿಕೆಗಳ ಪೈಕಿ ಶೇ. 32 ರಷ್ಟು ಕೈಗಾರಿಕೆಗಳು ಅಗತ್ಯವಾಗಿರುವ ಅನುಮತಿಗಳನ್ನು ಪಡೆದುಕೊಂಡೇ ಇಲ್ಲ. ರಾಜ್ಯದಲ್ಲಿ ಒಟ್ಟು 1,185 ಕೈಗಾರಿಕೆಗಳು ಅಪಾಯಕಾರಿ ತ್ಯಾಜ್ಯಗಳನ್ನು (HW) ನಿರ್ವಹಿಸುತ್ತಿದ್ದು, ಇವುಗಳಲ್ಲಿ 377 ಕೈಗಾರಿಕೆಗಳು ಅಗತ್ಯವಾಗಿರುವ ಅನುಮತಿಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆದುಕೊಂಡಿಲ್ಲ. ಈ ಕುರಿತು ʻದಿ ಫೈಲ್‌ʼ ವರದಿ ಪ್ರಕಟಿಸಿತ್ತು.

 

ನಿಷ್ಕ್ರೀಯವಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ; ಕೈಗಾರಿಕೆಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ ಎಂದ ಸಿಎಜಿ

 

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 2,756 ಕೈಗಾರಿಕೆಗಳ ಪೈಕಿ ಶೇ. 66.29 ರಷ್ಟು ಕೈಗಾರಿಕೆಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಒಪ್ಪಿಗೆಯನ್ನು ಪಡೆದುಕೊಂಡೇ ಇಲ್ಲ. ಹೀಗಾಗಿ ಈ ಕೈಗಾರಿಕೆಗಳು ಸೃಷ್ಟಿಸುತ್ತಿರುವ ಮಾಲಿನ್ಯದ ಪ್ರಮಾಣ ಎಷ್ಟು? ಇವುಗಳಿಂದ ಪರಿಸರದ ಮೇಲೆ ಯಾವೆಲ್ಲಾ ಪರಿಣಾಮಗಳಾಗುತ್ತಿವೆ ಎಂಬ ಮಾಹಿತಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೇ ತಿಳಿದಿಲ್ಲ. ಈ ಕುರಿತೂ ʻದಿ ಫೈಲ್‌ʼ ವಿಶೇಷ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts