ಬೆಂಗಳೂರು; ಒರಿಜಿನಲ್ ಚಾಯ್ಸ್ ಡೀಲಕ್ಸ್ ವಿಸ್ಕಿ, ಬ್ಯಾಗ್ ಪೈಪರ್ ಡೀಲಕ್ಸ್ ವಿಸ್ಕಿ, ಬ್ಲ್ಯಾಕ್ ಪೆಲಿಕನ್ ಮಾಲ್ಟ್ ವಿಸ್ಕಿ, ವಿಂಡ್ಸರ್ ಡೀಲಕ್ಸ್ ವಿಸ್ಕಿ, ರಾಜಾ ವಿಸ್ಕಿ, ನಂ ಹೈವೇ ಡೀಲಕ್ಸ್ ವಿಸ್ಕಿ, ಓಲ್ಡ್ ಮಾಂಕ್ ರಮ್‌ನಲ್ಲಿ ನಿಗದಿತ ಮದ್ಯಸಾರವನ್ನು ಸೇರಿಸದೇ ಉತ್ಪಾದಿಸಿ ಮಾರಾಟ ಮಾಡಲಾಗಿದೆ. ಅಲ್ಲದೇ ಗ್ರಾಹಕರನ್ನು ತಪ್ಪು ಮಾರ್ಗಕ್ಕಿಳಿಸಿರುವುದಲ್ಲದೇ ಗ್ರಾಹಕರ ಹಿತಾಸಕ್ತಿಯನ್ನೂ ರಕ್ಷಿಸಿಲ್ಲ ಎಂಬ ಆಘಾತಕಾರಿ ಮಾಹಿತಿಯನ್ನು ಸಿಎಜಿಯು ಬಹಿರಂಗಗೊಳಿಸಿದೆ.
ಎಫ್‌ಎಸ್‌ಎಸ್‌ನ ನಿಯಮಗಳ ಮೂಲಕ ಮದ್ಯಸಾರಗಳಿಂದ ಆರಂಭಿಸಿ ವೈನ್ ಮತ್ತು ಬಿಯರ್‍ವರೆಗೆ ವಿವಿಧ ವಿಧಗಳ ಮದ್ಯ ಪಾನೀಯಗಳಿಗೆ ಸೂಕ್ಷ್ಮ ಮಾನದಂಡಗಳನ್ನು ನಿಗದಿಪಡಿಸಿದೆ. ಭಾರತೀಯ ಮದ್ಯ ಮತ್ತು ಬಿಯರ್ ತಯಾರಿಕೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಸೂಚಿಸಿದ್ದ ಮಾನದಂಡಗಳನ್ನು ಪ್ರತಿಷ್ಠಿತ ಬಿಯರ್ ತಯಾರಿಸುವ ಕಂಪನಿಗಳು ಉಲ್ಲಂಘಿಸಿರುವುದನ್ನು ಸಿಎಜಿಯು ಲೆಕ್ಕ ಪರಿಶೋಧನೆಯಿಂದ ಪತ್ತೆ ಹಚ್ಚಿದೆ.
ಅಲ್ಲದೇ ಲೇಬಲ್‌ಗಳ ಉಲ್ಲಂಘನೆ ಮತ್ತು ರಾಜಿ ಮಾಡಿಕೊಂಡ ಉತ್ಪನ್ನಗಳ ಉತ್ಪಾದನೆ, ಮಾರಾಟದಲ್ಲಿ ಗಂಭೀರವಾದ ಲೋಪಗಳಿರುವುದನ್ನೂ ಸಿಎಜಿಯು ಬಹಿರಂಗಗೊಳಿಸಿದೆ. ಹಾಗೆಯೇ ರಾಜ್ಯದಲ್ಲಿ ಉತ್ಪಾದಿಸುವ ಮದ್ಯದ ಗುಣಮಟ್ಟದ ಬಗ್ಗೆ ಎದ್ದಿರುವ ಪ್ರಶ್ನೆಗಳು ಮತ್ತು ಗ್ರಾಹಕರನ್ನು ದಾರಿ ತಪ್ಪಿಸಿರುವ ಪ್ರಕರಣಗಳನ್ನೂ ಸಿಎಜಿಯು ಬೆಳಕಿಗೆ ತಂದಿದೆ.
2025ರ ಆಗಸ್ಟ್‌ನಲ್ಲಿ ನಡೆದಿದ್ದ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಿಗೆ ಮಂಡನೆಯಾಗಿರುವ ಸಿಎಜಿ ವರದಿಯು ಭಾರತೀಯ ನಿರ್ಮಿತ ಮದ್ಯ ಮತ್ತು ಬಿಯರ್ ತಯಾರಿಕೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಸೂಚಿಸಿದ್ದ ಮಾನದಂಡಗಳನ್ನು ಕಂಪನಿಗಳು ಹೇಗೆಲ್ಲಾ ಉಲ್ಲಂಘನೆ ಮಾಡಿವೆ ಮತ್ತು ಇದರಿಂದ ಗ್ರಾಹಕರ ಆರೋಗ್ಯಕ್ಕೆ ಆಗಿರುವ ಧಕ್ಕೆಯ ಕುರಿತು ಕಳವಳ ವ್ಯಕ್ತಪಡಿಸಿದೆ.
ಭಾರತೀಯ ನಿರ್ಮಿತ ಮದ್ಯ ಮತ್ತು ಬಿಯರ್ ತಯಾರಿಕೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಸೂಚಿಸಿದ್ದ ಮಾನದಂಡಗಳಂತೆ ಅಳೆಯಲು ಅಗತ್ಯವಿರುವ ಮೂಲಭೂತ ಉಪಕರಣಗಳು ಡಿಸ್ಟಲಿರಿಗಳಲ್ಲೇ ಲಭ್ಯವಿಲ್ಲ ಎಂದು ಹೇಳಿರುವ ಸಿಎಜಿಯು, ಗುಣಮಟ್ಟದ ಕುರಿತು ಆತಂಕವನ್ನೂ ವ್ಯಕ್ತಪಡಿಸಿದೆ.
ಮಾನದಂಡಗಳೇನು?
ಬಟ್ಟಿ ಇಳಿಸಿದ ಮತ್ತು ಬಟ್ಟಿ ಇಳಿಸದ ಮದ್ಯ ಪಾನೀಯಗಳಿಗೆ ಕೆಲವು ಮಾನದಂಡಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು 2018ರಲ್ಲೇ ನಿಗದಿಪಡಿಸಿದೆ. ಇದರ ಪ್ರಕಾರ ಬ್ಲೆಂಡೆಡ್ ಮಾಲ್ಟ್ ಅಥವಾ ಧಾನ್ಯ ವಿಸ್ಕಿ ಎಂದರೇ ಕನಿಷ್ಠ ಶೇ.2ರಷ್ಟು ಅಳತೆಯ ಜೋಳ ಅಥವಾ ಧಾನ್ಯದಿಂದ ತಯಾರಿಸಿದ ಮಾಲ್ಟ್ ವಿಸ್ಕಿಯನ್ನು ತಟಸ್ಥ ಅಥವಾ ಶುದ್ಧೀಕರಿಸಲ್ಪಟ್ಟ ಮದ್ಯಸಾರದೊಂದಿಗೆ ಮಿಶ್ರಣ ಮಾಡಿರಬೇಕು.
ಅಲ್ಲದೆ ಕನಿಷ್ಠ ಶೇ.2ರಷ್ಟು ಶುದ್ಧ ದ್ರಾಕ್ಷಿ ಬ್ರಾಂಡಿಯನ್ನು ಯಾವುದೇ ಇತರ ಹಣ್ಣಿನ ಅಥವಾ ಹೂವಿನ ಬ್ರಾಂಡಿ ಅಥವಾ ತಟಸ್ಥ ಮದ್ಯಸಾರ ಅಥವಾ ಕೃಷಿ ಮೂಲದ ಶುದ್ದೀಕರಿಸಲ್ಪಟ್ಟ ಮದ್ಯಸಾರದೊಂದಿಗೆ ಮಿಶ್ರಣ ಮಾಡಿರಬೇಕು. ಮಿಶ್ರಣಕ್ಕೆ ಯಾವುದೇ ಇತರ ಹಣ್ಣಿನ ಬ್ರಾಂಡಿಯನ್ನ ಬಳಸಲಾಗಿದ್ದರೇ ಆ ಹಣ್ಣಿನ ಹೆಸರನ್ನು ಬ್ರಾಂಡಿ ಎಂಬ ಪದವನನ್ನು ಮುಂದಕ್ಕೆ ಬಳಸಬೇಕು ಎಂದು ಪ್ರಾಧಿಕಾರವು ಮಾನದಂಡಗಳಲ್ಲೇ ನಿರ್ದಿಷ್ಟಪಡಿಸಿದೆ.
ಕಲ್ಬುರ್ಗಿ ಮತ್ತು ನೆಲಮಂಗಲದಲ್ಲಿರುವ ಯುಎಸ್‌ಎಲ್ ಡಿಸ್ಟಿಲಿರಿಗಳಲ್ಲಿ ತಯಾರಿಸಲಾದ ಬ್ಯಾಗ್ ಪೈಪರ್ ಡಿಲಕ್ಸ್ ವಿಸ್ಕಿಯನ್ನು ಶೇ.2ಕ್ಕಿಂತ ಕಡಿಮೆ ಮಾಲ್ಟ್ ಮದ್ಯಸಾರ ಬಳಸಿ ಮಿಶ್ರಣ ಮಾಡಲಾಗಿತ್ತು. ಈ ಎಲ್ಲಾ ಪ್ರಕರಣಗಳಲ್ಲಿ ಲೇಬಲ್‌ಗಳಲ್ಲಿ ಮಾಲ್ಟ್ ಮದ್ಯಸಾರದೊಂದಿಗೆ ಬ್ಲೆಂಡೆಂಡ್ ಎಂದು ಉಲ್ಲೇಖಿಸಿತ್ತು.
ಬೆಂಗಳೂರಿನ ಜಾನ್ ಡಿಸ್ಟಿಲಿರೀಸ್‌ನ ಒರಿಜಿನಲ್ ಚಾಯ್ಸ್ ಡೀಲಕ್ಸ್ ಮಾಲ್ಟ್ ವಿಸ್ಕಿ ಮತ್ತು ಬ್ಲ್ಯಾಕ್ ಪೆಲಿಕನ್ ಮಾಲ್ಟ್ ವಿಸ್ಕಿಯ ಲೇಬಲ್‌ಗಳಲ್ಲಿ ಬ್ಲೆಂಡೆಂಡ್ ಮಾಲ್ಟ್ ಮದ್ಯಸಾರ ಎಂದು ಉಲ್ಲೇಖಿಸಿದೆ. ಆದರೂ ಸಹ ಇದು ಅಗತ್ಯವಿರುವ ಶೇ.2ರಷ್ಟು ಮಾಲ್ಟ್ ಮದ್ಯಸಾರವನ್ನು ಹೊಂದಿರಲಿಲ್ಲ ಎಂಬುದನ್ನು ಸಿಎಜಿಯು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.
ಹಾಗೆಯೇ ಇದೇ ಜಾನ್ ಡಿಸ್ಟಲಿರೀಸ್‌ನ ಒರಿಜನಲ್ ಚಾಯ್ಸ್ ಡೀಲಕ್ಸ್ ವಿಎಸ್‌ಒಒಪಿ ಬ್ರಾಂಡಿ, ಬೆಂಗಳೂರು ಬ್ರಾಂಡಿ ಹಾಗೂ ಮಾಂಟ್ ಕ್ಯಾಸ್ಪೆಲ್ ಮಿಶ್ರಣ ಬ್ರಾಂಡಿ ಎಂಬ ಬ್ರಾಂಡ್‌ಗಳ ಲೇಬಲ್‌ಗಳಲ್ಲಿ ದ್ರಾಕ್ಷಿ ಮದ್ಯಸಾರದೊಂದಿಗೆ ಬೆರೆಸಲಾಗಿದೆ ಎಂದು ಉಲ್ಲೇಖಿಸಿದೆ. ಆದರೆ ಈ ಬ್ರಾಂಡ್‌ಗಳ ತಯಾರಿಕೆಯಲ್ಲಿ ಕನಿಷ್ಠ ಅಗತ್ಯವಿರುವ ಶೇ.2ರಷ್ಟು ದ್ರಾಕ್ಷಿ ಮದ್ಯಸಾರವನ್ನು ಬಳಸಲಾಗಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.
ಗುಣಮಟ್ಟ ಅಳೆಯುವ ನಿಯತಾಂಕಗಳ ನಿರ್ದಿಷ್ಟತೆಗಳೇನು?
ಮದ್ಯ ಪಾನೀಯಗಳ ಮತ್ತು ಬಿಯರ್ ತಯಾರಿಕೆ ಸಂದರ್ಭಗಳಲ್ಲಿ ಈಥೈಲ್ ಆಲ್ಕೋಹಾಲ್ ಅಂಶ, ಆವಿಯಾಗುವಿಕೆಯ ಮೇಲಿನ ಶೇಷ, ಬಾಷ್ಪಶೀಲ ಆಮ್ಲಗಳು, ಹೆಚ್ಚಿನ ಆಲ್ಕೋಹಾಲ್‌ಗಳು, ಮೀಥೈಲ್ ಆಲ್ಕೋಹಾಲ್, ಒಟ್ಟು ಎಸ್ಟರುಗಳು, ಪರ್ಫ್ಯೂಲ್, ಆಲ್ದಿಹೈಡ್‌ಗಳು, ತಾಮ್ರ, ಸೀಸ, ಆರ್ಸೆನಿಕ್, ಕ್ಯಾಡ್ಮಿಯಮ್, ಪಾದರಸ, ಬಟ್ಟಿ ಇಳಿಸಿದ ಪಾನೀಯಗಳಲ್ಲಿ ಮತ್ತು ಈಥೈಲ್ ಆಲ್ಕೋಹಾಲ್, ಪಿಚ್ ಕಾರ್ಬನ್ -ಡೈ -ಆಕ್ಸೈಡ್, ಮೀಥೈಲ್ ಆಲ್ಕೋಹಾಲ್, ಒಟ್ಟು ಪ್ಲೇಟ್ ಎಣಿಕೆ, ಕೋಲಿಫಾರ್ಮ್ ಎಣಿಕೆ, ವೈಲ್ಡ್ ಯೀಸ್ಟ್ ಮತ್ತು ಬಿಯರ್‍ಗೆ ಸಂಬಂಧಿಸಿದಂತೆ ಬ್ರೂವೆರ್ಸ್‌ನ ಯೀಸ್ಟ್‌ಗಳನ್ನು ಅಳೆಯಲು 13 ನಿಯತಾಂಕಗಳನ್ನು ನಿರ್ದಿಷ್ಟಪಡಿಸಿದೆ.
ಆದರೆ ದಾಖಲೆಗಳ ಪ್ರಕಾರ ಕೇವಲ ಮೂರು (ಈಥೈಲ್ ಆಲ್ಕೋಹಾಲ್, ಅಸಹ್ಯಕರ ವಸ್ತು ಮತ್ತು ಮೀಥೈಲ್ ಅಲ್ಕೋಹಾಲ್‌ಗಳ) ನಿಯತಾಂಕಗಳನ್ನು ಮಾತ್ರ ಅಳೆಯಲಾಗುತ್ತಿತ್ತು ಎಂದು ಸಿಎಜಿ ವರದಿಯು ಪತ್ತೆ ಹಚ್ಚಿದೆ.
ನಿಯಮಗಳ ಅಡಿಯಲ್ಲಿ ಉಲ್ಲೇಖಿಸಲಾದ ನಿಯತಾಂಕಗಳನ್ನು ಅಳೆಯಲು ಅಗತ್ಯವಿರುವ ಮೂಲಭೂತ ಉಪಕರಣಗಳು, ಡಿಸ್ಟಿಲಿರಿಗಳ ಮತ್ತು ಬ್ರೂವೆರಿಗಳಲ್ಲಿ ಲಭ್ಯವಿರಲಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆ ವೇಳೆಯ ಕಂಡು ಹಿಡಿದಿರುವುದು ವರದಿಯಿಂದ ಗೊತ್ತಾಗಿದೆ.
‘ಮೇಲಿನ ಎಲ್ಲಾ ದೃಷ್ಟಾಂತಗಳಲ್ಲಿ ಐಎಂಎಲ್ ಉತ್ಪಾದನೆ, ಎಫ್‌ಎಸ್‌ಎಸ್‌ಎಐನಿಂದ ನಿಗದಿಪಡಿಸಲಾದ ಮಾನದಂಡಗಳ ವಿರುದ್ಧವಾಗಿ ನಡೆದಿರುವುದು ಕಂಡುಬಂದಿದೆ,’ ಎಂದು ಸಿಎಜಿ ವರದಿಯು ಹೇಳಿದೆ.
ಎಫ್‌ಎಸ್‌ಎಸ್‌ಎನ ನಿಯಮಗಳ ಮೂಲಕ ಮದ್ಯಸಾರಗಳಿಂದ ಆರಂಭಿಸಿ ವೈನ್ ಮತ್ತು ಬಿಯರ್‍ವರೆಗೆ ವಿವಿಧ ವಿಧಗಳ ಮದ್ಯ ಪಾನೀಯಗಳಿಗೆ ಸೂಕ್ಷ್ಮ ಮಾನದಂಡಗಳನ್ನು ನಿಗದಿಪಡಿಸಿದೆ. ಈ ಮಾನದಂಡಗಳು ಗ್ರಾಹಕರು ತಮ್ಮ ಯೋಗಕ್ಷೇಮಕ್ಕೆ ಧಕ್ಕೆಯಾಗದಂತೆ ತಮ್ಮ ಆದ್ಯತೆಯ ಪಾನೀಯಗಳನ್ನು ಆನಂದಿಸಬಹುದು ಎಂದು ಖಚಿತಪಡಿಸುತ್ತದೆ. ಲೇಬಲ್‌ಗಳಲ್ಲಿ ತಪ್ಪು ಮಾಹಿತಿಯನ್ನು ಬಹಿರಂಗಪಡಿಸುವ ಡಿಸ್ಟಿಲಿರಿಗಳ ಅಭ್ಯಾಸಗಳು ಗ್ರಾಹಕರನ್ನು ತಪ್ಪು ಮಾರ್ಗಕ್ಕಿಳಿಸಿದವು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಅಬಕಾರಿ ಇಲಾಖೆಯು ಕಠಿಣ ಜಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿದೆ.
ಅದೇ ರೀತಿ ಅನುಮೋದಿತ ಲೇಬಲ್‌ಗಳ ಉಲ್ಲಂಘನೆ ಆಗಿರುವುದು ಮತ್ತು ಗುಣಮಟ್ಟದಲ್ಲಿ ರಾಜಿ ಆಗಿರುವ ಪ್ರಕರಣಗಳನ್ನು ಸಿಎಜಿಯು ಪತ್ತೆ ಹಚ್ಚಿದೆ.
ಯುನಿಸ್ಟಿಲ್ ಅಲ್ಕೋಬ್ಲೆಂಡ್ ಪ್ರೈವೈಟ್ ಲಿಮಿಟೆಡ್ ಮತ್ತು ಜೆ ಪಿ ಡಿಸ್ಟಲಿರೀಸ್ ಗಳಲ್ಲಿ ತಯಾರಿಸಿರುವ ವಿಂಡ್ಸರ್ ಡೀಲಕ್ಸ್ ವಿಸ್ಕಿ, ರಾಜಾ ವಿಸ್ಕಿ, ನಂ ಹೈವೇ ಡೀಲಕ್ಸ್ ವಿಸ್ಕಿ, ಓಲ್ಡ್ ಮಾಂಕ್ ರಮ್ ಲೇಬಲ್‌ಗಳಲ್ಲಿ ಮಾಲ್ಟ್/ಪಕ್ವಗೊಂಡ ಮದ್ಯಸಾರವನ್ನು ಪದಾರ್ಥಗಳ ಪಟ್ಟಿಯಲ್ಲಿ ಉಲ್ಲೇಖಿಸಿವೆ. ಆದರೆ 2018-19ರಿಂದ 2022-23ರ ಅವಧಯಲ್ಲಿ ವಿಂಡ್ಸರ್ ಡೀಲಕ್ಸ್ ವಿಸ್ಕಿಯ 529 ಬ್ಯಾಚ್‌ಗಳ್ಲಲಿ, ರಾಜಾ ವಿಸ್ಕಿಯ 1,609 ಬ್ಯಾಚ್‌ಗಳಲ್ಲಿ, ಓಲ್ಡ್ ಮಾಂಕ್ ರಮ್‌ನ 113 ಬ್ಯಾಚ್‌ಗಳಲ್ಲಿ ಮತ್ತುನಂ 1 ಹೈವೇ ಡೀಲಕ್ಸ್ ವಿಸ್ಕಿಯ 150 ಬ್ಯಾಚ್‌ಗಳಲ್ಲಿ ಮಾಲ್ಟ್ ಮದ್ಯಸಾರವನ್ನು ಸೇರಿಸಿಲ್ಲ ಎಂದು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿರುವದು ವರದಿಯಿಂದ ಗೊತ್ತಾಗಿದೆ.
‘ಈ ಬ್ರಾಂಡ್‌ಗಳನ್ನು ಮಾಲ್ಟ್ ಮದ್ಯಸಾರವನ್ನು ಸೇರ್ಪಡಿಸದೇ ಉತ್ಪಾದಿಸಲಾಗಿದೆ ಮತ್ತು ಬಾಟಲಿಗಳಿಗೆ ಅಂಟಿಸಲಾದ ಅನುಮೋದಿತ ಲೇಬಲ್‌ಗಳ ಉಲ್ಲಂಘನೆ ನಡೆದಿದೆ. ಲೆಕ್ಕ ಪರಿಶೋಧನಾ ತಪಾಸಣೆಯಲ್ಲಿ ಡಿಸ್ಟಿಲಿರಿಗಳಲ್ಲಿ ನಿಯೋಜಿಸಲಾದ ಅಬಕಾರಿ ನಿರೀಕ್ಷಕರು ಪ್ರತಿಯೊಂದು ಬ್ಯಾಚ್‌ನ ಅಂಶಗಳನ್ನು ಪ್ರಮಾಣೀಕರಿಸುತ್ತಾರೆ ಎಂಬುದು ಕಂಡುಬಂದಿತು. ಆದರೂ ಮೇಲಿನ ಈ ಎಲ್ಲಾ ಸಂದರ್ಭಗಳಲ್ಲೂ ಮಾಲ್ಟ್ ಮದ್ಯಸಾರವನ್ನು ಸೇರಿಸದೇ ಇರುವುದನ್ನು ಸೂಚಿಸಲು ನಿರೀಕ್ಷಕರು ವಿಫಲರಾಗಿದ್ದಾರೆ,’ ಎಂದು ಸಿಎಜಿಯು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ಪದ್ಧತಿಗಳು ರಾಜ್ಯದಲ್ಲಿ ಉತ್ಪಾದಿಸುವ ಮದ್ಯದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. ಇದು ಗ್ರಾಹಕರನ್ನು ದಾರಿ ತಪ್ಪಿಸಿತು ಮತ್ತು ತಪ್ಪಾದ ಲೇಬಲಿಂಗ್ ಮೂಲಕ ರಾಜಿ ಮಾಡಿಕೊಂಡ ಉತ್ಪನ್ನವನ್ನು ಖರೀದಿಸುವಂತೆ ಮಾಡಿತು. ಲೇಬಲ್‌ಗಳು ಇಲಾಖೆಲಯಿಂದ ಅನುಮೋದನೆಯಾಗಿದ್ದರಿಂದ ಲೇಬಲ್‌ಗಳ ಉಲ್ಲಂಘನೆ ಮತ್ತು ರಾಜಿ ಮಾಡಿಕೊಂಡ ಉತ್ಪನ್ನಗಳ ಉತ್ಪಾದನೆ, ಮಾರಾಟವಾಗಿದೆ. ಇಲಾಖೆಯಿಂದ ಆಗಿರುವ ಗಂಭೀರವಾದ ಲೋಪಗಳನ್ನು ತೋರಿಸುತ್ತವೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.
ಸಿಎಜಿಯ ಅಭಿಪ್ರಾಯ ಒಪ್ಪದ ಇಲಾಖೆ
ಸಿಎಜಿಯು ಈ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಅಬಕಾರಿ ಇಲಾಖೆಯು ತಳ್ಳಿ ಹಾಕಿದೆ. ‘ಐಎಂಎಲ್ ಉತ್ಪಾದನೆ ಸಮಯದಲ್ಲಿ ನಡೆಸಲಾದ ಆಡಳಿತಾತ್ಮಕ ನಿಯಂತ್ರಣದಲ್ಲಿ ಯಾವುದೇ ರೀತಿಯಿ ರಾಜಿಯಿಲ್ಲ. ಅಬಕಾರಿ ಅಧಿಕಾರಿಗಳಿಂದ ನಿಯಮಿತ ಪರಿಶೀಲನೆ ನಡೆಯುತ್ತಿದೆ,’ ಎಂದು ಸಮಜಾಯಿಷಿ ನೀಡಿದೆ.
ಇದನ್ನು ಸಿಎಜಿಯು ಸಹ ಒಪ್ಪಿಲ್ಲ.
‘ಲೇಬಲ್‌ಗಳು ಅಬಕಾರಿ ಆಯುಕ್ತರಿಂದ ಅನುಮೋದನೆಗೊಂಡಿರುವ ಹಿನ್ನೆಲೆಯಲ್ಲಿ ಲೇಬಲ್‌ನಲ್ಲಿರುವ ಘೋಷಣೆಯ ಅನುಸರಣೆಯು ನಡೆಯುತ್ತಿವೆಯೆ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿ ಅಬಕಾರಿ ಇಲಾಖೆಯ ಮೇಲಿತ್ತು ಎಂದು ಲೆಕ್ಕ ಪರಿಶೋಧನೆಯು ಪುನರುಚ್ಛರಿಸಿದೆ. ಇದಲ್ಲದೇ ಡಿಸ್ಟಿಲಿರಿಗಳಲ್ಲಿರುವ ಮಿಶ್ರಣ ದಾಖಲೆಗಳನ್ನು ಡಿಸ್ಟಲಿರಿಯ ಜವಾಬ್ದಾರಿಯಲ್ಲಿರುವ ಅಧಿಕಾರಿಗಳು ಸಹಿ ಹಾಕಬೇಕು. ಅಲ್ಲಿ ಡಿಸ್ಟಿಲಿರಿ ಅಧಿಕಾರಿ, ಮಿಶ್ರಣದ ವಿಷಯಗಳನ್ನು ಪರಿಶೀಲಿಸಿ ಅದನ್ನು ಪ್ರಮಾಣೀಕರಿಸುತ್ತಾರೆ. ಆದ್ದರಿಂದ ಆಡಳಿತಾತ್ಮಕ ನಿಯಂತ್ರಣದ ಕಾರ್ಯಗತಗೊಳಿಸುವಲ್ಲಿ ರಾಜಿ ಮಾಡಿಕೊಂಡಿಲ್ಲ ಎಂಬ ಇಲಾಖೆಯ ದೃಷ್ಟಿಕೋನವು ಒಪ್ಪುವುದಿಲ್ಲ,’ ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ.
ಸಿಎಜಿಯು ವ್ಯಕ್ತಪಡಿಸಿದ್ದ ಆಕ್ಷೇಪಗಳ ಕುರಿತಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಆರ್ ಬಿ ತಿಮ್ಮಾಪುರ ಅವರೊಂದಿಗೆ ಚರ್ಚಿಸಿದ್ದರು. ನಂತರ ಸಿಎಜಿಗೆ ಉತ್ತರವನ್ನು ನೀಡಲಾಗಿದೆ ಎಂದು ಗೊತ್ತಾಗಿದೆ.