ಬೆಂಗಳೂರು: ರಾಜ್ಯದಲ್ಲಿ ಅಪಾಯಕಾರಿ ತ್ಯಾಜ್ಯಗಳನ್ನು ನಿರ್ವಹಿಸುತ್ತಿರುವ ಕೈಗಾರಿಕೆಗಳ ಪೈಕಿ ಶೇ. 32 ರಷ್ಟು ಕೈಗಾರಿಕೆಗಳು ಅಗತ್ಯವಾಗಿರುವ ಅನುಮತಿಗಳನ್ನು ಪಡೆದುಕೊಂಡೇ ಇಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ರಾಜ್ಯದಲ್ಲಿ ಒಟ್ಟು 1,185 ಕೈಗಾರಿಕೆಗಳು ಅಪಾಯಕಾರಿ ತ್ಯಾಜ್ಯಗಳನ್ನು (HW) ನಿರ್ವಹಿಸುತ್ತಿದ್ದು, ಇವುಗಳಲ್ಲಿ 377 ಕೈಗಾರಿಕೆಗಳು ಅಗತ್ಯವಾಗಿರುವ ಅನುಮತಿಗಳನ್ನು ಪಡೆದುಕೊಂಡಿಲ್ಲ. ರಾಜ್ಯದಲ್ಲಿ ಮಂಗಳೂರಿನಲ್ಲಿ ಅಗತ್ಯ ಅನುಮತಿ ಪಡೆಯದ ಅತಿ ಹೆಚ್ಚು ಕೈಗಾರಿಕೆಗಳಿವೆ. ಇಲ್ಲಿಯ ಶೇ.48 ರಷ್ಟು ಕೈಗಾರಿಕೆಗಳು ಅಗತ್ಯವಾಗಿರುವ ಎಲ್ಲ ಅನುಮತಿಗಳನ್ನು ಪಡೆದುಕೊಂಡಿಲ್ಲ.
ಈ ವಿಷಯವನ್ನು ಮಹಾಲೇಖಪಾಲರು (ಸಿಎಜಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಪತ್ತೆ ಹಚ್ಚಿದ್ದಾರೆ. ಈ ಸಿಎಜಿ ವರದಿಯನ್ನು ಇತ್ತೀಚೆಗೆ ನಡೆದ ವಿಧಾನ ಸಭೆಯ ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ.
ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಈ ಕುರಿತು ಸಿಎಜಿಯು ಸರ್ಕಾರದ ಗಮನ ಸೆಳೆದ ನಂತರ, ಮಾನ್ಯವಾದ ಅನುಮತಿಯನ್ನು ಪಡೆಯದೇ ಇರುವ 377 ಕೈಗಾರಿಕೆಗಳ ಪೈಕಿ 54 ಕೈಗಾರಿಕೆಗಳು ಅನುಮತಿನ್ನು ನವೀಕರಿಸಿವೆ ಮತ್ತು 52 ಕೈಗಾರಿಕೆಗಳು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿವೆ. ಉಳಿದ 271 ಕೈಗಾರಿಕೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸರ್ಕಾರವು ತಿಳಿಸಿದೆ.
‘ಅಪಾಯಕಾರಿ ಮತ್ತು ಇತರ ತ್ಯಾಜ್ಯಗಳ (ನಿರ್ವಹಣೆ ಮತ್ತು ಗಡಿಯಾಚೆಗಿನ ಚಲನೆ) ನಿಯಮಗಳು-2015′ ರ ಅಡಿಯಲ್ಲಿ ʼಅಪಾಯಕಾರಿ ತ್ಯಾಜ್ಯ’ ಯಾವುದೆಂದು ಗುರುತಿಸಲಾಗಿದೆ. ಜೀವ ಜಂತುಗಳ ಆರೋಗ್ಯ ಅಥವಾ ಪರಿಸರಕ್ಕೆ ಅಪಾಯಕಾರಿಯಾದ ಅಥವಾ ಇತರ ತ್ಯಾಜ್ಯಗಳು ಅಥವಾ ಪದಾರ್ಥಗಳೊಂದಿಗೆ ಸೇರಿದಾಗ ಅದರ ಯಾವುದೇ ಭೌತಿಕ, ರಾಸಾಯನಿಕ, ಪ್ರತಿಕ್ರಿಯಾತ್ಮಕ, ವಿಷಕಾರಿ, ಸುಡುವ, ಸ್ಫೋಟಕ ಅಥವಾ ನಾಶಕಾರಿ ಗುಣಲಕ್ಷಣಗಳಿಂದ ಉಂಟಾಗುವ ಯಾವುದೇ ತ್ಯಾಜ್ಯ ಅಪಾಯ ಅಥವಾ ಆರೋಗ್ಯ ಅಥವಾ ಪರಿಸರಕ್ಕೆ ಅಪಾಯವನ್ನು ಉಂಟುಮಾಡುವ ಸಾಧ್ಯತೆಯಿರುವ ತ್ಯಾಜ್ಯ ಅಥವಾ ವಸ್ತುಗಳನ್ನು ಅಪಾಯಕಾರಿ ತ್ಯಾಜ್ಯ ಎಂದು ಹೇಳಲಾಗಿದೆ.
ಈ ನಿಯಮದ ಪ್ರಕಾರ ಅಪಾಯಕಾರಿ ತ್ಯಾಜ್ಯಗಳಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ತೊಡಗಿರುವ ಪ್ರತಿಯೊಬ್ಬರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಮಾನ್ಯವಾದ ಸಮ್ಮತಿಯನ್ನು (CFE) ಮತ್ತು ಮಂಡಳಿಯಿಂದ ನೀಡಲಾಗುವ ಕಾರ್ಯಾಚರಣೆಗೆ ಒಪ್ಪಿಗೆ (CFO) ಯನ್ನು ಈ ಕೈಗಾರಿಕೆಗಳು ಹೊಂದಿರಲೇಬೇಕು. ಇದರ ಜತೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ, ಅಪಾಯಕಾರಿ ಮತ್ತು ಇತರ ತ್ಯಾಜ್ಯಗಳ (ನಿರ್ವಹಣೆ ಮತ್ತು ಗಡಿಯಾಚೆಗಿನ ಚಲನೆ) ನಿಯಮಗಳು-2015′ ರ ನಿಯಮಗಳ ನಮೂನೆ-2 ರಲ್ಲಿ ತಿಳಿಸಿರುವಂತೆ ಪಡೆದ ಅನುಮತಿಯನ್ನು ಹೊಂದಿರಬೇಕು.
ಈ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳದೇ ರಾಜ್ಯದಲ್ಲಿ 377 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಬಳ್ಳಾರಿಯಲ್ಲಿ 47, ಬೆಳಗಾವಿಯಲ್ಲಿ 41, ಚಿಕ್ಕಬಳ್ಳಾಪುರದಲ್ಲಿ 13, ಚಿಕ್ಕಮಗಳೂರಿನಲ್ಲಿ 12, ಕೋಲಾರದಲ್ಲಿ 32, ಕೊಪ್ಪಳದಲ್ಲಿ 3, ಮಂಗಳೂರಿನಲ್ಲಿ 90, ಮೈಸೂರಿನಲ್ಲಿ 43, ಪೀಣ್ಯದಲ್ಲಿ 48, ತುಮಕೂರಿನಲ್ಲಿ 42, ವಿಜಯಪುರದಲ್ಲಿ 6 ಕೈಗಾರಿಕೆಗಳಲ್ಲಿ ಈ ಯಾವುದೇ ಅಗತ್ಯ ದಾಖಲೆಗಳಿರಲಿಲ್ಲ ಎಂದು ಸಿಎಜಿ ವರದಿಯು ವಿವರಿಸಿದೆ.
ಕಳೆದ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ನೇಮಕಗೊಂಡಿದ್ದಾರೆ. ಮಂಡಳಿಯಲ್ಲಿ ಕರ್ತವ್ಯಲೋಪ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಡಳಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ನೇತೃತ್ವದ ತಂಡ ಕಳೆದ ಜೂನ್ 25 ರಂದು ಮಂಡಳಿಯ ಕೇಂದ್ರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಷರತ್ತು, ನಿಯಮ ಲೆಕ್ಕಕ್ಕೇ ಇಲ್ಲ
ಸಾಮಾನ್ಯ ಅಪಾಯಕಾರಿ ತ್ಯಾಜ್ಯ ಸಂಸ್ಕರಣೆ, ಸಂಗ್ರಹಣೆ ಮತ್ತು ವಿಲೇವಾರಿ ಸೌಲಭ್ಯದ ಘಟಕಗಳು ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಿಎಜಿಯು ಗುರುತಿಸಿದೆ. ಸಿಎಜಿಯು ರಾಜ್ಯದಲ್ಲಿ ಈ ರೀತಿಯ ಎರಡು ಘಟಕಗಳನ್ನು ಪರಿಶೀಲಿಸಿದ್ದು (ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಕಡೇಚೂರು ಕೈಗಾರಿಕಾ ಪ್ರದೇಶ), ಇದರಲ್ಲಿ ಒಂದು ಘಟಕ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದ್ದರೆ, ಮತ್ತೊಂದು ಒಪ್ಪಿಗೆ ಷರತ್ತುಗಳನ್ನು ಉಲ್ಲಂಘಿಸಿರುವುದನ್ನು ಗುರುತಿಸಿದೆ.
ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ‘ಸಾಮಾನ್ಯ ಅಪಾಯಕಾರಿ ತ್ಯಾಜ್ಯ ಸಂಸ್ಕರಣೆ, ಸಂಗ್ರಹಣೆ ಮತ್ತು ವಿಲೇವಾರಿ ಸೌಲಭ್ಯದ ಘಟಕ’ವನ್ನು ಮದರ್ ಅರ್ಥ್ ಎನ್ವಿರೋ ಟೆಕ್ ಪ್ರೈವೆಟ್ ಲಿಮಿಟೆಡ್ ಸ್ಥಾಪಿಸಿದೆ. ಇದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಮಾನದಂಡದ ಷರತ್ತುಗಳಿಗೆ ಅನುಗುಣವಾಗಿಲ್ಲ. ಸೈಟ್ ಆಯ್ಕೆ ಮಾನದಂಡಗಳನ್ನು ಪೂರೈಸುತ್ತಿಲ್ಲ ಮತ್ತು ಉದ್ದೇಶಿತ ಚಟುವಟಿಕೆಗೆ ಭೂಮಿ ಸೂಕ್ತವಲ್ಲ ಎಂದು ರಾಜ್ಯ ಮಾಲಿನ್ಯ ನಿಂತ್ರಣ ಮಂಡಳಿಯ ಪರಿಸರ ಅಧಿಕಾರಿ ವರದಿ ನೀಡಿರುವುದನ್ನು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ಈ ಘಟಕ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀಡಲಾಗುವ ಕಾರ್ಯಾಚರಣೆಗೆ ಒಪ್ಪಿಗೆ (CFO) ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದರೂ ಮಂಡಳಿಯು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ರಾಮನಗರದ ಮಂಡಳಿಯ ಪ್ರಾದೇಶಿಕ ಅಧಿಕಾರಿಯ ವರದಿ ಪ್ರಕಾರ, ಈ ಘಟಕಕ್ಕೆ ಅನ್ವಯವಾಗುವ 11 ಮಾನದಂಡಗಳಲ್ಲಿ ಮೂರು ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ರಚಿಸಿರುವ ಜಂಟಿ ಸಮಿತಿಯ ಪ್ರಕಾರ 13 ಮಾನದಂಡಗಳಲ್ಲಿ ಒಂದನ್ನೂ ಈ ಸೌಲಭ್ಯದ ಸ್ಥಳವು ಅನುಸರಿಸುತ್ತಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಯಾದಗಿರಿ ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ’ಎಂಇಇಟಿಪಿಎಲ್ ಟೆಸ್‌ಡಿಎಫ್’ (ಮದರ್ ಅರ್ಥ್ ಎನ್ವಿರಾನ್ ಟೆಕ್ ಪ್ರೈವೇಟ್ ಲಿಮಿಟೆಡ್) ಹಲವು ಷರತ್ತುಗಳನ್ನು ಉಲ್ಲಂಘಿಸಿರುವುದನ್ನು ಸಿಎಜಿ ವರದಿಯು ಗಮನಿಸಿದೆ. ಘಟಕವು ಧೂಳಿನ ನಿಯಂತ್ರಣಕ್ಕಾಗಿ ತ್ಯಾಜ್ಯವನ್ನು ನೇರವಾಗಿ ಭೂಭರ್ತಿ ಸ್ಥಳದಲ್ಲಿ ಮರು ಬಳಕೆ ಮಾಡಿರುವುದು, ಸಾರ್ವಜನಿಕ ಹೊಣೆಗಾರಿಕೆ ವಿಮೆ ಇಲ್ಲದೆ ಕಾರ್ಯನಿರ್ವಹಿಸುವುದು, ಭಾಷ್ಪಶೀಲ ಸಾವಯವ ಸಂಯುಕ್ತಗಳ ಮೇಲ್ವಿಚಾರಣೆಯನ್ನು ನಡೆಸದಿರುವುದು, ಪ್ರಯೋಗಾಲಯ ಮತ್ತು ವಾಹನ ತೊಳೆಯುವ ನೀರಿಗಾಗಿ ತ್ಯಾಜ್ಯ ನೀರಿನ ಸಂಗ್ರಹ ಟ್ಯಾಂಕ್‌ಗಳನ್ನು ನಿರ್ಮಿಸದಿರುವುದು, ಮಳೆ ನೀರು ಕೊಯ್ಲು ವ್ಯವಸ್ಥೆಗಳ ಅಪೂರ್ಣ ನಿರ್ಮಾಣ, ಕಾಮನ್ ಎಫ್ಲುಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್ ಕಾರ್ಯನಿರ್ವಹಿಸುತ್ತಿದ್ದರೂ ಲೀಚೆಟ್ ಅನ್ನು ಸಂಸ್ಕರಿಸುವಂತಹ, ಸೌಲಭ್ಯದ ನಿರ್ದಿಷ್ಟ ಬದಿಗಳಲ್ಲಿ ಸಾಕಷ್ಟು ಹಸಿರು ಹೊದಿಕೆಯಿಲ್ಲದಿರುವುದು ಕಂಡು ಬಂದಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಷರತ್ತುಗಳನ್ನು ಈ ಘಕಟವು ಉಲ್ಲಂಘಿಸಿದ್ದರ ಪರಿಣಾಮವಾಗಿ ಭೂರ್ಭರ್ತಿ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬರುತ್ತಿರುವುದನ್ನು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಲೋಪಗಳು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮತ್ತು ಪ್ರಾದೇಶಿಕ ಅಧಿಕಾರಿಯ ಗಮನಕ್ಕೆ ಬಂದಿದ್ದರೂ ‘ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, 1974’ರ ಅಡಿಯಲ್ಲಿ ಯಾವುದೇ ಮುಂದಿನ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಸಿಎಜಿಯು ಹೇಳಿದೆ.
ಎಂಇಇಟಿಪಿಎಲ್ , ನಿಗದಿ ಮಾಡಿರುವ ಸಾಮರ್ಥ್ಯಕ್ಕಿಂತ ಕಡಿಮೆ ಸಾಮರ್ಥ್ಯದಲ್ಲಿ ನಿರ್ಮಾಣ ಮಾಡಿ, 16 ಕೋಟಿ ವಂಚಿಸಿದ ಬಗ್ಗೆ ತಮಿಳುನಾಡು ಮೂಲದ ಐವರ ವಿರುದ್ಧ ಕಳೆದ ಜುಲೈನಲ್ಲಿ ತಮಿಳುನಾಡು ಪೊಲೀಸರಿಗೆ ದೂರು ನೀಡಿತ್ತು. 500 ಕೆಎಲ್‌ಡಿ ಸಾಮರ್ಥ್ಯದ ಔಷಧ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣಕ್ಕೆ 20.15 ಕೋಟಿ ಒಪ್ಪಂದ ಆಗಿತ್ತು. ತಮಿಳು ನಾಡು ಮೂಲದ ಗ್ರೇಡಿಯಂಟ್ ಕಂಪನಿಯು 300 ಕೆಎಲ್‌ಡಿ ಸಾಮರ್ಥ್ಯದ ಘಟಕ ನಿರ್ಮಿಸಿ 16 ಕೋಟಿ ವಂಚಿಸಿದ್ದಾರೆ ಎಂದು ಎಂಇಇಟಿಪಿಎಲ್ ದೂರಿನಲ್ಲಿ ಹೇಳಿತ್ತು.
ಅಪಾಯಕಾರಿ ತ್ಯಾಜ್ಯಗಳ ಭೂಭರ್ತಿಯನ್ನು ಅನುಮತಿಸುವ ಸ್ಥಳದ ಪರಿಸ್ಥಿತಿಗಳನ್ನು ಉಲ್ಲಂಘಿಸಲು ಅನುಮತಿ ನೀಡುವುದು ಇತ್ಯಾದಿಗಳನ್ನು ಮಂಡಳಿಯ ಪ್ರಾದೇಶಿಕ ಅಧಿಕಾರಿಗಳು ನೀರು ಕಾಯಿದೆ (WPCP), ಪರಿಸರ ಕಾಯಿದೆ ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳಡಿಯಲ್ಲಿ ನೀಡಲಾಗಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲವೆಂಬುದು ದೃಢಪಟ್ಟಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ನಿಷ್ಕ್ರೀಯವಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ; ಕೈಗಾರಿಕೆಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ ಎಂದ ಸಿಎಜಿ
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 2,756 ಕೈಗಾರಿಕೆಗಳ ಪೈಕಿ ಶೇ. 66.29 ರಷ್ಟು ಕೈಗಾರಿಕೆಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಒಪ್ಪಿಗೆಯನ್ನು ಪಡೆದುಕೊಂಡೇ ಇಲ್ಲ. ಹೀಗಾಗಿ ಈ ಕೈಗಾರಿಕೆಗಳು ಸೃಷ್ಟಿಸುತ್ತಿರುವ ಮಾಲಿನ್ಯದ ಪ್ರಮಾಣ ಎಷ್ಟು? ಇವುಗಳಿಂದ ಪರಿಸರದ ಮೇಲೆ ಯಾವೆಲ್ಲಾ ಪರಿಣಾಮಗಳಾಗುತ್ತಿವೆ ಎಂಬ ಮಾಹಿತಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೇ ತಿಳಿದಿಲ್ಲ. ಈ ಕುರಿತು ಸಿಎಜಿ ವರದಿಯನ್ನಾಧರಿಸಿ ‘ದಿ ಫೈಲ್’ ಈಗಾಗಲೇ ವರದಿ ಪ್ರಕಟಿಸಿದೆ.