ವಿಪತ್ತು ನಿಧಿಗೆ ನಯಾಪೈಸೆಯನ್ನೂ ಬಿಡುಗಡೆ ಮಾಡದ ಕೇಂದ್ರ; ನಿಧಿಗಳ ಖಾತೆಗೂ ವರ್ಗಾವಣೆಯಾಗದ ಹಣ

ಬೆಂಗಳೂರು; ರಾಜ್ಯ ವಿಪತ್ತು ನಿಧಿಗೆ (ಎಸ್‌ಡಿಆರ್‍‌ಎಫ್‌) 2023-24ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಒಂದೇ ಒಂದು ನಯಾ ಪೈಸೆಯನ್ನೂ ನೀಡಿಲ್ಲ. ಅಲ್ಲದೇ ರಾಜ್ಯ ಸರ್ಕಾರವು ಸಹ ವಿವಿಧ ನಿಧಿಗಳಿಗೆ ಹಣವನ್ನು ಸ್ವೀಕರಿಸಿದ್ದರೂ ಸಹ ಅದನ್ನು ನಿಧಿಯ ಖಾತೆಗೆ ವರ್ಗಾಯಿಸಿಲ್ಲ.

 

ಕೇಂದ್ರ ಪುರಸ್ಕೃತ ಯೋಜನೆಗಳಿಗೂ ನಿಗದಿತ ಅನುದಾನ ಬಿಡುಗಡೆ ಮಾಡದೇ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಆರೋಪಗಳನ್ನು ಮಾಡುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ರಾಜ್ಯ ವಿಪತ್ತು ನಿಧಿಗೆ ಒಂದೇ ಒಂದು ನಯಾಪೈಸೆಯನ್ನೂ ನೀಡಿಲ್ಲ ಎಂದು ಸಿಎಜಿ ವರದಿಯು ಬಹಿರಂಗಗೊಳಿಸಿದೆ.

 

2205ರ ಆಗಸ್ಟ್‌ನಲ್ಲಿ ನಡೆದ ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ವಿಪತ್ತು ನಿಧಿಗಳಿಗೆ ಹಂಚಿಕೆಯಾಗಿರುವ ಆರ್ಥಿಕ ನೆರವಿನ ಕುರಿತು ವಿಶ್ಲೇಷಣೆ ಮಾಡಿದೆ.

 

ಹದಿನಾಲ್ಕನೇ ಹಣಕಾಸು ಆಯೋಗದ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುಎ 75:25 ಹಂಚಿಕೆ ಮಾದರಿಯು 15ನೇ ಹಣಕಾಸಿನ ಆಯೋಗದ ಅವಧಿಯಲ್ಲಿಯೂ ಮುಂದುವರಿದಿದೆ. 2023-24ರಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಪ್ರಕಾರ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ  ಕ್ರಮವಾಗಿ 929.60 ಕೋಟಿ ಮೊತ್ತವನ್ನು ನಿಧಿಯ ಲೆಕ್ಕಕ್ಕೆ ವರ್ಗಾಯಿಸಬೇಕಾಗಿತ್ತು.

 

ಆದರೆ ಭಾರತ ಸರ್ಕಾರವು 697.20 ಕೋಟಿಯ ಅವಶ್ಯಕತೆಗೆ ಪ್ರತಿಯಾಗಿ 697.60 ಕೋಟಿಯನ್ನು ಮತ್ತು ರಾಜ್ಯ ಸರ್ಕಾರವು 232.53 ಕೋಟಿಯನ್ನು ವರ್ಗಾಯಿಸಿದೆ. ಹೀಗಾಗಿ 0.53 ಕೋಟಿ ಹೆಚ್ಚಿಗೆ ಬಿಡುಗಡೆಯಾಗಿದೆ.  2023-24ರಲ್ಲಿ ಸಂಪೂರ್ಣ  930.13 ಕೋಟಿಯನ್ನು ನಿಧಿಗೆ ವರ್ಗಾಯಿಸಲಾಗಿದೆ.

 

2023-24ರಲ್ಲಿ ನಿಧಿಗೆ ವರ್ಗಾಯಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ರಾಜ್ಯವು ಕೇಂದ್ರದಿಂದ ಯಾವುದೇ ವಂತಿಗೆಯನ್ನು ಸ್ವೀಕರಿಸಿಲ್ಲ ಎಂದು ಸಿಎಜಿಯು ವರದಿಯು ಗಮನಸೆಳೆದಿರುವುದು ಗೊತ್ತಾಗಿದೆ.

 

ನೈಸರ್ಗಿಕ ವಿಕೋಪಗಳ ಪರಿಹಾರ ಅಡಿಯಲ್ಲಿ ಜಿಲ್ಲಾಧಿಕಾರಿಗಳಿಗೆ 1,019.33 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಶೂನ್ಯ ಮುಕ್ತಾಯ ಶಿಲ್ಕು ಇತ್ತು. ಆಧರೆ ಆರಂಭಿಕ ಶಿಲ್ಕು 89.20 ಕೋಟಿ ಹೊಂದಿತ್ತು. ಆದರೂ ನಿಧಿಯಲ್ಲಿ ಯಾವುದೇ ಶಿಲ್ಕುಗಳನ್ನು ಉಳಿಸಿಕೊಂಡ ಅವಧಿಯವರೆಗೆ ಆರಂಭಿಕ ಶಿಲ್ಕುಗಳ ಮೇಲೆ ಕಡಿತ ಶಿಲ್ಕುಗಳ ಪ್ರಕಾರ ಯಾವುದೇ ಬಡ್ಡಿಯನ್ನು ಒದಗಿಸಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಿದೆ.

 

 

ಇದಕ್ಕೆ ರಾಜ್ಯ ಸರ್ಕಾರವು ನೀಡಿರುವ ಉತ್ತರವನ್ನು ಸಿಎಜಿಯು ಒಪ್ಪಿಲ್ಲ. ರಾಜ್ಯ ಸರ್ಕಾರವು ಆರ್ಥಿಕ ವರ್ಷ 2023-24ರಲ್ಲಿ ಆರಂಭಿಕ ಶಿಲ್ಕು 892 ಕೋಟಿಯೂ ಸೇರಿದಂತೆ ಒಟ್ಟು ವೆಚ್ಚವು 930.13 ಕೋಟಿಗಳಾಗಿವೆ. ಇದನ್ನು ನಿಧಿಯ ಲೆಕ್ಕದಲ್ಲಿ ಭರಿಸಲಾಗಿದೆ ಎಂದು ಉತ್ತರಿಸಲಾಗಿದೆ. ಆರಂಭಿಕ ಶಿಲ್ಕು 89.20 ಕೋಟಿಯನ್ನು 2023-24ರಲ್ಲಿ ವೆಚ್ಚ ಮಾಡಿದ್ದರೂ ಆರಂಭಿಕ ಶಿಲ್ಕು ನಿಧಿಯ ಲೆಕ್ಕದಲ್ಲಿ ಉಳಿದಿದ್ದ ಅವಧಿಗೆ ಬಡ್ಡಿಯನ್ನು ನೀಡಬೇಕಾಗಿತ್ತು. ಹೀಗಾಗಿ ರಾಜ್ಯ ಸರ್ಕಾರವು ನೀಡಿರುವ ಉತ್ತರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸಿಎಜಿಯು ವರದಿಯಲ್ಲಿ ವಿವರಿಸಿದೆ.

 

ಅಲ್ಲದೇ ರಾಜ್ಯ ವಿಪತ್ತು ಉಪಶಮನ ನಿಧಿ (ಎಸ್‌ಡಿಎಂಎಫ್‌) ಗೆ ವರ್ಗಾವಣೆಯಾಗಿರುವ ಅನುದಾನದ ಕುರಿತು ಸಿಎಜಿ ವರದಿಯಲ್ಲಿ ಚರ್ಚಿಸಲಾಗಿದೆ. 2023-24ರ ಅವಧಿಯಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸ್ಸು ಪ್ರಕಾರ 232.40 ಕೋಟಿ ಮೊತ್ತವನ್ನು ಕೇಂದ್ರ ಮತ್ತು ರಾಜ್ಯದಿಂದ ನಿಧಿ ಖಾತೆಗೆ ವರ್ಗಾಯಿಸಬೇಕಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಎಸ್‌ಡಿಎಂಎಫ್‌ಗೆ ರಾಜ್ಯವು ಅನುದಾನವನ್ನೇ ಪಡೆದಿರಲಿಲ್ಲ. ಹೀಗಾಗಿ ರಾಜ್ಯವೂ ಸಹ ತನ್ನ ಪಾಲನ್ನು ಈ ನಿಧಿಗೆ ವರ್ಗಾಯಿಸಲಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

 

ಹಾಗೆಯೇ ಎಸ್‌ಡಿಎಂಎಫ್‌ನೊಂದಿಗೆ ರಾಜ್ಯವು 237.10 ಕೋಟಿಯನ್ನು ಆರಂಭಿಕ ಶಿಲ್ಕು ಹೊಂದಿತ್ತು. ಅದಕ್ಕೆ ಬಡ್ಡಿಯನ್ನು ಜಮಾ ಮಾಡಬೇಕಿತ್ತು. ಆದರೆ ರಾಜ್ಯ ಸರ್ಕಾರವು ಯಾವುದೇ ಬಡ್ಡಿಯನ್ನೂ ನೀಡಿಲ್ಲ. ಈ ಅಂಶವನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿದೆ. ಅಲ್ಲದೇ 2023-24ರಲ್ಲಿ ಶೇ. 8.50ರ ದರದಲ್ಲಿ ಎರಡು ವರ್ಷಗಳ ಬಡ್ಡಿಯನ್ನು ನೀಡಲಾಗುವುದು ಎಂದು ಹೇಳಿತ್ತು. ಆದರೂ ಈ ನಿಧಿಗೆ ಯಾವುದೇ ಬಡ್ಡಿಯನ್ನು ಒದಗಿಸಿಲ್ಲ. ಹೀಗಾಗಿ ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆಯನ್ನು ಕಡಿಮೆ ಹೇಳಲು ಕಾರಣವಾಯಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ಕರ್ನಾಟಕ ಸ್ಥಿರಾಸ್ತಿ ನಿಯಂತ್ರಣ ಪ್ರಾಧಿಕಾರ ನಿಧಿಗೆ 18.10 ಕೋಟಿ ಮೊತ್ತವನ್ನು ವರ್ಗಾಯಿಸಿತ್ತು. ಮತ್ತು 11.85 ಕೋಟಿ ವೆಚ್ಚವನ್ನು ನಿಧಿಗೆ ದಾಖಲಿಸಿದೆ. ಆದರೂ 2017-18 ಮತ್ತು 2018-19ರ ಅವಧಿಯಲ್ಲಿ ಸಂಗ್ರಹಿಸಿದ್ದ ಸ್ವೀಕೃತಿ ಮತ್ತು ಮಾಡಿದ ವೆಚ್ಚವನ್ನು ವರ್ಗಾಯಿಸಿಲ್ಲ.

 

 

 

ಹಿಂದಿನ ವರ್ಷದ ರಾಜ್ಯದ ಹಣಕಾಸಿನ ವ್ಯವಹಾರದ ವರದಿಯಲ್ಲಿ ಲೆಕ್ಕ ಪರಿಶೋಧನೆ ಮೂಲಕ ಗಮನಸೆಳೆದಿದ್ದರೂ ಸ್ವೀಕೃತಿಗಳು ಮತ್ತು ವೆಚ್ಚವನ್ನು ನಿಧಿ ಖಾತೆಗೆ ವರ್ಗಾಯಿಸಲು ಯಾವುದೇ ಕ್ರಮ ವಹಿಸಿಲ್ಲ. ಲೆಕ್ಕ ಸಮನ್ವಯದ ನಂತರ ನಿಧಿಗೆ ಮೊತ್ತವನ್ನು ವರ್ಗಾಯಿಸಲಾಗುವುದು ಎಂದು ರಾಜ್ಯ ಸರ್ಕಾರವು ಲೆಕ್ಕ ಪರಿಶೋಧನೆಗೆ ಹೇಳಿತ್ತು. ಈ ಉತ್ತರ ನೀಡಿ ಒಂದು ವರ್ಷ ಕಳೆದರೂ ಇನ್ನೂ ನಿಧಿಗೆ ಹಣವನ್ನು ವರ್ಗಾಯಿಸಿಲ್ಲ.

 

 

ಕೇಂದ್ರ ರಸ್ತೆ ಮತ್ತು ಮೂಲಭೂತ ಸೌಕರ್ಯ ನಿಧಿ (ಸಿಆರ್‍‌ಐಎಫ್‌)ಗೆ ಸಂಬಂಧಿಸಿದಂತೆ 2023-24ರ ಅವಧಿಯಲ್ಲಿ ರಾಜ್ಯವು 660.91 ಕೋಟಿ ರು.ಗಳನ್ನು ಸ್ವೀಕರಿಸಿತ್ತು ಮತ್ತು ಅದನ್ನು ನಿಧಿಗೆ ವರ್ಗಾಯಿಸಿತ್ತು. ಆದರೂ (ಲೆಕ್ಕ ಶೀರ್ಷಿಕೆ; 5054-04-337-0-05) ಅಡಿಯಲ್ಲಿ 492.12 ಕೋಟಿ ವೆಚ್ಚವನ್ನು ನಿಧಿಗೆ ವರ್ಗಾಯಿಸಿಲ್ಲ.

 

 

 

ಈ ಮೊತ್ತನ್ನು ಮುಂದಿನ ವರ್ಷಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿ ನಿಧಿಯ ಶಿಲ್ಕನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿತ್ತು. ಆದರೆ ಸಿಎಜಿಯು ರಾಜ್ಯ ಸರ್ಕಾರವು ನೀಡಿದ್ದ ಈ ಉತ್ತರವನ್ನು ಒಪ್ಪಿಕೊಂಡಿಲ್ಲ.

 

ಸಿಆರ್‍‌ಐಎಫ್‌ ಕಾಯ್ದೆ  2000 ಸೆಕ್ಷನ್‌ 11ರ ಅನ್ವಯ ಕೇಂದ್ರ ಸರ್ಕಾರದ ಅಭಿಪ್ರಾಯದಲ್ಲಿ ಯಾವುದೇ ರಾಜ್ಯ ಸರ್ಕಾರ ಅಥವಾ ಯಾವುದೇ ಕೇಂದ್ರಾಡಳಿತ ಪ್ರದೇಶದ ಆಡಳಿತವು ಯಾವುದೇ ಸಮಯದಲ್ಲಿ ಸಮಂಜಸವಾದ ಕಾರಣವಿಲ್ಲದೇ ಹಂಚಿಕೆ ಅಥವಾ ಮರು -ಹಂಚಿಕೆ ಮಾಡಿದ ನಿಧಿಯ ಯಾವುದೇ ಭಾಗವನ್ನು ರಾಜ್ಯದೊಳಗಿನ ವೆಚ್ಚಕ್ಕಾಗಿ ಅನ್ವಯಿಸುವುದರಲ್ಲಿ ವಿಳಂಬಗೊಳಿಸಿದರೇ ಕೇಂದ್ರ ಸರ್ಕಾರವು ಆ ಸಮಯದಲ್ಲಿ ಆ ರಾಜ್ಯದ ವೆಚ್ಚಕ್ಕಾಗಿದ್ದ ಮೊತ್ತವನ್ನು ಒಟ್ಟು ಅಥವಾ ಭಾಗಶಃ ಹಿಂಪಡೆಯಬಹುದಾಗಿದೆ.

 

ಈ ಸನ್ನಿವೇಶದಲ್ಲಿ ರಾಜ್ಯವು ವರ್ಷದಲ್ಲಿ ಮಾಡಿದ ವೆಚ್ಚವನ್ನು ಅದೇ ವರ್ಷದಲ್ಲಿ ನಿಧಿ ಖಾತೆಗೆ ವರ್ಗಾಯಿಸಬೇಕಾಗಿತ್ತು. ಆದ್ದರಿಂದ ರಾಜ್ಯ ಸರ್ಕಾರವು ನೀಡಿರುವ ಉತ್ತರವು ಸ್ವೀಕಾರಾರ್ಹವಾಗಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.

SUPPORT THE FILE

Latest News

Related Posts