ಮುಚ್ಚಿರುವ ಎಂಪಿಎಂ ಸೇರಿ ನಷ್ಟದಲ್ಲಿರುವ ಕಂಪನಿಗಳಲ್ಲಿ 43,354.58 ಕೋಟಿ ರು ಹೂಡಿಕೆ; ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು;  ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆ ಮುಚ್ಚಿದ್ದರೂ ಸಹ ರಾಜ್ಯ ಸರ್ಕಾರವು 2023-24ರಲ್ಲಿ 237.37 ಕೋಟಿಯಷ್ಟು ಹೂಡಿಕೆ ಮಾಡಿದೆ. ಅಲ್ಲದೇ ನಷ್ಟದಲ್ಲಿರುವ ಸಾರಿಗೆ ನಿಗಮಗಳು, ವಿದ್ಯುತ್‌ ಸರಬರಾಜು ಕಂಪನಿಗಳು, ನೀರಾವರಿ ನಿಗಮಗಳ ಮೇಲೆ 2023-24ವರೆಗೆ 43,354.58 ಕೋಟಿ ರು ಹೂಡಿಕೆ ಮಾಡಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.

 

ರಾಜ್ಯ ಸರ್ಕಾರವು ಹೂಡಿಕೆ ಮಾಡಿರುವ ಈ ಕಂಪನಿಗಳು ಗಮನಾರ್ಹವಾಗಿ ನಷ್ಟವನ್ನು ಹೊಂದಿವೆ. ಆದರೂ ಈ ಕಂಪನಿಗಳು, ನಿಗಮಗಳಲ್ಲಿ ಗಣನೀಯವಾಗಿ ಹೂಡಿಕೆ ಮಾಡಿದ್ದವು. ರಾಜ್ಯದಲ್ಲಿರುವ 159  ಸಾರ್ವಜನಿಕ ಉದ್ಯಮಗಳ ಪೈಕಿ 16 ಕಂಪನಿಗಳು ಕೆಲಸವನ್ನೇ ಮಾಡುತ್ತಿಲ್ಲ. ಮತ್ತು 54 ಉದ್ಯಮಗಳು 2022-23ರಲ್ಲೇ ನಷ್ಟವನ್ನು ಅನುಭವಿಸಿವೆ. ವಿಪರೀತ ನಷ್ಟದಲ್ಲಿರುವ ಕಂಪನಿಗಳ ಮೇಲೂ ಹೂಡಿಕೆ ಮಾಡಿರುವುದನ್ನು ಸಿಎಜಿಯು ಆಕ್ಷೇಪವನ್ನೂ ಎತ್ತಿದೆ.

 

2025ರ ಆಗಸ್ಟ್‌ನಲ್ಲಿ ನಡೆದ   ಕರ್ನಾಟಕ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ಸಾರ್ವಜನಿಕ ಉದ್ಯಮಗಳ ಮೇಲಿನ ಹೂಡಿಕೆ ಅದರಲ್ಲೂ ಗಣನೀಯವಾಗಿ ನಷ್ಟವನ್ನು ಹೊಂದುತ್ತಲೇ ಇರುವ ನಿಗಮ, ಕಂಪನಿಗಳಲ್ಲಿನ ಹೂಡಿಕೆ ಪ್ರಮಾಣವನ್ನು ವಿಶ್ಲೇಷಣೆ ಮಾಡಿದೆ.

 

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 2019-20ರಲ್ಲಿ 881.55 ಕೋಟಿ ಸಂಚಿತ ನಷ್ಟವನ್ನು ಅನುಭವಿಸಿತ್ತು. 2020-21ರಲ್ಲಿ 1,068.00 ಕೋಟಿ, 2021-22ರಲ್ಲಿ 1,068 ಕೋಟಿ, 2022-23ರಲ್ಲಿ 1,919.66 ಕೋಟಿ ಸಂಚಿತ ನಷ್ಟವನ್ನು ಅನುಭವಿಸಿತ್ತು. 2023-24ರವರೆಗೆ ಈ ನಿಗಮಕ್ಕೆ 593.91 ಕೋಟಿಯಷ್ಟು ಹೂಡಿಕೆ ಮಾಡಿತ್ತು. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 2019-20ರಲ್ಲಿ 610.65 ಕೋಟಿ, 2020-21ರಲ್ಲಿ 699.92 ಕೋಟಿ, 2021-22ರಲ್ಲಿ 699.92 ಕೋಟಿ, 2022-23ರಲ್ಲಿ 1,112.19 ಕೋಟಿ ಸಂಚಿತ ನಷ್ಟವನ್ನು ಅನುಭವಿಸಿತ್ತು. ಈ ನಿಗಮದಲ್ಲಿ ಸರ್ಕಾರವು 575.76 ಕೋಟಿ ಹೂಡಿಕೆ ಮಾಡಿತ್ತು.

 

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯೂ ಸಹ 2019-20ರಲ್ಲಿ 386.17 ಕೋಟಿ, 2020-21ರಲ್ಲಿ 361.35 ಕೋಟಿ, 2021-22ರಲ್ಲಿ 318.46 ಕೋಟಿ, 2022-23ರಲ್ಲಿ 168.59 ಕೋಟಿ ಸಂಚಿತ ನಷ್ಟವನ್ನು ಹೊಂದಿತ್ತು.  2023-24ರವರೆಗೆ ಈ ಸಂಸ್ಥೆಯಲ್ಲಿ 1,383.01 ಕೋಟಿ ಹೂಡಿಕೆ ಮಾಡಿತ್ತು.

 

ಕೃಷ್ಣ ಭಾಗ್ಯ ಜಲ ನಿಗಮವು 2019-20ರಲ್ಲಿ 2,811.73 ಕೋಟಿ, 2020-21ರಲ್ಲಿ 2,946.51 ಕೋಟಿ, 2021-22ರಲ್ಲಿ 3,419.93 ಕೋಟಿ, 2022-23ರಲ್ಲಿ 34.70 ಕೋಟಿಯಷ್ಟು ಸಂಚಿತ ನಷ್ಟವನ್ನು ಅನುಭವಿಸಿತ್ತು. ಈ ನಿಗಮಕ್ಕೆ 2023-24ರ ಅವಧಿವರೆಗೆ  23,745.34 ಕೋಟಿಯಷ್ಟು ಹೂಡಿಕೆ ಮಾಡಿತ್ತು. ಅದೇ ರಿತಿ ಕರ್ನಾಟಕ ನೀರಾವರಿ ನಿಗಮದಲ್ಲಿಯೂ 2019-20ರಲ್ಲಿ 4,469.21 ಕೋಟಿ, 2020-21ರಲ್ಲಿ 5,149.92 ಕೋಟಿ, 2021-22ರಲ್ಲಿ 6,333.94 ಕೋಟಿ, 2022-23ರಲ್ಲಿ 7,512.32 ಕೋಟಿ ನಷ್ಟವನ್ನು ಹೊಂದಿತ್ತು. 2023-24ರಲ್ಲಿ ಈ ನಿಗಮದಲ್ಲಿ 13,034.03 ಕೋಟಿ ಹೂಡಿಕೆ ಮಾಡಿದೆ ಎಂದು ಸಿಎಜಿಯು ವಿವರಿಸಿದೆ.

 

 

ಮೈಷುಗರ್ಸ್‌ನಲ್ಲಿ 2019-20ರಲ್ಲಿ 2019-20ರಲ್ಲಿ 460.89 ಕೋಟಿ, 2020-21ರಲ್ಲಿ 460.89 ಕೋಟಿ, 2021-22ರಲ್ಲಿ 463.89 ಕೋಟಿ, 2022-23ರಲ್ಲಿ 504.02 ಕೋಟಿ ಸಂಚಿತ ನಷ್ಟವನ್ನು ಹೊಂದಿತ್ತು. 2023-24ರವರೆಗೆ ಈ ಕಂಪನಿಯಲ್ಲಿ ಸರ್ಕಾರವು 335.78 ಕೋಟಿ ಹೂಡಿಕೆ ಮಾಡಿದೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮುಚ್ಚಿ ಹೋಗಿರುವ ಮೈಸೂರ್‍‌ ಪೇಪರ್ಸ್‌ ಲಿಮಿಟೆಡ್‌ 2019-20ರಲ್ಲಿ 425.95 ಕೋಟಿ, 2020-21ರಲ್ಲಿ 425.95 ಕೋಟಿ, 2022-23ರಲ್ಲಿ 519.50 ಕೋಟಿ, 2022-23ರಲ್ಲಿ 51.95 ಕೋಟಿ ಸಂಚಿತ ನಷ್ಟವನ್ನು ಅನುಭವಿಸಿತ್ತು. 2023-24ರವರೆಗೆ ಈ ಕಂಪನಿಯಲ್ಲಿ ರಾಜ್ಯ ಸರ್ಕಾರವು 237.37 ಕೋಟಿಯಷ್ಟು ಹೂಡಿಕೆ ಮಾಡಿತ್ತು.

 

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯೂ ಸಹ 2019-20ರಲ್ಲಿ 1,955.76 ಕೋಟಿ ನಷ್ಟ ಹೊಂದಿತ್ತು. 2020-21ರಲ್ಲಿ 2,637.98 ಕೋಟಿ, 2021-22ರಲ್ಲಿ 5,128.24 ಕೋಟಿ, 2022-23ರಲ್ಲಿ 6,421.87 ಕೋಟಿ ನಷ್ಟ ಅನುಭವಿಸಿದೆ. 2023-24ರವರೆಗೆ ಈ ಕಂಪನಿಯಲ್ಲಿ ರಾಜ್ಯ ಸರ್ಕಾರವು 1,413.95 ಕೋಟಿಯಷ್ಟು ಹೂಡಿಕೆ ಮಾಡಿದೆ.

 

ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯೂ ಸಹ 2019-20ರಲ್ಲಿ 1,002.44 ಕೋಟಿ ನಷ್ಟ ಹೊಂದಿತ್ತು. 2020-21ರಲ್ಲಿ 1,995.03 ಕೋಟಿ, 2021-22ರಲ್ಲಿ 3,112.65 ಕೋಟಿ, 2022-23ರಲ್ಲಿ 3,101.41 ಕೋಟಿ ನಷ್ಟ ಅನುಭವಿಸಿದೆ. 2023-24ರ ಅವಧಿವರೆಗೆ ಈ ಕಂಪನಿಯಲ್ಲಿ 1,094.06 ಕೋಟಿ ಹೂಡಿಕೆ ಮಾಡಿದೆ.

 

ಹಾಗೆಯೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯು 2019-20ರಲ್ಲಿ 875.74 ಕೋಟಿ ನಷ್ಟದಲ್ಲಿತ್ತು. 2020-21ರಲ್ಲಿ 1,242.37 ಕೋಟಿ, 2021-22ರಲ್ಲಿ 1,965.56 ಕೋಟಿ, 2022-23ರಲ್ಲಿ 2,38840 ಕೋಟಿ ನಷ್ಟ ಹೊಂದಿತ್ತು. ಈ ಕಂಪನಿಯಲ್ಲಿ ರಾಜ್ಯ ಸರ್ಕಾರವು 941.37 ಕೋಟಿ ಹೂಡಿಕೆ ಮಾಡಿತ್ತು ಎಂದು ಸಿಎಜಿ ವರದಿಯು ವಿವರಿಸಿದೆ.

 

ಸರ್ಕಾರಿ ಕಂಪನಿಗಳು 2019-20ರಿಂದ 2022-23ರವರೆಗೆ ಒಟ್ಟಾರೆ 77,113.21 ಕೋಟಿಯಷ್ಟು ಸಂಚಿತ ನಷ್ಟವನ್ನು ಹೊಂದಿದ್ದವು. 2023-24ರವರೆಗೆ ರಾಜ್ಯ ಸರ್ಕಾರವು ಒಟ್ಟಾರೆ 43,354.58 ಕೋಟಿಯಷ್ಟು ಹೂಡಿಕೆ ಮಾಡಿದೆ. 23,215.11 ಕೋಟಿ ಸಂಚಿತ ನಷ್ಟದ ಪೈಕಿ ಶೇ. 51ರಷ್ಟು ನಷ್ಟವು ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ಕೊಡುಗೆಯಾಗಿದೆ. 2024ರ ಮಾರ್ಚ್‌ ಅಂತ್ಯದ ವೇಳೆಗೆ ರಾಜ್ಯ ಸರ್ಕಾರವು 44,246.81 ಕೋಟಿಗಳಿಗೆ ಖಾತರಿ ನೀಡಿತ್ತು. ಅದರಲ್ಲಿ 27,230.95 ಕೋಟಿ (ಶೇ.62) ಎಸ್ಕಾಂಗಳು ಮತ್ತು ಕರ್ನಾಟಕ ವಿದ್ಯುತ್ ನಿಗಮಗಳ ಸಾಲಕ್ಕೆ ಸಂಬಂಧಿಸಿದ್ದವು ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ.

 

ಕಂಪನಿಗಳು, ನಿಗಮಗಳು ಮತ್ತು ಸಹಕಾರ ಸಂಸ್ಥೆಗಳಲ್ಲಿ ಹೂಡಿಕೆ ಜತೆಗೆ ಸರ್ಕಾರವು ಅನೇಕ ಸಂಸ್ಥೆಗಳಿಗೆ ಸಾಲ ಮತ್ತು ಮುಂಗಡಗಳನ್ನೂ ಒದಗಿಸಿತ್ತು. 2024ರ ಮಾರ್ಚ್‌ 31ರ ಅಂತ್ಯಕ್ಕೆ ಒಟ್ಟು 42,268 ಕೋಟಿ ಸಾಲವು ಬಾಕಿ ಉಳಿದಿತ್ತು. ಇದೇ ಅವಧಿಗೆ 7,580.09 ಕೋಟಿ ಬಡ್ಡಿಯೂ ಬಾಕಿ ಇತ್ತು. 2023-24ರಲ್ಲಿ ಪಡೆದ ಬಡ್ಡಿಯ ಮೊತ್ತವು 479 ಕೋಟಿಯಷ್ಟಿತ್ತು.

 

 

2023-24ರಲ್ಲಿ ಒಟ್ಟು 4,473 ಕೋಟಿ ಸಾಲ ನೀಡಿತ್ತು. ಸಾಮಾಜಿಕ ಸೇವೆಗಳಿಗೆ 3,078 ಕೋಟಿ, ಆರ್ಥಿಕ ಸೇವೆಗಳಿಗೆ 1,380 ಕೋಟಿ, ಉಳಿದ 15 ಕೋಟಿ ಸರ್ಕಾರಿ ನೌಕರಿಗೆ ಸಂಬಂಧಿಸಿವೆ. ಸಾಮಾಜಿಕ ಸೇವೆಗಳ ವಲಯದಲ್ಲಿ, ನೀರು ಸರಬರಾಜು, ನೈರ್ಮಲ್ಯ, ವಸತಿ ಮತ್ತು ನಗರಾಭಿವೃದ್ಧಿಯ 3,078 ಕೋಟಿಯು ಪ್ರಮುಖ ಪಾಲನ್ನು ಪಡೆದಿದೆ. ಕೈಗಾರಿಕೆ ಮತ್ತು ಖನಿಜಗಳಿಗೆ 1,001 ಕೋಟಿ ಸಾಲ ನೀಡಿದೆ.

 

2019-20ರಲ್ಲಿ 24,981 ಕೋಟಿ, 2020-21ರಲ್ಲಿ 28,847 ಕೋಟಿ, 2021-22ರಲ್ಲಿ 31,247 ಕೋಟಿ, 2022-23ರಲ್ಲಿ 35,329 ಕೋಟಿ, 2023-24ರಲ್ಲಿ 38,101 ಕೋಟಿ ಸಾಲಗಳು ಬಾಕಿ ಉಳಿದಿತ್ತು. ಅಲ್ಲದೇ ಇದೇ ಅವಧಿಯಲ್ಲಿ ಒಟ್ಟಾರೆ 18,670 ಕೋಟಿಯಷ್ಟು ಮುಂಗಡ ನೀಡಿತ್ತು. ಈ ಪೈಕಿ ಕೇವಲ 1,384 ಕೋಟಿಯಷ್ಟು ಮಾತ್ರ ವಸೂಲಿ ಮಾಡಿತ್ತು.

 

ಬಾಕಿ ಉಳಿದ ಸಾಲದ ಮೊತ್ತವು 2019-29ರಲ್ಲಿ 28,847 ಕೋಟಿ, 2020-21ರಲ್ಲಿ 31,246 ಕೋಟಿ, 2021-22ರಲ್ಲಿ 35,329 ಕೋಟಿ,  2022-23ರಲ್ಲಿ 38,101 ಕೋಟಿ, 2023-24ರಲ್ಲಿ 42,268 ಕೋಟಿ ಇತ್ತು ಎಂದು ಸಿಎಜಿಯು ಅಂಕಿ ಅಂಶಗಳನ್ನು ವರದಿಯಲ್ಲಿ ನೀಡಿದೆ.

SUPPORT THE FILE

Latest News

Related Posts