ಬಡ್ಡಿ ಪಾವತಿ ಮೊತ್ತ 31,872 ಕೋಟಿಗೆ ಏರಿಕೆ, ಒಂದೇ ವ‍ರ್ಷದಲ್ಲಿ ಬೊಕ್ಕಸಕ್ಕೆ 11,969 ಕೋಟಿ ಬಡ್ಡಿ ಹೊರೆ

ಬೆಂಗಳೂರು;  ಕೇಂದ್ರ ಸರ್ಕಾರದಿಂದ ಪಡೆದ ಸಾಲ, ಮುಂಗಡಗಳ ಮೇಲಿನ ಬಡ್ಡಿ, ಆಯವ್ಯಯದ ಹೊರಗಿನ ಸಾಲಗಳ ಮೇಲಿನ ಬಡ್ಡಿ, ಮೀಸಲು ನಿಧಿಗಳ ಮೇಲಿನ ಬಡ್ಡಿ ಹಾಗೂ ಇತರ ಬಾಧ್ಯತೆಗಳ ಮೇಲಿನ ಬಡ್ಡಿ ಸೇರಿದಂತೆ ಒಟ್ಟಾರೆ ಬಡ್ಡಿ ಪಾವತಿಯು 31,872 ಕೋಟಿಗೆ ಏರಿಕೆಯಾಗಿದೆ ಎಂದು ಸಿಎಜಿ ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿದೆ.

 

2019-20ಕ್ಕೆ ಹೋಲಿಸಿದರೆ 2023-24ರ ಒಂದೇ ವರ್ಷದಲ್ಲಿ ಶೇ. 60ರಷ್ಟು ಅಂದರೇ 11,969 ಕೋಟಿಯಷ್ಟು ಹೆಚ್ಚಾಗಿರುವುದನ್ನು ಲೆಕ್ಕ ಪರಿಶೋಧನೆ ವರದಿಯು ವಿವರಿಸಿದೆ.

 

ಅಲ್ಲದೇ ರಾಜ್ಯದಲ್ಲಿ   ನಗರಾಭಿವೃದ್ಧಿ, ರಸ್ತೆಗಳು, ಸೇತುವೆಗಳು, ರಸ್ತೆ ಸಾರಿಗೆ ಮತ್ತು ಮಧ್ಯಮ ನೀರಾವರಿ ವಲಯದಲ್ಲಿ ಬಂಡವಾಳ ವೆಚ್ಚವು 2023-24ರಲ್ಲಿ ಇಳಿಕೆಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸುವುದರಲ್ಲೇ ಏದುಸಿರುಬಿಟ್ಟಿದ್ದರ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ, ರಸ್ತೆ, ಸೇತುವೆಗಳು, ರಸ್ತೆ ಸಾರಿಗೆ, ಮಧ್ಯಮ ನೀರಾವರಿ ವಲಯದಲ್ಲಿ ಬಂಡವಾಳ ವೆಚ್ಚವನ್ನು ಕಡಿಮೆ ಮಾಡಿರುವ ಸಾಧ್ಯತೆ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

2025ರ ಆಗಸ್ಟ್‌ನಲ್ಲಿ ನಡೆದ  ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ಬಡ್ಡಿ ಪಾವತಿಗಳ ಮೇಲೆ ವಿಶ್ಲೇಷಣೆ ನಡೆಸಿದೆ.

 

2019-20ರಲ್ಲಿ ಬಡ್ಡಿ ಪಾವತಿಯು  19,903 ಕೋಟಿಗಳಷ್ಟಿದೆ. 2023-24ರಲ್ಲಿ 31,872 ಕೋಟಿಗೆ ಏರಿಕೆಯಾಗಿದೆ. ಶೇ.60ರಷ್ಟು ಎಂದರೇ 11,969 ಕೋಟಿಯಷ್ಟು ಹೆಚ್ಚಾಗಿದೆ. 2023-24ರಲ್ಲಿನ ಬಡ್ಡಿ ಪಾವತಿಗಳು ಆಂತರಿಕ ಸಾಲದ ಮೇಲಿನ ಬಡ್ಡಿ ಅಂದರೇ 26,398 ಕೋಟಿ, ಸಣ್ಣ ಉಳಿತಾಯ, ಭವಿಷ್ಯ ನಿಧಿ ಇತ್ಯಾದಿಗಳ ಮೇಲಿನ ಬಡ್ಡಿ 3,550 ಕೋಟಿ, ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳ ಮೇಲಿನ ಬಡ್ಡಿ 845 ಕೋಟಿ, ಆಯವ್ಯಯದ ಹೊರಗಿನ ಸಾಲಗಳ ಮೇಲಿನ ಬಡ್ಡಿ 1,046 ಕೋಟಿ, ಮೀಸಲು ನಿಧಿಗಳ ಮೇಲಿನ ಬಡ್ಡಿ 28 ಕೋಟಿ ಮತ್ತು ಇತರ ಬಾಧ್ಯತೆಗಳ ಮೇಲಿನ ಬಡ್ಡಿ 5 ಕೋಟಿಯನ್ನೂ ಇದು ಒಳಗೊಂಡಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಆಂತರಿಕ ಸಾಲದ ಮೇಲಿನ ಬಡ್ಡಿಯು 2022-23ರಲ್ಲಿ 24,743 ಕೋಟಿಯಷ್ಟಿತ್ತು. 2023-24ರಲ್ಲಿ 26,398 ಕೋಟಿಯಾಗಿದೆ. ಇದು ಶೇ.6.69ರಷ್ಟಿದೆ. ಇದು ಕೂಡ ಮಾರುಕಟ್ಟೆ ಸಾಲದ ಮೇಲಿನ ಬಡ್ಡಿ ಪಾವತಿಯಲ್ಲಿ 1,730 ಕೋಟಿಗಳಷ್ಟು ಹೆಚ್ಚಳದಿಂದಾಗಿದೆ. ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳ ಮೇಲಿನ ಬಡ್ಡಿಯು ಸಹ 2022-23ರಲ್ಲಿದ್ದಕ್ಕಿಂತಲೂ ಹೆಚ್ಚಾಗಿದೆ. ಅದು 517 ಕೋಟಿಯಿಂದ 2023-24ರಲ್ಲಿ 845 ಕೋಟಿಗಳಿಗೆ ಅಂದರೇ 329 ಕೋಟಿ ರುಪಾಯಿಗೆ ಹೆಚ್ಚಾಗಿದೆ ಎಂದು ಸಿಎಜಿಯು ವಿಶ್ಲೇಷಿಸಿದೆ.

 

ಅದೇ ರೀತಿ ರಾಜ್ಯದ ಬಂಡವಾಳ ವೆಚ್ಚದಲ್ಲಿಯೂ ಕಡಿಮೆಯಾಗುತ್ತಿದೆ. 2019-20ರಲ್ಲಿ 35,530 ಕೋಟಿ ಇತ್ತು. 2023-24ರಲ್ಲಿ 52,120 ಕೋಟಿಗೆ ಏರಿಕೆಯಾಗಿದೆ. 2023-24ರ ಅವಧಿಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೇ (57,349 ಕೋಟಿ) ಬಂಡವಾಳ ವೆಚ್ಚವು 5,229 ಕೋಟಿಗಳಷ್ಟು ಕಡಿಮೆಯಾಗಿದೆ.  2021-22 ಮತ್ತು 2022-23ರ ಹೊರತುಪಡಿಸಿ ಎಲ್ಲಾ ವ‍ರ್ಷಗಳಲ್ಲಿ ನೈಜ ವೆಚ್ಚವು ಅಂದಾಜು  ಬಂಡವಾಳ ವೆಚ್ಚಕ್ಕಿಂತ ಕಡಿಮೆಯಾಗಿದೆ. 2020-21ರಿಂದ ಬಂಡವಾಳ ವೆಚ್ಚಕ್ಕಾಗಿ ಕೇಂದ್ರ ಸರ್ಕಾರವು ಬಡ್ಡಿ ರಹಿತ ಸಾಲ ಒದಗಿಸಿದ ಕಾರಣ ಬಂಡವಾಳ ವೆಚ್ಚದಲ್ಲಿ ಹೆಚ್ಚಳವಾಗಿದೆ.  2020-21 ರಿಂದ ರಾಜ್ಯವು 8,035 ಕೋಟಿಗಳನ್ನು ಸ್ವೀಕರಿಸಿದೆ.

 

 

ರಸ್ತೆ ಮತ್ತು ಸೇತುವೆಗಳ ಮೇಲಿನ ಬಂಡವಾಳ ವೆಚ್ಚವು 2022-23ರಲ್ಲಿ 12,706.29 ಕೋಟಿ ಇತ್ತು. 2023-24ರಲ್ಲಿ 8,760.80 ಕೋಟಿ ವೆಚ್ಚವಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೇ 3,945.49 ಕೋಟಿಯಷ್ಟು ಇಳಿಕೆಯಾಗಿದೆ. ಅದೇ ರೀತಿ ಮಧ್ಯಮ ನೀರಾವರಿ ಮೇಲಿನ ಬಂಡವಾಳ ವೆಚ್ಚವು 2022-23ರಲ್ಲಿ 17,989.46 ಕೋಟಿ ಇತ್ತು. 2023-24ರಲ್ಲಿ 14,655.02 ಕೋಟಿಗೆ ಇಳಿದಿದೆ. ಅಂದರೇ ಈ ವಿಭಾಗದಲ್ಲಿ 3,334.44 ಕೋಟಿಗೆ ಇಳಿದಿದೆ. ನಗರಾಭಿವೃದ್ದಿ ಮೇಲಿನ ಬಂಡವಾಳ ವೆಚ್ಚವು 2022-23ರಲ್ಲಿ 5,818.39 ಕೋಟಿ ಇತ್ತು. 2023-24ರಲ್ಲಿ ಕೇವಲ 297.50 ಕೋಟಿ ವೆಚ್ಚ ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೇ 5,520.89 ಕೋಟಿ ಕಡಿಮೆಯಾಗಿದೆ.

 

ಲೋಕೋಪಯೋಗಿ ಕಾಮಗಾರಿಗಳ ಮೇಲಿನ ಬಂಡವಾಳ ವೆಚ್ಚವು 2022-23ರಲ್ಲಿ 1,037.07 ಕೋಟಿ ಇತ್ತು. 2023- 24ರಲ್ಲಿ 2,338.95 ಕೋಟಿಗೆ ಏರಿದೆ. ನೀರು ಸರಬರಾಜು ಮತ್ತು ನೈರ್ಮಲ್ಯದ ಮೇಲಿನ ಬಂಡವಾಳ ವೆಚ್ಚವು 2022-23ರಲ್ಲಿ 911.92 ಕೋಟಿ ಇತ್ತು. 2023-24ರಲ್ಲಿ 5,981.22 ಕೋಟಿಗೆ ಏರಿಕೆಯಾಗಿದೆ. ಇತರೆ ಸಾಮಾನ್ಯ ಆರ್ಥಿಕ ಸೇವೆಗಳ ಮೇಲಿನ ಬಂಡವಾಳ ವೆಚ್ಚವು 2022-23ರಲ್ಲಿ 70.59 ಕೋಟಿ ಇದ್ದರೇ 2023-24ರಲ್ಲಿ 3,597.69 ಕೋಟಿಗೆ ಏರಿಕೆಯಾಗಿದೆ.

 

ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯದ ಮೇಲಿನ ಬಂಡವಾಳ ವೆಚ್ಚವು 2022-23ರಲ್ಲಿ 1,230.26 ಕೋಟಿ ಇದ್ದರೇ 2023-24ರಲ್ಲಿ 1,113.82 ಕೋಟಿಗೆ ಇಳಿದಿದೆ ಎಂದು ಸಿಎಜಿ ವರದಿಯಲ್ಲಿ ಅಂಕಿ ಅಂಶಗಳ ಸಮೇತ ವಿವರಿಸಲಾಗಿದೆ.

 

 

ನಗರಾಭಿವೃದ್ಧಿ, ರಸ್ತೆಗಳು, ಸೇತುವೆಗಳು, ರಸ್ತೆ ಸಾರಿಗೆ ಮತ್ತು ಮಧ್ಯಮ ನೀರಾವರಿ ವಲಯದಲ್ಲಿ ಬಂಡವಾಳ ವೆಚ್ಚವು ಇಳಿಕೆಯಾಗಿತ್ತು. ‘ವಿಶೇಷವಾಗಿ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಮೂಲಸೌಕರ್ಯ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬಂಡವಾಳ ಹೂಡಿಕೆ ಮಾಡುವಲ್ಲಿ ಪ್ರಾಥಮಿಕ ಪಾತ್ರವನ್ನು ಹೊಂದಿದೆ ಎಂದು ಒಪ್ಪಿಕೊಂಡಿದ್ದರೂ ಸಹ ರಸ್ತೆಗಳು, ಸೇತುವೆಗಳು, ನಗರಾಭಿವೃದ್ದಿ ಮತ್ತು ಆರೋಗ್ಯದ ಅಡಿಯಲ್ಲಿ ಬಂಡವಾಳ ವೆಚ್ಚವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಿದೆ,’ ಎಂದು ವಿಶ್ಲೇಷಣೆ ಮಾಡಿರುವುದು ತಿಳಿದು ಬಂದಿದೆ.

 

‘ಸರ್ಕಾರವು ತನ್ನ ವಿತ್ತೀಯ ಕೊರತೆಯನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳಬೇಕಿದೆ. ಆದರೂ ತನ್ನ ಬಂಡವಾಳ ವೆಚ್ಚ/ಹೂಡಿಕೆ (ಸಾಲಗಳು ಮತ್ತು ಮುಂಗಡಗಳು ಸೇರಿದಂತೆ) ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ನಿರೀಕ್ಷಿಸಿದೆ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರವು ಸಾಲಗಳು ಪಡೆದ ನಿಧಿಯ ವೆಚ್ಚದಲ್ಲಿ ಸಹಾಯಧನ ರೂಪದಲ್ಲಿ ತನ್ನ ಹೂಡಿಕೆ ಮೇಲೆ ಸಾಕಷ್ಟು ಲಾಭಗಳನ್ನು ಗಳಿಸುವ ಕ್ರಮಗಳನ್ನು ಪ್ರಾರಂಭಿಸಬೇಕು. ಮತ್ತು ಹಣಕಾಸಿನ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಯನ್ನು ತುಂಬಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು,’ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿದೆ.

SUPPORT THE FILE

Latest News

Related Posts