ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ನೀರಾವರಿ ನಿಗಮ ಸೇರಿದಂತೆ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಮತ್ತು ನಿಗಮಗಳು ಗಳಿಸಿದ್ದ ಬಡ್ಡಿಯ ಮೊತ್ತವಾದ 14,549.91 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ ಜಮೆ ಮಾಡಿರಲಿಲ್ಲ.
ಬಿಜೆಪಿ ಅವಧಿಯಲ್ಲಿ 13,632.41 ಕೋಟಿ ರು ಇದ್ದರೇ ಕಾಂಗ್ರೆಸ್ ಸರ್ಕಾರದ (2023-24) ಅವಧಿಯಲ್ಲಿಯೇ 917.50 ಕೋಟಿ ರು ಗಳನ್ನು ಸರ್ಕಾರಕ್ಕೆ ಜಮೆಯಾಗಿರಲಿಲ್ಲ ಎಂಬುದನ್ನು ಪ್ರಧಾನ ಮಹಾಲೇಖಪಾಲರು (ಸಿಎಜಿ) ಲೆಕ್ಕ ಪರಿಶೋಧನೆಯಿಂದ ಪತ್ತೆ ಹಚ್ಚಿದ್ದಾರೆ.
ಎಲ್ಲಾ ನಿಗಮಗಳು, ಕಂಪನಿಗಳೂ, ಸ್ವಾಯತತ ಸಂಸ್ಥೆಗಳು ಸರ್ಕಾರಿ ನಿಧಿಗಳ ಮೇಲೆ ಅಪಾರ ಪ್ರಮಾಣದಲ್ಲಿ ಬಡ್ಡಿ ಹಣ ಗಳಿಸಿದ್ದವು. ಈ ಬಡ್ಡಿಯನ್ನು 0049 ಬಡ್ಡಿ ಸ್ವೀಕೃತಿಗಳ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಬೇಕಿತ್ತು. ನಂತರ ಸರ್ಕಾರಿ ಖಾತೆಗೆ ಪಾವತಿಸಬೇಕು ಎಂದು ಆರ್ಥಿಕ ಇಲಾಖೆಯು ಆದೇಶದ ಮೂಲಕ ನಿರ್ದೇಶನ ನೀಡಿತ್ತು. ಅಲ್ಲದೇ ಗಳಿಸಿದ್ದ ಬಡ್ಡಿ ಹಣವನ್ನು ಸಂಸ್ಥೆಗಳು ಇತರೆ ಯಾವುದೇ ವೆಚ್ಚಗಳಿಗೆ ಬಳಸಲು ಅವಕಾಶವಿಲ್ಲ ಎಂದೂ ಹೇಳಿತ್ತು. ಈ ಸಂಬಂಧ 2019ರಲ್ಲಿ ಸುತ್ತೋಲೆ ಮೂಲಕವೂ ಸೂಚಿಸಿತ್ತು.
ಆದರೆ ರಾಜ್ಯದ ಸಾರ್ವಜನಿಕ ನಿಗಮಗಳು, ಕಂಪನಿಗಳು ಮತ್ತು ಸ್ವಾಯತ್ತ ಸಂಸ್ಥೆಗಳು ಈ ನಿರ್ದೇಶನವನ್ನು ಪಾಲಿಸಿರಲಿಲ್ಲ. ಹೀಗಾಗಿ ರಾಜ್ಯದಲ್ಲಿ ತೆರಿಗೆಯೇತರ ಆದಾಯವು ಹೆಚ್ಚಳಗೊಂಡಿರಲಿಲ್ಲ. ನಿಗಮಗಳ ಈ ಧೋರಣೆಯನ್ನು ಪ್ರಧಾನ ಮಹಾಲೇಖಪಾಲರು ಬಹಿರಂಗಗೊಳಿಸಿದ್ದಾರೆ. ವಿಧಾನಮಂಡಲದ ಅಧಿವೇಶನದಲ್ಲಿ 2025ರ ಆಗಸ್ಟ್ 19ರಂದು ಈ ವರದಿಯು ಮಂಡನೆಯಾಗಿದೆ.
ಸರ್ಕಾರವು ಕಂಪನಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಸೇರಿದಂತೆ ಶಾಸನಬದ್ಧ ಮಂಡಳಿಗಳು ಮತ್ತು ಪ್ರಾದೇಶಿಕ ಸೊಸೈಟಿಗಳಿಗೆ ಷೇರು ಬಂಡವಾಳ, ಅನುದಾನ, ಸಹಾಯಧನ, ವೆಚ್ಚಗಳ ಮರು ಪಾವತಿ, ಸಾಲಗಳು ಮತ್ತು ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತದೆ. ಹೀಗೆ ಸರ್ಕಾರಿ ನಿಧಿಗಳ ಮೇಲೆ ಈ ನಿಗಮಗಳು ಬಡ್ಡಿ ಗಳಿಸುತ್ತವೆ. ಈ ಬಡ್ಡಿ ಹಣವನ್ನು ಸರ್ಕಾರಕ್ಕೆ ಜಮೆ ಮಾಡಬೇಕು. ಆದರೆ ಈ ನಿಗಮಗಳು ಬಡ್ಡಿ ಹಣವನ್ನು ಸರ್ಕಾರಕ್ಕೆ ಜಮೆ ಮಾಡಿರಲಿಲ್ಲ.
‘ಕಂಪನಿಗಳು, ನಿಗಮಗಳು ಆರ್ಥಿಕ ಇಲಾಖೆಯ ಸೂಚನೆಗಳಿಗೆ ವ್ಯತಿರಿಕ್ತವಾಗಿ ಗಳಿಸಿದ ಬಡ್ಡಿಯ ಮೊತ್ತವಾದ 14,549.91 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ ಜಮೆ ಮಾಡಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಯಿತು. ಇದರಲ್ಲಿ ಶೇ. 97.60ರಷ್ಟು ಐದು ಕಂಪನಿಗಳು, ನಿಗಮಗಳಿಗೆ ಸಂಬಂಧಿಸಿದೆ. ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಕರ್ನಾಟಕ ನೀರಾವರಿ ನಿಗಮ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವೂ ಸಹ ಸೇರಿದೆ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಎಲ್ಲಾ ನಿಗಮಗಳು 2023-24ರವರೆಗಿನ ಅವಧಿಯಲ್ಲಿ ಬಡ್ಡಿ ಗಳಿಸಿತ್ತು. ಇದರ ವಿವರಗಳನ್ನೂ ಸಿಎಜಿ ವರದಿಯಲ್ಲಿ ನೀಡಿದೆ.
ಯಾದಗಿರಿ ಹೆಚ್ಚುವರಿ ಉಪ ಆಯಕ್ತರು ಹೆಸರಿನಲ್ಲಿ 4.49 ಕೋಟಿ, ಮಾಗಡಿ ತಹಶೀಲ್ದಾರ್ ಹೆಸರಿನಲ್ಲಿ 3.63 ಲಕ್ಷ, ಪುತ್ತೂರು ಸಹಾಯಕ ಆಯುಕ್ತರ ಹೆಸರಿನಲ್ಲಿ 6.27 ಕೋಟಿ, ಗದಗ್ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಹೆಸರಿನಲ್ಲಿ 1.55 ಕೋಟಿ, ಕರ್ನಾಟಕ ಹಿಂದುಳಿದ ವರ್ಗಗಳ ಇಲಾಖೆ ಕಟ್ಟಡ ನಿರ್ಮಾಣ ಸಂಘದ ಹೆಸರಿನಲ್ಲಿ 9.28 ಕೋಟಿ, ಹಿಂದುಳಿದ ವರ್ಗಗಳ ಇಲಾಖೆಯ ಮೈಸೂರು ಜಿಲ್ಲಾ ಅಧಿಕಾರಿ ಹೆಸರಿನಲ್ಲಿ 87.11 ಲಕ್ಷ, ಕೊಪ್ಪಳ ಜಿಲ್ಲಾ ಅಧಿಕಾರಿ ಹೆಸರಿನಲ್ಲಿ 5.45 ಲಕ್ಷ, ಯಾದಗಿರಿ ಜಿಲ್ಲಾ ಅಧಿಕಾರಿ ಹೆಸರಿನಲ್ಲಿ 1.66 ಕೋಟಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಹೆಸರಿನಲ್ಲಿ 15.26 ಲಕ್ಷ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಹೆಸರಿನಲ್ಲಿ 10.82 ಲಕ್ಷ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ 12.91 ಲಕ್ಷ, ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ 68.94 ಲಕ್ಷ ರು ಬಡ್ಡಿ ಗಳಿಸಿತ್ತು.
ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಸಹಾಯಕ ಆಡಳಿತಾಧಿಕಾರಿ 3.71 ಲಕ್ಷ, ಅಲ್ಪಸಂಖ್ಯಾತರ ಇಲಾಖೆಯ ಯಾದಗಿರಿ ಜಿಲ್ಲಾ ಅಧಿಕಾರಿ ಹೆಸರಿನಲ್ಲಿ 84.26 ಲಕ್ಷ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಸಿಇಒ 50.47 ಲಕ್ಷ, ಬೆಳ್ತಂಗಡಿ ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಸರಿನಲ್ಲಿ 10.20 ಲಕ್ಷ, ಮಂಗಳೂರು ಆರ್‍ಡಿಡಬ್ಲ್ಯೂಎಸ್‌ಡಿಯ ಕಾರ್ಯನಿರ್ವಾಹಕ ಅಧಿಕಾರಿ ಹೆಸರಿನಲ್ಲಿ 37.35 ಲಕ್ಷ, ಪಂಚಾಯತ್‌ರಾಜ್ ಚಿತ್ರದುರ್ಗದ ಇಇ ಹೆಸರಿನಲ್ಲಿ 95.99 ಲಕ್ಷ, ರಾಯಚೂರು ಜಿಲ್ಲಾ ಪಂಚಾಯತ್‌ನ ಸಿಇಒ ಹೆಸರಿನಲ್ಲಿ 78.52 ಲಕ್ಷ, ಬೀದರ್ ಜಿಲ್ಲಾಪಂಚಾಯ್ತಿ ಸಿಇಒ ಹೆಸರಿನಲ್ಲಿ 98.06 ಲಕ್ಷ ರು ಬಡ್ಡಿ ಸಂಪಾದಿಸಿತ್ತು.
ರಾಣೆಬೆನ್ನೂರು ತಾಲೂಕು ಪಂಚಾಯ್ತಿ ಇಒ ಹೆಸರಿನಲ್ಲಿ 0.46 ಲಕ್ಷ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ 4.35 ಲಕ್ಷ, ಕರ್ನಾಟಕ ರಾಜ್ಯ ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಗಮ 6.51 ಕೋಟಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ 9.08 ಕೋಟಿ, ಗುಲ್ಬರ್ಗ ವಿದ್ಯುತ್ ಸರಬರಾಜು ನಿಗಮ 3.56 ಕೋಟಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ 68.00 ಲಕ್ಷ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 2.25 ಕೋಟಿ, ತುಮಕೂರು ಕೈಗಾರಿಕೆ ಪಟ್ಟಣ ನಿಯಮಿತ 4.36 ಕೋಟಿ, ಕರ್ನಾಟಕ ರಾಜ್ಯ ಜವಳಿ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ 2.09 ಕೋಟಿ, ಅರಣ್ಯ ವಸತಿ, ವಿಹಾರ ಧಾಮಗಳು ನಿಯಮಿತ 2.20 ಕೋಟಿ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ 1.07 ಕೋಟಿ, ಕರ್ನಾಟಕ ಆಹಾರ ನಿಯಮಿತ 1.69 ಕೋಟಿ ರು ಮೊತ್ತದಷ್ಟು ಬಡ್ಡಿ ಹಣ ಗಳಿಸಿತ್ತು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ 1.95 ಕೋಟಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ 3.45 ಕೋಟಿ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣ ಮತ್ತು ರಫ್ತು ನಿಗಮ 2.21 ಕೋಟಿ, ವಿಶ್ವೇಶ್ವರಯ್ಯ ಜಲ ನಿಗಮ 143 ಕೋಟಿ, ಕರ್ನಾಟಕ ರಾಜ್ಯ ಅಂತರಗಂಗ ಸೂಕ್ಷ್ಮ ನೀರಾವರಿ ನಿಗಮ 33.60 ಲಕ್ಷ, ಕರ್ನಾಟಕ ನೀರಾವರಿ ನಿಗಮ 1,264.78 ಕೋಟಿ, ಅಂತರರಾಷ್ಟ್ರೀಯ ಹೂವು ಹರಾಜು ನಿಯಮಿತ 33.00 ಲಕ್ಷ, ರಸ್ತೆ ಸಾರಿಗೆ ನಿಗಮ ಮತ್ತು ಬಿಎಂಟಿಸಿ 17.59 ಕೋಟಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ 11,850.15 ಕೋಟಿ, ಪ್ರವಾಸೋದ್ಯಮ ಇಲಾಖೆ ಕೋಲಾರ ಜಿಲ್ಲೆ ಹೆಸರಿನಲ್ಲಿ 1.72 ಕೋಟಿ ರು ಬಡ್ಡಿ ಗಳಿಸಿತ್ತು.
ಬೆಂಗಳೂರು ನಗರ ಪ್ರವಾಸೋದ್ಯಮ ಉಪ ನಿರ್ದೇಶಕರ ಹೆಸರಿನಲ್ಲಿ 2.58 ಕೋಟಿ, ಮೈಸೂರು ಜಿಲ್ಲೆ ಉಪ ನಿರ್ದೇಶಕರ ಹೆಸರಿನಲ್ಲಿ 3.04 ಕೋಟಿ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಕಂಪನಿ 5.45 ಕೋಟಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ 30.46 ಕೋಟಿ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ 55.85 ಲಕ್ಷ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ 25.23 ಕೋಟಿ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ 20.19 ಲಕ್ಷ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ 108.20 ಕೋಟಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ 17.05 ಕೋಟಿ, ಕರ್ನಾಟಕ ಸಾರ್ವಜನಿಕ ಭೂಮಿ ನಿಗಮ 7.39 ಕೋಟಿ, ಬೆಳಗಾವಿ ಸ್ಮಾರ್ಟ್ ಸಿಟಿ 2.73 ಕೋಟಿ ರು ಬಡ್ಡಿ ಗಳಿಸಿತ್ತು.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ 834.05 ಕೋಟಿ, ದಾವಣಗೆರೆ ಸ್ಮಾರ್ಟ್ ಸಿಟಿ 3.02 ಕೋಟಿ, ಬೆಂಗಳೂರು ಸ್ಮಾರ್ಟ್ ಸಿಟಿ 23.18 ಕೋಟಿ, ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ 14.49 ಕೋಟಿ, ತುಮಕೂರು ಸ್ಮಾರ್ಟ್ ಸಿಟಿ 54.63 ಕೋಟಿ, ಕರ್ನಾಟಕ ಔದ್ಯೋಗಿಕ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ 16.37 ಕೋಟಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ 25.46 ಕೋಟಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ 24.55 ಕೋಟಿ ರು. ಸೇರಿ 14, 549.91 ಕೋಟಿ ರು. ಮೊತ್ತದ ಬಡ್ಡಿ ಹಣವನ್ನು ಗಳಿಸಿತ್ತು ಎಂದು ಸಿಎಜಿ ಪಟ್ಟಿಯನ್ನು ವರದಿಯಲ್ಲಿ ಒದಗಿಸಿರುವುದು ತಿಳಿದು ಬಂದಿದೆ.
‘ಸರ್ಕಾರವು ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಅನುದಾನದ ಮೇಲೆ ಗಳಿಸಿದ ಬಡ್ಡಿಯನ್ನು ಸರ್ಕಾರದ ಖಾತೆಗಳಿಗೆ ಪಾವತಿಸಲು ಕ್ರಮಕೈಗೊಳ್ಳಬೇಕು. ಇದು ರಾಜ್ಯದ ತೆರಿಗೆಯೇತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ,’ ಎಂದು ಸಿಎಜಿ ವರದಿಯು ಅಭಿಪ್ರಾಯಪಟ್ಟಿದೆ.