ಬೆಂಗಳೂರು; ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಒಟ್ಟು ಐದು ಗ್ಯಾರಂಟಿ ಯೋಜನೆಗಳಿಗೆ ಪ್ರತೀ ವರ್ಷವೂ ಅಗಾಧ ಮೊತ್ತವನ್ನು ಹೊಂದಿಸುವುದು ಅಸಾಧ್ಯ ಎಂದು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿದ್ದರಿಂದಾಗಿಯೇ ರಾಜ್ಯದ ಮೂಲ ಸೌಕರ್ಯಕ್ಕಾಗಿ ಬಂಡವಾಳ ವೆಚ್ಚವನ್ನು ಕಡಿಮೆ ಮಾಡಿದೆ. ಅಲ್ಲದೇ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಮತ್ತು ಇದರಿಂದ ಉಂಟಾದ ಕೊರತೆಗಳಿಗೆ ಹಣಕಾಸು ಒದಗಿಸಲು 63,000 ಕೋಟಿಗಳಷ್ಟು ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿರುವುದನ್ನು ಸಿಎಜಿ ವರದಿಯು ಬಹಿರಂಗಪಡಿಸಿದೆ.
ಹಾಗೆಯೇ 2023-24ರ ಅವಧಿಯಲ್ಲಿ ರಾಜ್ಯವು ಪಡೆದ ಸಾರ್ವಜನಿಕ ಸಾಲವು ಹಿಂದಿನ ವರ್ಷಕ್ಕಿಂತ 67,828 ಕೋಟಿಗಳಷ್ಟು ಅಧಿಕವಾಗಿ ಅಂದರೇ 4,03,033 ಕೋಟಿಗಳಿಂದ 4,70,861 ಕೋಟಿಗಳಿಗೆ ಏರಿಕೆಯಾಗಿರುವುದರ ಕುರಿತು ವಿವರಿಸಿದೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿಯೇ ತಲಾ ಆದಾಯ ಹೆಚ್ಚಿದೆ. ಮಹಿಳಾ ಸಬಲೀಕರಣವಾಗಿದೆ ಮತ್ತು ಶಕ್ತಿ ಯೋಜನೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಹೆಮ್ಮೆಯಿಂದ ಬೀಗಿತ್ತು. ಹಾಗೆಯೇ ಕೇಂದ್ರ ಸರ್ಕಾರವು ಮಾಡಿರುವ ಸಾರ್ವಜನಿಕ ಸಾಲದ ಕುರಿತು ಕಾಂಗ್ರೆಸ್ ಧುರೀಣರು ಟೀಕಿಸಿದ್ದರು. ಈ ಬೆಳವಣಿಗೆಗಳ ನಡುವೆಯೇ ಸಿಎಜಿಯು ಬಹಿರಂಗಪಡಿಸಿರುವ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಉಂಟಾಗಿರುವ ಆರ್ಥಿಕ ಪರಿಣಾಮಗಳು ಮತ್ತು ಏರಿಕೆಯಾಗಿರುವ ಸಾರ್ವಜನಿಕ ಸಾಲದ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
ವಿಧಾನಮಂಡಲದ ಉಭಯ ಸದನಗಳಲ್ಲಿ ಸಿಎಜಿಯು ಇಂದು ರಾಜ್ಯದ ಹಣಕಾಸಿನ ವ್ಯವಹಾರಗಳ ಮೇಲಿನ ಲೆಕ್ಕ ಪರಿಶೋಧನೆ ವರದಿಯನ್ನು ಮಂಡಿಸಿತು. ಈ ವರದಿಯು ಗ್ಯಾರಂಟಿ ಯೋಜನೆಗಳು ಮತ್ತು ಇದರ ಆರ್ಥಿಕ ಪರಿಣಾಮಗಳ ಕುರಿತು ಅಂಕಿ ಅಂಶಗಳ ಸಮೇತ ವಿಶ್ಲೇಷಿಸಿದೆ.
ಕರ್ನಾಟಕ ಸರ್ಕಾರವು ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳು 2023-24 ಸಾಲಿನ ರಾಜಸ್ವ ವೆಚ್ಚದ ಶೇ.15 ರಷ್ಟಿದೆ. ಯೋಜನೆಗಳ ಅನುಷ್ಠಾನವು ವೆಚ್ಚದ ಬೆಳವಣಿಗೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. (ಹಿಂದಿನ ವರ್ಷಕ್ಕಿಂತ ಶೇ.12. 54) ಇದು 9,271 ಕೋಟಿ ರಾಜಸ್ವ ಕೊರತೆಗೆ ಕೊಡುಗೆಯಾಯಿತು. ಇದರ ಪರಿಣಾಮವಾಗಿ ರಾಜ್ಯದ ವಿತ್ತೀಯ ಕೊರತೆಯು2022-23 ರಲ್ಲಿ 46,623 ಕೋಟಿಗಳಿಂದ 2023-2024ರಲ್ಲಿ 65,522 ಕೋಟಿಗೆ ಏರಿಕೆಯಾಗಿದೆ.
ಗ್ಯಾರಂಟಿ ಯೋಜನೆಗಳು ಮತ್ತು ಅದರಿಂದ ಉಂಟಾದ ಕೊರತೆಗಳಿಗೆ ಹಣಕಾಸು ಒದಗಿಸಲು ರಾಜ್ಯ ಸರ್ಕಾರವು 63,000 ಕೋಟಿಗಳಷ್ಟು ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿತು. ಇದು ಕಳೆದ ವರ್ಷದ ನಿವ್ವಳ ಸಾಲಕ್ಕಿಂತ (26, 000) 37,000 ಕೋಟಿ ರು ಹೆಚ್ಚಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಗ್ಯಾರಂಟಿ ಯೋಜನೆಗಳು ಮೂಲ ಸೌಕರ್ಯಕ್ಕಾಗಿ ಬಂಡವಾಳ ವೆಚ್ಚವನ್ನು ಸುಮಾರು 5,229 ಕೋಟಿಗಳಷ್ಟು ಕಡಿಮೆ ಮಾಡಿದೆ ಎಂದು ವಿಶ್ಲೇಷಿಸಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಋಣ ಸಹಿಷ್ಣುತೆ ವಿಶ್ಲೇಷಣೆ ಪ್ರಕಾರ ಕರ್ನಾಟಕ ಸರ್ಕಾರದ ಹೊಣೆಗಾರಿಕೆಗಳು 2019-20ರಿಂದ 2023-24ರ ನಡುವೆ ವಾರ್ಷಿಕವಾಗಿ ಸರಾಸರಿ 17.35 ಶೇಕಡ ದರದಲ್ಲಿ ಬೆಳೆದಿದೆ. ಕರ್ನಾಟಕದ ಹೊಣೆಗಾರಿಕೆಗಳು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅನುಪಾತವು 2019-20ರಲ್ಲಿದ್ದ ಶೇ. 20.89ರಿಂದ 2020-21ರಲ್ಲಿ ಶೇ. 24.58 ಕ್ಕೇರಿದೆ. ನಂತರ ಅದು ಕಡಿಮೆಯಾಗುವ ಪ್ರವೃತ್ತಿಯಲ್ಲಿತ್ತು. ಮತ್ತು 2022-23ರಲ್ಲಿ ಶೇಕಡಾ 23.03ಕ್ಕೆ ಇಳಿದಿದೆ. ಮತ್ತು 2023-24ರ ಅವಧಿಯಲ್ಲಿ ಇದು ಶೇಕಡಾ 23.49ಕ್ಕೆ ಏರಿತು ಎಂದು ವರದಿ ಹೇಳಿದೆ.
2023-24ರಲ್ಲಿ ರಾಜ್ಯವು ಆಯವ್ಯಯ ಅಂದಾಜುಗಳಿಗಿಂತ ಶೇ.3.41ರಷ್ಟು ಕಡಿಮೆ ಖರ್ಚು ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಕನಿಷ್ಟ ವ್ಯತ್ಯಾಸ ಕಾಣುತ್ತಿರುವ ರಾಜ್ಯವು ಆಯವ್ಯಯ ಮತ್ತು ವಾಸ್ತವಿಕ ಅಂಕಿ ಅಂಶಗಳ ನಡುವಿನ ವ್ಯತ್ಯಾಸದಲ್ಲಿ ಸ್ವಲ್ಪ ಏರಿಕೆ ಕಂಡಿದೆ ಎಂದು ವರದಿಯಲ್ಲಿ ವಿವರಿಸಿದೆ.
ಗೃಹ ಜ್ಯೋತಿ ಮತ್ತು ಕೃಷಿ ಪಂಪ್‌ಸೆಟ್‌ಗಳ ಬಳಕೆಗಾಗಿ ರೈತರಿಗೆ ಉಚಿತ ವಿದ್ಯುತ್ ಪೂರೈಕೆಗಾಗಿ ಒದಗಿಸಲಾದ ಸಹಾಯಧನಗಳನ್ನು ಒಳಗೊಂಡಿರುವ ವಿದ್ಯುತ್ ಸಹಾಯಧನಗಳು ಅತಿದೊಡ್ಡ ಸಹಾಯಧನಗಳು ಅಂಶವಾಗಿವೆ. ವಿದ್ಯುತ್ ಸಹಾಯ ಧನಗಳಿಗಾಗಿ 2019-20ರಲ್ಲಿ 17,534 ಕೋಟಿ, 2020-21ರಲ್ಲಿ 18,432 ಕೋಟಿ, 2021-22ರಲ್ಲಿ 28,219 ಕೋಟಿ, 2022-23ರಲ್ಲಿ 22,754 ಕೋಟಿ, 2023-24ರಲ್ಲಿ 32,390 ಕೋಟಿ ಸಬ್ಸಿಡಿ ನೀಡಲಾಗಿದೆ.
ಅದೇ ರೀತಿ ಹಣಕಾಸಿನ ನೆರವಿನ ರೂಪದಲ್ಲಿ ಈ ಸಹಾಯ ಧನಗಳು 2019-20ರಲ್ಲಿ 3,280.74 ಕೋಟಿಗಳಿಂದ 2023-24ರ ಅವಧಿಯಲ್ಲಿ 19,091.80 ಕೋಟಿಗಳಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು 16,080.94 ಕೋಟಿ ರು ಹೆಚ್ಚಾಗಿದೆ. ಇದು ಮುಖ್ಯವಾಗಿ 2023-24ರಲ್ಲಿ ಜಾರಿಗೊಳಿಸಿದ್ದ ಗೃಹ ಲಕ್ಷ್ಮಿ ಯೋಜನೆ, (16,964.40 ಕೋಟಿ), ಮತ್ತು ಯುವ ನಿಧಿ ಯೋಜನೆ (88.88 ಕೋಟಿ)ಗಳಿಂದ ಉಂಟಾಗಿದೆ.
ರಾಜ್ಯದ ಒಟ್ಟು ಋಣ ಹೊಣೆಗಾರಿಕೆಗಳು 2019-20ರಿಂದ 2023-24ರ ಅವಧಿಯಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯಾಗಿದೆ. ಅಂದರೆ ಈ ಅವಧಿಯಲ್ಲಿ 2,96,011 ಕೋಟಿ ಏರಿಕೆಯಾಗಿದೆ. ಈ ಏರಿಕೆಯು ಪ್ರಮುಖವಾಗಿ ಆಂತರಿಕ ಋಣ 1,97,118 ಕೋಟಿ, ಭಾರತ ಸರ್ಕಾರದಿಂದ ಪಡೆದ ಸಾಲ 39,498 ಕೋಟಿ ಮತ್ತು 64,020 ಕೋಟಿ ಸಾರ್ವಜನಿಕ ಖಾತೆ ಹೊಣೆಗಾರಿಕೆಯಲ್ಲಿ ಹೆಚ್ಚಳವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೇ ಬಾಕಿ ಇರುವ ಹೊಣೆಗಾರಿಕೆಯು 80, 168 ಕೋಟಿಗಳಷ್ಟು ಹೆಚ್ಚಾಗಿದೆ. ಇದು ಮುಖ್ಯವಾಗಿ ಆಂತರಿಕ ಋಣದ ಅಡಿಯಲ್ಲಿ (63,561 ಕೋಟಿ) ನಂರ ಬಡ್ಡಿ ಹೊಂದಿರದ ಮೀಸಲು ನಿಧಿ (5,127 ಕೋಟಿ) ಮತ್ತು ಬಡ್ಡಿಯನ್ನು ಹೊಂದಿರದ ಠೇವಣಿ (7,412 ಕೋಟಿ)ಯಿಂದ ಉಂಟಾಗಿದೆ ಎಂದು ಸಿಎಜಿ ವರದಿಯು ವಿವರಿಸಿದೆ.
2023-24ರ ಅವಧಿಯಲ್ಲಿ ರಾಜ್ಯವು ಪಡೆದ ಸಾರ್ವಜನಿಕ ಸಾಲವು ಹಿಂದಿನ ವರ್ಷಕ್ಕಿಂತ 67,828 ಕೋಟಿಗಳಷ್ಟು ಅಧಿಕವಾಗಿ 4,03,033 ಕೋಟಿಗಳಿಂದ 4,70,861 ಕೋಟಿಗಳಿಗೆ ಏರಿಕೆಯಾಗಿದೆ. ಒಟ್ಟು ಸಾಲದಲ್ಲಿ ಮಾರುಕಟ್ಟೆ ಸಾಲಗಳೂ, ನಬಾರ್ಡ್, ಎಲ್‌ಐಸಿ, ಜಿಐಸಿ ಮತ್ತು ಕೇಂದ್ರ ಸರ್ಕಾರದ ಎನ್‌ಎಸ್‌ಎಸ್‌ಎಫ್‌ಗೆ ನೀಡಲಾದ ವಿಶೇಷ ಭದ್ರತೆಗಳ ಸಾಲಗಳನ್ನು ಒಳಗೊಂಡಿರುವ ಆಂತರಿಕ ಸಾಲವು ಶೇ. 65.89 ( 4,17,455 ಕೋಟಿ)ರಷ್ಟಿದೆ. ಸಾರ್ವಜನಿಕ ಲೆಕ್ಕದ ಹೊಣೆಗಾರಿಕೆಗಳು ಶೇ. 23.55ರಷ್ಟಿದೆ. ಭಾರತ ಸರ್ಕಾರದಿಂದ ಪಡೆದ ಸಾಲಗಳು ಶೇ. 8.3 ಮತ್ತು ಆಯವ್ಯಯ ಹೊರಗಿನ ಸಾಲಗಳು ಶೇ. 2.13ನ್ನು ಒಳಗೊಂಡಿದೆ.
2019-20ರಿಂದ 2023-24ರ ಅವಧಿಯಲ್ಲಿ ಆಯವ್ಯಯದ ಹೊರಗಿನ ಸಾಲಗಳ ಪ್ರವೃತ್ತಿ ಹೆಚ್ಚುತ್ತಿದೆ. 2019-20ರಿಂದ 2022-23ರ ಅವಧಿಯಲ್ಲಿ ರಾಜ್ಯದ ಆಯವ್ಯಯ ಹೊರಗಿನ ಸಾಲಗಳು ಕಡಿಮೆಯಾಗುವ ಪ್ರವೃತ್ತಿಯಲ್ಲಿದ್ದವು. ಹಿಂದಿನ ವರ್ಷಕ್ಕೆ ಹೋಲಿಸಿದರೇ ಇದು 1,679 ಕೋಟಿಗಳಷ್ಟು ಹೆಚ್ಚಾಗಿದೆ. ಆದರೂ 2023-24ರಲ್ಲಿ ರಾಜ್ಯ ಸರ್ಕಾರವು ಯಾವುದೇ ಆಯವ್ಯಯ ಹೊರಗಿನ ಸಾಲವನ್ನು ಪಡೆಯಲಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.