ಪಿಡಬ್ಲ್ಯುಡಿಯಲ್ಲಿ ಜಿಂಕೆ ವೇಗದ ಕೆಲಸ; ಬಿಜೆಪಿ ಅವಧಿಯಲ್ಲಿ ನಿಯಮ ಬಾಹಿರವಾಗಿ 21.23 ಕೋಟಿ ಪಾವತಿ

cag report karnataka tabled in assembly

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ ಬಳ್ಳಾರಿ ಮತ್ತು ಕೊಪ್ಪಳ ವಿಭಾಗದಲ್ಲಿ ಕೇವಲ 21 ದಿನಗಳ ಅಲ್ಪ ಅವಧಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಿದ್ದ ಗುತ್ತಿಗೆದಾರಿಗೆ ನಿಯಮಬಾಹಿರವಾಗಿ  21.23 ಕೋಟಿ ಹಣವನ್ನೂ ಪಾವತಿಸಿರುವ ಪ್ರಕರಣವನ್ನು ʻಲೆಕ್ಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧಕರುʼ (ಸಿಎಜಿ)  ಪತ್ತೆ ಹಚ್ಚಿದೆ. ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಆಗಿನ ರಾಜ್ಯ ಸರ್ಕಾರವನ್ನು ಸಿಎಜಿ ತರಾಟೆಗೂ ತೆಗೆದುಕೊಂಡಿದೆ.

 

ಆಗಸ್ಟ್‌ 19 ರಂದು ವಿಧಾನಸಭೆಯಲ್ಲಿ ಮಂಡಿಸಲಾದ 2023ರ ವರದಿಯಲ್ಲಿ ಸಿಎಜಿಯು ʻಕರ್ನಾಟಕ ಲೋಕೋಪಯೋಗಿ ಇಲಾಖೆ ಸಂಹಿತೆʼ (KPWD ಸಂಹಿತೆ) ಉಲ್ಲಂಘಿಸಿರುವ ಪ್ರಕರಣಗಳನ್ನು ವಿವರಿಸಿದೆ. ನಿರ್ಧಿಷ್ಟವಾಗಿ 21.23 ಕೋಟಿ ಹಣ ಪಾವತಿಸಿರುವ ಈ ಪ್ರಕರಣದ ಬಗ್ಗೆ ವಿವರಗಳನ್ನು ಈ ವರದಿಯಲ್ಲಿ ದಾಖಲಿಸಲಾಗಿದೆ. ಆದರೆ ಆಗಿನ ಸರ್ಕಾರ ಈ ನಿಯಮಬಾಹಿರ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಅನುದಾನ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವುದು ಇಲಾಖೆಯ ಮುಖ್ಯ ಉದ್ದೇಶವಾಗಿತ್ತೆಂದು ತಿಳಿಸಿತ್ತು. ಆಗ ಸಿ.ಸಿ.ಪಾಟೀಲ್ ಲೋಕೋಪಯೋಗಿ ಸಚಿವರಾಗಿದ್ದರು.

 

CAG report Karnataka tabled in assembly

 

ʻಕರ್ನಾಟಕ ಲೋಕೋಪಯೋಗಿ ಇಲಾಖೆ ಸಂಹಿತೆʼ ಯಾವುದೇ ಕೆಲಸವನ್ನು ಅಳತೆ ಮಾಡಿ ಪಾವತಿಸಬಾರದು ಎಂದು ನಿಬಂಧಿಸುತ್ತದೆ. ಆದರೆ ಬಳ್ಳಾರಿ ಮತ್ತು ಕೊಪ್ಪಳ ವಿಭಾಗಗಳಲ್ಲಿ 21.32 ಕೋಟಿ ಮೊತ್ತದ ಸಿಸಿ ರಸ್ತೆಗಳು ಮತ್ತು ಚರಂಡಿಗಳ ನಿರ್ಮಾಣ ಮತ್ತು ಸುಧಾರಣೆಗೆ ಸಂಬಂಧಿಸಿದಂತೆ ಕಾಮಗಾರಿಗಳಲ್ಲಿ ಕಾಂಕ್ರಿಟ್‌ ಮತ್ತು ಕ್ಯೂರಿಂಗ್‌ ಮಾಡಿರುವುದರ ಪರೀಕ್ಷಾ ವರದಿಗಳನ್ನು 28 ದಿನಗಳ ನಂತರ ಮಾತ್ರ ಸಿದ್ಧಪಡಿಸಬೇಕಿತ್ತು. ಆದರೆ  ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡ ದಿನಾಂಕದಿಂದ 1 ರಿಂದ 21 ದಿನಗಳ ಅವಧಿಯಲ್ಲಿ ಕಾಮಗಾರಿಗಳನ್ನು ಅಳೆದು ಹಣ ಪಾವತಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಲೋಕೋಪಯೋಗಿ ಇಲಾಖೆಯ ಕೊಪ್ಪಳ ವಿಭಾಗದಲ್ಲಿ 2022ರ ಮಾರ್ಚ್‌ನಲ್ಲಿ ಸಿಸಿ ರಸ್ತೆ, ಚರಂಡಿ, ಮತ್ತು ಸೇತುವೆಗಳ ನಿರ್ಮಾಣದ ಒಟ್ಟು 12 ಕಾಮಗಾರಿಗಳನ್ನು 2022ರ ಮಾರ್ಚ್‌ನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಒಟ್ಟು14.39 ಕೋಟಿ ರು.ಗಳ ಕಾಮಗಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದೇ ತಿಂಗಳಿನಲ್ಲಿಯೇ ಅಂದರೆ ಮಾರ್ಚ್‌ನಲ್ಲಿಯೇ ಈ ಎಲ್ಲ ಕಾಮಗಾರಿಯ ಮಾಪನವನ್ನೂ ನಡೆಸಲಾಗಿತ್ತು.  ಒಟ್ಟು 7.75 ಕೋಟಿ ರು. ಗಳನ್ನು ಗುತ್ತಿಗೆ ದಾರರಿಗೆ ಪಾವತಿಸಲಾಗಿತ್ತು ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಲೋಕೋಪಯೋಗಿ ಇಲಾಖೆಯ ಬಳ್ಳಾರಿ ವಿಭಾಗದಲ್ಲಿ ಒಟ್ಟು 20 ಕಾಮಗಾರಿಗಳನ್ನು 2022ರ ಮಾರ್ಚ್‌ನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಒಟ್ಟು 21.76 ಕೋಟಿ ರು.ಗಳ ಕಾಮಗಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದೇ ತಿಂಗಳಿನಲ್ಲಿಯೇ ಅಂದರೆ ಮಾರ್ಚ್‌ನಲ್ಲಿಯೇ ಈ ಎಲ್ಲ ಕಾಮಗಾರಿಯ ಮಾಪನವನ್ನೂ ನಡೆಸಲಾಗಿತ್ತು.  ಒಟ್ಟು 13.57 ಕೋಟಿ  ರು.ಗಳನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿತ್ತು ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

CAG report Karnataka tabled in assembly

 

ಕೊಪ್ಪಳ ಮತ್ತು ಬಳ್ಳಾರಿ ವಿಭಾಗಗಳಲ್ಲಿ 5054 ಹೆಡ್ ಆಫ್ ಅಕೌಂಟ್ (HoA) ಅಡಿಯಲ್ಲಿ ಕೈಗೊಳ್ಳಲಾದ ‘ಸಿಸಿ ರಸ್ತೆಗಳು ಮತ್ತು ಚರಂಡಿಗಳ ನಿರ್ಮಾಣ ಮತ್ತು ಸುಧಾರಣೆ’ ನಂತಹ 32 ಪ್ರಮುಖ ಕಾಮಗಾರಿಗಳ ಪರಿಶೀಲನೆಯಲ್ಲಿ, 25ನೇ ಫೆಬ್ರವರಿ ಮತ್ತು 24ನೇ ಮಾರ್ಚ್ 2022ರ ನಡುವೆ ಒಪ್ಪಂದಗಳನ್ನು ಕಾರ್ಯಗತಗೊಳಿಸಿ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಆದಾಗ್ಯೂ, KPWD ಕೋಡ್‌ನ ನಿಬಂಧನೆಗಳನ್ನು ಕಡೆಗಣಿಸಿ, 2022 ರ ಮಾರ್ಚ್ 15 ಮತ್ತು 24 ರ ನಡುವೆ ಕೆಲಸದ ಅಳತೆಗಳನ್ನು ಮಾಡಲಾಗಿದೆ ಮತ್ತು 15 ನೇ ಮತ್ತು 28 ನೇ ಮಾರ್ಚ್ 2022 ರ ನಡುವೆ ಒಟ್ಟು 21.23 ಕೋಟಿ ರು. ಪಾವತಿಗಳನ್ನು ಮಾಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಒಪ್ಪಂದದ ದಿನಾಂಕದಿಂದ 1 ರಿಂದ 21 ದಿನಗಳ ಅಲ್ಪಾವಧಿಯೊಳಗೆ ಪಾವತಿಗಳನ್ನು ಮಾಡಲಾಗಿದೆ. ಇದು ಕೂಡ ʻಕರ್ನಾಟಕ ಲೋಕೋಪಯೋಗಿ ಇಲಾಖೆ ಸಂಹಿತೆʼಯ ನಿಬಂಧನೆಗಳ ಉಲ್ಲಂಘನೆಯಾಗಿದೆ. ಅಲ್ಲದೆ, ಇಷ್ಟು ಕಡಿಮೆ ಅವಧಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗಳ ನಿರ್ಮಾಣ ಕಾರ್ಯಸಾಧುವಾಗಿರುವುದಿಲ್ಲ. 1 ರಿಂದ 21 ದಿನಗಳ ಅಲ್ಪಾವಧಿಯಲ್ಲಿ ಕೆಲಸವನ್ನು ಕಾರ್ಯಗತಗೊಳಿಸಲು ಮತ್ತು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ, ಈ  ಪ್ರಕರಣಗಳಲ್ಲಿನ ಕೆಲಸದ ಅಳತೆಗಳು ಕಾಲ್ಪನಿಕವೆಂದು ಲೆಕ್ಕ ಪರಿಶೋಧನೆಯು ತೀರ್ಮಾನಿಸಿದೆ ಎಂದು ವರದಿಯು ಒತ್ತಿ ಹೇಳಿದೆ. ನಿಜವಾದ ಕೆಲಸ ಕಾರ್ಯಗತಗೊಳಿಸದೆ ಪಾವತಿಗಳನ್ನು ಮಾಡಲಾಗಿದೆ ಅಥವಾ ಪಾವತಿಗಳನ್ನು ಬಿಡುಗಡೆ ಮಾಡಿದ ನಂತರ ಕಾರ್ಯಗಳನ್ನು ಕಾರ್ಯಗತಗೊಳಿಸಿರಲೂ ಬಹುದು ಎಂದು ಸಿಎಜಿ ವರದಿಯು ತಿಳಿಸಿದೆ.

 

ನಿಯಮಬಾಹಿರ ಕ್ರಮ ಸಮರ್ಥಿಸಿಕೊಂಡಿದ್ದ ಸರ್ಕಾರ 

 

ಅಕ್ಟೋಬರ್ 2023 ರಲ್ಲಿ ಆಡಿಟ್ ಈ ಪ್ರಕರಣದ ಕುರಿತು ಗಮನಸೆಳೆದ ನಂತರ, ನಿಗದಿಪಡಿಸಿದ ಅನುದಾನದ ಆಧಾರದ ಮೇಲೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಮತ್ತು ಅಧೀಕ್ಷಕ ಇಂಜಿನಿಯರ್ ಅವರಿಂದ ಅನುಮೋದಿಸಲಾಗಿದೆ ಎಂದು ಸರ್ಕಾರ ಡಿಸೆಂಬರ್ 2023 ರಲ್ಲಿ ಈ ಕ್ರಮವನ್ನು ಸರ್ಮರ್ಥಿಸಿಕೊಂಡಿತ್ತು. ಈ ಕೆಲಸಗಳನ್ನು ಕಾರ್ಮಿಕರು ಮತ್ತು ಯಂತ್ರೋಪಕರಣಗಳನ್ನು ಹೊಂದಿರುವ ಅನುಭವಿ ವರ್ಗ-1 ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಈ ಕಾಮಗಾರಿಗಳಿಗೆ ಬಿಲ್‌ಗಳನ್ನು ನೈಜ ಪ್ರಗತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಮತ್ತು ಕಾಂಕ್ರೀಟ್‌ನ ಸಂಕುಚಿತ ಸಾಮರ್ಥ್ಯದ ಪರೀಕ್ಷಾ ವರದಿಗಳ ಕೊರತೆಯಿಂದಾಗಿ ಬಿಲ್‌ಗಳ ಒಂದು ಭಾಗವನ್ನು ತಡೆಹಿಡಿಯುವ ಮೂಲಕ ಪಾವತಿಸಲಾಯಿತು. ತೃಪ್ತಿದಾಯಕ ಪರೀಕ್ಷಾ ಫಲಿತಾಂಶಗಳ ನಂತರ, ಅಂತಿಮ ಬಿಲ್‌ಗಳನ್ನು ಪಾವತಿಸಲಾಯಿತು. ಅನುದಾನ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವುದು ಇಲಾಖೆಯ ಮುಖ್ಯ ಉದ್ದೇಶವಾಗಿತ್ತೆಂದು ತಿಳಿಸಿತ್ತು.

 

CAG report Karnataka tabled in assembly

 

ಈ ಸಂದರ್ಭಗಳಲ್ಲಿ ಕೆಲಸವು ಅಳತೆಗಳನ್ನು ತೆಗೆದುಕೊಳ್ಳುವ ಹಂತವನ್ನು ತಲುಪದಿದ್ದರೂ, ನಿಗದಿತ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸುವ ಬದಲು ಆಯಾ ವಿಭಾಗದ ಅಧಿಕಾರಿಗಳು ತಮ್ಮ ವಿವೇಚನೆಯಿಂದ ಗುತ್ತಿಗೆದಾರರ ಸಾಮರ್ಥ್ಯವನ್ನು ನಂಬಿ ಮುಂಚಿತವಾಗಿ ಪಾವತಿಗಳನ್ನು ಮಾಡಲಾಗಿದೆ ಎಂಬುದು ಉತ್ತರದಿಂದ ಸ್ಪಷ್ಟವಾಗಿದೆ. ಸ್ವೀಕರಿಸಿದ ಅನುದಾನದ ಕೊರತೆಯನ್ನು ತಪ್ಪಿಸಲು ಮಾಡಿದ ಪಾವತಿಗಳುʻಕರ್ನಾಟಕ ಲೋಕೋಪಯೋಗಿ ಇಲಾಖೆ ಸಂಹಿತೆʼಯ ಕಂಡಿಕೆ 202 ಮತ್ತು 228 (ಇ) ನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

 

ಕೊಪ್ಪಳ ವಿಭಾಗವು ಆರ್‌ಎ ಬಿಲ್‌ಗಳ ಪ್ರಕಾರ ಸಂಪೂರ್ಣ ಹಣವನ್ನು ಪಾವತಿಸಿದ್ದರೆ, ಬಳ್ಳಾರಿ ವಿಭಾಗವು ಪರೀಕ್ಷಾ ವರದಿಗಳ ಕೊರತೆಯಿಂದ ಕಾಮಗಾರಿಗೆ 32 ಲಕ್ಷದಂತೆ ಅಲ್ಪ ಮೊತ್ತವನ್ನು ತಡೆಹಿಡಿದು RA
ಬಿಲ್‌ಗಳನ್ನು ಪಾವತಿಸಿದೆ. ಪರೀಕ್ಷಾ ವರದಿಗಳಿಲ್ಲದೆ ಆರ್‌ಎ ಬಿಲ್‌ಗಳನ್ನು ಸಿದ್ಧಪಡಿಸುವುದು ನಿಯಮಬಾಹೀರವಾಗಿರುತ್ತದೆ. ಅಲ್ಲದೆ, ಸರ್ಕಾರದ ಉತ್ತರದೊಂದಿಗೆ ಲಗತ್ತಿಸಲಾದ ಗುಣಮಟ್ಟದ ಭರವಸೆ ವರದಿಗಳು ಕಾಮಗಾರಿಗಳನ್ನು ನಂತರದಲ್ಲಿ ಕಾರ್ಯಗತಗೊಳಿಸಲಾಗಿದೆ ಎಂದು ತೋರಿಸಿದೆ. ಬಳ್ಳಾರಿ ವಿಭಾಗಕ್ಕೆ ಸಂಬಂಧಿಸಿದ 20 ಕಾಮಗಾರಿಗಳ ಪೈಕಿ 15 ಕಾಮಗಾರಿಗಳಲ್ಲಿ ಅಳತೆಯ ದಿನಾಂಕ ಕಾಂಕ್ರೀಟ್ ಎರಕಹೊಯ್ದ ದಿನಾಂಕಕ್ಕಿಂತ 70 ದಿನಗಳ ಹಿಂದಿನದ್ದಾಗಿದೆ ಎಂದು ಸಿಎಜಿ ವರದಿಯಲ್ಲಿ ಬೊಟ್ಟು ಮಾಡಿದೆ.

 

ಕಂಡಿಕೆ 228 (ಡಿ) ಪ್ರಕಾರ “ಮಾರ್ಚ್ 15 ರ ನಂತರ ಅಳತೆ ಮಾಡಲಾದ ಯಾವುದೇ ಕೆಲಸಕ್ಕೆ ಮುಖ್ಯ ಇಂಜಿನಿಯರ್ ವಿಶೇಷ ಆದೇಶಗಳಿಲ್ಲದೆ ಏಪ್ರಿಲ್ ವರೆಗೆ ಪಾವತಿಸಲಾಗುವುದಿಲ್ಲ”. ಮುಖ್ಯ ಇಂಜಿನಿಯರ್‌ಗಳ ಅಂತಹ ವಿಶೇಷ ಆದೇಶಗಳು ದಾಖಲೆಯಲ್ಲಿ ಕಂಡುಬರದ ಕಾರಣ, ಮಾಡಿದ ಪಾವತಿಗಳು ವಿಭಾಗೀಯ ಎಂಜಿನಿಯರ್‌ಗಳ ಅಧಿಕಾರವನ್ನು ಮೀರಿದ್ದಾಗಿವೆ ಮತ್ತು ನಿಯಮಬಾಹೀರವಾಗಿವೆ. ಇದಲ್ಲದೆ, ಪ್ರಯೋಗ ಮಿಶ್ರಣಗಳ ಅನುಮೋದನೆಯಿಲ್ಲದೆ ಕೆಲಸದ ಕಾರ್ಯಗತಗೊಳಿಸುವಿಕೆ ಮತ್ತು ಮಾಪನದ ಬಗ್ಗೆ ಸರ್ಕಾರದ ಉತ್ತರವು ಮೌನವಾಗಿದೆ ಎಂದು ಸಿಎಜಿ ಹೇಳಿದೆ.

SUPPORT THE FILE

Latest News

Related Posts