ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿಯೇ 2,747 ಎಕರೆ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಭೂ ಪರಿವರ್ತನೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 395.40 ಎಕರೆ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ನೀಡಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಅತಿ ಕಡಿಮೆ, ಕೇವಲ 0.075 ಎಕರೆ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತಿಸಲಾಗಿದೆ. ಉತ್ತರ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಭೂಮಿಯನ್ನು ಪರಿವರ್ತನೆ ಮಾಡಲಾಗಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ʻಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ- 1961ʼರ ಕಲಂ 14-ಎ ಅನ್ವಯ ವಿಸ್ತೀರ್ಣದ ಮಿತಿಯಿಲ್ಲದೇ ಭೂ ಉಪಯೋಗ ಬದಲಾವಣೆಯ ಎಲ್ಲ ಪ್ರಸ್ತಾವನೆಗಳನ್ನು ಇಲಾಖಾ ಸಚಿವರ ಅನುಮೋದನೆ ಪಡೆದು ಸರ್ಕಾರಿ ಆದೇಶ ಹೊರಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಮತ್ತು ಬೆಂಗಳೂರು – ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರ ಭೂ ಪರಿವರ್ತನೆ ಮಾಡಿದ ಕೃಷಿ ಭೂಮಿಯನ್ನು ಈ ಲೆಕ್ಕಾಚಾರದಲ್ಲಿ ಸೇರಿಸಲಾಗಿಲ್ಲ.
ಬಾಗಲಗೋಟೆ ಜಿಲ್ಲೆಯಲ್ಲಿ 131.82 ಎಕರೆ, ಬೆಳಗಾವಿ ಜಿಲ್ಲೆಯಲ್ಲಿ 73.31 ಎಕರೆ, ಬಳ್ಲಾರಿ ಜಿಲ್ಲೆಯಲ್ಲಿ 39.98, ಬೀದರ್ ಜಿಲ್ಲೆಯಲ್ಲಿ 40.12, ವಿಜಯಪುರ ಜಿಲ್ಲೆಯಲ್ಲಿ 26.78, ಚಿಕ್ಕಮಗಳೂರು ಜಿಲ್ಲೆಯಲ್ಲಿ 124.68, ಚಿತ್ರದುರ್ಗ ಜಿಲ್ಲೆಯಲ್ಲಿ 280.73, ದಾವಣಗೆರೆ ಜಿಲ್ಲೆಯಲ್ಲಿ 17.07, ಗದಗ ಜಿಲ್ಲೆಯಲ್ಲಿ 154.90, ಕಲಬುರಗಿ ಜಿಲ್ಲೆಯಲ್ಲಿ 147.92, ಹಾಸನ ಜಿಲ್ಲೆಯಲ್ಲಿ 19.35, ವಿಜಯನಗರ ಜಿಲ್ಲೆಯಲ್ಲಿ 82.49, ಕೋಲಾರ ಜಿಲ್ಲೆಯಲ್ಲಿ90.55, ಧಾರವಾಡ ಜಿಲ್ಲೆಯಲ್ಲಿ-395.40, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ44.21, ಮೈಸೂರು ಜಿಲ್ಲೆಯಲ್ಲಿ 361.17, ರಾಯಚೂರು ಜಿಲ್ಲೆಯಲ್ಲಿ71.57, ಶಿವಮೊಗ್ಗ ಜಿಲ್ಲೆಯಲ್ಲಿ 198.37, ತುಮಕೂರು ಜಿಲ್ಲೆಯಲ್ಲಿ 46.65, ಉಡುಪಿ ಜಿಲ್ಲೆಯಲ್ಲಿ 12.55, ಕೊಡಗು ಜಿಲ್ಲೆಯಲ್ಲಿ 63.59, ಯಾದಗರಿ ಜಿಲ್ಲೆಯಲ್ಲಿ 124.88,ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 36.88, ಹಾವೇರಿ ಜಿಲ್ಲೆಯಲ್ಲಿ 154.15 ಮತ್ತು ಕೊಪ್ಪಳ ಜಿಲ್ಲೆಯಲ್ಲಿ 8.27 ಎಕರೆ ಕೃಷಿ ಭೂಮಿಯನ್ನು ಪರಿವರ್ತಿಸಲಾಗಿದೆ ಎಂದು ಈ ಉತ್ತರದಲ್ಲಿ ತಿಳಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯಿದೆ-1964ರ ಸೆಕ್ಷನ್ 95, 96, 97ರ ಪ್ರಕಾರ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಜಮೀನುಗಳು ಕೃಷಿಯೇತರ ಚಟುವಟಿಕೆಗಳಿಗೆ ಒಳಪಡುತ್ತವೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ, ಆ ಜಮೀನನ್ನು ಪ್ರತ್ಯೇಕವಾಗಿ ವಾಣಿಜ್ಯ ಉದ್ದೇಶಕ್ಕೆಂದು ಪರಿವರ್ತಿಸುವ ಅಗತ್ಯವಿಲ್ಲ ಎಂದು ರಾಜ್ಯ ಹೈಕೋರ್ಟ್ 2024ರ ಜನವರಿಯಲ್ಲಿ ತೀರ್ಪು ನೀಡಿತ್ತು. ಹೀಗಾಗಿ ಈ ಭೂ ಪರಿವರ್ತನೆಗಳು ಈ ಲೆಕ್ಕಾಚಾರದಲ್ಲಿ ಸೇರಿಲ್ಲ.
ರಾಜ್ಯದಲ್ಲಿ ಈಗ ಭೂದಾಖಲೆಗಳನ್ನು ಆಧಾರ್ ನಂಬರ್‌ಗೆ ಲಿಂಕ್ ಮಾಡಲಾಗಿದೆ. ಈ ಲಿಂಕ್ ಮಾಡುವ ಸಂದರ್ಭದಲ್ಲಿ 72.11 ಲಕ್ಷ ಕೃಷಿ ಭೂಮಿಯು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿತ್ತು. ಇದರಲ್ಲಿ ಕೇವಲ 4.69 ಲಕ್ಷ ಕೃಷಿ ಭೂಮಿಯನ್ನು ಮಾತ್ರ ಕಾನೂನುಬದ್ಧವಾಗಿ ಪರಿವರ್ತಿಸಲಾಗಿತ್ತು. ಹೀಗಾಗಿ ಕಳೆದ ಎರಡು ವರ್ಷಗಳಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತನೆಯಾಗಿರುವ ಕೃಷಿ ಭೂಮಿಯ ಪ್ರಮಾಣ ಇನ್ನೂ ಹೆಚ್ಚಿರಬಹುದೆಂದು ಅಂದಾಜಿಸಲಾಗುತ್ತಿದೆ.
ʻಕರ್ನಾಟಕ ಭೂಕಂದಾಯ (ಎರಡನೇ ತಿದ್ದು ಪಡಿ) ಅಧಿನಿಯಮ- 2022ʼ ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಲು ಪರಿವರ್ತನೆಗೆ ಅನುಮತಿ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಜಿಲ್ಲಾಧಿಕಾರಿಯು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳ ಒಳಗೆ ಅದಕ್ಕೆ ಅನುಮೋದನೆ ನೀಡುವ ಆದೇಶವನ್ನು ನೀಡಬೇಕು ಎಂದು ಈ ಅಧಿನಿಯಮದಲ್ಲಿ ಹೇಳಲಾಗಿದೆ. ಇದರಿಂದಾಗಿ ಕೃಷಿ ಭೂಮಿ ಪರಿವರ್ತನೆ ಈಗ ಸಲೀಸಾಗಿದೆ.
ಗೇಣಿದಾರ ರೈತರ ಹಕ್ಕು; ಭೂ ಮಾಲೀಕರ ಭೀತಿಗೆ ಪಾಳು ಬಿದ್ದ 21 ಲಕ್ಷ ಹೆಕ್ಟೇರ್ ಕೃಷಿ ಭೂಮಿ
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ʻಅಖಿಲ ಭಾರತ ಗ್ರಾಮೀಣ ಆರ್ಥಿಕ ಒಳಗೊಳ್ಳುವಿಕೆ ಸಮಿಕ್ಷೆ-2021-22 (ಎನ್‌ಎಎಫ್‌ಐಎಸ್) ಪ್ರಕಾರ ರೈತ ಕುಟುಂಬಗಳು ಹೊಂದಿರುವ ಕೃಷಿ ಭೂಮಿಯ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಕೃಷಿ ಭೂಮಿಯ ವ್ಯಾಪ್ತಿ ಮೂರನೇ ಒಂದರಷ್ಟು ಇಳಿಕೆಯಾಗಿದೆ. ನಮ್ಮ ರಾಜ್ಯದಲ್ಲಿ 2016-17ರಲ್ಲಿ ಹೊಂದಿದ್ದ ಕೃಷಿ ಜಮೀನಿನ ಸರಾಸರಿ ವಿಸ್ತೀರ್ಣ 2.47 ಎಕರೆ ಆಗಿದ್ದರೆ 2021-22ರಲ್ಲಿ 1.83 ಎಕರೆಗೆ ಇಳಿದಿತ್ತು.