ಬೆಂಗಳೂರು: ರಾಜ್ಯ ಸರ್ಕಾರದ ಕೆಲಸಗಳಿಗೆ ಚಾಲನೆ ನೀಡುವ ವಿವಿಧ ಸಚಿವಾಲಯಗಳಲ್ಲಿಯೇ ಪ್ರಸ್ತುತ 229 ಕನ್ನಡ ಶೀಘ್ರಲಿಪಿಗಾರ ಮತ್ತು 284 ಬೆರಳಚ್ಚುಗಾರ ಸೇರಿದಂತೆ ಒಟ್ಟಾರೆ 513 ಹುದ್ದೆಗಳು ಸೇರಿ ಖಾಲಿ ಇವೆ.
ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಾಗುವ ತೀರ್ಮಾನ ಮತ್ತು ಸಂಬಂಧಿಸಿದ ಸೂಚನೆಗಳನ್ನು ಇಲಾಖೆಯ ಕೆಳ ಹಂತದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತಲುಪಿಸುವಲ್ಲಿ ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಯಲ್ಲಿರುವವರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಹುದ್ದೆಗಳು ಖಾಲಿ ಇರುವುದರಿಂದ ಈಗ ಮಂದಗತಿಯಲ್ಲಿ ಕೆಲಸ ಸಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಖಾಲಿ ಹುದ್ದೆಗಳನ್ನು ಸಕಾಲದಲ್ಲಿ ಭರ್ತಿ ಮಾಡದ ಕಾರಣ ಒಟ್ಟಾರೆಯಾಗಿ ಸರ್ಕಾರದ ಆಡಳಿತದ ಮೇಲೆಯೂ ಇದು ಪರಿಣಾಮ ಬೀರುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಯಾವ ಸಚಿವಾಲಯದಲ್ಲಿ ಎಷ್ಟು ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಸಿದ್ಧಪಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಆಗಸ್ಟ್ 11 ರಿಂದ ಆರಂಭಗೊಳ್ಳಲಿರುವ ವಿಧಾನಸಭಾ ಅಧಿವೇಶನಕ್ಕೆ ಉತ್ತರವನ್ನು ಒದಗಿಸಿದೆ.
ಇದರ ಪ್ರತಿಯು ʻದಿ ಫೈಲ್ʼ ಗೆ ಲಭ್ಯವಾಗಿದೆ.
2024-25 ಸಾಲಿನಲ್ಲಿ ಸರ್ಕಾರದಲ್ಲಿ ಒಟ್ಟು 7,80,748 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ 2, 76, 386 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಅಧಿಕೃತವಾಗಿ ಕಳೆದ ಮಾರ್ಚ್‌ನಲ್ಲಿ ವಿಧಾನಸಭೆಯಲ್ಲಿ ಪ್ರಕಟಿಸಿದೆ.
ಇದರಲ್ಲಿ ಸಚಿವಾಲಯಗಳಲ್ಲಿನ ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ಖಾಲಿ ಹುದ್ದೆಗಳೂ ಸೇರಿವೆ. ಕಳೆದ ನವೆಂಬರ್‌ನಿಂದ ರಾಜ್ಯ ಸರ್ಕಾರ ಯಾವುದೇ ಹೊಸ ನೇಮಕಾತಿ ನಡೆಸಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಳಮೀಸಲಾತಿ ಜಾರಿಯಾಗುವವರೆಗೆ ಯಾವುದೇ ನೇಮಕ ಪ್ರಕ್ರಿಯೆ ನಡೆಸದಂತೆ ರಾಜ್ಯ ಸರ್ಕಾರವು ಕಳೆದ ಡಿಸೆಂಬರ್‌ನಲ್ಲಿಯೇ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಚಿವಾಲಯದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 60 ಬೆರಳಚ್ಚುಗಾರ ವೃಂದದ ಹುದ್ದೆಗಳು ಮತ್ತು 44 ಶೀಘ್ರಲಿಪಿಗಾರರ ಹುದ್ದೆಗಳು ಖಾಲಿ ಇವೆ. ಆರ್ಥಿಕ ಇಲಾಖೆಯ ಸಚಿವಾಲಯದಲ್ಲಿಯೇ 31 ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ಹುದ್ದೆ ಖಾಲಿ ಇವೆ ಎಂಬುದು ಈ ದಾಖಲೆಯಿಂದ ಗೊತ್ತಾಗಿದೆ.
ಬೆರಳಚ್ಚುಗಾರರ ವೃಂದದ ಹುದ್ದೆಗಳು ಒಳಾಡಳಿತ ಇಲಾಖೆಯ ಸಚಿವಾಲಯದಲ್ಲಿ-19, ಸಾರಿಗೆ-2, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ-4, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ-1, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ-8, ಕಂದಾಯ-13 , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವಾಲಯದಲ್ಲಿ- 7 ಉನ್ನತ ಶಿಕ್ಷಣ ಇಲಾಖೆ-5, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ-5, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ- 1 ಹುದ್ದೆ ಖಾಲಿ ಇರುವುದು ಉತ್ತರದಿಂದ ತಿಳಿದು ಬಂದಿದೆ.
ನಗರಾಭಿವೃದ್ಧಿ ಇಲಾಖೆ-12, ವಸತಿ-2, ಲೋಕೋಪಯೋಗಿ ಇಲಾಖೆಯ ಸಚಿವಾಲಯದಲ್ಲಿ-1, ಜಲಸಂಪನ್ಮೂಲ-5, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಇಲಾಖೆಯ ಸಚಿವಾಲಯದಲ್ಲಿ- 12, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ-5, ಆರೋಗ್ಯ ಮತ್ತು ಕುಟುಂಬ ಕಲ್ಯಾಣ -10, ವೈದ್ಯಕೀಯ ಶಿಕ್ಷಣ-7, ಕೃಷಿ- 2, ರೇಷ್ಮೆ ಮತ್ತು ತೋಟಗಾರಿಕೆ-2 , ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ- 4, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ-8, ಸಹಕಾರ ಇಲಾಖೆಯಲ್ಲಿ 5 ಹುದ್ದೆಗಳು ಖಾಲಿ ಇವೆ.
ಸಮಾಜ ಕಲ್ಯಾಣ ಇಲಾಖೆ-6 , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-3, ಕನ್ನಡ, ವಾರ್ತಾ ಮತ್ತು ಸಂಸ್ಕೃತಿ ಇಲಾಖೆ-4, ಆಹಾರ & ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ-5 , ಕಾರ್ಮಿಕ-4, ಕೌಶಲ್ಯ ಅಭಿವೃದ್ಧಿ ಇಲಾಖೆ-2, ಇಂಧನ-1, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ-28, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವಾಲಯದಲ್ಲಿ-1 ಹುದ್ದೆ ಖಾಲಿ ಇವೆ ಎಂದು ದಾಖಲೆಯಿಂದ ಗೊತ್ತಾಗಿದೆ.
ಶೀಘ್ರಲಿಪಿಗಾರರ ಹುದ್ದೆಗಳು ಖಾಲಿ ಎಷ್ಟಿವೆ?
ಶೀಘ್ರಲಿಪಿಗಾರರ ವೃಂದದ ಹುದ್ದೆಗಳು ಒಳಾಡಳಿತ ಇಲಾಖೆಯ ಸಚಿವಾಲಯದಲ್ಲಿ-8, ಸಾರ್ವಜನಿಕ ಉದ್ದಿಮೆಗಳ ಸಚಿವಾಲಯದಲ್ಲಿ-8, ಸಾರಿಗೆ-3, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ-6, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ-7, ಕಂದಾಯ ಇಲಾಖೆಯ ಸಚಿವಾಲಯದಲ್ಲಿ-15, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ-6, ಉನ್ನತ ಶಿಕ್ಷಣ ಇಲಾಖೆ-3, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ-10, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ನಗರಾಭಿವೃದ್ಧಿ ಇಲಾಖೆಯ ಸಚಿವಾಲಯದಲ್ಲಿ-6, ವಸತಿ ಇಲಾಖೆ-5, ಲೋಕೋಪಯೋಗಿ ಇಲಾಖೆಯ ಸಚಿವಾಲಯದಲ್ಲಿ- 5 , ಜಲಸಂಪನ್ಮೂಲ ಇಲಾಖೆ-12 ಹುದ್ದೆಗಳು ಖಾಲಿ ಇವೆ.
ಸಣ್ಣ ನೀರಾವರಿ ಇಲಾಖೆ-2, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ-11, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ-12, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-6, ವೈದ್ಯಕೀಯ ಶಿಕ್ಷಣ-4, ಕೃಷಿ ಇಲಾಖೆ-2, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ-3, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ-4, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ-7, ಸಹಕಾರ-5, ಸಮಾಜ ಕಲ್ಯಾಣ-4, ಪರಿಶಿಷ್ಟ್ಯಪಂಗಡಗಳ ಕಲ್ಯಾಣ ಇಲಾಖೆ-2, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವಾಲಯದಲ್ಲಿ-1, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-2, ಕನ್ನಡ, ವಾರ್ತಾ ಮತ್ತು ಸಂಸ್ಕೃತಿ ಇಲಾಖೆ-3 ಹುದ್ದೆಗಳಿನ್ನೂ ಭರ್ತಿಯಾಗಿಲ್ಲ.
ಆಹಾರ & ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ-2, ಕಾರ್ಮಿಕ ಇಲಾಖೆ-2, ಕೌಶಲ್ಯ ಅಭಿವೃದ್ಧಿ ಇಲಾಖೆ-2,, ಇಂದನ ಇಲಾಖೆ-2, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ-2, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ-19, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವಾಲಯದಲ್ಲಿ -3 ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿ-2 ಹುದ್ದೆಗಳು ಖಾಲಿ ಇವೆ ಎಂದು ಉತ್ತರ ಒದಗಿಸಿರುವುದು ತಿಳಿದು ಬಂದಿದೆ.
ಕರ್ನಾಟಕ ಸರ್ಕಾರ ಸಚಿವಾಲಯದ ವಿವಿಧ ಇಲಾಖೆಗಳಲಿನ ಪತ್ರಾಂಕಿತ ಆಪ್ತ ಸಹಾಯಕ ಶೀಘ್ರಲಿಪಿಗಾರ, ಹಿರಿಯ ಶೀಘ್ರಲಿಪಿಗಾರ ವೃಂದಗಳಲ್ಲಿ ಮಂಜೂರಾದ ಹುದ್ದೆಗಳನ್ನು ಪ್ರತ್ಯೇಕವಾಗಿ ಪರಿಗಣಿಸದೆ, ಒಟ್ಟಾರೆಯಾಗಿ ಪರಿಗಣಿಸಿ ಅದರಂತೆಯೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹಾಗೆಯೇ ಹಿರಿಯ ಬೆರಳಚ್ಚುಗಾರ ಮತ್ತು ಬೆರಳಚ್ಚುಗಾರ ವೃಂದಗಳಲ್ಲಿ ಮಂಜೂರಾದ ಹುದ್ದೆಗಳನ್ನು ಪ್ರತ್ಯೇಕವಾಗಿ ಪರಿಗಣಿಸದೆ, ಒಟ್ಟಾರೆಯಾಗಿ ಪರಿಗಣಿಸಿ ಅದರಂತೆಯೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಉತ್ತರಿಸಿದೆ.
ಕನ್ನಡ ಶೀಘ್ರಲಿಪಿಗಾರ ಹುದ್ದೆಗಳ ನೇಮಕಾತಿಗಾಗಿ ಸರ್ಕಾರ ಕೊನೆಯದಾಗಿ ದಿನಾಂಕ 10-01-2018 ರಂದು ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಕೊನೆಯದಾಗಿ ದಿನಾಂಕ 29-02-2024 ರಂದು ಅಧಿಸೂಚನೆ ಹೊರಡಿಸಿತ್ತು ಎಂದು ಗೊತ್ತಾಗಿದೆ.
ಕರ್ನಾಟಕ ರಾಜ್ಯ ಸೇವೆಯಲ್ಲಿ ಬೆರಳಚ್ಚುಗಾರ ಹುದ್ದೆ ಈಗಿಲ್ಲ. ಈ ಹುದ್ದೆಯ ಪದನಾಮವನ್ನು ‘ದತ್ತಾಂಶ ನಮೂದು ಸಹಾಯಕʼ (Data Entry Assistants) ಎಂದು ಬದಲಾಯಿಸಿ ರಾಜ್ಯ ಸರ್ಕಾರ 2021ರ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ʻʻರಾಜ್ಯದ ಯಾವುದೇ ಸೇವೆಯ ಅಥವಾ ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ʻಬೆರಳಚ್ಚುಗಾರʼ ಎಂಬ ಪದನಾಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ʻದತ್ತಾಂಶ ನಮೂದು ಸಹಾಯಕʼ ಎಂದು ಮರು ಪದನಾಮಕರಣಗೊಳಿಸಬೇಕು ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಈ ಹುದ್ದೆಯ ಪದನಾಮ ಬದಲಾಯಿಸಲು ʻʻಕರ್ನಾಟಕ ಸಿವಿಲ್ ಸೇವಾ (ಶೀಘ್ರಲಿಪಿಗಾರರು ಮತ್ತು ಬೆರಳಚ್ಚು ಗಾರರ ಹುದ್ದೆಗಳ ನೇಮಕಾತಿ) ನಿಯಮ-1983ʼʼಕ್ಕೆ ತಿದ್ದುಪಡಿ ತರಲಾಗಿತ್ತು.
ಸಚಿವಾಲಯದ ಕನ್ನಡ ಶೀಘ್ರಲಿಪಿಗಾರರ ವೃಂದದಲ್ಲಿ 40:60ರ ಅನುಪಾದಂತೆ ಶೇ.40 ರಷ್ಟು ಹುದ್ದೆಗಳನ್ನು ನೇರ ನೇಮಕಾತಿಯಡಿಯಲ್ಲಿ ಮತ್ತು ಶೇ. 60 ರಷ್ಟು ಹುದ್ದೆಗಳನ್ನು ಮುಂಬಡ್ತಿ ಮೂಲಕ ಅರ್ಹ ನೌಕರರು ಲಭ್ಯವಾದಂತೆ ಕಾಲಕಾಲಕ್ಕೆ ಮುಂಬಡ್ತಿ ನೀಡಿ ಭರ್ತಿ ಮಾಡಲಾಗುತ್ತಿದೆ.
ಕನ್ನಡ ಬೆರಳಚ್ಚುಗಾರ ಹುದ್ದೆಯು ಶೇ. 100 ರಷ್ಟು ನೇರ ನೇಮಕಾತಿಯ ಹುದ್ದೆಯಾಗಿರುತ್ತದೆ .ಆರ್ಥಿಕ ಇಲಾಖೆಯಿಂದ ಅನುಮೋದಿಸಲ್ಪಟ್ಟ ಬೆರಳಚ್ಚುಗಾರ (ದತ್ತಾಂಶ ನಮೂದು ಸಹಾಯಕ) ಹುದ್ದೆಗಳಿಗೆ ಸರ್ಕಾರ 2024 ರ ಜೂನ್ 7 ರಂದು ಹೊರಡಿಸಿದ ಸುತ್ತೋಲೆಯ (ಸಂಖ್ಯೆ:ಅಇ 02 ಬಿಇಎಂ 2024) ಅನ್ವಯ ಹೊರಗುತ್ತಿಗೆ ಆಧಾರದ ಮೇಲೆಯೂ ನೇಮಕ ಮಾಡಿಕೊಳ್ಳಲು ಅವಕಾಶವಿದೆ ಎಂದು ಈ ದಾಖಲೆಯಲ್ಲಿ ಹೇಳಲಾಗಿದೆ.