ಬೆಂಗಳೂರು : ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕಿಮ್ಸ್) ಹಳೆಯ ಆಸ್ಪತ್ರೆಯು ವೈದ್ಯರ, ರೋಗಿಗಳ, ಸಿಬ್ಬಂದಿಯರ ಹಿತದೃಷ್ಟಿಯಿಂದ ಅಸುರಕ್ಷಿತ ಎಂದು ಲೋಕೋಪಯೋಗಿ ಇಲಾಖೆಯು ವರದಿ ನೀಡಿರುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಹೊಸ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ಕಿಮ್ಸ್‌ನ ನಿರ್ದೇಶಕರಿಗೆ ಸೂಚನೆ ನೀಡಿದೆ.
ಕಿಮ್ಸ್ ಆವರಣದಲ್ಲಿ ಈಗಾಗಲೇ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡು ಹಲವು ತಿಂಗಳಾಗಿದೆ. ಆದರೆ ಅಪಾಯಕಾರಿಯಾದ ಹಳೆಯ ಕಟ್ಟಡದಲ್ಲಿಯೇ ಜಿಲ್ಲಾಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಹೊಸ ಕಟ್ಟಡ ಉದ್ಘಾಟನೆಯಾದ ಬಳಿಕ ಹಳೆಯ ಕಟ್ಟಡದಿಂದ ಜಿಲ್ಲಾಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳುತ್ತಲೇ ಬಂದಿದ್ದರು.
ಹಳೆಯ ಆಸ್ಪತ್ರೆಯು ಅಪಾಯಕಾರಿಯಾಗಿದೆ ಎಂದು ವರದಿ ನೀಡಿರುವ ವಿಷಯವು ಜುಲೈನಲ್ಲಿ ನಡೆದ ಇಲಾಖೆಯ ಮಾಸಿಕ ಪ್ರತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಹೊಸ ಕಟ್ಟಡದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ವರದಿ ನೀಡಿದ ನಂತರ ಆಸ್ಪತ್ರೆಯನ್ನು ಸ್ಥಳಾಂತರಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆಗಸ್ಟ್ 28 ರಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಿಮ್ಸ್‌ನ ನಿರ್ದೇಶಕರಿಗೆ ಪತ್ರ ಬರೆದಿದ್ದು (ಸಂಖ್ಯೆ: ಎಂಇಡಿ 601 ಎಂಪಿಎಸ್ 2025), ಹೊಸ ಕಟ್ಟಡಕ್ಕೆ ಹಳೆಯ ಆಸ್ಪತ್ರೆಯನ್ನು ಸ್ಥಳಾಂತರಿಸುವಂತೆ ನಿರ್ದೇಶನ ನೀಡಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅವರಣದಲ್ಲಿ ನಿರ್ಮಾಣವಾಗಿರುವ 450 ಹಾಸಿಗೆಗಳ ಆಸ್ಪತ್ರೆಯ ಕಟ್ಟಡವನ್ನು ಹಸ್ತಾಂತರಿಸಿಕೊಳ್ಳುವ ಬಗ್ಗೆ ಲೋಕೋಪಯೋಗಿ ಇಲಾಖೆಯು ವರದಿ ಸಲ್ಲಿಸಿದೆ. ಹಳೆಯ ಆಸ್ಪತ್ರೆಯು ವೈದ್ಯರ, ರೋಗಿಗಳ, ಸಿಬ್ಬಂದಿ ಹಿತದೃಷ್ಟಿಯಿಂದ ಅಸುರಕ್ಷಿತ ಎಂದು ಹೇಳಿದೆ. ಹೀಗಾಗಿ ಹಳೇ ಆಸ್ಪತ್ರೆಯನ್ನು ಹೊಸ ಆಸ್ಪತ್ರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು 2025ರ ಮೇ 21ರಂದು ನಡೆದ ಇಲಾಖೆ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೂಚಿಸಿದ್ದರು ಎಂದು ಪತ್ರದಲ್ಲಿ ಹೇಳಿರುವುದು ಗೊತ್ತಾಗಿದೆ.
450 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ಕಿಮ್ಸ್‌ಗೆ ಹಸ್ತಾಂತರಗೊಂಡಿಲ್ಲ. ಈಗಾಗಲೇ ಲೋಕೋಪಯೋಗಿ ಇಲಾಖೆಯು ಥರ್ಡ್ ಪಾರ್ಟಿ ಪರಿಶೀಲನೆ ನಡೆಸಿದೆ. ಹೊಸ ಕಟ್ಟಡದಲ್ಲಿ ಕೆಲ ನ್ಯೂನತೆಯನ್ನು ಇಲಾಖೆಯು ಗುರುತಿಸಿದ್ದು, ಅದನ್ನು ಸರಿಪಡಿಸುತ್ತಿದ್ದಂತೆಯೇ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.
ಕಳೆದ ಮಾರ್ಚ್‌ನಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಇನ್ನೆರಡು ತಿಂಗಳ ಒಳಗೆ ಆಸ್ಪತ್ರೆಯನ್ನು ಸ್ಥಳಾಂತರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು. ಕಟ್ಟಡ ಪೂರ್ಣಗೊಂಡು ಹಲವು ತಿಂಗಳಾದರೂ ಸ್ಥಳಾಂತರಗೊಳ್ಳದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಹಳೆ ಆಸ್ಪತ್ರೆಯ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೀರ್ಮಾನವಿಲ್ಲ
ಕಾರವಾರ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಒತ್ತಾಯಿಸಿ ನಿರಂತರ ಹೋರಾಟ ನಡೆದಿದ್ದರೂ ಹಳೆಯ ಆಸ್ಪತ್ರೆಯ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಇನ್ನೂ ಸರ್ಕಾರ ತೀರ್ಮಾನಿಸಿಲ್ಲ.
ಈ ಕುರಿತು ಮಾರ್ಚ್‌ನಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಕುಮಟ ಶಾಸಕ ದಿನಕರ್ ಕೇಶವ ಶೆಟ್ಟಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹಳೆಯ ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು (G+1) ನೆಲಸಮಗೊಳಿಸಿ ಇದೇ ಜಾಗದಲ್ಲಿ ಮುನ್ನೂರು ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡುವ ಪ್ರಸ್ತಾವನೆಯು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಸ್ವೀಕೃತವಾಗಿದ್ದು, ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದರು.
ಸುಮಾರು 210 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವನೆ ಇದಾಗಿದ್ದು, ಪ್ರಸ್ತಾಪವನ್ನು ಮುಂದೂಡುವಂತೆ ರಾಜ್ಯ ಸರ್ಕಾರ ಇಲಾಖೆಗೆ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಅನುದಾನದ ಲಭ್ಯತೆಯನ್ನು ಆಧರಿಸಿ ಇದರ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಕುರಿತು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.