ನಿಷ್ಕ್ರೀಯವಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ; ಕೈಗಾರಿಕೆಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ ಎಂದ ಸಿಎಜಿ

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 2,756 ಕೈಗಾರಿಕೆಗಳ ಪೈಕಿ ಶೇ. 66.29 ರಷ್ಟು ಕೈಗಾರಿಕೆಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಒಪ್ಪಿಗೆಯನ್ನು ಪಡೆದುಕೊಂಡೇ ಇಲ್ಲ.

 

ಹೀಗಾಗಿ ಈ ಕೈಗಾರಿಕೆಗಳು ಸೃಷ್ಟಿಸುತ್ತಿರುವ ಮಾಲಿನ್ಯದ ಪ್ರಮಾಣ ಎಷ್ಟು? ಇವುಗಳಿಂದ ಪರಿಸರದ ಮೇಲೆ ಯಾವೆಲ್ಲಾ ಪರಿಣಾಮಗಳಾಗುತ್ತಿವೆ ಎಂಬ ಮಾಹಿತಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೇ ತಿಳಿದಿಲ್ಲ.

 

ರಾಜ್ಯದಲ್ಲಿ ಯಾವುದೇ ಕೈಗಾರಿಕೆಯು ಆರಂಭವಾಗಬೇಕಾದರೂ, ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, 1974 (WPCP ಕಾಯಿದೆ) ಮತ್ತು ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, 1981 (APCP ಕಾಯಿದೆ) ಮಂಡಳಿಯಿಂದ ಒಪ್ಪಿಗೆಯನ್ನು ಪಡೆಯದೆ ಯಾವುದೇ ಉದ್ಯಮ/ಕಾರ್ಯಾಚರಣೆಗಳನ್ನು ಸ್ಥಾಪಿಸಬಾರದು ಮತ್ತು ನಿರ್ವಹಿಸಬಾರದು ಎಂದು ಷರತ್ತು ವಿಧಿಸಿದೆ.

 

karnataka pollution control board

 

ಆದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ  ಸತ್ತ ಹಲ್ಲಿಲ್ಲದ ಹಾವಿನಂತೆ ನಿಷ್ಕ್ರೀಯವಾಗಿರುವುದರಿಂದ ಬಹುತೇಕ ಕೈಗಾರಿಕೆಗಳು  ಮಂಡಳಿಯಿಂದ ಅಗತ್ಯ ಒಪ್ಪಿಗೆಯನ್ನು ಅಂದರೆ, ಕೈಗಾರಿಕೆಗಳ ಸ್ಥಾಪನೆಗೆ ಮಾನ್ಯವಾದ ಸಮ್ಮತಿಯನ್ನು (CFE) ಮತ್ತು ಮಂಡಳಿಯಿಂದ ನೀಡಲಾಗುವ ಕಾರ್ಯಾಚರಣೆಗೆ ಒಪ್ಪಿಗೆ (CFO) ಯನ್ನು ಪಡೆಯದೇ ಕಾರ್ಯನಿರ್ವಹಿಸುತ್ತಿವೆ.

 

ರಾಜ್ಯದಲ್ಲಿರುವ 2,756 ಕೈಗಾರಿಕೆಗಳ ಪೈಕಿ 1,827 ಕೈಗಾರಿಕೆಗಳು ಮಂಡಳಿಯಿಂದ ಈ ಎಲ್ಲ ಒಪ್ಪಿಗೆಯನ್ನು ಪಡೆಯದೇ ನಡೆಯುತ್ತಿವೆ ಎಂದು ಮಹಾಲೇಖಪಾಲರು (ಸಿಎಜಿ) ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಪತ್ತೆ ಹಚ್ಚಿದ್ದಾರೆ.  ಈ ಸಿಎಜಿ ವರದಿಯನ್ನು ಇತ್ತೀಚೆಗೆ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ.

 

ಕಳೆದ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ನೇಮಕಗೊಂಡಿದ್ದಾರೆ.  ಮಂಡಳಿಯಲ್ಲಿ ಕರ್ತವ್ಯಲೋಪ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಡಳಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ನೇತೃತ್ವದ ತಂಡ ಕಳೆದ ಜೂನ್‌ 25 ರಂದು ಮಂಡಳಿಯ ಕೇಂದ್ರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

 

ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕೈಗಾರಿಕೆಗಳು ಸ್ಥಾಪನೆಗೆ ಮಾನ್ಯವಾದ ಸಮ್ಮತಿಯನ್ನು (CFE) ಮತ್ತು ಮಂಡಳಿಯಿಂದ ನೀಡಲಾದ ಕಾರ್ಯಾಚರಣೆಗೆ ಒಪ್ಪಿಗೆ (CFO) ಅನ್ನು ಖಚಿತಪಡಿಸಿಕೊಳ್ಳುವುದು ಮಂಡಳಿಯ ಪ್ರಾಥಮಿಕ ಜವಾಬ್ದಾರಿಯಾಗಿದೆ. ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ ಮತ್ತು ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, 1981 ಕಾಯಿದೆಯ ಪ್ರಕಾರ ಮಾಲಿನ್ಯವನ್ನು ನಿಯಂತ್ರಿಸಲಾಗುತ್ತಿದೆಯೇ ಎಂದು ಒಪ್ಪಿಗೆ ನೀಡಿದ ನಂತರ ಮಂಡಳಿಯು ಆಗಾಗ ಪರಿಶೀಲನೆ ನಡೆಸಬೇಕಿರುತ್ತದೆ.

 

karnataka pollution control board

 

ಆದರೆ ಅಗತ್ಯ ಸಮ್ಮತಿಗಳನ್ನು ಕಡ್ಡಾಯವಾಗಿ ನೀಡುವಲ್ಲಿ ಮತ್ತು ಮಾಲಿನ್ಯದ ಪ್ರಮಾಣದ ಕುರಿತು ಮಾಹಿತಿ ಪಡೆದು, ನಿಯಂತ್ರಿಸುವಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಬಹಿರಂಗಗೊಂಡಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

ಕೈಗಾರಿಕೆಗಳ ಮತ್ತು ವಾಣಿಜ್ಯ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ (GST) ಮತ್ತು ಅರಣ್ಯ ಇಲಾಖೆಯೊಂದಿಗೆ ಸಿಎಜಿಯು ಕ್ರಾಸ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಂಡಳಿಯಿಂದ ಅಗತ್ಯ ಒಪ್ಪಿಗೆಯನ್ನು ಪಡೆಯದೆ ಮತ್ತು ನವೀಕರಿಸದೆ ಹಲವಾರು ಕೈಗಾರಿಕೆಗಳು ಮತ್ತು ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಬಹಿರಂಗಗೊಂಡಿತು. ಮಂಡಳಿಯು ಸರ್ಕಾರದ ಇತರ ಇಲಾಖೆಗಳೊಂದಿಗೆ ಸೇರಿ ಕೆಲಸ ಮಾಡುತ್ತಿಲ್ಲ ಮತ್ತು ಸಮನ್ವಯದ ಕೊರತೆ ಇದೆ ಎಂಬುದನ್ನು ಇದು ತೋರಿಸಿದೆ ಎಂದು ಸಿಎಜಿ ವರದಿ ಹೇಳಿದೆ.

 

ಸ್ಥಾಪನೆಗೆ ಮಾನ್ಯವಾದ ಸಮ್ಮತಿಯನ್ನು(ಸಿಎಫ್‌ಇ) ಪಡೆದ 2,556 ಅರ್ಜಿದಾರರು (1,809 ಕೈಗಾರಿಕೆಗಳು ಮತ್ತು 747 ಅಪಾರ್ಟ್‌ಮೆಂಟ್‌ಗಳು) ಮಂಡಳಿ ನೀಡುವ ಕಾರ್ಯಚರಣೆಗೆ ಒಪ್ಪಿಗೆ (ಸಿಎಫ್‌ಒ) ಪಡೆದಿಲ್ಲ ಅಥವಾ ಸಿಎಫ್‌ಇ ಅನ್ನು ಸಿಂಧುತ್ವ ಅವಧಿ ಮುಗಿದ ನಂತರವೂ ನವೀಕರಿಸಿಕೊಂಡಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಗಮನಿಸಲಾಗಿದೆ ಎಂದು ಸಿಎಜಿಯ ವರದಿಯಲ್ಲಿ ಹೇಳಲಾಗಿದೆ.

 

ಆಯ್ದ ಪ್ರಾದೇಶಿಕ ಕಚೇರಿಗಳಲ್ಲಿ (RO) 2,901 ಕೈಗಾರಿಕೆಗಳಿಗೆ ನೀಡಲಾದ ʻಕಾರ್ಯಚರಣೆಗೆ ಒಪ್ಪಿಗೆʼಯ ಅವಧಿ ಮುಗಿದಿದೆ. ಆದರೆ ಈ ಕೈಗಾರಿಕೆಗಳು ಸಿಎಫ್‌ಒ ನವೀಕರಣಕ್ಕಾಗಿ ಯಾವುದೇ ಅರ್ಜಿಗಳನ್ನು ಸಲ್ಲಿಸಿಲ್ಲ. ಇವುಗಳಲ್ಲಿ 402 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ನಿಯಮಿತವಾಗಿ ಜಿಎಸ್‌ಟಿ ಪಾವತಿಸುತ್ತಿವೆ ಎಂಬುದು ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಬೆಳಗಿಕೆ ಬಂದಿದೆ. ಆದರೆ ಈ ಕೈಗಾರಿಕೆಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಸಿಎಜಿ ವರದಿ ವಿವರಿಸಿದೆ.

 

ಮಂಡಳಿಯಲ್ಲಿ ದಾಖಲೆಗಳೇ ಇಲ್ಲ

 

ಅಗತ್ಯ ಸಮ್ಮತಿಗಳನ್ನು ಕಡ್ಡಾಯವಾಗಿ ನೀಡುವಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಫಲವಾಗಿದೆಯಲ್ಲದೆ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸರಿಯಾಗಿ ನಿರ್ವಹಿಸಿಲ್ಲ ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ.

 

ʻʻಕೈಗಾರಿಕೆಗಳ ಸಮಗ್ರ ದತ್ತಾಂಶವನ್ನು ಮಂಡಳಿಯು ನಿರ್ವಹಿಸಬೇಕಾಗಿರುವುದು ಅಗತ್ಯವಾಗಿರುತ್ತದೆ. ಆದರೂ, ಕೈಗಾರಿಕೆಗಳ ಅಂತಹ ಯಾವುದೇ ಸಮಗ್ರ ದತ್ತಾಂಶವನ್ನು ನಿರ್ವಹಿಸಲಾಗಿಲ್ಲ. ಇದರಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕೈಗಾರಿಕೆಗಳು ಪರಿಸರ ಕಾನೂನುಗಳನ್ನು ಅನುಸರಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಂಡಳಿಗೆ ಸಾಧ್ಯವಾಗಿಲ್ಲʼʼ ಎಂದು ಸಿಎಜಿಯು ವರದಿಯಲ್ಲಿ ಸ್ಪಷ್ಟವಾಗಿ ಮಂಡಳಿಯ ವಿಫಲತೆಯನ್ನು ಬೊಟ್ಟು ಮಾಡಿ ತೋರಿಸಿದೆ.

 

karnataka pollution control board

 

ಕೈಗಾರಿಕೆಗಳು ಅಗತ್ಯ ಸಮ್ಮತಿಗಳನ್ನು ಪಡೆದುಕೊಂಡಿವೆಯೇ ಎಂದು ಪರಿಶೀಲಿಸಲು ಸಂಬಂಧಿಸಿದ ಇತರ ಇಲಾಖೆಗಳಾದ  ಕೈಗಾರಿಕಾ ಇಲಾಖೆ, ವಾಣಿಜ್ಯ, ಅರಣ್ಯ, ರೈಲ್ವೆ ಮತ್ತು ಸ್ಥಳೀಯ ಸಂಸ್ಥಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿಲ್ಲ. ಹೀಗಾಗಿ ಎಲ್ಲಾ ಕೈಗಾರಿಕೆಗಳು ನಿಯಂತ್ರಣ ಚೌಕಟ್ಟಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಮಂಡಳಿಯು ಪೂರ್ವಭಾವಿಯಾಗಿ ಕ್ರಮವನ್ನು ಪ್ರಾರಂಭಿಸಿಲ್ಲ ಎಂಬುದು ಗೊತ್ತಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ತಾಂತ್ರಿಕ ಮತ್ತು ವೈಜ್ಞಾನಿಕ ಅಧಿಕಾರಿಗಳ ದೊಡ್ಡ ಹುದ್ದೆಗಳು ಖಾಲಿ ಉಳಿದಿರುವುದೇ ಮಂಡಳಿಯು ತನ್ನ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿರುವುದಕ್ಕೆ ಪ್ರಮುಖ ಕಾರಣ ಎಂದು ಸಿಎಜಿ ವರದಿಯಲ್ಲಿ ಬೊಟ್ಟು ಮಾಡಲಾಗಿದ್ದು,  ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮಂಡಳಿಯು ಯಾವುದೇ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿಲ್ಲ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಹೊರಡಿಸಿದ ಎಲ್ಲಾ ಆಡಳಿತ ಕಾಯಿದೆಗಳು, ನಿಯಮಗಳು ಮತ್ತು ನ್ಯಾಯಾಂಗ ಆದೇಶಗಳು ಉಲ್ಲಂಘಿಸುವವರಿಗೆ ದಂಡ ವಿಧಿಸಲು ಮಂಡಳಿಗೆ ಅಧಿಕಾರ ನೀಡಿದ್ದರೂ, ಮಂಡಳಿ ಇತ್ತ ಗಮನವನ್ನೇ ನೀಡುತ್ತಿಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ.

 

ಮಂಡಳಿಯು ಅಗತ್ಯವಾಗಿರುವ ಮಾರ್ಗಸೂಚಿಗಳನ್ನು ಮತ್ತು ಗುಣಮಟ್ಟದ ಕಾರ್ಯಾಚರಣೆ (SOP) ರೂಪಿಸಲು ವಿಫಲವಾಗಿರುವುದು ಮಂಡಳಿಯು ನಿಷ್ಕ್ರಿಯವಾಗಲು ಕಾರಣವಾಗಿದೆ ಎಂದು ಸಿಎಜಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

 

ಸಿಎಜಿಯ ಶಿಫಾರಸುಗಳೇನು?

 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯನಿರ್ವಹಣೆಯನ್ನು ಸಮಗ್ರವಾಗಿ ಪರಿಶೀಲಿಸಿರುವ ಸಿಎಜಿಯು ಕೈಗಾರಿಕೆಗಳು ಮತ್ತು ವಾಣಿಜ್ಯ ತೆರಿಗೆಗಳು, ಆರೋಗ್ಯ ಮುಂತಾದ ಸರ್ಕಾರಿ ಇಲಾಖೆಗಳಲ್ಲಿ ನೊಂದಾಯಿಸಲಾದ ಕೈಗಾರಿಕೆಗಳು ಮತ್ತು ಇತರ ಕಾರ್ಯಾಚರಣೆಗಳ ಬಗ್ಗೆ ನಿಯತಕಾಲಿಕ ಮಾಹಿತಿಯನ್ನು ಪಡೆಯಲು ಸರ್ಕಾರವು ಮಂಡಳಿಗೆ ನಿರ್ದೇಶಿಸಬಹುದಾಗಿರುತ್ತದೆ.

 

ಅಲ್ಲದೆ, ಕೆಂಪು, ಕಿತ್ತಳೆ ಮತ್ತು ಹಸಿರು ವರ್ಗಗಳ ಅಡಿ ಬರುವ ಕೈಗಾರಿಕೆಗಳು ಸಿಎಫ್‌ಇ ಮತ್ತು ಸಿಎಫ್‌ಒ ಅನುಮತಿ ಪಡೆಯದ ಹೊರತು ಯಾವುದೇ ಉದ್ಯಮಕ್ಕೆ ಅನುಮತಿ ನೀಡುವಂತಿಲ್ಲ ಎಂದು ಸಂಬಂಧಿಸಿದ ಇಲಾಖೆಗೆ ಸರ್ಕಾರವು ನಿರ್ದೇಶನಗಳನ್ನು ನೀಡಬಹುದು ಎಂದು ಸಿಎಜಿಯು ವರದಿಯಲ್ಲಿ ಶಿಫಾರಸು ಮಾಡಿದೆ.

 

ಸಿಎಫ್‌ಇ ಪಡೆದ ಆದರೆ ಸಿಎಫ್‌ಒ ಅರ್ಜಿ ಸಲ್ಲಿಸದ ಮತ್ತು ಹಿಂದೆ ಸಿಎಫ್‌ಒ ಪಡೆದು, ಅದರ ಅವಧಿ ಮುಗಿದಿದ್ದರೂ ನವೀಕರಣಕ್ಕಾಗಿ ಅರ್ಜಿ ಸಲ್ಲಿಸದ ಕೈಗಾರಿಕೆಗಳು ಅಥವಾ ಘಟಕಗಳನ್ನು ನಿಯಮಿತವಾಗಿ ತಪಾಸಣೆ ನಡೆಸಲು ಮತ್ತು ವರದಿ ಮಾಡಲು ಗುರಿಗಳನ್ನು ನಿಗದಿಪಡಿಸಲು ಸರ್ಕಾರವು ಮಂಡಳಿಗೆ ನಿರ್ದೇಶಿಸಬಹುದು ಎಂದೂ ಸಿಎಜಿ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

 

 

ನರೇಂದ್ರಸ್ವಾಮಿಗೆ 70 ಅಂಕ; ಪ್ರಾಯೋಗಿಕ ಜ್ಞಾನ ಸೇರಿ ಮಾನದಂಡಗಳ ಪಾಲನೆ, ನೇಮಕ ಸಮರ್ಥಿಸಲಿರುವ ಸರ್ಕಾರ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಳವಳ್ಳಿ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಪ್ರಕ್ರಿಯೆ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಆಂಜನೇಯ ರೆಡ್ಡಿ ಅವರು ಹೈಕೋರ್ಟ್‌ಗೆ  ರಿಟ್‌ ಅರ್ಜಿ  ಸಲ್ಲಿಸಿದ್ದರು. ಈ ಕುರಿತು ʻದಿ ಫೈಲ್‌ʼ ವಿಶೇಷ ವರದಿ ಪ್ರಕಟಿಸಿತ್ತು.

SUPPORT THE FILE

Latest News

Related Posts