ಮೆಟ್ರೊ ಪ್ರಯಾಣ ದರ ಹೆಚ್ಚಳ ಬೇಡ ಎಂದು ಅಧ್ಯಯನದ ವರದಿ ಹೇಳಿದ್ದರೂ ದರ ಏರಿಸಿದ ಸರ್ಕಾರ

Bangalore highest traffic Namma metro

ಬೆಂಗಳೂರು:  ನಮ್ಮ ಮೆಟ್ರೋ ದರ ಇಳಿಕೆ ಮಾಡಬೇಕು ಎಂದು ಐಸೆಕ್‌ ಸಂಸ್ಥೆಯು ನೀಡಿದ್ದ ವರದಿಯನ್ನು ಬದಿಗೊತ್ತಿ ದರ ಹೆಚ್ಚಳ ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಬೆಂಗಳೂರಿನ  ದಕ್ಷಿಣದಲ್ಲಿರುವ ಎಲೆಕ್ಟ್ರಾನಿಕ್‌ ಸಿಟಿಯನ್ನು ನಗರದ ಕೇಂದ್ರಕ್ಕೆ ಸಂಪರ್ಕಿಸುವ ʻನಮ್ಮ ಮೆಟ್ರೊʼ ಹಳದಿ ಮಾರ್ಗದ ಉದ್ಘಾಟನೆಗೆ ದಿನಗಣನೆ ನಡೆಯುತ್ತಿರುವಾಗಲೇ,  ನಮ್ಮ ಮೆಟ್ರೊ ಪ್ರಯಾಣ ದರ ಇಳಿಕೆ ಮಾಡಬೇಕು ಎಂದು ಐಸೆಕ್‌ ಮಾಡಿದ್ದ  ಶಿಫಾರಸ್ಸು  ಮುನ್ನೆಲೆಗೆ ಬಂದಿದೆ.

 

ಐಸೆಕ್ ಸಂಸ್ಥೆಯು 2024ರ ಆಗಸ್ಟ್‌ನಲ್ಲಿಯೇ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ವರದಿ ಸಲ್ಲಿಸಿತ್ತು. ಆದರೂ ಸರ್ಕಾರವು  ಈ ವರದಿಯನ್ನು ಪರಿಶೀಲನೆ ಮಾಡುವ ಗೋಜಿಗೆ ಹೋಗಿಲ್ಲ. ಮೆಟ್ರೋ ದರವನ್ನು ಇಳಿಕೆ ಮಾಡುವ ಶಿಫಾರಸ್ಸನ್ನು ಅನುಷ್ಠಾನಗೊಳಿಸಬೇಕಿದ್ದ ಸರ್ಕಾರವು 2025ರ ಫೆಬ್ರುವರಿಯಲ್ಲಿ ದರ ಏರಿಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಬೆಂಗಳೂರಿನ ಸಂಚಾರ ದಟ್ಟಣೆಯ ಕುರಿತು  ʻಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆʼ (ಐಸೆಕ್‌) ಅಧ್ಯಯನ ನಡೆಸಿ, ʻಪರಿಸರ ಸಮಸ್ಯೆಗಳು ಮತ್ತು ದಟ್ಟಣೆ: ಹೆಚ್ಚಳ ಬೆಂಗಳೂರಿನ ಅಭಿವೃದ್ಧಿಗೆ ಸುಸ್ಥಿರ ಪರಿಹಾರಗಳುʼ ಎಂಬ ವರದಿಯನ್ನು 2024 ರ ಆಗಸ್ಟ್‌ನಲ್ಲಿಯೇ, ʻಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರʼಕ್ಕೆ ಸಲ್ಲಿಸಿತ್ತು.

 

ಈ ಅಧ್ಯಯನದ ಸಮಗ್ರ  ವರದಿಯು  ʻದಿ ಫೈಲ್‌ʼ ಗೆ ಲಭ್ಯವಾಗಿದೆ.

 

ಈ ವರದಿಯಲ್ಲಿ, ʻನಮ್ಮ ಮೆಟ್ರೊ ಪ್ರಯಾಣ ದರಗಳು ತುಲಾನಾತ್ಮಕವಾಗಿ ಹೆಚ್ಚು. ಆದ್ದರಿಂದ ಹೆಚ್ಚಿನ ಪ್ರಯಾಣಿಕರನ್ನು ಉತ್ತೇಜಿಸುವ ಸಲುವಾಗಿ ಮೂಲದರಗಳನ್ನು ಕಡಿಮೆ ಮಾಡಬಹುದುʼ ಎಂದು ಶಿಫಾರಸು ಮಾಡಿರುವುದು ವರದಿಯಿಂದ ಗೊತ್ತಾಗಿದೆ.

 

Bangalore traffic problem solution

 

2024ರ ಆಗಸ್ಟ್‌ನಲ್ಲಿಯೇ ಸರ್ಕಾರಕ್ಕೆ ಈ ಶಿಫಾರಸು ಸಲ್ಲಿಕೆಯಾಗಿದ್ದರೂ, ʻನಮ್ಮ ಮೆಟ್ರೊʼ ಕಳೆದ ಫೆಬ್ರವರಿ 9 ರಂದು ಪ್ರಯಾಣ ದರ ಹೆಚ್ಚಳ ಮಾಡಿತ್ತು. 2017ರ ಜೂನ್‌ ನಂತರ ಇದೇ ಮೊದಲ ಬಾರಿಗೆ ʻಬೆಂಗಳೂರು ಮೆಟ್ರೊ ರೈಲು ನಿಗಮʼವು (ಬಿಎಂಆರ್‌ಸಿಎಲ್‌) ಪ್ರಯಾಣ ದರ ಹೆಚ್ಚಿಸಿದ್ದರೂ ಭಾರಿ ಪ್ರಮಾಣದಲ್ಲಿ ಈ ಬಾರಿ ದರ ಹೆಚ್ಚಳ ಮಾಡಲಾಗಿತ್ತು. ರಿಯಾಯಿತಿ ರಹಿತ ದರದಲ್ಲಿ ಸರಾಸರಿ ಶೇ.51.55 ರಷ್ಟು ಹಾಗೂ ರಿಯಾಯಿತಿ ಸಹಿತ ದರದಲ್ಲಿ ಶೇ. 45-46 ರಷ್ಟು ಏರಿಕೆ ಮಾಡಲಾಗಿತ್ತು. ಹಲವು ಮಾರ್ಗಗಳ ದರ ಶೇ. 100 ರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

 

ಈ ಪ್ರಯಾಣ ದರ ಹೆಚ್ಚಳದ ವಿರುದ್ಧ ಪ್ರಯಾಣಿಕರು ಪ್ರತಿಭಟನೆ ಕೂಡ ನಡೆಸಿದ್ದರು. ರಾಜ್ಯ ಸರ್ಕಾರ ಮೆಟ್ರೊ ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ದೂರಿದ್ದರು.  ರಾಜ್ಯ ಬಿಜೆಪಿ ನಾಯಕರು ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದರು. ಪ್ರಯಾಣಿಕರ ಪ್ರತಿಭಟನೆಯ ನಂತರ ಹೆಚ್ಚಳವಾಗಿದ್ದ ದರವನ್ನು ಪರಿಷ್ಕರಿಸಲಾಗಿತ್ತಾದರೂ ಇದರಿಂದ ದೂರ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗಿರಲಿಲ್ಲ.

 

 

bangalore traffic problem solution

 

 

‘ನಮ್ಮ ಮೆಟ್ರೋ ಟಿಕೆಟ್‌ ದರಗಳು ತುಲನಾತ್ಮಕವಾಗಿ ಹೆಚ್ಚು. ಆದ್ದರಿಂದ ಹೆಚ್ಚಿನ ಪ್ರಯಾಣಿಕರನ್ನು ಉತ್ತೇಜಿಸುವ ಸಲುವಾಗಿ ಮೂಲ ದರಗಳನ್ನು ಕಡಿಮೆ ಮಾಡಬಹುದು. ಮತ್ತು ಸಾರ್ವಜನಿಕ ಸಾರಿಗೆಯು ಸಮಂಜಸವಾದ ಬೆಲೆಯನ್ನು ಹೊಂದಿರಬೇಕು. ಇಂಟಿಗ್ರೇಟೆಡ್‌ ಬಿಎಂಆರ್‍‌ಸಿಎಲ್‌ ಮತ್ತು ಬಿಎಂಟಿಸಿ ಸ್ಮಾರ್ಟ್‌ ಕಾರ್ಡ್‌ನೊಂದಿಗೆ ಬಹು ಮಾದರಿ ಸಾರಿಗೆಯನ್ನು ಪರಿಯಚಿಸಿ ಇದು ಮೆಟ್ರೋ ಮತ್ತು ಸಿಟಿ ಬಸ್‌ಗಳ ನಡುವೆ ಸುಲಭವ ಪ್ರವೇಶ ಮತ್ತು ಚಲನಶೀಲತೆಗೆ ಸಹಾಯ ಮಾಡುತ್ತದೆ,’ ಎಂದು ಮೌಲ್ಯಮಾಪನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ನೆದರ್ ಲ್ಯಾಂಡ್ ನ ಲೊಕೇಶನ್‌  ಟೆಕ್ನಾಲಜಿ ಸಂಸ್ಥೆ ʻಟಾಮ್ ಟಾಮ್ʼ ಕಳೆದ ಜನವರಿಯಲ್ಲಿ ಬಿಡುಗಡೆ ಮಾಡಿರುವ  ಜಾಗತಿಕ ಟ್ರಾಫಿಕ್‌ ಇಂಡೆಕ್ಸ್‌ (Global Traffic Index -2024)ನಲ್ಲಿ ಪ್ರಪಂಚದಲ್ಲಿಯೇ ಅತಿಹೆಚ್ಚುʻ ಸ್ಲೋ ಮೂವಿಂಗ್ʼ (ನಿಧಾನ ಸಂಚಾರ) ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿತ್ತು. ಬೆಂಗಳೂರಿನಲ್ಲಿ ಹತ್ತು ಕಿ.ಮೀ. ಪ್ರಯಾಣ ಮಾಡಲು ಸರಾಸರಿ 30 ನಿಮಿಷ 10 ಸೆಕೆಂಡ್‌ ಸಮಯ ಬೇಕಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಟ್ರಾಫಿಕ್‌ ಹೆಚ್ಚುತ್ತಿದ್ದು, ಸಮಯ ಕೂಡ ಹೆಚ್ಚುಬೇಕಾಗುತ್ತಿದೆ. 2023ರಕ್ಕೆ ಹೋಲಿಸಿದಲ್ಲಿ  2024ರಲ್ಲಿ ಹತ್ತು ಕಿ.ಮೀ. ಪ್ರಯಾಣಿಸಲು 50 ಸೆಕೆಂಡ್‌ ಹೆಚ್ಚು ಸಮಯಬೇಕಾಗುತ್ತಿದೆ ಎಂದು ಈ ಜಾಗತಿಕ ಇಂಡೆಕ್ಸ್‌ನ ವರದಿಯಲ್ಲಿ ಹೇಳಲಾಗಿತ್ತು.

 

ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಕುರಿತು ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಲೇ ಇದೆ. ಹೀಗಿರುವಾಗ ಇದಕ್ಕೆ ಪರಿಹಾರ ಸೂಚಿಸಿ, ಸರ್ಕಾರದ ಅಧ್ಯಯನ ಸಂಸ್ಥೆ ಮಾಡಿರುವ ಶಿಫಾರಸಿನ ಬಗ್ಗೆ ರಾಜ್ಯ ಸರ್ಕಾರ ಗಮನವನ್ನೇ ನೀಡದಿರುವುದು ಚರ್ಚೆಗೆ ಕಾರಣವಾಗಿದೆ.

 

ಬೆಂಗಳೂರಿನ ʻನಮ್ಮ ಮೆಟ್ರೊʼದ ಪ್ರಯಾಣ ದರವು ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಯಾಣ ದರ ಎಂದು ಹೇಳಲಾಗಿದೆ. 25 ಕಿ.ಮೀ. ಪ್ರಯಾಣಕ್ಕೆ ಈಗ 90 ರೂ. ದರ ನಿಗದಿಪಡಿಸಲಾಗುತ್ತಿದೆ. ಯಾವ ಲೆಕ್ಕಾಚಾರದ ಪ್ರಕಾರ ಈ ದರ ಹೆಚ್ಚಳ ಮಾಡಲಾಗಿದೆ ಎಂಬುದನ್ನು ಬಿಎಂಆರ್‌ಸಿಎಲ್‌ ಇನ್ನೂ ಬಹಿರಂಗಪಡಿಸಿಲ್ಲ.

 

bangalore traffic problem solution

 

ಮೆಟ್ರೊ ಪ್ರಯಾಣ ದರ ಹೆಚ್ಚಳ ಮಾಡಿದ್ದರಿಂದ ಪ್ರಯಾಣಿಕರು ಖಾಸಗಿ ವಾಹನ ಬಳಕೆ ಹೆಚ್ಚು ಮಾಡಿದ್ದಾರೆ. ಇದರಿಂದ ನಗರದ ಟ್ರಾಫಿಕ್‌ ಸಮಸ್ಯೆ ಇನ್ನಷ್ಟು ಉಲ್ಭಣಗೊಂಡಿದೆ. ದರ ಹೆಚ್ಚಳಕ್ಕೂ ಮೊದಲು ʻನಮ್ಮ ಮೆಟ್ರೊʼದಲ್ಲಿ ಪ್ರತಿ ನಿತ್ಯ ಸರಾಸರಿ 8 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಪ್ರಯಾಣ ದರ ಏರಿಕೆಯಾದ ನಂತರ ಸಂಚರಿಸುವ ಪ್ರಯಾಣಿಕರ  ಸಂಖ್ಯೆ 7.24 ಲಕ್ಷಕ್ಕೆ ಕುಸಿದಿತ್ತು.ಕಳೆದ  ಏಪ್ರಿಲ್‌ನ ನಂತರ ಸ್ವಲ್ಪ ಏರಿಕೆಯಾಗಿದ್ದು, ಈಗ ಸರಾಸರಿ 7.70 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ ಎಂದು ಮೆಟ್ರೊ ನಿಗಮ ( ಬಿಎಂಆರ್‌ಸಿಎಲ್‌) ತಿಳಿಸಿದೆ. ಆದರೂ ಸಾವಿರಾರು ಪ್ರಯಾಣಿಕರು ಮೆಟ್ರೊದಿಂದ ದೂರವಾಗಿದ್ದಾರೆ. ಇದು ನಗರದ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಮೆಟ್ರೊಗಳ ಪ್ರಯಾಣ ದರ ಇಳಿಸುವುದರ ಜೊತೆಗೆ ಮೆಟ್ರೊ ಮತ್ತು ಬಿಎಂಟಿಸಿ ಎರಡು ಕಡೆಯೂ ಬಳಸಬಹುದಾದ ಸ್ಮಾರ್ಟ್‌ ಕಾರ್ಡ್‌ ಅನ್ನು ಪರಿಚಯಿಸಬೇಕೆಂದೂ ಈ ಅಧ್ಯಯನ ವರದಿಯಲ್ಲಿ ಸಲಹೆ ನೀಡಲಾಗಿದೆ. ಹಸಿರು ಸಂಚಾರಕ್ಕೆ ಸಹಾಯವಾಗುವಂತೆ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್ಸುಗಳನ್ನು ಹೆಚ್ಚು ಮಾಡಬೇಕೆಂದು ಶಿಫಾರಸು ಮಾಡಿರುವುದು ತಿಳಿದು ಬಂದಿದೆ.

 

ಬಿಎಂಟಿಸಿ ಬಸ್‌ಗಳ ಫೀಡರ್‌ ಸೇವೆಗಳನ್ನು ಒದಗಿಸಲಾಗಿರುವ ಮೆಟ್ರೊ ನಿಲ್ದಾಣಗಳು ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಇದು ಪ್ರಯಾಣಿಕರ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿದೆ ಎಂದು ಈ ಅಧ್ಯಯನದ ಸಂದರ್ಭದಲ್ಲಿ ಗುರುತಿಸಲಾಗಿದೆ.

 

 

bangalore traffic problem solution

 

 

ಈಗ ಆರಂಭವಾಗಲಿರುವ ನಮ್ಮ ಮೆಟ್ರೊದ ʻಹಳದಿ ಮಾರ್ಗʼ ಬೆಂಗಳೂರಿನಲ್ಲಿಯೇ ಅತಿ ಹೆಚ್ಚುಸಂಚಾರ ದಟ್ಟಣೆ ಹೊಂದಿರುವ  ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.   ಈ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಸಮಸ್ಯೆಯ ಕುರಿತೂ ʻಐಸೆಕ್‌ʼ ಅಧ್ಯಯನ ನಡೆಸಿದ್ದು, ಮೆಟ್ರೂ ಕಾಮಗಾರಿ ಮುಗಿದ ನಂತರ ಈ ಜಂಕ್ಷನ್ ಅನ್ನು ಸಿಗ್ನಲ್‌ ಮುಕ್ತ ಕಾರಿಡಾರ್‌ ಆಗಿ ರೂಪಿಸಬೇಕೆಂದೂ ಪರಿಹಾರ ಸೂಚಿಸಲಾಗಿದೆ.

 

ʻನಮ್ಮ ಮೆಟ್ರೊʼ ಹಳದಿ ಮಾರ್ಗದ ಉದ್ಘಾಟನೆಗೆ ಈಗ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಪ್ರಯಾಣ ದರ ಹೆಚ್ಚಳದ ಕುರಿತು ಅವರ ಗಮನ ಸೆಳೆಯಲು ಪ್ರಯಾಣಿಕರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

SUPPORT THE FILE

Latest News

Related Posts