ಬೆಂಗಳೂರು; ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಹುದ್ದೆಗಳಿಗೆ ಎದುರಾಗಿ ನೇಮಕವಾಗಿರುವ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ಪಾವತಿ ಮಾಡಲೂ ಅನುದಾನ ಕೊರತೆ ಎದುರಾಗಿರುವ ಸಂಗತಿಯು ಇದೀಗ ಬಹಿರಂಗವಾಗಿದೆ.
ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿತ್ತು. ಅಲ್ಲದೇ ಈ ಅತಿಥಿ ಶಿಕ್ಷಕರಿಗೆ ಗೌರವಧನವನ್ನು ಹೆಚ್ಚಿಸಲಾಗಿದೆ. ಆದರೀಗ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ಪಾವತಿ ಮಾಡಲೂ ಸರ್ಕಾರದ ಬಳಿ ಹಣವಿಲ್ಲವಾಗಿದೆ.
ಒಟ್ಟು ಸರ್ಕಾರಿ ನೌಕರರುಗಳ ಪೈಕಿ 1 ಲಕ್ಷ 17 ಸಾವಿರ 884 ಸರ್ಕಾರಿ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಸಿಲ್ಲ. ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಇಕ್ರಂ ಶರೀಫ್ ಅವರು ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದ ಬೆನ್ನಲ್ಲೇ ಇದೀಗ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೂ ಗೌರವ ಸಂಭಾವನೆ ಪಾವತಿ ಮಾಡಲು ಅನುದಾನ ಕೊರತೆ ಎದುರಾಗಿರುವ ಸಂಗತಿಯು ಮುನ್ನೆಲೆಗೆ ಬಂದಿದೆ.
2024-25ನೇ ಸಾಲಿನಲ್ಲಿ ಕೆಲವು ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ ಪಾವತಿಸಲು ಅನುದಾನದ ಕೊರತೆ ಎದುರಾಗಿದೆ. ಹೀಗಾಗಿ ಈ ಅನುದಾನವನ್ನು ತಾಲೂಕು ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿ ಆದೇಶ ಹೊರಡಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕರಿಗೆ ನಿರ್ದೇಶಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಈಚೆಗಷ್ಟೇ ಸಭೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಅನುದಾನ ಕೊರತೆ ಎದುರಾಗಿರುವ ಜಿಲ್ಲೆಗಳಿಗೆ ಹಣ ಬಿಡುಗಡೆ ಸಂಬಂಧ 2025ರ ಜುಲೈ 29ರಂದು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
2024-25ನೇ ಸಾಲಿನ ಶೈಕ್ಷಣಿಕ ಸಾಲಿಗೆ ಕೆಲವು ಜಿಲ್ಲೆಗಳಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಪಾವತಿಸಲು ಅನುದಾನ ಕೊರತೆ ಉಂಟಾಗಿದೆ. 1,55,63,028 ರು. ಮೊತ್ತದ ಅನುದಾನವನ್ನು ಸಂಬಂಧಿತ ತಾಲೂಕು ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಅಲ್ಲದೇ ತಾಲೂಕುವಾರು ಖಾಲಿ ಹುದ್ದೆಗಳಿಗೆ ಎದುರಾಗಿ ನೇಮಕ ಮಾಡಿಕೊಂಡ ಅತಿಥಿ ಶಿಕ್ಷಕರ ಸಂಖ್ಯೆ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಒಟ್ಟು ಅತಿಥಿ ಶಿಕ್ಷಕರುಗಳ ವಿವರವಾದ ಮಾಹಿತಿಯೊಂದಿಗೆ ಪೂರ್ಣ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 35 ಸಾವಿರ ಮತ್ತು ಪ್ರೌಢಶಾಲೆ ಗಳಿಗೆ 10 ಸಾವಿರ ಸೇರಿ ಒಟ್ಟು 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕಕ್ಕೆ ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿತ್ತು. ರಾಜ್ಯದಲ್ಲಿ ಸುಮಾರು 49,679 ಸರ್ಕಾರಿ ಶಾಲೆಗಳಲ್ಲಿ ಹಲವು ಹುದ್ದೆಗಳು ಬಹಳ ಸಮಯದಿಂದ ಖಾಲಿ ಇತ್ತು. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿದ್ದವು. ಹೊಸ ಶೈಕ್ಷಣಿಕ ವರ್ಷವು ಜೂನ್ ಮೊದಲ ವಾರದಿಂದ ಪ್ರಾರಂಭವಾಗಿದ್ದರ ಹಿನ್ನೆಲೆಯಲ್ಲಿ ಸರ್ಕಾರ ಹುದ್ದೆ ಭರ್ತಿಗೆ ಅನುಮತಿ ನೀಡಿತ್ತು.
ಅತಿಥಿ ಉಪನ್ಯಾಸಕರ ನೇಮಕ ವಿಚಾರ ಪ್ರಕ್ರಿಯೆಯನ್ನು ವೇಗಗೊಳಿಸಲು ಶಾಲಾ ಮಟ್ಟದ ನೇಮಕಾತಿಗೆ ನೇಮಿಸಿಕೊಳ್ಳಲು ಶಿಕ್ಷಣ ಇಲಾಖೆಯು ಶಾಲೆಗಳ ಮುಖ್ಯ ಶಿಕ್ಷಕರನ್ನು (ಎಚ್‌ಎಂ) ನಿಯೋಜಿಸಿದೆ. 2024-25ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಶಿಕ್ಷಕರ ಕೊರತೆ ನೀಗಿಸಲು ಆದ್ಯತೆ ನೀಡಿತ್ತು.
ಖಾಲಿ ಇರುವ 33,863 ಹುದ್ದೆಗಳಿಗೆ ಜಿಲ್ಲಾವಾರು, ತಾಲೂಕುವಾರು ಅತಿಥಿ ಶಿಕ್ಷಕರನ್ನು ಮೊದಲ ಹಂತದಲ್ಲಿ ನೇಮಕ ಮಾಡಿಕೊಳ್ಳಲು ತಿಳಿಸಿತ್ತು. ಪ್ರೌಢಶಾಲೆಗಳಿಗೆ 10 ಸಾವಿರ ಶಿಕ್ಷಕರ ನೇಮಕಾತಿಗೂ ಸರ್ಕಾರ ಅನುಮತಿ ನೀಡಿತ್ತು. ಸದ್ಯ ಪ್ರೌಢಶಾಲೆಯಲ್ಲಿ 8,954 ವಿಷಯ ಶಿಕ್ಷಕರ ಕೊರತೆ ಇದೆ. ನೇರ ನೇಮಕಾತಿ, ಬಡ್ತಿ, ವರ್ಗಾವಣೆ ಮೂಲಕ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಯಾವುದು ಮೊದಲೋ ಅಲ್ಲಿಯವರೆಗೂ 8,954 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ತಿಳಿಸಿತ್ತು.
ಮಂಜೂರಾದ ಖಾಲಿ ಹುದ್ದೆಗಳಿಗೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದು. ಅತಿಥಿ ಶಿಕ್ಷಕರ ನೇಮಕವನ್ನು ಮುಖ್ಯ ಶಿಕ್ಷಕರ ಮೂಲಕವೇ ಮಾಡಬೇಕು ಎಂದು ಸೂಚಿಸಿತ್ತು. ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶದಲ್ಲಿನ ಖಾಲಿ ಹುದ್ದೆಗಳಿಗೆ ಹಾಗೂ ಶಿಕ್ಷಕ ರಹಿತ ಶಾಲೆಗಳಿಗೆ/ಹೆಚ್ಚು ವಿದ್ಯಾರ್ಥಿಗಳಿರುವ ಖಾಲಿ ಹುದ್ದೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿತ್ತು.
ವಿಶೇಷವಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳು, ದ್ವಿಭಾಷಾ, ಆಂಗ್ಲ ಭಾಷಾ ಮಾಧ್ಯಮದ ತರಗತಿಗಳಿರುವ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇ.100 ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು. ಹುದ್ದೆಗೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು.
ಅತಿಥಿ ಶಿಕ್ಷಕರ ಹುದ್ದೆಗಳಿಗೆ ಕಾಯಂಗೊಂಡ ಶಿಕ್ಷಕರು ವರ್ಗಾವಣೆ ಅಥವಾ ನೇಮಕ ಹೊಂದಿದ್ದಲ್ಲಿ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಬಳಿಕ ತಾಲೂಕಿನಲ್ಲಿ ಅಗತ್ಯಕ್ಕೆ ಅನುಸಾರವಾಗಿ ಹಂಚಿಕೆ ಮಾಡಬೇಕು. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳ ಶಿಕ್ಷಕರ ನೇಮಕಕ್ಕೆ ಮೊದಲ ಆದ್ಯತೆ ನೀಡಬೇಕು. ಹೆಚ್ಚುವರಿ ಶಿಕ್ಷಕರು ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡದಂತೆ ಸೂಚಿಸಲಾಗಿದೆ. ಪ್ರಾಥಮಿಕ ಶಾಲೆಗೆ 10 ಸಾವಿರ ರೂ. ಮತ್ತು ಪ್ರೌಢಶಾಲೆಗೆ 10,500 ರೂ. ಗೌರವಧನ ನಿಗದಿ ಮಾಡಿತ್ತು.
ಪ್ರಸಕ್ತ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ₹10 ಸಾವಿರ, ಪ್ರೌಢ ಶಾಲೆಗೆ 10,500 ಹಾಗೂ ಪಿಯು ಕಾಲೇಜಿಗೆ 12,000 ನೀಡಲಾಗುತ್ತಿದೆ. ಈ ಗೌರವದನ್ನ ಅತ್ಯಂತ ಕಡಿಮೆ ಇದೆ. ಅಲ್ಲದೆ ಖಾಯಂ ಶಿಕ್ಷಕರು, ಉಪನ್ಯಾಸಕರು ಸುಮಾರು 50 ಸಾವಿರ ಹುದ್ದೆಗಳು ಖಾಲಿ ಇವೆ. ಹಾಗಾಗಿ ಸರ್ಕಾರವೇ ನಿಗದಿ ಪಡಿಸಿದ ಕನಿಷ್ಠ ಕೂಲಿಗೆ ಸರಿ ಸಮಾನವಾಗಿ ಗೌರವ ಸಂಭಾವನೆ ನೀಡುವಂತೆ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
‘ಅತಿಥಿಗಳ ಗೌರವ ಸಂಭಾವನೆಯನ್ನು ಹಿಂದೆ ಸಲ್ಲಿಸಿದ ಪ್ರಸ್ತಾವದಂತೆ ಜೂನ್ 2022ರಲ್ಲಿ ಒಮ್ಮೆ ಹೆಚ್ಚಳ ಮಾಡಿರುವ ಕಾರಣ ಮತ್ತೆ ಹೆಚ್ಚಳ ಮಾಡಲು ಸಾಧ್ಯವಿಲ್ಲ’ ಎಂದು ಪ್ರಸ್ತಾವ ತಿರಸ್ಕರಿಸಿರುವುದಕ್ಕೆ ಆರ್ಥಿಕ ಇಲಾಖೆ ಕಾರಣ ನೀಡಿತ್ತು.
2024-25ನೇ ಸಾಲಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ 2,704 ಕೋಟಿ ರು ಅನುದಾನ ಒದಗಿಸಿತ್ತು. ಇದರಲ್ಲಿ ಶಾಲಾ ಸೌಲಭ್ಯಗಳ ನಿರ್ವಹಣೆ, ಆರ್‍ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳ ಶುಲ್ಕಗಳ ಮರು ಪಾವತಿ, ವಿದ್ಯಾವಿಕಾಸ ಯೋಜನೆ, ಕಟ್ಟಡ ವೆಚ್ಚ, ವಿದ್ಯಾರ್ಥಿ ವೇತನ, ಪ್ರೋತ್ಸಾಹ, ಸಾರಿಗೆ ವೆಚ್ಚ, ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮ, ಸಾಮಾನ್ಯ ವೆಚ್ಚ, ಸಹಾಯನುದಾನ, ಇತರೆ ವೆಚ್ಚ, ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಿಗೆ ಮೂಲಭೂತ ಸೌಕರ್ಯ, ಸಮಗ್ರ ಶಿಕ್ಷಣ ಅಭಿಯಾನ, ಶುಚಿ ಯೋಜನೆಯೂ ಒಳಗೊಂಡಿತ್ತು.