ಬೆಂಗಳೂರು; ಮುಕ್ತ ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಉತ್ತರ ಪತ್ರಿಕೆಗಳನ್ನು ಖರೀದಿಸಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಬೊಕ್ಕಸಕ್ಕೆ ಹೊರೆಯುಂಟು ಮಾಡಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯ ಮತ್ತು ಸ್ವಾಯತ್ತ ಕಾಲೇಜುಗಳು ಇದೇ ಅವಧಿಯಲ್ಲಿ ಖರೀದಿಸಿರುವ ಉತ್ತರ ಪತ್ರಿಕೆಗಳ ದರಕ್ಕೂ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಖರೀದಿಸಿರುವ ತಲಾ ಉತ್ತರ ಪತ್ರಿಕೆ ದರದ ಮಧ್ಯೆ 5 ರು ವ್ಯತ್ಯಾಸವಿದೆ. ಇದರಿಂದಾಗಿ ಅಂದಾಜು 50 ಲಕ್ಷಕ್ಕೂ ಹೆಚ್ಚು ಹೊರೆ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ವಿಶೇಷವೆಂದರೇ ವಿಶ್ವವಿದ್ಯಾಲಯವು ಸಿಂಡಿಕೇಟ್ ಸಭೆಯ ಮುಂದೆ 10 ಲಕ್ಷ ಉತ್ತರ ಪತ್ರಿಕೆಗಳ ಖರೀದಿಸಲು ಅನುಮೋದನೆ ಕೋರಿದ್ದರೇ, ಸಿಂಡಿಕೇಟ್ ಸಭೆಯು 20 ಲಕ್ಷ ಉತ್ತರ ಪತ್ರಿಕೆಗಳನ್ನು ಖರೀದಿಸಲು ನಿರ್ಣಯಿಸಿತ್ತು. ಹಾಗೆಯೇ ಉತ್ತರ ಪತ್ರಿಕೆಗಳ ನಿರ್ದಿಷ್ಟತೆ (SPECIFICATION) ಗಳ ಬಗ್ಗೆ ಕಾರ್ಯಸೂಚಿ ಮತ್ತು ನಡವಳಿಯಲ್ಲಿ ಮಾಹಿತಿಗಳು ಕಂಡು ಬಂದಿಲ್ಲ. ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ಗಮನಕ್ಕೆ ಬಂದಿದ್ದರೂ ಸಹ ಮೌನ ವಹಿಸಿರುವುದು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ ಗೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ನಡವಳಿಗಳು ಲಭ್ಯವಾಗಿವೆ.
ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಉತ್ತರ ಪತ್ರಿಕೆಗಳನ್ನು ಖರೀದಿಸುವ ಸಂದರ್ಭದಲ್ಲಿ ಸ್ಪರ್ಧಾತ್ಮಕವಾಗಿ ದರ ಸಂಧಾನ ನಡೆಸಲು ಅವಕಾಶಗಳಿರುತ್ತವೆ. ಆದರೆ ಈ ವಿಶ್ವವಿದ್ಯಾಲಯವು ಸಿಂಡಿಕೇಟ್ ಸಭೆಗೆ ವಿಷಯ ಮಂಡಿಸುವಾಗಲೇ 19.5 ರು ಎಂದು ದರ ನಮೂದಿಸಿತ್ತು. ವಿಶ್ವವಿದ್ಯಾಲಯದ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಮುಕ್ತ ಮಾರುಕಟ್ಟೆಯಲ್ಲಿ 44 ಪುಟಗಳ ಉತ್ತರ ಪತ್ರಿಕೆಯನ್ನು ಲಕ್ಷಾಂತರ ಸಂಖ್ಯೆಯಲ್ಲಿ ಖರೀದಿಸಿದರೇ ಗರಿಷ್ಠ 13 ರು ತಗುಲಲಿದೆ. ಬೆಂಗಳೂರಿನ ಖಾಸಗಿ ಕಾಲೇಜೊಂದು (210 ಎಂಎಂ/280 ಎಂಎಂ, ಮ್ಯಾಪ್ಲಿತ್ತೋ ಕಾಗದ, 90 ಜಿಎಸ್‌ಎಂ, 4 ಕವರ್ ಪೇಜ್, 70 ಜಿಎಸ್‌ಎಂ 40 ಒಳ ಪುಟಗಳು, ಬಾರ್ ಕೋಡ್ ಒಳಗೊಂಡಂತೆ) 12,000 ಸಂಖ್ಯೆ ಉತ್ತರ ಪತ್ರಿಕೆಗಳನ್ನು 20 ರು ನಂತೆ ಖರೀದಿಸಿದೆ.
‘ಬೆಂಗಳೂರಿನಲ್ಲಿರುವ ಖಾಸಗಿ ವಿಶ್ವವಿದ್ಯಾಲಯವೊಂದು 18.10 ರು ಮೂಲ ದರದಲ್ಲಿ ಖರೀದಿಸಿದೆ. ಸಾವಿರ ಸಂಖ್ಯೆಯಲ್ಲಿ ಉತ್ತರ ಪತ್ರಿಕೆಗಳನ್ನು 18.10 ರು ದರದಲ್ಲೇ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿರುವಾಗ ಲಕ್ಷಾಂತರ ಸಂಖ್ಯೆಯಲ್ಲಿ ಉತ್ತರ ಪತ್ರಿಕೆಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲು ಸಾಕಷ್ಟು ಅವಕಾಶಗಳಿರುತ್ತವೆ. ದರ ಹೊಂದಾಣಿಕೆ ಅಥವಾ ದರ ಸಂಧಾನಕ್ಕೆ ಹಲವು ಮಾರ್ಗಗಳಿರುತ್ತವೆ,’ ಎನ್ನುತ್ತಾರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು.
ಕಾರ್ಯಸೂಚಿಯಲ್ಲಿದ್ದದ್ದು 10 ಲಕ್ಷ
2025-26ನೇ ಸಾಲಿನಲ್ಲಿ ನಡೆಯಲಿರುವ ಎಸ್‌ಇಪಿ ಪರೀಕ್ಷೆಗಳಿಗೆ ಹೊಸದಾಗಿ ಉತ್ತರ ಪತ್ರಿಕೆಗಳನ್ನು ಖರೀದಿಸಲು ಸಿಂಡಿಕೇಟ್ ಅನುಮೋದನೆಗೆ ವಿಶ್ವವಿದ್ಯಾಲಯವು ವಿಷಯ ಮಂಡಿಸಿತ್ತು.
ಸ್ನಾತಕೋತ್ತರ ಪದವಿ, ಬಿಎಡ್, ಬಿಪಿಎಡ್ ಮತ್ತು ಸ್ನಾತಕ ಪದವಿ ಪರೀಕ್ಷೆಗಳಿಗೆ ಹೊಸದಾಗಿ 10.00 ಲಕ್ಷ ಉತ್ತರ ಪತ್ರಿಕೆ ಖರೀದಿಸಲು ಅನುಮತಿ ಕೋರಿತ್ತು. 40 ಪುಟಗಳನ್ನು ಒಳಗೊಂಡ (ಪ್ರತಿ ಪುಟದಲ್ಲಿಯೂ ಬಾರ್ ಕೋಡ್ ಅಳವಡಿಸಿರುವ) ಎ 4 ಸೈಜಿನ ಉತ್ತರ ಪತ್ರಿಕೆಗಳನ್ನು ಟೆಂಡರ್ ಮುಖಾಂತರ ಖರೀದಿಸುವ ಸಂಬಂಧ ಈ ಹಿಂದೆ ಟೆಂಡರ್ ಮುಖಾಂತರ ಸುಮಾರು 7.5 ಲಕ್ಷ ಉತ್ತರ ಪತ್ರಿಕೆಗಳನ್ನು ಖರೀದಿಸಿತ್ತು. ಸರಬರಾಜು ಮಾಡಲಾಗಿರುವ ಉತ್ತರ ಪತ್ರಿಕೆಗಳು 36 ಪುಟಗಳನ್ನು ಒಳಗೊಂಡಿತ್ತು. ಹಾಗೆಯೇ ಈ ಉತ್ತರ ಪತ್ರಿಕೆಗಳು(ಎನ್‌ಇಪಿ) ಪರೀಕ್ಷೆಗಳಿಗೆ ಖರೀದಿಸಲಾಗಿತ್ತು ಎಂದು ಸಿಂಡಿಕೇಟ್‌ಗೆ ವಿವರಿಸಿತ್ತು.
ಆದರೆ 2025-26ನೇ ಸಾಲಿನ ಎಸ್‌ಇಪಿ ಪರೀಕ್ಷೆಗಳು ಒಟ್ಟು 80 ಅಂಕಗಳಿಗೆ ಇರುವುದರಿಂದ ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಈಗ ನೀಡುತ್ತಿರುವ ಉತ್ತರ ಪತ್ರಿಕೆಗಳ ಪುಟಗಳು ಸಾಲುತ್ತಿಲ್ಲವೆಂದು ಎಂದು ದೂರು ನೀಡಿದ್ದರು ಎಂದು ಸಿಂಡಿಕೇಟ್‌ನ ಗಮನ ಸೆಳೆದಿತ್ತು.
ಮುಂಬರುವ 2025-26ನೇ ಸಾಲಿನಲ್ಲಿ ನಡೆಯಲಿರುವ ಸ್ನಾತಕೋತ್ತರ ಪದವಿ, ಬಿಎಡ್, ಬಿಪಿಎಡ್ ಮತ್ತು ಸ್ನಾತಕ ಪದವಿ (ಎಸ್‌ಇಪಿ) ಪರೀಕ್ಷೆಗಳಿಗೆ ಹೊಸದಾಗಿ 10 ಲಕ್ಷ ಎ 4 ಸೈಜಿನ ಉತ್ತರ ಪತ್ರಿಕೆಗಳನ್ನು ಟೆಂಡರ್ ಮುಖಾಂತರ ಖರೀದಿಸುವ ಸಂಬಂಧ ಸಿಂಡಿಕೇಟ್‌ನಲ್ಲಿ ಚರ್ಚೆಯಾಗಿತ್ತು.
ನಿರ್ಣಯ ಆಗಿದ್ದು 20 ಲಕ್ಷಕ್ಕೆ
ಕಾರ್ಯಸೂಚಿಯಲ್ಲಿದ್ದರ ಪ್ರಕಾರ 10 ಲಕ್ಷ ಉತ್ತರ ಪತ್ರಿಕೆಗಳನ್ನು ಖರೀದಿಸುವ ಕುರಿತು ಚರ್ಚಿಸಿದ್ದ ಸಿಂಡಿಕೇಟ್ ಸಭೆಯು, ಉತ್ತರ ಪತ್ರಿಕೆಗಳ ಖರೀದಿ ಸಂಖ್ಯೆಯನ್ನು 20 ಲಕ್ಷಕ್ಕೇರಿಸಿತ್ತು. ಒಂದು ಉತ್ತರ ಪತ್ರಿಕೆಗೆ 19.50 ರು ನಂತೆ ಕೆಟಿಪಿಪಿ ಕಾಯ್ದೆ 1999 ಅನುಸಾರ ಖರೀದಿಸಲು ಸಭೆಯು ಅನುಮೋದಿಸಿತ್ತು.
ಸಿಂಡಿಕೇಟ್ ಸಭೆಯ ಅನುಮೋದನೆ ನಂತರ ವಿಶ್ವವಿದ್ಯಾಲಯವು 19.50 ರು ಆಧಾರದ ದಂತೆ ಟೆಂಡರ್ ಕರೆದಿತ್ತು. ಆದರೆ ಟೆಂಡರ್‍ನಲ್ಲಿ ಏಕ ಬಿಡ್ ಸಂಸ್ಥೆಯು ಅರ್ಹತೆ ಪಡೆದಿತ್ತು. ಆದ್ದರಿಂದ ಸರ್ಕಾರದ ನಿಯಮಾನುಸಾರ ಏಕ ಬಿಡ್ ಸಂಸ್ಥೆಯನ್ನು ಪರಿಗಣಿಸಲು ಅವಕಾಶವಿರುವುದಿಲ್ಲ. ಆದ್ದರಿಂದ 2025ರ ಏಪ್ರಿಲ್ 22ರಂದು ಏಕ ಬಿಡ್ ಸಂಸ್ಥೆಯ ಟೆಂಡೆರ್‍ನ್ನು ರದ್ದುಪಡಿಸಿತ್ತು.
10 ಲಕ್ಷ ಉತ್ತರ ಪತ್ರಿಕೆಗಳನ್ನು ಖರೀದಿಸಲು ಕುಲಪತಿಗಳು ಅನುಮೋದಿಸಿದ್ದರು. ನಂತರ ಅಲ್ಪಾವಧಿ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ 7 ಸಂಸ್ಥೆಗಳು ಭಾಗವಹಿಸಿದ್ದವು. ಅದರಲ್ಲಿ ಎರಡು ಸಂಸ್ಥೆಗಳು ಅರ್ಹತೆ ಹೊಂದಿದ್ದವು. ಮುಂಬೈನ ಓರಿಯಂಟ್ ಪ್ರೆಸ್ ಲಿಮಿಟೆಡ್ ಅತೀ ಕಡಿಮೆ ದರ 19.5 ರು ದರ ನಮೂದಿಸಿತ್ತು. ಈ ಸಂಸ್ಥೆಯೊಂದಿಗೆ ದರ ಸಂಧಾನ ನಡೆಸಿ ಒಂದು ಉತ್ತರ ಪತ್ರಿಕೆಗೆ 18.95 ರು. ನಂತೆ ಸರಬರಾಜು ಮಾಡಲು ಒಪ್ಪಿಸಿತ್ತು.
ಈ ನಿರ್ಣಯವನ್ನು ಸಿಂಡಿಕೇಟ್ ಸಭೆಯು ಅನುಮೋದಿಸಿತ್ತು.
2024ರ ಮಾರ್ಚ್ 7ರಂದು ಸಾಮಾನ್ಯ ಸಿಂಡಿಕೇಟ್ ಸಭೆಯಲ್ಲಿ ಉತ್ತರ ಪತ್ರಿಕೆಗಳ ಕುರಿತು ಚರ್ಚೆಯಾಗಿದೆ. 2024-25ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ, ಬಿಎಡ್, ಬಿಪಿಎಡ್ ಮತ್ತು ಸ್ನಾತಕ ಪದವಿ ಪರೀಕ್ಷೆಗಳಿಗೆ ಉತ್ತರ ಪತ್ರಿಕೆಗಳ ಕೊರತೆ ಇರುವುದರಿಂದ 2023-24ನೇ ಸಾಲಿನಲ್ಲಿ ಒಟ್ಟು 10.00 ಲಕ್ಷ ಮುಖ್ಯ ಉತ್ತರ ಪತ್ರಿಕೆಗಳನ್ನು ಖರೀದಿಸಿತ್ತು.
ಆದರೆ ಆ ಉತ್ತರ ಪತ್ರಿಕೆಗಳು 2024-25ನೇ ಸಾಲಿನಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ಕೊರತೆ ಉಂಟಾಗುವುದರಿಂದ ಹೆಚ್ಚುವರಿಯಾಗಿ 3.50 ಲಕ್ಷ ಮುಖ್ಯ ಉತ್ತರ ಪತ್ರಿಕೆಗಳನ್ನು ಖರೀದಿ ಮಾಡುವ ಸಂಬಂಧ ಸಿಂಡಿಕೇಟ್ ಸಭೆ ಮುಂದೆ ಮಂಡಿಸಿತ್ತು.
ಚರ್ಚೆ ನಂತರ 2024-25ನೇ ಸಾಲಿನಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ಅವಶ್ಯವಿರುವ 3.50 ಲಕ್ಷ ಉತ್ತರ ಪತ್ರಿಕೆಗಳನ್ನು ನಿಯಮಾನುಸಾರ ಟೆಂಡರ್ ಮೂಲಕ ಖರೀದಿಸಲು ಸಭೆ ನಿರ್ಣಯಿಸಿತ್ತು. ಶೇ. 25ರಂದು 2.5 ಲಕ್ಷ ಉತ್ತರ ಪತ್ರಿಕೆಗಳನ್ನು ಖರೀದಿಸಲು ಅವಕಾಶವಿರುವುದರಿಂದ ಈ ಹಿಂದೆ ಸರಬರಾಜು ಮಾಡಿದ್ದ ಸಂಸ್ಥೆಯಿಂದಲೇ ಖರೀದಿ ಮಾಡಲು ಸಿಂಡಿಕೇಟ್ ಸಭೆಯು ಸರ್ವಾನುಮತದಿಂದ ಅನುಮೋದಿಸಿತ್ತು.
‘ಒಂದು ಪರೀಕ್ಷೆಗೆ 6.00 ಲಕ್ಷ ಉತ್ತರ ಪತ್ರಿಕೆಗಳು ಮಾತ್ರ ಅವಶ್ಯಕವಾಗಿದೆ. ವಿಶ್ವವಿದ್ಯಾಲಯವು ನಡೆಸುವ 2 ಪರೀಕ್ಷೆಗಳಿಗೆ 12 ಲಕ್ಷ ಉತ್ತರ ಪತ್ರಿಕೆಗಳಷ್ಟೇ ಬಳಕೆ ಆಗಲಿದೆ. ಆದರೆ 4 ಲಕ್ಷ ಉತ್ತರ ಪತ್ರಿಕೆಗಳನ್ನು ಹೆಚ್ಚುವರಿಯಾಗಿ ಖರೀದಿಸುವುದಾದರೂ ಏಕೆ,’ ಎಂದು ಪ್ರಶ್ನಿಸುತ್ತಾರೆ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು.
ಈ ಕುರಿತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರಿಗೆ ‘ದಿ ಫೈಲ್’ ಪ್ರಶ್ನಾವಳಿ ಕಳಿಸಿದೆ.