ಬೆಂಗಳೂರು; ಧರ್ಮಸ್ಥಳ ದೇವರ ದರ್ಶನಕ್ಕೆ ಬಂದವರು, ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್‌ನಲ್ಲಿನ ಕೆಲವು ವಿದ್ಯಾರ್ಥಿಗಳು, ಧರ್ಮಸ್ಥಳದ ಹರಕೆ ಮಂಡಿಯಲ್ಲಿದ್ದ ಕ್ಷೌರಿಕ, ಅಪರಿಚಿತ ಗಂಡು, ಅಪರಿಚಿತ ಹೆಣ್ಣುಮಕ್ಕಳು ಸೇರಿದಂತೆ 2013ರ ಸೆ.10ರಿಂದ 2020ರ ಡಿಸೆಂಬರ್ ವರೆಗೆ ಉಜಿರೆ ಮತ್ತು ಧರ್ಮಸ್ಥಳದಲ್ಲಿ ಒಟ್ಟಾರೆ 98 ಮಂದಿ ಅಸಹಜವಾಗಿ ಸಾವನ್ನಪ್ಪಿದ್ದರು. ಈ ಸಂಬಂಧ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಉಜಿರೆ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಜೀವನದಲ್ಲಿ ಜಿಗುಪ್ಸೆ, ಅನಾರೋಗ್ಯದಿಂದ ಬೇಸತ್ತು, ಕೊಲೆ, ಕುಡಿತದ ಅಮಲಿನಲ್ಲಿ ಕೆಳಗೆ ಬಿದ್ದು, ಗಾಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿರುವುದು, ಆಕಸ್ಮಿಕವಾಗಿ ಎದೆನೋವಿನಿಂದ ಹೃದಯಾಘಾತಗೊಂಡು ಮೃತಪಟ್ಟಿರುವುದು, ಕೆರೆಯಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಈಜು ಬಾರದೇ ಸಾವನ್ನಪ್ಪಿರುವ ಪ್ರಕರಣಗಳು ಸಹ ಈ ಪಟ್ಟಿಯಲ್ಲಿವೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಮತ್ತು ಅಪರಾಧ ಕೃತ್ಯಗಳನ್ನು ತನಿಖೆ ಮಾಡಲು ಎಸ್‌ಐಟಿ ರಚನೆ ಮಾಡಿರುವ ಹೊತ್ತಿನಲ್ಲೇ ಉಜಿರೆ ವ್ಯಾಪ್ತಿ ಮತ್ತು ಬೆಳ್ತಂಗಡಿ ಠಾಣೆಯಲ್ಲಿ 2013ರಿಂದ 2020ರವರೆಗೆ ದಾಖಲಾಗಿರು ಅಸಹಜ ಸಾವಿನ ಪ್ರಕರಣಗಳ ಪಟ್ಟಿಯು ಮುನ್ನೆಲೆಗೆ ಬಂದಿದೆ. ಇದರ ಆಯ್ದ ಪ್ರಕರಣಗಳನ್ನು ಇಲ್ಲಿ ಕೊಡಲಾಗಿದೆ.
ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ನೇಣು ಬಿಗಿದು ಆತ್ಮಹತ್ಯೆ, ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್‌ನ ವಿದ್ಯಾರ್ಥಿ ಮನನೊಂದಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರನ್ನಾಧರಿಸಿ ಅಸಹಜ ಸಾವುಗಳೆಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಸಿಡಿಲು ಬಡಿದು ಸಾವು, ಧರ್ಮಸ್ಥಳ ದೇವರ ದರ್ಶನಕ್ಕೆ ಸಂಸಾರದೊಂದಿಗೆ ಬಂದವರು ಪಂಚಮಿ ಲಾಡ್ಜ್‌ನ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವುದು, ಯಾತ್ರಾರ್ಥಿಗಳಾಗಿ ಬಂದವರು ಮರಣ ಹೊಂದಿರುವುದು, ಅಪರಿಚಿತ ಗಂಡು, ಅಪರಿಚಿತ ಹೆಣ್ಣು ಮಕ್ಕಳು ಸಾವನ್ನಪ್ಪಿರುವುದು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಆತ್ಮಹತ್ಯೆ ಮಾಡಿಕೊಂಡಿರುವುದು, ಅಮಲು ಪದಾರ್ಥ ಸೇವನೆ ಮಾಡಿ ಸಾವನ್ನಪ್ಪಿರುವುದು, ಮತ್ತಿತರೆ ಕಾರಣಗಳಿಂದ ಅಸಹಜವಾಗಿ ಒಟ್ಟಾರೆ 98 ಮಂದಿ ಸಾವನ್ನಪ್ಪಿದ್ದರು.
ಈ ಎಲ್ಲಾ ಮಾಹಿತಿಗಳನ್ನು ನಾಗರೀಕ ಸೇವಾ ಟ್ರಸ್ಟ್, ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಂಡಿರುವುದು ಗೊತ್ತಾಗಿದೆ. ಅಸಹಜವಾಗಿ ಸಾವನ್ನಪ್ಪಿರುವವರ ಹೆಸರು ಮತ್ತು ಮೊಕದ್ದಮೆ ಸಂಖ್ಯೆಗಳನ್ನೊಳಗೊಂಡ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿವೆ.
ಅಸಹಜವಾಗಿ ಸಾವನ್ನಪ್ಪಿರುವ ಪ್ರಕರಣದ ವಿವರ
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಬಿಲ್ಲರೋಡಿ ಎಂಬಲ್ಲಿ ಸರಕಾರಿ ಸರ್ವೆ ನಂಬರ್ 59/1ಪಿ1 ರಲ್ಲಿನ ಸುಮಾರು 14 ಎಕರೆ ಜಾಗದಲ್ಲಿ ಮರ ಕಡಿಯುತ್ತಿರುವ ಸಮಯ ವ್ಯಕ್ತಿಯೋರ್ವರ ಶವ ದೊರೆತಿತ್ತು. ಹಿಟಾಚಿ ಬಳಸಿ ಅಳವಾದ ಗುಂಡಿ ತೋಡಿ ಮಣ್ಣು ಮುಚ್ಚಿ ಸಂಶಯ ಬಾರದಂತೆ ಮರದ ದಿಮ್ಮಿಗಳಿಂದ ಮುಚ್ಚಿರುತ್ತಾರೆಂದು ಪರಿಸರದ ಜನ ಆಡಿಕೊಳ್ಳುತ್ತಿದ್ದರು.
ಇದೇ ಸಮಯ ತಿಮರೋಡಿ ಪರಿಸರದ ಸೋಂಪ @ ಬಾಲಕೃಷ್ಣ ಗೌಡ ಎಂಬವರು ನಾಪತ್ತೆಯಾಗಿದ್ದರು. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಈ ಕೃತ್ಯದ ಹಿಂದೆ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಹೂತು ಹಾಕಲಾದ ಶವದ ಬಗ್ಗೆ ಸಂಶಯವಿದೆ ಎಂದು ಭಾಸ್ಕರ ಬಡಕೊಟ್ಟು ಎಂಬುವರು ದೂರು ನೀಡಿದ್ದರು.
ವಿಶ್ವೇಶ್, ಕ್ಷಿತಿಜ್ ಜೈನ್ ಮತ್ತು ಸುಶಾಂತ್ ಎಂಬುವರು ಕಾರಿನಲ್ಲಿ ಉಜಿರೆಗೆ ಬರುತ್ತಿದ್ದ ಸಂದರ್ಭದಲ್ಲಿ ಸಿದ್ಧವನ ಎಂಬಲ್ಲಿ ದೊಡ್ಡ ಮರ ಬುಡ ಸಮೇತ ಕಾರಿನ ಮೇಲೆ (04-05-2019) ಬಿದ್ದಿತ್ತು. ಕಾರು ಪೂರ್ತಿ ಜಖಂಗೊಂಡಿತ್ತು. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಶ್ವೇಶ್ (20) ಹಾಗೂ ಕ್ಷಿತಿಜ್ ಜೈನ್ (24) ರವರ ತಲೆಗೆ ಗಂಭೀರ ರೀತಿಯ ರಕ್ತ ಗಾಯಗೊಂಡು ಮೃತಪಟ್ಟಿದ್ದರು.
ಉಜಿರೆ ಗ್ರಾಮದ ನೀರ ಚಿಲುಮೆ ಎಂಬಲ್ಲಿ ಅಪರಿಚಿತ ಗಂಡಸಿನ ಮೃತದೇಹ (22-11-2020) ಪತ್ತೆಯಾಗಿತ್ತು.
ಆಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಹನೀಫ್ ಕೆ.ಎಂ (52) ಎಂಬುವರು ವಿಪರೀತ ಸಾಲ ಮಾಡಿ ಕೊಂಡು, ಸಾಲವನ್ನು ಹಿಂತಿರುಗಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕುಂಟಿನಿ ಎಂಬಲ್ಲಿ ತನ್ನ ಮನೆಯ ಸಿಟೌಟ್ ನಲ್ಲಿ (09.09.2013) ರಂದು 21.00 ಗಂಟೆಯಿಂದ ದಿನಾಂಕ 10.09.2013ರ ಬೆಳಿಗ್ಗೆ 06.15 ಗಂಟೆಯ ಮಧ್ಯೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸುರೇಶ (42) ಎಂಬವರು ಸುರೇಶರ ಹೆಂಡತಿಯ ಮನೆ ನಿನ್ನಿಕಲ್ಲಿಗೆ ಸೀಮಂತ ಕಾರ್ಯಕ್ರಮಕ್ಕೆ ಹೋದವರು ಮೈಗೆ ಹುಷಾರಿಲ್ಲದೆ ಇದ್ದು, ವಾಂತಿಯಾಗಿ ನಂತರ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ (10.11.2013) ಮೃತಪಟ್ಟಿದ್ದರು. ಸುರೇಶರವರ ಅನಾರೋಗ್ಯವೇ ಮರಣಕ್ಕೆ ಕಾರಣವಾಗಿದ್ದು, ಈ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ದೂರುದಾರರು ತಿಳಿಸಿರುವುದು ಗೊತ್ತಾಗಿದೆ.
ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ರಾಜ್‌ಲೀಲಾ ರೆಸಿಡೆನ್ಸಿ ವಸತಿ ಗೃಹದಲ್ಲಿ (01-03-2014) ಬಾಲು, ಬಿ.ಎಂ. ರೋಡ್, ಚಿಕ್ಕಮಗಳೂರು (ದೂರವಾಣಿ ಸಂಖ್ಯೆ 9480964718 )ಎಂಬ ವಿಳಾಸ ನೀಡಿ ಓರ್ವ ಗಂಡಸು ಮತ್ತು ಓರ್ವ ಹೆಂಗಸು ಕೊಠಡಿ (ಸಂಖ್ಯೆ 104) ಉಳಿದುಕೊಂಡಿದ್ದರು. ಕೊಠಡಿಯಲ್ಲಿ ಮಹಿಳೆಯು ಬಾತ್ ರೂಂನಲ್ಲಿ ಅರೆ ನಗ್ನಳಾಗಿ ಮೃತಪಟ್ಟಿದ್ದರು. ಆಕೆಯನ್ನು ಜೊತೆಯಲ್ಲಿದ್ದ ವ್ಯಕ್ತಿಯು ಯಾವುದೋ ರೀತಿಯಲ್ಲಿ ಯಾವುದೋ ಕಾರಣ ಮತ್ತು ಉದ್ದೇಶದಿಂದ ಕೊಲೆ ಮಾಡಿ ಕೊಠಡಿಯ ಬಾಗಿಲನ್ನು ಹೊರಗಡೆಯಿಂದ ಚಿಲಕ ಹಾಕಿ ಪರಾರಿಯಾಗಿದ್ದರು ಎಂಬುದು ತಿಳಿದು ಬಂದಿದೆ.
ಧರ್ಮಸ್ಥಳ ಹರಕೆ ಮಂಡೆಯಲ್ಲಿ ಕ್ಷೌರಿಕ ಕೆಲಸ ಮಾಡಿಕೊಂಡಿದ್ದ ಚಂದನ್ ಭಂಡಾರಿಯು ಕುಡಿತದ ಚಟಕ್ಕೆ ಬಲಿ ಬಿದ್ದಿದ್ದ. ಈತ (15.01.2014) ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಪಶ್ಚಿಮದ ಬದಿಯ ಚಾಕಟೆ ಮರದ ಹತ್ತಿರ ಕುಡಿತದ ಅಮಲಿನಲ್ಲಿ ಕೆಳಗೆ ಬಿದ್ದು ಸಾವನ್ನಪ್ಪಿದ್ದ.
ಉಜಿರೆ ಬಸ್‌ಸ್ಟ್ಯಾಂಡ್ ಬಳಿ ವಿಷ ಪದಾರ್ಥ ಸೇವಿಸಿದ್ದ ಜೋಸೆಫ್ ಎಂಬಾತನನ್ನು (07.02.2014) ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಶರಾಬು ಸೇವಿಸುವ ಅಭ್ಯಾಸ ಮತ್ತು ತನ್ನ ಬಲಕ್ಕೆ ಬೆರಳುಗಳಿಗೆ ಆಗಿರುವ ಗಾಯದಿಂದ ಜೀವನದಲ್ಲಿ ಜಿಗುಪ್ಪೆಗೊಂಡು ವಿಷಸೇವಿಸಿ (09.02.2014) ಆತ್ಮಹತ್ಯೆ ಮಾಡಿಕೊಂಡಿದ್ದ.
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ದೇವಸ್ಥಾನದ ವಠಾರದಲ್ಲಿ ದೇವರ ದರ್ಶನ ಬಗ್ಗೆ ಸರದಿ ಸಾಲಿನಲ್ಲಿ ನಿಂತಿದ್ದ ಚಂದ್ರು (32) ಎಂಬಾತನು ಆಕಸ್ಮಿಕವಾಗಿ ನೋವಿನಿಂದ ಕುಸಿದು ಬಿದ್ದು (31-03-2014) ಸಾವನ್ನಪ್ಪಿದ್ದ.
ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಭಾಸಮೆ ಎಂಬಲ್ಲಿದ್ದ ವಿನೋದಳ ಮಗ ಮಹೇಶ (30 ವರ್ಷ) ಎಂಬಾತನು (02.04.14 ಮನೆಯಿಂದ ಕಾಣೆಯಾಗಿದ್ದ. ಪಿರ್ಯಾದುದಾರರ ಭಾವ ಕೂಸಪ್ಪ ಗೌಡರ ರಬ್ಬರ್ ತೋಟದ ಬಳಿ ಯಾವುದೋ ವೈಯಕ್ತಿಕ ಕಾರಣಗಳಿಗೆ ಬೇಸತ್ತು ವಿಷ ಸೇವಿಸಿ (03.04.14) ಆತ್ಮಹತ್ಯೆ ಮಾಡಿಕೊಂಡಿದ್ದ.
ಬಿನು (36) ಎಂಬುವರು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾದ ಮುಂಡತ್ತೋಡಿಯ ಶೆಡ್ಡಿನ ಸಮೀಪದ ಕೆರೆಯಲ್ಲಿ ಸ್ನಾನ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಈಜು ಬಾರದೇ ಮೃತಪಟ್ಟಿದ್ದರು.
ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದ ಕು. ಪೂಜಾ (17 ವರ್ಷ) ಎಂಬಾಕೆಯು (12.06.2014) ಬೆಳ್ತಂಗಡಿ ತಾಲೂಕು ಉಜಿರೆಯ ಗ್ರಾಮದ ಉಜಿರೆ ಸೌಂದರ್ಯ ಫ್ಯಾನ್ಸಿ ಬಳಿ ದಾಮೋದರರವರ ಬಾಬು ಕಟ್ಟಡದಲ್ಲಿ ಪಿರ್ಯಾದಿದಾರರು ನಡೆಸಿಕೊಂಡಿದ್ದ ಹಳೆಯ ಮೆಸ್‌ನ ಒಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೃತಳು ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ 2 ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು. ಈ ವಿಚಾರ ಮರೆ ಮಾಚಿ ಮನೆಯವರಿಗೆ ಉತ್ತೀರ್ಣಳಾಗಿರುವುದಾಗಿ ಸುಳ್ಳು ಹೇಳಿದ್ದಳು. ಈ ವಿಷಯ ತಂದೆ ತಾಯಂದಿರಿಗೆ ಗೊತ್ತಾಗಬಹುದೆಂದು ಮನಗಂಡು ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಕುಡಿತದ ಚಟ ಮತ್ತು ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಪೆ ಹೊಂದಿದ್ದ ಉಮೇಶ್ ಗೌಡ ಎಂಬಾತ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ (03.07.2014) ಮಾಡಿಕೊಂಡಿದ್ದ. ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ದೂರು ನೀಡಲಾಗಿತ್ತು.
ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಬಸ್ ಸ್ಟಾಪ್ ಸಮೀಪ ಜ್ಯೋತಿ ಸೈಕಲ್ ಶಾಪ್ ನ ಜಗಲಿಯ ಬಳಿ ಅಂಗಾರ (35) ಎಂಬವರು ಆಕಸ್ಮಿಕವಾಗಿ ಮಲಗಿದ ಸ್ಥಿತಿಯಲ್ಲಿ ಇದ್ದು (07.07.2014) ಮೃತಪಟ್ಟಿದ್ದರು.
ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಬಳಿ ಅಪರಿಚಿತ ಗಂಡಸು (28-08-2014) ಮೃತಪಟ್ಟಿದ್ದ. ಇದಕ್ಕೆ ಅನಾರೋಗ್ಯ, ಅಥವಾ ಯಾವುದೋ ಕಾರಣ ಎಂದು ಹೇಳಲಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ದರ್ಶನ ಮಾಡಲು ಬೆಂಗಳೂರಿನಿಂದ ಸಂಸಾರದೊಂದಿಗೆ ಬಂದಿದ್ದ ಸುಮಾರು 37 ವರ್ಷದ ವಿಜಯ್ ಗಣಪತಿ ಚಂದ್ರಸಾಲಿ ಎಂಬವರು ಸ್ನಾನದ ಮನೆಯಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.
ಎಲ್ಲಿಂದಲೋ ಯಾತ್ರಾರ್ಥಿಯಾಗಿ ಬಂದಿದ್ದ ಸುಮಾರು 35 ವರ್ಷದಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸು, ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಕೆಎಸ್‌ಆರ್‌ಟಿಸಿ ಬಸ್ಟಾಂಡ್ ಬಳಿ ಸುದರ್ಶನ ಕಾಂಪ್ಲೆಕ್ಸ್ ನಲ್ಲಿರುವ ಶ್ರೀದೇವಿ ಭಟ್ ಎಂಬವರ ಅಂಗಡಿ ಬಳಿ ಬಂದು (01-06-2015) ಮೃತಪಟ್ಟಿದ್ದರು.
ಅಣ್ಣಿಗೌಡ (57) ಎಂಬುವರು ನಿರ್ಜನ ಕಾಡುಪ್ರದೇಶಕ್ಕೆ ಹೋಗಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಅಡಂಗೆ ಸರಕಾರಿ ಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ (23-10-2016) ಪತ್ತೆಯಾಗಿತ್ತು.
ಬೆಳ್ತಂಗಡಿ ತಾಲೂಕು, ಉಜಿರೆ ಗ್ರಾಮದ ಉಜಿರೆ-ಧರ್ಮಸ್ಥಳ ರಸ್ತೆ ಬದಿಗೆ ಯಾವುದೋ ಊರಿನಿಂದ ಭಿಕ್ಷಾಟನೆಗಾಗಿ ಬಂದವರು ಅಥವಾ ಯಾವುದೋ ಖಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಅಸ್ವಸ್ಥರಾಗಿ ಖಾಲಿ ಸ್ಥಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯ ಮಲಗಿದ್ದಲ್ಲಿಯೇ ಅಪರಿಚಿತ ಗಂಡಸು (30.01.2019) ಮೃತಪಟ್ಟಿದ್ದ.