ಬೆಂಗಳೂರು; ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸುವುದಕ್ಕೆ ಸಂಬಂಧಿಸಿದಂತೆ 2009ರಲ್ಲಿನ ಸುತ್ತೋಲೆಯಲ್ಲಿ ನಿಗದಿಪಡಿಸಿದ್ದ ಕಾರ್ಯವಿಧಾನಗಳನ್ನು ಅನುಸರಿಸುವಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ವ್ಯವಸ್ಥಾಪಕರು ಮತ್ತು ಆರ್‍ಸಿಬಿ ಸಂಘಟಕರು ವಿಫಲರಾಗಿದ್ದರು. ಕ್ರೀಡಾಂಗಣದ ಪ್ರವೇಶ ದ್ವಾರಗಳನ್ನು ನಿಯಂತ್ರಿಸದೇ ಇರುವುದೇ ಕಾಲ್ತುಳಿತ, ಸಾವು, ನೋವುಗಳಿಗೆ ಮೂಲ ಕಾರಣ ಎಂದು ನಿವೃತ್ತ ನ್ಯಾಯಾಧೀಶ ಮೈಕಲ್ ಕುನ್ಹಾ ನೇತೃತ್ವದ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ.
ಬಂದೋಬಸ್ತ್‌ಗಾಗಿ 515 ಪುರುಷ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಜನಸಂದಣಿ ನಿರ್ವಹಿಸಲು ಮತ್ತು ನಿಯಂತ್ರಿಸಲು ಕೇವಲ 79 ಪುರುಷ ಅಧಿಕಾರಿಗಳನ್ನು ಗೇಟ್‌ಗಳ ಹೊರಗೆ ನಿಯೋಜಿಸಿತ್ತು ಎಂದು ಬೊಟ್ಟು ಮಾಡಿರುವ ಆಯೋಗವು, ಪೊಲೀಸ್ ಇಲಾಖೆಯ ನಿರ್ಲಕ್ಷ್ಯವನ್ನು ಮುಂದಿರಿಸಿದೆ.
ಅವೈಜ್ಞಾನಿಕವಾಗಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಕಿರಿದಾದ ಪ್ರವೇಶ ದ್ವಾರಗಳು, ಕೊನೆಯ ನಿಮಿಷದಲ್ಲಿ ಹೊರಡಿಸಿದ್ದ ಪ್ರಕಟಣೆಗಳು, ಈ ವೇಳೆಯಲ್ಲಿ ಉಂಟಾದ ಗೊಂದಲಗಳೇ ಕಾಲ್ತುಳಿತಕ್ಕೆ ಪ್ರಮುಖ ಕಾರಣಗಳು ಎಂದು ಆಯೋಗವು ಪಟ್ಟಿ ಮಾಡಿದೆ.
ಇದೇ ಜುಲೈ 24ರಂದು ನಡೆಯಲಿರುವ ಸಚಿವ ಸಂಪುಟ ಸಭೆಗೆ ಮೈಕಲ್ ಕುನ್ಹಾ ಅವರ ವರದಿಯನ್ನು ಮಂಡಿಸಿದೆ. ಈ ವರದಿ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಈಗಾಗಲೇ ಸಚಿವ ಸಂಪುಟದ ಸದಸ್ಯರಿಗೆ ವರದಿಯ ಪ್ರತಿಯನ್ನು ಒದಗಿಸಿದೆ. ಸಚಿವರಿಗೆ ಒದಗಿಸಿರುವ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಮಾರಂಭಕ್ಕೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೇ ಇರಲಿಲ್ಲ. 2009ರಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ನಿಗದಿಪಡಿಸಿದ್ದ ಸಭೆಗಳ ಪರವಾನಗಿ, ನಿಯಂತ್ರಣ ಮತ್ತು ಮೆರವಣಿಗೆಗಳ ನಿಬಂಧನೆ (ಬೆಂಗಳೂರು ನಗರ) ಗಳನ್ನೂ ಸಂಘಟಕರು ಪಾಲಿಸಿರಲಿಲ್ಲ. ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ವಿಜಯೋತ್ಸವವನ್ನು ಆಚರಿಸಲಾಗಿದೆ ಎಂದು ಆಯೋಗವು ಎತ್ತಿ ತೋರಿಸಿದೆ.
ಹಾಗೆಯೇ ಆಯೋಗವು ಈ ಲೋಪಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೆಸರಿಸಿದೆ. ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ, ವಿಕಾಶ್ ಕುಮಾರ್ ವಿಕಾಶ್, ಶೇಖರ್ ಎಚ್ ತೆಕ್ಕನವರ್, ಸಿ ಬಾಲಕೃಷ್ಣ, ಗಿರೀಶ್ ಎ ಕೆ, ಅವರ ಹೆಸರುಗಳನ್ನು ಉಲ್ಲೇಖಿಸಿದೆ. ಈ ಕಾರ್ಯಕ್ರಮವು ಅನಧಿಕೃತವಾಗಿತ್ತು. ಸರಿಯಾದ ಭದ್ರತಾ ವ್ಯವಸ್ಥೆಗಳಿಲ್ಲದೇ ತರಾತುರಿಯಲ್ಲಿ ಆಯೋಜಿಸಲಾಗಿದೆ ಎಂದು ಸಂಪೂರ್ಣವಾಗಿ ತಿಳಿದಿದ್ದರೂ ಸಹ ಕಾರ್ಯಕ್ರಮವನ್ನು ನಿಲ್ಲಿಸುವಲ್ಲಿ ವಿಫಲರಾದರು ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಡಿಜಿಪಿ ಮತ್ತು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಪೊಲೀಸ್ ಅಧಿಕಾರಿಗಳೇ ಬಂದೋಬಸ್ತ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ವ್ಯವಸ್ಥೆಗಳನ್ನು ಸಕ್ರೀಯಗೊಳಿಸುವ ಮುನ್ನವೇ ಸಂಘಟಕರ ಜೊತೆ ಶಾಮೀಲಾಗಿದ್ದರು. ಆರ್‍ಸಿಬಿಯೂ ಸಹ ಅಧಿಕೃತವಾಗಿ ಬೆಳಗ್ಗೆ 7;01 ಹಾಗೂ 8;00 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಎರಡು ಪೋಸ್ಟ್‌ಗಳನ್ನು ಮಾಡಿತ್ತು. ಇದರಿಂದಾಗಿಯೆ ಸ್ಥಳದಲ್ಲಿ ಭಾರೀ ಜನಸಮೂಹ ಜಮಾಯಿಸಿತ್ತು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಆಹ್ವಾನಿಸಲಾಗಿತ್ತು. ಕ್ರೀಡಾಂಗಣದಲ್ಲಿ ಜನಸಂದಣಿ ಹೆಚ್ಚಾದ ನಂತರವೂ ಕ್ರೀಡಾಂಗಣಕ್ಕೆ ಪ್ರವೇಶ ವಿಧಾನ ವಿವರಗಳನ್ನು ನಿರ್ದಿಷ್ಟಪಡಿಸಿರಲಿಲ್ಲ ಎಂದು ಆಯೋಗವು ತನ್ನ ವರದಿಯಲ್ಲಿ ಒತ್ತಿ ಹೇಳಿರುವುದು ಗೊತ್ತಾಗಿದೆ.
ಜನಸಮೂಹವನ್ನು ನಿಯಂತ್ರಿಸಲಾಗಲಿಲ್ಲ ಮತ್ತು ಯಾವ್ಯಾವ ಗೇಟ್‌ಗಳಲ್ಲಿ ಆಗಮನ, ನಿರ್ಗಮನ ಎಂದು ನಿರ್ದೇಶಿಸಿರಲಿಲ್ಲ. ಕ್ರೀಡಾಂಗಣದ ವಿನ್ಯಾಸ ಮತ್ತು ರಚನೆಯು ಸಾಮೂಹಿಕ ಸಭೆಗೆ ಸೂಕ್ತವಲ್ಲ. ಮತ್ತು ಅಸುರಕ್ಷಿತವಾಗಿತ್ತು. ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ನೇರವಾಗಿ ಸಾರ್ವಜನಿಕ ಪಾದಚಾರಿ ಮಾರ್ಗಕ್ಕೆ ತೆರೆದುಕೊಳ್ಳುತ್ತಿದ್ದವು. ಪ್ರವೇಶದ್ವಾರದಲ್ಲಿ ಜನಸಂದಣಿ ಹೆಚ್ಚಿತ್ತು. ವಿಶಾಲವಾದ ಮತ್ತು ಸಂಘಟಿತವಾದ ಸ್ಥಳಾವಕಾಶವನ್ನು ಒದಗಿಸಿಲ್ಲ.
ಹೀಗಾಗಿ ಪ್ರೇಕ್ಷಕರು ಪಾದಚಾರಿ ಮಾರ್ಗ ಅಥವಾ ರಸ್ತೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಇದರಿಂದಾಗಿಯೇ ಪಾದಚಾರಿಗಳು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಅಲ್ಲದೇ ದುಷ್ಕರ್ಮಿಗೂ ಸಹ ಜನಸಂದಣಿಯೊಂದಿಗೆ ಸೇರಲು ಅವಕಾಶವಾಯಿತು. ಈ ವೇಳೆಯಲ್ಲಿ ಭದ್ರತಾ ನಿರ್ವಹಣೆಯು ಸಮರ್ಪಕವಾಗಿರಲಿಲ್ಲ. ಇದು ಸಹ ಅಪಾಯವನ್ನು ಹೆಚ್ಚಿಸಿದೆ ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ.
ಕ್ರೀಡಾಂಗಣದ ಪ್ರವೇಶ ದ್ವಾರಗಳನ್ನು ನಿಯಂತ್ರಿಸಿರಲಿಲ್ಲ. ಕ್ರೀಡಾಂಗಣದ ಪ್ರವೇಶಕ್ಕೆ ಅಜಾಗರೂಕತೆಯಿಂದ ಘೋಷಣೆ ಮಾಡಿದ್ದೇ ಕಾಲ್ತುಳಿತ, ಸಾವು ಮತ್ತು ನೋವುಗಳಿಗೆ ಮೂಲ ಕಾರಣವಾಗಿದೆ. ಈ ಕಾರ್ಯಕ್ರಮಕ್ಕೆ ಸಂಘಟಕರು ಸರಿಯಾಗಿ ಸಿದ್ಧತೆ ಮಾಡಿಕೊಂಡಿರಲಿಲ್ಲ. ಆತುರದ ನಿರ್ಧಾರವೂ ಸಹ ಈ ದುರಂತಕ್ಕೆ ಕಾರಣ. ಇದಕ್ಕೆ ಸಂಘಟಕರು ಹೊಣೆ ಹೊರಬೇಕು ಎಂದು ಆಯೋಗವು ಅಭಿಪ್ರಾಯಿಸಿದೆ.
ಹಾಗೆಯೇ ಪೊಲೀಸರು ಒದಗಿಸಿದ್ದ ಭದ್ರತೆಯು ಅಸಮರ್ಪಕವಾಗಿತ್ತು. ಇಂತಹ ತುರ್ತು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಪೊಲೀಸರು ನಿಭಾಯಿಸಲಿಲ್ಲ. ಬಂದೋಬಸ್ತ್‌ಗಾಗಿ 515 ಪುರುಷ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಜನಸಂದಣಿ ನಿರ್ವಹಿಸಲು ಮತ್ತು ನಿಯಂತ್ರಿಸಲು ಕೇವಲ 79 ಪುರುಷ ಅಧಿಕಾರಿಗಳನ್ನು ಗೇಟ್‌ಗಳ ಹೊರಗೆ ನಿಯೋಜಿಸಿತ್ತು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಅಧಿಕಾರಿಗಳು ಸ್ಥಳದಲ್ಲಿ ಕಾಣಿಸಲಿಲ್ಲ ಎಂದು ಆಯೋಗವು ವಿವರಿಸಿದೆ.
ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯು ಪ್ರವೇಶ ದ್ವಾರಗಳಲ್ಲಿ ಮತ್ತು ಸುತ್ತಲೂ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸಲು ವಿಫಲರಾದರು. ಘಟನೆಯ ತೀವ್ರತೆಗೆ ಇದು ಸಹ ಕಾರಣವಾಯಿತು. ಜನದಟ್ಟಣೆ ಮತ್ತು ಅಪಾಯ ಹೆಚ್ಚುತ್ತಿರುವ ಲಕ್ಷಣಗಳು ಕಾಣಿಸುತ್ತಿದ್ದರೂ ಸಹ ನಿರ್ಗಮನ ದ್ವಾರಗಳನ್ನು ಸಮಯಕ್ಕೆ ಸರಿಯಾಗಿ ತೆರೆಯಲಿಲ್ಲ. ಇದು ಭದ್ರತಾ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವಾಗಿದೆ. ಮತ್ತು ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಿದ್ದ ಶಿಷ್ಟಾಚಾರಗಳೂ ಇರಲಿಲ್ಲ ಎಂದು ಆಯೋಗವು ಪತ್ತೆ ಹಚ್ಚಿದೆ.
ಬ್ಯಾರಿಕೇಡ್‌ಗಳನ್ನು ಅವೈಜ್ಞಾನಿಕವಾಗಿ ಹಾಕಲಾಗಿತ್ತು. ಕೆಲವೆಡೆ ಅನುಚಿತವಾಗಿದ್ದವು. ಪ್ರವೇಶ ದ್ವಾರಗಳು ಕಿರಿದಾಗಿದ್ದವು. ಮತ್ತು ಕೊನೆಯ ನಿಮಿಷದಲ್ಲಿ ಹೊರಡಿಸಿದ್ದ ಪ್ರಕಟಣೆಗಳು ದಾರಿತಪ್ಪಿಸುವಂತಿದ್ದವು. ಇವುಗಳು ಅಭಿಮಾನಿಗಳನ್ನು, ಅನುಯಾಯಿಗಳಲ್ಲಿ ವ್ಯಾಪಕವಾಗಿ ಗೊಂದಲ ಸೃಷ್ಟಿಸಿದವು. ಕಾಲ್ತುಳಿತಕ್ಕೆ ಇವೇ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದೆ.
ಕ್ರೀಡಾಂಗಣದೊಳಗೆ ಪ್ರವೇಶಿಸುವ ವಿಧಾನಗಳ ಬಗ್ಗೆಯೂ ಆಯೋಗವು ವಿವರಿಸಿದೆ. ಸಂಘಟಕರು ಮಾಡಿದ ಅಸಮಂಜಸ ಮತ್ತು ಸಂಕೀರ್ಣ ಘೋಷಣೆಗಳು ಸಹ ಈ ದುರಂತಕ್ಕೆ ಕಾರಣ. ಈ ಸ್ಥಳದಲ್ಲಿ ಮೂಲಭೂತ ತುರ್ತು ವ್ಯವಸ್ಥೆಯೇ ಇರಲಿಲ್ಲ. ಜೀವ ಉಳಿಸುವ ಮತ್ತು ಆರೈಕೆ ಮಾಡುವ ಸಲುವಾಗಿ ತುರ್ತು, ತಾತ್ಕಾಲಿಕ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಿರಲಿಲ್ಲ. ಇಲ್ಲಿ ಉಂಟಾಗಿರುವ ಹೆಚ್ಚಿನ ಸಂಖ್ಯೆಯ ಸಾವುಗಳು ಮತ್ತು ಗಾಯಗಳಿಗೆ ಸಂಘಟಕರೇ ಹೊಣೆಗಾರರು ಎಂದು ವರದಿಯಲ್ಲಿ ವಿವರಿಸಿದೆ.
ಆರ್‍ಸಿಬಿ, ಡಿಎನ್‌ಎ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಎ ಶಂಕರ್, ಮಾಜಿ ಖಜಾಂಚಿ ಜೈರಾಮ್, ರಾಜೇಶ್ ಮೆನನ್, ಡಾ ವೆಂಕಟ್ ವರ್ಧನ್, ಸುನೀಲ್‌ಮಾಥೂರ್ ಅವರೂ ಸಹ ಈ ದುರಂತಕ್ಕೆ ಹೊಣೆಗಾರರು ಎಂದು ಆಯೋಗವು ಹೆಸರಿಸಿದೆ.