ಬೆಂಗಳೂರು; ರಾಜ್ಯ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳು ಮತ್ತು ಅವರ ಕಚೇರಿಯಲ್ಲಿರುವ ಕಾನೂನು ಅಧಿಕಾರಿಗಳು ರಾಜ್ಯ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಹಿಂದಿನ ಅವಧಿಯಲ್ಲಿನ ಸರ್ಕಾರಕ್ಕೆ ಈಗಲೂ ನಿಷ್ಠರಾಗಿದ್ದಾರೆ ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್ ದೇವದಾಸ್ ಅವರು ಕಾನೂನು ಸಚಿವ ಹೆಚ್ ಕೆ ಪಾಟೀಲ್, ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅರೆ ಸರ್ಕಾರಿ ಪತ್ರದ ಮೂಲಕ ವರದಿ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡನೇ ಅವಧಿಗೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುತ್ತಿದ್ದಂತೆ ಅಡ್ವೋಕೇಟ್ ಜನರಲ್ ಕಚೇರಿಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳ ನೇಮಕಾತಿ ಕುರಿತು ಕಾನೂನು ವಲಯದಲ್ಲಿಯೇ ಅಸಮಾಧಾನ ವ್ಯಕ್ತವಾಗಿತ್ತು. ನೇಮಕವಾಗಿರುವ ಬಹುತೇಕ ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳು ಮತ್ತು ಕಾನೂನು ಅಧಿಕಾರಿಗಳು ಬಿಜೆಪಿ ಸರ್ಕಾರದೊಂದಿಗೇ ಹೆಚ್ಚು ಗುರುತಿಸಿಕೊಂಡಿದ್ದರು. ಮತ್ತು ಈಗಲೂ ನಿಕಟ ಸಂಪರ್ಕವಿರಿಸಿಕೊಂಡಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.
ಅಲ್ಲದೇ ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿತ್ತು. ಮತ್ತು ಮುಜುಗರಕ್ಕೆ ಸಿಲುಕಿತ್ತು. ಇದಕ್ಕೆ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳು, ಸರ್ಕಾರಿ ಅಭಿಯೋಜಕರು, ಸರ್ಕಾರಿ ವಕೀಲರು ಹಾಗೂ ಕಾನೂನು ಅಧಿಕಾರಿಗಳು ಸಮರ್ಥವಾಗಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿಲ್ಲ. ಮತ್ತು ರಾಜ್ಯ ಸರ್ಕಾರದ ನಿಲುವನ್ನು ಪ್ರತಿಪಾದಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.
ಈ ಎಲ್ಲಾ ಆರೋಪಗಳ ಬೆನ್ನಲ್ಲೇ ಇದೀಗ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್ ದೇವದಾಸ್ ಅವರು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ಅರೆ ಸರ್ಕಾರಿ ಪತ್ರದ ಮೂಲಕ ಕಿರು ವರದಿಯನ್ನು ಸಲ್ಲಿಸಿದ್ದಾರೆ. ಇದೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನಿಸಿದ್ದಾರೆ. ಈ ವರದಿಯು, ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳ ಕಾರ್ಯಕ್ಷಮತೆಯನ್ನೂ ಬಯಲು ಮಾಡಿದಂತಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2025ರ ಜೂನ್ 30ರಂದು ಬರೆದಿರುವ ನಾಲ್ಕು ಪುಟಗಳನ್ನೊಳಗೊಂಡ ಕಿರು ವರದಿಯು ‘ದಿ ಫೈಲ್’ಗೆ ಲಭ್ಯವಾಗಿವೆ.
4 ಪುಟಗಳ ಕಿರು ವರದಿಯಲ್ಲಿ ಎಲ್ಲಿಯೂ ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳು ಮತ್ತು ಕಾನೂನು ಅಧಿಕಾರಿಗಳ ಹೆಸರುಗಳನ್ನು ಹೆಸರಿಸಿಲ್ಲ.
ಹಿಂದಿನ ಅವಧಿಯಲ್ಲಿ ನೇಮಕಗೊಂಡ 2 ಅಥವಾ 3 ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳು, ಅವರ ಯಜಮಾನರಿಗೆ ನಿಷ್ಠರಾಗಿದ್ದಾರೆ. ಮತ್ತು ವಿರೋಧ ಗುಂಪಿನ ರಾಜಕೀಯ ನಾಯಕರಿಗೆ ನಿಷ್ಟರಾಗಿದ್ದಾರೆ. ಇದು ರಾಜ್ಯ ಸರ್ಕಾರದ ಹಿತಾಸಕ್ತಿಯನ್ನು ಕುಗ್ಗಿಸಲು ಕಾರಣವಾಗಿದೆ ಎಂದ ಎನ್ ದೇವದಾಸ್ ಅವರು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕಾನೂನು ಅಧಿಕಾರಿಗಳೂ ಸಹ ಹಿಂದಿನ ಅವಧಿಯಲ್ಲಿನ ನೇಮಕವಾಗಿರುವ ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳ ನಿಯಂತ್ರಣದಲ್ಲೇ ಕೆಲಸ ಮಾಡುತ್ತಿದ್ದಾರೆ. ಮತ್ತು ಕೆಲವರು ಒಳ ನುಸುಳಿದ್ದಾರೆ. ಹೀಗಾಗಿ ಸೈದ್ಧಾಂತಿಕವಾಗಿ ನಮ್ಮ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಸರ್ಕಾರದ ಪ್ರಮುಖ ಇಲಾಖೆಗಳ ವ್ಯಾಜ್ಯಗಳೂ ಸಹ ಈ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಅವರ ವಕೀಲರ ಗುಂಪಿನ ಕೈಯಲ್ಲಿಯೇ ಇವೆ. ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
‘ವಾಸ್ತವವಾಗಿ ಹೆಚ್ಚುವರಿ ವಕೀಲರ ಸಾಮಾನ್ಯ ಕೊಠಡಿಯು ಅವರ ಕಾರ್ಯಾಚರಣೆಗಳಿಗೆ ಸಭೆಯ ಕೇಂದ್ರಬಿಂದುವಾಗಿದೆ ಮತ್ತು ಎಲ್ಲಾ ಪ್ರಮುಖ ಬಿಜೆಪಿ ವಕೀಲರು ತಮ್ಮ ಪ್ರಕರಣಗಳನ್ನು ಗೆಲ್ಲುವ ಉದ್ದೇಶದಿಂದ ತಂತ್ರಗಾರಿಕೆ ರೂಪಿಸಲು ಈ ಕೊಠಡಿಯಲ್ಲಿ ಭೇಟಿಯಾಗುತ್ತಾರೆ. ಈ ಹೆಚ್ಚುವರಿ ವಕೀಲರ ಜನರಲ್‌ಗಳು ಮತ್ತು ಕಾನೂನು ಅಧಿಕಾರಿಗಳ ಗುಂಪಿನಿಂದ ಬಿಜೆಪಿ ವಕೀಲರು ಸಹಾಯ ಪಡೆಯುವ ಚಟುವಟಿಕೆ ಕೇಂದ್ರವಾಗಿದೆ. ಇದರ ಪರಿಣಾಮವಾಗಿ ಅನೇಕ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧವೇ ತೀರ್ಪು ಬರುತ್ತಿವೆ,’ ಎಂದು ದೇವದಾಸ್ ಅವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅಲ್ಲದೇ ಈ 2 ರಿಂದ 3 ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳು ಮತ್ತು ಇವರಿಗೆ ನಿಷ್ಟರಾಗಿರುವ ಕಾನೂನು ಅಧಿಕಾರಿಗಳಿಗೆ ಮಾತ್ರ ಕಾರ್ಯಭಾರವನ್ನು ಹಂಚಿಕೆ ಮಾಡಲಾಗುತ್ತಿದೆ. ಇತರೆ ಕಾನೂನು ಕಚೇರಿಗಳಲ್ಲಿ ಉತ್ತಮ ಪ್ರತಿಭಾನ್ವಿತರಿದ್ದರೂ ಸಹ ಕಾರ್ಯಭಾರ ಹಂಚಿಕೆ ಮಾಡಿಲ್ಲ. ಮತ್ತು ಈ 2 ಅಥವಾ 3 ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಿಗೆ ನಿಷ್ಠರಾಗಿರುವ ಈ ಕಾನೂನು ಅಧಿಕಾರಿಗಳು, ವಿಷಯದ ಪ್ರಾಮುಖ್ಯತೆಯನ್ನು ಲೆಕ್ಕಿಸದೆ ಅವರನ್ನು ನಿಯಮಿತವಾಗಿ ನ್ಯಾಯಾಲಯಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರದ ಗಮನಕ್ಕೆ ತಂದಿರುವುದು ಪತ್ರದಿಂದ ತಿಳಿದು ಬಂದಿದೆ.
‘ಹೀಗಾಗಿ ಸರ್ಕಾರವು, ಸರ್ಕಾರಕ್ಕೆ ನಿಷ್ಠರಲ್ಲದ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳು ಮತ್ತು ನಿರ್ಲಜ್ಜ ಕಾನೂನು ಅಧಿಕಾರಿಗಳನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಸಮಯ ಇದಾಗಿದೆ. ಭವಿಷ್ಯದಲ್ಲಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ ಕೆಲವು ಕ್ರಮಗಳನ್ನು ಸೂಚಿಸುವುದು ನನ್ನ ಕರ್ತವ್ಯ,’ವಾಗಿದೆ ಎಂದು ಪತ್ರದಲ್ಲಿ ಹೇಳಿರುವುದು ಗೊತ್ತಾಗಿದೆ.
ಅನೇಕ ಪ್ರತಿಭಾನ್ವಿತ ಕಾನೂನು ಅಧಿಕಾರಿಗಳು ಲಭ್ಯವಿದ್ದರೂ ಸಹ ಅವರನ್ನು ಪರಿಗಣಿಸುತ್ತಿಲ್ಲ. ಕೆಲವು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳು, ಅಡ್ವೊಕೇಟ್ ಜನರಲ್ ಹೆಸರಿನಲ್ಲಿ ಆಟವಾಡುತ್ತಿದ್ದಾರೆ. ಪ್ರತಿಭಾನ್ವಿತ ಕಾನೂನು ಅಧಿಕಾರಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗದಂತೆ ವಂಚಿಸಲಾಗಿದೆ. ಪ್ರತಿಭೆಯನ್ನು ಹೊಂದಿರುವ ಕಾನೂನು ಅಧಿಕಾರಿಗೆ ಸರಿಯಾಗಿ ಕಾರ್ಯಭಾರ ಹಂಚಿಕೆ ಮಾಡಿದರೆ ಕೆಲವು ನಿರ್ಲಜ್ಜ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳು ಆಡುವ ಆಟಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿಯೇ ಪ್ರತಿಭಾನ್ವಿತ ಕಾನೂನು ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆ ಆಗುತ್ತಿಲ್ಲ ಎಂದು ವಿವರಿಸಿರುವುದು ತಿಳಿದು ಬಂದಿದೆ.
‘ಸರ್ಕಾರಕ್ಕೆ ನಿಷ್ಠರಾಗಿರುವ ಮತ್ತು ಸರ್ಕಾರಕ್ಕಾಗಿ ಕೆಲಸ ಮಾಡಲು ಮತ್ತು ಎಲ್ಲಾ ರೀತಿಯಲ್ಲೂ ಅದನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ಜಾಗರೂಕತೆಯಿಂದ ಕೆಲಸ ಮಾಡಬಲ್ಲ ವಿದ್ವಾಂಸರಾದ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳನ್ನು ಸಬಲೀಕರಣಗೊಳಿಸಲು ಸರ್ಕಾರವು ಅಡ್ವೊಕೇಟ್ ಜನರಲ್‌ಗೆ ಸ್ಪಷ್ಟ ಸೂಚನೆಗಳನ್ನು ನೀಡಬೇಕು. ಅಂತಹ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಾನೂನು ಅಧಿಕಾರಿಗಳನ್ನು ಆಯ್ಕೆ ಮಾಡುವ ಮತ್ತು ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವ ತಂಡವನ್ನು ನಿರ್ಮಿಸುವ ಸ್ವಾತಂತ್ರ್ಯವನ್ನು ಹೊಂದಿರಬೇಕು.,’ ಎಂದು ದೇವದಾಸ್ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ಸರ್ಕಾರಿ ಅಭಿಯೋಜಕರಲ್ಲೂ ದಕ್ಷತೆ ಕೊರತೆ
ರಾಜ್ಯ ಸರ್ಕಾರಿ ಅಭಿಯೋಜಕರಲ್ಲೂ ದಕ್ಷತೆಯ ಕೊರತೆಯಿದೆ.
ಹಲವು ಪ್ರಕರಣಗಳು ರಾಜಕೀಯ ಸ್ವರೂಪದಿಂದ ಕೂಡಿವೆ. ಇಂತಹ ಪ್ರಕರಣಗಳಲ್ಲಿ ಉತ್ತಮ ಫಲಿತಾಂಶಗಳಿಗಾಗಿ ಹೈಕೋರ್ಟ್ ವಿಚಾರಣೆಗಳಲ್ಲಿ ಸೂಕ್ತವಾಗಿ ಸಮರ್ಥಿಸಿಕೊಳ್ಳಬೇಕು. ಸರ್ಕಾರಿ ಪ್ರಕರಣಗಳನ್ನು ಸಮರ್ಥಿಸಿಕೊಳ್ಳಲು ಪ್ರತಿಭಾನ್ವಿತ ಕಾನೂನು ಅಧಿಕಾರಿಗಳನ್ನು ವಿಶೇಷ ತನಿಖಾಧಿಕಾರಿಗಳು, ಸಹಾಯಕ ತನಿಖಾಧಿಕಾರಿಗಳಾಗಿ ನೇಮಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ಪ್ರತಿಪಾದಿಸಿರುವುದು ತಿಳಿದು ಬಂದಿದೆ.