ಬೆಂಗಳೂರು; ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಗಳಲ್ಲಿ ಸೋಲಾರ್ ಪವರ್ ಸಿಸ್ಟಂ ಅಳವಡಿಸುವ ಕಾಮಗಾರಿಗೆ ಆಹ್ವಾನಿಸಿರುವ ಟೆಂಡರ್‍ನಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪಗಳು ಕೇಳಿ ಬಂದಿವೆ.
ಕೆಟಿಪಿಪಿ ಕಾಯ್ದೆ ಉಲ್ಲಂಘನೆ, ಸ್ವಜನಪಕ್ಷಪಾತ, ದುಪ್ಪಟ್ಟು ಅಂದಾಜು ಪಟ್ಟಿ ತಯಾರಿಸಿರುವುದು, ನಿರ್ದಿಷ್ಟ ಏಜೆನ್ಸಿಗೆ ಕಾಮಗಾರಿ ನೀಡಲು ಸಂಚು ಕೂಡ ನಡೆದಿದೆ. ಇದರಲ್ಲಿ ವಿಶ್ವವಿದ್ಯಾಲಯದ ಹಲವು ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಗುರುತರವಾಗಿ ಆಪಾದಿಸಲಾಗಿದೆ. ಈ ದೂರು ವಿಶ್ವವಿದ್ಯಾಲಯದ ಕುಲಪತಿ ಮತ್ತು ರಾಜ್ಯಪಾಲರ ಕಚೇರಿ ಮೆಟ್ಟಿಲೇರಿದೆ.
ಈ ಸಂಬಂಧ ಮಂಜುನಾಥ್ ಎಂಬುವರು ರಾಜ್ಯಪಾಲರು ಮತ್ತು ಸರ್ಕಾರಕ್ಕೆ ಲಿಖಿತ ದೂರು ಮತ್ತು ದಾಖಲೆಗಳನ್ನು ಒದಗಿಸಿದ್ದಾರೆ. ದೂರಿನ ಪ್ರತಿ ಮತ್ತು ಕೆಲವು ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ವಿಟಿಯು ವ್ಯಾಪ್ತಿಯಲ್ಲಿರುವ ಪ್ರಾದೇಶಿಕ ಕೇಂದ್ರಗಳ ಪೈಕಿ ಕಲ್ಬುರ್ಗಿಯಲ್ಲಿ 160 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಪವರ್ ಸಿಸ್ಟಂನ್ನು 1.61 ಕೋಟಿ ರು ಮೊತ್ತದಲ್ಲಿ ಅಳವಡಿಸಲು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಟೆಂಡರ್ ಆಹ್ವಾನಿಸಲಾಗಿದೆ.ಈ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಪಾತ ನಡೆದಿದೆ ಮತ್ತು ಕೆಟಿಪಿಪಿ ಕಾಯ್ದೆಯನ್ನ ಪಾಲಿಸದೇ ಉಲ್ಲಂಘಿಸಲಾಗಿದೆ ಎಂದು ಮಂಜುನಾಥ್ ಎಂಬುವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
160 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಅಳವಡಿಸುವ ಈ ಕಾಮಗಾರಿಗೆ ಎಂಎನ್‌ಆರ್‍ಇ ನಿರ್ದಿಷ್ಟತೆಗಳ ಪ್ರಕಾರ ಪ್ರತಿ ಒಂದು ಕಿಲೋ ವ್ಯಾಟ್ ಗೆ 45,000 ರು. ನಿಗದಿ ಆಗಿದೆ. ಲೋಕೋಪಯೋಗಿ ಇಲಾಖೆಯೂ ಇದೇ ದರಕ್ಕೆ ಈ ಹಿಂದೆ ಇದೇ ಕಾಮಗಾರಿ ಟೆಂಡರ್ ನೀಡಿರುವುದು ದಾಖಲೆಯೂ ಇದೆ. ಆದರೆ ಕಲ್ಬುರ್ಗಿಯಲ್ಲಿನ ಪ್ರಾದೇಶಿಕ ಕೇಂದ್ರದಲ್ಲಿ ಸೋಲಾರ್ ಕಾಮಗಾರಿಗೆ ಟೆಂಡರ್ ಅಂದಾಜು ಮೊತ್ತ ಜಿಎಸ್‌ಟಿ ಹೊರತುಪಡಿಸಿ 1.61 ಕೋಟಿ ರು ಎಂದು ನಿಗದಿಪಡಿಸಿದೆ.
ಇದರ ಪ್ರಕಾರ ಪ್ರತಿ ಒಂದು ಕಿಲೋ ವ್ಯಾಟ್‌ಗೆ 1,00,625 ರು. ವರೆಗೆ ದರ ನಿಗದಿಪಡಿಸಿದಂತಾಗಿದೆ. ಇದರಿಂದ ವಿಶ್ವವಿದ್ಯಾಲಯಕ್ಕೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗಲಿದೆ. ಅಂದಾಜು 89.00 ಲಕ್ಷ ದುರುಪಯೋಗ ಆಗಲಿದೆ ಎಂದು ದೂರಿನಿಂದ ತಿಳಿದು ಬಂದಿದೆ.
ಮಾರುಕಟ್ಟೆಯಲ್ಲಿ ಈ ಕಾಮಗಾರಿಯನ್ನು ಪ್ರತಿ ಒಂದು ಕಿಲೋ ವ್ಯಾಟ್‌ಗೆ 39,000.00 ದರಕ್ಕೆ ಮಾಡಲು ದೊಡ್ಡ ದೊಡ್ಡ ಸೋಲಾರ್ ಕಂಪನಿಗಳೂ ಆಸಕ್ತಿ ವಹಿಸಿವೆ. ಅದರ ಮಾರುಕಟ್ಟೆ ದರದ ಮಾಹಿತಿಯನ್ನೂ ಪಡೆದಿದ್ದಾರೆ. ಆದರೂ ಇದನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಪರಿಗಣಿಸಿಲ್ಲ ಎಂದು ದೂರಿರುವುದು ಗೊತ್ತಾಗಿದೆ.
‘ಈ ಕಾಮಗಾರಿಯನ್ನು ನಿರ್ದಿಷ್ಟ ಏಜೆನ್ಸಿಗೆ ಕೊಡುವ ಉದ್ದೇಶದಿಂದ ದುಪ್ಪಟ್ಟು ಮೊತ್ತವನ್ನೊಳಗೊಂಡ ಅಂದಾಜು ಪಟ್ಟಿ ತಯಾರಿಸಲಾಗಿದೆ. ಕ್ಯೂ ಆರ್ ಗಳ ಬದಲಾವಣೆ ಮಾಡಲಾಗಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಕರೆದಿರುವ ಟೆಂಡರ್‍ನ್ನು ಕೆ ಡಬ್ಲ್ಯೂ 4 ರಂತೆ ಹಾಗೂ ಕೆಟಿಪಿಪಿ ಕಾಯ್ದೆಯನ್ನು ಅಳವಡಿಸಿಕೊಂಡಿಲ್ಲ,’ ಎಂದು ಆರೋಪಿಸಿರುವುದು ತಿಳಿದು ಬಂದಿದೆ.
ಷರತ್ತಿನಲ್ಲೂ ಪ್ರಭಾವ ಇದೆಯೇ?
ಟೆಂಡರ್ ಕಾಮಗಾರಿಯನ್ನು ಕೆ ಡಬ್ಲ್ಯೂ 4 ರಂತೆ ರೂಪಿಸಿಲ್ಲ. ಹಾಗೂ ಕೆಟಿಪಿಪಿ ಕಾಯ್ದೆಯನ್ನು ಅಳವಡಿಸಿಕೊಂಡಿಲ್ಲ. ಈ ಟೆಂಡರ್‍ಗೆ ತಾಂತ್ರಿಕ ಅರ್ಹತೆಗಾಗಿ ಸ್ಥಳ ವೀಕ್ಷಣೆ ಮಾಡಿ ಮತ್ತು ಅದರ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಟೆಂಡರ್‍ನಲ್ಲಿ ಷರತ್ತು ವಿಧಿಸಲಾಗಿದೆ. ಇದರಿಂದಾಗಿ ಟೆಂಡರ್ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯುತ್ತಿಲ್ಲ.
ಈ ಷರತ್ತಿನಿಂದಾಗಿ ಯಾವ ಯಾವ ಏಜೆನ್ಸಿ, ಯಾವ್ಯಾವ ಗುತ್ತಿಗೆದಾರರು ಭಾಗವಹಿಸುವ ವಿವರವು ಟೆಂಡರ್ ಪೂರ್ವದಲ್ಲೇ ಬಹಿರಂಗವಾಗಲಿದೆ. ಈ ಇಡೀ ಪ್ರಕ್ರಿಯೆಯ ಮೇಲೆ ರಾಜಕೀಯ ಮತ್ತು ಮೇಲಾಧಿಕಾರಿಗಳು ಪ್ರಭಾವ ಬೀರಲು ದಾರಿ ಮಾಡಿಕೊಡಲಿದೆ. ಇದರಲ್ಲಿ ಹಲವು ಒಳ ಒಪ್ಪಂದಗಳು ಮಾಡಿಕೊಳ್ಳಲು ಅವಕಾಶವಾಗಲಿದೆ ಎಂದು ದೂರುದಾರರು ಶಂಕೆ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
ಇಂತಹ ಷರತ್ತುಗಳನ್ನು ವಿಧಿಸಬಾರದು ಎಂದು ಈ ಹಿಂದೆಯೇ ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯೂ ಸಹ ನಿರ್ಧಾರ ಕೈಗೊಂಡಿತ್ತು. ಆದರೂ ಸಕ್ಷಮ ಪ್ರಾಧಿಕಾರವು ಇದೇ ಷರತ್ತನ್ನು ಮುಂದುವರೆಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಎರಡು ಪಟ್ಟು ಆರ್ಥಿಕ ವಹಿವಾಟು ಪರಿಗಣನೆ
ಕೆ ಡಬ್ಲ್ಯೂ 4 ರಂತೆ ಕಳೆದ 05 ವರ್ಷಗಳ ವಾರ್ಷಿಕ ಆರ್ಥಿಕ ವಹಿವಾಟು ನಡೆಸಿದ್ದು ಅದರಲ್ಲಿ ಯಾವುದಾದರೂ 02 ವರ್ಷ ಟೆಂಡರ್ ಅಂದಾಜು ಮೊತ್ತದ ಎರಡು ವರ್ಷ ಅಂದರೆ 322.00 ಲಕ್ಷ ರು ಆರ್ಥಿಕ ವಹಿವಾಟು ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಈ ಟೆಂಡರ್‍ನಲ್ಲಿ ಅದನ್ನು ಪಾಲಿಸಿಲ್ಲ. ಕಳೆದ 3 ವರ್ಷಗಳ ವಾರ್ಷಿಕ ವಾರ್ಷಿಕ ಆರ್ಥಿಕ ವಹಿವಾಟು ಪರಿಗಣಿಸಲಾಗಿದೆ.
‘ಅಲ್ಲದೇ ಟೆಂಡರ್ ಅಂದಾಜುಪಟ್ಟಿಯ ಎರಡು ಪಟ್ಟು ಆರ್ಥಿಕ ವಹಿವಾಟು ಪರಿಗಣಿಸಿಲ್ಲ. ಕೇವಲ ಶೇ. 80ರಷ್ಟು ಮಾತ್ರ ಅಂದರೆ 129.00 ಲಕ್ಷ ರು ಮೊತ್ತವನ್ನು 02 ವರ್ಷದಲ್ಲಿ ಆರ್ಥಿಕ ವಹಿವಾಟು ನಡೆಸಬೇಕು ಎಂದು ಷರತ್ತು ವಿಧಿಸಿದೆ. ಇದು ತಮಗೆ ಬೇಕಾದ ಹಾಗೆ ಬದಲಾವಣೆ ಮಾಡಿಕೊಂಡಿರುವುದು ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿರುವುದಕ್ಕೆ ಪುರಾವೆ ಆಗಿದೆ,’ ಎಂದು ದೂರುದಾರರು ವಿವರಿಸಿರುವುದು ತಿಳಿದು ಬಂದಿದೆ.
ಕೆ ಡಬ್ಲ್ಯೂ 4 ರಂತೆ ಕಳೆದ 05 ವರ್ಷಗಳ ವಾರ್ಷಿಕ ಅವಧಿಯಲ್ಲಿ ಯಾವುದಾದರೂ 01 ವರ್ಷದಲ್ಲಿ ಟೆಂಡರ್ ಮೊತ್ತದ ಶೇ 50ರಷ್ಟು ಅಂದರೆ 80.00 ಲಕ್ಷ ರು. ನಿರ್ವಹಿಸಿರುವ ಸಿಂಗಲ್ ಕಾಮಗಾರಿ ದೃಢೀಕರಣ ಪತ್ರ ನಿರ್ವಹಿಸಿರುವ ಕಾಮಗಾರಿ ದೃಢೀಕರಣ ಪತ್ರ ಸಲ್ಲಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಆದರೆ ಈ ಟೆಂಡರ್‍ನಲ್ಲಿ ಅದನ್ನು ಪಾಲಿಸಿಲ್ಲ. ಕೇವಲ 03 ಆರ್ಥಿಕ ವರ್ಷ ಪರಿಗಣಿಸಿ ಅದರಲ್ಲಿ 1 ವರ್ಷ ಮಾತ್ರ ಪರಿಗಣಿಸುವುದಾಗಿ ಷರತ್ತು ಮಾಡಿಕೊಂಡು ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿದಂತಾಗಿದೆ ಎಂದು ದೂರುದಾರರು ಆಪಾದಿಸಿರುವುದು ಗೊತ್ತಾಗಿದೆ.
ಅದೇ ರೀತಿ ತಮಗೆ ಬೇಕಾದ ಹಾಗೆ ನಿಗದಿತ ಪೂರ್ವ ನಿಯೋಜಿತ ಏಜೆನ್ಸಿ, ಗುತ್ತಿಗೆದಾರರ ಅರ್ಹತಾ ದಾಖಲೆಗಳಿಗೆ ತಕ್ಕಂತೆ ಟೆಂಡರ್ ಮತ್ತು ಕ್ಯೂ ಆರ್ ಷರತ್ತುಗಳನ್ನು ಬದಲಾವಣೆ ಮಾಡಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ.
ಇದೇ ಕಾಮಗಾರಿಯನ್ನು ಕಡಿಮೆ ದರಕ್ಕೆ ನಿರ್ವಹಿಸಲು ಹಲವು ಗುತ್ತಿಗೆದಾರರು ಅಸಕ್ತಿ ತೋರಿಸಿದರೂ ಸಹ ಪರಿಗಣಿಸಿಲ್ಲ. ಅರ್ಹರಿದ್ದರೂ ಸಹ ಪರಿಗಣಿಸಿಲ್ಲ. ಇದರಲ್ಲಿ ರಾಜಕೀಯ ಪ್ರಭಾವ ಎದ್ದು ಕಾಣುತ್ತಿದೆ ಎಂದು ದೂರಿರುವುದು ತಿಳಿದು ಬಂದಿದೆ.
ಕೆಲವು ಏಜೆನ್ಸಿ, ಗುತ್ತಿಗೆದಾರರು ಕಲ್ಬುರ್ಗಿಯಲ್ಲಿನ ಸ್ಥಳ ವೀಕ್ಷಣೆ ಮಾಡಿಲ್ಲ. ಯಾವುದೇ ಜಿಪಿಎಸ್ ಫೋಟೋ ಅಥವಾ ಯಾವುದೇ ಪುರಾವೆ ಇಟ್ಟುಕೊಂಡಿಲ್ಲ. ಸ್ಥಳ ವೀಕ್ಷಣೆ ಮಾಡದಿದ್ದರೂ ಸಹ ವೀಕ್ಷಣೆ ಮಾಡಲಾಗಿದೆ ಎಂದು ಹೇಳೇ ದಿನಾಂಕಕ್ಕೆ ನಂಬರ್ ಹಾಗೂ ದಿನಾಂಕ ನಮೂದಿಸಿ ಪ್ರಮಾಣ ಪತ್ರ ನೀಡಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ಹೇಳಲಾಗಿದೆ.