ಆರ್‌ಟಿಪಿಸಿಆರ್‌ ಪರೀಕ್ಷೆ; 125 ಕೋಟಿ ರು ವಂಚನೆಯಲ್ಲಿ 27 ಅಧಿಕಾರಿ, ಸಿಬ್ಬಂದಿಗಳ ಪ್ರತ್ಯೇಕ ಪಾತ್ರವೇನು?

ಬೆಂಗಳೂರು; ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ನಡೆಸದೆಯೇ 125 ಕೋಟಿ ರೂ.ಗಳ ವಂಚಿಸಲಾಗಿದೆ ಎಂಬ ಆರೋಪಿತ ಪ್ರಕರಣದಲ್ಲಿ ಅಂದಿನ ನಿರ್ದೇಶಕ ಡಾ ಸಿ ರಾಮಚಂದ್ರ ಮತ್ತು ಹೊರಗುತ್ತಿಗೆ ಸಂಸ್ಥೆಯಾಗಿರುವ ಬಿಎಂಎಸ್‌ ಮಾಲೀಕ ಎಸ್‌ ಪಿ ರಕ್ಷಿತ್‌ ಅವರ ಪಾತ್ರವೇನು ಎಂದು ಸಿದ್ದಾಪುರ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‍‌ ಅವರು ಸರ್ಕಾರವನ್ನೇ ಕೇಳಿರುವುದು ಇದೀಗ ಬಹಿರಂಗವಾಗಿದೆ.

 

ಕೋವಿಡ್‌ ಸಂದರ್ಭದಲ್ಲಿ ನಡೆದ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿರುವ ಬೆನ್ನಲ್ಲೇ ಕೋವಿಡ್‌ ಸೋಂಕು ಪತ್ತೆಗೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲು ನೇಮಕಗೊಂಡಿದ್ದ ಬೆಂಗಳೂರು ಮೆಡಿಕಲ್‌ ಸಿಸ್ಟಮ್ಸ್ (ಬಿಎಂಎಸ್‌) ಪ್ರಯೋಗಾಲಯವು ಯಾವುದೇ ಪರೀಕ್ಷೆಗಳನ್ನು ನಡೆಸದೆಯೇ 125 ಕೋಟಿ ರೂ. ಬಿಲ್‌ ಪಡೆದು ವಂಚಿಸಿರುವ ಕುರಿತು ಪರಿಶೋಧಿಸಿದ್ದ ಕುನ್ಹಾ ಆಯೋಗವು ಸಂಪುಟ 5ರಲ್ಲಿ ವಿಸ್ತೃತವಾಗಿ ವರದಿ ನೀಡಿತ್ತು.

 

ಕುನ್ಹಾ ಆಯೋಗವು ಸಂಪುಟ 3 ಮತ್ತು 5ರ ವರದಿ ಆಧರಿಸಿ ಕೈಗೊಂಡಿರುವ ಕ್ರಮಗಳ ಕುರಿತು ವಾಸ್ತವಾಂಶದ ವರದಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕಿದ್ವಾಯಿ ಗಂಥಿ ಸ್ಮಾರಕ ಸಂಸ್ಥೆಯು ವರದಿ ನೀಡಿದೆ. 2025ರ ಮೇ 23ರಂದು ನಡೆದ ಸಭೆಗೆ ಸಲ್ಲಿಸಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ವರದಿ ಅಧರಿಸಿ ಕಿದ್ವಾಯಿ ಸಂಸ್ಥೆಯು ಅಂದಿನ ನಿರ್ದೇಶಕ ಡಾ ಸಿ ರಾಮಚಂದ್ರ ಮತ್ತು ಬಿಎಂಎಸ್‌ ಮಾಲೀಕರಾದ ಎಸ್‌ ಪಿ ರಕ್ಷಿತ್‌ ಇವರ ವಿರುದ್ಧ ನಿಯಮ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಿದ್ದಾಪುರ ಪೊಲಿಸ್‌ ಠಾಣೆಗೆ 2025ರ ಏಪ್ರಿಲ್‌ 17ರಂದು ಪತ್ರ ಬರೆದಿತ್ತು. ಈ ಪತ್ರದ ಕುರಿತು ಸಚಿವ ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಭ್ರಷ್ಟಾಚಾರ ನಿಗ್ರಹ ಕಾಯ್ದೆ 11 ಮತ್ತು 12,  ಭಾರತೀಯ ನ್ಯಾಯ ಸಂಹಿತೆಯ 2023ರ ಸೆಕ್ಷನ್‌ 318 ಮತ್ತು 335ರ ಸ್ಪಷ್ಟ ಉಲ್ಲಂಘನೆಯಾಗಿದ್ದು ಈ ಕಾಋಣಕ್ಕಾಗಿ 125,46,64,966 ರು.ಗಳನ್ನು ಸಂಬಂಧಪಟ್ಟವರಿಂದ ಏಕೆ ವಸೂಲು ಮಾಡಬಾರದು ಎಂದು ಆಕ್ಷೇಪಿಸಿ ಶಿಫಾರಸ್ಸು ಮಾಡಿತ್ತು.

 

ಬಿಎಂಎಸ್‌ ಸಂಸ್ಥೆಯು ಐಸಿಎಂಆರ್‍‌ನಲ್ಲಿ ನೋಂದಾಯಿಸಿಕೊಂಡಿರುವುದು, ಉಪಕರಣಗಳ ಅಳವಡಿಕೆ, ಸಿಬ್ಬಂದಿ ನೇಮಕ, ಜೈವಿಕ ತ್ಯಾಜ್ಯ ವಿಲೇವಾರಿ, ಪ್ರಯೋಗಾಲಯ, ತಪಾಸಣೆ ವರದಿ, ಮಾನವ ಸಂಪನ್ಮೂಲ ಸಿಬ್ಬಂದಿಯ ದುರುಪಯೋಗ ಕುರಿತು ವರದಿಯಲ್ಲಿ ವಿವರಿಸಿತ್ತು. ಈ ವರದಿ ಆಧರಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯು ಕ್ರಮ ಕೈಗೊಳ್ಳಲು ಸಿದ್ದಾಪುರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‍‌ಗೆ ಸೂಚಿಸಿತ್ತು.

 

ಈ ಕುರಿತು ಪೊಲೀಸ್‌ ಇನ್ಸ್‌ಪೆಕ್ಟರ್ ಅವರು 2025ರ ಏಪ್ರಿಲ್‌ 24ರಂದು ಸರ್ಕಾರಕ್ಕೆ  ಹಿಂಬರಹವನ್ನು ನೀಡಿದ್ದರು.

 

‘ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯ 27 ಅಧಿಕಾರಿ, ಸಿಬ್ಬಂದಿಗಳ ಪ್ರತ್ಯೇಕ ಪಾತ್ರವೇನು, ಭ್ರಷ್ಟಾಚಾರ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಅನುಮತಿ ಬಗ್ಗೆ ಮತ್ತು ನಿರ್ದೇಶಕರೇ ಟೆಂಡರ್‍‌ ಅಂಗೀಕಾರದ ಪ್ರಾಧಿಕಾರವಾಗಿರುವಾಗ ಇದರಲ್ಲಿ ತಪ್ಪೇನಿದೆ ಎಂಬುದರ ಬಗ್ಗೆ ಪೂರ್ಣ ಮಾಹಿತಿ ಒದಗಿಸಬೇಕು. ಸ್ಪಷ್ಟ ಹಾಗೂ ನಿಖರ ಪಿರ್ಯಾದಿಯನ್ನು ನೀಡಿದಲ್ಲಿ ಈ ಬಗ್ಗೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು,’ ಎಂದು ಹಿಂಬರಹ ನೀಡಿರುವುದು ಗೊತ್ತಾಗಿದೆ.

 

ಬಿಎಂಎಸ್‌ ಸಂಸ್ಥೆಯೂ ಸಹ 2025ರ ಮಾರ್ಚ್‌ 12ರಂದು ಅನುಪಾಲನೆ ವರದಿ ಸಲ್ಲಿಸಿದೆ. ಮಾನವ ಸಂಪನ್ಮೂಲ ಸೇವೆಗೆ ಸಂಬಂಧಿಸಿದಂತೆ 61,43,477 ರು.ಗಳನ್ನು ಬಿಬಿಎಂಪಿ ದಕ್ಷಿಣ ವಲಯದಿಂದ ಪಡೆದುಕೊಂಡಿಲ್ಲ ಎಂದು ತಿಳಿಸಿದೆ. ಇದರ ಪಾವತಿ ಕುರಿತು ಮಾಹಿತಿ ಒದಗಿಸಬೇಕು ಎಂದು ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತರಿಗೆ 2025ರ ಏಪ್ರಿಲ್‌ 4ರಂದು ಪತ್ರ ಬರೆದಿದೆ. ಈ ಕುರಿತು ಜಂಟಿ ಆಯುಕ್ತರು 2025ರ ಮೇ 9ರಂದು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

 

ಬೆಂಗಳೂರು ಮೆಡಿಕಲ್‌ ಸಿಸ್ಟಂ ಅವರಿಗೆ ಬಿಬಿಎಂಪಿ ಆರೋಗ್ಯಾಧಿಕಾರಿ (ದಕ್ಷಿಣ) ಅವರ ಕಚೇರಿಯಿಂದ ಮಾನವ ಸಂಪನ್ಮೂಲ ಸೇವೆ ನಿಯೋಜನೆ ಸಂಬಂಧ ಯಾವುದೇ ರೀತಿಯ ಹಣ ಪಾವತಿ ಮಾಡಿಲ್ಲ ಎಂದು ಪತ್ರದಲ್ಲಿ ತಿಳಿಸಿದೆ. ಹೀಗಾಗಿ ಈ ಕಂಡಿಕೆಯನ್ನು ಕೈ ಬಿಡಬೇಕು ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಕೋವಿಡ್‌ ಸಮಯದಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನೇಮಕಗೊಂಡಿದ್ದ ನ್ಯಾ. ಜಾನ್‌ ಮೈಕಲ್‌ ಕುನ್ಹಾ ನೇತೃತ್ವದ ಆಯೋಗವು ಸಲ್ಲಿಸಿರುವ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಿದ್ವಾಯಿ ಸಂಸ್ಥೆಯು ಬೆಂಗಳೂರು ಮೆಡಿಕಲ್‌ ಸಿಸ್ಟಮ್ಸ್‌ (ಬಿಎಂಎಸ್‌) ಲ್ಯಾಬ್‌ಗೆ, ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ನಡೆಸದೆಯೇ ವಂಚಿಸಿರುವ 125 ಕೋಟಿ ರೂ.ಗಳನ್ನು ಮರು ಪಾವತಿಸುವಂತೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು.

 

ಬಿಎಂಎಸ್‌ ಕೋವಿಡ್‌ ಪರೀಕ್ಷೆಗಳನ್ನು ನಡೆಸಿಲ್ಲ. ಪರೀಕ್ಷೆಗಳನ್ನು ನಿಲ್ಲಿಸುವಂತೆ ಸರಕಾರ ಸೂಚಿಸಿದ ನಂತರವೂ ಪರೀಕ್ಷೆ ನಡೆಸಿರುವುದಾಗಿ ಬಿಲ್‌ ಪಡೆದು ಅಕ್ರಮವೆಸಗಿದೆ ಎಂದು ಆರೋಪಿಸಿತ್ತು.

 

ಬೆಂಗಳೂರು ಮೆಡಿಕಲ್‌ ಸಿಸ್ಟಮ್ಸ್‌ (ಬಿಎಂಎಸ್‌) ಪ್ರಯೋಗಾಲಯಕ್ಕೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲು ಕಿದ್ವಾಯಿ ಸಂಸ್ಥೆ ಅನುಮತಿ ನೀಡಿರುವುದೇ ಕಾನೂನುಬಾಹಿರ. ಬಿಎಂಎಸ್‌ ಪ್ರಯೋಗಾಲಯ, ಕೋವಿಡ್‌ ಪರೀಕ್ಷೆ ನಡೆಸಲು ಐಸಿಎಂಆರ್‌ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಅದನ್ನು ಬಿಎಂಎಸ್‌ ಪಡೆದಿರಲಿಲ್ಲ ಎಂದು ನೋಟೀಸ್‌ನಲ್ಲಿ ಹೇಳಲಾಗಿತ್ತು.

 

ಕನಿಷ್ಠ ಪಕ್ಷ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯಿದೆ (ಕೆಪಿಎಂಇ) ಮತ್ತು ಎನ್‌ಎಬಿಎಲ್‌ ಮಾನ್ಯತೆ ಕೂಡ ಪ್ರಯೋಗಾಲಯಕ್ಕೆ ಇಲ್ಲದಿರುವುದು ಆಯೋಗದ ತನಿಖೆ ವೇಳೆ ಬಯಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಕಿದ್ವಾಯಿ ಸಂಸ್ಥೆಯಿಂದ ಆರ್‌ಟಿಪಿಸಿಆರ್‌ ಪರೀಕ್ಷೆಗೆ 125.46 ಕೋಟಿ ರೂ. ಬಿಲ್‌ ಪಡೆಯಲಾಗಿದೆ. ಆದರೆ ಅಷ್ಟು ಮೊತ್ತಕ್ಕೆ ಪರೀಕ್ಷೆಗಳನ್ನೇ ನಡೆಸಿಲ್ಲ. ಇದಲ್ಲದೆ ಲ್ಯಾಬ್‌ನಲ್ಲಿ ಮಾಡಿದ ಪರೀಕ್ಷೆಗೆ ಬಾಕಿ ಉಳಿದಿರುವುದು ಕೇವಲ 3.77 ಕೋಟಿ ರೂ. ಆಗಿದ್ದರೂ 13.62 ಕೋಟಿ ರೂ. ಬಾಕಿ ತೋರಿಸಿ ಬಿಲ್‌ ಬಿಡುಗಡೆ ಮಾಡಿಸಿಕೊಂಡಿದ್ದೀರಿ. ಇದೇ ವೇಳೆ ಬಿಬಿಎಂಪಿಯಿಂದ ಒದಗಿಸಿದ ಮಾನವ ಸಂಪನ್ಮೂಲವನ್ನು ಸಂಸ್ಥೆ ದುರುಪಯೋಗಪಡಿಸಿಕೊಂಡು 61.43 ಲಕ್ಷ ರೂ. ಅಕ್ರಮವಾಗಿ ಪಡೆದುಕೊಂಡಿರುವುದು ಕಂಡುಬಂದಿದೆ” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.

 

‘ಕೋವಿಡ್‌ ಸಾಂಕ್ರಾಮಿಕದ ತೀವ್ರತೆ ತಗ್ಗಿದ ನಂತರ ಸರಕಾರ ಪರೀಕ್ಷೆಗಳನ್ನು ನಿಲ್ಲಿಸುವಂತೆ ಸೂಚಿಸಿದ್ದರೂ, ಪರೀಕ್ಷೆ ನಡೆಸಿರುವುದಾಗಿ ಬಿಲ್‌ ಪಡೆದಿದ್ದೀರಿ. ಆ ಮೂಲಕ ಸಾರ್ವಜನಿಕ ಹಣವನ್ನು ವಂಚಿಸುವ ಮತ್ತು ದುರುಪಯೋಗಪಡಿಸಿಕೊಳ್ಳುವ ಉದ್ದೇಶಪೂರ್ವಕ ಪ್ರಯತ್ನವನ್ನು ಬಿಎಂಎಸ್‌ ಸಂಸ್ಥೆ ಮಾಡಿದೆ’ ಎಂದು ವರದಿಯಲ್ಲಿ ತಿಳಿಸಿದೆ.

 

ನೋಟ್‌ಶೀಟ್‌ ದಾಖಲೆಯಲ್ಲಿ 27.68 ಲಕ್ಷ ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ನಮೂದಿಸಲಾಗಿದೆ. ಆದರೆ 15.67 ಲಕ್ಷ ಪರೀಕ್ಷೆಗಳಿಗೆ ಮಾತ್ರ ಇನ್‌ವಾಯ್ಸ್‌ಗಳು ಲಗತ್ತಿಸಿರುವುದು ಆಯೋಗದ ಗಮನಕ್ಕೆ ಬಂದಿದೆ” ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

ಪರೀಕ್ಷೆಗಳನ್ನು ನಡೆಸಿದ ನಂತರ ವರದಿಯನ್ನು ಕಿದ್ವಾಯಿ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ನೋಡಲ್‌ ಅಧಿಕಾರಿಯಿಂದ ದೃಢೀಕರಿಸಿಕೊಳ್ಳದೇ ತಮ್ಮ ಹಂತದಲ್ಲಿಯೇ ಐಸಿಎಂಆರ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿರುತ್ತದೆ. ಸರಕಾರದ ಮಾರ್ಗಸೂಚಿ ಪ್ರಕಾರ ಐಸಿಎಂಆರ್‌ ಪೋರ್ಟಲ್‌ನಲ್ಲಿ ವರದಿಗಳನ್ನು ಅಪ್‌ಲೋಡ್‌ ಮಾಡುವ ಅಧಿಕಾರ ನಿಮಗೆ ಇಲ್ಲದಿದ್ದರೂ ಆರ್‌ಟಿಪಿಸಿಆರ್‌ ವರದಿಯನ್ನು ಅಪ್‌ಲೋಡ್‌ ಮಾಡಿರುವುದು ಏಕೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ನೋಟೀಸ್‌ನಲ್ಲಿ ಸೂಚಿಸಿತ್ತು.

SUPPORT THE FILE

Latest News

Related Posts