ಲೋಕಾ ಹೆಸರಿನಲ್ಲಿ ವಸೂಲಿ; ಬಂಧಿತ ಆರೋಪಿಯೊಂದಿಗೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನಂಟು?

ಬೆಂಗಳೂರು; ಲೋಕಾಯುಕ್ತ ಹೆಸರು ಹೇಳಿ ಸರ್ಕಾರಿ ಅಧಿಕಾರಿಗಳಿಂದ ಕೋಟ್ಯಂತರ ರುಪಾಯಿ ವಸೂಲು ಮಾಡಿರುವ ಪ್ರಕರಣದಲ್ಲಿ ಬಂಧಿತ ಆರೋಪಿ ನಿಂಗಪ್ಪ ಎಂಬಾತನೊಂದಿಗೆ ಹಾಲಿ ರಾಜ್ಯ ಸರ್ಕಾರದ ಪ್ರಭಾವಿ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳು ನಿಕಟ ಸಂಪರ್ಕ ಹೊಂದಿದ್ದರು ಎಂದು ಗೊತ್ತಾಗಿದೆ.

 

ಅಲ್ಲದೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಎಸ್ಪಿ ಶ್ರೀನಾಥ ಜೋಷಿ ಅವರೊಂದಿಗೆ ಮುಖ್ಯಮಂತ್ರಿ ಸಚಿವಾಲಯದ ಉನ್ನತ ಅಧಿಕಾರಿಗಳಿಬ್ಬರು  ನಿಕಟ ಸಂಪರ್ಕ ಹೊಂದಿದ್ದರು ಮತ್ತು  ಕೆಲವು ಪ್ರಕರಣಗಳಲ್ಲಿ ಅವರು  ನೆರವು ಕೋರಿದ್ದರು ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ತನಿಖೆಯೂ ನಡೆದಿದೆ ಎಂದು ಗೊತ್ತಾಗಿದೆ.

 

ವಜಾಗೊಂಡಿರುವ ಮುಖ್ಯ ಪೇದೆ ನಿಂಗಪ್ಪ ಎಂಬಾತನು  8ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳಿಂದ ಹಣ ವಸೂಲು ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಮುಂದೆ,  ಸಚಿವರುಗಳ ಆಪ್ತ ಕಾರ್ಯದರ್ಶಿಗಳ ಹೆಸರು ಸೇರಿದಂತೆ ಹಲವರ ಹೆಸರುಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ಗೊತ್ತಾಗಿದೆ.

 

ತನಿಖೆ ವೇಳೆಯಲ್ಲಿ  ನಿಂಗಪ್ಪ,  ಪೊಲೀಸ್‌ ಅಧಿಕಾರಿಗಳ ಹೆಸರು ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿರುವ ಹೊತ್ತಿನಲ್ಲಿಯೇ ಆರೋಪಿತ ನಿಂಗಪ್ಪನೊಂದಿಗೆ ವಿಧಾನಸೌಧದಲ್ಲಿರುವ ಸಚಿವರುಗಳ ಆಪ್ತ ಕಾರ್ಯದರ್ಶಿಗಳ ಹೆಸರುಗಳನ್ನೂ ಬಹಿರಂಗಪಡಿಸಿದ್ದಾನೆ ಎಂಬುದೂ ಸಹ ತೀವ್ರ  ಚರ್ಚೆಗೆ ಗ್ರಾಸವಾಗಿದೆ.

 

ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಲೋಕಾಯುಕ್ತರಾಗಿದ್ದ ಭಾಸ್ಕರರಾವ್‌ ಅವರ ಪುತ್ರ ಮತ್ತು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಲವರಿಂದ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರು ಈ ಪ್ರಕರಣವನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಲೋಕಾಯುಕ್ತ ಹುದ್ದೆಗೆ ಭಾಸ್ಕರರಾವ್‌ ಅವರು ರಾಜೀನಾಮೆ ನೀಡಿದ್ದರು. ಹಾಗೂ ಅವರ ಪುತ್ರ ಅಶ್ವಿನ್‌ ರಾವ್‌ ಸಹ ಪೊಲೀಸರ ಬಂಧನಕ್ಕೆ ಒಳಗಾಗಿದ್ದ.

 

ಈ ಪ್ರಕರಣದ ನಂತರ ಲೋಕಾಯುಕ್ತಕ್ಕಿದ್ದ ಪೊಲೀಸ್‌ ಅಧಿಕಾರವನ್ನು ಮೊಟಕುಗೊಳಿಸಿ, ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗಿತ್ತು. ಆ ನಂತರ ಎಸಿಬಿಯನ್ನೂ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಗೆ ಪುನಃ ಪೊಲೀಸ್‌ ಅಧಿಕಾರವನ್ನು ಮರು ಸ್ಥಾಪಿಸಲಾಗಿತ್ತು.  ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರ್ಣಗೊಳಿಸಿರುವ ಹೊತ್ತಿನಲ್ಲೇ  ಲೋಕಾಯುಕ್ತ ಹೆಸರಿನಲ್ಲಿ ನಿಂಗಪ್ಪ ಎಂಬಾತ ಹಣ ವಸೂಲಿ ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ. ಅಲ್ಲದೇ  ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆಯೂ ಎದುರಾಗಿದೆ.

 

ಬಂಧಿತ ಆರೋಪಿ ಕೋಟ್ಯಂತರ ರೂ.ವಸೂಲಿ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಹಲವು ಪುರಾವೆ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರನ್ನು ಎತ್ತಂಗಡಿ ಮಾಡಲಾಗಿತ್ತು.

 

ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲಿ!

 

ಹಣಕ್ಕಾಗಿ ಬೇಡಿಕೆ ಮತ್ತು ಹಣ ನೀಡದೇ ಇದ್ದ ಹಲವು ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿತನಾಗಿರುವ ನಿಂಗಪ್ಪ, ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲು ಮಾಡಿದ್ದಾನೆ ಎಂಬ ಆಪಾದನೆ ಕೇಳಿ ಬಂದಿದೆ. ವಿಜಯನಗರ ಮೆಟ್ರೋ ಸ್ಟೇಷನ್‌, ಜೀವನ್‌ ಭೀಮಾ ನಗರ, ಎಂ ಜಿ ರಸ್ತೆ, ಜೆಡಿಎಸ್‌ನ ಹಳೇ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಣವನ್ನು ವಸೂಲು ಮಾಡಿದ್ದ ಎಂದು ಹೇಳಲಾಗುತ್ತಿದೆ.

 

ಅಬಕಾರಿ ಹಗರಣವೊಂದರಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿರುವ 100ಕ್ಕೂ ಹೆಚ್ಚು ಅಬಕಾರಿ ಅಧಿಕಾರಿಗಳಿಂದ ತಿಂಗಳಿಗೆ ತಲಾ 1 ಲಕ್ಷ ರು ನಂತೆ ವಸೂಲು ಮಾಡಲಾಗುತ್ತಿತ್ತು. ಈ ಮಧ್ಯೆ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಅಬಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್‌ ವಿಭಾಗದ ಮತ್ತೊಬ್ಬ ಎಸ್‌ಪಿಯೊಬ್ಬರು ಮೊಕದ್ದಮೆ ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

 

ಕೋಟ್ಯಂತರ ರು. ಕಪ್ಪುಹಣ ವರ್ಗಾವಣೆ; ಅಶ್ವಿನ್‌ ಕುಕೃತ್ಯದ ಬಗ್ಗೆ ಸಾಕ್ಷ್ಯ ನುಡಿದ ಇ ಡಿ ಉಪ ನಿರ್ದೇಶಕ

 

ಪ್ರತಿ ತಿಂಗಳೂ ತಲಾ 1 ಲಕ್ಷ ರು ನೀಡುತ್ತಿದ್ದರೂ ಸಹ ಮೊಕದ್ದಮೆ ದಾಖಲಾಗಿದ್ದಕ್ಕೆ ಈಗಾಗಲೇ ಹಣ ಕೊಟ್ಟಿದ್ದ ಅಧಿಕಾರಿಗಳು ಆರೋಪಿತ ನಿಂಗಪ್ಪ ವಿರುದ್ಧ ತಿರುಗಿ ಬಿದ್ದಿದ್ದರು ಎಂದು ಗೊತ್ತಾಗಿದೆ.

 

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ?

 

ಹಣ ವಸೂಲು ಮಾಡುತ್ತಿದ್ದ ಎಂದು ಹೇಳಲಾಗಿರುವ ಆರೋಪಿತ ನಿಂಗಪ್ಪ , ಲೋಕಾಯುಕ್ತದ ಕೆಲವು ಅಧಿಕಾರಿಗಳಿಂದ ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿಸಿದ್ದ. ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳ ಲೋಕಾ ಎಸ್ಪಿಗಳಿಂದಲೂ ಕ್ರಿಪ್ಟೋ ಕರೆನ್ಸಿಯಲ್ಲಿ ಮಧ್ಯವರ್ತಿಗಳ ಮೂಲಕ ಹೂಡಿಕೆ ಮಾಡಿಸಿದ್ದ ಎಂಬ ಆಪಾದನೆ ಕೇಳಿ ಬಂದಿದೆ.

 

ಅಧಿಕಾರಿಗಳಿಂದ ವಸೂಲು ಮಾಡಿದ್ದ ಹಣದಲ್ಲಿಯೇ ನಿಂಗಪ್ಪ ಈಚೆಗಷ್ಟೇ 20 ಲಕ್ಷ ರು ಮೌಲ್ಯದ ಚಿನ್ನ ಮತ್ತು ಕಾರನ್ನು ಖರೀದಿಸಿದ್ದ ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

 

ಬಿಡಿಎ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಲೋಕಾಯುಕ್ತ ದಾಳಿ, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಪ್ರಕರಣದಲ್ಲಿ ಆರೋಪಿ ನಿಂಗಪ್ಪನನ್ನು ಕೆಲ ದಿನಗಳ ಹಿಂದೆ ಲೋಕಾಯುಕ್ತ ಎಸ್ಪಿ ಕೋನ ವಂಶಿಕೃಷ್ಣ ನೇತೃತ್ವದ ತಂಡ ಬಂಧಿಸಿತ್ತು.
ಆರೋಪಿ ನಿಂಗಪ್ಪನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು.

 

ಈ ವೇಳೆ ನಿಂಗಪ್ಪನ ಕುಕೃತ್ಯಕ್ಕೆ ಕೆಲ ಲೋಕಾಯುಕ್ತ ಪೊಲೀಸರು ಸಹಕಾರ ನೀಡುತ್ತಿದ್ದರು ಎಂಬ ವಿಚಾರ ಬಯಲಿಗೆ ಬಂದಿತ್ತು. ಇದಕ್ಕೆ ಸಂಬಂಧಿಸಿ ನಿಂಗಪ್ಪನ ಮೊಬೈಲ್‌ನಲ್ಲಿಯೂ ಸಾಕ್ಷ್ಯಾಧಾರ ಪತ್ತೆಯಾಗಿತ್ತು ಎಂದು ಹೇಳಲಾಗಿದೆ.

 

ನಿಂಗಪ್ಪ, ಮೂಲತಃ ಚಿತ್ರದುರ್ಗದ ಹೊಸದುರ್ಗದಲ್ಲಿ ಕಾರ್ಯನಿರ್ವಹಿಸಿದ್ದ. ಆ ಅವಧಿಯಲ್ಲಿಯೇ ಲೋಕಾಯುಕ್ತ ಎಸ್ಪಿ ಶ್ರೀನಾಥ ಜೋಷಿ ಅವರು ಸಹ ಚಿತ್ರದುರ್ಗದಲ್ಲಿ ಕಾರ್ಯನಿರ್ವಹಿಸಿದ್ದರು. ಆಗಿನಿಂದಲೂ ನಿಂಗಪ್ಪ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ.

 

ಕೆಲ ವರ್ಷಗಳ ಹಿಂದೆ ನಿಂಗಪ್ಪ, ಸೇವೆಯಿಂದ ವಜಾಗೊಂಡಿದ್ದ. ಬಳಿಕ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳನ್ನು ಬೆದರಿಸಿ ಸುಲಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದ. ಈ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲು ಸೇರಿದ್ದ ಎಂದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts