ಆದಾಯ ವೆಚ್ಚ, ಬಂಡವಾಳ ವೆಚ್ಚ, ಸ್ವೀಕೃತಿಯಲ್ಲಿ ಗಣನೀಯ ಇಳಿಕೆ; 5,106.56 ಕೋಟಿ ನಿವ್ವಳ ವ್ಯತ್ಯಾಸ ಪತ್ತೆ

ಬೆಂಗಳೂರು; 2024-25ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದಾಯ ವೆಚ್ಚ, ಬಂಡವಾಳ ವೆಚ್ಚ ಮತ್ತು ಸ್ವೀಕೃತಿಗಳು ಗಣನೀಯವಾಗಿ ಕಡಿಮೆಯಾಗಿರುವುದು ಇದೀಗ ಬಹಿರಂಗವಾಗಿದೆ.

 

ಅಲ್ಲದೇ ಫೆಬ್ರವರಿ 2025 ರ ಹೊತ್ತಿಗೆ 5,106.56 ಕೋಟಿ (ಡೆಬಿಟ್) ನಿವ್ವಳ ವ್ಯತ್ಯಾಸವಿರುವುದನ್ನು ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.

 

ರಾಜ್ಯ ಸರ್ಕಾರವು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಿದೆ ಮತ್ತು ಆದಾಯವನ್ನೂ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಿಎಜಿಯು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

2024-25ನೇ ಸಾಲಿನ ಆರ್ಥಿಕ ಲೆಕ್ಕಗಳಿಗೆ ಸಂಬಂಧಿಸಿದಂತೆ ಪ್ರಧಾನ ಮಹಾಲೇಖಪಾಲರು 2025ರ ಮೇ 15ಕ್ಕೆ ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಪತ್ರವನ್ನು ಬರೆದಿದ್ದಾರೆ. ಈ ಪತ್ರವನ್ನಾಧರಿಸಿ ಹಣಕಾಸು ಲೆಕ್ಕಗಳಲ್ಲಿ ಸೇರ್ಪಡೆ ಮಾಡಿ ಮಹಾಲೇಖಪಾಲರಿಗೆ ಕಳಿಸಿಕೊಡಬೇಕು ಎಂದು ಅರ್ಥಿಕ ಇಲಾಖೆಯು ಸಹ 2025ರ ಜೂನ್‌ 9ರಂದು ಪತ್ರ ಬರೆದಿದೆ.

 

ಈ ಎರಡೂ ಪತ್ರಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಫೆಬ್ರವರಿ 2025 ರ ಅಂತ್ಯದ ವೇಳೆಗೆ ಆದಾಯ ವೆಚ್ಚ, ಬಂಡವಾಳ ವೆಚ್ಚ ಮತ್ತು ಸ್ವೀಕೃತಿಗಳ ಸಮನ್ವಯವು ಗಣನೀಯವಾಗಿ ಕಡಿಮೆಯಾಗಿದೆ. ಲೆಕ್ಕ ಸಮನ್ವಯವು ಕ್ರಮವಾಗಿ ಶೇಕಡಾ 43, ಶೇಕಡಾ 27 ಮತ್ತು 32 ರಷ್ಟಿದೆ ಎಂದು ಮಹಾಲೇಖಪಾಲರು ಪತ್ರದಲ್ಲಿ ಗಮನ ಸೆಳೆದಿರುವುದು ಗೊತ್ತಾಗಿದೆ.

 

 

ನಿಖರವಾದ ಖಾತೆಗಳು ಸರಿಯಾದ ಸಮನ್ವಯವನ್ನು ಅವಲಂಬಿಸಿರುತ್ತದೆ. 2025 ರ ಮೇ 30 ರೊಳಗೆ ಸಮನ್ವಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ಮಹಾಲೇಖಪಾಲರು ಕೋರಿರುವುದು ತಿಳಿದು ಬಂದಿದೆ.

 

 

ಆರ್‌ಬಿಐ ಜೊತೆಗಿನ ನಗದು ಬಾಕಿ

 

ಆರ್‌ಬಿಐ ಜೊತೆಗಿನ ನಗದು ಬಾಕಿಯು 23,812.62 ಕೋಟಿ (ಡೆಬಿಟ್) ಮತ್ತು 28,919.10 ಕೋಟಿ (ಕ್ರೆಡಿಟ್) ವ್ಯತ್ಯಾಸವಿದೆ. ಇದರ ಪರಿಣಾಮವಾಗಿ ಫೆಬ್ರವರಿ 2025 ರ ಹೊತ್ತಿಗೆ 5,106.56 ಕೋಟಿ (ಡೆಬಿಟ್) ನಿವ್ವಳ ವ್ಯತ್ಯಾಸ ಕಂಡುಬಂದಿದೆ. ಈ ನಿಟ್ಟಿನಲ್ಲಿ ಸಮನ್ವಯವನ್ನು ತ್ವರಿತಗೊಳಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

 

ಠೇವಣಿ ಖಾತೆಗಳು

 

ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಖಜಾನೆಗಳು ಮತ್ತು ಠೇವಣಿ ಖಾತೆಗಳ ನಿರ್ವಾಹಕರ ನಡುವೆ ಬಾಕಿಗಳನ್ನು ಸ್ವೀಕರಿಸಲಾಗಿಲ್ಲ. ಠೇವಣಿಗಳು, ಜಿಪಿಎಫ್, ಸಾಲಗಳು ಮುಂತಾದ ಸಾರ್ವಜನಿಕ ಖಾತೆ ಮುಖ್ಯಸ್ಥರು ಪ್ರತಿಕೂಲ ಬಾಕಿಗಳನ್ನು ಇತ್ಯರ್ಥಗೊಳಿಸಲು ಆರಂಭಿಕ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ವೈಯಕ್ತಿಕ ಠೇವಣಿ ಖಾತೆಗಳು

 

ಖಜಾನೆಗಳು ಮತ್ತು ಪಿಡಿ ಖಾತೆ ನಿರ್ವಾಹಕರ ನಡುವಿನ ಸಮನ್ವಯವನ್ನು ಪೂರ್ಣಗೊಳಿಸಬೇಕು. ಪರಿಶೀಲನಾ ಪ್ರಮಾಣಪತ್ರಗಳೊಂದಿಗೆ ವರದಿ ಸಲ್ಲಿಸಬೇಕು. ಈ ಕಚೇರಿಯ ದಾಖಲೆಗಳ ಪ್ರಕಾರ, 27 ನಿಷ್ಕ್ರಿಯ ಮತ್ತು 12 ಶೂನ್ಯ ಬ್ಯಾಲೆನ್ಸ್ ಪಿಡಿ ಖಾತೆಗಳು ಅಸ್ತಿತ್ವದಲ್ಲಿವೆ ಎಂದು ಪತ್ರದಲ್ಲಿ ಗಮನಸೆಳೆದಿರುವುದು ಗೊತ್ತಾಗಿದೆ.

 

 

‘2024-25ನೇ ಸಾಲಿನ ಹೊಸ ಯೋಜನೆಗಳಿಗೆ ಮತ್ತು ಬದ್ಧ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಪ್ರಧಾನ ಮಹಾಲೇಖಪಾಲರ ಅರೆ ಸರ್ಕಾರಿ ಪತ್ರದಲ್ಲಿ ಮಾಹಿತಿ ಕೋರಲಾಗಿದೆ. 2024-25ನೇ ಸಾಲಿನ ಹಣಕಾಸು ಲೆಕ್ಕಗಳಲ್ಲಿ ಸೇರ್ಪಡಿಸುವ ಸಲುವಾಗಿ ಮಹಾಲೇಖಪಾಲರು ಕೋರಿರುವ ಮಾಹಿತಿಯನ್ನು ಪ್ರಧಾನ ಮಹಾಲೇಖಪಾಲರಿಗೆ ಕಳಿಸಿಕೊಡಬೇಕು,’ ಎಂದು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಆರ್ಥಿಕ ಇಲಾಖೆಯು 2025ರ ಜೂನ್‌ 9ರಂದು ಕೋರಿದೆ.

 

 

ಫೆ.2025ರ ಅಂತ್ಯಕ್ಕೆ ರಾಜ್ಯದ ಲೆಕ್ಕ

 

2025 ಫೆ.ಅಂತ್ಯಕ್ಕೆ ರಾಜ್ಯ ಸರ್ಕಾರವು ಸ್ವಂತ ತೆರಿಗೆ ರಾಜಸ್ವದಡಿಯಲ್ಲಿ 1,57,108.82 ಕೋಟಿ ರು ಸಂಗ್ರಹಿಸಿತ್ತು. ವಾಣಿಜ್ಯ ತೆರಿಗೆಯಲ್ಲಿ 92,934.11 ಕೋಟಿ ರು., ರಾಜ್ಯ ಅಬಕಾರಿ ಆದಾಯವು 32,381.43 ಕೋಟಿ ರು ಇತ್ತು. ಮೋಟಾರು ವಾಹನ ತೆರಿಗೆಯಲ್ಲಿ 10,720.06 ಕೋಟಿ ರು., ಮುದ್ರಾಂಕ ಮತ್ತು ನೋಂದಣಿ ಶುಲ್ಕ 20.151.74 ಕೋಟಿ ರು ಇತ್ತು.

 

 

ಇತರೆ 921.48 ಕೋಟಿ ರು, ಸ್ವಂತ ತೆರಿಗೇಯತರ ರಾಜಸ್ವ 13,652.20 ಕೋಟಿರು., ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ 43,054.08 ಕೋಟಿ ರು., ಕೇಂದ್ರ ಸರ್ಕಾರದಿಂದ ಸಹಾಯಾನುದಾನ 12,629.60 ಕೋಟಿ ರು ಇತ್ತು.

 

 

ರಾಜಸ್ವ ಸ್ವೀಕೃತಿಯಲ್ಲಿ 2,26,444.71 ಕೋಟಿ ರು., ಋಣೇತರ ಬಂಡವಾಳ ಜಮೆಯಲ್ಲಿ 60.41 ಕೋಟಿ ರು., ಸಾಲಗಳ ವಸೂಲಾತಿಯಿಂದ 41.00 ಕೋಟಿ ರು., ವಿವಿಧ ಬಂಡವಾಳ ಜಮೆಗಳಡಿಯಲ್ಲಿ 19.41 ಕೋಟಿ ರು., ಒಟ್ಟಾರೆ 2,26,505.11 ಕೋಟಿ ರುಗಳಷ್ಟಿತ್ತು. ಸಾರ್ವಜನಿಕ ಸಾಲ ಒಳಗೊಂಡಂತೆ ಒಟ್ಟು ಜಮೆಯಲ್ಲಿ 3,08,513.23 ಕೋಟಿ ರು ಇತ್ತು.

Your generous support will help us remain independent and work without fear.

Latest News

Related Posts