ಸೌಜನ್ಯ ಹತ್ಯೆ ಮರು ತನಿಖೆ; ಅಡ್ವೋಕೇಟ್ ಜನರಲ್ ಕಚೇರಿಯಿಂದ ಬಾರದ ಕಾನೂನು ಅಭಿಪ್ರಾಯ!

ಬೆಂಗಳೂರು: ಕುಮಾರಿ ಸೌಜನ್ಯ ಅವರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸಬೇಕೇ ಬೇಡವೇ ಎಂಬ ಕುರಿತು ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರಿಂದ ಯಾವುದೇ ಅಭಿಪ್ರಾಯವೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ!

 

ಕುಮಾರಿ ಸೌಜನ್ಯ ಅವರ  ಅತ್ಯಾಚಾರ ಮತ್ತು  ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವ ಸಂಬಂಧ  ಒಳಾಡಳಿತ ಇಲಾಖೆಯು ಕೈಗೊಂಡಿರುವ ನಿರ್ಣಯದ ಕುರಿತು  ಆರ್‍‌ಟಿಐ ಮೂಲಕ ‘ದಿ ಫೈಲ್‌’ ಪಡೆದುಕೊಂಡಿರುವ 325 ಪುಟಗಳಲ್ಲಿ ಎಲ್ಲಿಯೂ ಅಡ್ವೋಕೇಟ್‌ ಜನರಲ್‌ ಅವರು ನೀಡಿರುವ ಅಭಿಪ್ರಾಯದ ಪ್ರತಿಯು ಕಂಡು ಬಂದಿಲ್ಲ.

 

325 ಪುಟಗಳಲ್ಲಿರುವ ಟಿಪ್ಪಣಿ ಹಾಳೆಗಳಲ್ಲಿ 2024ರ ಮೇ 4ರ (2.47 ಮಧ್ಯಾಹ್ನದವರೆಗೆ)ವರೆಗೆ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯ ಕೋರುವ ಬಗ್ಗೆ ಕ್ರಮ ವಹಿಸಲು ಸೂಚಿಸಿರುವ ಮಾಹಿತಿ ಮಾತ್ರ ಇದೆ. ಮೇ 7ರ ನಂತರ ಅಡ್ವೋಕೇಟ್‌ ಜನರಲ್‌ ಅಭಿಪ್ರಾಯದ ಕುರಿತು ಉಳಿದ ಯಾವ ಹಾಳೆಗಳಲ್ಲಿಯೂ ಇದರ ಬಗ್ಗೆ ಪ್ರಸ್ತಾವಿಸಿಲ್ಲ.

 

ಕು. ಸೌಜನ್ಯ ಅವರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೊಳಪಡಿಸಬೇಕು ಎಂದು ರಾಜ್ಯದಾದ್ಯಂತ ಹಲವು ಸಂಘಟನೆಗಳು ಒತ್ತಾಯಿಸಿದ್ದವು. ಈ ಕುರಿತು ಅಡ್ವೋಕೇಟ್‌ ಜನರಲ್‌ ಅವರಿಂದ ಕಾನೂನು ಅಭಿಪ್ರಾಯ ಪಡೆಯಲು ಸರ್ಕಾರವು ಮುಂದಾಗಿತ್ತು. ಆದರೆ ರಾಜ್ಯದ ಅಡ್ವೋಕೇಟ್‌ ಜನರಲ್‌ ಕಾನೂನು ಅಭಿಪ್ರಾಯ ನೀಡಿದ್ದಾರೆಯೇ ಅಥವಾ  ಇಲ್ಲವೇ ಎಂಬ ಬಗ್ಗೆ ಯಾವ ಮಾಹಿತಿಯನ್ನೂ ಒಳಾಡಳಿತ ಇಲಾಖೆಯ  ಕಡತದಲ್ಲಿ ಒದಗಿಸಿಲ್ಲ.

 

 

‘ಕುಮಾರಿ ಸೌಜನ್ಯ ಅವರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು  ಮರು ತನಿಖೆ ನಡೆಸುವ ಕುರಿತು  ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರ ಕಾನೂನು ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಕಂಡು ಬಂದಿರುವ ಮೇರೆಗೆ  ಈ ಕುರಿತು ಸರ್ಕಾರದ ವತಿಯಿಂದ ಪತ್ರ ವ್ಯವಹಾರ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಈ ಬಗ್ಗೆ ಇಲ್ಲಿಯವರೆಗೂ ತಮ್ಮಿಂದ ಯಾವುದೇ ಮಾಹಿತಿ ಬಂದಿರುವುದಿಲ್ಲ ಎಂದು ಹಾಗೂ ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸರ್ಕಾರಕ್ಕೆ ಸಲ್ಲಿಸುತ್ತಿರುವ ಮನವಿಗಳನ್ನು ಸರ್ಕಾರದ ಪತ್ರಗಳಲ್ಲಿ ಕಳಿಸಿ ಕ್ರಮ ಕೈಗೊಂಡು ವರದಿ/ಮಾಹಿತಿಯನ್ನು ಕಳಿಸುವಂತೆ ನಿರ್ದೇಶಿಸಲಾಗುತ್ತಿರುತ್ತದೆ, ‘ ಎಂದು 2024ರ  ಮೇ 6ರಂದು  ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

 

 

ಅಡ್ವೋಕೇಟ್‌ ಜನರಲ್‌ ಅವರ ಕಾನೂನು ಅಭಿಪ್ರಾಯ ಪಡೆಯುವ ಕುರಿತು 2024ರ ಮೇ 4ರವರೆಗೂ ಕಡತದ ಟಿಪ್ಪಣಿ ಹಾಳೆಗಳಲ್ಲಿ ಚರ್ಚಿಸಿರುವುದು ಕಂಡು ಬಂದಿದೆ. ಮೇ 4 ರಿಂದ 2025ರ ಜನವರಿ 22ರವರೆಗೂ ಅಂದರೆ ಕಡತ ಮುಕ್ತಾಯಗೊಳಿಸುವ ದಿನದವರೆಗೂ ಅಡ್ವೋಕೇಟ್‌ ಜನರಲ್‌ ಅವರ ಕಾನೂನು ಅಭಿಪ್ರಾಯದ ಕುರಿತು ಚರ್ಚೆಯೇ ನಡೆದಿಲ್ಲ.

 

 

ಆದರೆ ಗಿರೀಶ್‌ ಭಾರದ್ವಾಜ್‌ ಮತ್ತಿತರರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ರಿಟ್‌ ಅರ್ಜಿಗೆ (19366/2023)  ಸಂಬಂಧಿಸಿದಂತೆ ಅಡ್ವೋಕೇಟ್‌ ಜನರಲ್‌ ಕಚೇರಿಯ ಎಜಿಜಿ ನಿಲೋಫರ್‍‌ ಅಕ್ಬರ್‍‌ ಅವರು ಒಳಾಡಳಿತ ಇಲಾಖೆಯ ಕಾನೂನು ಘಟಕಕ್ಕೆ ಮಾಹಿತಿ ಒದಗಿಸಿದ್ದರು.

 

 

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸಬೇಕು ಅಥವಾ ಮರು ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ ಮತ್ತು ಅರ್ಜಿಯನ್ನು ವಜಾಗೊಳಿಸಿದೆ ಎಂದಷ್ಟೇ ಪತ್ರದಲ್ಲಿ ಹೇಳಿದ್ದರು.

 

 

 

 

ಈ  ಮಧ್ಯೆಯೇ ಸೌಜನ್ಯ ಹತ್ಯೆ ಕುರಿತು ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ  ಗೃಹ ಮಂತ್ರಾಲಯ ಮತ್ತು ಸಿಬಿಐ ಸಂಸ್ಥೆಗೆ 2024ರ ಜನವರಿ 19ರಂದೇ  ಒಳಾಡಳಿತ ಇಲಾಖೆಯು ಪತ್ರ  ಬರೆದಿತ್ತು.

 

 

ಸೌಜನ್ಯ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು ತೀರ್ಪು ನೀಡಿದ ನಂತರ ರಾಜ್ಯದಲ್ಲಿ ವಿವಿಧ ಸಂಘಟನೆಗಳು  ನಿರಂತರವಾಗಿ ಪ್ರತಿಭಟನೆ ನಡೆಸಿವೆ. ಸಿಬಿಐ ತನಿಖೆಯು ಪರಿಪೂರ್ಣವಾಗಿ ನಡೆದಿಲ್ಲ ಮತ್ತು ನೈಜ ಆರೋಪಿಗಳ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿವೆ. ಈ ಎಲ್ಲಾ ಪ್ರತಿಭಟನೆಗಳು ಸಿಬಿಐ ತನಿಖೆಯೊಂದಿಗೆ ತಳಕು ಹಾಕಿಕೊಂಡಿವೆ. ಆದ್ದರಿಂದ ಈ ಎಲ್ಲಾ ಬೆಳವಣಿಗೆಗಳನ್ನು ಸಿಬಿಐ ಸಂಸ್ಥೆ ಮತ್ತು ಕೇಂದ್ರ ಗೃಹ ಮಂತ್ರಾಲಯದ  ಗಮನಕ್ಕೆ ತರಬೇಕು. ಮತ್ತು ಈ ನಿಟ್ಟಿನಲ್ಲಿ ಮುಂದಿನ ಕ್ರಮವನ್ನು ನಿರೀಕ್ಷಿಸಿದೆ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2024ರ ಜನವರಿ 19ರಂದೇ ಪತ್ರವನ್ನು ಬರೆದಿದ್ದರು.

 

ಈ ಪತ್ರಕ್ಕೆ ಕೇಂದ್ರ ಗೃಹ ಮಂತ್ರಾಲಯವಾಗಲೀ ಮತ್ತು ಸಿಬಿಐ ಸಂಸ್ಥೆಯಾಗಲೀ ಉತ್ತರ ನೀಡಿದೆಯೇ ಅಥವಾ ಕ್ರಮಗಳನ್ನೇನಾದರೂ ಕೈಗೊಂಡಿದೆಯೇ ಎಂಬ ಬಗ್ಗೆ ಕಡತದ 325 ಪುಟಗಳಲ್ಲಿ ಎಲ್ಲಿಯೂ ಯಾವ ಮಾಹಿತಿಯೂ ಕಂಡು ಬಂದಿಲ್ಲ.

 

ಆದರೆ 2025ರ ಜನವರಿ 21ರಂದು ಏಕಾಏಕೀ ಈ ಕಡತವನ್ನೇ ಮುಕ್ತಾಯಗೊಳಿಸಿದೆ.

 

 

 

‘ಈ ಕುರಿತು ಪ್ರಸ್ತಾವನೆ ಬಂದಲ್ಲಿ ಮರು ತೆರೆದು ಮಂಡಿಸಿರಿ. ಸದ್ಯಕ್ಕೆ ಮುಕ್ತಾಯಗೊಳಿಸಲು ಅನುಮತಿಸಿದೆ ಎಂದು ಶಾಖಾಧಿಕಾರಿ ಮಹಾಲಕ್ಷ್ಮಿ ಅವರು ಕಡತದ ಟಿಪ್ಪಣಿ ಹಾಳೆಯಲ್ಲಿ ಷರಾ ಬರೆದಿರುವುದು ಗೊತ್ತಾಗಿದೆ.

 

ಕೊನೆಯದಾಗಿ ತನಿಖೆಯನ್ನು ಸಿಬಿಐ ಸಂಸ್ಥೆಯೇ ಕೈಗೊಂಡಿದ್ದರಿಂದ ಮರು ತನಿಖೆಯ ಅಭಿಪ್ರಾಯವನ್ನು ಸಿಬಿಐನಿಂದಲೇ ಪಡೆಯಬೇಕು ಎಂದು ಪೊಲೀಸ್‌ ಮಹಾನಿರ್ದೇಶಕರಾಗಿದ್ದ ಡಾ ಎಂ ಎ ಸಲೀಂ ಅವರು ರಾಜ್ಯ ಡಿಜಿಐಜಿಪಿ ಅವರಿಗೆ 2 ವರ್ಷದ ಹಿಂದೆಯೇ ಅಭಿಪ್ರಾಯದ ವರದಿ ಸಲ್ಲಿಸಿದ್ದರು.

 

ಸೌಜನ್ಯ ಕೊಲೆ ಮರು ತನಿಖೆ; ಸಿಐಡಿ ಡಿಜಿಪಿ ಸಲೀಂ ಅವರ ಅಭಿಪ್ರಾಯ ವರದಿ ಬಹಿರಂಗ

 

ಇದೇ ಪ್ರಕರಣಕ್ಕೆ   ಸಂಬಂಧಿಸಿದಂತೆ ಡಾ ಆದಂ ಉಸ್ಮಾನ್‌ ಮತ್ತು ಡಾ ಎನ್‌ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಬೇಕು ಎಂದು  ಸಿಬಿಐ ಸಂಸ್ಥೆಯು 2017ರಲ್ಲೇ  ಶಿಫಾರಸ್ಸು ಮಾಡಿತ್ತು.

 

ಸೌಜನ್ಯ ಕೊಲೆ; ಆದಂ ಉಸ್ಮಾನ್‌, ಡಾ ಎನ್‌ ರಶ್ಮಿ ವಿರುದ್ಧ ಕಠಿಣ ದಂಡನೆ, ಸಿಬಿಐ ಶಿಫಾರಸ್ಸು ಪತ್ರ ಮುಚ್ಚಿಟ್ಟಿದೆಯೇ?

 

ಶಾಸಕರಿಬ್ಬರ ಕೋರಿಕೆ ಸಂಬಂಧ ಒಳಾಡಳಿತ ಇಲಾಖೆಯಲ್ಲಿ ತೆರೆದಿದ್ದ ಕಡತವು ಕಳೆದ 18 ತಿಂಗಳಿನಿಂದಲೂ  ತೆವಳಿತ್ತು.   2023ರಲ್ಲಿ ತೆರೆದಿದ್ದ ಕಡತವನ್ನು 2025ರ ಜನವರಿಯಲ್ಲಿ ಮುಕ್ತಾಯಗೊಳಿಸಿತ್ತು.

 

ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ; 18 ತಿಂಗಳಿನಿಂದಲೂ ತೆವಳಿದ ಕಡತ, ಹೊರಬೀಳದ ತೀರ್ಮಾನ

 

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್‌ಸಿಂಹ್‌ ನಾಯಕ್‌ ಅವರು ಈ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮರು ತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಲು ಹೈಕೋರ್ಟ್‌ ಕೂಡ  ನಿರಾಕರಿಸಿತ್ತು.

ಹೀಗಾಗಿ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಸರ್ಕಾರದ ಮೇಲೆ ಸಾರ್ವಜನಿಕ  ಒತ್ತಡ ಹೆಚ್ಚಿದ್ದ ಸಂದರ್ಭದಲ್ಲೇ  ಈ ಕುರಿತು ತೀರ್ಮಾನ ಕೈಗೊಳ್ಳಲು  ಗೃಹ ಇಲಾಖೆಯು ಕಾನೂನು ಇಲಾಖೆಯ ಮೊರೆ ಹೊಕ್ಕಿತ್ತು.

 

ಸೌಜನ್ಯ ಪ್ರಕರಣ ಮರು ತನಿಖೆಗೆ ಹೆಚ್ಚಿದ ಒತ್ತಡ; ಕಾನೂನು ಅಭಿಪ್ರಾಯ ಪಡೆಯಲು ಮುಂದಾದ ಗೃಹ ಇಲಾಖೆ

 

‘ ನಾಗರಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಕು.ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಸೌಜನ್ಯಗಳಿಗೆ ಮತ್ತು ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕೋರಿರುವುದರಿಂದ ಆಡಳಿತ ಇಲಾಖೆಯವರು ಈ ಕುರಿತ ಸಿಬಿಐನಲ್ಲಿ ಮುಕ್ತಾಯಗೊಂಡಿರುವ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಅವಕಾಶವಿದೆಯೇ ಎಂಬ ಬಗ್ಗೆ ಅಭಿಪ್ರಾಯ ಕೋರಿ ಕಡತವನ್ನು ಸಲ್ಲಿಸಲಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವ ಸಲುವಾಗಿ ಪ್ರಕರಣದಲ್ಲಿ ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರತಿ ಮತ್ತು ಬೆಂಗಳೂರಿನಲ್ಲಿರುವ ಹೆಚ್ಚುವರಿ ಸಿಟಿ ಸಿವಿಲ್‌ ಸೆಷನ್ಸ್‌ ನ್ಯಾಯಾಲಯ (children’s court (special bengaluru (cch-51)ದಲ್ಲಿ ದಾಖಲಾಗಿರುವ ಪ್ರಕರಣ (Spl. CC NO 203/2016)ದಲ್ಲಿ 2021ರ ಅಕ್ಟೊಬರ್‍‌ 4ರಂದು ನೀಡಿರುವ ಆದೇಶದ ಪ್ರತಿಗಳನ್ನು ಪರಿಶೀಲಿಸುವುದು ಅವಶ್ಯಕವಾಗಿದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು.

 

ಈ ಪ್ರಕರಣದ ಕುರಿತು ಅಭಿಪ್ರಾಯ ನೀಡಲು ದಾಖಲೆಗಳನ್ನು ಒದಗಿಸಬೇಕು ಎಂದು ಗೃಹ ಇಲಾಖೆಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಪತ್ರ ಬರೆದಿದೆ. ಪ್ರಕರಣದಲ್ಲಿ ಕಾನೂನು ಇಲಾಖೆ ಅಭಿಪ್ರಾಯ ಕೋರುವ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಮತ್ತು ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌ ಚರ್ಚಿಸಿದ್ದರು.

 

 

ಮೃತ ವಿದ್ಯಾರ್ಥಿನಿ ತಂದೆ ಚಂದ್ರಪ್ಪಗೌಡ 2018ರಲ್ಲಿ ಪ್ರಕರಣದ ಮರು ತನಿಖೆಗೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಈಗಾಗಲೇ ವಜಾಗೊಳಿಸಿದೆ. ಪ್ರಕರಣವನ್ನು ಮೊದಲಿಗೆ ಸಿಐಡಿ, ಆನಂತರ ಸಿಬಿಐ ತನಿಖೆ ನಡೆಸಿತ್ತು.

 

ಪ್ರಕರಣದಲ್ಲಿಸಾಕ್ಷಿಗಳಾಗಿರುವ ಧೀರಜ್‌ ಜೈನ್‌, ಮಲ್ಲಿಕ್‌ ಜೈನ್‌ ಮತ್ತು ಉದಯ್‌ ಜೈನ್‌ ವಿರುದ್ಧ ಸಂಶಯ ವ್ಯಕ್ತಪಡಿಸಿ ಅರ್ಜಿದಾರರು ಮರು ತನಿಖೆಗೆ ಆದೇಶಿಸಲು ಕೋರಿದ್ದರು. ಆ ಶಂಕೆಯನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಧಾರ ಒದಗಿಸಿಲ್ಲ. ಸಿಬಿಐ ಸರಿಯಾಗಿಯೇ ತನಿಖೆಗೆ ನಡೆಸಿದ್ದು, ಮತ್ತೆ ತನಿಖೆ ನಡೆಸುವ ಅಗತ್ಯವಿಲ್ಲವೆಂದು ನ್ಯಾಯಪೀಠ ಆದೇಶಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts