ರಾಜಕಾರಣಿಗಳು, ಅಧಿಕಾರಿಗಳ ಸ್ವಾರ್ಥಕ್ಕೆ ಟೆಂಡರ್‍‌ಗಳಲ್ಲಿ ಅಕ್ರಮ; ಗಂಭೀರ ಸ್ವರೂಪದ ಉಲ್ಲಂಘನೆಗಳು ಪತ್ತೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೆದಿದ್ದ ಬಹುತೇಕ ಟೆಂಡರ್‍‌ಗಳ ಪ್ರಕ್ರಿಯೆಗಳು ಅಸಮಪರ್ಕವಾಗಿದ್ದವು.  ಟೆಂಡರ್‍‌ ನಿಯಮಾವಳಿಗಳನ್ನೇ ಉಲ್ಲಂಘಿಸಿರುವುದು  ಗಂಭೀರ ಸ್ವರೂಪವಾಗಿವೆ. ಅಲ್ಲದೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಟೆಂಡರ್‍‌ ನೀಡುವಾಗಲೇ ಅಕ್ರಮ ನಡೆದಿರುವುದನ್ನು ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನ್‌ ದಾಸ್‌ ನೇತೃತ್ವದ ವಿಚಾರಣೆ ಆಯೋಗವು ಪತ್ತೆ ಹಚ್ಚಿದೆ.

 

ಈ ಕುರಿತು ಸರ್ಕಾರಕ್ಕೆ ಈಚೆಗೆ  ತನಿಖಾ ವರದಿಯನ್ನು ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಟೆಂಡರ್‍‌ ಪ್ರಕ್ರಿಯೆಗಳಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ವಿಚಾರಣೆ ಆಯೋಗಕ್ಕೆ ದಾಖಲೆಗಳ ಸಮೇತ ದೂರು ಸಲ್ಲಿಸಿತ್ತು. ಈ ಪೈಕಿ ಟೆಂಡರ್‍‌ ಕರೆದಿದ್ದ 361 ಕಾಮಗಾರಿಗಳ ಕುರಿತು ಸಮರ್ಪಕವಾಗಿ ತನಿಖೆ ಕೈಗೊಳ್ಳಲು ಅಧಿಕಾರಿಗಳಿಂದ ಮಾಹಿತಿ ಸ್ವೀಕರಿಸಿತ್ತು. ತನಿಖೆ  ಮಾಡಿದ್ದ 361 ಸಂಖ್ಯೆಯ ಕಾಮಗಾರಿಗಳ ಟೆಂಡರ್‍‌ನಲ್ಲಿ 159 ಕಾಮಗಾರಿಗಳ ಟೆಂಡರ್‍‌ ಪ್ರಕ್ರಿಯೆಯಲ್ಲಿ ಹಲವು ನ್ಯೂನತೆಗಳನ್ನು ಪತ್ತೆ ಹಚ್ಚಿದೆ.

 

ರಾಷ್ಟ್ರೀಕೃತ ಬ್ಯಾಂಕ್‌ನಿಂದ ಲೈನ್‌ ಆಫ್‌ ಕ್ರೆಡಿಟ್‌ನ್ನು ಸಲ್ಲಿಸದ ಕಾರಣವನ್ನು ಮುಂದೊಡ್ಡಿ ಟೆಂಡರ್‍‌ಗಳನ್ನು ತಿರಸ್ಕರಿಸಿರುವುದು ಸಮರ್ಪಕವಾಗಿಲ್ಲದಿರುವುದು, ವರ್ಕ್ ಡನ್‌, ಟರ್ನ್ ಓವರ್‍‌ ಸರ್ಟಿಫಿಕೇಟ್‌, ಸಿಮಿಲರ್‍‌ ವರ್ಕ್‌ ಡನ್‌ ಸರ್ಟಿಫಿಕೇಟ್‌ ಸಲ್ಲಿಸದ ಕಾರಣ ಟೆಂಡರ್‍‌ ತಿರಸ್ಕರಿಸಿರುವುದು, ಮತ್ತು ಇತರೆ ಪ್ರಮುಖ ಅಂಶಗಳಿಂದ ಟೆಂಡರ್‍‌ ತಿರಸ್ಕರಿಸಿರುವ ಕಾರಣಗಳು ಅಸಮರ್ಪಕವಾಗಿದ್ದವು ಎಂಬ ಸಂಗತಿಯನ್ನು ವಿಚಾರಣೆ ಆಯೋಗವು ತನಿಖೆಯಿಂದ ದೃಢಪಡಿಸಿರುವುದು ವರದಿಯಿಂದ ಗೊತ್ತಾಗಿದೆ.

 

ರಾಷ್ಟ್ರೀಕೃತ ಬ್ಯಾಂಕ್‌ನಿಂದ ಲೈನ್‌ ಆಫ್‌ ಕ್ರೆಡಿಟ್‌ನ್ನು ಸಲ್ಲಿಸದ ಕಾರಣ ನೀಡಿ ಟೆಂಡರ್‍‌ ತಿರಸ್ಕರಿಸಿದ್ದು ಅಸಮರ್ಪಕವಾಗಿದ್ದವು. ಈ ಪೈಕಿ 121 ನ್ಯೂನತೆಗಳನ್ನು (ಶೇ.34)  ಆಯೋಗವು ಪತ್ತೆ ಹಚ್ಚಿತ್ತು. ವರ್ಕ್‌ ಡನ್‌ ಸರ್ಟಿಫಿಕೇಟ್‌ ಸಲ್ಲಿಸದ ಕಾರಣಕ್ಕೆ ಟೆಂಡರ್‍‌ಗಳನ್ನು ತಿರಸ್ಕರಿಸಿದ ಪ್ರಕರಣಗಳಲ್ಲಿ 107 ನ್ಯೂನತೆಗಳನ್ನು (ಶೇ.30), ಟರ್ನ್ ಓವರ್‍‌ ಸರ್ಟಿಫಿಕೇಟ್‌ ಸಲ್ಲಿಸದ ಕಾರಣಕ್ಕೆ ತಿರಸ್ಕರಿಸಿದ್ದ ಟೆಂಡರ್‍‌ಗಳಲ್ಲಿ 83 (ಶೇ.23), ಸಿಮಿಲರ್ ವರ್ಕ್‌ ಡನ್‌ ಸರ್ಟಿಫಿಕೇಟ್‌ನ್ನು ಸಲ್ಲಿಸದ ಕಾರಣಕ್ಕೆ ಟೆಂಡರ್‍‌ ತಿರಸ್ಕರಿಸಿದ್ದ ಪ್ರಕರಣಗಳಲ್ಲಿ 103 (ಶೇ.28) ನ್ಯೂನತೆಗಳನ್ನು ವಿಚಾರಣೆ ಆಯೋಗವು ಬೆಳಕಿಗೆ ತಂದಿತ್ತು.

 

ಆಯೋಗದ ಶಿಫಾರಸ್ಸೇನು?

 

361 ಸಂಖ್ಯೆಯ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು 159 ಸಂಖ್ಯೆಯ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ಸಮರ್ಪಕವಾಗಿ ನಿರ್ವಹಿಸಿರಲಿಲ್ಲ. ಈ ಪರಿಮಾಣವು ಶೇ. 44ರಷ್ಟಿತ್ತು. ಇದು ಬಹಳ ಗಂಭೀರ ಸ್ವರೂಪದ್ದಾಗಿದೆ. ಟೆಂಡರ್‍‌ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆಯೋಗವು ವರದಿಯಲ್ಲಿ ವಿವರಿಸಿದೆ.

 

‘ಈ ಉಲ್ಲಂಘನೆಗೆ ತಮ್ಮಗಳ ಸ್ವಾರ್ಥಕ್ಕಾಗಿ ಕೆಲವು ರಾಜಕಾರಣಿಗಳು, ಸಂಬಂಧಪಟ್ಟ ಅಧಿಕಾರಿಗಳು, ಕೆಲವು ಅಧಿಕಾರಿಗಳು ಮತ್ತು ಟೆಂಡರ್‍‌ಗೆ ಅವಶ್ಯವಿರುವ ದಾಖಲೆಗಳನ್ನು ನೀಡುವ ಸಂಸ್ಥೆ ಮತ್ತು ಅಧಿಕಾರಿಗಳು ಕಾರಣಕರ್ತರಾಗಿರುತ್ತಾರೆ,’ ಎಂದು ಆಯೋಗವು ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

 

ಗುತ್ತಿಗೆದಾರರು ಟೆಂಡರ್‍‌ನಲ್ಲಿರುವ ನಿಯಮಕ್ಕೆ ಅನುಗುಣವಾಗಿರುವ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಲೈನ್‌ ಆಫ್‌ ಕ್ರೆಡಿಟ್‌, ವರ್ಕ್ ಡನ್‌ ಸರ್ಟಿಫಿಕೇಟ್‌, ಸಿಮಿಲರ್‍‌ ವರ್ಕ್‌ ಡನ್‌ ಸರ್ಟಿಫಿಕೇಟ್‌ ಮತ್ತು ಇತರೆ ಸರ್ಟಿಫಿಕೇಟ್‌ಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಮತ್ತು ಬ್ಯಾಂಕ್‌ನಿಂದ ದೃಢೀಕರಣಕ್ಕೆ ಸಂಬಂಧಿಸಿದಂತೆ ಆಯೋಗವು ತನಿಖೆ ನಡೆಸಿದೆ. ನಿಗದಿತ ವೇಳೆಯಲ್ಲಿ ದೃಢೀಕರಣ ಬಾರದಿರುವ ಕಾರಣದ ಮೇಲೆ ಟೆಂಡರ್‍‌ಗಳನ್ನು ತಿರಸ್ಕರಿಸದೇ ಈ ದಾಖಲೆಗಳನ್ನು ಅರ್ಹವೆಂದು ಭಾವಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು ಎಂಬುದನ್ನು ಪತ್ತೆ ಹಚ್ಚಿದೆ.

 

ಈ ಎಲ್ಲಾ ದಾಖಲೆಗಳ ಮೇಲೆ ಯಾವುದಾದರೂ ದೂರುಗಳು ಬಂಧಲ್ಲಿ ಅವುಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ಪರಿಶೀಲನೆ ನಂತರ ಸಲ್ಲಿಸಿರುವ ದಾಖಲೆಗಳು ತಪ್ಪಾಗಿರುವೆಂದು ದೃಢೀಕರಣಗೊಂಡಲ್ಲಿ ಅಂತಹ ದೃಢೀಕರಣ ಪತ್ರವನ್ನು ಟೆಂಡರ್‍‌ ವೇಳೆಯಲ್ಲಿ ನೀಡಿದ ಅಧಿಕಾರಿಗಳು ಮತ್ತು ಬ್ಯಾಂಕ್‌ನವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದೆ.

 

‘ಎಲ್ಲಾ ಕಾರಣಗಳಿಂದಲೂ ಸಮರ್ಪಕವಾಗಿರುವ ಹಾಗೂ ಎಲ್ಲಾ ದಾಖಲಾತಿ ಸಲ್ಲಿಸಿರುವ ಗುತ್ತಿಗೆದಾರರ ಟೆಂಡರ್‍‌ನ್ನು ಯಾವುದೋ ಒಂದು ಅಂಶವನ್ನು ನ್ಯೂನತೆ ಎಂದು ಪರಿಗಣಿಸಿ ತಿರಸ್ಕರಿಸದೇ ಎಲ್ಲಾ ದಾಖಲೆಗಳನ್ನೂ ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು,’ ಎಂದು ಆಯೋಗವು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

 

 

ಅದೇ ರೀತಿ ಟೆಂಡರ್‍‌ನಲ್ಲಿ ಭಾಗವಹಿಸುವ ಗುತ್ತಿಗೆದಾರರು ಟೆಂಡರ್ ಕರೆದ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಯ ಅಭಿಯಂತರರಿಂದ ದೃಢೀಕರಣ ಪತ್ರವನ್ನು ಪಡೆಯಬೇಕು ಎಂಬ ಷರತ್ತನ್ನು ಟೆಂಡರ್‍‌ ನಿಯಮಾವಳಿಯಲ್ಲಿ ಅಳವಡಿಸಬಾರದು ಎಂದೂ  ಸಲಹೆ ನೀಡಿದೆ.

 

ಲೋಕೋಪಯೋಗಿ ಇಲಾಖೆ ಸೇರಿದಂತೆ ಒಟ್ಟು 5 ಇಲಾಖೆಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೆದಿದ್ದ ಒಟ್ಟಾರೆ 3 ಲಕ್ಷ 48 ಸಾವಿರ  ಕೋಟಿ ರು ಮೌಲ್ಯದ  ಟೆಂಡರ್‍‌ಗಳನ್ನು ಇ-ಪ್ರೊಕ್ಯೂರ್‍‌ಮೆಂಟ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿರಲಿಲ್ಲ ಎಂಬುದನ್ನು ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನ್‌ ದಾಸ್‌ ಅವರ ನೇತೃತ್ವದ ವಿಚಾರಣೆ ಆಯೋಗವು ತನಿಖೆಯಲ್ಲಿ ಪತ್ತೆ ಹಚ್ಚಿತ್ತು.

 

ಆಡಳಿತಾತ್ಮಕ ಅನುಮೋದನೆ ಪಡೆಯದ, ಸರ್ಕಾರದ ಅನುಮೋದನೆಗೂ ಮೊದಲೇ ತಯಾರಿಸಿದ್ದ ಅಂದಾಜು ಪಟ್ಟಿ, ಕೃತಕವಾಗಿ ಪರಿಮಾಣವನ್ನು ಹೆಚ್ಚಿಸಿರುವುದು, ಟೆಂಡರ್ ಪ್ರಕ್ರಿಯೆಯನ್ನು ಪಾಲಿಸದೇ ನಡೆಸಿರುವ ಕಾಮಗಾರಿಗಳು, ಗುಣಮಟ್ಟ ಕಾಯ್ದುಕೊಳ್ಳದೇ ಇರುವ ಕಾಮಗಾರಿ ಅನುಷ್ಠಾನಗೊಳಿಸಿರುವುದು, ಕಾಮಗಾರಿ ನಿರ್ವಹಿಸದೇ ಇದ್ದರೂ ಬಿಲ್‌ ಪಾವತಿಸಿರುವುದು ಸೇರಿದಂತೆ ಹಲವು ಅಕ್ರಮಗಳು, ನಿಯಮಬಾಹಿರ ಚಟುವಟಿಕೆಗಳು, ಅಧಿಕಾರ ದುರುಪಯೋಗದ ಹಲವು ಮುಖಗಳನ್ನು ವಿಚಾರಣೆ ಆಯೋಗವು ವರದಿಯಲ್ಲಿ ತೆರೆದಿಟ್ಟಿತ್ತು.

‘ಅನುಮೋದನೆಯಿಲ್ಲ, ಟೆಂಡರ್ ಪ್ರಕ್ರಿಯೆಯಿಲ್ಲ, ದಂಡವಿಲ್ಲ, ಗುಣಮಟ್ಟವೂ ಇಲ್ಲ’; ನ್ಯೂನತೆಗಳ ಸ್ವರ್ಗಸೀಮೆ ಅನಾವರಣ

 

 

2019ರ ಜುಲೈನಿಂದ 2023ರ ಮಾರ್ಚ್‌ ಅವಧಿಯಲ್ಲಿ ಈ ಐದು ಇಲಾಖೆಗಳಲ್ಲಿ 4.70 ಲಕ್ಷ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ 3.32 ಲಕ್ಷ ಕಾಮಗಾರಿಗಳು ಶೇ. 70ರಷ್ಟು ಪೂರ್ಣಗೊಂಡಿವೆ. ಆಯೋಗಕ್ಕೆ ನೀಡಿದ್ದ ಸೀಮಿತ ಗಡುವು ಮತ್ತು ಒದಗಿಸಿದ್ದ ಸೀಮಿತ ಸಂಪನ್ಮೂಲಗಳ ಹಿನ್ನೆಲೆಯಲ್ಲಿ 3.32 ಲಕ್ಷ ಅಗಾಧ ಸಂಖ್ಯೆಯ ಕಾಮಗಾರಿಗಳನ್ನು ತಪಾಸಣೆ ಕೈಗೊಳ್ಳುವುದು ಕಾರ್ಯಸಾಧುವಾಗಿಲ್ಲ ಎಂದು ವಿಚಾರಣೆ ಆಯೋಗವು ವರದಿಯಲ್ಲಿ ಹೇಳಿತ್ತು.

 

ಗುತ್ತಿಗೆದಾರರ ಸಂಘ ಮಾಡಿದ್ದ 40 ಪರ್ಸೆಂಟ್ ಲಂಚದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ಸಹ ಶೇ.40ರಷ್ಟು ಕಮಿಷನ್‌ ಬಗ್ಗೆ ಪ್ರಸ್ತಾಪವೇ ಇಲ್ಲ. ಹಾಗೂ ಈ ದಾಖಲೆಗಳು ಯಾವ ಸಂದರ್ಭದಲ್ಲೂ ಕಮಿಷನ್‌ ಆರೋಪವನ್ನು ಸಾಬೀತುಪಡಿಸಲು ಪೂರಕವಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನ್‌ ದಾಸ್‌ ವಿಚಾರಣೆ ಆಯೋಗವು ಅಭಿಪ್ರಾಯಪಟ್ಟಿತ್ತು.

 

40 ಪರ್ಸೆಂಟ್‌ ಕಮಿಷನ್‌; ದೂರಿನಲ್ಲಿ ಪ್ರಸ್ತಾವವೇ ಇಲ್ಲ, ಖಚಿತ ಅಭಿಪ್ರಾಯ ತಳೆಯಲು ಕಷ್ಟಸಾಧ್ಯವೆಂದ ಆಯೋಗ

ತನಿಖೆಯ ಸಾರಾಂಶದಲ್ಲೇನಿದೆ?

 

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ನೀಡಿರುವ ದಾಖಲೆಗಳಲ್ಲಿ ಎಲ್ಲಿಯೂ ಸಹ ಶೇ. 40ರಷ್ಟು ಕಮಿಷನ್ ಬಗ್ಗೆ ಪ್ರಸ್ತಾಪವಿಲ್ಲ. ಹಾಗೂ ಈ ದಾಖಲೆಗಳು ಯಾವ ಸಂದರ್ಭದಲ್ಲೂ ಕಮಿಷನ್‌ ಆರೋಪವನ್ನು ಸಾಬೀತುಪಡಿಸಲು ಪೂರಕವಾಗಿರುವುದಿಲ್ಲ.

 

ಅವಶ್ಯ ದಾಖಲೆ ಹಾಗೂ ಪುರಾವೆಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಅಲ್ಲದೇ ಗುತ್ತಿಗೆದಾರರು ನೀಡುವ ದೂರುಗಳು, ಹೇಳಿಕೆಗಳ ಗೌಪ್ಯತೆ ಕಾಪಾಡಲು ಮತ್ತು ಅವಶ್ಯಕತೆ ಇರುವವರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವ ಬಗ್ಗೆ ಆಶ್ವಾಸನೆ ನೀಡಿದರೂ ಸಹ ಯಾವುದೇ ಸ್ಪಷ್ಟೀಕರಣ ಸಲ್ಲಿಕೆಯಾಗಿರುವುದಿಲ್ಲ. ಆದ್ದರಿಂದ ಈ ಆರೋಪದ ಬಗ್ಗೆ ಖಚಿತ ಅಭಿಪ್ರಾಯ ತಳೆಯುವುದು ಆಯೋಗಕ್ಕೆ ಕಷ್ಟಸಾಧ್ಯವಾಗಿದೆ ಎಂದು ಅಭಿಪ್ರಾಯಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts