ಬೆಂಗಳೂರು; ರಾಜ್ಯದ ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧೆಡೆ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಒಟ್ಟಾರೆ 31 ಜಿಲ್ಲೆಗಳಲ್ಲಿನ 12,671 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಇದೆ. ಹಾಸನ ಜಿಲ್ಲೆಯೊಂದರಲ್ಲೇ 2,674 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಇದೆ. ಜಿಲ್ಲಾವಾರು ಪಟ್ಟಿಯಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಇರುವ ಕೆರೆಗಳ ಪಟ್ಟಿಯಲ್ಲಿ ಹಾಸನ ಜಿಲ್ಲೆ ಅಗ್ರ ಸ್ಥಾನ ಪಡೆದುಕೊಂಡಿದೆ.
ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಕೆರೆಗಳಲ್ಲಿ ನೀರು ತುಂಬಿಸುವುದು ಮತ್ತು ಜೀರ್ಣೋದ್ಧಾರ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಸರ್ಕಾರದಿಂದ ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಅನುದಾನ ಒದಗಿಸಿದಲ್ಲಿ ಮಾತ್ರ ಕೆರೆಗಳ ಪುನಶ್ಚೇತನ ಮಾಡಬಹುದು ಎಂದು ವಿವರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 2025ರ ಏಪ್ರಿಲ್ 22ರಂದು ಕೆರೆಗಳಲ್ಲಿನ ನೀರಿನ ಪ್ರಮಾಣ ಕುರಿತು ನಡೆಯಲಿರುವ ಸಭೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಈ ಮಾಹಿತಿ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಪೂರ್ವಭಾವಿ ಸಭೆಗಳು ನಡೆದಿವೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕಳೆದ ವರ್ಷ ಅಂದರೆ 2024 ಮೇ ಆರಂಭದಲ್ಲಿಯೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. 2024ರ ಮೇ ತಿಂಗಳಲ್ಲಿ 16,625 ಕೆರೆಗಳಲ್ಲಿ ಶೇ.30ಕ್ಕಿಂತಲೂ ಕಡಿಮೆ ಪ್ರಮಾಣದ ನೀರಿತ್ತು.
ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ 2,805 ಕೆರೆಗಳಲ್ಲಿ ಎಷ್ಟು ಕೆರೆಗಳಲ್ಲಿ ನೀರು ಇದೆ, ಶೇ.30ಕ್ಕಿಂತ ಕಡಿಮೆ ನೀರಿದೆ ಎಂಬ ವಿವರವನ್ನು ಮೈಸೂರು ಜಿಲ್ಲಾ ಪಂಚಾಯ್ತಿಯು ಇಲಾಖೆಗೆ ಒದಗಿಸಿಲ್ಲ. ಅದೇ ರೀತಿ ರಾಯಚೂರು ಜಿಲ್ಲೆಯ 221 ಕೆರೆಗಳಲ್ಲಿ, ಚಾಮರಾಜನಗರ ಜಿಲ್ಲೆಯಲ್ಲಿ 1,715 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರಿರುವ ಕೆರೆಗಳ ಸಂಖ್ಯೆ ಎಷ್ಟಿವೆ ಎಂಬ ಬಗ್ಗೆಯೂ ವಿವರಗಳನ್ನು ಇದುವರೆಗೂ ಒದಗಿಸಿಲ್ಲ ಎಂದು ತಿಳಿದು ಬಂದಿದೆ.
ಬಾಗಲಕೋಟೆ ಸೇರಿದಂತೆ ರಾಜ್ಯದ 31 ಜಿಲ್ಲೆಗಳಲ್ಲಿ 32,648 ಕೆರೆಗಳಿವೆ. ಈ ಪೈಕಿ 16,185 ಕೆರೆಗಳಲ್ಲಿ ಹೂಳು ತುಂಬಿದೆ. ಕಳೆ, ಜೊಂಡು ತುಂಬಿರುವ ಕೆರೆಗಳ ಸಂಖ್ಯೆ ರಾಜ್ಯದಲ್ಲಿ 11,771ರಷ್ಟಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ 160 ಕೆರೆಗಳಲ್ಲಿ 84 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರಿದೆ. 160 ಕೆರೆಗಳಲ್ಲಿ 44 ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದರೇ 62 ಕೆರೆಗಳಲ್ಲಿ ಕಳೆ, ಜೊಂಡು ಬೆಳೆದು ನಿಂತಿದೆ. ಬಳ್ಳಾರಿಯಲ್ಲಿನ 21 ಕೆರೆಗಳಲ್ಲಿ ನೀರಿದೆ. ಆದರೆ 21 ಕೆರೆಗಳಲ್ಲಿ ಹೂಳು ತುಂಬಿದ್ದರೇ 5 ಕೆರೆಗಳಲ್ಲಿ ಕಳೆ, ಜೊಂಡು ಬೆಳೆದಿದೆ.
ಶೇ.30ಕ್ಕಿಂತ ಕಡಿಮೆ ನೀರು ಇರುವ ಕೆರೆಗಳ ಜಿಲ್ಲಾವಾರು ಪಟ್ಟಿ
ಬೆಳಗಾವಿಯಲ್ಲಿ 57, ಬೆಂಗಳೂರು ನಗರ ಜಿಲ್ಲೆಯಲ್ಲಿ 287, ಬೆಂಗಳೂರು ಗ್ರಾಮಾಂತರದಲ್ಲಿ 244, ಬೀದರ್‍ನಲ್ಲಿ 160, ಚಿಕ್ಕಬಳ್ಳಾಪುರದಲ್ಲಿ 1,278, ಚಿಕ್ಕಮಗಳೂರು ಜಿಲ್ಲೆಯಲ್ಲಿ 115, ದಕ್ಷಿಣ ಕನ್ನಡದಲ್ಲಿ 130, ದಾವಣಗೆರೆಯಲ್ಲಿ 82, ಧಾರವಾಡದಲ್ಲಿ 388, ಗದಗ್‌ನಲ್ಲಿ 72, ಹಾಸನದಲ್ಲಿ 2,674, ಹಾವೇರಿಯಲ್ಲಿ 586, ಕಲ್ಬುರ್ಗಿಯಲ್ಲಿ 33, ಕೊಡಗಿನಲ್ಲಿ 470, ಕೋಲಾರದಲ್ಲಿ 1,546, ಕೊಪ್ಪಳದಲ್ಲಿ 26, ಮಂಡ್ಯದಲ್ಲಿ 231, ರಾಮನಗರದಲ್ಲಿ 492, ಶಿವಮೊಗ್ಗದಲ್ಲಿ 1,253, ತುಮಕೂರಿನಲ್ಲಿ 725, ಉಡುಪಿಯಲ್ಲಿ 7, ಉತ್ತರ ಕನ್ನಡದಲ್ಲಿ 1,434, ವಿಜಯಪುರದಲ್ಲಿ 47, ವಿಜಯನಗರದಲ್ಲಿ 54, ಯಾದಗಿರಿಯಲ್ಲಿ 83 ಕೆರೆಗಳಲ್ಲಿ ಶೇ.30ಕ್ಕಿಂತಲೂ ಕಡಿಮೆ ನೀರಿದೆ.
ಹಾಗೆಯೇ ಹಾಸನ ಜಿಲ್ಲೆಯಲ್ಲಿನ 6,367 ಕೆರೆಗಳ ಪೈಕಿ 4,048 ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಇದೇ ಹಾಸನ ಜಿಲ್ಲೆಯಲ್ಲಿ 5,411 ಕೆರೆಗಳಲ್ಲಿ ಕಳೆ, ಜೊಂಡು ಬೆಳೆದು ನಿಂತಿದೆ. ಚಿಕ್ಕಬಳ್ಳಾಪುರದಲ್ಲಿ 1,121, ರಾಮನಗರದಲ್ಲಿ 2,096 ಕೆರೆಗಳಲ್ಲಿ ಹೂಳು ತುಂಬಿಕೊಂಡಿರುವುದು ಗೊತ್ತಾಗಿದೆ.
ಬಳ್ಳಾರಿ, ದಾವಣಗೆರೆ, ರಾಮನಗರ, ಉಡುಪಿ ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಿದರೆ ಕೆರೆಗಳ ಪುನಶ್ಚೇತನ ಮಾಡಬಹುದು ಎಂದು ಇಲಾಖೆಯು ವಿವರಿಸಿದೆ. ಅದೇ ರೀತಿ ಕೆಲವು ಜಿಲ್ಲೆಗಳು ನೀಡಿರುವ ಕೆರೆಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಕೋಲಾರ ಜಿಲ್ಲೆಯಲ್ಲಿ ಒಟ್ಟು 1,887 ಕೆರೆಗಳು ಎಂದು ನಮೂದಿಸಿದೆ. ಆದರೆ ಜಿಲ್ಲೆಯ ತಾಲೂಕು ಪಂಚಾಯ್ತಿಗಳ ವರದಿ ಪ್ರಕಾರ 2,176 ಕೆರೆಗಳು ಇವೆ.
ವಿಜಯನಗರ ಜಿಲ್ಲೆಯಲ್ಲಿನ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವ್ಯಾಪ್ತಿಯಲ್ಲಿ 93 ಕೆರೆಗಳು ಬರಲಿವೆ. ಮಳೆ ಪ್ರಮಾಣ ಕಡಿಮೆಯಾಗಿರುವುದು ಮತ್ತು ಬೇಸಿಗೆ ಇರುವ ಕಾರಣ ಕೆರೆಗಳು ಬತ್ತಿ ಹೋಗಿವೆ. ಅನುದಾನ ಒದಗಿಸಿದಲ್ಲಿ ಕೆರೆಗಳ ಹೂಳು ತೆಗೆಯಬಹುದು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಇಲಾಖೆಯು ಹೇಳಿದೆ.
2024ರ ಮೇ ತಿಂಗಳಿನಲ್ಲಿಯೂ ರಾಜ್ಯದ 16,625 ಕೆರೆಗಳಲ್ಲಿ ಶೇಕಡ 30ಕ್ಕಿಂತಲೂ ಕಡಿಮೆ ಪ್ರಮಾಣದ ನೀರಿತ್ತು. ಹೀಗಾಗಿ ನಗರ ಪ್ರದೇಶಗಳನ್ನೂ ಒಳಗೊಂಡಂತೆ ಕೆರೆ ಸುತ್ತಮುತ್ತಲಿನ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗುವ ಪರಿಸ್ಥಿತಿ ತಲೆದೋರಿತ್ತು.
16,625 ಕೆರೆಗಳಲ್ಲಿ ಶೇಕಡ 30ಕ್ಕಿಂತಲೂ ಕಡಿಮೆ ಪ್ರಮಾಣದ ನೀರು; ಜನ, ಜಾನುವಾರುಗಳಿಗೆ ಸಂಕಷ್ಟ
ರಾಜ್ಯದಲ್ಲಿ ಜಿಲ್ಲಾ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 12,657, ಸಣ್ಣ ನೀರಾವರಿ ಇಲಾಖೆಯಲ್ಲಿ 3,252, ಜಲಸಂಪನ್ಮೂಲ ಇಲಾಖೆಯಲ್ಲಿ 85, ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ 248, ಕರ್ನಾಟಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 377, ಕೆಪಿಸಿಎಲ್ ವ್ಯಾಪ್ತಿಯಲ್ಲಿ 6 ಕೆರೆ ಸೇರಿದಂತೆ ಒಟ್ಟಾರೆ 16,625 ಕೆರೆಗಳಿವೆ. ಈ ಕೆರೆಗಳಲ್ಲಿ ಸುಮಾರು ಶೇಕಡಾ 30ಕ್ಕಿಂತಲೂ ಕಡಿಮೆ ಪ್ರಮಾಣದ ನೀರಿತ್ತು.
ಕರ್ನಾಟಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಕೆರೆಗಳ ಪೈಕಿ ಚಿತ್ರದುರ್ಗದಲ್ಲಿ 25, ಕೋಲಾರದಲ್ಲಿ 15, ಶಿವಮೊಗ್ಗದಲ್ಲಿ 75, ತುಮಕೂರಿನಲ್ಲಿ 27, ಉತ್ತರ ಕನ್ನಡದಲ್ಲಿ 28 ಕೆರೆಗಳಿವೆ. ಈ ಕೆರೆಗಳಲ್ಲಿಯೂ ಶೇ.30ಕ್ಕಿಂತಲೂ ಕಡಿಮೆ ನೀರಿತ್ತು.
2023ರ ಡಿಸೆಂಬರ್ ಅಂತ್ಯಕ್ಕೆ ರಾಜ್ಯದ ಸುಮಾರು 1,288ಕ್ಕೂ ಹೆಚ್ಚು ಕೆರೆಗಳಲ್ಲಿ ಶೇ.30ರಷ್ಟು ಮಾತ್ರ ನೀರಿತ್ತು. ಇದರಲ್ಲಿ 425ಕ್ಕೂ ಹೆಚ್ಚು ಕೆರೆಗಳಲ್ಲಿ ಒಂದು ಹನಿಯೂ ನೀರಿರಲಿಲ್ಲ. 1033 ಕೆರೆಗಳಲ್ಲಿ ಶೇ.31 ರಿಂದ 50 ರಷ್ಟು ನೀರಿತ್ತು. 760 ಕೆರೆಯಲ್ಲಿ ಶೇ.51 ರಿಂದ 99 ಭಾಗ ನೀರಿತ್ತು.
ತುಮಕೂರು ಜಿಲ್ಲೆಯಲ್ಲಿ 371 ಕೆರೆಗಳಿವೆ. ಇದರಲ್ಲಿ ಡಿಸೆಂಬರ್ ಅಂತ್ಯಕ್ಕೇ 68 ಕೆರೆಯಲ್ಲಿ ನೀರಿರಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 290 ಕೆರೆಗಳ ಪೈಕಿ 113 ಕೆರೆಯಲ್ಲಿ ನೀರಿಲ್ಲದಂತಾಗಿತ್ತು. ವಿಜಯಪುರ, ಬಾಗಲಕೋಟೆ, ಚಾಮರಾಜನಗರ, ಕಲಬುರಗಿ, ಬಳ್ಳಾರಿ, ವಿಜಯನಗರ ಮತ್ತಿತರ ಜಿಲ್ಲೆಗಳಲ್ಲೂ ಇಂತದ್ದೇ ಪರಿಸ್ಥಿತಿ ಇತ್ತು.
ಬೆಂಗಳೂರು ನಗರ ಜಿಲ್ಲೆಯಲ್ಲಿ 149 ಕೆರೆಗಳ ಜೀರ್ಣೋದ್ಧಾರಕ್ಕೆ ಮುಂದಾಗಿರುವ ಸರ್ಕಾರವು ಇದಕ್ಕಾಗಿ 910.70 ಕೋಟಿ ರು ಅಂದಾಜು ವೆಚ್ಚದ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕೆರೆಗಳ ನೀರಿನ ಸಾಮರ್ಥ್ಯ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 656.15 ಕೋಟಿ ರು., ಇತರೆ ಕಾಮಗಾರಿಗಳಿಗೆ 254.56 ಕೋಟಿ ರು ಒದಗಿಸಿತ್ತು.