ಬಹುಕೋಟಿ ಅಕ್ರಮ, ನಿಯಮಗಳ ಉಲ್ಲಂಘನೆ ಆರೋಪ; ರಿಜಿಸ್ಟ್ರಾರ್‌, ಹಣಕಾಸು ಅಧಿಕಾರಿ ನಡುವೆ ಶೀತಲಸಮರ

ಬೆಂಗಳೂರು; ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆದಿದೆ ಎನ್ನಲಾಗಿರುವ ನಿಯಮಬಾಹಿರ ಕ್ರಮಗಳು ಮತ್ತು ಆರ್ಥಿಕ ನಷ್ಟ ಹಾಗೂ ಆರ್ಥಿಕ ಅಶಿಸ್ತುಗಳ ಕುರಿತು ಕುಲಸಚಿವರು ಮತ್ತು ಹಣಕಾಸು ಅಧಿಕಾರಿ ಮಧ್ಯೆ ಜಟಾಪಟಿ ನಡೆಯುತ್ತಿರುವುದು ಇದೀಗ ಬಹಿರಂಗವಾಗಿದೆ.

 

ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹಣಕಾಸು ಅಧಿಕಾರಿಯವರು ನೇರವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರೇ, ಈ ಪತ್ರದಲ್ಲಿನ ದೂರಿನ ಅಂಶಗಳಿಗೆ ಹಣಕಾಸು ಅಧಿಕಾರಿಯೇ ನೇರವಾಗಿ ಕಾರಣ ಎಂದು ಆಡಳಿತ ವಿಭಾಗದ ಕುಲಸಚಿವರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

 

ಅಲ್ಲದೇ ವಿಶ್ವವಿದ್ಯಾಲಯಕ್ಕೆ ಕೋಟ್ಯಂತರ ರುಪಾಯಿ ನಷ್ಟವುಂಟಾಗಿದ್ದರೇ ಅ ನಷ್ಟಕ್ಕೆ ಆರ್ಥಿಕ ಅಧಿಕಾರಿಗಳೇ ನೇರವಾಗಿ ಹೊಣೆಗಾರರಾಗಿದ್ದಾರೆ ಎಂದು ಪ್ರತ್ಯಾರೋಪಿಸಿರುವ ಕುಲಸಚಿವರು, ಆರ್ಥಿಕ ವ್ಯವಹಾರವೆಲ್ಲವೂ ಅವರ ಕೈಯಿಂದಲೇ ನಡೆಯುತ್ತಿದೆ ಹೊರತು ಇನ್ಯಾರೂ ಆರ್ಥಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ ಎಂದು ನೇರವಾಗಿ ಹಣಕಾಸು ಅಧಿಕಾರಿಯತ್ತಲೇ ಬೊಟ್ಟು ಮಾಡಿದ್ದಾರೆ.

 

ಈ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು  ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆದಿದೆ. ಮತ್ತು ಈ ಪ್ರಕರಣದ ಎಲ್ಲಾ ವಿವರಗಳನ್ನು ಸಚಿವ ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆಂದು ಗೊತ್ತಾಗಿದೆ.

 

ಕುಲಪತಿ, ಕುಲಸಚಿವರು ಮತ್ತು ಹಣಕಾಸು ಅಧಿಕಾರಿ ಮಧ್ಯೆ ನಡೆಯುತ್ತಿರುವ ಈ ಶೀತಲ ಸಮರವು ವಿಶ್ವವಿದ್ಯಾಲಯದ ಆಡಳಿತ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

 

ಇದಕ್ಕೆ  ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಪತ್ರಗಳು ಲಭ್ಯವಾಗಿವೆ.

 

ವಿಶ್ವವಿದ್ಯಾಲಯದಲ್ಲಿ ಅನುಸರಿಸಲಾಗುತ್ತಿರುವ ಕೆಲವು ನಿಯಮಬಾಹಿರವಾದ ಕ್ರಮಗಳು ಆರ್ಥಿಕ ನಷ್ಟಕ್ಕೆ ಹಾಗೂ ಆರ್ಥಿಕ ಅಶಿಸ್ತಿಗೆ  ಕಾರಣವಾಗುತ್ತಿದೆ ತಮ್ತು ಪಾರದರ್ಶಕತೆ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹಣಕಾಸು ಅಧಿಕಾರಿಯವರು ಸರ್ಕಾರಕ್ಕೆ ನೇರವಾಗಿ 2023ರ ನವೆಂಬರ್‌ 6ರಂದು ಪತ್ರ ಬರೆದಿದ್ದರು.

 

ಈ ಪತ್ರವನ್ನಾಧರಿಸಿ ವರದಿ ಸಲ್ಲಿಸಬೇಕು ಎಂದು  ವೈದ್ಯಕೀಯ ಶಿಕ್ಷಣ ಇಲಾಖೆಯು 2024ರ ಏಪ್ರಿಲ್‌ 29ರಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದ್ದರು.

 

 

ಈ ನಿರ್ದೇಶನವನ್ನು ಪಾಲಿಸಿರುವ ವಿಶ್ವವಿದ್ಯಾಲಯದ ಕುಲಸಚಿವರು, ಹಣಕಾಸು ಅಧಿಕಾರಿಯು ಮಾಡಿರುವ ಆರೋಪಗಳನ್ನು ಅಲ್ಲಗಳೆದಿರುವುದು ವರದಿಯಿಂದ ಗೊತ್ತಾಗಿದೆ.

 

ಕುಲಸಚಿವರು ನೀಡಿರುವ ವರದಿಯಲ್ಲೇನಿದೆ?

 

ವೈದ್ಯಕೀಯ ವಿಭಾಗದಲ್ಲಿ ಹಲವಾರು ಕೋರ್ಸ್‌ಗಳು ಚಾಲ್ತಿಯಲ್ಲಿರುತ್ತವೆ. ಆದರೆ ಇತ್ತೀಚೆಗಷ್ಟೇ ವೈದ್ಯಕೀಯ ವಿಭಾಗದಲ್ಲಿ  ಜೀವ ರಕ್ಷಾ (ಎಮರ್ಜೆನ್ಸಿ ಕೇರ್‌) ಕಾರ್ಯಕ್ರಮ ಎಂಬ ಹೊಸ ಕೋರ್ಸ್‌ ಪ್ರಾರಂಭವಾಗಿರುತ್ತದೆ. ಆದರೆ ಈ ಹಿಂದೆ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌, ನರ್ಸಿಂಗ್‌ ಮತ್ತು ಅಲೈಡ್‌ ಹೆಲ್ತ್‌ ಸೈನ್ಸ್‌ ಕೋರ್ಸ್‌ಗಳನ್ನು ಪೂರೈಸಿರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಪರಿಣಿತರಿಗೆ ಈ ಕೋರ್ಸ್‌ಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯೇ ಇಲ್ಲದಿರುವುದು ನಿಜವಾದ ಸಂಗತಿ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

2023ರ ನವೆಂಬರ್‌ 6ರಂದು ಈ ಜೀವ ರಕ್ಷಾ ಕಾರ್ಯಕ್ರಮ ಕುರಿತು ಆಕ್ಷೇಪಣೆ ಪತ್ರ ಮತ್ತು ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ಲಿಖಿತ ರೂಪದಲ್ಲಿ ಸಲ್ಲಿಕೆಯಾಗಿದೆ. ಈ ಜೀವ ರಕ್ಷಾ ಕಾರ್ಯಕ್ರಮಕ್ಕೆ ಎಲ್ಲಾ ಹಣವನ್ನು ವಿಶ್ವವಿದ್ಯಾಲಯವೇ ನೀಡುತ್ತಿದೆ. ಇದರಿಂದಾಗಿ ಕೋಟ್ಯಂತರ ರು ವ್ಯಯವಾಗುತ್ತಿದೆ ಎಂಬ ಬಗ್ಗೆ ತಿಳಿಸಿದ್ದರು. ಆದರೆ ಈ ಕಾರ್ಯಕ್ರಮವನ್ನು ನಡೆಸುವ ಸಂಸ್ಥೆಯು ಅದರ ಶುಲ್ಕವನ್ನು ಪಡೆದು ಈ ಶುಲ್ಕದಲ್ಲಿ ವಿಶ್ವವಿದ್ಯಾಲಯಕ್ಕೆ ಶೇ.10ರ ದೃಢೀಕರಣ ಪತ್ರದ ವೆಚ್ಚವನ್ನು ನೀಡುತ್ತಿರುವುದು ತಿಳಿದಿದ್ದರೂ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದೆ ಎಂದು ಹಣಕಾಸು ಅಧಿಕಾರಿಯವರ ದೂರನ್ನು ಕುಲಸಚಿವರು ತಳ್ಳಿ ಹಾಕಿರುವುದು ಗೊತ್ತಾಗಿದೆ.

 

 

ಈ ಸೇವೆಯನ್ನು ಹಿಂದಿನ ಆರ್ಥಿಕ ಅಧಿಕಾರಿಗಳು ಪಠ್ಯಕ್ರಮ ಬೋಧನಾ ವ್ಯವಸ್ಥೆಯನ್ನು ಕೆಟಿಪಿಪಿ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಆದರೆ ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ವಿಶ್ವವಿದ್ಯಾಲಯವು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಒಂದೇ ಇರುವುದೆಂಬ ಕನಿಷ್ಠ ವಿಷಯವನ್ನು ಅರಿಯದೇ ಈ ಕ್ರಮವನ್ನು ಹೊಸ ಪಠ್ಯಕ್ರಮವನ್ನು ಕೆಟಿಪಿಪಿ ಅಡಿಯಲ್ಲಿ ನಿರ್ವಹಿಸಬೇಕು ಎಂಬ ಸುಳ್ಳು ಅಭಿಪ್ರಾಯವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ಹಣಕಾಸು ಅಧಿಕಾರಿಯವರ ವಿರುದ್ಧವೇ ಆರೋಪ ಹೊರಿಸಿರುವುದು ತಿಳಿದು ಬಂದಿದೆ.

 

ವಿಶ್ವವಿದ್ಯಾಲಯದಲ್ಲಿ 476 ಹುದ್ದೆಗಳನ್ನು ಸೃಜನೆ ಮಾಡಿ ಸರ್ಕಾರಿ ಆದೇಶ ಆದೇಶ ಹೊರಡಿಸಲು ಕೋರಿತ್ತು. ಈ ಪ್ರಸ್ತಾವನೆ ಅನುಸರಿಸಿ ಸರ್ಕಾರು 2021ರ ಫೆ.17ರಂದು 336 ಹುದ್ದೆಗಳ ವೃಂದ ಬಲ ಮತ್ತು ವೃಂದ ಮತ್ತು ನೇಮಕಾತಿ ನಿಯಮಗಳ ಆದೇಶವನ್ನು ಹೊರಡಿಸಿತ್ತು. ಅಲ್ಲದೇ ಇದೇ ಆದೇಶದ ಮೂಲಕ ಹಲವಾರು ಹುದ್ದೆಗಳನ್ನು ರದ್ದುಗೊಳಿಸಿತ್ತು. ಇದರಲ್ಲಿ ಎ ಗುಂಪಿನ ಸಹಾಯಕ ಹಣಕಾಸು ಅಧಿಕಾರಿಯ ಹುದ್ದೆಯೂ ಸೇರಿತ್ತು.

 

 

ಈ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಿಕ ಕೆ ಎಸ್‌ ಇವರನ್ನು ವಿಶ್ವವಿದ್ಯಾಲಯದ ಸೇವೆಯಿಂದ ಬಿಡುಗಡೆಗೊಳಿಸಬೇಕಾಗಿತ್ತು. ಈ ಕುರಿತು ಬಿಡುಗಡೆ ಆದೇಶವನ್ನೂ ಸಹ ಹೊರಡಿಸಲಾಗಿತ್ತು. ಆದರೆ ಆರ್ಥಿಕ ಅಧಿಕಾರಿಯಾದ ಮಂಜುನಾಥ ಹೆಗಡೆ ಅವರು ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಸಹಕರಿಸುತ್ತಿಲ್ಲ. ಅಲ್ಲದೇ ಆಡಳಿತ ವಿಭಾಗದ ಕುಲಸಚಿವರ ಗಮನಕ್ಕೂ ತರದೇ ಯಾವುದೇ ಅನುಮತಿಯನ್ನೂ ಪಡೆಯದೇ ನೇರವಾಗಿ ಸರ್ಕಾರಕ್ಕೆ ಅವರನ್ನು ಮುಂದುವರೆಸುವ ಬಗ್ಗೆ ಪತ್ರ ವ್ಯವಹಾರ ಮಾಡಿದ್ದಾರೆ.

 

ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಕುಲಪತಿಯರಿಂದ ಅನುಮತಿ ಪಡೆಯದೇ ಕೆಸಿಎಸ್‌ ನಡತೆ ನಿಯಮಗಳು (1966) ಉಲ್ಲಂಘಿಸಿ ಕುಲಸಚಿವರು ಮತ್ತು ಕುಲಪತಿಗಳ ವಿರುದ್ಧವೆ ಸರ್ಕಾರಕ್ಕೆ ದೂರು ಪತ್ರ ಬರೆದಿದ್ದಾರೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ವಿಶ್ವವಿದ್ಯಾಲಯದಲ್ಲಿ ಯಾವುದೇ ಹುದ್ದೆಯು ರದ್ದಾಗಿದ್ದರೆ ಅಂತಹ ಅಧಿಕಾರಿಯವರನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೇ ನಿರ್ದಿಷ್ಟ ಹಾಗೂ ಸ್ಪಷ್ಟ ಆದೇಶವಿಲ್ಲದೇ ವಿಶ್ವವಿದ್ಯಾಲಯದಲ್ಲಿ ಹಣಕಾಸು ವಿಷಯದ ವ್ಯವಹಾರವನ್ನು ನಿರ್ವಹಣೆ ಮಾಡಿಸಿಕೊಂಡಿರುವುದು ಸಹ ಅರ್ಥಿಕ ಪರಿ ನಿಯಮಗಳ ಉಲ್ಲಂಘನೆಯಾಗಿದೆ. ಇದನ್ನು ಅವರ ಕಡತಗಳಲ್ಲಿ ನಿಖರವಾದ ಅಭಿಪ್ರಾಯವನ್ನು ಕುಲಸಚಿವರು ಹಾಗೂ ಕುಲಪತಿಯವರಿಗೆ ನೀಡಿರುವುದಿಲ್ಲ ಎಂಬ ಮಾಹಿತಿಯನ್ನು ಪ್ರಸ್ತಾವಿಸಲಾಗಿದೆ.

 

ರದ್ದಾದ ಹುದ್ದೆಯಲ್ಲಿ ವೇತನ ನೀಡಿರುವ ವಿಷಯವನ್ನು ಆಕ್ಷೇಪಿಸದೇ ವಿಶ್ವವಿದ್ಯಾಲಯದ ಕೆಲಸ ಕಾರ್ಯಗಳಿಗೆ ಅನುಸಾರವಾಗಿ ಹಾಗೂ ದಿನನಿತ್ಯದ ಕೆಲಸದೊಂದಿಗೆ ವಿವಿಧ ರೀತಿಯ ಕೋರ್ಸ್‌ಗಳ ಸಂಯೋಜನೆ, ಪ್ರವೇಶಾತಿ, ಪಠ್ಯಕ್ರಮ ಪರಿಶೀಲನೆ ಮತ್ತು ಅನುಷ್ಠಾನ, ಪ್ರಾಯೋಗಿಕ, ಲಿಖಿತ ಪರೀಕ್ಷೆಗಳನ್ನು ನಡೆಸಲಾಗಿದೆ.

 

ಅಲ್ಲದೇ ಲಿಖಿತ ಪರೀಕ್ಷೆಗಳ ಮೌಲ್ಯಮಾಪನ, ಫಲಿತಾಂಶ ಇತ್ಯಾದಿ ಕೆಲಸಗಳಿಗೆ ಬೇಕಾಗುವ ವಿವಿಧ ರೀತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕೊರತೆಗಳನ್ನು ನೀಗಿಸಲಾಗುತ್ತಿದೆ.  ಮಂಜೂರಾತಿ ಹುದ್ದೆಗಳ ವೆಚ್ಚದ ಮೊತ್ತಕ್ಕಿಂತ ಕಡಿಮೆ ವೆಚ್ಚದಲ್ಲಿ ಹೊರಗುತ್ತಿಗೆ ಟೆಂಡರ್ ಮುಖಾಂತರ ಅಗತ್ಯ ಸಿಬ್ಬಂದಿಗಳ ಸೇವೆ ಪಡೆಯಲಾಗುತ್ತಿದೆ.

 

ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಆರ್ಥಿಕ ಸಮಿತಿಗಳ ಅಭಿಪ್ರಾಯ ಮತ್ತು ಶಿಫಾರಸ್ಸುಗಳ ಆಧಾರದ ಮೇಲೆ ಹೊರಗುತ್ತಿಗೆ ಸೇವೆ ಪಡೆಯಲಾಗುತ್ತಿದೆ.  ಹಾಗೂ ಆಯ್ದ ವಿಷಯಗಳಲ್ಲಿ ಅಪಾರ ಅನುಭವವುಳ್ಳ ವಿಶ್ವವಿದ್ಯಾಲಯದ ಸೇವೆಗಳಿಗೆ ಅರ್ಹರೆಂದು ಪರಿಗಣಿಸಲಾದ ನಿವೃತ್ತ ನೌಕರರ ಸೇವೆಯನ್ನು ಪಡೆಯುತ್ತಿದೆ. ಆದರೆ  ಇವರ ಪ್ರತಿ ತಿಂಗಳ ವೇತನವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಹಣಕಾಸು ಅಧಿಕಾರಿಯು  ವಿನಾ ಕಾರಣ ಆಕ್ಷೇಪಿಸುತ್ತಿದ್ದಾರೆ ಎಂದು ಕುಲಸಚಿವರು ದೂರಿರುವುದು ವರದಿಯಿಂದ ತಿಳಿದು ಬಂದಿದೆ.

 

ಸರ್ಕಾರದ ಅನುಮತಿ ಹಾಗೂ ಆದೇಶ ರದ್ದಾಗಿರುವ ಹುದ್ದೆಯಡಿಯಲ್ಲಿ ಆರ್ಥಿಕ ಪರಿನಿಯಮಗಳ ಉಲ್ಲಂಘನೆ ಮಾಡಿ ವಿಶ್ವವಿದ್ಯಾಲಯದಿಂದ ಅವರಿಗೆ ವೇತನ ಮತ್ತು ಇತರೆ ಭತ್ಯೆ ಪಾವತಿಗಳನ್ನು ಮಾಡಿರುವುದನ್ನು ಯಾವುದೇ ಕಡತದಲ್ಲಿ ಆಕ್ಷೇಪಿಸಿಲ್ಲ. ಹಾಗೆಯೇ ಪ್ರತಿ ದಿನ ವಿಶ್ವವಿದ್ಯಾಲಯಕ್ಕೆ ಜಮೆಯಾಗುವ ಆದಾಯ ಮತ್ತು ವಿತರಣೆಯಾಗುವ ವೆಚ್ಚದ ವಿವರಗಳು ಆಯಾ ದಿನವೇ ಆರ್ಥಿಕ ಅಧಿಕಾರಿಗಳು ಪರಿಶೀಲನೆ ನಡೆಬೇಕು. ಈ  ಮಾಹಿತಿಯನ್ನು ಕುಲಪತಿ ಮತ್ತು ಕುಲಸಚಿವರಿಗೆ ಆರ್ಥಿಕ ಅಧಿಕಾರಿಯವರೇ ನೀಡಬೇಕು. ಆದರೆ ಇಡೀ ಸೇವಾವಧಿಯಲ್ಲಿ ದಿನನಿತ್ಯದ ವ್ಯವಹಾರದ ಮಾಹಿತಿಯನ್ನು ಕುಲಪತಿಗೆ ನೀಡಿಲ್ಲ ಎಂದು ಲೋಪವಾಗಿರುವುದನ್ನು ವರದಿಯಲ್ಲಿ ಗಮನಸೆಳೆದಿರುವುದು ಗೊತ್ತಾಗಿದೆ.

 

ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಕೆಲ ಕಾಲೇಜುಗಳ ಪ್ರವೇಶಾತಿ ಶುಲ್ಕ ಪಾವತಿಯಲ್ಲಿ ವಂಚನೆ ಆಗಿದೆ ಎಂದು ಹಣಕಾಸು ಅಧಿಕಾರಿಯ ದೂರನ್ನೂ ಸಹ ಕುಲಸಚಿವರು ತಳ್ಳಿ ಹಾಕಿದ್ದಾರೆ. ‘ಆರ್ಥಿಕ ಅಧಿಕಾರಿಗಳು ಸರಿಯಾಗಿ ಕೆಲಸವನ್ನು ನಿರ್ವಹಿಸಿದಲ್ಲಿ ಕಾಲೇಜಿನವರು ಯಾವ ದಿನ ಎಷ್ಟು ಶುಲ್ಕವನ್ನು ಭರಿಸಬೇಕಾಗಿತ್ತು, ಎಷ್ಟು ಶುಲ್ಕವನ್ನು ಯಾವ ದಿನ, ಯಾವ ಚಲನ್‌ ಸಂಖ್ಯೆಯಲ್ಲಿ ಎಷ್ಟು ಪಾವತಿಸಿದ್ದಾರೆ, ಎಷ್ಟು ಬಾಕಿ ಇದೆ ಎಂಬ ಬಗ್ಗೆ ಆರ್ಥಿಕ ಅಧಿಕಾರಿಗಳು ಟಿಪ್ಪಣಿಯನ್ನು ಕುಲಪತಿಗೆ ಸಲ್ಲಿಸಿಲ್ಲ,’ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಬೀದರ್‌ನ ಜ್ಞಾನಸುಧಾ ನರ್ಸಿಂಗ್‌ ಕಾಲೇಜು, ಜ್ಞಾನ ಗಂಗಾ, ಗುಲ್ಬರ್ಗಾದ ಶ್ರೀ ವಿಜಯಕುಮಾರ್ ನರ್ಸಿಂಗ್‌ ಕಾಲೇಜು, ಹಿಂದೂಸ್ತಾನ್‌ ನರ್ಸಿಂಗ್‌ ಕಾಲೇಜುಗಳ ಸಂಯೋಜನೆ ಮತ್ತು ಪ್ರವೇಶಾತಿ ಶುಲ್ಕ ಪಾವತಿಸಿರುವ ಮೊತ್ತದಲ್ಲಿ  ವ್ಯತ್ಯಾಸವಿದೆ.

 

ಆದರೆ ಈ ವ್ಯತ್ಯಾಸದ ವಿವರಗಳನ್ನು ಹಣಕಾಸು ಅಧಿಕಾರಿಗಳು ಕುಲಪತಿಗೆ ವಿವರಗಳನ್ನು ಸಲ್ಲಿಸಿಲ್ಲ. ಈ ನಾಲ್ಕು ಕಾಲೇಜುಗಳ ಸಂಸ್ಥಾಪಕರು ವ್ಯತ್ಯಾಸದ ಮೊತ್ತವನ್ನು ಮರು ಪಾವತಿಸಿದ್ದಾರೆ. ಆದರೂ ಸಹ ಹೆಚ್ಚಿನ ತನಿಖೆಗೆ ಕ್ರಮ ಕೈಗೊಂಡಿದೆ ಎಂದು ಕುಲಸಚಿವರು ವರದಿಯಲ್ಲಿ ಸಮಜಾಯಿಷಿ ನೀಡಿರುವುದು ಗೊತ್ತಾಗಿದೆ.

 

ವಿಶ್ವವಿದ್ಯಾಲಯವು ಪರೀಕ್ಷಾ ಕಾರ್ಯನಿರ್ವಹಣೆ ಕುರಿತು ಎಂಎಸ್‌ಐಎಲ್‌ಗೆ 3.50 ಕೋಟಿ ರು ನೀಡಿತ್ತು. ಈ ಸಂಬಂಧ ಹಣಕಾಸು ಅಧಿಕಾರಿಯವರು ಮಾಡಿರುವ ಆಕ್ಷೇಪಣೆಯು ಸರಿಯಲ್ಲ.

 

 

ವಿಶೇಷವೆಂದರೇ ಈ ಅಧಿಕಾರಿಯು 2021ರಿಂದ 2023ರ ನವೆಂಬರ್‌ 6ರವರೆಗೆ ಕಾರ್ಯನಿರ್ವಹಿಸಿದ್ದರೂ ಸಹ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ವಿಶ್ವವಿದ್ಯಾಲಯವು ಈ ಹಣವನ್ನು ಯಾವುದೇ ರೀತಿಯಲ್ಲಿ ನೀಡಿದ್ದರೂ ಅದನ್ನು ವಾಪಸ್‌ ಪಡೆಯುವ ಕೆಲಸ ಮಾಡಲಿಲ್ಲ ಎಂದು ದೂರಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts