ಕೆರೆ ನಿರ್ಮಾಣಕ್ಕೆ 2.50 ಕೋಟಿ ರುಪಾಯಿಯೂ ಇಲ್ಲ; ಸಣ್ಣ ನೀರಾವರಿ ಇಲಾಖೆ ಬೊಕ್ಕಸ ಖಾಲಿಯಾಗಿದೆಯೇ?

ಬೆಂಗಳೂರು; ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸೌಲಭ್ಯಕ್ಕಾಗಿ ಕೇವಲ 2.50 ಕೋಟಿ ರು ಮೊತ್ತದಲ್ಲಿ ಕೆರೆ ನಿರ್ಮಾಣ ಮಾಡಲು ರಾಜ್ಯ ಬೊಕ್ಕಸದಲ್ಲಿ ಹಣವಿಲ್ಲ!

 

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಂಬಿಕಲ್ಲು ಗ್ರಾಮದಲ್ಲಿ ಹೊಸ ಕೆರೆ/ಇಂಗು ಕೆರೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ವೆಂಕಟೇಶ್‌ ಎಂಬುವರು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ್ದ ಜನಸ್ಪಂದನ ಸಭೆಯಲ್ಲಿ ಕೋರಿದ್ದರು.

 

ಈ ಕೋರಿಕೆ ಕುರಿತು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಸಣ್ಣ ನೀರಾವರಿ ಇಲಾಖೆಯಲ್ಲಿ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕಾಮಗಾರಿಯನ್ನು ಮುಂದೂಡಬೇಕು ಎಂದು ಸಣ್ಣ ನೀರಾವರಿ ಇಲಾಖೆಗೆ ಅಭಿಪ್ರಾಯಿಸಿದ್ದರು.

 

ಈ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದೆ.

 

ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ವೆಂಕಟೇಶ್‌ ಅವರು ಹಳ್ಳಕ್ಕೆ ಹೊಸ ಕೆರೆ, ಇಂಗು ಕೆರೆ ನಿರ್ಮಾಣ ಮಾಡಲು ಮನವಿ ಸಲ್ಲಿಸಿದ್ದರು.

 

 

ಈ ಮನವಿಯನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಚಿವಾಲಯವು ಮನವಿಯ ಔಚಿತ್ಯದ ಬಗ್ಗೆ ಕೋಲಾರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ರಿಂದ ವರದಿಯನ್ನೂ ಪಡೆದಿತ್ತು.

 

ಅಂಬಿಕಲ್ಲು ಗ್ರಾಮದಲ್ಲಿ 2-3 ಕಿ ಮೀ ರಷ್ಟು ದೂರದವರೆಗೂ ಯಾವುದೇ ನೀರಿನ ಸಂಗ್ರಹಣೆ ಮಾಡುವಂತಹ ಕೆರೆ, ಕುಂಟೆಗಳಿಲ್ಲ. ಸುತ್ತಮುತ್ತಲಿನ 3 ಹಳ್ಳಿಗಳ ರೈತರಿಗೆ ವ್ಯವಸಾಯಕ್ಕೆ ಜನ, ಜಾನುವಾರುಗಳ ಮೇವಿಗಾಗಲೀ ಯಾವುದೇ ನೀರಿನ ವ್ಯವಸ್ಥೆಯೂ ಇಲ್ಲ. ಅಂತರ್ಜಲ ಮಟ್ಟವು ತೀವ್ರವಾಗಿ ಕುಸಿದಿತ್ತು. ಕುಡಿಯುವ ನೀರಿಗಾಗಿ ಸರ್ಕಾರವು ಕೊರೆಸಿದ್ದ ಕೊಳವೆ ಬಾವಿ ಕೂಡ ಬತ್ತಿ ಹೋಗಿದೆ. ಇಲ್ಲಿ ಕೇವಲ ಪೋಷಕ ಕಾಲುವೆ ಇದೆ.

 

 

ಈ ಕಾಲುವೆಗೆ ಅಡ್ಡಲಾಗಿ ಇಂಗು ಕೆರೆ ನಿರ್ಮಿಸಿದಲ್ಲಿ ಮುಂಗಾರಿನಲ್ಲಿ ಬರುವ ಮಳೆ ನೀರಿಗೆ ಸುಮಾರು 4-5 ಎಂಸಿಎಫ್‌ಟಿಗಳಷ್ಟು ನೀರನ್ನು ಸಂಗ್ರಹಣೆ ಮಾಡಬಹುದು. ಇದರಿಂದ ಅಂತರ್ಜಲಮಟ್ಟ ಅಭಿವೃದ್ಧಿಯಾಗಿ ಜನ, ಜಾನುವಾರುಗಳಿಗೆ ನೀರು, ಮೇವಿನ ಜತೆಗೆ ಈ ಭಾಗದ ರೈತರ ಜೀವನ ಸುಧಾರಣೆಯಾಗುತ್ತದೆ ಎಂದು ಇಂಜಿನಿಯರ್‌ ವರದಿ ನೀಡಿದ್ದರು.

 

 

ಅಲ್ಲದೇ ಈ ಕಾಮಗಾರಿಗೆ 2.50 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜು ಪತ್ರಿಕೆಯನ್ನೂ ಸಲ್ಲಿಸಿದ್ದರು. ಆದರೆ ಸಣ್ಣ ನೀರಾವರಿ ಇಲಾಖೆಯಲ್ಲಿ ಈ ಕಾಮಗಾರಿ ನಿರ್ವಹಿಸಲು ಸಾಕಷ್ಟು ಅನುದಾನವೇ ಇರಲಿಲ್ಲ.

 

 

‘ಈ ಕಾಮಗಾರಿಯನ್ನು 2024-25ನೇ ಸಾಲಿನಲ್ಲಿ ಈ ಲೆಕ್ಕ ಶೀರ್ಷಿಕೆಯಲ್ಲಿ ಕೈಗೊಳ್ಳಲು ಸಾಕಷ್ಟು ಅನುದಾನ ಇಲ್ಲದೇ ಇರುವುದರಿಂದ ಈ ಕಾಮಗಾರಿಯನ್ನು ಕೈಗೊಳ್ಳಬೇಕಾದಲ್ಲಿ ಹೆಚ್ಚುವರಿಯಾಗಿ ಅನುದಾನ ಒದಗಿಸಬೇಕಾಗುತ್ತದೆ,’ ಎಂದು ಆಡಳಿತ ಇಲಾಖೆಯು ತನ್ನ ಅಭಿಪ್ರಾಯ ನೀಡಿತ್ತು.

 

 

ಸಣ್ಣ ನೀರಾವರಿ ಇಲಾಖೆಯಲ್ಲಿ 2024-25 ನೇ ಸಾಲಿನ ಏಪ್ರಿಲ್‌ 1ರ ಅಂತ್ಯಕ್ಕೆ 10,431.96 ಕೋಟಿ ರು ಮೊತ್ತದ ಕಾಮಗಾರಿಗಳ ಕಾರ್ಯಭಾರವಿದೆ. 2024-25ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ 1,960.61 ಕೋಟಿ ರು ಅನುದಾನ ಒದಗಿಸಿದೆ. ಈ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡ ನಂತರದಲ್ಲಿ 8,471.35 ಕೋಟಿ ರು ಮೊತ್ತದ ಕಾಮಗಾರಿಗಳ ಕಾರ್ಯಭಾರ ಬಾಕಿ ಇರಲಿದೆ ಎಂಬುದು ತಿಳಿದು ಬಂದಿದೆ.

 

 

‘ಈ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಹೊಸ ಕೆರೆಗಳ ನಿರ್ಮಾಣ, ಪ್ರಧಾನ ಕಾಮಗಾರಿಗಳಡಿಯಲ್ಲಿ 2024-25ನೇ ಸಾಲಿನ ಅಯವ್ಯಯದಲ್ಲಿ ಒದಗಿಸಲಾದ ಅನದುಆನವನ್ನು ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಆದ್ಯತೆ ಮೇಲೆ ಒದಗಿಸಬೇಕಾಗಿದೆ. ಹೀಗಾಗಿ ಪ್ರಸ್ತಾಪಿತ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದು ಕಷ್ಟಸಾಧ್ಯ. ಹೆಚ್ಚುವರಿ ಕಾಮಗಾರಿಗಳಿಗೆ ಅವಕಾಶವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಸ್ತಾವನೆಯನ್ನು ಮುಂದೂಡಬೇಕು,’ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಅಲ್ಲದೇ ‘ಸಣ್ಣ ನೀರಾವರಿ ಇಲಾಖೆಯಲ್ಲಿ ಈಗಾಗಲೇ ಅನುಮೋದಿತ ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿರುವುದರಿಂದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲು ಅಥವಾ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಸ್ತಾಪಿತ ಕಾಮಗಾರಿಯನ್ನು ಸದ್ಯಕ್ಕೆ ಮುಂದೂಡಬೇಕು,’ ಎಂದು ಸಣ್ಣ ನೀರಾವರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2024ರ ಜೂನ್‌ 14ರಲ್ಲೇ ತಿಳಿಸಿತ್ತು.

SUPPORT THE FILE

Latest News

Related Posts