ಬದ್ಧತಾ ವೆಚ್ಚ ಪಾಲು, ಸಹಾಯಧನ ಹೆಚ್ಚಳ, ಅಭಿವೃದ್ದಿ ಉದ್ದೇಶದ ಸಂಪನ್ಮೂಲ ಕಡಿತ ಸಾಧ್ಯತೆ; ಆರ್ಥಿಕ ಸಮೀಕ್ಷೆ

ಬೆಂಗಳೂರು;  ಒಟ್ಟು ರಾಜಸ್ವದಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಹಲವು ವ‍ರ್ಷಗಳಿಂದ ಕಡಿಮೆಯಾಗುತ್ತ ಬಂದಿದೆ. ಸದ್ಯ ಶೇ.5.13ರಷ್ಟಿದೆ. ಸೇವೆಗಳಾದ್ಯಂತ ಹೆಚ್ಚುತ್ತಿರುವ ಬಳಕೆದಾರರ ಚೇತರಿಸಿಕೊಳ್ಳದ ಶುಲ್ಕದಲ್ಲಿ ಸಹಾಯಧನ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಇದು ರಾಜ್ಯದ ವಿತ್ತೀಯ ಬಲವರ್ಧನೆಗೆ ಗಂಭೀರ ಸವಾಲಾಗಿದೆ.

 

ಬದ್ಧತಾ ವೆಚ್ಚಗಳ ಪಾಲು  ಹೆಚ್ಚುತ್ತಿದೆ.  ಈ ಪಾಲಿನ ಹೆಚ್ಚಳವು ಅಭಿವೃದ್ಧಿ ಉದ್ದೇಶಕ್ಕಾಗಿ  ಇರುವ ಸಂಪನ್ಮೂಲವು ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು 2024-25ನೇ ಸಾಲಿನ  ಕರ್ನಾಟಕ ಆರ್ಥಿಕ ಸಮೀಕ್ಷೆಯು ಎಚ್ಚರಿಸಿದೆ.

 

ಅದೇ ರೀತಿ  ಅಖಿಲಭಾರತ ಮಟ್ಟದಲ್ಲಿನ ವಿತ್ತೀಯ ಪರಿಸ್ಥಿತಿಗೆ ಒತ್ತಡಕ್ಕೆ ರಾಜ್ಯವೂ ಸಹ ಸಿಲುಕಿದೆ. ಆದರೂ ಕೆಲವು ವಿವೇಕಯುಕ್ತ ವಿತ್ತೀಯ ನಿರ್ವಹಣೆಯೊಂದಿಗೆ ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇ.3.5ರಷ್ಟುನ್ನು ದಾಟಿಲ್ಲ ಎಂದು ರಾಜ್ಯವು ಖಚಿತಪಡಿಸಿಕೊಳ್ಳಬೇಕು. ವೆಚ್ಚಗಳ ಗುಣಮಟ್ಟದ ಮೇಲೆ ಒತ್ತಡವನ್ನು ಉಂಟು ಮಾಡಬಹುದು. ಹೀಗಾಗಿ ವೆಚ್ಚದ ಗುಣಮಟ್ಟವನ್ನು ಖಾತ್ರಿಪಡಿಸುವುದು ರಾಜ್ಯದ ಪಾಲಿಗೆ ಸವಾಲಾಗಿದೆ ಎಂದು ವಿಶ್ಲೇಷಿಸಿದೆ.

 

ಅಲ್ಲದೇ ರಾಜ್ಯವು ರಾಜಸ್ವ ಹೆಚ್ಚಳವನ್ನು ಹೊಂದಿದೆ. ಕೆಲವು ವರ್ಷಗಳಿಂದ ರಾಜ್ಯ ಒಟ್ಟು ಆಂತರಿಕ ಉತ್ಪನ್ನದ ಸುಮಾರು ಶೇ.1ರಷ್ಟು ರಾಜಸ್ವ ಕೊರತೆಯನ್ನು ಹೊಂದಿದೆ. ಇದು ವಿತ್ತೀಯ ಹೊಣೆಗಾರಿಕೆ ಅಧಿನಿಯಮ (ಎಫ್‌ಆರ್‍ಎ) ವಿರುದ್ಧವಾಗಿದೆ. ಹೀಗಾಗಿ ಕೆಲವು ರಾಜಸ್ವ ವೆಚ್ಚಗಳನ್ನು ತರ್ಕಬದ್ಧಗೊಳಿಸುವ ಬಗ್ಗೆ ರಾಜ್ಯವು ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಇದು ಮಧ್ಯಮಾವಧಿಯಲ್ಲಿ ಬಾಕಿ ಉಳಿದಿರುವ ಹೊಣೆಗಾರಿಕೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆಯು ಎಚ್ಚರಿಸಿದೆ.

 

ರಾಜ್ಯವು ಒಟ್ಟು ಆಂತರಿಕ ಉತ್ಪನ್ನವನ್ನು ಸುಧಾರಿಸಲು ರಾಜ್ಯವು ವೆಚ್ಚದ ವಿಚಾರಗಳಲ್ಲಿ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುವುದು ವಿವೇಕಯುತವಾಗಿದೆ. ಸಾರ್ವಜನಿಕ ವೆಚ್ಚಗಳ ಗರಿಷ್ಠ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಸಾರ್ವಜನಿಕ ವೆಚ್ಚದ ದಕ್ಷತೆಯನ್ನು ಹೆಚ್ಚಿಸುವುದರ ಕಡೆಗೆ ಗಮನಹರಿಸಬೇಕು ಎಂದು ಸಲಹೆ ನೀಡಿದೆ.

 

ಸಹಾಯಧನವನ್ನು ಕಡಿಮೆ ಮಾಡುವ ಯಾವುದೇ ಪ್ರಯತ್ನವು ರಾಜ್ಯದಲ್ಲಿ ಸಾಮಾಜಿಕ ವಲಯದ ವೆಚ್ಚವನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ಕರ್ನಾಟಕದಂತಹ ರಾಜ್ಯವು ಒಟ್ಟು ಆಂತರಿಕ ಉತ್ಪನ್ನದಲ್ಲಿ ಸುಮಾರು ಶೇ.1ರಷ್ಟು ಮಾತ್ರ ತೆರಿಗೆಯೇತರ ಆದಾಯವನ್ನು ಹೊಂದಿದೆ. ತೆರಿಗೆಯೇತರ ಆದಾಯವನ್ನು ಹೆಚ್ಚಿಸಲು ಬಳಕೆದಾರರ ಶುಲ್ಕ, ಚೇತರಿಕೆ ವೆಚ್ಚ ಇತ್ಯಾದಿಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚು ಮಾಡುವ ಅವಶ್ಯಕತೆ ಇದೆ. ಆದ್ದರಿಂದ ತೆರಿಗೆಯೇತರ ರಾಜಸ್ವವನ್ನು ಹೆಚ್ಚಿಸಲು ವೆಚ್ಚ ಸುಧಾರಣೆ ಆಯೋಗದ ಶಿಫಾರಸ್ಸುಗಳನ್ನು ಮರು ಪರಿಶೀಲಿಸಬೇಕು ಮತ್ತು ಕಾರ್ಯಗತಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.

 

ಹಾಗೆಯೇ ರಾಜ್ಯದಲ್ಲಿ ಸಹಾಯಧನಗಳು ಹೋಲಿಸಬಹುದಾದ ಯಾವುದೇ ರಾಜ್ಯಗಳಿಗಿಂತಲೂ ಹೆಚ್ಚಿನ ಮಟ್ಟದಲ್ಲಿವೆ. ಮತ್ತು ಅದರೊಳಗೆ ಅರ್ಹವಲ್ಲದ ಸಹಾಯಧನಗಳು ದೊಡ್ಡದಾಗಿ ಕಾಣಿಸುತ್ತವೆ. ಹೆಚ್ಚಿನ ಸಂಪನ್ಮೂಲಗಳನ್ನು ಮುಕ್ತಗೊಳಿಸಿ ಬೆಳವಣಿಗೆ ಮತ್ತು ಅಭಿವೃದ್ದಿ ಉದ್ದೇಶಗಳನ್ನು ಸಾಧಿಸಲು ಅರ್ಹವಲ್ಲದ  ಸಹಾಯಧನಗಳ ತ್ವರಿತ ತರ್ಕಬದ್ಧಗೊಳಿಸುವಿಕೆ ಒಂದು ಸ್ಪಷ್ಟ ಮಾರ್ಗವಾಗಿದೆ ಎಂದು ಸಲಹೆ ನೀಡಿದೆ.

 

2023-24ರಲ್ಲಿ ತೆರಿಗೆಯೇತರ ರಾಜಸ್ವವು 12,000 ಕೋಟಿ ರು.ಗಳಿಂದ 2024-24ರಲ್ಲಿ 13,499.59 ಕೋಟಿ ರು.ಗಳಿಗೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

 

ಆರೋಗ್ಯ ಸೇವೆಗಳ ಮೇಲೆ ಹೆಚ್ಚಿದ ಒತ್ತಡ

 

2023-24 ಮತ್ತು 2024-25ರಲ್ಲಿ ಒಟ್ಟು ವೆಚ್ಚದ ಭಾಗವಾಗಿ ಒಟ್ಟಾರೆ ಅಭಿವೃದ್ಧಿ ವೆಚ್ಚವು 208687.88 ಕೋಟಿ ರು.ಗಳಿಂದ 241725.40 ಕೋಟಿಗೆ ಹೆಚ್ಚಳವಾಗಿದೆ. ಸಾಂಕ್ರಾಮಿಕ ರೋಗದಿಂದ ಆರೋಗ್ಯ ಸೇವೆಗಳ ಮೇಲೆ ಒತ್ತಡ ಹೆಚ್ಚಿದೆ. ಅಭಿವೃದ್ದಿ ವೆಚ್ಚದೊಳಗೆ ಸಾಮಾಜಿಕ ಸೇವೆಗಳ ವೆಚ್ವವು 2023-24ನೇ ಸಾಲಿನಲ್ಲಿ 107275.10 ಕೋಟಿ ಯಿಂದ 2024-25ರಲ್ಲಿ 134603.55 ಕೋಟಿಗೆ ಹೆಚ್ಚಳವಾಗಿದೆ. ಅದೇ ರೀತಿ ಆರ್ಥಿಕ ಸೇವೆಗಳ ಅಡಿಯಲ್ಲಿ 101412.78 ಕೋಟಿ ರು ಗಳಿಂದ 107121.85 ಕೋಟಿ ಗೆ ಹೆಚ್ಚಾಗುವ ನಿರೀಕ್ಷೆಯಿದೆ. ಇದೇ ಅವಧಿಯಲ್ಲಿ ಶಿಕ್ಷಣ ವಲಯದ ಪಾಲು ಸಹ ಶೇ.15.24 ಪ್ರತಿಶತದಿಂದ ಶೇ.16.93ಕ್ಕೆ ಏರಿಕೆಯಾಗಿದೆ ಎಂದು ವಿವರಿಸಿದೆ.

 

ಅಭಿವೃದ್ದಿಯೇತರ ವೆಚ್ಚದ ಪಾಲು ಮುಂಬರುವ ವರ್ಷಗಳಲ್ಲಿ ಹಣಕಾಸಿನ ಬಲಕ್ಕೆ ಗಮನಾರ್ಹ ಸವಾಲಾಗಿರಬಹುದು. ಮತ್ತು ಈ ಹೆಚ್ಚಳವು ಪ್ರಮುಖವಾಗಿ ಬಡ್ಡಿ ಪಾವತಿಗಳು, ಋಣ ಸೇವೆಗಳು ಮತ್ತು ವೇತನ, ಪಿಂಚಣಿ ಬಿಲ್‌ಗಳ ಹೆಚ್ಚಳದ ಕೊಡುಗೆಯಾಗಿದೆ.

 

ಹೆಚ್ಚಿದ ಬದ್ಧತಾ ವೆಚ್ಚಗಳ ಪಾಲು

 

ಪ್ರತೀ ವರ್ಷವು ವೆಚ್ಚದ ಬೆಳವಣಿಗೆ ಹೆಚ್ಚುತ್ತಿದೆ. ಒಟ್ಟು ವೆಚ್ಚದಲ್ಲಿ ಬದ್ಧತಾ ವೆಚ್ಚಗಳ ಪಾಲು ಹೆಚ್ಚಾಗಿರುವುದೇ ಪ್ರಮುಖ ಕಾರಣವಾಗಿದೆ. ಸಂಬಳ, ಪಿಂಚಣಿ, ಬಡ್ಡಿ, ಸಹಾಯಧನ, ಆಡಳಿತಾತ್ಮಕ ವೆಚ್ಚಗಳು, ಪಂಚಾಯತ್‌ರಾಜ್‌ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಇತ್ಯಾದಿಗಳನ್ನು ಒಳಗೊಂಡಿದೆ. ಈ ಪಾಲಿನ ಹೆಚ್ಚಳವು ಅಭಿವೃದ್ಧಿ ಉದ್ದೇಶಕ್ಕಾಗಿ  ಇರುವ ಸಂಪನ್ಮೂಲವನ್ನು ಕಡಿತಗೊಳ್ಳುವ ಸಾಧ್ಯತೆ ಇದೆ. ವಿತ್ತೀಯ ಹೊಣೆಗಾರಿಕೆ ಶಾಸನಗಳ ಅನ್ವಯ ಗುರಿ ಸಾಧಿಸಲು ಮತ್ತು ರಾಜ್ಯವು ಬಾಕಿ ಇರುವ ಹೊಣೆಗಾರಿಕೆಗಳನ್ನು ಕಡಿಮೆ ಮಾಡಲು ರಾಜಸ್ವ ಜಮೆಗಳಲ್ಲಿ ಬದ್ಧತಾ ವೆಚ್ಚದ ಪಾಲನ್ನು ಕಡಿಮೆ ಮಾಡುವುದು ಅತ್ಯಂತ ಮುಖ್ಯವಾಗಿದೆ ಎಂದು ವಿವರಿಸಿದೆ.

 

2024-25ರ ಮೊದಲ ಅರು ತಿಂಗಳ ಅವಧಿಯಲ್ಲಿ ಖರ್ಚು ಮಾಡಿದ ಒಟ್ಟು ವೆಚ್ಚದ ಪಾಲು ಶೇ. 37.33ರಷ್ಟಿತ್ತು. ಇದು 2023-24ರ ಅನುಗುಣವಾದ ಅವಧಿಯಲ್ಲಿ ಸಂಭವಿಸಿದ ವೆಚ್ಚಕ್ಕಿಂತ ಶೇ. 19.32ರಷ್ಟು ಹೆಚ್ಚಾಗಿತ್ತು.

 

ಆರ್ಥಿಕ ಹೊಣೆಗಾರಿಕೆ ಅಧಿನಿಯಮ 2002 ಕಡ್ಡಾಯಗೊಳಿಸಿದ ವಿತ್ತೀಯ ಬಲವರ್ಧನೆಯ ಪಕ್ರಯತ್ನಗಳಿಗೆ ಬದ್ಧವಾಗಿರುವ ವಿಷಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಇದನ್ನು ಸಾಧಿಸಲು ಕೇಂದ್ರದ ವೆಚ್ಚ ನಿರ್ವಹಣಾ ಆಯೋಗದಂತೆಯೇ ರಾಜ್ಯವು ತನ್ನದೇ ಆದ ವೆಚ್ಚ ಸುಧಾರಣಾ ಆಯೋಗವನ್ನು ಹೊಂದಿದೆ.

 

ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಒಟ್ಟಾರೆಯಾಗಿ ರಾಜ್ಯವು ರಾಜಸ್ವದ ಕಡೆಯಿಂದ ಕೆಲವು ಸಂಕಷ್ಟಗಳಿದ್ದರೂ ಸಹ ಬಂಡವಾಳದ ವೆಚ್ಚಗಳ ಮೇಲಿನ ಗುರಿಗಳನ್ನು ರಕ್ಷಿಸುತ್ತಿದೆ. ಅಂದರೇ ಆಯವ್ಯಯಕ್ಕೆ ಹೋಲಿಸಿದರೆ ರಾಜಸ್ವದ ಕೊರತೆಯಿದ್ದರೂ ಸಹ ಬಂಡವಾಳದ ವೆಚ್ಚಗಳ ಸಂಕೋಚನವನ್ನು ಆಶ್ರಯಿಸದಿರಲು ರಾಜ್ಯವು ಪ್ರಯತ್ನಿಸುತ್ತಿದೆ ಎಂದು ಸಮೀಕ್ಷೆಯು ವಿಶ್ಲೇಷಿಸಿದೆ.

 

ವೆಚ್ಚ ಸುಧಾರಣೆಗಳ ಜೊತೆಗೆ ರಾಜ್ಯವು ತೆರಿಗೆ ಸುಧಾರಣೆಗಳನ್ನು ಕೈಗೊಂಡಿದೆ. ಮತ್ತು ತೆರಿಗೆ ಆಡಳಿತವನ್ನು ಪರಿಷ್ಕರಿಸಿದೆ. ಇದು ಹೆಚ್ಚಿನ ರಾಜಸ್ವ ಜಮೆ ವಿಷಯದಲ್ಲಿ ಫಲಿತಾಂಶಗಳನ್ನು ನೀಡಿದೆ.

 

2020-21 ಮತ್ತು 2023-24ನ್ನು ಹೊರತುಪಡಿಸಿ ಪ್ರತಿ ವರ್ಷ ರಾಜಸ್ವ ಜಮಾಗಳು ಹೆಚ್ಚುತ್ತಿವೆ. ಅದೇ ರೀತಿ ರಾಜಸ್ವ ವೆಚ್ಚವು ಪ್ರತೀ ವರ್ಷವೂ ಹೆಚ್ಚುತ್ತಿದೆ. ಆದರೂ ರಾಜ್ಯವು 2019-20ರವರೆಗೆ ರಾಜಸ್ವದ ಹೆಚ್ಚಳವನ್ನು ಉಳಿಸಿಕೊಂಡಿದೆ. ತದನಂತರ ಅತ್ಯಲ್ಪ ರಾಜಸ್ವ ಕೊರತೆಯನ್ನು ಹೊಂದಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

 

ತೀವ್ರ ಪ್ರಾದೇಶಿಕ ಅಸಮತೋಲನ

 

ಅದೇ ರೀತಿ ರಾಜ್ಯವು ತೀವ್ರ ಪ್ರಾದೇಶಿಕ ಅಸಮತೋಲವನ್ನು ಹೊಂದಿದೆ. ಸಾಮಾಜಿಕ ಆರ್ಥಿಕ ಸೂಚಕಗಳು ಅಥವಾ ಮಾನವ ಅಭಿವೃದ್ಧಿ ಸೂಚಕಗಳು ದೇಶದ ಹಿಂದುಳಿದ ರಾಜ್ಯಗಳಿಗಿಂತ ಕಡಿಮೆ. ರಾಜ್ಯ ಸರ್ಕಾರವು ರಾಜ್ಯದ ಹಿಂದುಳಿದ ಪ್ರದೇಶದ 7 ಜಿಲ್ಲೆಗಳಿಗೆ ವರ್ಷಕ್ಕೆ 5,000 ಕೋಟಿಗಳಷ್ಟು ಹಣವನ್ನು ನೀಡುತ್ತಿದೆ. ಭಾರತ ಸರ್ಕಾರವು ಈ ಪ್ರದೇಶದ ಅಭಿವೃದ್ದಿಗೆ ಹೊಂದಾಣಿಕೆಯ ಕೊಡುಗೆಯನ್ನು ನೀಡುವ ಮೂಲಕ ರಾಜ್ಯದ ಪ್ರಯತ್ನಗಳಿಗೆ ಪೂರಕವಾಗಿರಬೇಕು.

SUPPORT THE FILE

Latest News

Related Posts