ಶಾಸಕರ ಕೊಠಡಿಗಳಿಗೆ ಸ್ಮಾರ್ಟ್‌ ಡೋರ್ ಲಾಕ್‌, ಸೇಫ್‌ ಲಾಕರ್ಸ್‌ ಖರೀದಿ; 4.80 ಕೋಟಿ ಹೆಚ್ಚುವರಿ ಅನುದಾನ!

ಬೆಂಗಳೂರು;  ವಿಧಾನಸಭೆ ಸಚಿವಾಲಯವು ಎಐ ಆಧರಿತ ಕ್ಯಾಮರಾಗಳನ್ನು ಟೆಂಡರ್‍‌ ಇಲ್ಲದೆಯೇ ಖರೀದಿಸಿರುವ ನಡುವೆಯೇ ಇದೀಗ ಶಾಸಕರ ಭವನದಲ್ಲಿನ ಕೊಠಡಿಗಳಿಗೂ ಸ್ಮಾರ್ಟ್‌ ಡಿಜಿಟಲ್‌ ಲಾಕ್‌, ಸೇಫ್‌ ಲಾಕರ್ಸ್‌ಗಳನ್ನು ಖರೀದಿಸಲು ಹೊರಟಿದೆ.

 

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ ಬಿದ್ದಿರುವ ವಿಪರೀತ ಆರ್ಥಿಕ ಹೊರೆಯಿಂದ ಪಾರಾಗಲು ಸರ್ಕಾರವು ಹರಸಾಹಸ ಪಡುತ್ತಿದ್ದರೇ ಇತ್ತ ವಿಧಾನಸಭೆ ಸಚಿವಾಲಯವು ದುಂದುವೆಚ್ಚಗಳಲ್ಲಿ ಮುಳುಗಿದೆ!

 

ವಿದ್ಯಾರ್ಥಿಗಳಿಗೆ ಸಮವಸ್ತ್ರ, ವಿದ್ಯಾರ್ಥಿ ವೇತನ, ಕಟ್ಟಡಗಳ ದುರಸ್ತಿ, ಪ್ರೋತ್ಸಾಹ ಧನ, ಮನೆಗಳ ನಿರ್ಮಾಣ ಸೇರಿದಂತೆ ಇನ್ನಿತರೆ ಸಾಮಾಜಿಕ ಉಪಯೋಗಿಯ ಸೌಲಭ್ಯಗಳಿಗೆ ಅನುದಾನ ಹೊಂದಿಸಲು ಮತ್ತು ಹೆಚ್ಚುವರಿ ಅನುದಾನ ಕೋರಿ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳಿಂದಾಗಿ ಆರ್ಥಿಕ ಇಲಾಖೆಯು ತತ್ತರಿಸಿ ಹೋಗಿವೆ.

 

ಇಂತಹ ಹೊತ್ತಿನಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯವು ಶಾಸಕರ ಭವನದ ಕೊಠಡಿಗಳನ್ನು ಆಧುನೀಕರಿಸಲು ಹೊರಟಿದೆ.

 

ಇದಕ್ಕಾಗಿ ಹೆಚ್ಚುವರಿಯಾಗಿ 4.80 ಕೋಟಿ ರು ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ದಾಖಲೆ ಲಭ್ಯವಾಗಿದೆ.

 

ಕರ್ನಾಟಕ ವಿಧಾನಸಭೆ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಶಾಸಕರ ಭವನದಲ್ಲಿ ಒಟ್ಟಾರೆ 264 ಕೊಠಡಿಗಳಿಗೆ ಸ್ಮಾರ್ಟ್‌ ಡೋರ್‍‌ ಲಾಕ್ಸ್‌, ಸ್ಮಾರ್ಟ್‌ ಸೇಫ್‌ ಲಾಕರ್ಸ್‌, ಸ್ಮಾರ್ಟ್‌ ಎನರ್ಜಿ ಮಾನಿಟಿರಿಂಗ್‌ ಸೊಲ್ಯೂಷನ್ಸ್‌, ಸ್ಟೈನ್‌ಲೆಸ್‌ ಸ್ಟೀಲ್ ವಾಟರ್‍‌ ಫ್ಯೂರಿಫೈಯರ್ಸ್‌ ಉಪಕರಣ, ಯಂತ್ರಗಳನ್ನು ಖರೀದಿಸಲು ಅನುದಾನ ಕೋರಿರುವುದು ಗೊತ್ತಾಗಿದೆ.

 

 

ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಪ್ರಸ್ತಾವನೆಯನ್ನು (ಕಡತ ಸಂಖ್ಯೆ; FD163/EX 12/2025-EX 12) ಪರಿಶೀಲಿಸುತ್ತಿದೆ. ಇದಕ್ಕೆ ಒಟ್ಟಾರೆ 4.80 ಕೋಟಿ ರು ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ.

 

 

ಅಲ್ಪಾವಧಿ ಟೆಂಡರ್‌ ಪ್ರಕ್ರಿಯೆಯನ್ನೂ  ನಡೆಸದೆಯೇ ಮಂಗಳೂರು ಮೂಲದ ಆಸ್ಕಿನ್‌ ಆಟೋಮೇಷನ್‌ ಪ್ರೈ ಲಿ ನಿಂದ ಕೃತಕ ಬುದ್ಧಿಮತ್ತೆ ಆಧರಿತ (ಎಐ) ಕ್ಯಾಮರಾಗಳನ್ನು ಖರೀದಿಸಿರುವ ವಿಧಾನಸಭೆ ಸಚಿವಾಲಯವು, ಹಲವು  ಮಾರ್ಗಸೂಚಿಗಳನ್ನು ಉಲ್ಲಂಘಿಸಿತ್ತು.

 

ಆರ್ಥಿಕ ಇಲಾಖೆಯ ಗಮನಕ್ಕೆ ತಾರದೆಯೇ ಮತ್ತು ಸಹಮತಿಗೂ ಮುನ್ನವೇ ನೇರವಾಗಿ ವಿಧಾನಸಭೆ ಸಚಿವಾಲಯವೇ ಕ್ಯಾಮರಾಗಳನ್ನು ಖರೀದಿಸಿದೆ. ವಿಶೇಷವೆಂದರೇ ಇದಕ್ಕೆ ಸ್ಪೀಕರ್‌ ಯು ಟಿ ಖಾದರ್‌ ಅವರೂ ಸಹ ಅನುಮೋದಿಸಿದ್ದರು.

 

ನಿಯಮಾನುಸಾರ ಯಾವುದೇ ಕ್ರಮ ವಹಿಸದೇ ಇದ್ದ ವಿಧಾನಸಭೆ ಸಚಿವಾಲಯವು ಈ ಖರೀದಿ ಪ್ರಕ್ರಿಯೆಗೆ ಘಟನೋತ್ತರವಾಗಿ 4(ಜಿ) ವಿನಾಯಿತಿ ನೀಡಬೇಕು ಎಂದು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಮೊದಲು ಒಪ್ಪಿರಲಿಲ್ಲ.

 

ಘಟನೋತ್ತರವಾಗಿ 4 (ಜಿ) ವಿನಾಯಿತಿ ನೀಡಲು ಅವಕಾಶವೇ ಇಲ್ಲ ಎಂದು ಆರ್ಥಿಕ ಇಲಾಖೆಯು ಹೇಳಿತ್ತು. ಆದರೆ ಸ್ಪೀಕರ್‌ ಕಚೇರಿಯು ಆರ್ಥಿಕ ಇಲಾಖೆ ಮೇಲೆ ಒತ್ತಡ ಹೇರಿತ್ತು. ಹೀಗಾಗಿ ಒತ್ತಡಕ್ಕೆ ಮಣಿದ ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ನೀಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

 

ಎಐ ಕ್ಯಾಮರಾಗಳಿಗೆ 41.82 ಲಕ್ಷ ವೆಚ್ಚ; ಆರ್ಥಿಕ ಇಲಾಖೆ ಗಮನಕ್ಕೆ ತಾರದೆಯೇ ಖರೀದಿ, ನಿಯಮ ಉಲ್ಲಂಘನೆ

ನಿರ್ದಿಷ್ಟವಾಗಿ ಆಸ್ಕಿನ್‌ ಆಟೋಮೇಷನ್‌ ಪ್ರೈ ಲಿ ನಿಂದಲೇ ಏಕೆ ಖರೀದಿಸಲು ಉದ್ದೇಶಿಸಿದೆ, ಈ ಸಂಸ್ಥೆಯನ್ನು ಹೊರತುಪಡಿಸಿ ಇಂತಹ ಸೇವೆಯನ್ನು ಒಗಿಸಲು ಇತರೆ ಯಾವುದೇ ಸಂಸ್ಥೆಗಳು ಲಭ್ಯವಿಲ್ಲವೇ ಎಂಬುದರ ಕುರಿತು ಆರ್ಥಿಕ ಇಲಾಖೆ ಮಾಹಿತಿ ಕೋರಿತ್ತು. ಆದರೆ  ಯಾವುದೇ ಮಾಹಿತಿಗಳನ್ನೂ ಒದಗಿಸಿರಲಿಲ್ಲ.

 

 

 

ಅಲ್ಲದೇ ಈ ಸೇವೆಯನ್ನು ಟೆಂಡರ್‌ ಪ್ರಕ್ರಿಯೆ ಮೂಲಕ ಖರೀದಿಸದೇ ಇರುವುದಕ್ಕೂ ಸೂಕ್ತ ಸಮರ್ಥನೆಗಳನ್ನೂ ನೀಡಿರಲಿಲ್ಲ. ಮತ್ತು ಪ್ರಸ್ತಾಪಿತ ದರಗಳು ಸಮಂಜಸವಾಗಿದೆಯೇ ಎಂಬುದಕ್ಕೆ ಯಾವುದೇ ದೃಢೀಕರಣ ಒದಗಿಸಿರಲಿಲ್ಲ. ಮತ್ತು 2024ರ ಮಾರ್ಚ್‌ 15ರಂದು ಆರ್ಥಿಕ ಇಲಾಖೆಯು ಹೊರಡಿಸಿದ್ದ ಮಾರ್ಗಸೂಚಿಗಳ ಅನ್ವಯ ಪರಿಶೀಲನೆಯನ್ನೂ ನಡೆಸಿರಲಿಲ್ಲ ಎಂಬುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

‘ಈ ಹಿನ್ನೆಲೆಯಲ್ಲಿ ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ತಿರಸ್ಕರಿಸಿ, ಪ್ರಸ್ತಾಪಿತ ಸೇವೆಯನ್ನು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಟೆಂಡರ್ ಪ್ರಕ್ರಿಯೆ ಮೂಲಕವೇ ಕೈಗೊಳ್ಳಬೇಕು,’ ಎಂದು ಆರ್ಥಿಕ ಇಲಾಖೆಯು ತಿಳಿಸಿತ್ತು.

 

 

 

ಅಷ್ಟೇ ಅಲ್ಲದೇ ಎಐ ಆಧರಿತ ಕ್ಯಾಮರಾಗಳ ಖರೀದಿಗೆ ಆರ್ಥಿಕ ಇಲಾಖೆಯು ಅನುಮತಿಯನ್ನೇ ನೀಡಿರಲಿಲ್ಲ. ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸುವ ಮುನ್ನವೇ ಸಚಿವಾಲಯವು ಕ್ಯಾಮರಾಗಳನ್ನು ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಹೀಗಾಗಿ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ಘಟನೋತ್ತರ ವಿನಾಯಿತಿ ನೀಡಲು ಅವಕಾಶವೇ ಇರಲಿಲ್ಲ. ಅಲ್ಲದೇ ಆರ್ಥಿಕ ಇಲಾಖೆಯು 2024ರ ಮಾರ್ಚ್‌ 15ರಂದು ಹೊರಡಿಸಿದ್ದ ಸುತ್ತೋಲೆಯನ್ನು ಪಾಲಿಸಿಲ್ಲ ಎಂಬುದನ್ನು ಸ್ಮರಿಸಬಹುದು.

 

SUPPORT THE FILE

Latest News

Related Posts