ಬೆಂಗಳೂರು; ಎಂಟು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗೋಣಿ ಚೀಲ ಖರೀದಿಸಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಇದುವರೆಗೂ 5.46 ಕೋಟಿ ರು.ಗಳನ್ನು ಮರು ಪಾವತಿಸಿಲ್ಲ. ಅದೇ ರೀತಿ 64.45 ಕೋಟಿ ರು. ಮೊತ್ತಕ್ಕೆ ಆವರ್ತ ನಿಧಿಗೆ ಕೇವಲ 1.22 ಕೋಟಿ ರು ಮಾತ್ರ ಮರುಪಾವತಿಸಿದೆ.
ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣದ ಸಚಿವ ಸಂಪುಟ ಉಪ ಸಮಿತಿ ಸಭೆಯು 2025ರ ಮಾರ್ಚ್ 27ರಂದು ನಡೆಯಲಿರುವ ಸಭೆಗೆ ಸಹಕಾರ ಇಲಾಖೆಯು ಮಂಡಿಸಿರುವ ಟಿಪ್ಪಣಿಯಲ್ಲಿ 5.46 ಕೋಟಿ ರು.ಗಳನ್ನು ಮರು ಪಾವತಿ ಮಾಡಿಲ್ಲ ಎಂದು ವಿವರಿಸಿದೆ.
ಸಹಕಾರ ಇಲಾಖೆಯು ಮಂಡಿಸಿರುವ ಟಿಪ್ಪಣಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
2023-24ನೇ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಬಿಳಿಜೋಳ ಖರೀದಿಸಲು ಗೋಣಿಚೀಲಗಳ ಕೊರತೆ ಉಂಟಾಗಿತ್ತು. ಇದಕ್ಕಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದಲ್ಲಿ ಲಭ್ಯವಿದ್ದ 8,09,700 ಗೋಣಿಚೀಲಗಳನ್ನು ಸರ್ಕಾರವು ಖರೀದಿಸಿತ್ತು. ಈ ಸಂಬಂಧ 5,46,23,280 ರು.ಗಳನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದಲ್ಲಿ ಪಾವತಿಸಬೇಕಿತ್ತು. ಈ ಕುರಿತು ಮಂಡಳವು ಹಲವಾರು ಬಾರಿ ಕೋರಿದರೂ ಸಹ ಇದುವರೆಗೂ ಮರುಪಾವತಿಯಾಗಿಲ್ಲ ಎಂದು ಟಿಪ್ಪಣಿಯಿಂದ ಗೊತ್ತಾಗಿದೆ.
‘ಈ ಹಿಂದಿನ ಕೃಷಿ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪ ಸಮಿತಿಗಳ ನಿರ್ಣಯದಂತೆ ಸರ್ಕಾರ ಆದೇಶಿಸಿತ್ತು. ಇದರ ಪ್ರಕಾರ ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮದಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಒಟ್ಟು 8,09,700 ಗೋಣಿಚೀಲಗಳನ್ನು ಖರೀದಿಸಿ ಉಪಯೋಗಿಸಿಕೊಂಡಿತ್ತು. ಇದರ ಒಟ್ಟು ಮೊತ್ತ 5,46,23,280 ರು.ಗಳನ್ನು ಮರು ಪಾವತಿಸಲು ಕೋರಿದರೂ ಸಹ ಈವರೆಗೂ ಮರುಪಾವತಿಯಾಗಿರುವುದಿಲ್ಲ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಈ ಸಂಬಂಧ ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮಕ್ಕೆ ಆವರ್ತ ನಿಧಿಯಿಂದ ಬಿಡುಗಡೆ ಮಾಢುವ ಮೊತ್ತದಲ್ಲಿ 5,46,23,280 ರು.ಗಳನ್ನು ಆದ್ಯತೆ ಮೇರೆಗೆ ಆವರ್ತ ನಿಧಿಗೆ ಮರು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭೆಗೆ ವಿಷಯ ಮಂಡಿಸಿರುವುದು ತಿಳಿದು ಬಂದಿದೆ.
ಆವರ್ತ ನಿಧಿಯಲ್ಲಿರುವುದು ಕೇವಲ 189 ಕೋಟಿ, ಬಾಕಿ ಬರಬೇಕಿದೆ 2,500 ಕೋಟಿ
ಅದೇ ರೀತಿ 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಗದಗ್ ಜಿಲ್ಲೆಯಲ್ಲಿ ಅಂದಾಜು 8,230 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‍ಗೆ ಅಂದಾಜು 06ರಿಂದ 08 ಕ್ವಿಂಟಾಲ್ ಉತ್ಪಾದನೆ ನಿರೀಕ್ಷಿಸಿದೆ. ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯಿಂದ ಪ್ರಸ್ತಾವನೆಯನ್ನು ಸ್ವೀಕರಿಸಿರುವುದು ಗೊತ್ತಾಗಿದೆ.
ತೊಗರಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ರೂಪದಲ್ಲಿ 138 ಕೋಟಿ ರು.ಗಳನ್ನು ಆವರ್ತ ನಿಧಿಯಿಂದ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಹಮತಿಸಿದೆ. ಈ ಮೊತ್ತದಲ್ಲಿ ಪ್ರಥಮ ಹಂತದಲ್ಲಿ ತೊಗರಿ ಖರೀದಿ ಪ್ರಮಾಣಕ್ಕನುಗುಣವಾಗಿ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ಒಟ್ಟು 21.50 ಕೋಟಿ ರು.ಗಳನ್ನು ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.
ಅದೇ ರೀತಿ ಕೇಂದ್ರ ಸರ್ಕಾರವು ಘೋಷಿಸಿರುವ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್ ಎ ಕ್ಯೂ ಗುಣಮಟ್ಟದ ತೊಗರಿ ಖರೀದಿಸಲು ದುಡಿಯುವ ಬಂಡವಾಳವೆಂದು 347 ಕೋಟಿ ರು.ಗಳನ್ನು ಆವರ್ತ ನಿಧಿಯಿಂದ ಹಂತ ಹಂತವಾಗಿ ಬಿಡುಗಡೆ ಮಾಡಲು ಈಗಾಗಲೇ ಆದೇಶ ಹೊರಡಿಸಿದೆ. ಇದರ ಅನ್ವಯ ಪ್ರಥಮ ಹಂತದಲ್ಲಿ 20.00 ಕೋಟಿ ರು.ಗಳನ್ನು ಆವರ್ತ ನಿಧಿಯಿಂದ ಬಿಡುಗಡೆ ಮಾಡಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
2025ರ ಮಾರ್ಚ್ 10ರ ಅಂತ್ಯಕ್ಕೆ 3,06,150 ಮೆಟ್ರಿಕ್ ಟನ್‌ಗಳಲ್ಲಿ 1,33,100 ಮೆಟ್ರಿಕ್ ಟನ್ ಪ್ರಮಾಣಕ್ಕೆ 84,127 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಭೌತಿಕ ಖರೀದಿಯಲ್ಲಿ 26, 281 ರೈತರಿಂದ 34,855 ಮೆಟ್ರಿಕ್ ಟನ್ ಖರೀದಿಯಾಗಿದೆ. ರೈತರ ನೋಂದಣಿ 2025ರ ಮಾರ್ಚ್ 17ಕ್ಕೆ ಅಂತ್ಯಗೊಳ್ಳುತ್ತಿದೆ. ಹಾಗೂ ಭೌತಿಕ ಖರೀದಿ ಪ್ರಕ್ರಿಯೆಯು 2025ರ ಏಪ್ರಿಲ್ 2ಕ್ಕೆ ಅಂತ್ಯಗೊಳ್ಳಲಿದೆ. ಹೀಗಾಗಿ ನಿಗದಿತ ಅವಧಿಯೊಳಗೆ ಖರೀದಿ ಪ್ರಕ್ರಿಯೆ ಕೈಗೊಳ್ಳುವುದು ಕಷ್ಟ ಸಾಧ್ಯವಾಗಿದೆ. ಒಂದು ತಿಂಗಳು ಹೆಚ್ಚುವರಿಯಾಗಿ ಖರೀದಿ ಕಾಲಾವಧಿ ವಿಸ್ತರಿಸಬೇಕು ಎಂದು ಸಚಿವ ಸಂಪುಟದ ಉಪ ಸಮಿತಿಗೆ ಸಹಕಾರ ಇಲಾಖೆಯು ಮಂಡಿಸಿರುವುದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ಭೌಗೋಳಿಕ ಸೂಚ್ಯಂಕ ಹೊಂದಿರುವ ತೊಗರಿ ಖರೀದಿಗೆ ಈಗಾಗಲೇ ಕೇಂದ್ರ ಸರ್ಕಾರವು ಬೆಂಬಲ ಘೋಷಿಸಿದೆ. 7,550 ರು.ಗಳ ಜೊತೆಗೆ ರಾಜ್ಯ ಸರ್ಕಾರವು ಸಹ 450 ರು. ನೀಡುತ್ತಿದೆ. ಇದೇ ಮಾದರಿಯಲ್ಲಿ 2,500 ಕ್ವಿಂಟಾಲ್ ತೊಗರಿಗೂ ಸಹ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಪ್ರತಿ ಕ್ವಿಂಟಾಲ್‌ಗೆ 450 ರು.ನಂತೆ 11,25,000 ರು.ಗಳನ್ನು ನೀಡಬೇಕು ಎಂದು ಇಲಾಖೆಯು ಕೋರಿದೆ.
ರಾಜ್ಯದಲ್ಲಿ ಕಡಲೆಕಾಳು ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ 277 ಖರೀದಿ ಕೇಂದ್ರಗಳನ್ನು ತೆರೆದಿದೆ. 2025ರ ಮಾರ್ಚ್ 26ರ ಅಂತ್ಯಕ್ಕೆ 1,829 ರೈತರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾರಾಟ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ಮಾರುಕಟ್ಟೆಗಳಲ್ಲಿ ಕಡಲೆಕಾಳು ಧಾರಣೆಯು ಬೆಂಬಲ ಬೆಲೆಗಿಂತ ಹೆಚ್ಚಿಗೆ ಇದೆ. ಹೀಗಾಗಿ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಆಸಕ್ತಿ ವಹಿಸಿಲ್ಲ ಎಂದು ಟಿಪ್ಪಣಿಯಲ್ಲಿ ವಿವರಿಸಿದೆ.
2024-25ನೇ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ, ಭತ್ತ ಮತ್ತು ಬಿಳಿಜೋಳ ಖರೀದಿಸಲು ಪ್ರಥಮ ಹಂತದಲ್ಲಿ 500 ಕೋಟಿ ರು ಬಿಡುಗಡೆ ಮಾಡಲಾಗಿದೆ. ಆಹಾರ ನಾಗರೀಕ ಸರಬರಾಜು ನಿಗಮದಿಂದ 44.01 ಕೋಟಿ ರು.ಗಳನ್ನು ನಿಯಮಾನುಸಾರ 03 ಖರೀದಿ ಸಂಸ್ಥೆಗಳ ಮೂಲಕ ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ಪಾವತಿಸಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಆಹಾರ, ನಾಗರಿಕ ಸರಬರಾಜು ನಿಗಮಕ್ಕೆ ಆವರ್ತ ನಿಧಿಯಿಂದ ಬಿಡುಗಡೆ ಮಾಡಿದ್ದ ಈವರೆಗಿನ ಮೊತ್ತಕ್ಕೆ ಬಡ್ಡಿಯನ್ನು ಆವರ್ತ ನಿಧಿಗೆ ಮರು ಪಾವತಿಗೆ ಬಾಕಿ ಇತ್ತು. ಈ ಸಂಬಂಧ 64.45 ಕೋಟಿ ರು.ಮೊತ್ತಕ್‌ಕೆ 1.22 ಕೋಟಿ ರು.ಗಳನ್ನು ಮಾತ್ರ ಆವರ್ತ ನಿಧಿಗೆ ಮರುಪಾವತಿಸಿದೆ. ಅಲ್ಲದೇ ಆವರ್ತ ನಿಧಿಗಳ ಮಾರ್ಗಸೂಚಿಗಳನ್ವಯ ಖರೀದಿ ಸಂಸ್ಥೆಗೆ ಬಿಡುಗಡೆ ಮಾಡಲಾದ ಮೊತ್ತವನ್ನು ಪ್ರತ್ಯೇಕ ಖಾತೆಯಲ್ಲಿ ನಿರ್ವಹಣೆ ಮಾಡುತ್ತಿದೆ. ಪ್ರಥಮ ಹಂತದಲ್ಲಿ 500.00 ಕೋಟಿ ರು.ಗಳನ್ನು ಈ ಖಾತೆಗೆ ಕೃಷಿ ಮಾರಾಟ ಮಂಡಳಿಯಿಂದ ವರ್ಗಾಯಿಸಿದೆ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಕುರಿತು ಸಹಕಾರ ಸಚಿವ ಕೆ ಎನ್ ರಾಜಣ್ಣ ಮತ್ತು ಚೆಲುವರಾಯಸ್ವಾಮಿ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.