ರೆಡ್ಡಿ ಪ್ರಕರಣದಲ್ಲಿನ ಆರೋಪಿತ ಐಎಫ್‌ಎಸ್‌ ಮುತ್ತಯ್ಯ ವಿರುದ್ಧ ವಿಚಾರಣೆ; ಲೋಕಾ ಶಿಫಾರಸ್ಸು ಕೈಬಿಡಲು ಪ್ರಸ್ತಾವ

ಬೆಂಗಳೂರು; ಅಕ್ರಮ ಗಣಿಗಾರಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ ಎನ್ನಲಾಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಹಿರಿಯ ಐಎಫ್‌ಎಸ್‌ ಅಧಿಕಾರಿ ಮುತ್ತಯ್ಯ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಸಚಿವ ಸಂಪುಟ ಉಪ ಸಮಿತಿಯು ತೀರ್ಮಾನಿಸಿದೆ.

 

ಐಎಫ್‌ಎಸ್‌ ಮುತ್ತಯ್ಯ ಅವರ ವಿರುದ್ಧ ಇಲಾಖೆ ವಿಚಾರಣೆ ಕೈಗೊಳ್ಳಬೇಕು ಎಂದು ಲೋಕಾಯುಕ್ತರು ಶಿಫಾರಸ್ಸು ಮಾಡಿದ್ದರು. ಆದರೀಗ  ಸಚಿವ ಸಂಪುಟ ಉಪ ಸಮಿತಿಯ ತೀರ್ಮಾನದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಚಿವ ಸಂಪುಟಕ್ಕೆ ಕಡತ ಮಂಡಿಸಿದೆ.

 

ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ಸಿದ್ದರಾಮಯ್ಯ ಅವರು ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದರು. ಮೊದಲ ಅವಧಿಯಲ್ಲಿಯೂ ಐಎಫ್‌ಎಸ್‌ ಅಧಿಕಾರಿ ಮುತ್ತಯ್ಯ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮಕ್ಕೆ ಮುಂದಾಗಿರಲಿಲ್ಲ.

 

ಇದೀಗ ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಶಿಸ್ತು ಕ್ರಮಕೈಗೊಳ್ಳಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಸಚಿವ ಸಂಪುಟದ ಉಪ ಸಮಿತಿಯು ಷರಾ ಬರೆದಿದೆ. ಇದನ್ನೇ ಮುಂದಿರಿಸಿಕೊಂಡಿರುವ ಇಲಾಖೆಯು ಸಚಿವ ಸಂಪುಟದ ಅನುಮೋದನೆ ಪಡೆಯಲು ಕಡತ ಮಂಡಿಸಿದೆ.

 

 

ಇದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಗ್ರೂಪ್‌ ಎ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಮಾಡಿರುವ ಶಿಫಾರಸ್ಸನ್ನು ಕೈ ಬಿಡಲು/ಮಾರ್ಪಡಿಸುವ ಪ್ರಸ್ತಾವಗಳ ಕುರಿತು ಸಚಿವ ಸಂಪುಟ ಉಪ ಸಮಿತಿಯು 2025ರ ಫೆ.13ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಹಿರಿಯ ಐಎಫ್‌ಎಸ್‌ ಅಧಿಕಾರಿ ಎಸ್‌ ಮುತ್ತಯ್ಯ, ಎನ್‌ ಜಿ ಗೌಡಯ್ಯ, ಬಿ ಕೆ ಪವಿತ್ರ, ಕೆಎಎಸ್‌ ಅಧಿಕಾರಿ ಕುಸುಮ ಕುಮಾರಿ, ಎನ್‌ ಜಯರಾಮ್, ಪ್ರಶಾಂತ ಕುಮಾರ ಮಿಶ್ರ ಅವರ ವಿರುದ್ಧದ ಪ್ರಕರಣಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿತ್ತು.

 

 

ಈ ವೇಳೆ ಎಸ್‌ ಮುತ್ತಯ್ಯ ಅವರ ವಿರುದ್ಧದ ಪ್ರಕರಣ ಕುರಿತು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ.

 

ವಿಶೇಷವೆಂದರೇ ಮುತ್ತಯ್ಯ ಅವರ ವಿರುದ್ಧ ವಿಚಾರಣೆ, ಶಿಸ್ತು ಕ್ರಮ ಕೈಗೊಳ್ಳಲು ನಿಯಮಗಳಲ್ಲಿ ಅವಕಾಶಗಳಿಲ್ಲ ಎಂದು ಆಡಳಿತ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಗೆ 2024ರ ಫೆ.1ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯು ವಿರೋಧ ವ್ಯಕ್ತಪಡಿಸಿತ್ತು. ಆದರೀ 2025ರ ಫೆ.13ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯು, ಆಡಳಿತ ಇಲಾಖೆಯು ಸಲ್ಲಿಸಿದ್ದ ಹಿಂದಿನ ಪ್ರಸ್ತಾವನೆಯನ್ನೇ ಒಪ್ಪಿಕೊಂಡಿದೆ ಎಂದು ಗೊತ್ತಾಗಿದೆ. ಇದನ್ನು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಪ್ರಸ್ತಾವನೆಯಲ್ಲೇನಿತ್ತು?

 

ಕರ್ನಾಟಕ ಲೋಕಾಯುಕ್ತವು ಕರ್ನಾಟಕ ಕಾಯ್ದೆ 1984ರ ಕಲಂ 12(3)ಅಡಿ ಸಲ್ಲಲಿಸಿದ್ದ ತನೀಖಾ ವರದಿಯ ಹಿನ್ನೆಲೆಯಲ್ಲಿ ಆರೋಪಿತ ಅಧಿಕಾರಿಯಾದ ಐಎಫ್‌ಎಸ್‌ ಮುತ್ತಯ್ಯ ಅವರು 2015ರ ಆಗಸ್ಟ್‌ 31ರಂದು ವಯೋ ನಿವೃತ್ತಿ ಹೊಂದಿದ್ದಾರೆ. ಹಾಗೂ ಎಐಎಸ್‌ (ಡಿಸಿಆರ್‍‌ಬಿ) ಕಾಯ್ದೆ 1958ರ ನಿಯಮ 6(1) (ಬಿ)(ii) ಪರಿಶೀಲಿಸಿರುವ ಪ್ರಕಾರ ಅಧಿಕಾರಿಯು ನಿವೃತ್ತಿ ಹೊಂದುವ ಪೂರ್ವದ 4 ವರ್ಷಗಳಿಗಿಂತ ಮುಂಚೆ ಘಟಿಸಿರುವ ಪ್ರಕರಣವಾಗಿರುವುದರಿಂದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ವಹಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಆಡಳಿತ ಇಲಾಖೆಯು ಸಚಿವ ಸಂಪುಟದ ಉಪ ಸಮಿತಿ ಸಭೆ ಮುಂದೆ ಇಟ್ಟಿತ್ತು.

 

ಆದರೆ 2024ರ ಫೆ.1ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಆಡಳಿತ ಇಲಾಖೆಯು ಪ್ರಸ್ತಾವನೆಯನ್ನು ಸಮಿತಿಯು ಒಪ್ಪಿರಲಿಲ್ಲ. ಹಾಗೂ ಈ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು ಸರ್ಕಾರಕ್ಕೆ ಯಾವುದಾದರೂ ಆರ್ಥಿಕ ನಷ್ಟವುಂಟಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಆಡಳಿತ ಇಲಾಖೆಯಾದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಸ್ಪಷ್ಟವಾಗಿ ಹೇಳಬೇಕು.
ಇಲಾಖೆಯ ಹಾಜರಾತಿಯೊಂದಿಗೆ ಮುಂದಿನ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಮಂಡಿಸಬೇಕು ಎಂದು ಸೂಚಿಸಿತ್ತು. ಅದರಂತೆ 2024ರ ಮೇ 7ರಂದು ಅನಧಿಕೃತ ಟಿಪ್ಪಣಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ತಿಳಿಸಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆಡಳಿತ ಇಲಾಖೆಯೊಂದಿಗೆ ಮಂಡಿಸಿತ್ತು.

 

ಎರಡನೇ ಬಾರಿ ಸಲ್ಲಿಕೆಯಾಗಿದ್ದ ಈ ಪ್ರಸ್ತಾವನೆ ಪರಿಶೀಲಿಸಿದ್ದ ಸಚಿವ ಸಂಪುಟ ಉಪ ಸಮಿತಿಯು, ಆಡಳಿತ ಇಲಾಖೆಯ ಅಭಿಪ್ರಾಯವನ್ನೇ ಎತ್ತಿ ಹಿಡಿದಿದೆ. ಎಸ್‌ ಮುತ್ತಯ್ಯ ಅವರು ನಿವೃತ್ತಿ ಹೊಂದಿ 4 ವರ್ಷಗಳಿಗೂ ಹೆಚ್ಚು ವರ್ಷವಾಗಿರುವುದರಿಂದ ಅವರ ವಿರುದ್ಧ ಶಿಸ್ತು ಕ್ರಮ ವಹಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಹೀಗಾಗಿ ಪ್ರಕರಣವನ್ನು ಮುಕ್ತಾಯಗೊಳಿಸಬಹುದು ಎಂದು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

 

ಐಎಫ್‌ಎಸ್‌ ಮುತ್ತಯ್ಯ, ಮನೋಜ್‌ ಕುಮಾರ್‍‌ ಶುಕ್ಲ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಆಪಾದಿತ ಅಧಿಕಾರಿಗಳಿಂದ ಪ್ರತಿ ರಕ್ಷಣಾ ಹೇಳಿಕೆಯನ್ನು ಅರಣ್ಯ ಇಲಾಖೆಯು ಪಡೆದಿತ್ತು. ಅಲ್ಲದೇ ಈ ಇಬ್ಬರು ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರಗಳು ನೀಡಿದ್ದ ತಾಂತ್ರಿಕ ಹಾಗೂ ಆಡಳಿತಾತ್ಮಕ ವರದಿಯಲ್ಲಿನ ಅಂಶಗಳ ಕುರಿತು ಇಲಾಖೆ ಮಟ್ಟದಲ್ಲಿ ಚರ್ಚೆಯಾಗಿತ್ತು.

 

ಈ ಎಲ್ಲಾ ಅಂಶಗಳ ಮೇಲೆ ಸ್ಪಷ್ಟ ಅಭಿಪ್ರಾಯ ನೀಡಬೇಕು ಎಂದು ನೀಡಿದ್ದ ಸೂಚನೆಯನ್ನು ಇಲಾಖಾಧಿಕಾರಿಗಳು ಪಾಲಿಸಿರಲಿಲ್ಲ. ಹೀಗಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ (ಅರಣ್ಯ ಪಡೆ ಮುಖ್ಯಸ್ಥರು) ಬ್ರಿಜೇಶ್‌ ಕುಮಾರ್ ದೀಕ್ಷಿತ್‌ ಅವರಿಗೆ 2024ರ ಜನವರಿ 25ರಂದು ಇಲಾಖೆಯು ಮತ್ತೊಂದು ಪತ್ರ ಬರೆದಿತ್ತು.

 

 

‘ಮನೋಜ್‌ ಕುಮಾರ್‍‌ ಶುಕ್ಲ ಅವರಿಗೆ ಸಂಬಂಧಿಸಿದಂತೆ ಮಾತ್ರ ಅಭಿಪ್ರಾಯ ನೀಡಲಾಗಿದೆ. ಆದರೆ ಎಸ್‌ ಮುತ್ತಯ್ಯ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯವನ್ನು ನೀಡಿಲ್ಲ. 2023ರ ಅಕ್ಟೋಬರ್ 5ರಂದು ಸಹ ಇದೇ ವಿಷಯದ ಕುರಿತು ಅಭಿಪ್ರಾಯ ಕೋರಿತ್ತು. ಆದರೆ ಯಾವುದೇ ಮಾಹಿತಿಯು ಸರ್ಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ,’ ಎಂದು ಪತ್ರದಲ್ಲಿ ಉಲ್ಲೇಖಿಸಿತ್ತು.

 

ಮುತ್ತಯ್ಯ ಅವರು ಬಳ್ಳಾರಿ ವಿಭಾಗದಲ್ಲಿ 2008ರ ಜುಲೈ 18ರಿಂದ 2010ರ ಮೇ 19ರವರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿ ಆಧರಿಸಿ ಇಲಾಖೆ ವಿಚಾರಣೆಗೆ ಸಂಬಂಧಿಸಿದಂತೆ 2014ರ ಜುಲೈ 9ರಿಂದ 2016ರವರೆಗೆ ಇಲಾಖೆ ಮಟ್ಟದಲ್ಲಿ ಪತ್ರ ವ್ಯವಹಾರಗಳು ನಡೆದಿದ್ದವು.

 

 

ಕರ್ನಾಟಕ ಲೋಕಾಯುಕ್ತ ವರದಿಯಲ್ಲಿ ಸಿಸಿಎ ನಿಯಮಾವಳಿಗಳ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಇವರ ವಿರುದ್ಧ ಕ್ರಮ ಕೈಗೊಳ್ಳಲು ವಾಣಿಜ್ಯ ಕೈಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮಧ್ಯೆ ಪತ್ರ ವ್ಯವಹಾರಗಳು ನಡೆದಿದ್ದವು.

 

ಅಲ್ಲದೇ ‘ಮುತ್ತಯ್ಯ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಯೋಗ್ಯ ಪ್ರಕರಣವಾಗಿದೆ,’ ಎಂದು ವಾಣಿಜ್ಯ ಕೈಗಾರಿಕೆ ಇಲಾಖೆಯು ಅಭಿಪ್ರಾಯಪಟ್ಟಿತ್ತು. ಇವರ ವಿರುದ್ಧ ಸಿವಿಲ್‌ ದಾವೆ ಹೂಡಬಹುದು ಎಂದು ಲೋಕಾಯುಕ್ತ ವರದಿಯು ಅಭಿಪ್ರಾಯಪಟ್ಟಿತ್ತು. ನಂತರ ನಡೆದ ಬೆಳವಣಿಗೆಗಳಲ್ಲಿ ಆರ್ಥಿಕ ನಷ್ಟದ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖವಿರದ ಕಾರಣ ಮತ್ತು ಇದರ ಬಗ್ಗೆ ಪ್ರಸ್ತಾಪವೇ ಮಾಡದ ಕಾರಣ ಸಿವಿಲ್‌ ದಾವೆ ಹೂಡಿ ವಸೂಲಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಅಭಿಪ್ರಾಯವೂ ಇಲಾಖಾ ಮಟ್ಟದಲ್ಲಿ ವ್ಯಕ್ತವಾಗಿತ್ತು.

 

 

ಐಎಫ್ಎಸ್ ಅಧಿಕಾರಿ ಎಸ್ ಮುತ್ತಯ್ಯ, ಎಸ್.ಪಿ ರಾಜು, ಐಎಫ್ಎಸ್ ಅಧಿಕಾರಿ ಮನೋಜ್ ಕುಮಾರ್ ಶುಕ್ಲಾ, ಅಕ್ರಮ ಸಾಗಾಣಿಕೆ ಜವಾಬ್ದಾರಿ ಹೊತ್ತಿದ್ದ ರೆಡ್ಡಿ ಆಪ್ತರಾದ ಖಾರಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಅವರ ಹೆಸರನ್ನು ದೋಷಾರೋಪಣೆ ಪಟ್ಟಿಯಲ್ಲಿ ಸೇರಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts