ಬೆಂಗಳೂರು; ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ವ್ಯಾಪ್ತಿಯ ವಿವಿಧೆಡೆ ಒಟ್ಟು 583 ಎಕರೆ 15 ಗುಂಟೆ ಜಮೀನಿನಲ್ಲಿ 776 ನಕಲಿ ಹೆಸರುಗಳನ್ನು ಸೇರಿಸಿರುವುದನ್ನು ಕೆಎಎಸ್ ಅಧಿಕಾರಿ ಸಂಗಪ್ಪ ನೇತೃತ್ವದ ತನಿಖಾ ತಂಡವು ಪತ್ತೆ ಹಚ್ಚಿದೆ. ಈ ಸಂಬಂಧ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.
ಮಳವಳ್ಳಿ ತಾಲೂಕಿನಲ್ಲಿ ವಿವಿಧ ಗೋಮಾಳ ಜಮೀನು, ಹುಲ್ಲುಬನ್ನಿ, ಗುಂಡುತೋಪು ಮತ್ತು ಹಲವು ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ, ಪಹಣಿ ಸೃಷ್ಟಿಸಲಾಗಿದೆ ಎಂದು ಖುದ್ದು ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಕುರಿತು ಸರ್ಕಾರವು ತನಿಖಾ ತಂಡವನ್ನು ರಚಿಸಿತ್ತು.
ಇದೀಗ ತನಿಖಾ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿ ಆಧರಿಸಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸಂಬಂಧ ವರದಿ ಸಲ್ಲಿಸಬೇಕು ಎಂದು 2025ರ ಮಾರ್ಚ್ 3ರಂದು ಕಂದಾಯ ಇಲಾಖೆಗೆ ನಿರ್ದೇಶನ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿರುವ ಮಳವಳ್ಳಿಯಲ್ಲಿ ತಹಶೀಲ್ದಾರ್ ಅಗಿ ಕಾರ್ಯನಿರ್ವಹಿಸಿದ್ದ ಎಂ ವಿಜಯಣ್ಣ, ಕುಮಾರ ಬಿ ವಿ, ಶಿರಸ್ತೆದಾರರಾದ ಅಶೋಕ್ ಕುಮಾರ್ ಎಚ್ ಎಂ, ಪಾಂಡವಪುರ ತಾಲೂಕು ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ಪ್ರಕಾಶ್ ಜಿ ಎಂ, ಮಳವಳ್ಳಿ ತಾಲೂಕಿನ ಭೂಮಿ ಕೇಂದ್ರದ ಗ್ರಾಮ ಆಡಳಿತಾಧಿಕಾರಿ ಕಲಾವತಿ, ರಂಜಿತಾ, ರಾಜಸ್ವ ನಿರೀಕ್ಷಕ ಚಂದ್ರ, ಬಸವಲಿಂಗೇಗೌಡ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಮಾಡಲು ಇಲಾಖೆಯು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಮಳವಳ್ಳಿ ತಾಲೂಕಿನಲ್ಲಿ ಕಳೆದ 5 ವರ್ಷಗಳಲ್ಲಿ ಸರ್ಕಾರಿ ಜಮೀನುಗಳಿಗೆ ಅಕ್ರಮವಾಗಿ ಖಾತೆ, ಪಹಣಿ ಸೃಷ್ಟಿಸಲಾಗಿದೆ. ವಿವಿಧ ಗೋಮಾಳ ಜಮೀನು, ಹುಲ್ಲುಬನ್ನಿ, ಗುಂಡು ತೋಪು ಹಾಗೂ ಹಲವು ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ, ಪಹಣಿ ಸೃಷ್ಟಿಸಿ ವರ್ಗಾವಣೆ ಮಾಡಲಾಗಿತ್ತು. ಒಟ್ಟು 400 ಮ್ಯುಟೇಷನ್‌ಗಳಲ್ಲಿ ಅರ್ಜಿ ದಾಖಲು, ಲಾಗಿನ್ ಅನುಮೋದನೆ ನೀಡಿ ಪಹಣಿಯಲ್ಲಿ 776 ನಕಲಿ ಹೆಸರುಗಳನ್ನು ಸೇರಿಸಲಾಗಿತ್ತು ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ಈ ಪಟ್ಟಿಯಲ್ಲಿ ಕೇವಲ ಹೊಸದಾಗಿ ಹೆಸರನ್ನು ಸೇರಿಸಿರುವ ಪ್ರಕರಣಗಳನ್ನು ಮಾತ್ರ ಗುರುತಿಸಲಾಗಿದೆ. ವಿಸ್ತೀರ್ಣ ಬದಲಾವಣೆ ಇಲ್ಲದೇ ಅನಧಿಕೃತವಾಗಿ ಖಾಸಗಿ ಹೆಸರನ್ನು ಬದಲಾವಣೆ ಮಾಡಿರುವುದು, ಹಕ್ಕು ಮತ್ತು ಋಣಗಳನ್ನು ಅನಧಿಕೃತವಾಗಿ ಸೇರಿಸಲಾಗಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಒಟ್ಟು 583 ಎಕರೆ 15 ಗುಂಟೆ ಪಹಣಿಯು ಅನಧಿಕೃತವಾಗಿ ನಮುದಾಗಿದೆ. ಇವೇ ಸರ್ವೆ ನಂಬರ್‌ಗಳಲ್ಲಿ ನಕಲಿ ಪೋಡಿ ಅರ್ಜಿ ದಾಖಲಿಸಲಾಗಿದೆ. ನಕಲಿಯಾಗಿ ಸೇರಿಸಿರುವ ಹೆಸರುಗಳನ್ನು ಬೇರೆ ಸರ್ಕಾರಿ ಸರ್ವೆ ನಂಬರ್‌ಗಳಿಗೆ ವರ್ಗಾಯಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವ್ಯಾವ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ತನಿಖಾ ವರದಿಯಲ್ಲಿ ವಿವರಿಸಿದೆ.
ಲಾಗಿನ್ ನೀಡಿರುವ ಅಧಿಕಾರಿಗಳನ್ನೂ ಸಹ ಕಕ್ಷಿದಾರರು ಎಂದು ಗುರುತಿಸಬೇಕು. ಕಡತ ಲಭ್ಯವಿಲ್ಲದ ಎಲ್ಲಾ ಪ್ರಕರಣಗಳನ್ನು ಅನಧಿಕೃತ ಎಂದು ವರದಿಯಲ್ಲಿ ನಮೂದಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಈಗಿನ ವಿಷಯ ನಿರ್ವಾಹಕರು, ಅಭಿಲೇಖಾಯ ಸಿಬ್ಬಂದಿ ಕಡತವನ್ನು ಸರಿಯಾಗಿ ಹುಡುಕದೇ ಲಭ್ಯವಿಲ್ಲ ಎಂದು ವರದಿ ನೀಡಿರುವ ಸಾಧ್ಯತೆ ಇದೆ.
ಇನ್ನೂ ಕೆಲವು ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಗೆ ಸಿವಿಲ್ ನ್ಯಾಯಾಲಯಕ್ಕೆ ಕಡತವನ್ನು ರವಾನಿಸುವ ಸಾಧ್ಯತೆ ಇದೆ ಎಂದು ತನಿಖಾ ವರದಿಯಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.
‘ಯಾವುದೇ ದಾಖಲೆಗಳಿಲ್ಲದೇ ಹೆಸರುಗಳನ್ನು ದಾಖಲಿಸುವುದು ಸರ್ಕಾರಿ ನೌಕರರಿಗೆ ತರವಲ್ಲದ ವರ್ತನೆ ಆಗಿದೆ. ಇದು ಭಾರತೀಯ ನ್ಯಾಯ ಸಂಹಿತೆ 201, 340, 336ರಂತೆ ಅಪರಾಧವಾಗಿರುತ್ತದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 192 ಎ ರಂತೆ ಸಹ ಇದು ಅಪರಾಧವಾಗಿದೆ. ಆದ್ದರಿಂದ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ಹಾಗೂ ಫಲಾನುಭವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಬಹುದು,’ ಎಂದು ತನಿಖಾ ತಂಡವು ಶಿಫಾರಸ್ಸು ಮಾಡಿದೆ.
ತಾಲೂಕಿನ ವಿವಿಧೆಡೆ ಗೋಮಾಳ, ಹುಲ್ಲಬನ್ನಿ, ಗುಂಡು ತೋಪು ಸೇರಿದಂತೆ ಸಾವಿರಾರು ಎಕರೆ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಖಾತೆ ಸೃಷ್ಟಿಸಿ ಬಲಾಢ್ಯರಿಗೆ ಖಾತೆ ಮಾಡಿಕೊಟ್ಟಿದೆ ಎಂದು ಶಾಸಕ ಪಿ ಎಂ ನರೇಂದ್ರಸ್ವಾಮಿ ಮತ್ತು ಸಾರ್ವಜನಿಕರು ದೂರು ನೀಡಿದ್ದರು.
ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೇಯ ವಿವಿಧ ಹಂತದ ಅಧಿಕಾರಿಗಳು, ನೌಕರರು ಶಾಮೀಲಾಗಿ ಖಾಸಗಿ ವ್ಯಕ್ತಿಗಳಿಗೆ ಹಕ್ಕು ಬದಲಾವಣೆ ಮಾಡುವ ರುದ್ದೇಶದಿಂದ ಪೊಡಿ ಮಾಡಲಾಗಿತ್ತು. ಐದುವ ರ್ಷಗಳಲ್ಲಿ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಿಗೆ ಹಾಗೂ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿತ್ತು. ಅಕ್ರಮ ಖಾತೆ ಆಡಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿರುವುದನ್ನು ಸ್ಮರಿಸಬಹುದು.