ಬೆಂಗಳೂರು; ಮುಸ್ಲಿಂ ಸಮುದಾಯಕ್ಕಿದ್ದ 2 ಬಿ ಮೀಸಲಾತಿಯನ್ನು ಶೇ. 10ಕ್ಕೆ ಹೆಚ್ಚಿಸಬೇಕು ಎಂದು ಸಲ್ಲಿಕೆಯಾಗಿದ್ದ ಕೋರಿಕೆಯನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವುದು ಇದೀಗ ಬಹಿರಂಗವಾಗಿದೆ.
ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಶೇ. 4ರಷ್ಟು ಮೀಸಲಾತಿ ನೀಡುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ತರಲು ಹೊರಟಿರುವ ಸರ್ಕಾರದ ಮೇಲೆ ಪ್ರತಿಪಕ್ಷಗಳು ಮುಗಿ ಬಿದ್ದಿವೆ.
ಇದರ ಬೆನ್ನಲ್ಲೇ ಮುಸ್ಲಿಂರ ಮೀಸಲಾತಿ ಪ್ರಮಾಣವನ್ನು ಶೇ. 10ಕ್ಕೆ ಹೆಚ್ಚಿಸುವ ಸಂಬಂಧ ನಿಯಮಾನುಸಾರ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮತ್ತು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗೆ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಇಂಜಿನಿಯರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಫಾರೂಕ್ ಜುನೈದ್ ಎಂಬುವರು 2024ರ ಜುಲೈ 11ರಂದು ಸಚಿವರಿಗೆ ಕೋರಿದ್ದರು. ಈ ಪತ್ರವನ್ನಾಧರಿಸಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಹಸನಸಾಹೇಬ ಎಂ ಟಿ ಅವರು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದರು. ಈ ಟಿಪ್ಪಣಿ ಆಧರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದರು.
ಈ ಎರಡೂ ಪತ್ರಗಳೂ ‘ದಿ ಫೈಲ್’ಗೆ ಲಭ್ಯವಾಗಿವೆ.
ಹಿಂದಿನ ಬಿಜೆಪಿ ಸರ್ಕಾರವು ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 2 ಬಿ ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಇದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿತ್ತು. ಹಿಂದಿನ ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ಮುಸ್ಲಿಂ ಸಮುದಾಯವು ತೀವ್ರವಾಗಿ ವಿರೋಧಿಸಿತ್ತು. ಇದೀಗ 2 ಬಿ ಮೀಸಲಾತಿ ಪ್ರಮಾಣವನ್ನು ಶೇ.10ಕ್ಕೆ ಹೆಚ್ಚಿಸಬೇಕು ಎಂದು ಸಲ್ಲಿಕೆಯಾಗಿರುವ ಕೋರಿಕೆಯನ್ನು ನಿಯಮಾನುಸಾರ ಪರಿಶೀಲಿಸಬೇಕು ಎಂದು ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಆಡಳಿತ ಪಕ್ಷದ ವಿರುದ್ಧದ ಟೀಕೆಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ಸಂಘದ ಕೋರಿಕೆಯಲ್ಲೇನಿದೆ?
ಮೀಸಲಾತಿ ಪ್ರಮಾಣವನ್ನು ಶೇ.10ಕ್ಕೆ ಹೆಚ್ಚಳ ಮಾಡಬೇಕು ಎಂದು ಕೋರಿದ್ದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಇಂಜಿನಿಯರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಫಾರೂಕ್ ಜುನೈದ್ ಅವರು ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರಿಗೆ 202ರ ನವೆಂಬರ್ 7ರಂದು ಪತ್ರ ಬರೆದಿದ್ದರು.
‘ಇತ್ತೀಚೆಗೆ 2 ಬಿ ಮುಸ್ಲಿಂ ಮೀಸಲಾತಿಯನ್ನು ತೆಗೆದುಹಾಕಿರುವುದು ಬಾಧಿತ ಸಮುದಾಯದಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಇದು ಪ್ರಾತಿನಿಧ್ಯದಲ್ಲಿ ಸಂಭಾವ್ಯ ಅಸಮತೋಲನಕ್ಕೆ ಕಾರಣವಾಗುತ್ತದೆ. 2 ಬಿ ಮುಸ್ಲಿಂ ಮೀಸಲಾತಿಯನ್ನು ಶೇಕಡಾ 10 ರಷ್ಟು ಹೆಚ್ಚಿಸುವ ಮೂಲಕ ಪುನಃಸ್ಥಾಪಿಸಲು ನೀವು ಮಧ್ಯ ಪ್ರವೇಶ ಮಾಡಬೇಕು. ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವುದರಿಂದ ಸಮುದಾಯಕ್ಕೆ ಹೆಚ್ಚು ಪ್ರಯೋಜನವಾಗಲಿದೆ. ಅಲ್ಲದೇ ಅಸಮತೋಲನವನ್ನು ನಿವಾರಣೆ ಮಾಡಿದಂತಾಗುತ್ತದೆ,’ ಎಂದು ಮನವಿಯಲ್ಲಿ ಕೋರಿದ್ದರು.
ಹಾಗೆಯೆ ಇದೇ ಮನವಿಯಲ್ಲಿ ಸೂಪರ್ ನ್ಯೂಮರರಿ ಕೋಟಾವನ್ನು ಸಹ ಶೇ.5ರಿಂದ 7ಕ್ಕೆ ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಕೋರಿದ್ದರು.
ನಮ್ಮ ರಾಜ್ಯದ ಪ್ರಗತಿಗೆ ಎಂಜಿನಿಯರಿಂಗ್ ಪದವಿ ಬಹಳ ಮುಖ್ಯ. ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ಕನಸುಗಳನ್ನು ಮುಂದುವರಿಸಲು ಪ್ರಯೋಜನಕಾರಿ ಅವಕಾಶವನ್ನು ಒದಗಿಸಲು ಎಸ್‌ಎನ್‌ಕ್ಯೂ ಕೋಟಾವನ್ನು ಶೇ. 5 ರಿಂದ 7 ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕೋಟಾ ಪ್ರಮಾಣದಲ್ಲಿ ಹೆಚ್ಚಳವಾದಲ್ಲಿ ಮಹತ್ವಾಕಾಂಕ್ಷಿ ಎಂಜಿನಿಯರ್‌ಗಳನ್ನು ಸಬಲೀಕರಣಗೊಳಿಸುತ್ತದೆ. ನಮ್ಮ ರಾಜ್ಯದ ಒಟ್ಟಾರೆ ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದೂ ಪ್ರಸ್ತಾವಿಸಿರುವುದು ಗೊತ್ತಾಗಿದೆ.
ಸಚಿವರ ವಿಶೇಷ ಕರ್ತವ್ಯಾಧಿಕಾರಿ ಟಿಪ್ಪಣಿಯಲ್ಲೇನಿದೆ?
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಇಂಜಿನಿಯರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಫರೂಕ್ ಜುನೈದ್ ಅವರು ಇಂಜಿನಿಯರಿಂಗ್‌ನಲ್ಲಿ ಸೂಪರ್ ನ್ಯೂಮರರಿ ಕೋಟಾವನ್ನು ಶೇ.5ರಿಂದ 7ಕ್ಕೆ ಹಾಗೂ ಮುಸ್ಲಿಂ ಬಾಂಧವರಿಗೆ 2 ಬಿ ಮೀಸಲಾತಿಯನ್ನು ಶೇ. 10ಕ್ಕೆ ಹೆಚ್ಚಿಸುವ ಬಗ್ಗೆ ಮನವಿ ಮಾಡಿರುತ್ತಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಚಿವರಿಂದ ನಿರ್ದೇಶಿತನಾಗಿದ್ದೇನೆ ಎಂದು ವಿಶೇಷ ಕರ್ತವ್ಯಾಧಿಕಾರಿ ಹಸನಸಾಹೇಬ ಎಂ ಟಿ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸರ್ಕಾರದ ಕಾರ್ಯದರ್ಶಿಗಳಿಗೆ 2024ರ ಆಗಸ್ಟ್ 8ರಂದು ಟಿಪ್ಪಣಿ ಹೊರಡಿಸಿರುವುದು ತಿಳಿದು ಬಂದಿದೆ.
ಈ ಟಿಪ್ಪಣಿಯನ್ನಾಧರಿಸಿ 2024ರ ಆಗಸ್ಟ್ 30ರಂದು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಹೊರಡಿಸಿದ್ದರು.
‘ಈ ಟಿಪ್ಪಣಿಯಲ್ಲಿನ ವಿಷಯವು ತಮ್ಮ ಇಲಾಖೆಗೆ ಸಂಬಂಧಪಟ್ಟಿದೆ. ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕೈಗೊಂಡ ಕ್ರಮದ ಬಗ್ಗೆ ಮನವಿದಾರರಿಗೆ ಮಾಹಿತಿ ನೀಡಬೇಕು,’ ಎಂದು ಅನಧಿಕೃತ ಟಿಪ್ಪಣಿಯಲ್ಲಿ ಕೋರಿರುವುದು ಗೊತ್ತಾಗಿದೆ.
ಮುಸ್ಲಿಮರಿಗೆ ಹಿಂದುಳಿದ ವರ್ಗದ ಪಟ್ಟಿಯಲ್ಲಿ 2 ಬಿ ಅಡಿಯಲ್ಲಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಲಾಗಿದೆ. ಈ ಮೀಸಲಾತಿ ಪ್ರಮಾಣವನ್ನು 2ಡಿ ವರ್ಗದಲ್ಲಿ ಬರುವ ವೀರಶೈವ ಲಿಂಗಾಯತರಿಗೆ ಶೇ.2ರಷ್ಟು ಹಾಗೂ 2ಸಿ ಅಡಿಯಲ್ಲಿರುವ ಒಕ್ಕಲಿಗ ಜನಾಂಗಗಕ್ಕೆ ಶೇ.2ರಷ್ಟು ಹಂಚಿಕೆ ಮಾಡಲಾಗಿತ್ತು. ಇದರಿಂದಾಗಿ ಹೊಸದಾಗಿ ಸೃಜಿಸಲಾದ ಪ್ರವರ್ಗ 2ಡಿ ಅಡಿಯಲ್ಲಿ ಲಿಂಗಾಯತರಿಗೆ ಶೇ.5 ರಿಂದ ಶೇ.7ಕ್ಕೆ ಹಾಗೂ 2ಸಿ ಅಡಿಯಲ್ಲಿ ಒಕ್ಕಲಿಗರಿಗೆ ಶೇ.4ರಿಂದ 6ಕ್ಕೆ ಮೀಸಲಾತಿಯನ್ನು ಹೆಚ್ಚಿಸಲಾಗಿತ್ತು.
ಅದೇ ರೀತಿ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ನೀಡುವ ಮೀಸಲಾತಿಯಲ್ಲಿ ಮುಸ್ಲಿಮರನ್ನು ಸೇರ್ಪಡೆ ಮಾಡಲಾಗುವುದು ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು.
ಅದೇ ರೀತಿ ‘ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇನ್ನು ಮುಂದೆ 2ಬಿ ಪ್ರವರ್ಗ ಇರುವುದಿಲ್ಲ. 2ಬಿ ಎಂದರೆ ಇದುವರೆಗೆ ಧಾರ್ಮಿಕ ಅಲ್ಪಸಂಖ್ಯಾತರಿಗೆ(ಮುಸ್ಲಿಮರು) ಇದ್ದ ಮೀಸಲಾತಿ. ಮುಂದೆ ಪ್ರವರ್ಗ 2 (ಅತ್ಯಂತ ಹೆಚ್ಚು ಹಿಂದುಳಿದವರು), 2ಎ (ಹಿಂದುಳಿದವರು), 2ಬಿ (ಅಲ್ಪಸಂಖ್ಯಾತರು) ಹಾಗೂ 3ಎ (ಒಕ್ಕಲಿಗ ಮತ್ತು ಇತರರು) ಮತ್ತು 3 ಬಿ (ವೀರಶೈವ ಪಂಚಮಸಾಲಿ ಮತ್ತು ಇತರರು) ಇತ್ತು. ಈಗ 2, 2ಎ, 2ಸಿ (ಒಕ್ಕಲಿಗ ಮತ್ತು ಇತರರು) ಮತ್ತು 2 ಡಿ (ವೀರಶೈವ ಪಂಚಮಸಾಲಿ ಮತ್ತು ಇತರರು) ಎಂಬ ಮೀಸಲಾತಿಗಳು ಇರಲಿವೆ,’ ಎಂದು ವಿವರಿಸಿದ್ದರು.
ಹೊಸ ಲೆಕ್ಕಾಚಾರ ಪ್ರಕಾರ ಒಕ್ಕಲಿಗ ಮೀಸಲಾತಿ ಪ್ರಮಾಣ ಶೇ.4ರಿಂದ 6ಕ್ಕೇರಲಿದೆ. ವೀರಶೈವ ಪಂಚಮಸಾಲಿ ಮೀಸಲಾತಿ ಪ್ರಮಾಣ 5ರಿಂದ 7 ಶೇಕಡಾಕ್ಕೇರಲಿದೆ ಎಂದ ಅವರು, ಧಾರ್ಮಿಕ ಸಮುದಾಯದವರಿಗೆ ಹಿಂದುಳಿದ ವರ್ಗದ ಅಡಿಯಲ್ಲಿ ಮೀಸಲಾತಿ ನೀಡಲು ಅವಕಾಶವಿಲ್ಲ. ಹಾಗಾಗಿ 2 ಬಿ ಅನ್ನು ರದ್ದುಪಡಿಸಲಾಗಿದೆ. ಆದರೂ, ಅವರಿಗೆ ಅನ್ಯಾಯವಾಗಬಾರದು ಎಂದು ಇಡಬ್ಲ್ಯೂಎಸ್ ಕೋಟಾದ ಶೇಕಡ 10ರಷ್ಟು ಮೀಸಲಾತಿ ಗುಂಪಿಗೆ ಸೇರ್ಪಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು.
ಧಾರ್ಮಿಕ ಅಲ್ಪಸಂಖ್ಯಾತರಿಗೆ 7 ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಇಲ್ಲ. 2ಬಿ ಅಡಿ ಮೀಸಲಾತಿಯೂ ನೀಡಿಲ್ಲ. ಸ್ವಾತಂತ್ರ್ಯ ನಂತರ ಇಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕಾಲ ಕಾಲಕ್ಕೆ ಹಲವು ನಿರ್ಣಯ ಕೈಗೊಂಡು ಹಲವು ಸಮಿತಿಗಳನ್ನು ರಚಿಸಲಾಗಿದೆ. ಆದರೆ ಸಮಿತಿಗಳ ಶಿಫಾರಸುಗಳನ್ನು ಜಾರಿ ಮಾಡಿರಲಿಲ್ಲ. ಇನ್ನೂ, ಹಿಂದುಳಿದ ವರ್ಗದಲ್ಲಿ ಒಂದೇ ವರ್ಗೀಕರಣ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವರಿಸಿದ್ದನ್ನು ಸ್ಮರಿಸಬಹುದು.
ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಸಂಬಂಧ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರು ಸಹ ಚರ್ಚಿಸಿದ್ದರು.
ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ; ಸಚಿವ ಹೆಚ್ ಕೆ ಪಾಟೀಲ್ ಲಾಗಿನ್‌ನಲ್ಲೇ ಇದೆ ಕಡತ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವ ದಾಖಲೆ ಬಹಿರಂಗವಾಗಿದ್ದರೂ ಸಹ ಇದೊಂದು ಹೊಸ ಸುಳ್ಳು ಎಂದು ಮುಖ್ಯಮಂತ್ರಿ ಸಚಿವಾಲಯದ ಹೆಸರಿನಲ್ಲಿ ಸಿಎಂ ಮೀಡಿಯಾ ಗ್ರೂಪ್ 1 ನಲ್ಲಿ ನೀಡಿದ್ದ ಸ್ಪಷ್ಟನೆಯು ಚರ್ಚೆಗೆ ಗ್ರಾಸವಾಗಿತ್ತು.
ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಸ್ತಾವ; ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳಿದರೇ ಸಿಎಂ?
ಗುತ್ತಿಗೆ ಕಾಮಗಾರಿಗಳಲ್ಲಿ 2 ಕೋಟಿ ವರೆಗೆ ಎಸ್‌ಸಿ ಮತ್ತು ಎಸ್ ಟಿ ಜನಾಂಗಕ್ಕೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿದ್ದರು. ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ; ಮುಖ್ಯಮಂತ್ರಿ ಅನುಮೋದನೆ, ಕಾಯ್ದೆ ತಿದ್ದುಪಡಿಗೆ ಚಾಲನೆ
‘ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯದ ಪ್ರವರ್ಗ 2 ಬಿ ಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸಿಲ್ಲ. ಈ ಸೌಲಭ್ಯವನ್ನು ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಿ ಸೂಕ್ತ ಆದೇಶ ನೀಡಬೇಕು,’ ಎಂದು ಮನವಿಯಲ್ಲಿ ಕೋರಿದ್ದರು.
ಈ ಪತ್ರವನ್ನು ಪರಿಶೀಲಿಸಿ ಮಂಡಿಸಿ ಎಂದು ಅದೇ ದಿನದಂದು ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಈ ಪತ್ರದ ಕುರಿತು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿದ್ದನ್ನು ಸ್ಮರಿಸಬಹುದು.