ಬೆಂಗಳೂರು; ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ವಿವಿಧ ಸರ್ವೆ ನಂಬರ್‍ಗಳಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತಿತರರು ಅಕ್ರಮ ಮತ್ತು ಕಾನೂನುಬಾಹಿರವಾಗಿ ಜಮೀನು ಹೊಂದಿದ್ದಾರೆ ಎಂಬ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು, ಹೊಸ ಸರ್ವೆ ದಾಖಲೆಗಳೊಂದಿಗೆ ಸಂಕ್ಷಿಪ್ತ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿದೆ.
ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಹೊಸ ಸರ್ವೆ ದಾಖಲೆಗಳನ್ನಾಧರಿಸಿ 2025ರ ಮಾರ್ಚ್ 6ರಂದು ಪ್ರಾತ್ಯಕ್ಷಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಇದರೊಂದಿಗೆ ಅತಿಕ್ರಮಣದಾರರ ಪಟ್ಟಿಯನ್ನೂ ಒದಗಿಸಿದೆ.
ಸರ್ವೆ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ಇರುವ ಒಟ್ಟಾರೆ 110.32 ಎಕರೆಯಲ್ಲಿ 11.28 ಎಕರೆ ಅತಿಕ್ರಮಣವಾಗಿದೆ ಎಂದು ಪ್ರಾತ್ಯಕ್ಷಿಕೆಯಲ್ಲಿ ವಿವರಿಸಿದೆ.
2025ರ ಫೆ.17 ಮತ್ತು 18ರಂದು ನಡೆದ ಹೊಸ ಸರ್ವೆ ದಾಖಲೆಗಳನ್ನಾಧರಿಸಿ ಅತಿಕ್ರಮಣಕ್ಕೊಳಗಾಗಿರುವ ಜಮೀನಿನ ವಿಸ್ತೀರ್ಣ ಮತ್ತು ಅದರ ಅನುಭವದಾರರ ವಶದಲ್ಲಿರುವ ಜಮೀನಿನ ವಿಸ್ತೀರ್ಣ ಪಟ್ಟಿಯನ್ನೂ ಒದಗಿಸಿದೆ. ಆರ್‌ಟಿಸಿಯಲ್ಲಿ ನಮೂದಾಗಿರುವ ವಿಸ್ತೀರ್ಣ ಮತ್ತು ಅನುಭವದಲ್ಲಿರುವ ವಿಸ್ತೀರ್ಣಕ್ಕೂ ತಾಳೆ ಮಾಡಿದೆ. ಅತಿಕ್ರಮಣದಾರರ ಪಟ್ಟಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಹೆಸರು ಕೂಡ ಇದೆ.
ಸರ್ವೆ ನಂಬರ್ 8ರ 8/X11 ರಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರ ಹೆಸರಿನಲ್ಲಿ 8.17 ಎಕರೆಗೆ ಆರ್‍ಟಿಸಿ ಇದೆ. ಆದರೆ 12.23 ಎಕರೆ ಅನುಭವದಲ್ಲಿದ್ದಾರೆ. ಅರ್‍ಟಿಸಿಯಲ್ಲಿನ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ವಿಸ್ತೀರ್ಣ 4.06 ಎಕರೆಯಲ್ಲಿ ಅನುಭವದಲ್ಲಿದ್ದಾರೆ.
ಸರ್ವೆ ನಂಬರ್ 9 ರಲ್ಲಿ 9/1ರಲ್ಲಿ ಆರ್‍ಟಿಸಿ ಪ್ರಕಾರ ಸರ್ಕಾರಿ ಊರು ದನಗಳಿಗೆ ಎಂದು ನಮೂದಾಗಿದೆ. ಆದರೆ ಇದರಲ್ಲಿ 1.09 ಎಕರೆ, ಸರ್ವೆ ನಂಬರ್ 9/11ರಲ್ಲಿ 0.10 ಗುಂಟೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಅನುಭವದಲ್ಲಿದ್ದಾರೆ ಎಂದು ಪ್ರಾತ್ಯಕ್ಷಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಒಟ್ಟಾರೆ 5.25 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಅನುಭವದಲ್ಲಿದ್ದಾರೆ ಎಂದು ಹೇಳಿರುವ ತಂಡವು, ಇದಕ್ಕೆ ಸರ್ವೆ ದಾಖಲೆಗಳನ್ನು ಪ್ರಾತ್ಯಕ್ಷಿಕೆಯಲ್ಲಿ ಒದಗಿಸಿದೆ. ಆದರೆ ಆರ್‌ಟಿಸಿಯಲ್ಲಿದ್ದ ವಿಸ್ತೀರ್ಣಕ್ಕಿಂತಲೂ ಹೆಚ್ಚಿಗೆ ಅನುಭವದಲ್ಲಿರುವ ಹೆಚ್ಚುವರಿ ಜಮೀನು, ಗೋಮಾಳವೋ, ಇನಾಂ ಭೂಮಿಯೋ ಅಥವಾ ಸರ್ಕಾರಿ ಜಮೀನೋ ಎಂಬ ಬಗ್ಗೆ ಉಲ್ಲೇಖಿಸಿಲ್ಲ. ಕಾನೂನುಬಾಹಿರವಾಗಿ ಅನುಭವದಲ್ಲಿದ್ದಾರೆಯೇ ಎಂಬ ಬಗ್ಗೆ ಯಾವುದೇ ವಿವರಣೆಗಳಿಲ್ಲ.
ಇನ್ನುಳಿದಂತೆ ಸರ್ವೆ ನಂಬರ್ 7 ಮತ್ತು 8ರ ವಿವಿಧ ಹಿಸ್ಸಾಗಳಲ್ಲಿಯೂ ಅತಿಕ್ರಮಣವಾಗಿದೆ. ಜಿ ಕೆ ಗಾಯತ್ರಿ, ಜಿ ಕೆ ಪಾರಿಜಾತ, ಎಂ ಎಚ್ ಮಂಚಿಗೌಡ, ಸೈಯದ್ ನೂರ್ ಅಹ್ಮದ್, ಕೆ ಹೆಚ್ ಚನ್ನಪ್ಪ, ಕೆ ಸುಭಾಷ್, ಸುನಂದಮ್ಮ, ಮಂಜುನಾಥ್, ಕಾಳೇಗೌಡ,ಚಾಮರಾಜೇಗೌಡ, ಲಕ್ಷ್ಮಮ್ಮ ಎಂಬುವರ ಹೆಸರೂ ಅತಿಕ್ರಮಣದಾರರ ಪಟ್ಟಿಯಲ್ಲಿದೆ.
ಅತಿಕ್ರಮಣಕ್ಕೊಳಗಾಗಿದೆ ಎಂದು ಹೇಳಲಾಗಿರುವ ಜಮೀನಿನ ಕುರಿತು ದಾಖಲೆಗಳು, ಸಾಂದರ್ಭಿಕ ಸಾಕ್ಷ್ಯ, ಪುರಾವೆಗಳು, ಮಂಜೂರಾತಿ ಆದೇಶಗಳು, ಗೋಮಾಳ ಪ್ರಮಾಣವನ್ನು ತಗ್ಗಿಸಿರುವುದು, ಮ್ಯುಟೇಷನ್, ಆರ್‍ಟಿಸಿ ದಾಖಲೆಗಳನ್ನಾಧರಿಸಿ ಪ್ರಾತ್ಯಕ್ಷಿಕೆ ತಯಾರಿಸಿರುವುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.
ಜಮೀನಿನ ಗುರುತುಗಳು, ಪೂರ್ವಜರು, ಉತ್ತರಾಧಿಕಾರ ಹೊಂದಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದರ ಕುರಿತು ಕಾರ್ಯ ಯೋಜನೆಯನ್ನು ಸಿದ್ಧಪಡಿಸಿತ್ತು. ಈ ಜಮೀನಿಗೆ ಹೊಂದಿಕೊಂಡಿರುವ ನೀರಿನ ಮೂಲಗಳು (ಜಲಕಾಯ), ಅರಣ್ಯ, ರಸ್ತೆ, ನಾಲೆ, ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಮೂಲ ಸರ್ವೆ ಮತ್ತು ಇದಕ್ಕೆ ಪೂರಕವಾಗಿರುವ ಸದ್ಯದ ಆರ್‍ಟಿಸಿ ದಾಖಲೆಗಳನ್ನು ಪರಿಶೀಲಿಸಿರುವುದು ಗೊತ್ತಾಗಿದೆ.
ಸರ್ವೆ ನಂಬರ್ 8, 9, 10, 16, 17 ಮತ್ತು 79ಕ್ಕೆ ಸಂಬಂಧಿಸಿದಂತೆ ಮಂಜೂರಿದಾರರಿಗೆ ಸಂಬಂಧಿಸಿದ ಮೂಲ ದಾಖಲೆಗಳು, ವಹಿವಾಟು, ಮಂಜೂರಾಗಿರುವ ದಾಖಲೆಗಳು, ನೋಂದಣಿ ಪತ್ರಗಳು, ಎಂ ಆರ್ ಪ್ರತಿಗಳನ್ನು ಒಟ್ಟುಗೂಡಿಸಿಕೊಂಡಿರುವ ಎಸ್‌ಐಟಿಯು ಇದನ್ನು ಕ್ರೋಢಿಕರಿಸಿದೆ. ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಕಾಲಮಿತಿಯೊಳಗೆ ಸಲ್ಲಿಸಬೇಕಿರುವ ಕಾರಣ ಈ ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸುತ್ತಿರುವುದು ತಿಳಿದು ಬಂದಿದೆ.
ಪ್ರತಿ ಮಂಜೂರಿದಾರನಿಗೆ ಸಂಬಂಧಿಸಿದಂತೆ ಸರ್ವೇ ನಂಬರ್‍ವಾರು ಪ್ರತ್ಯೇಕ ಕಡತವನ್ನು ಸಿದ್ಧಪಡಿಸಿರುವ ಎಸ್‌ಐಟಿಯು ಈಗಾಗಲೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಈ ದಾಖಲೆಗಳನ್ನು ಫೋರೆನ್ಸಿಕ್ ಮೂಲಕ ತನಿಖೆಯನ್ನು ನಡೆಸಿದೆ. ಮ್ಯುಟೇಷನ್ ರಿಜಿಸ್ಟರ್, ದರಖಾಸ್ತು ರಿಜಿಸ್ಟರ್‍ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದೆ. ಈ ವರದಿಯು 2025ರ ಏಪ್ರಿಲ್ 5ರ ಹೊತ್ತಿಗೆ ಕೈ ಸೇರಬಹುದು ಎಂದು ನಿರೀಕ್ಷಿಸಿರುವುದು ಗೊತ್ತಾಗಿದೆ.
ನೋಂದಣಿ ಮತ್ತು ಕರಾರು ಪತ್ರಗಳನ್ನು ಕ್ರೋಢೀಕರಿಸಿರುವ ಎಸ್ಐಟಿಯು ಈ ದಾಖಲೆಗಳನ್ನು ಸಬ್ ರಿಜಿಸ್ಟ್ರಾರ್ ಮೂಲಕ ಪರಿಶೀಲನೆಗೆ ಕಳಿಸಿದೆ. ಈ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ. ಇದಿನ್ನೂ ಪರಿಶೀಲನೆ ಹಂತದಲ್ಲಿದೆ. ಈ ಜಮೀನಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂಧಾಯ ಕಾಯ್ದೆ 1964 ಮತ್ತು 1978ರ ಪಿಟಿಸಿಎಲ್ ಕಾಯ್ದೆ ಸೆಕ್ಷನ್ 5(1) ಮತ್ತು 5(2) ಆಧರಿಸಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತತು ತಹಶೀಲ್ದಾರ್ ಅವರು ಹೊರಡಿಸಿರುವ ಆದೇಶಗಳನ್ನು ಕಂದಾಯ ಆಯುಕ್ತಾಲಯದ ಪ್ರತ್ಯೇಕ ತಂಡವು ಪರಿಶೀಲನೆ ನಡೆಸುತ್ತಿರುವುದನ್ನು ಪ್ರಾತ್ಯಕ್ಷಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಸರ್ವೆ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ಒಟ್ಟು 110.32 ಎಕರೆ ಇದೆ. ಈ ಪೈಕಿ 3.38 ಎಕರೆಯು ಎ ಖರಾಬಿದೆ. 88 ಎಕರೆ 26 ಗುಂಟೆ ಬಿ ಖರಾಬ್ ಇದೆ. ಇನ್ನುಳಿದಂತೆ 18.08 ಎಕರೆ ಇದೆ. ಸರ್ವೆ ನಂಬರ್ 7ರಲ್ಲಿನ 14.22 ಎಕರೆಯಲ್ಲಿ 10.37 ಎಕರೆಗೆ 12 ಮಂದಿ ಆರ್‍ಟಿಸಿ ಹೊಂದಿದ್ದಾರೆ. ಇದೇ ಜಮೀನಿಗೆ ಒಟ್ಟು 7 ಮಂದಿ ಮಂಜೂರಿದಾರರಿದ್ದು ಇದಕ್ಕೆ ಪೋಡಿ ಮಾಡಲಾಗಿದೆ. ಪೋಡಿಯಾದ ನಂತರ 5-35 ಎಕರೆ ಉಳಿದಿದೆ. 8.27 ಎಕರೆಗೆ ಸದ್ಯ ಆಕಾರ್ ಬಂದ್ ಮಾಡಲಾಗಿದೆ.
ಸರ್ವೆ ನಂಬರ್ 8 ರಲ್ಲಿ 29.01 ಎಕರೆಯಲ್ಲಿ 28.03 ಎಕರೆಗೆ 22 ಮಂದಿ ಆರ್‍ಟಿಸಿ ಹೊಂದಿದ್ದಾರೆ. ಸರ್ವೇ ನಂಬರ್ 9ರಲ್ಲಿ 14.23 ಎಕರೆಯಲ್ಲಿ 2.29 ಎಕರೆಗೆ ಒಬ್ಬರು ಆರ್‍ಟಿಸಿ ಹೊಂದಿದ್ದಾರೆ. ಸರ್ವೆ ನಂಬರ್ 10ರಲ್ಲಿ 23.21 ಎಕರೆಯು ಬಿ ಖರಾಬು ಇದೆ. ಇದರಲ್ಲಿ 7 ಎಕರೆ 3 ಗುಂಟೆಗೆ 3 ಮಂದಿ ಆರ್‍ಟಿಸಿ ಹೊಂದಿದ್ದಾರೆ ಎಂದು ಪ್ರಾತ್ಯಕ್ಷಿಕೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಸರ್ವೆ ನಂಬರ್ 16ರಲ್ಲಿ 26 ಎಕೆರೆ 06 ಗುಂಟೆ ಇದ್ದು ಇದರಲ್ಲಿ 3-38 ಎಕರೆ ಎ ಖರಾಬು ಇದೆ. 4 ಎಕರೆ ಬಿ ಖರಾಬಿದೆ. ಇನ್ನುಳಿದಂತೆ 18.08 ಎಕರೆ ಇದೆ. ಈ ಪೈಕಿ 20 ಎಕರೆ 25 ಗುಂಟೆಗೆ 28 ಮಂದಿ ಆರ್‍ಟಿಸಿ ಹೊಂದಿದ್ದಾರೆ. ಸರ್ವೆ ನಂಬರ್ 17ರಲ್ಲಿ 2 ಎಕರೆ 39 ಗುಂಟೆ ಬಿ ಖರಾಬು ಇದೆ. ಇದಕ್ಕೆ 3 ಮಂದಿ ಆರ್‍ಟಿಸಿ ಹೊಂದಿದ್ದಾರೆ.
110 ಎಕರೆ 32 ಗುಂಟೆಯಲ್ಲಿ 53.39 ಎಕರೆಯನ್ನು 62 ಮಂದಿ ಮಂಜೂರಿದಾರರ ಹೆಸರಿಗೆ ಪೋಡಿ ಮಾಡಲಾಗಿದೆ. 56.33 ಎಕರೆಗೆ ಸದ್ಯ ಆಕಾರ್ ಬಂದ್ ಮಾಡಲಾಗಿದೆ. ಖಾಸಗಿ ಒಳಗೊಂಡಂತೆ 68 ಮಂದಿ ಖಾತೆದಾರರ ಹೆಸರಿನಲ್ಲಿ 51.22 ಎಕರೆ ಇದೆ. ಇನ್ನುಳಿದಂತೆ 28.06 ಗುಂಟೆ ಸರ್ಕಾರಿ ಜಮೀನಾಗಿದೆ. ಇದರಲ್ಲಿ 11.28 ಎಕರೆ ಅತಿಕ್ರಮಣವಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
200 ಎಕರೆ ಜಮೀನಿನಲ್ಲಿ ಸರ್ಕಾರಿ ಗೋಮಾಳ ಸೇರಿದಂತೆ ಇನ್ನಿತರೆ ಸ್ವರೂಪದ ಜಮೀನುಗಳನ್ನು ಹೊಂದಿರುವ ಕುರಿತು ರಾಮನಗರ ಉಪ ವಿಭಾಗಾಧಿಕಾರಿಯಾಗಿದ್ದ ಬಿ.ಎಚ್.ಸಿದ್ದಪ್ಪ ಅವರು 2014ರಲ್ಲಿ ವರದಿ ನೀಡಿದ್ದರು. ಇದನ್ನಾಧರಿಸಿ ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರಪ್ರಸಾದ್ ಅವರು ಪರಿಶೀಲನಾ ವರದಿ ಸಲ್ಲಿಸಿದ್ದರು.
ವರದಿಯಲ್ಲಿ ಹೇಳಲಾಗಿರುವ 200 ಎಕರೆ ಭೂಮಿಯನ್ನು ‘ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ವರದಿ ನೀಡಿ‘ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪ್ರಾದೇಶಿಕ ಆಯುಕ್ತರಿಗೆ 2016ರ ಏಪ್ರಿಲ್ 29ರಂದು ಪತ್ರ ಬರೆದು ಪ್ರಕರಣಕ್ಕೆ ಚಾಲನೆ ನೀಡಿದ್ದರು.
‘ಜಿಲ್ಲಾಧಿಕಾರಿಗಳು ಸಲ್ಲಿಸಿದ್ದ ವರದಿ ಆಧರಿಸಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಲು ಕೋರಲಾಗಿತ್ತು. ಆದರೆ ಇದುವರೆಗೂ ತಮ್ಮಿಂದ ಯಾವುದೇ ವರದಿ, ಮಾಹಿತಿ ಸ್ವೀಕರಿಸಿರುವುದಿಲ್ಲ. ಇದೊಂದು ಅತ್ಯಂತ ಜರೂರು ಪ್ರಕರಣವಾಗಿರುವುದರಿಂದ ಈ ಬಗ್ಗೆ ಕೂಡಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು‘ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದ್ದರು.
‘ರಾಮನಗರದ ಈ ಹಿಂದಿನ ಉಪ ವಿಭಾಗಾಕಾರಿ ಆರೋಪಿಸಿರುವ ಜಮೀನುಗಳ ವಿಚಾರದಲ್ಲಿ ತನಿಖೆಯನ್ನು ಸರ್ಕಾರದ ಉನ್ನತ ಮಟ್ಟದ ಅಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆ ಮುಖಾಂತರ ತನಿಖೆ ನಡೆಸುವ ಬಗ್ಗೆ ಜಿಲ್ಲಾಕಾರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕಿರುತ್ತೆ‘ ಎಂದು ಡಾ.ರಾಜೇಂದ್ರಪ್ರಸಾದ್ ಅವರು ಪರಿಶೀಲನಾ ವರದಿಯಲ್ಲಿ ತಿಳಿಸಿದ್ದರು.
ಭೂ ಅಕ್ರಮಕ್ಕೆ ಉಪ ವಿಭಾಗಾಕಾರಿ ಡಾ.ರಾಜೇಂದ್ರಪ್ರಸಾದ್ ಅವರು ರಾಮನಗರ ಜಿಲ್ಲಾಕಾರಿ ಮತ್ತು ಸರ್ಕಾರಕ್ಕೆ 2014ರಲ್ಲಿ ನೀಡಿರುವ ಪರಿಶೀಲನಾ ವರದಿಯಲ್ಲಿ ಹಲವು ಪುರಾವೆಗಳನ್ನೊದಗಿಸಿದ್ದರು. ಕೇತಿಗಾನಹಳ್ಳಿ ಗ್ರಾಮದ ಒಟ್ಟು 25 ಸರ್ವೆ ನಂಬರ್‌ಗಳಲ್ಲಿ 46 ಎಕರೆ 27 ಗುಂಟೆ ವ್ಯವಸಾಯದ ಜಮೀನು ಹೊಂದಿದ್ದು, ಈ ಜಮೀನುಗಳ ಪೈಕಿ ಸರ್ಕಾರಿ ಜಮೀನುಗಳ ಮಂಜೂರಾತಿ ನೈಜತೆ, ಪರಭಾರೆ ಸಮಯದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ, ಪ.ಪಂಗಡಗಳ 1978ರ ಕಾಯಿದೆ ಮತ್ತು 1961ರ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಕಲಂ 79 (ಎ)(ಬಿ) ಉಲ್ಲಂಘನೆ ಕುರಿತು ಡಾ. ರಾಜೇಂದ್ರಪ್ರಸಾದ್ ಅವರು 2014ರ ಡಿಸೆಂಬರ್ 27ರಂದು ಸರ್ವೆ ನಂಬರ್‌ವಾರು ಪರಿಶೀಲನಾ ವರದಿಯನ್ನು ಜಿಲ್ಲಾಕಾರಿ ಮತ್ತು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ವಿವರಿಸಿದ್ದರು.
ಸಿದ್ದಪ್ಪ ನೀಡಿದ್ದ ವರದಿಯಲ್ಲೇನಿತ್ತು?
‘ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು, ಅವರ ಸಂಬಂಕರು ಕೇತಿಗಾನಹಳ್ಳಿ ಸರ್ಕಾರಿ ಗೋಮಾಳದಲ್ಲಿ 110 ಎಕರೆ 32 ಗುಂಟೆ ಹಾಗೂ ವಿವಿಧ ಹಿಡುವಳಿ ಜಮೀನುಗಳಲ್ಲಿ 85 ಎಕರೆ 11 ಗುಂಟೆ ಸೇರಿ ಒಟ್ಟು 196 ಎಕರೆ 3 ಗುಂಟೆ ಅಂದರೆ ಸುಮಾರು 200 ಎಕರೆ ವಿಸ್ತೀರ್ಣದ ಜಮೀನನ್ನು ಬಡವರು, ದಲಿತರು ಮತ್ತು ದುರ್ಬಲರಿಂದ ಕಬಳಿಸಿ ವಂಚಿಸಿರುವುದು ಕಂದಾಯ ದಾಖಲಾತಿಗಳ ಆಧಾರದಿಂದ ದೃಢಪಟ್ಟಿದೆ‘ ಎಂದು ಉಪ ವಿಭಾಗಾಕಾರಿ ಬಿ.ಎಚ್.ಸಿದ್ದಪ್ಪ ಅವರು ವರದಿಯಲ್ಲಿ ಹೇಳಿದ್ದರು.
200 ಕೋಟಿ ರೂ.ಮೌಲ್ಯ!
ಎಚ್.ಡಿ.ಕುಮಾರಸ್ವಾಮಿ ಅವರ ಹೆಸರಿನಲ್ಲಿ ಸದ್ಯ 54 ಎಕರೆ ವಿಸ್ತೀರ್ಣದ ಜಮೀನಿನ ಹಕ್ಕುಬಾಧ್ಯತೆಗಳು ಕಂದಾಯ ದಾಖಲಾತಿಗಳಲ್ಲಿ ನಮೂದಾಗಿದೆ. ಎಕರೆಗೆ 5,000 ರೂ.ಗಳಂತೆ ಖರೀದಿಸಿ ನೋಂದಣಿ ಮಾಡಲಾಗಿದೆ. ಬಿಡದಿ ಹೋಬಳಿ, ಕೇತಿಗಾನಹಳ್ಳಿ ಗ್ರಾಮದ ಈ ಜಮೀನುಗಳು ಬೆಂಗಳೂರು-ಮೈಸೂರು ಹೆದ್ದಾರಿ ಬಲಭಾಗಕ್ಕಿದ್ದು, 1987ರಲ್ಲಿ ಈ ಜಮೀನುಗಳ ಮಾರುಕಟ್ಟೆ ಬೆಲೆ 25,000 ರೂ.ಗಳಿಂದ 30,000ರೂ.ಗಳಾಗಿವೆ. ಸದ್ಯ ಪ್ರಚಲಿತ ದರದಂತೆ ಒಂದು ಎಕರೆಗೆ ಸುಮಾರು 75 ಲಕ್ಷ ರೂ.ಗಳಿಂದ 1 ಕೋಟಿ ಬೆಲೆಯುಳ್ಳದ್ದಾಗಿದೆ ಎಂದು ಹೇಳಿದ್ದರು.
ಸುಮಾರು 200 ಎಕರೆಗೆ 150 ಕೋಟಿಯಿಂದ 200 ಕೋಟಿಗಳಷ್ಟು ಬೆಲೆಬಾಳುವ ಸರ್ಕಾರದ ಆಸ್ತಿ ಅನ್ಯರ ಪಾಲಾಗಿದೆ. ಕಡಿಮೆ ಬೆಲೆಗೆ ನೋಂದಣಿ ಮಾಡಿಸಿರುವುದರಿಂದ ಸರ್ಕಾರಕ್ಕೆ ನೋಂದಣಿ, ಮುದ್ರಾಂಕ ಶುಲ್ಕದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಖೋತಾ ಆಗಿರುವುದು ನಿಜ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಭೂ ಮಂಜೂರಾತಿ ನಿಯಮ ಉಲ್ಲಂಘನೆ
ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕೇತಿಗಾನಹಳ್ಳಿಯ ಸರ್ವೆ ನಂಬರ್ 7,8,9,10,16 ಹಾಗೂ 17ರಲ್ಲಿ ಸರ್ಕಾರಿ ಗೋಮಾಳವಿದ್ದು, 110 ಎಕರೆ 32 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ ಭೂ ರಹಿತರಿಗೆ, ಬಡವರಿಗೆ, ದಲಿತರಿಗೆ ದರಖಾಸ್ತು ಮೂಲಕ 1979ರಲ್ಲಿ ಮಂಜೂರಾಗಿತ್ತು. ಈ ಪ್ರದೇಶವನ್ನೂ ಸೇರಿದಂತೆ ಇತರೆ ಜಮೀನನ್ನು ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ದೇವೇಗೌಡ ಅವರ ಮಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ದೇವೇಗೌಡರ ನಾದಿನಿ ಸಾವಿತ್ರಮ್ಮ ಎಂಬುವರು ಭೂ ಮಂಜೂರಾತಿ ನಿಯಮಗಳನ್ನು ಉಲ್ಲಂಘಿಸಿ 54 ಎಕರೆ ಜಮೀನನ್ನು ಖರೀದಿಸಿದ್ದಾರೆ ಎಂದು ಉಪ ವಿಭಾಗಾಕಾರಿಯಾಗಿದ್ದ ಬಿ.ಎಚ್.ಸಿದ್ದಪ್ಪ ಅವರು ವರದಿಯಲ್ಲಿ ವಿವರಿಸಿದ್ದರು.
ಪೋಡಿ ದುರಸ್ತಿ ನಡೆದಿಲ್ಲ
ಈ ಜಮೀನುಗಳು ಯಾವ ವರ್ಷದಲ್ಲಿ ಯಾರಿಂದ ಯಾರಿಗೆ ಎಷ್ಟು ಭೂಮಿ ಮಂಜೂರಾಗಿದೆ ಎಂಬ ಬಗ್ಗೆ ಪರಿಶೀಲಿಸಲು ಮೂಲ ಭೂ ಮಂಜೂರಾತಿ ಕಡತಗಳು ರಾಮನಗರ ತಹಶೀಲ್ದಾರ್ ಕಚೇರಿಯಲ್ಲಿ ಲಭ್ಯ ಇಲ್ಲ. ಮೂಲ ಮಂಜೂರಾತಿ ಕಡತಗಳು ದೊರಕದ ಕಾರಣ ಸರ್ವೆ ಇಲಾಖೆಯಿಂದ ಪೋಡಿ ದುರಸ್ತಿ ಕಾರ್ಯ ನಡೆದಿಲ್ಲ ಎಂದು ವರದಿಯಲ್ಲಿ ಹೇಳಲಾಗಿತ್ತು.
‘ಪೋಡಿ ದುರಸ್ತಿ ಕಾರ್ಯ ನಡೆಯದ ಕಾರಣ ಯಾವ ಯಾವ ಸರ್ವೆ ನಂಬರ್‌ಗಳಲ್ಲಿ ಯಾವ ಯಾವ ಮಂಜೂರಿದಾರರು ಎಷ್ಟೆಷ್ಟು ವಿಸ್ತೀರ್ಣದಲ್ಲಿ ಜಮೀನನ್ನು ಸ್ವಾೀನಪಡಿಸಿಕೊಂಡಿದ್ದಾರೆ ಮತ್ತು ಅನುಭವ ಹೊಂದಿದ್ದಾರೆ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ‘ ಎಂದು ಸಿದ್ದಪ್ಪ ಅವರು ವರದಿಯಲ್ಲಿ ತಿಳಿಸಿದ್ದರು.
ಕೇವಲ ಪಹಣಿ ಪತ್ರಿಕೆಗಳಲ್ಲಿ ಮಾತ್ರ ಮಂಜೂರಾತಿ ವಿವರಗಳಿವೆ. ಉಳಿದಂತೆ ಭೂ ಮಂಜೂರಾತಿಗೆ ಸಂಬಂಸಿದ ಯಾವುದೇ ಕಡತ, ದಾಖಲೆಗಳು ಕಂದಾಯ ಇಲಾಖೆಯಲ್ಲಿ ಲಭ್ಯವಿಲ್ಲ. ಇಡೀ ಮಂಜೂರಿ ಪ್ರಕರಣ ನೈಜತೆಯಿಂದ ಕೂಡಿದೆಯೇ ಅಥವಾ ನಕಲಿ ದಾಖಲೆಗಳೇ ಎಂಬುದನ್ನು ಪರಿಶೀಲಿಸಬೇಕು ಎಂದು ವರದಿಯಲ್ಲಿ ಅಭಿಪ್ರಾಯಪಟ್ಟಿದ್ದರು.
ಒಟ್ಟು 25 ಪ್ರಕರಣಗಳ ಪೈಕಿ 13 ಪ್ರಕರಣಗಳಲ್ಲಿ 22 ಎಕರೆ 36 ಗುಂಟೆ ವಿಸ್ತೀರ್ಣದ ಜಮೀನು ಸಾವಿತ್ರಮ್ಮ ಹನುಮೇಗೌಡರಿಂದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದಾನದ ಮುಖಾಂತರ ಬಂದಿದೆ. ಉಳಿದ 12 ಪ್ರಕರಣಗಳಲ್ಲಿ 24 ಎಕರೆ 31 ಗುಂಟೆ ವಿಸ್ತಿರ್ಣದ ಜಮೀನು ಕ್ರಯದ ಮುಖಾಂತರ ಹಕ್ಕು ಪ್ರಾಪ್ತವಾಗಿರುವುದು ವರದಿಯಿಂದ ಗೊತ್ತಾಗಿದೆ. 22 ಎಕರೆ 36 ಗುಂಟೆ ಪ್ರಕರಣದಲ್ಲಿ 79 (ಎ) ಮತ್ತು (ಬಿ) ಉಲ್ಲಂಘನೆ ಆಗಿರುವ ಬಗ್ಗೆ ಉಪ ವಿಭಾಗಾಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯದೆಯೇ ‘ಕಾಯ್ದೆ ಉಲ್ಲಂಘಿಸಿಲ್ಲ‘ ಎಂದು ಪ್ರಕರಣವನ್ನು ಕೈಬಿಟ್ಟಿರುವುದು ವರದಿಯಲ್ಲಿ ವಿವರಿಸಿದ್ದರು.
ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ನಿಯಮ 79 ಎ, 79 ಬಿ ಉಲ್ಲಂಘನೆ ಆಗಿರುವ ಬಗ್ಗೆ 1988ರ ಜನವರಿ 30ರಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ್ತು 1988 ರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನಾದಿನಿ ಸಾವಿತ್ರಮ್ಮನವರಿಗೆ ನೋಟೀಸ್ ನೀಡಲಾಗಿತ್ತು. ಈ ನೋಟೀಸ್ ವಕೀಲರ ಮೂಲಕ ಬಂದಿರುವ ಉತ್ತರವು ಸಮಂಜಸವಾಗಿಲ್ಲ. ನಂತರ ಪ್ರಕರಣದ ವಿಚಾರಣೆ ನಡೆದು ಅಂತಿಮ ಆದೇಶವಾಗಿರುವ ಬಗ್ಗೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮೂಲ ಕಡತವೇ ಲಭ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿತ್ತು.
ತಹಶೀಲ್ದಾರ್ ವರದಿಯಲ್ಲೂ ಉಲ್ಲೇಖ
ಡಿ.ಸಿ.ತಮ್ಮಣ್ಣ ಅವರ ಸೋದರ ಡಿ.ಸಿ.ನಂಜುಂಡಯ್ಯ ಮತ್ತಿತರರು ಕೇತಿಗಾನಹಳ್ಳಿಯ ಸರ್ವೆ ನಂಬರ್ 8, 9, 10 ಮತ್ತು 16, 17 ರಲ್ಲಿ 53 ಎಕರೆ ವಿಸ್ತೀರ್ಣದ ಜಮೀನುಗಳನ್ನು ಅನಧಿಕೃತವಾಗಿ ಅತಿಕ್ರಮಿಸಿಕೊಂಡಿದ್ದರು ಎಂದು ತಹಶೀಲ್ದಾರ್ ವರದಿಯಲ್ಲಿ ಹೇಳಲಾಗಿತ್ತು. ಕರ್ನಾಟಕ ಭೂ ಕಂದಾಯ ಅಧಿನಿಯಮ 1961 ಕಲಂ 104ರ ಅಡಿಯಲ್ಲಿ ನೋಟೀಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ದಾಖಲೆಗಳನ್ನು ಪರಿಶೀಲಿಸಿದ್ದ ಅಂದಿನ ತಹಶೀಲ್ದಾರ್, ‘ಡಿ.ಸಿ.ನಂಜುಂಡಯ್ಯ ಮತ್ತಿತರರು ಅತಿಕ್ರಮಿಸಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಬಿಡದಿ ಉಪ ತಹಶೀಲ್ದಾರ್ ಇವರನ್ನು ಬಲಾತ್ಕಾರವಾಗಿ ಸರ್ಕಾರಿ ಜಮೀನಿನಿಂದ ಖುಲ್ಲಾ ಪಡಿಸಬೇಕು‘ ಎಂದು 2004ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಿದ್ದರು.
ಸಾವಿತ್ರಮ್ಮ ಹನುಮೇಗೌಡರಿಂದ ಎಚ್‌ಡಿಕೆಗೆ ದಾನ ರೂಪದಲ್ಲಿ ಬಂದಿರುವ ಜಮೀನುಗಳಿವು
ಕೇತಿಗಾನಹಳ್ಳಿ ಸರ್ವೆ ನಂಬರ್ 3ರಲ್ಲಿ 3 ಎಕರೆ 39 ಗುಂಟೆ, ಸರ್ವೆ ನಂಬರ್ 7/ಪಿ2ರಲ್ಲಿ 0-30 ಎ/ಗುಂ, ಸರ್ವೆ ನಂಬರ್ 8/ಪಿ10ರಲ್ಲಿ 35 ಗುಂಟೆ, ಸರ್ವೆ ನಂಬರ್ 8/ಪಿ 5ರಲ್ಲಿ 1-14 ಗುಂಟೆ, ಸರ್ವೆ ನಂಬರ್ 8/ಪಿ1ರಲ್ಲಿ 0-25 ಎ/ಗುಂ, ಸರ್ವೆ ನಂಬರ್ 8/ಪಿ2ರಲ್ಲಿ 1 ಎಕರೆ, ಸರ್ವೆ ನಂಬರ್ 53/1ರಲ್ಲಿ 0-23 ಎ/ಗುಂ, ಸರ್ವೆ ನಂಬರ್ 53/2ರಲ್ಲಿ 2-06 ಎ/ಗುಂ, ಸರ್ವೇ ನಂಬರ್ 53/3ರಲ್ಲಿ 1-02 ಎ/ಗುಂ, ಸರ್ವೆ ನಂಬರ್ 54/1ರಲ್ಲಿ 2-09 ಎ/ಗುಂ, ಸರ್ವೆ ನಂಬರ್ 60ರಲ್ಲಿ 4-31 ಎ/ಗುಂ, ಸರ್ವೆ ನಂಬರ್ 62ರಲ್ಲಿ 2-11 ಎ ಎಕರೆ ಇದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಕೇತಿಗಾನಹಳ್ಳಿ ಸರ್ವೆ ನಂಬರ್ 8ರಲ್ಲಿ 29 ಎಕರೆ 10 ಗುಂಟೆ ವಿಸ್ತೀರ್ಣವಿದ್ದು, ಈ ಪೈಕಿ 22 ಎಕರೆ 11 ಗುಂಟೆ ವಿಸ್ತೀರ್ಣದ ಜಮೀನು ದರಖಾಸ್ತು ಮೂಲಕ 21 ಮಂದಿಗೆ ಮಂಜೂರಾಗಿತ್ತು. ಉಳಿದ 6 ಎಕರೆ 30 ಗುಂಟೆ ವಿಸ್ತಿರ್ಣದ ಜಮೀನನ್ನು ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಮತ್ತು ಅವರ ಕುಟುಂಬದವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದೇ ಸರ್ವೆ ನಂಬರ್ 8 ರಲ್ಲಿ ‘ಸರ್ಕಾರಿ ಊರು ದನಗಳಿಗೆ‘ ಎಂದು 8 ಎಕರೆ 9 ಎಕರೆ ಗುಂಟೆ ಮೀಸಲಿರಿಸಿರುವ ಬಗ್ಗೆ ದಾಖಲಾಗಿದ್ದರೂ, ಯಾರ ಆದೇಶದ ಮೇರೆಗೆ ಈ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯ ಇಲ್ಲವೆಂದು ವರದಿಯಲ್ಲಿ ಹೇಳಲಾಗಿತ್ತು.
ಸರ್ವೆ ನಂಬರ್ 9 ರಲ್ಲಿರುವ 14 ಎಕರೆ 23 ಗುಂಟೆ ಪೈಕಿ 8 ಎಕರೆ 5 ಗುಂಟೆ ಜಮೀನು 8 ಮಂದಿಗೆ ಮಾತ್ರ ಮಂಜೂರಾಗಿದೆ. ಉಳಿದ 5 ಎಕರೆ 18 ಗುಂಟೆ ಪ್ರದೇಶ ಸರ್ಕಾರಿ ಜಮೀನು ಒತ್ತುವರಿ ಆಗಿದೆ. ಈ ಮಂಜೂರು ಜಮೀನು ಡಿ.ಸಿ.ತಮ್ಮಣ್ಣ ಅವರ ಕುಟುಂಬದವರಿಗೆ ಕ್ರಯವಾಗಿದೆ. ಕ್ರಯ ವಿಕ್ರಯಗಳಿಗೆ ಸಕ್ಷಮ ಪ್ರಾಧಿಕಾರದಿಂದ ನೀಡಿರುವ ಅನುಮತಿ ಆದೇಶಗಳು ಕಂಡು ಬಂದಿಲ್ಲ. ಇದೇ ಸರ್ವೆ ನಂಬರ್‌ನಲ್ಲಿ 2 ಎಕರೆ 29 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ಒತ್ತುವರಿಯನ್ನು ತೆರವುಗೊಳಿಸಿ ಭೂಮಿ ಹರಾಜು ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಈ ಒತ್ತುವರಿ ಪ್ರದೇಶವು ಡಿ.ಸಿ.ತಮ್ಮಣ್ಣ ಮತ್ತು ಅವರ ಕುಟುಂಬದವರ ನೇರ ಅನಧಿಕೃತ ಒತ್ತುವರಿಯ ಪ್ರಕರಣವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.
ಸರ್ವೆ ನಂಬರ್ 10 ರಲ್ಲಿ 23 ಎಕರೆ 21 ಗುಂಟೆ ಸರ್ಕಾರಿ ಗೋಮಾಳ ಪೈಕಿ ೪ ಎಕರೆ 15 ಗುಂಟೆ, ಸರ್ವೆ ನಂಬರ್ 16 ರಲ್ಲಿ 9 ಎಕರೆ 6 ಗುಂಟೆಯನ್ನು ಡಿ.ಸಿ.ತಮ್ಮಣ್ಣ ಮತ್ತು ಕುಟುಂಬದವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಜಮೀನು ಸುತ್ತಲೂ ಬೇಲಿ ಹಾಕಲಾಗಿದೆ. ಇದೇ ಜಮೀನಿನಲ್ಲಿ ಹಾದು ಹೋಗಿರುವ ಸಾರ್ವಜನಿಕ ಹಳ್ಳವೂ ಒತ್ತುವರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಗೊಂಡಿತ್ತು.
ತಹಶೀಲ್ದಾರ್ ಹೊರಡಿಸಿದ್ದ ಆದೇಶವನ್ನು ಡಿ.ಸಿ.ನಂಜುಂಡಯ್ಯ ಅವರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಅಂದಿನ ಉಪ ವಿಭಾಗಾಧಿಕಾರಿ ರುದ್ರಪ್ಪ ಅವರು ನಂಜುಂಡಯ್ಯ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ‘ಸರ್ಕಾರಿ ಖರಾಬು ಪ್ರದೇಶವನ್ನು ಅತಿಕ್ರಮಣ ಮಾಡಿರುವುದು ಕಾನೂನುಬಾಹಿರ. ಸರ್ವೆ ನಂಬರ್ 9, 10, 16 ರಲ್ಲಿರುವ 10 ಎಕರೆ 20 ಗುಂಟೆ ಜಮೀನಿನ ಖುಲ್ಲಾ ಆದೇಶ ಕ್ರಮಬದ್ಧವಾಗಿದೆ‘ ಎಂದು ತಹಶೀಲ್ದಾರ್ ಆದೇಶವನ್ನು ಎತ್ತಿ ಹಿಡಿದಿದ್ದರು.
ಹೀಗಾಗಿ ಸುಮಾರು 65 ರಿಂದ 70 ಎಕರೆ ವಿಸ್ತೀರ್ಣದ ಸರ್ಕಾರಿ ಗೋಮಾಳ ಬಲಾಢ್ಯರ ವಶದಲ್ಲಿದೆ‘ ಎಂಬ ಅಂಶವು ವರದಿಯಲ್ಲಿದೆ.
ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಕಾನೂನು ಉಲ್ಲಂಘನೆ ಮಾಡಿ ಕ್ರಯ/ದಾನ ಪಡೆದಿರುವ ಬಗ್ಗೆ ಪಿಟಿಸಿಎಲ್ ಕಾಯ್ದೆಯಡಿ ಪ್ರಕರಣದ ವಿಚಾರಣೆ ನಡೆದಿದ್ದು , ಅಂತಿಮವಾಗಿ 1978ರ ಕಾಯ್ದೆ ಕಲಂ 5(1) ರ ಅಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ನಂತರದಲ್ಲಿ ಕಾನೂನುಬದ್ಧ ವಾರಸುದಾರರಿಗೆ ಜಮೀನನ್ನು ಪುನರ್ ಸ್ಥಾಪಿಸಿ ಆದೇಶಿಸಿತ್ತು. ಈ ಬಗ್ಗೆ ರಾಮನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೇಲ್ಮನವಿ ವಿಚಾರಣೆ ನಡೆದಿತ್ತು. ಆ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳ ಆದೇಶವನ್ನು ಬದಿಗೊತ್ತಲಾಗಿತ್ತು ಸಿದ್ದಪ್ಪ ಅವರು ನೀಡಿರುವ ವರದಿಯಿಂದ ತಿಳಿದು ಬಂದಿದೆ.