ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವ ಸಂಬಂಧ ಶಾಸಕರಿಬ್ಬರ ಕೋರಿಕೆ ಸಂಬಂಧ ಒಳಾಡಳಿತ ಇಲಾಖೆಯಲ್ಲಿ ತೆರೆದಿದ್ದ ಕಡತವು ಕಳೆದ 18 ತಿಂಗಳಿನಿಂದಲೂ ತೆವಳುತ್ತಿದೆ.
ಸಿಬಿಐನಲ್ಲಿ ಮುಕ್ತಾಯಗೊಂಡಿರುವ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಅವಕಾಶವಿದೆಯೇ ಎಂಬ ಬಗ್ಗೆ ಅಭಿಪ್ರಾಯ ಕೋರಿ ಕಾನೂನು ಇಲಾಖೆಗೆ 18 ತಿಂಗಳ ಹಿಂದೆಯೇ ಕಡತವನ್ನು ಸಲ್ಲಿಸಿತ್ತು. 2023ರಲ್ಲಿ ತೆರೆದಿದ್ದ ಕಡತವನ್ನು 2025ರ ಜನವರಿಯಲ್ಲಿ ಮುಕ್ತಾಯಗೊಳಿಸಿದೆ. ಆದರೆ ಇಲಾಖೆಯು ಈ ಬಗ್ಗೆ ಏನು ಕ್ರಮ ಕೈಗೊಂಡಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಹದಿನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಕುಮಾರಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ವಿಡಿಯೋ ಮಾಡಿದ್ದ ಯೂ ಟ್ಯೂಬರ್ ಸಮೀರ್ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬೆನ್ನಲ್ಲೇ ಇದೇ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಕೋರಿದ್ದ ಶಾಸಕರಿಬ್ಬರ ಕೋರಿಕೆಯು ಸರ್ಕಾರದ ಹಂತದಲ್ಲೇ ಬಾಕಿ ಉಳಿದಿರುವುದು ಮುನ್ನೆಲೆಗೆ ಬಂದಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್‌ಸಿಂಹ್ ನಾಯಕ್ ಅವರು ಈ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮರು ತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಲು ಹೈಕೋರ್ಟ್ ಕೂಡ ನಿರಾಕರಿಸಿತ್ತು. ಹೀಗಾಗಿ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಸರ್ಕಾರದ ಮೇಲೆ ಸಾರ್ವಜನಿಕ ಒತ್ತಡ ಹೆಚ್ಚಿದ್ದ ಸಂದರ್ಭದಲ್ಲೇ ಈ ಕುರಿತು ತೀರ್ಮಾನ ಕೈಗೊಳ್ಳಲು ಗೃಹ ಇಲಾಖೆಯು ಕಾನೂನು ಇಲಾಖೆಯ ಮೊರೆ ಹೊಕ್ಕಿತ್ತು.
ಆದರೆ ಇದುವರೆಗೆ ಕಾನೂನು ಇಲಾಖೆಯೂ (LAW 182 OPN 2023, HD 61 COD 2023) ಸಹ ಮರು ತನಿಖೆ ಬಗ್ಗೆ ಏನು ಅಭಿಪ್ರಾಯ ನೀಡಿದೆ ಎಂಬುದರ ಕುರಿತು ಯಾವ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ.
ಸೌಜನ್ಯ ಪ್ರಕರಣ ಮರು ತನಿಖೆಗೆ ಹೆಚ್ಚಿದ ಒತ್ತಡ; ಕಾನೂನು ಅಭಿಪ್ರಾಯ ಪಡೆಯಲು ಮುಂದಾದ ಗೃಹ ಇಲಾಖೆ
‘ ನಾಗರಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಕು.ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಸೌಜನ್ಯಗಳಿಗೆ ಮತ್ತು ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕೋರಿರುವುದರಿಂದ ಆಡಳಿತ ಇಲಾಖೆಯವರು ಈ ಕುರಿತ ಸಿಬಿಐನಲ್ಲಿ ಮುಕ್ತಾಯಗೊಂಡಿರುವ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಅವಕಾಶವಿದೆಯೇ ಎಂಬ ಬಗ್ಗೆ ಅಭಿಪ್ರಾಯ ಕೋರಿ ಕಡತವನ್ನು ಸಲ್ಲಿಸಲಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವ ಸಲುವಾಗಿ ಪ್ರಕರಣದಲ್ಲಿ ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರತಿ ಮತ್ತು ಬೆಂಗಳೂರಿನಲ್ಲಿರುವ ಹೆಚ್ಚುವರಿ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ (children’s court (special bengaluru (cch-51)ದಲ್ಲಿ ದಾಖಲಾಗಿರುವ ಪ್ರಕರಣ (Spl. CC NO 203/2016)ದಲ್ಲಿ 2021ರ ಅಕ್ಟೊಬರ್ 4ರಂದು ನೀಡಿರುವ ಆದೇಶದ ಪ್ರತಿಗಳನ್ನು ಪರಿಶೀಲಿಸುವುದು ಅವಶ್ಯಕವಾಗಿದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು.
ಈ ಪ್ರಕರಣದ ಕುರಿತು ಅಭಿಪ್ರಾಯ ನೀಡಲು ದಾಖಲೆಗಳನ್ನು ಒದಗಿಸಬೇಕು ಎಂದು ಗೃಹ ಇಲಾಖೆಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಪತ್ರ ಬರೆದಿದೆ. ಪ್ರಕರಣದಲ್ಲಿ ಕಾನೂನು ಇಲಾಖೆ ಅಭಿಪ್ರಾಯ ಕೋರುವ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಚರ್ಚಿಸಿದ್ದರು.
ಈ ಕುರಿತು ಇಲಾಖೆಯಲ್ಲಿ 18 ತಿಂಗಳಿನಿಂದಲೂ ಕಡತವು ತೆವಳುತ್ತಲೇ ಇದೆ.
2025ರ ಜನವರಿಯಲ್ಲಿ ಈ ಕಡತವನ್ನು ಮುಕ್ತಾಯಗೊಳಿಸಿರುವುದು ಇ-ಆಫೀಸ್ ಚಲನವಹಿಯಿಂದ ತಿಳಿದು ಬಂದಿದೆ.
ಮೃತ ವಿದ್ಯಾರ್ಥಿನಿ ತಂದೆ ಚಂದ್ರಪ್ಪಗೌಡ 2018ರಲ್ಲಿ ಪ್ರಕರಣದ ಮರು ತನಿಖೆಗೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಈಗಾಗಲೇ ವಜಾಗೊಳಿಸಿದೆ. ಪ್ರಕರಣವನ್ನು ಮೊದಲಿಗೆ ಸಿಐಡಿ, ಆನಂತರ ಸಿಬಿಐ ತನಿಖೆ ನಡೆಸಿತ್ತು.
ಪ್ರಕರಣದಲ್ಲಿಸಾಕ್ಷಿಗಳಾಗಿರುವ ಧೀರಜ್ ಜೈನ್, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ವಿರುದ್ಧ ಸಂಶಯ ವ್ಯಕ್ತಪಡಿಸಿ ಅರ್ಜಿದಾರರು ಮರು ತನಿಖೆಗೆ ಆದೇಶಿಸಲು ಕೋರಿದ್ದರು. ಆ ಶಂಕೆಯನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಧಾರ ಒದಗಿಸಿಲ್ಲ. ಸಿಬಿಐ ಸರಿಯಾಗಿಯೇ ತನಿಖೆಗೆ ನಡೆಸಿದ್ದು, ಮತ್ತೆ ತನಿಖೆ ನಡೆಸುವ ಅಗತ್ಯವಿಲ್ಲವೆಂದು ನ್ಯಾಯಪೀಠ ಆದೇಶಿಸಿರುವುದನ್ನು ಸ್ಮರಿಸಬಹುದು.
ಬೆಂಗಳೂರಿನ ಶೇಷಾದ್ರಿಪುರದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್, ಬೆಳ್ತಂಗಡಿಯ ಜಿ ನವೀನ್ ಕುಮಾರ್ ಮತ್ತು ಬಲ್ವಾಡು ಪುತ್ತೂರಿನ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಅಂದಿನ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತ್ತು. ಅರ್ಜಿದಾರರು ಎತ್ತಿರುವ ಮನವಿ ಕುರಿತು ಕಾನೂನಿನಡಿ ಲಭ್ಯವಿರುವ ಪರ್ಯಾಯ ವಿಧಾನಗಳ ಮೂಲಕ ಪರಿಹಾರ ಪಡೆಯಬಹುದು ಎಂದು ಅಭಿಪ್ರಾಯಪಟ್ಟು ನ್ಯಾಯಾಲಯವು ಅರ್ಜಿ ವಜಾಗೊಳಿಸಿತ್ತು.
ಅದೇ ರೀತಿ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗಲು ಧರ್ಮಸ್ಥಳದ ಮಲ್ಲಿಕ್ ಜೈನ್, ಉದಯ ಜೈನ್ ಮತ್ತು ಧೀರಜ್ ಜೈನ್‌ಗೆ ಸೂಚಿಸಿ ಸಿಬಿಐ ವಿಚಾರಣಾ ನ್ಯಾಯಾಲಯ 2016ರಲ್ಲಿ ಜಾರಿಗೊಳಿಸಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಪಡಿಸಿತ್ತು.
ಹಾಗೆಯೇ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ದೀರ್ಘ ಅವಧಿಯವರೆಗೆ ಪಾದಯಾತ್ರೆ ನಡೆದಿತ್ತು.
ಪ್ರಕರಣದ ವಿವರ
ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾ 2012ರ ಅ.9 ರಂದು ಕಾಣೆಯಾಗಿದ್ದಳು. ಆಕೆಯ ತಂದೆ ಚಂದ್ರಪ್ಪಗೌಡ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಅ.10 ರಂದು ಸೌಜನ್ಯ ಶವ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು.
ಮೊದಲು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದರು. ನಂತರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಆ ಬಳಿಕ ಸರಕಾರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. 2016ರಲ್ಲಿ ತನಿಖೆ ಪೂರ್ಣಗೊಳಿಸಿದ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಆ ಆರೋಪ ಪಟ್ಟಿ ಸೂಕ್ತವಾಗಿಲ್ಲ ಎಂದು ಆರೋಪಿಸಿದ್ದ ಸೌಜನ್ಯ ತಂದೆ, ಹೆಚ್ಚಿನ ತನಿಖೆಗೆ ಕೋರಿದ್ದರು.
ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು 11 ವರ್ಷಗಳ ಬಳಿಕ ಪ್ರಕಟವಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್‌ನನ್ನು ದೋಷಮುಕ್ತಗೊಳಿಸಿತ್ತು.
ದಕ್ಷಿಣ ಜಿಲ್ಲೆ ಧರ್ಮಸ್ಥಳದ ಪಾಂಗಳ ನಿವಾಸಿ ಚಂದ್ರಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅಕ್ಟೋಬರ್ 9, 2012ರಂದು ಸಂಜೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಸೌಜನ್ಯ ನಾಪತ್ತೆಯಾಗಿದ್ದಳು, ಮರು ದಿನ ರಾತ್ರಿ ಮಣ್ಣ ಸಂಕ ಬಳಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಾಗಿದ್ದನ್ನು ಸ್ಮರಿಸಬಹುದು.