ಬೆಂಗಳೂರು; ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದನ್ನು ರಾಜ್ಯಾದಾದ್ಯಂತ ಪ್ರತಿಭಟಿಸಿ ಶಾಂತಿಗೆ ಭಂಗ ಉಂಟು ಮಾಡಿದ ಆರೋಪಿತ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆದುಕೊಳ್ಳಲು ಈಗಿನ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ.
ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿದ್ದನ್ನು ವಿರೋಧಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ಎಲ್ಲಾ ಪ್ರಕರಣಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ವಿರುದ್ಧ ಆಯಾ ಠಾಣಾಧಿಕಾರಿಗಳು ಐಪಿಸಿ ವಿವಿಧ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದರು. ಈ ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ಈಗಲೂ ವಿಚಾರಣೆ ನಡೆಯುತ್ತಿವೆ.
ಈ ಮಧ್ಯೆ ಈ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆದುಕೊಳ್ಳಲು ಗೃಹ ಇಲಾಖೆಯು, ಪೊಲೀಸ್ ಮಹಾನಿರ್ದೇಶಕರ ಕಚೇರಿ ಮತ್ತು ಅಭಿಯೋಗ, ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರೊಂದಿಗೆ ಕಳೆದ ಒಂದು ವರ್ಷದಿಂದಲೂ ಪತ್ರ ವ್ಯವಹಾರ ನಡೆಸುತ್ತಿರುವುದು ಇದೀಗ ಬಹಿರಂಗವಾಗಿದೆ.
ಬೀದರ್ ಜಿಲ್ಲೆಯ ಔರಾದ್‌ನ ಕಮಲನಗರ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಶಾಂತಕುಮಾರ್ ಬಿರಾದಾರ ಸೇರಿದಂತೆ ಒಟ್ಟು 8 ಮಂದಿ ವಿರುದ್ಧ 2019ರಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆಯುವ ಕುರಿತು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪೊಲೀಸ್ ಮಹಾನಿರ್ದೇಶಕರು, ಅಭಿಯೋಗ ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಿಗೆ 2025ರ ಫೆ.20ರಂದು ಪತ್ರ (ಸಂಖ್ಯೆ HD/15/MHB/2024) ಬರೆದಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಬೀದರ್ ಜಿಲ್ಲೆಯ ಕಮಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣವನ್ನು ವಿಚಾರಣೆಯಿಂದ ಹಿಂಪಡೆದುಕೊಳ್ಳಲು 2024ರ ಜನವರಿ 18, ಮೇ 16, ಆಗಸ್ಟ್ 16, ಸೆ.4ರಂದು ಪತ್ರ ವ್ಯವಹಾರ ನಡೆದಿದೆ. ಅಲ್ಲದೇ 2025ರ ಫೆ.20ರಂದು ಮೊದಲನೇ ನೆನಪೋಲೆಯನ್ನೂ ಸಹ ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿರುವುದು ಗೊತ್ತಾಗಿದೆ.
2024ರ ಆಗಸ್ಟ್ 16 ಮತ್ತು ಸೆ.4ರಂದು ಸರ್ಕಾರಕ್ಕೆ ಈ ಪ್ರಸ್ತಾವನೆಯು ಸಲ್ಲಿಕೆಯಾಗಿದೆ. ಈ ಪ್ರಸ್ತಾವನೆಯಲ್ಲಿ ಬೀದರ್ ಜಿಲ್ಲೆಯ ಔರಾದ್ ಕಮಲನಗರ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ 90/2019 (ಸಿಸಿ ನಂ 405/2024) ಪ್ರಕರಣದಲ್ಲಿ ಸಿ ಸಿ ನಂಬರ್ ವರ್ಷಗಳಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಈ ಪ್ರಕರಣದ ಸಿ ಸಿ ನಂಬರ್‍ನ್ನು ಸ್ಪಷ್ಟೀಕರಿಸಿ ಸರ್ಕಾರಕ್ಕೆ ಕೂಡಲೇ ಮಾಹಿತಿ ಒದಗಿಸಬೇಕು ಎಂದು ಒಳಾಡಳಿತ ಇಲಾಖೆಯು ನಿರ್ದೇಶಿಸಿರುವುದು ತಿಳಿದು ಬಂದಿದೆ.
ಪ್ರಕರಣದ ವಿವರ
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಇಡಿ ದಸ್ತಗರಿ ಮಾಡಿತ್ತು. ಇದನ್ನು ವಿರೋಧಿಸಿ ಬೀದರ್‍ನ ಕಮಲಾನಗರ ವೃತ್ತದಲ್ಲಿ ಬಸ್ ನಿಲ್ದಾಣದ ಬಳಿ ಅಲ್ಲಂಪ್ರಭು ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಶಾಂತಕುಮಾರ್ ಬಿರಾದಾರ, ಪ್ರವೀಣ ಕದಂ, ನಿಲೇಶ ಘಾಗರೆ, ಪ್ರಕಾಶ ಪಾಟೀಲ್ ಸಾ, ತೋರಾಣಾ ತುಳಿಸರಾಮ ಜಕಾತೆ ಸಾ ಶಿವಕುಮಾರ ಮೇತ್ರೆ ಅಪ್ಪಾ ಸಾಬ ದೇಶಮುಖ ಹಾಗೂ ಇತರರು ಅಂದಾಜು 12 ಜನರು ಅಕ್ರಮ ಕೂಟ ರಚಿಸಿಕೊಂಡು ಅನಧಿಕೃತವಾಗಿ ಗುಂಪು ಸೇರಿದ್ದರು.
ಈ ಗುಂಪು ಗೃಹ ಮಂತ್ರಿ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತು ಬಿಜೆಪಿ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದ್ದರು. ಸರ್ಕಾರಿ ಇಲಾಖೇಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದರು. ರಾಷ್ಟ್ರೀಯ ಹೆದ್ದಾರಿ 50 ಬೀದರ್-ಜದಗೀರ ರಸ್ತೆಯ ಕಮಲನಗರದ ಅಲ್ಲಂಪ್ರಭು ವೃತ್ತದಲ್ಲಿ ರಸ್ತೆ ತಡೆ ಮಾಡಿದ್ದರು.
ನರೇಂದ್ರ ಮೋದಿ, ಅಮಿತ್ ಶಾ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಪ್ರಯತ್ನ ಮಾಡಿದ್ದರು. ಈ ಘಟನೆಯಿಂದ ಸಾರ್ವಜನಿಕರಿಗೆ ಅಡೆತಡೆ ಮತ್ತು ಕಮಲನಗರ ಪಟ್ಟಣದಲ್ಲಿ ಶಾಂತಿ ಭಂಗ ಉಂಟು ಮಾಡಿದ್ದಾರೆ ಎಂದು ಕಮಲಾನಗರ ಠಾಣಾಧಿಕಾರಿ ದೂರು ದಾಖಲಿಸಿದ್ದರು.
ಈ ದೂರನ್ನಾಧರಿಸಿ ಎಫ್‌ಐಆರ್ ದಾಖಲಾಗಿತ್ತು.
ಡಿ ಕೆ ಶಿವಕುಮಾರ್ ಅವರ ಬಂಧನ ವೇಳೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಆಗಿದ್ದ ಹಾನಿಯನ್ನು ವಸೂಲು ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಅವರು ರಿಟ್ ಅರ್ಜಿಯನ್ನು 2019ರಲ್ಲೇ ದಾಖಲಿಸಿದ್ದರು.
2023ರ ಸೆ.23ರವರೆಗೆ ಈ ಪ್ರಕರಣವು ವಿಚಾರಣೆಗೆ ಬಂದಿತ್ತು.
2023ರ ಸೆ.23ರ ನಂತರ ಇದುವರೆಗೂ ಈ ಪ್ರಕರಣವು ವಿಚಾರಣೆಗೆ ದಿನಾಂಕ ನಿಗದಿಯಾಗಿಲ್ಲ.