ಬೆಂಗಳೂರು; ಲಾಗಿಸೆಕ್ಯೂರ್ ಎಲ್‌ಎಲ್‌ಪಿಯು ಅಭಿವೃದ್ದಿಪಡಿಸಿರುವ ಲಾಗ್-ಸೇಫ್ ಆ್ಯಪ್‌ನ್ನು ಕಡ್ಡಾಯಗೊಳಿಸಲು ಬಿಬಿಎಂಪಿಯು ಮುಂದಾಗಿದೆ. ಬಿಬಿಎಂಪಿಯ ಈ ಕ್ರಮದಿಂದಾಗಿ ಅಧಿಕಾರಿ, ನೌಕರರ ವೈಯಕ್ತಿಕ ಮಾಹಿತಿ ಮತ್ತು ದತ್ತಾಂಶಗಳು ಖಾಸಗಿ ಕಂಪನಿ ಸೇರಲಿವೆ ಎಂಬ ಅನುಮಾನಗಳು ಅಧಿಕಾರಿ, ನೌಕರರ ವರ್ಗದಲ್ಲಿ ವ್ಯಕ್ತವಾಗಿವೆ.
ತುಷಾರ್ ಗಿರಿನಾಥ್ ಅವರು ಬಿಬಿಎಂಪಿಗೆ ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ವರ್ಷದಿಂದಲೇ “ಲಾಗ್-ಸೇಫ್” ಎಂಬ ಖಾಸಗಿ ನಿರ್ಮಿತ ಆ್ಯಪ್ ಮೂಲಕ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ನೌಕರರ ವಲಯದಿಂದ ಕೇಳಿ ಬಂದಿವೆ.
ಗೂಗಲ್ ಪ್ಲೇ ಸ್ಟೋರ್‍ನಿಂದ ಲಾಗ್-ಸೇಫ್ ಆ್ಯಪ್‌ನ್ನು ಡೌನ್ ಲೌಡ್ ಮಾಡಿಕೊಳ್ಳಲು ಬಿಬಿಎಂಪಿಯ ಅಧಿಕಾರಿ ನೌಕರರಿಗೆ 2023ರಿಂದಲೇ ಸೂಚಿಸಿದೆ.
ಬಿಬಿಎಂಪಿಯು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 2023ರ ನವೆಂಬರ್ 21ರಂದು ಸುತ್ತೋಲೆ ಹೊರಡಿಸಿದ್ದರು. ಪಾಲಿಕೆಯ ಕೇಂದ್ರ ಕಚೇರಿ, ಎಲ್ಲಾ ವಲಯಗಳ ಅಧಿಕಾರಿ ಸಿಬ್ಬಂದಿಗಳು ಲಾಗ್ ಸೇಫ್ ಸಂಸ್ಥೆಯವರು ಅಭಿವೃದ್ದಿಪಡಿಸಿರುವ ಮೊಬೈಲ್ ಆ್ಯಪ್‌ನಲ್ಲೇ ಲಾಗಿನ್ ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಿರುವುದು ಗೊತ್ತಾಗಿದೆ.
ಅದೇ ರೀತಿ ಅಧಿಕಾರಿ, ಸಿಬ್ಬಂದಿಗಳು ನಿಗದಿತ ಸಮಯ ಬೆಳಗ್ಗೆ 10.00 ರೊಳಗೆ ಕರ್ತವ್ಯಕ್ಕೆ ಹಾಜರಾಗಿ ಮೊಬೈಲ್ ಆ್ಯಪ್‌ನಲ್ಲಿ ಲಾಗಿನ್ ಮಾಡಿಕೊಂಡು ಹಾಜರಾತಿ ದೃಢೀಕರಿಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು. ಲಾಗಿಗ್ ಐ ಡಿ ಗಳನ್ನು ವಲಯ ಆಯುಕ್ತರುಗಳಿಗೆ ಹಸ್ತಾಂತರಿಸಲಾಗಿದೆ. ವಲಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಭೇಟಿ, ತಪಾಸಣೆ ಲಾಗಿನ್ ಹಾಗೂ ಲಾಗ್ ಔಟ್ ಸಮಯವನ್ನು ವಲಯ ಆಯುಕ್ತರು ನಿರ್ಧರಿಸಬೇಕು. ಮೊಬೈಲ್ ಆ್ಯಪ್ ಮುಖಾಂತರ ಹಾಜರಾತಿ ಪರಿಗಣಿಸಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.
ಅದೇ ರೀತಿ 2023ರ ನವೆಂಬರ್ 29ರಂದು ಬಿಬಿಎಂಪಿ ಕಚೇರಿಯು ಮತ್ತೊಂದು ಆದೇಶವನ್ನು ಹೊರಡಿಸಿತ್ತು.
ಈ ಆದೇಶದಲ್ಲಿಯೂ ಎಲ್ಲಾ ಅಧಿಕಾರಿ, ನೌಕರರುಗಳ ಹಾಜರಾತಿಯನ್ನು ಮೊಬೈಲ್ ಆ್ಯಪ್ ಬಯೋಮೆಟ್ರಿಕ್ ಮುಖಾಂತರ ದಾಖಲಿಸಲು ಲಾಗ್ ಸೇಫ್ ಸಂಸ್ಥೆಯಿಂದ ತರಬೇತಿಯಲ್ಲಿ ಪಾಲ್ಗೊಳ್ಳಲು ಸೂಚಿಸಿತ್ತು. ಈ ತರಬೇತಿಯು 2023ರ ಡಿಸೆಂಬರ್ 2ರಂದು ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ನಡೆದಿತ್ತು. ಇದರಲ್ಲಿ ಡಿಡಿಒ ಅಧಿಕಾರಿಗಳೂ ಪಾಲ್ಗೊಂಡಿದ್ದರು.
2024ರ ಜೂನ್ 26 ಸುತ್ತೋಲೆಯಂತೆ 2024ರ ಜುಲೈನಿಂದಲೇ ಅಧಿಕಾರಿ, ನೌಕರರ ವೇತನ ಪಾವತಿಗೆ “ಲಾಗ್-ಸೇಫ್” ಆ್ಯಪ್ ಮಾಹಿತಿ ಕಡ್ಡಾಯಗೊಳಿಸಿದೆ.
ಖಾಸಗಿ ಕಂಪನಿ ಅಭಿವೃದ್ದಿಪಡಿಸಿರುವ ಲಾಗ್-ಸೇಫ್ ಆ್ಯಪ್‌ನಲ್ಲಿ ಬಿಬಿಎಂಪಿ ನೌಕರರ ವೈಯಕ್ತಿಕ ಮಾಹಿತಿಯನ್ನು ಕಡ್ಡಾಯವಾಗಿ ಹಂಚಿಕೊಳ್ಳಲು ಸೂಚಿಸಿರುವುದು ಎಷ್ಟರಮಟ್ಟಿಗೆ ಸರಿ, ನೌಕರರ ಮಾಹಿತಿಯನ್ನು ಖಾಸಗಿ ಸಂಸ್ಥೆಗೆ ನೀಡುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥರ ನಿರ್ಧಾರದ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬ ಪ್ರಶ್ನೆಗಳು ಅಧಿಕಾರಿ ವರ್ಗದಿಂದ ಕೇಳಿ ಬಂದಿವೆ.
ಅಷ್ಟೇ ಅಲ್ಲದೇ ಆಧಾರ್ ಮಾಹಿತಿಯೇ ಸೋರಿಕೆ ಮತ್ತು ದತ್ತಾಂಶವು ಅವ್ಯಾಹತವಾಗಿ ಕಳವು ಆಗುತ್ತಿರುವ ಹೊತ್ತಿನಲ್ಲೇ ಲಾಗ್ ಸೇಫ್ ಆ್ಯಪ್ ಮೂಲಕ ಸರ್ಕಾರಿ ನೌಕರರ ದತ್ತಾಂಶವನ್ನು ಖಾಸಗಿ ಕಂಪನಿಗೆ ನೀಡುವ ಅಧಿಕಾರವನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಯಾರಿಂದ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಸಹ ಬಿಬಿಎಂಪಿಯಲ್ಲಿ ಕೇಳಿ ಬರುತ್ತಿವೆ.
ಲಾಗ್-ಸೇಫ್” ಆ್ಯಪ್‌ನ್ನು ಅಭಿವೃದ್ಧಿಪಡಿಸಿರುವ ಕಂಪನಿ ಮತ್ತು ಗೂಗಲ್-ಪ್ಲೇ ಸ್ಟೋರ್ ಪ್ರಕಟಿಸಿರುವಂತೆ ಈ “ಲಾಗ್-ಸೇಫ್” ಆ್ಯಪ್ ತನ್ನ ಬಳಕೆದಾರರ ಫೋನುಗಳ ಡಿವೈಸ್ ಮತ್ತು ಇತರ ಐಡಿ, ಬಳಕೆದಾರರ ಹೆಸರು, ಈ-ಮೇಲ್ ಐಡಿ, ಯೂಸರ್-ಐಡಿ, ವಿಳಾಸ ಮತ್ತು ಫೋನ್ ನಂಬರ್ ಅಲ್ಲದೇ ಲೊಕೇಷನ್ ಕಡ್ಡಾಯವಾಗಿ ಸ್ವಯಂಚಾಲಿತವಾಗಿ ಪಡೆದುಕೊಳ್ಳುತ್ತದೆ. ಈ ಮಾಹಿತಿ ನೀಡದಿದ್ದರೆ ಬಳಕೆ ಸಾಧ್ಯವಿಲ್ಲ.
ಒಮ್ಮೆ ನೀಡಿದ ನಂತರ ಈ ಮಾಹಿತಿಯನ್ನು ಅಳಿಸಲೂ ಸಹ ಸಾಧ್ಯವಿಲ್ಲ. ಇದು ಪ್ಲೇ-ಸ್ಟೋರ್ ನಲ್ಲಿ ನಿಖರವಾಗಿ ದಾಖಲಾಗಿದೆ.
5 ವರ್ಷಗಳಿಂದಲೂ ಲಾಗ್-ಸೇಫ್” ಆ್ಯಪ್ ಬಳಕೆಯಲ್ಲಿದೆ. ಆದರೂ 5೦,೦೦೦ ಬಳಕೆದಾರರನ್ನು ದಾಟಿಲ್ಲ ಎಂದು ತಿಳಿದು ಬಂದಿದೆ. ಈ ಆ್ಯಪ್ ಲಾಗ್ ಔಟ್ ಸಮಯವನ್ನು ನಿಖರವಾಗಿ ಗುರುತಿಸುವುದಿಲ್ಲ. ಬಳಕೆಯಲ್ಲಿಲ್ಲದ ಸಮಯದಲ್ಲೂ ಇಂಟರ್ನೆಟ್ ಡೇಟಾ ಬಳಸುತ್ತದೆ. ಹೆಚ್ಚು ಅವಧಿ ಕೆಲಸ ಮಾಡಿದರೂ ಲಾಗೌಟ್ ಸಮಯವನ್ನು ಸಂಜೆ 5:30 ಎಂದೇ ಕಾಣಿಸುತ್ತದೆ ಎಂದು ಸಾಫ್ಟ್‌ವೇರ್ ಮತ್ತು ತಾಂತ್ರಿಕ ತಜ್ಞರು ಹೇಳುತ್ತಾರೆ.
ಹಾಗೆಯೇ ಅನುಮತಿ ಇಲ್ಲದೇ ಫೋಟೋಗಳನ್ನು ತೆಗೆದುಕೊಳ್ಳಲು ಕ್ಯಾಮೆರಾ ಬಳಸುತ್ತದೆ. ಸಾಮಾನ್ಯ ರಜೆಗಳು, ಎರಡನೆಯ ಮತ್ತು ನಾಲ್ಕನೆಯ ಶನಿವಾರ ಈ ಆ್ಯಪ್ ನಲ್ಲಿ ದಾಖಲಾಗಿಲ್ಲ. ಆ ಕಾರಣಕ್ಕಾಗಿ ಆ ದಿನಗಳಲ್ಲಿ ನೌಕರರು ಗೈರಾಗಿದ್ದಾರೆ ಎಂದೇ ದಾಖಲಾಗುತ್ತದೆ. ಲಾಗಿನ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಲೊಕೇಷನ್ ನಲ್ಲಿ ಇದ್ದರೂ ಇಲ್ಲವೆಂದು ತೋರಿಸುತ್ತದೆ ಇತ್ಯಾದಿ ಎಲ್ಲತರಹದ ತೊಂದರೆಗಳ ದೂರುಗಳು ಸಹ ದಾಖಲಾಗಿವೆ ಎಂದು ಗೊತ್ತಾಗಿದೆ.
‘ಕೇವಲ 3.4 ರೇಟಿಂಗ್ ಇರುವ ಮತ್ತು ಗೂಗಲ್-ಪ್ಲೇನಲ್ಲಿ ದೂರುಗಳ ಸರಮಾಲೆಯೇ ಇರುವ ಆ್ಯಪ್ ಅನ್ನೇ ಏಕೆ ಮುಖ್ಯ ಆಯುಕ್ತರು ಆಯ್ದುಕೊಂಡಿದ್ದಾರೆ, ಈ ಆ್ಯಪ್ ತಯಾರಿಸಿರುವ ಲಾಗಿ ಸೆಕ್ಯೂರ್ ಎಲ್ ಎಲ್ ಪಿ ಸಂಸ್ಥೆಯ ಯಾವ ನಿರ್ದೇಶಕರು ಯಾವ ಐಎಎಸ್ ಅಧಿಕಾರಿಗೆ ಆಪ್ತ ಎನ್ನುವುದು ಉತ್ತರಿಸಬೇಕಿದೆ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು.
ಸರ್ಕಾರದ ವ್ಯವಸ್ಥೆಯಲ್ಲಿ ಅಧಿಕಾರಿ/ನೌಕರರು ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಮತ್ತು ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಮೇಲುಸ್ತುವಾರಿಗೆ ನೂರಾರು ಅಧಿಕಾರಿಗಳಿದ್ದಾರೆ. ಅದಕ್ಕಾಗಿಯೇ ಸರ್ಕಾರವು ಅವರಿಗೆ ಸಂಬಳ ನೀಡುತ್ತದೆ. ಹೀಗಿರುವಾಗ ಹಾಜರಾತಿಗೆ ಖಾಸಗಿ ಆ್ಯಪ್ ಬಳಕೆ ಕಡ್ಡಾಯಗೊಳಿಸುವ ಮತ್ತು ಆ ಸಂಸ್ಥೆಗೆ ಬ್ಯಾಕ್-ಎಂಡ್ ಸಪೋರ್ಟ್ ನೆಪದಲ್ಲಿ ಸರ್ಕಾರಿ ಹಣವನ್ನು ಪಾವತಿಸುವ ಹುನ್ನಾರವಿದೆ ಎಂದೂ ಅಧಿಕಾರಿಯೊಬ್ಬರು ಸಂಶಯ ವ್ಯಕ್ತಪಡಿಸುತ್ತಾರೆ.
ವಿಶೇಷವೆಂದರೇ “ಲಾಗ್-ಸೇಫ್” ಆ್ಯಪ್ ಕಡ್ಡಾಯಗೊಂಡ 6 ತಿಂಗಳ ನಂತರ ಜನವರಿ 2025ರಲ್ಲಿ ಉಪಲೋಕಾಯುಕ್ತರು ದಾಳಿ ನಡೆಸಿದ ಸಂದರ್ಭದಲ್ಲಿ ಬಿಬಿಎಂಪಿ ನೌಕರರ ಜಾಗದಲ್ಲಿ ಅವರ ಮಗ ಕೆಲಸ ಮಾಡುತ್ತಿದ್ದಾಗಲೇ ಸಿಕ್ಕಿ ಬಿದ್ದಿದ್ದರು.
ಬಯೋ ಮೆಟ್ರಿಕ್ ನಲ್ಲಾದರೆ ನೌಕರರೇ ಕಛೇರಿಗೆ ಬರಬೇಕಿತ್ತು. ಆದರೆ “ಲಾಗ್-ಸೇಫ್” ಆ್ಯಪ್ ಇರುವ ಮೊಬೈಲ್‌ನ್ನು ನೌಕರರಾದರೂ ಹಿಡಿದುಕೊಂಡು ಬರಬಹುದು ಅಥವಾ ಅವರ ಮಗ ಅಥವಾ ಏಜೆಂಟರಾದರೂ ಹಿಡಿದುಕೊಂಡು ಕಛೇರಿಗೆ ಬಂದು ಹಾಜರಾತಿ ಪಡೆದುಕೊಳ್ಳಬಹುದು ಎಂಬ ಮಾತುಗಳು ಕೇಳಿ ಬಂದಿವೆ.
‘ಹೊಸ ಕಾಯ್ದೆ, ಹೊಸ ನೀತಿ, ಹೊಸ ಪ್ರಕ್ರಿಯೆ ಮುಂತಾದವುಗಳ ಕಣ್ಕಟ್ಟು ವಿದ್ಯೆಯ ಸೋಗಿನಲ್ಲಿ ಲಾಗಿಸೆಕ್ಯೂರ್ ಎಲ್.ಎಲ್.ಪಿ. ಸಂಸ್ಥೆಗೆ ಬಿಬಿಎಂಪಿ ಮೊತ್ತ ಪಾವತಿಸುತ್ತಿದೆಯೆ, ಪಾವತಿಸುತ್ತಿದ್ದಲ್ಲಿ ಎಷ್ಟು ಮೊತ್ತ ಪಾವತಿಸುತ್ತಿದೆ, ಈ ಆಯ್ಕೆ ಕೆಟಿಪಿಪಿ ಕಾಯ್ದೆಯಂತೆ ಆಗಿದೆಯೇ, ಇದಕ್ಕೆ ಸರ್ಕಾರದ ಅನುಮತಿ ಇದೆಯೇ,’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.