ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಅವಾಚ್ಯ ಪದಗಳನ್ನು ಬಳಸಿ ಘೋಷಣೆ ಕೂಗಿ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪಿತ ಪ್ರಕರಣದಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮತ್ತಿತರರ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಮತ್ತು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದೇ ಇರಲು ರಾಜ್ಯ ಕಾಂಗ್ರೆಸ್ ಸರ್ಕಾರವು ನಿರ್ಧರಿಸಿದೆ.
ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ನಿರ್ಧಾರ ಕೈಗೊಂಡಿರುವ ಬೆನ್ನಲ್ಲೇ ಆರ್ ಅಶೋಕ್ ಮತ್ತಿತರರ ವಿರುದ್ಧದ ಪ್ರಕರಣದಲ್ಲಿ ಮೇಲ್ಮನವಿ ಮತ್ತು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದೇ ಇರಲು ಕೈಗೊಂಡಿರುವ ನಿರ್ಧಾರವು ಮುನ್ನೆಲೆಗೆ ಬಂದಿದೆ.
1992ರ ಅಯೋಧ್ಯೆ ರಾಮಮಂದಿರ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ 2024ರ ಜನವರಿ 3ರಂದು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ಎದುರು ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಹಲವು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಲ್ತಾಫ್ ಹುಸೇನ್ ಹಳ್ಳೂರ ಅವರು ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
‘2024ರ ಜನವರಿ 3ರಂದು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ, ಪ್ರಚೋದನಾಕಾರಿ ಭಾಷಣವನ್ನು ಮಾಡಿ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅಡ್ಡಿಪಡಿಸಿ 6 ಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿಗಳಿಗೆ ಸಿದ್ರಾಮುಲ್ಲಾಖಾನ ಮತ್ತು ಸಿದ್ದರಾಮಯ್ಯ ಲುಚ್ಚಾ, ಹೇಡಿ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿ ಅವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅವಮಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ನಾಗರಿಕ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಆರ್ ಅಶೋಕ್ ಸೇರಿ ಆರೋಪಿತರ ಮೆಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿದ್ದರು.
ಈ ಪ್ರಕರಣ ಸಂಬಂಧ ಆರ್ ಅಶೋಕ್ ಸೇರಿ ಒಟ್ಟು 43 ಮಂದಿ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಶಾಸಕರ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನ ಕಾಯಿ ಅವರು ಸಹ ಎ 2, ಎ 3 ಆರೋಪಿಯನ್ನಾಗಿಸಲಾಗಿತ್ತು.
ಈ ಕ್ರಿಮಿನಲ್ ಅರ್ಜಿಯನ್ನು CR.P. ನ U/SE. 482 ರಲ್ಲಿ ಸಲ್ಲಿಸಲಾಗಿತ್ತು. ಮೊದಲ ಆರೋಪಿ ಆರ್ ಅಶೋಕ್ ಸೇರಿದಂತೆ 43 ಆರೋಪಿಗಳು ತಮ್ಮ ವಿರುದ್ಧದ ಕ್ರಿಮಿನಲ್ ಅರ್ಜಿಯನ್ನು ರದ್ದುಗೊಳಿಸಲು ಕೋರಿದ್ದರು.
ಆದರೆ ಅರ್ಜಿದಾರರ ಪರವಾಗಿ ನ್ಯಾಯಾಯದಲ್ಲಿ ಯಾರೊಬ್ಬರೂ ಹಾಜರಾಗದ ಕಾರಣ ಈ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು ವಜಾಗೊಳಿಸಿತ್ತು.
ಆದರೀಗ ಈ ಪ್ರಕರಣವು ಮೇಲ್ಮನವಿ ಮತ್ತು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಅರ್ಹವಾಗಿಲ್ಲ ಎಂದು ಒಳಾಡಳಿತ ಇಲಾಖೆಯು ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಅಭಿಯೋಗ ಇಲಾಖೆಯ ನಿರ್ದೇಶಕರಿಗೆ 2025ರ ಫೆ.12ರಂದು ಒಳಾಡಳಿತ ಇಲಾಖೆಯು (HD/919/HCP-1/2025-COMPUTER NUMBER 1676761-LETTER NUMBER 556/CRL/2025- CRLP 7110/2024) ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಇನ್ನುಳಿದಂತೆ ಎಂ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ್, ಶಿವು ಮೆಣಸಿನಕಾಯಿ, ರೂಪಾ ಶೆಟ್ಟಿ, ಉಮೇಶಗೌಡ ಕೌಜಲಗಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಬಿಜೆಪಿಯ ಇತರ ಮುಖಂಡರ ಹಾಗೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಜನವರಿ 5ರಂದು ದೂರು ನೀಡಿದ್ದರು. ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಘೋಷಣೆ ಕೂಗಿದ್ದಲ್ಲದೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಬಿಜೆಪಿ ವಿರುದ್ದ ದೂರು ಕೊಟ್ಟ ಬಳಿಕ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಪ್ ಹಳ್ಳೂರ ಪ್ರತಿಕ್ರಿಯೆ ನೀಡಿದ್ದರು. ಹುಬ್ಬಳ್ಳಿಯಲ್ಲಿ ಬಿಜೆಪಿಯವರು ಭಯದ ವಾತಾವರಣ ಉಂಟು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆರ್. ಅಶೋಕ ಅವರು ಹಿರಿಯ ನಾಯಕರಾಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕದಿರೋದಕ್ಕೆ ನಮ್ಮ ವಿರೋಧ ಇದೆ. ಅವರು ವ್ಯಾಪರಸ್ಥರಿಗೆ ತೊಂದರೆ ಕೊಟ್ಟಿದ್ದಾರೆ. ಹೀಗಾಗಿ ಅವರ ವಿರುದ್ದ ದೂರು ಕೊಟ್ಟಿದ್ದೇವೆ ಎಂದು ಹೇಳಿದ್ದರು.
31 ವರ್ಷದ ಹಿಂದಿನ ಗಲಭೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಶಹರ ಪೊಲೀಸ್ ಠಾಣೆ ಎದುರು ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಕಾರ್ಯಕರ್ತರು ಶಹರ ಠಾಣೆ ಮುತ್ತಿಗೆ ಹಾಕಲು ಯತ್ನಿಸಿದ್ದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಆರ್ ಅಶೋಕ್ ಅವರು ಹಿಂದೂ ಕಾರ್ಯಕರ್ತನನ್ನು ಬಿಡುಗಡೆ ಮಾಡಬೇಕು. ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಮಭಕ್ತರನ್ನು ಬಂಧಿಸಿದ್ದನ್ನು ಖಂಡಿಸುತ್ತೇನೆ. ರಾಮ ಭಕ್ತರನ್ನು ಬಂಧನ ಮಾಡುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಸುಮಾರು 56,000 ಪೆಂಡಿಂಗ್ ಎಲ್‌ಪಿಸಿ ಕೇಸ್ಗಳು ಇವೆ. ಆದರೆ ಅವೆಲ್ಲವನ್ನು ಬಿಟ್ಟು ಹುಬ್ಬಳ್ಳಿ ಕಡೆ ಬಂದಿರೋದು ಯಾಕೆ. ಶ್ರೀಕಾಂತ್ ಪೂಜಾರಿಯನ್ನು ಬಂಧನ ಮಾಡಿದ್ದು, ನ್ಯಾಯಾನಾ” ಎಂದು ಪ್ರಶ್ನಿಸಿದ್ದರು.
ಅಲ್ಲದೇ ”ತಾಕತ್ತಿದ್ದರೆ ಎಲ್ಲರನ್ನು ಬಂಧಿಸಿ ನೋಡೋಣ. ನನ್ನ ಮೇಲೂ ಕೇಸ್ ಇದೆ ಬಂಧಿಸಿ ನೋಡೋಣ. ಕಾಂಗ್ರೆಸ್ ಪಕ್ಷ ಸೋಲಿನ ಭಯದಿಂದ ಹೀಗೆ ಮಾಡುತ್ತಿದೆ. ಬೇರೊಂದು ಸಮುದಾಯದ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು.
ಶ್ರೀಕಾಂತ್ ಪೂಜಾರಿ ಪ್ರಕರಣವೇನು?
ಹಜರೇಸಾಬ್ ಮಲಿಕ್‌ಸಾಬ್ ಅಂಗಡಿ ಅವರು ಸಲ್ಲಿಸಿದ ದೂರಿನ ಅನ್ವಯ ಮೂರನೇ ಆರೋಪಿಯಾಗಿರುವ ಶ್ರೀಕಾಂತ್ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 436, 427 ಜೊತೆಗೆ 149 ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ಸಂಬಂಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಮುಂದೆ ಪ್ರಕರಣವನ್ನು ವಿಭಜಿಸಿ ಶ್ರೀಕಾಂತ್ ಮತ್ತಿತರರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು ಎಂದು ಅರ್ಜಿದಾರರು ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿತ್ತು. ಇತರೆ ಆರೋಪಿಗಳ ವಿರುದ್ಧದ ಮೂಲ ಪ್ರಕರಣವನ್ನು ಸತ್ರ ನ್ಯಾಯಾಲಯ ಇತ್ಯರ್ಥಪಡಿಸಿತ್ತು. ಅಲ್ಲದೇ ಆರೋಪಿಗಳನ್ನು ಖುಲಾಸೆಗಳಿಸಿತ್ತು. ಈ ಪ್ರಕರಣದ ದೂರು ಮತ್ತು ಎಫ್‌ಐಆರ್ ಅನ್ನು ನಾಶಪಡಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದನ್ನು ಸ್ಮರಿಸಬಹುದು.