ಬೆಂಗಳೂರು; ಕರ್ನಾಟಕ ವಿಧಾನಸಭೆಯ ವಸತಿ ಸೌಕರ್ಯಗಳ ಸಮಿತಿಯ ಅಧ್ಯಕ್ಷ ಹಾಗೂ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ನೇತೃತ್ವದ ಸಮಿತಿಯು ಪ್ರಯಾಗರಾಜ್, ಅಯೋಧ್ಯೆ ಸೇರಿದಂತೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ!.
ಇದೇ ಫೆಬ್ರುವರಿ 23ರಿಂದ 25ರವರೆಗೆ ಮೂರು ದಿನಗಳ ಕಾಲ ಸಮಿತಿಯ ಸದಸ್ಯರು ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕೆ ಸ್ಪೀಕರ್ ಯು ಟಿ ಖಾದರ್ ಅವರು ಅನುಮೋದನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದ ಹೇಳಿಕೆಯು ಚರ್ಚೆಗೆ ಗ್ರಾಸವಾಗಿತ್ತು. ಇದರ ನಡುವೆಯೇ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು. ಇದೀಗ ವಿಧಾನಸಭೆಯ ಉಪ ಸಭಾಧ್ಯಕ್ಷ ಹಾಗೂ ವಸತಿ ಸೌಕರ್ಯಗಳ ಸಮಿತಿಯ ಅಧ್ಯಕ್ಷರೂ ಆಗಿರುವ ರುದ್ರಪ್ಪ ಲಮಾಣಿ ಅವರ ನೇತೃತ್ವದಲ್ಲಿ ಪ್ರಯಾಗ್‌ರಾಜ್, ಅಯೋಧ್ಯೆ ಸೇರಿದಂತೆ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಕೈಗೊಂಡಿರುವ ಅಧ್ಯಯನ ಪ್ರವಾಸವು ಕುತೂಹಲ ಮೂಡಿಸಿದೆ.
ಪ್ರಯಾಗ್ ರಾಜ್, ಅಯೋಧ್ಯೆ, ವಾರಣಾಸಿ, ಪಟ್ನಾದಲ್ಲಿ ಮೂರು ದಿನಗಳ ಕಾಲ ಸಮಿತಿಯ ಸದಸ್ಯರು ಅಧ್ಯಯನ ಪ್ರವಾಸ ನಡೆಸಲಿದೆ. ಈ ಸಂಬಂಧ ಹೋಟೆಲ್ಸ್ ಅಪಾರ್ಟ್‌ಮೆಂಟ್‌ನ ಮಾಲೀಕ ನಿತೀನ್ ಮಿತ್ತಲ್ ಅವರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೂರು ದಿನದ ಪ್ರವಾಸ ವೇಳಾಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ವೇಳಾಪಟ್ಟಿ ಪ್ರಕಾರ ವಸತಿ ಸೌಕರ್ಯಗಳ ಸಮಿತಿಯ ಸದಸ್ಯ ಶಾಸಕರು ಫೆ.23ರಿಂದ ಫೆ.25ರವರೆಗೆ ಅಧ್ಯಯನ ಪ್ರವಾಸ ನಡೆಸಲಿದ್ದಾರೆ.
ಪ್ರತಿ ಶಾಸಕರಿಗೆ 1,75,000 ರು ನಂತೆ ಸಮಿತಿಯ ಸದಸ್ಯ ಶಾಸಕರಿಗೆ ಅಂದಾಜು 22.75 ಲಕ್ಷ ರು. ವೆಚ್ಚವಾಗಲಿದೆ.
ಆರಂಭದ ವೇಳಾಪಟ್ಟಿ ಪ್ರಕಾರ ನಾಲ್ಕು ದಿನಗಳ ಕಾಲದ ಪ್ರವಾಸಕ್ಕೆ ಸಿದ್ಧತೆ ನಡೆದಿತ್ತು. ನಂತರ ಇದನ್ನು ಪರಿಷ್ಕರಿಸಿದ್ದ ಸಮಿತಿಯು ಪ್ರವಾಸದ ಅವಧಿಯನ್ನು ಮೂರು ದಿನಕ್ಕೆ ಇಳಿಸಿದೆ.
ಫೆ.23ರ ಭಾನುವಾರದಂದು ಉತ್ತರ ಪ್ರದೇಶಕ್ಕೆ ತೆರಳಲಿರುವ ಸಮಿತಿಯು ಮಧ್ಯಾಹ್ನ 12ಕ್ಕೆ ಉತ್ತರ ಪ್ರದೇಶ ವಿಧಾನಸಭೆಯ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಅಲ್ಲಿಂದ ತೆರಳುವ ಸದಸ್ಯ ಶಾಸಕರು ಸಂಜೆ 7ಕ್ಕೆ ಪ್ರಯಾಗ್ ರಾಜ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಫೆ.24ರಂದು ಬೆಳಗ್ಗೆ 7 ಗಂಟೆಗೆ ಪ್ರಯಾಗ್ ರಾಜ್‌ನಲ್ಲಿ ಗಂಗಾ ಸ್ನಾನ ಮಾಡಲಿರುವ ಸದಸ್ಯರು, ನೇರವಾಗಿ ರಸ್ತೆ ಮೂಲಕ ಅಯೋಧ್ಯೆಗೆ ತೆರಳಲಿದ್ದಾರೆ. ಅಯೋಧ್ಯೆಯಲ್ಲಿ ಸಂಜೆ 4ರಿಂದ 7 ಗಂಟೆವರೆಗೆ ರಾಮಜನ್ಮಭೂಮಿ ದೇಗುಲ ದರ್ಶನ ಮಾಡಲಿದ್ದಾರೆ. 7 ಗಂಟೆಗೆ ರಾಡಿಸನ್ ಹೋಟೆಲ್ ಅಥವಾ ಇದೇ ಮಾದರಿಯ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ಫೆ.25ರ ಬೆಳಿಗ್ಗೆ 9ಗಂಟೆಗೆ ಅಯೋಧ್ಯೆಯಿಂದ ತೆರಳಲಿರುವ ಸದಸ್ಯ ಶಾಸಕರು, ವಿಮಾನ ಮೂಲಕ ವಾರಣಾಸಿಯತ್ತ ಪ್ರಯಾಣ ಬೆಳಸಲಿದ್ದಾರೆ. ಸಂಜೆ 4ರಿಂದ 8ರ ತನಕ ವಾರಣಾಸಿ ನಗರ ಪ್ರದಕ್ಷಿಣೆ ನಡೆಸಲಿದ್ದಾರೆ. ನಂತರ ರಾತ್ರಿ 9ಕ್ಕೆ ಬೆಂಗಳೂರಿನತ್ತ ವಾಪಸ್ ಬರಲಿದ್ದಾರೆ ಎಂದು ಗೊತ್ತಾಗಿದೆ.
ಈ ಮೊದಲು ನಿಗದಿಯಾಗಿದ್ದ ಪ್ರವಾಸ ವೇಳಾಪಟ್ಟಿ ಪ್ರಕಾರ ವಾರಣಾಸಿಯಲ್ಲಿ ನಡೆಯಲಿರುವ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದರು. ಸಂಜೆ ಕಾರ್ಯಕ್ರಮ ನಂತರ ವಾರಣಾಸಿಯ ರಾಮದಾ ಪ್ಲಾಜಾದಲ್ಲಿ ವಾಸ್ತವ್ಯ ಹೂಡಲಿದ್ದರು ಎಂದು ವೇಳಾಪಟಿಯಲ್ಲಿ ನಮೂದಿಸಲಾಗಿತ್ತು.
ಫೆ.26ರಂದು ಬೆಳಗ್ಗೆ 8ಕ್ಕೆ ಕಾಶಿ ವಿಶ್ವನಾಥ ಮತ್ತು ಇತರೆ ದೇವಸ್ಥಾನಗಳನ್ನು ಸದಸ್ಯ ಶಾಸಕರು ವೀಕ್ಷಿಸಲಿದ್ದಾರೆ. ಅಂದು ಮಧ್ಯಾಹ್ನ 12ಕ್ಕೆ ಪಟ್ನಾದ ಸಾರನಾಥಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ನಂತರ 3 ಗಂಟೆಗೆ ಸಾರನಾಥದಿಂದ ನೇರವಾಗಿ ಪಟ್ನಾಕ್ಕೆ ಭೇಟಿ ನೀಡಲು ಯೋಜಿಸಲಾಗಿತ್ತು. ಅಂದು ರಾತ್ರಿ 8 ಗಂಟೆಗೆ ಪಟ್ನಾದ ದಿ ತಾಜ್ ಅಥವಾ ಇದೇ ಮಾದರಿಯ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲು ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಗೊತ್ತಾಗಿದೆ.
ಫೆ.27ರಂದು ಬೆಳಗ್ಗೆ 10ಕ್ಕೆ ಅಧಿಕೃತ ಸಭೆ ನಡೆಸಲಿದ್ದ ಸಮಿತಿಯ ಸದಸ್ಯ ಶಾಸಕರು ನಂತರ ಹರಮಂದಿರ್ ಸಾಹಬ್ ಗುರುದ್ವಾರಕ್ಕೆ ಭೇಟಿ ನೀಡಬೇಕಿತ್ತು. ನಂತರ ಬಿಹಾರದ ಗಯಾಕ್ಕೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಗಯಾದಿಂದ ಪಟ್ನಾ ವಿಮಾನ ನಿಲ್ಧಾಣದಿಂದ ಬೆಂಗಳೂರಿಗೆ ಮರಳಲಿದ್ದರು ಎಂದು ತಿಳಿದು ಬಂದಿದೆ.
ಈ ಸಮಿತಿಯಲ್ಲಿ ಕಾಂಗ್ರೆಸ್‌ನ ಶಾಸಕ ಎಚ್ ಸಿ ಬಾಲಕೃಷ್ಣ, ಬಿ ನಾಗೇಂದ್ರ, ಬಿ ಶಿವಣ್ಣ, ಶಿವರಾಮ್ ಹೆಬ್ಬಾರ್, ಸಿ ಪಿ ಯೋಗೇಶ್ವರ್, ಕನೀಜ್ ಫಾತಿಮಾ, ಭಾಗೀರಥಿ ಮುರಳ್ಯ, ಸಿಮೆಂಟ್ ಮಂಜು, ಡಾ ಚಂದ್ರು ಲಮಾಣಿ, ಧೀರಜ್ ಮುನಿರಾಜು, ಸ್ವರೂಪ್ ಪ್ರಕಾಶ್, ಬಸನಗೌಡ ಪಾಟೀಲ್ ಸದಸ್ಯರಿದ್ದಾರೆ.