ಬೆಂಗಳೂರು: ಕೃಷ್ಣಾ ಭಾಗ್ಯ ಜಲ ನಿಗಮ ಸೇರಿದಂತೆ ಒಟ್ಟು 4 ನೀರಾವರಿ ನಿಗಮಗಳು ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ, ಬಾಕಿ ಮೊತ್ತ ಮತ್ತು ಜಲಸಂಪನ್ಮೂಲ ಇಲಾಖೆಯು ಇರಿಸಿರುವ ಬೇಡಿಕೆ ಪ್ರಕಾರ ಒಟ್ಟಾರೆ ಒಟ್ಟಾರೆ 1,75,513 ಕೋಟಿ ರು ಅನುದಾನವನ್ನು ಸರ್ಕಾರವು ಹೊಂದಿಸಬೇಕಿದೆ.
2025-26ನೇ ಸಾಲಿ ಆಯವ್ಯಯ ಪೂರ್ವಭಾವಿ ಸಭೆಗೆ ಜಲ ಸಂಪನ್ಮೂಲ ಇಲಾಖೆಯು ನೀಡಿರುವ ಮಾಹಿತಿಯಲ್ಲಿ ಇಲಾಖೆಯ ಒಟ್ಟಾರೆ ಬೇಡಿಕೆ, ಅನುದಾನ, ಖರ್ಚು ವೆಚ್ಚದ ಮಾಹಿತಿಯು ಒಳಗೊಂಡಿದೆ. 2025ರ ಫೆ.7ರಂದು ನಡೆದಿದ್ದ ಸಭೆಗೆ ಇಲಾಖೆಯು ಮಂಡಿಸಿರುವ ಮಾಹಿತಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಸಿಂಗಟಾಲೂರು ಏತ ನೀರಾವರಿ, ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ, ನಂದವಾಡಗಿ ಏತ ನೀರಾವರಿ, ಕೆರೂರ ಏತ ನೀರಾವರಿ, ಭಗವತಿ ಏತ ನೀರಾವರಿ, ಇತರೆ ನೀರಾವರಿ, ಕೆರೆ ತುಂಬುವ, ಆಧುನೀಕರಣ ಇತ್ಯಾದಿ ಯೋಜನೆಗಳಿಗೆ ಸಂಬಂಧಿಸಿದಂತೆ 2025ರ ಜನವರಿ 1ರ ಅಂತ್ಯಕ್ಕೆ ಒಟ್ಟು ಬಾಕಿ ಮೊತ್ತವೇ 1,00,321 ಕೋಟಿಯಷ್ಟಿದೆ.
ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ 19,460 ಕೋಟಿ ರು., ಇದೇ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭೂ ಸ್ವಾಧೀನಕ್ಕೆ 22,825 ಕೋಟಿ ರು ಸೇರಿ ಒಟ್ಟು 42,285 ಕೋಟಿ ರು ಬೇಕಾಗಿದೆ. ಯುಕೆಪಿಯ ಮೂರನೇ ಹಂತಕ್ಕೆ 32,287 ಕೋಟಿ ರು., ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ 2,427 ಕೋಟಿ ರು., ಕೆರೂರ ಏತ ನೀರಾವರಿ ಯೋಜನೆಗೆ 982 ಕೋಟಿ ರು., ನಂದವಾಡಗಿ ಏತ ನೀರಾವರಿ ಯೋಜನೆಗೆ 698 ಕೋಟಿ ರು ಒಳಗೊಂಡಿದೆ.
ಕರ್ನಾಟಕ ನೀರಾವರಿ ನಿಗಮದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ 25,415 ಕೋಟಿ ರು., ಭೂ ಸ್ವಾಧೀನಕ್ಕೆ 3,374 ಕೋಟಿ ರು ಸೇರಿ 28,789 ಕೋಟಿ ರು ಬೇಕಿದೆ. ಇದರಲ್ಲಿ ಸಿಂಗಟಾಲೂರ ಏತ ನೀರಾವರಿ ಯೋಜನೆಗೆ 1,698 ಕೋಟಿ ರು., ತುಬಚಿ ಬಬಲೇಶ್ವರ ಎಲ್ಐಎಸ್ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಯೂ ಸೇರಿರುವುದು ದಾಖಲೆಯಿಂದ ಗೊತ್ತಾಗಿದೆ.
ಕಾವೇರಿ ನೀರಾವರಿ ನಿಗಮದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ 8,516 ಕೋಟಿ ರು, ಭೂ ಸ್ವಾಧೀನಕ್ಕೆ 205 ಕೋಟಿ ರು. ಸೇರಿ 8,721 ಕೋಟಿ ರು. ಬೇಕಿದೆ. ಇದರಲ್ಲಿ ಪೂರಿಗಾಲಿ ಸಣ್ಣ ನೀರಾವರಿ ಯೋಜನೆ, ವಿಶ್ವೇಶ್ವರಯ್ಯ ನಾಲೆ, ತುಮಕೂರು ಶಾಖೆ ನಾಲೆ, ಶ್ರಿ ರಂಗ ಕುಡಿಯುವ ನೀರಿನ ಯೋಜನೆಯೂ ಒಳಪಟ್ಟಿದೆ.
ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರು ಕಾಮಗಾರಿಗಳಿಗೆ 18,966 ಕೋಟಿ ರು., ಭೂ ಸ್ವಾಧೀನಕ್ಕೆ 1,560 ಕೋಟಿ ರು ಸೇರಿ 20,526 ಕೋಟಿ ರು ಬೇಕಿದೆ. ಇದರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 11,325 ಕೋಟಿ ರು., ಎತ್ತಿನಹೊಳೆ ಯೋಜನೆಗೆ 6,639 ಕೋಟಿ ರು. ಸಹ ಒಳಗೊಂಡಿದೆ.
ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ 51,148 ಕೋಟಿ ರು. ಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 2024ರ ಡಿಸೆಂಬರ್ ಅಂತ್ಯಕ್ಕೆ 18,861 ಕೋಟಿ ರು ವೆಚ್ಚವಾಗಿದೆ. ಇನ್ನೂ 32,287 ಕೋಟಿ ರು ಬಾಕಿ ಇದೆ.
ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆಗೆ 21,474 ಕೋಟಿ ರು ಗೆ ಆಡಳಿತ ಅನುಮೋದನೆ ನೀಡಿದ್ದರ ಪೈಕಿ 2024ರ ಡಿಸೆಂಬರ್ ಅಂತ್ಯಕ್ಕೆ 10,122 ಕೋಟಿ ರು ವೆಚ್ಚವಾಗಿದೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 23,252 ಕೋಟಿ ರು ಆಡಳಿತಾತ್ಮಕ ಅನುಮೋದನೆ ಪೈಕಿ ಡಿಸೆಂಬರ್ 2025ರ ಅಂತ್ಯಕ್ಕೆ 16,613 ಕೋಟಿ ರು, ಸಿಂಗಟಾಲೂರ ಏತ ನೀರಾವರಿ ಯೋಜನೆಗೆ 5,768 ಕೋಟಿ ರು ಆಡಳಿತಾತ್ಮಕ ಅನುಮೋದನೆ ಪೈಕಿ 4,070 ಕೋಟಿ ರು , ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ 2,639 ಕೋಟಿ ರು ಪೈಕಿ 212 ಕೋಟಿ ರು, ನಂದವಾಡಗಿ ಏತ ನೀರಾವರಿ ಯೋಜನೆಗೆ 2,026 ಕೋಟಿ ರು ಪೈಕಿ 1,328 ಕೋಟಿ ರು., ಕೆರೂರ ಏತ ನೀರಾವರಿ ಯೋಜನೆಗೆ 1,426 ಕೋಟಿ ರು ಪೈಕಿ 444 ಕೋಟಿ, ಭಗವತಿ ಏತ ನೀರಾವರಿ ಯೋಜನೆಯ 346 ಕೋಟಿ ರು ಪೈಕಿ 15 ಕೋಟಿ ರು ವೆಚ್ಚವಾಗಿದೆ. ಈ ಯೋಜನೆಗಳಿಗೆ ಒಟ್ಟಾರೆ 43,906 ಕೋಟಿ ರು ಬಾಕಿ ಮೊತ್ತ ನೀಡಬೇಕಿದೆ.
ಅದೇ ರೀತಿ ವಿವಿಧ ಕಾಮಗಾರಿ ಮತ್ತು ಭೂ ಸ್ವಾಧೀನಗಳಿಗೆ ಪಾವತಿಸಲು 16,577 ಕೋಟಿ ರು ಮೊತ್ತ ಬಾಕಿ ಇದೆ.
ಹಾಗೆಯೇ 2025-26ನೇ ಸಾಲಿಗೆ ನೀರಾವರಿ ನಿಗಮಗಳು ಮತ್ತು ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರಗಳು 62,327 ಕೋಟಿ ರು ಬೇಡಿಕೆ ಇರಿಸಿದೆ. ನಿಗಮಗಳು ಇರಿಸಿದ್ದ ಈ ಬೇಡಿಕೆ ಮೊತ್ತವನ್ನು ಪರಿಷ್ಕರಿಸಿರುವ ಜಲಸಂಪನ್ಮೂಲ ಇಲಾಖೆಯು ಅದನ್ನು 58,615 ಕೋಟಿ ರು ಗೆ (9,712 ಕೋಟಿ ರು ಇಳಿಕೆ) ಇಳಿಸಿದೆ.
ಒಟ್ಟಾರೆ ಪ್ರಗತಿಯಲ್ಲಿರುವ ಕಾಮಗಾರಿಗಳು, ಬಾಕಿ ಬಿಲ್ ಪಾವತಿಸುವುದು ಮತ್ತು ಇಲಾಖೆ, ನಿಗಮಗಳು ಇರಿಸಿರುವ ಬೇಡಿಕೆ ಸೇರಿದಂತೆ ಒಟ್ಟಾರೆ 1,75,513 ಕೋಟಿ ರು ಅನುದಾನವನ್ನು ಸರ್ಕಾರವು ಹೊಂದಿಸಬೇಕಿರುವುದು ಗೊತ್ತಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು ತೀವ್ರಗತಿಯಲ್ಲಿ ಅನುಷ್ಠಾನಗೊಳಿಸಲು ಮುಂದಿನ 3 ವರ್ಷಗಳಲ್ಲಿ ಕನಿಷ್ಠ 25,000 ಕೋಟಿ ರು ವಾರ್ಷಿಕ ಅನುದಾನ ಕಲ್ಪಿಸಬೇಕಿದೆ. ವಿಶ್ವೇಶ್ವರಯ್ಯ ಜಲ ನಿಗಮ ವ್ಯಾಪ್ತಿಯಲ್ಲಿನ ಭದ್ರಾ ಮೇಲ್ದಂಡೆ ಯೋಜನೆಗಾಗಿ ಕೇಂದ್ರ ಸರ್ಕಾರವು 2023-24ನೇ ಸಾಲಿನ ಆಯವ್ಯಯದಲ್ಲಿ 5,300 ಕೋಟಿ ರು ಸಹಾಯಧನ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಡಿಸೆಂಬರ್ 2024ರ ಅಂತ್ಯಕ್ಕೆ 10,122 ಕೋಟಿ ರು ವೆಚ್ಚವಾಗಿದೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 23,252 ಕೋಟಿ ರು ಇದೆ. ಈ ಯೋಜನೆಗೆ ಡಿಸೆಂಬರ್ 2024ರ ಅಂತ್ಯಕ್ಕೆ 16,613 ಕೋಟಿ ರು ವೆಚ್ಚ ಮಾಡಲಾಗಿದೆ.
ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಯಲ್ಲಿ 13,608 ಕೋಟಿ ರು ಮೊತ್ತದಲ್ಲಿ 80 ಕೆರೆ ತುಂಬಿಸುವ ಯೋಜನೆಗಳನ್ನು (2,683) ಕೈಗೆತ್ತಿಕೊಂಡಿದೆ. ಇದನ್ನು ಪೂರ್ಣಗೊಳಿಸಲು 4,395 ಕೋಟಿ ರು ಅನುದಾನ ಬೇಕಿದೆ. ಹಾಗೆಯೇ ಈ ನಿಗಮದಲ್ಲಿ ಪ್ರಗತಿಯಲ್ಲಿರುವ ಪ್ರಮುಖ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು 28,789 ಕೋಟಿ ರು ಮೊತ್ತದ ಅವಶ್ಯಕತೆಯಿದೆ.
ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯಲ್ಲಿಯೂ 5,300 ಕೋಟಿ ರು ಮೊತ್ತದಲ್ಲಿ 81 ಕೆರೆ ತುಂಬಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ ಇದನ್ನು ಪೂರ್ಣಗೊಳಿಸಲು 1,424 ಕೋಟಿ ರು ಅನುದಾನ ಒದಗಿಸಬೇಕಿದೆ. ಈ ನಿಗಮ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 8,721 ಕೋಟಿ ರು ಬೇಕಿದೆ.
ಕೃಷ್ಣಾ ಭಾಗ್ಯ ಜಲ ನಿಗಮ ವ್ಯಾಪ್ತಿಯಲ್ಲಿನ ಕಾಮಗಾರಿಗಳಿಗೆ 3,037 ಕೋಟಿ ರು ಮತ್ತು ಭೂ ಸ್ವಾಧೀನಕ್ಕೆ 630 ಕೋಟಿ ರು ಸೇರಿ ಒಟ್ಟಾರೆ 3,666 ಕೋಟಿ ರು ಮೊತ್ತದ ಬಾಕಿ ಬಿಲ್ ಇವೆ. ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಯಲ್ಲಿನ ಕಾಮಗಾರಿಗಳಿಗೆ 5,137 ಕೋಟಿ ರು, ಭೂ ಸ್ವಾಧೀನಕ್ಕೆ 561 ಕೋಟಿ ಸೇರಿ 5,698 ಕೋಟಿ ರು, ಕಾವೇರಿ ನೀರಾವರಿ ನಿಗಮದಲ್ಲಿ ಕಾಮಗಾರಿಗಳಿಗೆ 2,397 ಕೋಟಿ ರು, ಭೂ ಸ್ವಾಧೀನಕ್ಕೆ 335 ಕೋಟಿ ರು., ಸೇರಿ 2,732 ಕೋಟಿ ರು., ವಿಶ್ವೇಶ್ವರಯ್ಯ ಜಲ ನಿಗಮದಲ್ಲಿನ ಕಾಮಗಾರಿಗಳಿಗೆ 3,283 ಕೋಟಿ ರು., ಭೂ ಸ್ವಾಧೀನಕ್ಕೆ 1,199 ಕೊಟಿ ರು ಸೇರಿ 4,481 ಕೋಟಿ ರು ಮೊತ್ತದ ಬಾಕಿ ಬಿಲ್ ಇರುವುದು ಗೊತ್ತಾಗಿದೆ.
ಕೃಷ್ಣ ಮೇಲ್ದಂಡೆ ಯೋಜನೆ ಮೂರನೇ ಹಂತ ಮತ್ತು ಇತರೆ ಯೋಜನೆಗಳಿಗೆ ಕೆಬಿಜೆಎನ್‌ಎಲ್ ಮೂರನೇ ಹಂತದ 21,614 ಕೋಟಿ ರು ಬೇಡಿಕೆ ಇರಿಸಿದ್ದರೇ ಇಲಾಖೆಯು ಇದೇ ನಿಗಮಕ್ಕೆ 25,000 ಕೋಟಿ ರು ಬೇಡಿಕೆ ಹೆಚ್ಚಿಸಿದೆ. ಕರ್ನಾಟಕ ನೀರಾವರಿ ನಿಗಮವು (ಕೃಷ್ಣಾ ನದಿ ವ್ಯಾಪ್ತಿ ಮತ್ತು ಇತರೆ ಕಾಮಗಾರಿಗಳಿಗೆ) 16,435 ಕೋಟಿ ರು., ಇಲಾಖೆಯು 9,903 ಕೋಟಿ ರು ಬೇಡಿಕೆ ಇಟ್ಟಿದೆ.
ಕಾವೇರಿ ನದಿ ವ್ಯಾಪ್ತಿಯ ಯೋಜನೆಗಳಿಗೆ ಕಾವೇರಿ ನೀರಾವರಿ ನಿಗಮವು 11,338 ಕೋಟಿ ರು ಮತ್ತು ಇಲಾಖೆಯು 9,014 ಕೋಟಿ ರು., ವಿಜೆಎನ್ಎಲ್ 11,704 ಕೋಟಿ (ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ) ಇಲಾಖೆಯು 13,462 ಕೋಟಿ ರು., ಕಾಡಾವು 887 ಕೋಟಿ ರು ಬೇಡಿಕೆ ಇರಿಸಿದೆ. ವಾಲ್ಮಿಯು 26 ಕೋಟಿ ರು., ಡಬ್ಲ್ಯುಆರ್‍ಡಿಒ 109 ಕೋಟಿ ರು., ಡಿಎಸ್‌ಒ 154 ಕೊಟಿ, ಕೆಇಆರ್‍ಎಸ್ 36 ಕೋಟಿ ರು., ಎಸಿಐಡಬ್ಲ್ಯೂಆರ್‍ಎಂ 24 ಕೋಟಿ ರು ಸೇರಿ ಒಟ್ಟಾರೆ 58,615 ಕೋಟಿ ರು ಬೇಡಿಕೆ ಇರಿಸಿದೆ.