ಮೂಲೆ, ಮಧ್ಯಂತರ, ಸಿ ಎ ನಿವೇಶನಗಳ ಹಂಚಿಕೆ; ಹರಾಜು ಮೊತ್ತ ಸ್ವೀಕೃತದಲ್ಲೇ 90.76 ಕೋಟಿ ರು ವ್ಯತ್ಯಾಸ

ಬೆಂಗಳೂರು; ಮೈಸೂರು ನಗರಾಗಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಬಡಾವಣೆಗಳಲ್ಲಿ ಮೂಲೆ, ಮಧ್ಯಂತರ ನಿವೇಶನ, ಮನೆ, ಮಳಿಗೆಗಳ ಹರಾಜಿಗೆ ಲಭ್ಯವಿದ್ದ ನಿವೇಶನಗಳಿಗೂ ಲೆಕ್ಕ ಪರಿಶೋಧನೆಗೆ ಒಳಪಡಿಸಿದ್ದ ನಿವೇಶನಗಳ ಮಧ್ಯೆ 21 ನಿವೇಶನಗಳ ವ್ಯತ್ಯಾಸ ಕಂಡು ಬಂದಿದೆ.

 

ಅಲ್ಲದೇ ವಾಣಿಜ್ಯ ಮತ್ತು ಮೂಲೆ ನಿವೇಶನಗಳ ಹರಾಜಿನಿಂದ ಖಾತೆಗೆ ಸ್ವೀಕೃತವಾಗಿದ್ದ ಮೊತ್ತದಲ್ಲೇ 90.76ಕೋಟಿ ರು ವ್ಯತ್ಯಾಸವಿತ್ತು.

 

2021-22ನೇ ಸಾಲಿನ ಮುಡಾದ ಎಲ್ಲಾ ವ್ಯವಹಾರಗಳನ್ನೂ ಸರ್ಕಾರಿ ಲೆಕ್ಕ ಪರಿಶೋಧಕರು ವಿವರವಾಗಿ ನಡೆಸಿದ್ದ ಪರಿಶೀಲನೆ, ತಪಾಸಣೆ ವೇಳೆಯಲ್ಲಿ ಹತ್ತಾರು ಲೋಪಗಳು, ವ್ಯತ್ಯಾಸಗಳು, ಉಲ್ಲಂಘನೆಗಳು ಕಂಡು ಬಂದಿವೆ. ವಿಶೇಷವೆಂದರೇ ಇದಕ್ಕೆ ಸಂಬಂಧಿಸಿದಂತೆ ಈಗಿನ ಕಾಂಗ್ರೆಸ್‌ ಸರ್ಕಾರವು ಕಡತಗಳನ್ನೇ ಲೆಕ್ಕ ಪರಿಶೋಧಕರಿಗೆ ನೀಡಿಲ್ಲ.

 

2021-22ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಇತ್ತೀಚೆಗಷ್ಟೇ ಕಾಂಗ್ರೆಸ್‌ ಪಕ್ಷವನ್ನು ಸೇರಿರುವ ಹೆಚ್‌ ವಿ ರಾಜೀವ್‌ ಅವರು ಮುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಈ ಎಲ್ಲಾ ಲೋಪಗಳು ನಡೆದಿವೆ. ಅಲ್ಲದೇ ಮುಡಾದಲ್ಲಿನ ಬದಲಿ ನಿವೇಶನ ಅಕ್ರಮಗಳ ರೂವಾರಿ ಎಂದು ಜಾರಿ ನಿರ್ದೇಶನಾಲಯವು ಗುರುತಿಸಿದ್ದ ಜಿ ಟಿ ದಿನೇಶ್‌ ಕುಮಾರ್‌, ಡಾ ಡಿ ಬಿ ನಟೇಶ್‌, ಜಿ ಲಕ್ಷ್ಮಿಕಾಂತ ರೆಡ್ಡಿ ಅವರು ಈ ಅವಧಿಯಲ್ಲಿ ಮುಡಾ ಆಯಕ್ತರಾಗಿದ್ದರು.

 

ಬದಲಿ ನಿವೇಶನ, ತುಂಡು ಭೂಮಿ ಮಂಜೂರು; ಸರ್ಕಾರಿ ಲೆಕ್ಕ ಪರಿಶೋಧನೆಗೂ ಕಡತ ಹಾಜರುಪಡಿಸದ ಅಧಿಕಾರಿಗಳು

 

ಮುಡಾದಲ್ಲಿ 2021-22ರಲ್ಲಿ 1,264 ನಿವೇಶನಗಳು, ಮನೆ, ಮಳಿಗೆಗಳು ಹರಾಜಿಗೆ ಲಭ್ಯವಿದ್ದವು. ಈ ಪೈಕಿ 420 ನಿವೇಶನಗಳು ವಿಲೆವಾರಿಯಾಗಿದ್ದವು. ಇದರಿಂದ 240.48 ಕೋಟಿ ರು. ಹರಾಜಿನಿಂದ ಬಂದಿತ್ತು. ಇಎಂಡಿ ಮುಟ್ಟುಗೋಲಿನಿಂದ 21.50 ಲಕ್ಷ ರು. ಸ್ವೀಕರಿಸಿತ್ತು. ಆದರೆ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿದ್ದ ಕಡತಗಳು ಮತ್ತು ದಾಖಲೆಗಳ ಪ್ರಕಾರ 2021-22ನೇ ಸಾಲಿನಲ್ಲಿ ಒಟ್ಟು 399 ಮೂಲೆ ಮತ್ತು ಮಧ್ಯಂತರ ನಿವೇಶನಗಳು ಹರಾಜು ಮಾಡಲಾಗಿತ್ತು ಎಂಬುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

 

 

2021-22ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಪ್ರಕಾರ ವಾಣಿಜ್ಯ ಮತ್ತು ಮೂಲೆ ನಿವೇಶನಗಳ ಹರಾಜಿನಿಂದ ಖಾತೆಗೆ (ಸಂಖ್ಯೆ 4660) 1,56,97,64,759 ರು.ಗಳು, ಮತ್ತೊಂದು ಖಾತೆ (ಸಂಖ್ಯೆ 9511)ಗೆ 1,74,11,21,902 ರು. ಸೇರಿ ಒಟ್ಟಾರೆ 3,31,08,86,661 ರು ಸ್ವೀಕೃತವಾಗಿತ್ತು. ಇದರಲ್ಲಿ 90.76 ಕೋಟಿ ರು ವ್ಯತ್ಯಾಸವಿತ್ತು. ಇದಕ್ಕೆ ಸಂಬಂಧಿಸಿದಂತೆ ಕಡತಗಳನ್ನು ಹಾಗೂ ಸೂಕ್ತ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿರಲಿಲ್ಲ.

 

‘ಆದ್ದರಿಂದ ಉಳಿಕೆ ಮೊತ್ತವು ಮೂಲೆ ಮತ್ತು ಮಧ್ಯಂತರ ನಿವೇಶನಗಳ ಹರಾಜಿನಿಂದ ನಿಯಮಾನುಸಾರವಾಗಿ ಸ್ವೀಕೃತವಾಗಿರುವುದಾಗಲೀ ಅಥವಾ ಹರಾಜಿನಲ್ಲಿ ಯಶಸ್ವಿಯಾದ ಬಿಡ್ಡಿನ ಮೊತ್ತ ಪೂರ್ಣ ಪ್ರಮಾಣದಲ್ಲಿ ಸ್ವೀಕೃತವಾಗಿರುವುದರ ಬಗ್ಗೆ ಲೆಕ್ಕ ಪರಿಶೋಧನೆಯಲ್ಲಿ ಖಾತರಿಯಾಗಿರುವುದಿಲ್ಲ. ಹೀಗಾಗಿ ವರದಿ ಸಾಲಿನ ಮೂಲೆ ಮತ್ತು ಮಧ್ಯಂತರ ನಿವೇಶನಗಳ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಸದರಿ ಸಾಲಿನಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳೇ ಹೊಣೆಗಾರರು,’ ಎಂದು ವರದಿಯಲ್ಲಿ ಅಭಿಪ್ರಾಯಿಸಿದೆ.

 

 

ಮತ್ತು ಈ ವಿಷಯದಲ್ಲಿ ಡಿಸಿಬಿ ವಹಿಯನ್ನು ನಿರ್ವಹಿಸಿಲ್ಲ. ಹೀಗಾಗಿ ಎಷ್ಟು ಮೂಲೆ ಮತ್ತು ಮಧ್ಯಂತರ ನಿವೇಶನಗಳು ಪ್ರಾಧಿಕಾರದಲ್ಲಿ ಉಳಿದಿವೆ ಎಂದು ತಿಳಿಇಯಲು ಲೆಕ್ಕ ಪರಿಶೋಧನೆಯಲ್ಲಿ ಸಾಧ್ಯವಾಗಿರುವುದಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಇನ್ನು ನಿವೇಶನಗಳ ಹಂಚಿಕೆಯಲ್ಲಿ ಮೀಸಲಾತಿಯು ಪಾಲನೆಯಾಗಿದೆಯೇ ಇಲ್ಲವೇ ಎಂಬ ಬಗ್ಗೆಯೂ ಲೆಕ್ಕ ಪರಿಶೋಧನೆಯು ಖಾತ್ರಿ ಪಡಿಸಿಲ್ಲ. ಏಕೆಂದರೆ ಇದಕ್ಕೆ ಸಂಬಂಧಿಸಿದಂತೆ ಕಡತಗಳನ್ನೂ ಅಧಿಕಾರಿಗಳು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ ಮತ್ತು ಅನುಪಾಲನಾ ವರದಿಯನ್ನೂ ಸಹ ಸಲ್ಲಿಸಿಲ್ಲ.

 

ಅದೇ ರೀತಿ ಸಿ ಎ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆಯೂ ಡಿಸಿಬಿ ವಹಿ ಮತ್ತು ಕಡತಗಳನ್ನೂ ಸಹ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ. 2021-22ನೇ ಸಾಲಿನಲ್ಲಿ ಮುಡಾ ವ್ಯಾಪ್ತಿಯ ಬಡಾವಣೆಗಳಲ್ಲಿ ನಾಗರಿಕ ಸೌಕರ್ಯಕ್ಕಾಗಿ ಎಷ್ಟು ನಿವೇಶನಗಳನ್ನು ಮಂಜೂರು ಮಾಡಒಆಗಿದೆ ಎಂಬ ವಿವರಗಳುಳ್ಳ ಕಡತಗಳನ್ನು ಸಲ್ಲಿಸಬೇಕು ಎಂದು ಲೆಕ್ಕ ಪರಿಶೋಧಕರು ಸೂಚಿಸಿದ್ದರು. ಆದರೆ ಮುಡಾ ಅಧಿಕಾರಿಗಳು ಈ ಕಡತಗಳನ್ನು ಲೆಕ್ಕ ಪರಿಶೋಧನೆ ಪರಿಶೀಲನೆಗೆ ಸಲ್ಲಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

 

ಪ್ರಾಧಿಕಾರವು ಹಲವು ವರ್ಷಗಳಿಂದ ಶಾಲೆ, ಕಾಲೇಜು, ಆಸ್ಪತ್ರೆಗಳು, ಸಮುದಾಯ ಭವನ, ಕಲ್ಯಾಣ ಮಂಟಪ, ಸರ್ಕಾರಿ ಕಚೇರಿಗಳ ನಿರ್ಮಾಣ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸಂಘ ಸಂಸ್ಥೆಗಳಿಗೆ ಮೈಸೂರಿನ ಪ್ರಮುಖ ಬಡಾವಣೆಯಲ್ಲಿ ವಿವಿಧ ಅಳತೆಯ ದೊಡ್ಡ ನಾಗರಿಕ ಸೌಲಭ್ಯಗಳ ನಿವೇಶನಗಳನ್ನು ಮಂಜೂರು ಮಾಡಿದೆ.

 

2021-22ರಲ್ಲಿ ಅನುಮತಿಸಿದ್ದ ಹೊಸ ಬಡಾವಣೆಗಳ ಸಂಖ್ಯೆ, ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಬೇಕಾದ ಸಿ ಎ ನಿವೇಶನಗಳ ಒಟ್ಟು ಸಂಖ್ಯೆ, ಮುಡಾ ಆಯುಕ್ತರ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿರುವ ಸಿ ಎ ನಿವೇಶನಗಳ ಸಂಖ್ಯೆ, ನೋಂದಣಿಗೆ ಬಾಕಿ ಇರುವ ನಿವೇಶನಗಳ ಮಾಹಿತಿ, ವಿಳಂಬಕ್ಕೆ ಕಾರಣಗಳು, ಈವರೆಗೆ ನೋಂದಣಿ ಮೂಲಕ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟ ಒಟ್ಟು ಸಿ ಎ ನಿವೇಶನಗಳ ವಿವರಗಳು, 2021-22ನೇ ಸಾಲಿನಲ್ಲಿ ನವೀಕರಣಕ್ಕೆ ಬಾಕಿ ಇರುವ ಮತ್ತು ನವೀಕರಣ ಮಾಡಲಾದ ಸಿ ಎ ನಿವೇಶನಗಳ ವಿವರಗಳು, ನವೀಕರಣವಾಗದೇ ಬಾಕಿ ಉಳಿದಿರುವ ಪ್ರಕರಣಗಳ ಸಂಬಂಧ ಕೈಗೊಂಡಿರುವ ಕ್ರಮದ ಮಾಹಿತಿಯನ್ನೂ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ.

 

 

ಪ್ರಾಧಿಕಾರದ ನಿಯಮಗಳ ಅನ್ವಯ ಅವಧಿಯೊಳಗೆ ಕಟ್ಟಡ ನಿರ್ಮಾಣ ಮಾಡಲಾಗಿದೆಯೇ ಅಥವಾ ನಿವೇಶನ ಖಾಲಿ ಬಿಡಲಾಗಿದೆಯೇ, ಇಗದಿತ ಸಮಯಕ್ಕೆ ಕಂತಿನ ಹಣ ಪಾವತಿಸಲಾಗಿದೆಯೇ, ನೀಡಿರುವ ಉದ್ದೇಶ ಬಿಟ್ಟು ಬೇರೆ ಉದ್ದೇಶಕ್ಕೆ ಬಳಸಲಾಗಿದೆಯೇ, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಿಯಮದ ಮೇರೆಗೆ ಪ್ರಾಧಿಕಾರಕ್ಕೆ ಪಾವತಿಸಿರುವ ಗುತ್ತಿಗೆ ಮೌಲ್ಯದ ಕಂತುಗಳನ್ನು 90 ದಿನದೊಳಗೆ ಪಾವತಿಸದಿದ್ದಲ್ಲಿ ಬಾಕಿ ಮೊತ್ತವನ್ನು ಶೇ.12ರಷ್ಟು ಸೇರಿಸಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆಯೇ, ಇಂತಹ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿರುವ ಸಿ ಎ ನಿವೇಶನಗಳನ್ನು ರದ್ದುಗೊಳಿಸುವ ಗುತ್ತಿಗೆ ಕರಾರನ್ನು ರದ್ದುಪಡಿಸಿದೆಯೇ ಎಂಬ ಬಗ್ಗೆ ಯಾವ ಮಾಹಿತಿಯೂ ಸರ್ಕಾರಿ ಲೆಕ್ಕ ಪರಿಶೋಧಕರಿಗೆ ಇಲ್ಲವಾಗಿದೆ.

 

ಈ ವಿವರಗಳನ್ನು ಒದಗಿಸದ ಕಾರಣ ಇವುಗಳ ಹಂಚಿಕೆಯು ನಿಯಮಾನುಸಾರ, ಮಾರ್ಗಸೂಚಿ ಅನ್ವಯ ನಡೆದಿದೆಯೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
‘ಖಾಸಗಿ ಬಡಾವಣೆಗಳಲ್ಲಿ ಪ್ರಾಧಿಕಾರದ ವ್ಯಾಪ್ತಿಗೆ ನೀಡಬೇಕಾದ ಸಿಎ ನಿವೇಶನಗಳು ಕೈ ಬಿಟ್ಟು ಹೋಗುವ ಮತ್ತು ಸಿ ಎ ನಿವೇಶನಗಳ ಹಂಚಿಕೆಯಲ್ಲಿ ಬಾಕಿ ಉಳಿದಿರುವ ಮೊತ್ತಗಳನ್ನು ವಸೂಲಿಸದೇ ಕೈ ಬಿಡುವ ಸಂದರ್ಭಗಳು ಉಂಟಾಗಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

 

ಸಿ ಎ ನಿವೇಶನಗಳ ಅಂದಾಜು ಹಣ ಮೌಲ್ಯದೊಂದಿಗೆ ಆಸ್ತಿ ವಹಿಯಲ್ಲಿ ದಾಖಲಿಸಬೇಕು. ಮತ್ತು ವಾರ್ಷಿಕ ಲೆಕ್ಕಪತ್ರಗಳ ಭಾಗವಾದ ಆಸ್ತಿ ಹೊಣೆಗಾರಿಕೆ ತಃಖ್ತೆಯಲ್ಲಿ ನಮೂದಿಸಬೇಕಾಗಿದೆ. ಆದರೆ ಈ ವಿವರವಾದ ಮಾಹಿತಿಯನ್ನು ಲೆಕ್ಕ ತಪಾಸಣೆಗೆ ಒದಗಿಸಿಲ್ಲ,’ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts