ಬದಲಿ ನಿವೇಶನ, ತುಂಡು ಭೂಮಿ ಮಂಜೂರು; ಸರ್ಕಾರಿ ಲೆಕ್ಕ ಪರಿಶೋಧನೆಗೂ ಕಡತ ಹಾಜರುಪಡಿಸದ ಅಧಿಕಾರಿಗಳು

ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬದಲಿ ನಿವೇಶನಗಳ ಹಂಚಿಕೆ, ತುಂಡು ಭೂಮಿ ಮಂಜೂರಾತಿಗೆ ಸಂಬಂಧಿಸಿದ ಕಡತಗಳನ್ನು ಹಾಜರುಪಡಿಸದಿರುವುದು, ಮೂಲೆ, ಮಧ್ಯಂತರ ನಿವೇಶನಗಳ ಲಭ್ಯತೆ, ಬ್ಯಾಂಕ್‌ ಖಾತೆಗಳಲ್ಲಿ ಆಂತರಿಕ ವರ್ಗಾವಣೆಯಲ್ಲಿ ಗಂಭೀರ ಲೋಪಗಳು ಸೇರಿದಂತೆ ಹಲವು ನ್ಯೂನತೆಗಳನ್ನು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

 

ಇತ್ತೀಚೆಗಷ್ಟೇ ಕಾಂಗ್ರೆಸ್‌ ಪಕ್ಷವನ್ನು ಸೇರಿರುವ ಹೆಚ್‌ ವಿ ರಾಜೀವ್‌ ಅವರು ಮುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಈ ಎಲ್ಲಾ ಲೋಪಗಳು ನಡೆದಿವೆ. ಅಲ್ಲದೇ ಮುಡಾದಲ್ಲಿನ ಬದಲಿ ನಿವೇಶನ ಅಕ್ರಮಗಳ ರೂವಾರಿ ಎಂದು ಜಾರಿ ನಿರ್ದೇಶನಾಲಯವು ಗುರುತಿಸಿದ್ದ ಜಿ ಟಿ ದಿನೇಶ್‌ ಕುಮಾರ್‌, ಡಾ ಡಿ ಬಿ ನಟೇಶ್‌, ಜಿ ಲಕ್ಷ್ಮಿಕಾಂತ ರೆಡ್ಡಿ ಅವರು ಈ ಅವಧಿಯಲ್ಲಿ ಮುಡಾ ಆಯಕ್ತರಾಗಿದ್ದರು.

 

ಬದಲಿ ನಿವೇಶನಗಳ ಹಂಚಿಕೆ ಸಂಬಂಧಿಸಿದಂತೆ ಮುಡಾ ಕಚೇರಿಯಲ್ಲಿದ್ದ ಕಡತಗಳನ್ನು ಸಚಿವ ಬೈರತಿ ಸುರೇಶ್‌ ಅವರು ಹೆಲಿಕಾಪ್ಟರ್‌ನಲ್ಲಿ  ಹೊತ್ತೊಯ್ದಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಇದರ ಬೆನ್ನಲ್ಲೇ ಲೆಕ್ಕ ಪರಿಶೋಧನೆಯ ಆಕ್ಷೇಪಗಳು, ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನಿಯಮಬಾಹಿರವಾಗಿ ಬದಲಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣವೂ ಸೇರಿದಂತೆ ವಿವಿಧ ಅಕ್ರಮಗಳ ಕುರಿತು ಲೋಕಾಯುಕ್ತ, ಇ ಡಿ ತನಿಖೆ ನಡೆಸುತ್ತಿರುವುದು ಮತ್ತು ಈ ಪ್ರಕರಣಗಳ ಕುರಿತು ಹೆಚ್ಚಿನ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಮುಡಾಗೆ ಸಂಬಂಧಿಸಿದ ಲೆಕ್ಕಪರಿಶೋಧನಾ ವರದಿಯು ಮುನ್ನೆಲೆಗೆ ಬಂದಿದೆ.

 

2021-22ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ವಿಶೇಷವೆಂದರೇ 2021-22ನೇ ಸಾಲಿಗೆ ಸಂಬಂಧಿಸಿದಂತೆ ಬದಲಿ ನಿವೇಶನಗಳ ಹಂಚಿಕೆ, ತುಂಡು ಭೂಮಿ ಮಂಜೂರಾತಿಗೆ ಸಂಬಂಧಿಸಿದ ಕಡತಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಬೇಕು ಎಂದು ಈಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ (2023ರ ಜೂನ್‌ 22) ಲೆಕ್ಕಪತ್ರ ಇಲಾಖೆಯು ಕೋರಿತ್ತು. ಆದರೆ ಮುಡಾ ಅಧಿಕಾರಿಗಳು ಈ ಯಾವ ಕಡತಗಳನ್ನೂ ಲೆಕ್ಕಪರಿಶೋಧನೆಗೆ ಹಾಜರುಪಡಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

2021-22ನೇ ಸಾಲಿನಲ್ಲಿ ವಲಯವಾರು ಹಂಚಿಕೆ ಮಾಡಿರುವ, ಬದಲಿ ನಿವೇಶನಗಳಿಗೆ ಸಂಬಂಧಿಸಿದ ಕಡತಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಲು (ವಿಚಾರಣೆ ಪತ್ರ ಸಂಖ್ಯೆ; ಜನಿಕ/ಸ್ಥಲೆಪ/14/2021-22, ದಿನಾಂಕ 06.06.2023) ಮತ್ತು ಜನಿಕ/ಸ್ಥಲೆಪ/32/2021-22 ದಿನಾಂಕ 22.06.2023) ಕೋರಿದ್ದರೂ ಸಹ ಈವರೆವಿಗೂ ಯಾವುದೇ ಕಡತಗಳನ್ನು ಹಾಜರುಪಡಿಸಿರುವುದಿಲ್ಲ. ಬದಲಿ ನಿವೇಶನ ಹಂಚಿಕೆಯಲ್ಲಿ ನಿಯಮಗಳನ್ನು ಪಾಲಿಸಿರುವ ಬಗ್ಗೆ ಪರಿಶೀಲಿಸಲು ಸಾಧ್ಯವಾಗಿರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ತುಂಡು ಭೂಮಿ ಮಂಜೂರಾತಿಗೆ ಸಂಬಂಧಿಸಿದ ಕಡತಗಳನ್ನೂ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ. ತುಂಡು ಜಾಗಗಳನ್ನು ಹಂಚಿಕೆ ಮಾಡುವ ಬಗ್ಗೆ ಯಾವುದೇ ನಿಯಮಗಳು ಇಲ್ಲದಿರುವುದರಿಂದ ಈ ರೀತಿ ಲಭ್ಯವಾಗಿರುವ ತುಂಡು ಜಾಗಗಳನ್ನು ಸಭೆಯ ನಿರ್ಣಯದ ಅನ್ವಯ ಹಂಚಿಕೆ ಮಾಡುವುದನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಸೂಚಿಸಿದ್ದರು.

 

ಹಾಗೆಯೇ ಪ್ರಾಧಿಕಾರವು ಈಗಾಗಲೇ ನಿರ್ಮಿಸಿರುವ ಬಡಾವಣೆಗಳಲ್ಲಿ ಲಭ್ಯವಾಗುವ ತುಂಡು ಜಾಗಗಳನ್ನು ಪ್ರತ್ಯೇಕವಾಗಿ ರಿಜಿಸ್ಟರ್‌ನಲ್ಲಿ  ದಾಖಲಿಸಬೇಕು. ಇವುಗಳನ್ನು ಹಂಚಿಕೆ ಮಾಡುವ ಬಗ್ಗೆ ನಿಯಮಗಳನ್ನು ರಚಿಸಲು ಪರಿಶೀಲಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಇನ್ನು ಮುಂದೆ ತುಂಡು ಜಾಗಗಳು ಉದ್ಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಬಡಾವಣೆಗಳನ್ನು ನಿರ್ಮಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶಿಸಿದ್ದರು.

 

ಆದರೆ 2021-22ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಅನ್ವಯ ತುಂಡು ಜಾಗ ಮಂಜೂರಾತಿಯಿಂದ 55,66,277 ರು.ಗಳು ಸ್ವೀಕೃತವಾಗಿದ್ದವು. ಸ್ವೀಕೃತವಾಗಿದ್ದ ಮೊತ್ತಕ್ಕೆ ಎದುರಾಗಿ ಸಂಬಂಧಿಸಿದ ಕಡತಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಬೇಕು ಎಂದು 2023ರ ಜೂನ್‌ 6 ಮತ್ತು 22ರಂದು ಕೋರಿದ್ದರು. ಆದರೂ ಮುಡಾ ಅಧಿಕಾರಿಗಳು ಈ ಸಂಬಂಧ ಯಾವುದೇ ಕಡತಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ. ಹಾಗೆಯೇ ಅನುಪಾಲನಾ ವರದಿಯನ್ನೂ ಸಹ ಸಲ್ಲಿಸಿಲ್ಲ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

‘ಆದ್ದರಿಂದ ಸದರಿ ಮೊತ್ತವು ಮೇಲ್ಕಂಡ ಸರ್ಕಾರದ ಪತ್ರದಲ್ಲಿ ತಿಳಿಸಿರುವ ನಿಯಮಗಳಿಗೆ ಅನ್ವಯವಾಗಲೀ ಅಥವಾ ವಿರುದ್ಧವಾಗಿ ಆಗಲಿ ಸ್ವೀಕೃತವಾಗಿರುವ ಬಗ್ಗೆ ಲೆಕ್ಕ ಪರಿಶೋಧನೆಯು ಸ್ಪಷ್ಟಪಡಿಸಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಸ್ವೀಕೃತವಾದ ಮೊತ್ತಕ್ಕೆ ಎದುರಾಗಿ ತುಂಡು ಜಾಗ ಮಂಜೂರಾತಿಗೆ ಸಂಬಂಧಿಸಿದ ಕಡತಗಳಲ್ಲಿ ಲೋಪ ದೋಷಗಳು ಕಂಡುಬಂದಲ್ಲಿ ಸದರಿ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳೇ ಹೊಣೆಗಾರರು,’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts