ಬೆಂಗಳೂರು; ಬಸವ ಕಲ್ಯಾಣ ತಾಲೂಕಿನ ಮಳೆಯಾಶ್ರಿತ 15 ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಯೋಜನೆಯಲ್ಲಿ 300 ಕೋಟಿ ರು ಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.
ಪೈಪ್‌ಲೈನ್, ಜಾಕ್‌ವೆಲ್ ಹಾಗೂ ಕಾಮಗಾರಿ ನಡೆಸದೇ ಇದ್ದರೂ ಸಹ 200 ಕೋಟಿಗೂ ಅಧಿಕ ಮೊತ್ತವನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪಾವತಿಯಾಗಿದೆ. ಮಧ್ಯಂತರ ಕರಾರು ಒಪ್ಪಂದ ಮಾಡಿಕೊಳ್ಳದ ಕಂಪನಿಗೂ ಕೋಟ್ಯಂತರ ರುಪಾಯಿ ಪಾವತಿಯಾಗಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ.
ಹಾಗೆಯೇ ಮಳೆಯಾಧಾರಿತ ಕೆರೆಗಳಿಗೂ ನೀರು ತುಂಬಿಸುವ ಯೋಜನೆಯನ್ನು ರೂಪಿಸಿದ್ದ ನಿಗಮವು, ಈ ಸಂಬಂಧ ಗುತ್ತಿಗೆ ಕಂಪನಿಯೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಇದು 306.91 ಕೋಟಿ ಮೌಲ್ಯವಾಗಿತ್ತು ಎಂದು ದೂರಲಾಗಿದೆ.
ಈ ಕುರಿತು ಕಿರಣ್ ಎಂಬುವರು ಕರ್ನಾಟಕ ನೀರಾವರಿ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ದಾಖಲೆಗಳೊಂದಿಗೆ ಜಿಪಿಎಸ್ ಮತ್ತು ಪೈಪ್‌ಲೈನ್ ಅಳವಡಿಸದೇ ಇರುವ ಫೋಟೋ ಪ್ರತಿಗಳನ್ನೂ ಒದಗಿಸಿದ್ದಾರೆ. 2025ರ ಜನವರಿ 13ರಂದು ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಸಂಗತಿಯು ಹಾಲಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರಿಗೂ ಗೊತ್ತಿದ್ದರೂ ಸಹ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ, ಅವ್ಯವಹಾರ ಪ್ರಕರಣಗಳನ್ನು ತನಿಖೆಗೊಳಪಡಿಸಲಾಗುವುದು ಎಂದು ಅಬ್ಬರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರು ನೀರಾವರಿ ನಿಗಮದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆಗೆ ಮುಂದಾಗಿಲ್ಲ.
ಇಎಂಡಿ, ಎಫ್‌ಎಸ್‌ಡಿ ಮರು ಪಾವತಿಯಲ್ಲಿ ಭ್ರಷ್ಟಾಚಾರ; 1,250 ಕೋಟಿ ರು ಅಕ್ರಮ ಪಾವತಿ ಆರೋಪ
ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯ ಕೊನೆ ದಿನದಲ್ಲಿ ಬಸವ ಕಲ್ಯಾಣ ತಾಲೂಕಿನ 15 ಹಳ್ಳಿಗಳ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಆ ನಂತರ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕಾಮಗಾರಿ ಪ್ರಗತಿ ಮತ್ತು ಕಾಮಗಾರಿಗಳ ತಪಾಸಣೆಯನ್ನೂ ನಡೆಸಿಲ್ಲ ಎಂದು ಗೊತ್ತಾಗಿದೆ.
ಬಸವಕಲ್ಯಾಣ ತಾಲೂಕಿನ 15 ಹಳ್ಳಿಗಳಾದ ಮಿರಕಲ್, ಗುತ್ತಿಗೆ, ಮಿರಕಲ್ ಮಹದೇವ ಕೆರೆ, ಬೇಲೂರ ಸಿದ್ದೇಶ್ವರ ಕೆರೆ, ಬೇಲೂರ ನಾಗಭೂಷಣ ಕೆರೆ, ಬಿಟ್ ಬಾಲ್‌ಕುಂದ ಕೆರೆ, ನಾರಾಯಣ ಪುರ ಕೆರೆ, ಶಿವಪುರ ಕೆರೆ, ವಿಪ್ರಾಂತ ಕೆರೆ, ಪತ್ತಾಪುರ್ ಕೆರೆ, ನೀಲಕಂಠ ಕೆರೆ, ತಾಳಭೋಗ ಕೆರೆ, ಮಾರ್ಕಂಡ್ ಕಾಲಾ ತಾಲಾಬ್, ಮಾರ್ಕಂಡ್ ಲಾಲ್ ತಲಾಬ್, ಮಾರ್ಕಂಡ್ ಗಾಂವ್ ಕೆರೆಗಳ ಮಳೆಯಾಧಾರಿತ ಕೆರೆಗಳಾಗಿವೆ.
ಈ ಕೆರೆಗಳಿಗೆ ನೀರು ತುಂಬಿಸಲು ಮಾಣಿಕೇಶ್ವರ ಮತ್ತು ಮಾಂಜ್ರ ನದಿಗೆ ನಿರ್ಮಿಸಿರುವ ಕಿ ಮೀ 60ರ ಹಾಲಹಳ್ಳಿ ಬ್ಯಾರೇಜ್ ಮತ್ತು ಕಿ ಮೀ 90ರ ಕಾರಂಜ ಜಲಾಶಯದ ಬಲದಂಡೆ ನಾಲೆಯಿಂದ ಏತ ನೀರಾವರಿ ಮೂಲಕ ಕೊಳವೆ ಮಾರ್ಗದಿಂದ ನೀರು ತುಂಬಿಸಲಾಗುವುದು ಎಂದು ಯೋಜನೆ ರೂಪಿಸಿತ್ತು. ಕರ್ನಾಟಕ ನೀರಾವರಿ ನಿಗಮವು ಈ ಸಂಬಂಧ ಗುತ್ತಿಗೆದಾರ ಕಂಪನಿಯೊಂದಿಗೆ 306.91 ಕೋಟಿ ರು ಮೊತ್ತಕ್ಕೆ 05 ವರ್ಷಗಳ ನಿರ್ವಹಣೆಗೆ 2018ರ ಮಾರ್ಚ್ 26ರಂದೇ ಕರಾರು ಒಪ್ಪಂದ ಮಾಡಿಕೊಂಡಿತ್ತು ಎಂದು ದೂರಿನಿಂದ ತಿಳಿದು ಬಂದಿದೆ.
ಆ ನಂತರ ಇದೇ ಯೋಜನೆಯ ಅಂದಾಜು ವೆಚ್ಚವೂ ಪರಿಷ್ಕರಿಸಲಾಗಿತ್ತು. ಯೋಜನೆಯನ್ನು ಪುನರ್ ಸಮೀಕ್ಷೆ ಮಾಡಿಸಿದ್ದ ನಿಗಮವು ಯೋಜನೆ ವೆಚ್ಚವನ್ನು 216.10 ಕೋಟಿ ರು.ಗಳಿಗೆ ಪರಿಷ್ಕರಿಸಿಕೊಂಡಿತ್ತು. ಇದನ್ನು 2020ರ ಜೂನ್ 29ರಂದು ಅಂದಾಜು ಪರಿಶೀಲನಾ ಸಭೆಯಲ್ಲಿಯೂ ಅನುಮೋದನೆ ಪಡೆದುಕೊಂಡಿತ್ತು.
ಅನುಮೋದನೆ ಪಡೆದುಕೊಂಡಿದ್ದ ಯೋಜನಾ ವೆಚ್ಚಕ್ಕೆ ಅನುಗುಣವಾಗಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಗುತ್ತಿಗೆದಾರ ಕಂಪನಿಯೊಂದಿಗೆ ಯಾವುದೇ ಮಧ್ಯಂತರ ಕರಾರು ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
2020ರ ಜೂನ್ 29ರಂದು ನಡೆದಿದ್ದ 69ನೇ ಅಂದಾಜು ಪರಿಶೀಲನಾ ಸಭೆಯ ನಡವಳಿ ಪ್ರಕಾರ ಬಸವ ಕಲ್ಯಾಣ ತಾಲೂಕಿನ 15 ಹಳ್ಳಿಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸಲು ಒಟ್ಟಾರೆ 0.768 ಟಿಎಂಎಂಸಿ ನೀರಿನ ಅವಶ್ಯಕತೆ ಇದೆ. ಈ ಪ್ರಮಾಣದ ನೀರನ್ನು ಜಮಖಂಡಿ ಹಳ್ಳಿಯ ಬಳಿ ಇರುವ ಮಾಂಜ್ರ ನದಿ (ಕೊಂಗ್ಲಿ ಬ್ಯಾರೇಜ್) ಯಿಂದ ನೀರನ್ನು ಎತ್ತಿ ಗುತ್ತಿ ಗ್ರಾಮದ ಡೆಲಿವರಿ ಚೇಂಬರ್ ಮೂಲಕ 13.5 ಕಿ ಮೀ ದುರಕ್ಕೆ, ಹೆಚ್‌ಡಿಪಿಇ ಮೂಲಕ 300 ಎಂಎಂ ವ್ಯಾಸದ ಕೊಳವೆ ಮೂಲಕ, 1000 ಎಂಎಂ ವ್ಯಾಸದ ಎಂ ಎಸ್ ಪೈಪ್‌ಗಳ ಮೂಲಕ 15 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಿತ್ತು.
ಆದರೆ ‘ಜಮಖಂಡಿಯ ಬಳಿ ನಿರ್ಮಿಸಿರುವ ಜಾಕ್ವೆಲ್ ಕಂ ಪಂಪ್‌ಹೌಸ್‌ನಿಂದ ನೀರನ್ನು ಎತ್ತಿ ಗುತ್ತಿ ಕೆರೆ ತುಂಬಿಸಲು ಛೇಂಬರ್‍ಗಳನ್ನು ನಿರ್ಮಿಸಿರುವುದಿಲ್ಲ. ಮತ್ತು ಗುತ್ತಿ ಕೆರೆಗೆ ಯಾವುದೇ ಪೈಪ್‌ಲೈನ್‌ನ್ನು ಅಳವಡಿಸಿಲ್ಲ,’ ಎಂದು ಸ್ಥಳದ ಫೋಟೋ ಸಮೇತ ದೂರಿನಲ್ಲಿ ಕಿರಣ್ ಅವರು ವಿವರಿಸಿರುವುದು ತಿಳಿದು ಬಂದಿದೆ.
ಮತ್ತೊಂದು ಸಂಗತಿ ಎಂದರೇ ಈ ಯೋಜನೆಯ ಸಂಪೂರ್ಣ ಮಾಹಿತಿಯು ಕೇವಲ ನೀಲ ನಕ್ಷೆಯ ಮೂಲಕವಷ್ಟೇ ಕಾರ್ಯಗತಗೊಳಿಸಿದೆ. ಅಲ್ಲದೇ ಯೋಜನೆಯ ಕಾರ್ಯದಿಕ್ಕನ್ನೇ ಬದಲಿಸಿದೆ. ಸಾರ್ವಜನಿಕರನ್ನು ಮತ್ತು ಜನಪ್ರತಿನಿಧಿಗಳ ದಿಕ್ಕು ತಪ್ಪಿಸಿರುವ ಭ್ರಷ್ಟ ಅಧಿಕಾರಿಗಳು 15 ಕೆರೆಗಳಿಗೆ ನೀರನ್ನು ತುಂಬಿಸದೆಯೇ ನೂರಾರು ಕೋಟಿ ರು.ಗಳನ್ನು ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
‘ಕೇವಲ ಚುಳಕಿ ಜಲಾಶಯಕ್ಕೆ ಕೊಂಗಲಿ ಬ್ಯಾರೇಜ್‌ನಿಂದ ನೀರನ್ನು ಎತ್ತುವ ಜಾಕ್ವೆಲ್ ಕಂ ಪಂಪ್‌ಹೌಸ್ ನಿರ್ಮಿಸಿ ನೀರು ಹರಿಸುವ ಯೋಜನೆಯನ್ನಾಗಿ ಪರಿವರ್ತಿಸಲ್ಪಟ್ಟಿದೆ. ಈ ಯೋಜನೆಯಡಿಯಲ್ಲಿ ಇಂತಹ ಬೃಹತ್ ಕಾಮಗಾರಿ ನಿರ್ಮಿಸುತ್ತಿರುವ ಬಗ್ಗೆ ಈ ಯೋಜನೆ ವ್ಯಾಪ್ತಿಯಲ್ಲಿ ಯಾವುದೇ ಕೆರೆಗಳ ಅಥವಾ ಗ್ರಾಮಗಳ ಬಳಿ ಪಾರದರ್ಶಕ ಪ್ರಕಟಣೆಯ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಇದರ ಉದ್ದೇಶ ಈ ಯೋಜನೆಯ ಮಾಹಿತಿಯು ಸಾರ್ವಜನಿಕರಿಗೆ ದೊರೆಯಬಾರದು ಎಂಬುದಾಗಿದೆ,’ ಎಂದು ದೂರಿನಲ್ಲಿ ಕಿರಣ್ ಅವರು ಅನುಮಾನ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
ಇನ್ನು ಈ ಯೋಜನೆಯ ಅನ್ವಯ ಯೋಜನೆ ವೆಚ್ಚವನ್ನು 216.10 ಕೋಟಿ ರು.ಗಳಿಗೆ ಮಿತಿಗೊಳಿಸಿತ್ತು. ಆದರೂ ಸಹ ಗುತ್ತಿಗೆದಾರ ಕಂಪನಿಗೆ 2013ರ ಜನವರಿ 5ರಂದು ಡಿಬಿಆರ್ ನಂ 108ರವರೆಗೆ 244.36 ಕೋಟಿ ರು.ಗಳನ್ನು ಪಾವತಿಸಿದೆ. ಆದರೂ ಸಹ ಬಸವ ಕಲ್ಯಾಣ ತಾಲೂಕಿನ 15 ಕೆರೆಗಳಲ್ಲಿ ಯಾವುದೇ ಕೆರೆಗೂ ನೀರು ತುಂಬಿಸಿಲ್ಲ. ಮತ್ತು ಕಾಮಗಾರಿಯೂ ನಡೆದಿಲ್ಲ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.